ಹರಿ ನಾರಾಯಣ ಆಪಟೆಮರಾಠಿ ಸಾಹಿತ್ಯದ ಹಿರಿಯ ಕಾದಂಬರಿಕಾರರು. ಸ್ವತಂತ್ರ ಜೀವನ ನಡೆಸಿದರು. ಸಮಾಜದ ಸುಧಾರಣೆ ಗಾಗಿ ದುಡಿದರು. ತಮ್ಮ ಕಾದಂಬರಿಗಳ ಮೂಲಕ ಜನರ ಮನಸ್ಸನ್ನು ತಿದ್ದಿ ಸಮಾಜದ ಸುಧಾರಣೆಗೆ ಸಿದ್ಧತೆ ಮಾಡಿದರು. ಜನರಲ್ಲಿ ದೇಶಾಭಿಮಾನವನ್ನು ಬೆಳೆಸಿದರು.

ಹರಿ ನಾರಾಯಣ ಆಪಟೆ

ಆಧುನಿಕ ಮರಾಠೀ ಸಾಹಿತ್ಯದ ಚರಿತ್ರೆಯಲ್ಲಿ ಹರಿನಾರಾಯಣ ಆಪಟೆಯವರಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಮರಾಠಿ ಕಾದಂಬರಿಯ ಕುಲಗುರು ಎಂದಿದ್ದಾರೆ ಅವರನ್ನು. ಆ ಕ್ಷೇತ್ರದಲ್ಲಿಯ ಅವರ ಕೆಲಸ ಬಹಳ ಮಹತ್ವದ್ದಾದರೂ ಆಪಟೆಯವರ ಹಿರಿಮೆ ಅವರ ಸಾಹಿತ್ಯ ಸೇವೆಗೆ ಮಾತ್ರ ಸೀಮಿತವಾಗಿಲ್ಲ. ಹಿರಿಯ ಸಾಹಿತಿಗಳಾಗಿದ್ದಂತೆ ವ್ಯಕ್ತಿ ಜೀವನದಲ್ಲಿಯೂ ಅವರು ಹಿರಿಯ ಆದರ್ಶಗಳನ್ನಿರಿಸಿಕೊಂಡು ಬಾಳಿದವರಾಗಿದ್ದರು. ಸಮಕಾಲೀನ ಸಾಮಾಜಿಕ ಹಾಗೂ ರಾಜಕೀಯ ಜೀವನದಲ್ಲಿಯೂ ಸಾಕಷ್ಟು ಪ್ರಭಾವಯುತವಾದ ಕೆಲಸಗಳಲ್ಲಿ ತೊಡಗಿ ಸಾರ್ಥಕವಾದ ಜೀವನವನ್ನು ನಡೆಸಿದವರಾಗಿದ್ದರು. ಹಾಗೆಂದೇ ಮಹಾರಾಷ್ಟ್ರದ ಜನತೆಗೆ ಅವರು ಅಚ್ಚುಮೆಚ್ಚಿನವರಾಗಿ ಉಳಿದಿದ್ದಾರೆ. ಅವರ ಪಾಲಿಗೆ ಅವರು ಹ.ನಾ. ಆಪಟೆಯಾಗಿರದೆ ಆತ್ಮೀಯರಾದ ‘‘ಹರಿಭಾವು’’ ಆಗಿದ್ದಾರೆ. ಅಂಥ ಆತ್ಮೀಯ ಸಂಬೋಧನ ಮಹಾರಾಷ್ಟ್ರೀಯರ ಹೃದಯದಲ್ಲಿ ಅವರು ಪಡೆದುಕೊಂಡ ಸ್ಥಾನವನ್ನು ಸೂಚಿಸುತ್ತದೆ. ತಮ್ಮ ಜೀವನ ಹಾಗೂ ಕಾರ್ಯಗಳೆರಡರ ಮೂಲಕ ಗಳಿಸಿದ ಹಿರಿಮೆಯನ್ನು ಎತ್ತಿ ಹೇಳುತ್ತದೆ. ‘ಒಳ್ಳೆಯವನಾಗಿ ಬಾಳದೆ ಒಳ್ಳೆಯ ಸಾಹಿತ್ಯವನ್ನು ನಿರ್ಮಿಸಲಾಗುವುದಿಲ್ಲ’  ಎಂಬ ಮಾತಿಗೆ ಅವರ ಬದುಕು ಒಂದು ನಿದರ್ಶನವಾಗಿತ್ತು. ಅವರ ಬರಹ ದೊಡ್ಡದು, ಅವರ ಬದುಕೂ ದೊಡ್ಡದು.

ಬಾಲ್ಯ

ಹರಿಭಾವು ಅವರ ತಾತ ಚಿಮಣಾಜೀಪಂತ ರೆವೆನ್ಯೂ ಇಲಾಖೆಯಲ್ಲಿ ಮಧ್ಯಮ ತರಗತಿಯ ಅಧಿಕಾರಿಗಳಾಗಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಲ್ಲದೆ, ನಾರಾಯಣ, ಮಹಾದೇವ, ಗೋವಿಂದ ಮತ್ತು ವಿಷ್ಣು ಎಂದು ನಾಲ್ಕು ಜನ ಗಂಡುಮಕ್ಕಳು. ಇವರಲ್ಲಿಯ ಹಿರಿಯ ನಾರಾಯಣನೇ ಕಾದಂಬರಿಕಾರರ ತಂದೆ. ಚಿಮಣಾಜೀಯವರು ಬೇಗ ತೀರಿಕೊಂಡಿದ್ದರಿಂದ ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಯಿತು. ಮಹಾದೇವ ಹಾಗೂ ಹೀಗೂ ವಿದ್ಯಾಭ್ಯಾಸ ಪೂರೈಸಿ ಮೇಲಕ್ಕೇರಿ ಬಂದರೂ ನಾರಾಯಣನಿಗೆ ತನ್ನ ವಿದ್ಯಾಭ್ಯಾಸದ ಹೊರೆಯನ್ನು ಇನ್ನೊಬ್ಬರ ಮೇಲೆ ಹಾಕುವುದು ಬೇಡವಾಗಿ ಕೆಲಸಕ್ಕೆ ಸೇರಿಕೊಳ್ಳಬೇಕಾಯಿತು. ಆಗಲೆ ಮದುವೆಯಾಗಿದ್ದ ಅವರು ಇಂದೂರಿನಲ್ಲಿ ಮನೆ ಹೂಡಿದರು.

ಹರಿಯ ತಾಯಿಯ ತವರು ಮನೆ ಖಾನದೇಶದಲ್ಲಿಯ ಪಾರೋಳೆ. ಅಲ್ಲಿ ಆಕೆಯ ತಂದೆ ತಹಸೀಲದಾರರಾಗಿದ್ದರು. ಅಲ್ಲಿಯೇ ಲಕ್ಷ್ಮೀಬಾಯಿ ೧೮೬೪ ರ ಮಾರ್ಚಿ ೮ ಮಂಗಳವಾರ (ಶಕೆ ೧೮೮೫ ಮಾಘ ಅಮಾವಾಸ್ಯೆ)ದಿನದಂದು ಗಂಡುಮಗುವೊಂದನ್ನು ಹೆತ್ತರು.  ಮೊದಲು ಬಾಲಕೃಷ್ಮ ಎಂದು ಹೆಸರಿಟ್ಟರೂ ಮನೆತನದಲ್ಲಿ ಅದೇ ಹೆಸರಿನ ಬೇರೆಯವರಿದ್ದುದರಿಂದ ಮಗುವನ್ನು ‘‘ಹರಿ’’ ಎಂದು ಕರೆಯ ತೊಡಗಿದರು. ಇದೇ ಹರಿ ಮುಂದೆ ಮಹಾರಾಷ್ಟ್ರದ ಮೊದಲ ಕಾದಂಬರಿಕಾರನಾದ.

ತಂಗಿಯ ಮದುವೆಯನ್ನು ಗೊತ್ತುಮಾಡುವುದಕ್ಕೆಂದು ಪುಣೆಗೆ ಬಂದ ನಾರಾಯಣ ತಿರುಗಿ ಇಂದೂರಿಗೆ ಹೋಗದೆ ಮುಂಬಯಿಯ ಅಂಚೆ ಇಲಾಖೆಯಲ್ಲಿಯ ಸಣ್ಣದೊಂದು ಕೆಲಸಕ್ಕೆ ಸೇರಿಕೊಂಡ. ಹರಿ ನಾಲ್ಕು ವರ್ಷದವನಾಗಿರುವಾಗ ಲಕ್ಷ್ಮೀಬಾಯಿ ಮರಣ ಹೊಂದಿದರು. ತಾಯಿಯನ್ನು ಕಳೆದುಕೊಂಡ ಮಗು, ಅಜ್ಜಿಯ ಆಶ್ರಯದಲ್ಲಿಯೇ ಬೆಳೆಯಬೇಕಾಯಿತು. ತಾಯಿ ತೀರುವ ಮೊದಲು ಒಂದು ವರ್ಷ ಹರಿಯ ಚಿಕ್ಕಪ್ಪ ಮಹಾದೇವ (ಅಣ್ಣಾ) ಮೊದಲ ತರಗತಿಯಲ್ಲಿ ಬಿ.ಎ. ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ. ‘ಹರಿಯ ಚಿಂತೆ ಬೇಡ’ ಎಂದು ಮರಣೋನ್ಮುಖಳಾಗಿದ್ದ ಅತ್ತಿಗೆಗೆ ಮಾತುಕೊಟ್ಟಿದ್ದ. ಕೊಟ್ಟ ಮಾತನ್ನು ಮುಂದೆ ನಡೆಸಿದ.

ವಿದ್ಯಾಭ್ಯಾಸ

ಮುಂಬಯಿಯ ಶಂಕರಶೇಠ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ ಹರಿ ಬಿಷಪ್ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಮನೆಯನ್ನು ಪುಣೆಗೆ ಸ್ಥಳಾಂತರಿಸಿದ್ದರಿಂದ ಮುಂದಿನ ಓದು ಅಲ್ಲಿಯೇ ಮುಂದುವರಿಯಿತು. ಅಲ್ಲಿಯ ಸರಕಾರೀ ಶಾಲೆಯನ್ನು ಸೇರಿದಾಗ ವಿಷ್ಣುಶಾಸ್ತ್ರಿ ಚಿಪಳೂಣಕರರಂಥ ಶಿಕ್ಷಕರು, ಪ್ರೊಫೆಸರ್ ಪಾನಸೆ ಹಾಗೂ ಪ್ರೊಫೆಸರ್ ರಾಜವಾಡೆಯವರಂಥ ಸಹಪಾಠಿಗಳನ್ನು ಪಡೆದ ಹರಿಯ ಓದು ಸುಗಮವಾಗಿ ಮುಂದುವರಿಯಿತು. ಉಳಿದ ವಿಷಯಗಳಲ್ಲಿ ಚುರುಕಾಗಿದ್ದರೂ ಹರಿಗೆ ಗಣಿತವೆಂದರೆ ಕಷ್ಟವಾಗುತ್ತಿತ್ತು. ೧೮೮೦ರಲ್ಲಿ ಚಿಪಳೂಣಕರ, ತಿಲಕ್, ಅಗರಕರ ಮುಂತಾದವರ ನೇತೃತ್ವದಲ್ಲಿ ಪ್ರಾರಂಭವಾದ ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ ಹರಿಯ ವಿದ್ಯಾಭ್ಯಾಸ ಮುಂದುವರಿಯಿತು. ಅಲ್ಲಿ ಓದುತ್ತಿರುವಾಗಲೆ ೧೮೮೨ ರಲ್ಲಿ ಅಕಸ್ಮಾತ್ತಾಗಿ ವಿಷ್ಣುಶಾಸ್ತ್ರಿ ಚಿಪಳೂಣಕರರು ನಿಧನನಾದರು. ಅವರನ್ನು ಕುರಿತು ಹರಿ ‘‘ಶಿಷ್ಯಜನ ವಿಲಾಪ’’  ಎಂಬ ಶೋಕ ಕಾವ್ಯವನ್ನು ಬರೆದದ್ದು ಸಾಹಿತ್ಯದ ಕಡೆಗಿನ ಅವರ ಒಲವಿಗೆ ಒಂದು ಸೂಚಿಕೆಯಾಯಿತು. ಸುಪ್ರಸಿದ್ಧ ದೇಶಭಕ್ತರಾದ ತಿಲಕರು ಹಾಗೂ ಅಗರಕರ ಅವರನ್ನು ಸರಕಾರ ಬಂಧಿಸಿತು. ನ್ಯಾಯಾಲಯದಲ್ಲಿ ಅವರ ಪರವಾಗಿ ಹೋರಾಡಲು ಖರ್ಚಿಗೆ ಹಣ ಸಂಗ್ರಹಿಸುವುದರಲ್ಲಿ ಮುಂದಾಗಿದ್ದ ಹರಿ ತನ್ನ ವ್ಯಕ್ತಿತ್ವದ ಮತ್ತೊಂದು ಮುಖವನ್ನು ತೋರಿಸಿದ. ಈ ಎಲ್ಲ ಚಟುವಟಿಕೆಗಳ ಪರಿಣಾಮವೆಂದರೆ ಮೊದಲೇ ಗಣಿತವೆಂದರೆ ಹಿಂದೇಟು ಹಾಕುತ್ತಿದ್ದವನಿಗೆ ಈ ವಿಷಯದಲ್ಲಿ ಸಾಕಷ್ಟು ನಂಬರುಗಳು ಬರಲಿಲ್ಲವಾದ್ದರಿಂದ ಮೆಟ್ರಿಕ್ ಪರೀಕ್ಷೆಗೆ ಕುಳಿತುಕೊಳ್ಳಲು ಅನುಮತಿ ದೊರೆಯಲಿಲ್ಲ. ಮರುವರ್ಷ ತೇರ್ಗಡೆಯಾಗಿ ಕಾಲೇಜು ಸೇರಿದರು.ಆಗ ಅವರಿಗೆ ಹತ್ತೊಂಬತ್ತನೆಯ ವರ್ಷ.

ಹಿರಿಯ ವಿದ್ವಾಂಸರು ಪ್ರಾಧ್ಯಾಪಕರಾಗಿದ್ದ ಡೆಕ್ಕನ್ ಕಾಲೇಜನ್ನು ಹರಿಭಾವು ೧೮೮೩ ರಲ್ಲಿ ಸೇರಿದರು. ಉತ್ಸಾಹಿಗಳಾದ ಸಹಪಾಠಿಗಳು, ವಿಪುಲವಾದ ಗ್ರಂಥ ಸಂಗ್ರಹ, ವ್ಯಾಸಂಗಕ್ಕೆ ಅಗತ್ಯವಾದ ಶಾಂತ ವಾತಾವರಣ, ಇಂಥ ಅನುಕೂಲಗಳ ಮಧ್ಯದಲ್ಲಿ ಹರಿಭಾವುವಿಗೆ ಇಂಗ್ಲಿಷ್ ಸಾಹಿತ್ಯದಲ್ಲಿ ಆಸಕ್ತಿ ಹೆಚ್ಚಾಯಿತು. ಹೀಗೆ ಸಾಹಿತ್ಯದ ಕಡೆಗೆ ಒಲವು ಬೆಳೆಯುತ್ತಿದ್ದಂತೆ ಮೊದಲ ವರ್ಷದ ಪರೀಕ್ಷೆಯಲ್ಲಿ ಗಣಿತ ಮತ್ತೆ ಕೈ ಕೊಟ್ಟಿತು. ಡೆಕ್ಕನ್ ಕಾಲೇಜನ್ನು ಬಿಟ್ಟು ಅಗರಕರ್, ಆಪಟೆ, ಕೇಳಕರ್, ತಿಲಕ್ ಮೊದಲಾದ ಸ್ವಾತಂತ್ರ  ವೀರರ ಅಧ್ಯಾಪಕರಾಗಿ ಅದೇ ಪ್ರಾರಂಭವಾಗಿದ್ದ ಫರ್ಗ್ಯುಸನ್ ಕಾಲೇಜು ಸೇರಿದರು. ಮರುವರ್ಷದ ಪರೀಕ್ಷೆಯಲ್ಲಿ ಇಂಗ್ಲಿಷ್, ಸಂಸ್ಕೃತ ವಿಷಯಗಳಲ್ಲಿ ಸಾಕಷ್ಟು ಮನ್ನಣೆಯ ನಂಬರು ಗಳಿಸಿದರೂ ಗಣಿತದಲ್ಲಿ ತೇರ್ಗಡೆಯಾಗದೆ ಪರೀಕ್ಷೆಗಳಿಗೆ ಬೇಸತ್ತು ಕಾಲೇಜು ವ್ಯಾಸಂಗಕ್ಕೇ ಶರಣು ಹೊಡೆಯುವಂತಾಯಿತು.ಇದು ನಡೆದದ್ದು ೧೮೮೬ರಲ್ಲಿ. ಆದರೆ ಅಷ್ಟರಲ್ಲಿ ಹರಿಭಾವು ತಮ್ಮ ಮೊದಲ ಕಾದಂಬರಿಯಾದ ‘ಮಧಲೀಸ್ಥಿತಿ’ ಯನ್ನು ಬರೆದು ಮುಗಿಸಿದ್ದರು. ಆಗ ಅವರಿಗೆ ಇಪ್ಪತ್ತೊಂದು ವರ್ಷ ವಯಸ್ಸು.

ಅವರು ಕಾಲೇಜು ಬಿಡುವ ವರ್ಷವೇ ಪ್ರಾರಂಭವಾದ ‘‘ಮನೋರಂಜನ’’ ಎಂಬ ಮಾಸ ಪತ್ರಿಕೆಯನ್ನು ಬೇರೆಯವರು ಪ್ರಾರಂಭಿಸಿದ್ದರೂ ಅದರಲ್ಲಿ ಹರಿಭಾವು ಅವರ ಕೈವಾಡವೂ ಇದ್ದಿತೆಂದು ಕಾಣುತ್ತದೆ. ಅವರ ಮುಂದಿನ ಕಾದಂಬರಿ ‘ಗಣಪತರಾವ್’ ಅಲ್ಲಿಯೇ ಧಾರಾವಾಹಿಯಾಗಿ ಪ್ರಕಟವಾಯಿತು. ಪತ್ರಿಕಾ ಪ್ರಪಂಚದೊಡನೆ ಹೀಗೆ ಮೊದಲಾದ ಸಂಬಂಧ ಮುಂದಿನ ನಾಲ್ಕು ವರ್ಷಗಳಲ್ಲಿ ಗಾಢವಾಗಿ ಬೆಳೆಯಿತು. ಅದರ ಮೂಲಕವೇ ಅವರು ತಮ್ಮ ಸಾಹಿತ್ಯ ಸೇವೆಯನ್ನು ಮಾಡುವಂತಾಯಿತು. ೧೮೯೦ ಅಕ್ಟೋಬರ್ ತಿಂಗಳಲ್ಲಿ ‘‘ಕುಲಕರ್ಣಿ ಅಣಿ ಮಂಡಳಿ’’  ಎಂಬ ಸಂಸ್ಥೆಯ ಮುಖಾಂತರ ‘‘ಕರಮಣೂಕ’’ ಎಂಬ ಹೆಸರಿನ ಸಾಪ್ತಾಹಿಕ ಪತ್ರಿಕೆಯನ್ನು ಪ್ರಾರಂಭಿಸುವುದೆಂದು ಯೋಜಿಸಿದರು. ಪ್ರತಿ ಶನಿವಾರ ಪ್ರಕಟವಾಗುತ್ತಿದ್ದ ಈ ಪತ್ರಿಕೆ ‘‘ಕಿರಿಯರಿಂದ ಹಿರಿಯರವರೆಗೆ ಎಲ್ಲ ಸ್ತ್ರೀಪುರುಷರಿಗೂ ಮನರಂಜನೆಯನ್ನು ಒದಗಿಸಿ ಜ್ಞಾನದಾಯಕವೂ ಆಗುವ’’ ಉದ್ದೇಶವನ್ನು ಇರಿಸಿಕೊಂಡಿತ್ತು.

ಹರಿಭಾವು ಅವರು ಮುಂದಿನ ಇಪ್ಪತ್ತೇಳು ವರ್ಷಗಳ ಕಾಲ, ೧೯೧೭ರ ವರೆಗೆ ವಾರ ಪತ್ರಿಕೆಯನ್ನು ಅವ್ಯಾಹತವಾಗಿ ನಡೆಸಿಕೊಂಡು ಹೋದರು. ಮಹಾರಾಷ್ಟ್ರದ ಓದುಗರಲ್ಲಿ ಸದಭಿರುಚಿಯನ್ನು ರೂಢಿಸುವುದರಲ್ಲಿ, ಸಾಹಿತ್ಯದ ಬಗೆಯಲ್ಲಿಯ ಆಸಕ್ತಿಯನ್ನು ಬೆಳೆಸುವುದರಲ್ಲಿ ಈ ಪತ್ರಿಕೆಯಲ್ಲಿಯ ಅವರ ಬರವಣಿಗೆ ಫಲಕಾರಿಯಾಗಿ ಕೆಲಸ ಮಾಡಿತು.

ಆನಂದಾಶ್ರಮ

ಕಾಲೇಜು ವ್ಯಾಸಂಗವನ್ನು ಅವರು ಪೂರೈಸಲಾಗದಿದ್ದುದು ಅವರ ಚಿಕ್ಕಪ್ಪ ಮಹಾದೇವ (ಅಣ್ಣಾ) ಅವರಿಗೆ ತುಂಬಾ ನಿರಾಶೆಯನ್ನುಂಟು ಮಾಡಿತ್ತು. ಆದರೆ ಮೊದಲಿನಿಂದಲೂ ತಾವು ಅಕ್ಕರೆಯಿಂದ ಕಾಣುತ್ತಿದ್ದ ಹರಿಭಾವೂನ ವಿಚಾರದಲ್ಲಿ ಅವರಿಗೆ ಭರವಸೆ ಇದ್ದಿತು. ಅವರ ಸ್ವತಂತ್ರ ಮನೋವೃತ್ತಿಯ ಪರಿಚಯವೂ ಅವರಿಗಿದ್ದಿತು. ತನ್ನ ಪಾಲಿಗೆ ಒಲಿದು ಬಂದಿದ್ದ ನ್ಯಾಯಾಧೀಶ ಹುದ್ದೆಯನ್ನು ಒಪ್ಪಬೇಕೇ ಬಾರದೇ ಎಂದು ಚಿಕ್ಕಪ್ಪ ಕೇಳಿದಾಗ ಸರಕಾರೀ ಕೆಲಸ ತಮಗೆ ಸಮ್ಮತವಿಲ್ಲ ಎಂದು ಹರಿಭಾವು ಹೇಳಿದ್ದರು. ಕಾಲೇಜು ಬಿಟ್ಟು ಏನಾದರೊಂದು ಉದ್ಯೋಗಕ್ಕೆ ತೊಡಗಬೇಕೆಂದಾಗ ‘‘ಏನೇ ಆದರೂ ಇನ್ನೊಬ್ಬರ ಆಳಾಗಿ ದುಡಿಯುವುದು ನನಗೆ ಬೇಕಿಲ್ಲ’’ ಎಂದು ನಮ್ರವಾಗಿಯಾದರೂ ಸ್ಪಷ್ಟವಾಗಿ ತಮ್ಮ ತಂದೆಯವರಿಗೆ ತಿಳಿಸಿದ್ದರು. ಇಂಥ ಸ್ವತಂತ್ರ ಮನೋವೃತ್ತಿಯನ್ನು ತಿಳಿದವರಾಗಿದ್ದರಿಂದಲೇ ಅವರ ಚಿಕ್ಕಪ್ಪ ‘ಆನಂದಾಶ್ರಮ’ ದ ಯೋಜನೆಯನ್ನು ಮಾಡಿ ಹರಿಭಾವುವಿನ ಜೀವನಾನುಕೂಲದ ಏರ್ಪಾಡನ್ನು ಮಾಡಿದ್ದರು.

ವಕೀಲಿವೃತ್ತಿಯಲ್ಲಿ ಅಪಾರವಾಗಿ ಹಣವನ್ನು ಸಂಪಾದಿಸುತ್ತಿದ್ದ ಚಿಕ್ಕಪ್ಪ ಮಹಾದೇವ (ಅಣ್ಣಾ) ೧೮೮೮ ರಲ್ಲಿ ಪುಣೆಯಲ್ಲಿ ‘‘ಆನಂದಾಶ್ರಮ’’ ಎಂಬ ಒಂದು ಸಂಸ್ಥೆಯನ್ನು ಪ್ರಾರಂಭಿಸಿದರು. ಪ್ರಾಚೀನ ಸಂಸ್ಕೃತ ಗ್ರಂಥಗಳ ಸಂರಕ್ಷಣೆ, ಪ್ರಕಾಶನ, ವಿದ್ಯಾರ್ಥಿ ಹಾಗೂ ಸಾಧುಸಂತರಿಗಾಗಿ ವಸತಿಭೋಜನಗಳ ಏರ್ಪಾಡು ಮತ್ತು ಶ್ರೀ ಶಂಕರ ದೇವಸ್ಥಾನದಲ್ಲಿ ಪೂಜೆ ಪುನಸ್ಕಾರಗಳ ವ್ಯವಸ್ಥೆ- ಈ ಉದ್ದೇಶ ಸಾಧನೆಗಾಗಿ ಆಶ್ರಮವನ್ನು ತೆರೆಯಲಾಗಿತ್ತು. ಅದಕ್ಕೆ ಬೇಕಾದ ಹಣವನ್ನು ಚಿಕ್ಕಪ್ಪ ಒದಗಿಸಿದ್ದರು. ಮೇಲ್ವಿಚಾರಣೆಯ ಕೆಲಸವನ್ನು ಹರಿಭಾವು ನೋಡಿಕೊಳ್ಳುವುದೆಂದು ಅವರ ಅಪೇಕ್ಷೆಯಾಗಿತ್ತು. ಇದರಿಂದ ಹರಿಭಾವುವಿನ ಜೀವನಕ್ಕೂ ಅನುಕೂಲವಾಯಿತು. ಸಾಹಿತ್ಯದ ಕಡೆಯಲ್ಲಿ ಒಲವಿದ್ದ ಆತನಿಗೆ ಈ ಕೆಲಸವೇ ಸರಿ ಎಂದು ಚಿಕ್ಕಪ್ಪ ಮುಂಧೋರಣೆಯ ಯೋಜನೆಯನ್ನು ಮಾಡಿಯಾಗಿತ್ತು.

ದಾಕ್ಷಿಣ್ಯಕ್ಕೆ ಒಳಗಾಗಿ, ಕರಾರುವಕ್ಕಾಗಿ ಎಂದಿಗೂ ನಡೆದುಕೊಳ್ಳಲಾಗದ, ಲೆಕ್ಕ ಪತ್ರಗಳನ್ನು ಸುವ್ಯವಸ್ಥಿತವಾಗಿ ನೋಡಿಕೊಳ್ಳಲಾಗದ ಹರಿಭಾವು ನಿತ್ಯ ಜೀವನೋಪಾಯದ ಚಿಂತೆಯಿಲ್ಲದೆ ತಮ್ಮ ಪತ್ರಿಕೆಯನ್ನು ನಡೆಸಿಕೊಂಡು ಹೋಗುವುದು ಸಾಧ್ಯವಾಯಿತು. ತಮ್ಮಲ್ಲಿ ಚಿಕ್ಕಪ್ಪ ಇಟ್ಟ ಪ್ರೀತಿ ವಾತ್ಸಲ್ಯಗಳಿಗೆ ಪ್ರತಿಯಾಗಿ ಅವರನ್ನು ಕೊನೆಯವರೆಗೆ ಹರಿಭಾವು ನಿಷ್ಠೆ ನೆಚ್ಚಿಕೆಗಳಿಂದ ನೋಡಿಕೊಂಡು ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು.

ಸಂಸಾರ ಜೀವನ

ಹರಿಭಾವು ಸ್ವತಂತ್ರ ಮನೋವೃತ್ತಿಯವರಾಗಿದ್ದ ಹಾಗೆ ಸಮಾಜ ಜೀವನವನ್ನು ಉತ್ತಮಗೊಳಿಸಲು ಕಾತರರಾಗಿದ್ದರು. ಹೆಂಗಸರಿಗೂ ವಿದ್ಯಾಭ್ಯಾಸದ ಅವಕಾಶಗಳಿರಬೇಕು. ಅವರು ಕೇವಲ ಮನೆಯಾಳುಗಳಾಗಿರಬಾರದು ಎಂದು ಅವರು ದೃಢವಾಗಿ ನಂಬಿದ್ದರು. ಹದಿನಾರನೆಯ ವಯಸ್ಸಿನಲ್ಲಿಯೇ ಅವರಿಗೆ ಮದುವೆಯಾಗಿತ್ತು. ಹೆಂಡತಿಯಾಗಿ ಬಂದಿದ್ದ ಮಥೂ ತಾಯಿಗೆ ಓದುಬರಹ ಬರುತ್ತಿರಲಿಲ್ಲ. ಆಕೆಗೆ ಓದು ಬರಹ ಕಲಿಸಬೇಕೆಂದು ಹರಿಭಾವು ಹಟದಿಂದ ಪ್ರಯತ್ನಿಸುತ್ತಿದ್ದರು. ಆದರೆ ಸಂಪ್ರದಾಯ ನಿಷ್ಠವಾದ ಮನೆತನದಲ್ಲಿಯ ಹಿರಿಯರು ಇದಕ್ಕೆ ವಿರೋಧವಾಗಿದ್ದರು. ತೀರ ಹಳೆಯ ವಾತಾವರಣದಲ್ಲಿ ಬೆಳೆದಿದ್ದ ಹೆಂಡತಿಯೂ ಸಹಕರಿಸುತ್ತಿರಲಿಲ್ಲ. ಹಿರಿಯರ ವಿರೋಧವನ್ನು ಆಕೆ ಎದುರಿಸಬೇಕಾಗುತ್ತಿತ್ತು. ಇದರಿಂದ ಹರಿಭಾವು ಅವರಿಗಾದ ನಿರಾಸೆ ಅಷ್ಟಿಷ್ಟಲ್ಲ. ಒಂದು ಮಗುವನ್ನು ಕಳೆದುಕೊಂಡ ಆಕೆ ಎರಡನೆಯ ಹೆರಿಗೆಯಲ್ಲಿ ಅಂಟಿಕೊಂಡ ರೋಗಕ್ಕೆ ಬಲಿಯಾಗಿ ೧೮೯೧ರಲ್ಲಿ ನಿಧನರಾದರು. ಮಗುವೂ ತೀರಿಹೋಯಿತು. ಈ ದುಃಖ ಪರಂಪರೆಯ ಪರಿಣಾಮ ಹರಿಭಾವು ಅವರ ಹೃದಯದ ಮೇಲೆ ತೀವ್ರವಾಗಿ ಕಾಣಿಸಿಕೊಂಡಿತು. ಹಳೆ ಹೊಸತುಗಳ ತಿಕ್ಕಾಟದಲ್ಲಿ ಗಾಸಿಯಾಗಿ ಹೆಂಡತಿ ಮೃತಿ ಹೊಂದಿದಳೆಂದು, ಅದಕ್ಕೆ ಕೆಲಮಟ್ಟಿಗೆ ತಾವು ಕಾರಣವಾದಂತಾಯಿತೆಂದು ಅವರು ಕೊನೆಯವರೆಗೂ ವ್ಯಥೆ ಪಡುವಂತಾಯಿತು.

ಹರಿಭಾವು ಅವರಿಗೆ ಮರುಮದುವೆಯನ್ನು ಮಾಡಿಕೊಳ್ಳುವ ಮನಸ್ಸಿರಲಿಲ್ಲ. ಆದರೆ ಅವರನ್ನು ಸಲಹಿ ಬೆಳೆಸಿದ ಅಜ್ಜಿ ಹಾಗೂ ಮನೆತನದಲ್ಲಿಯ ಹಿರಿಯರ ಒತ್ತಾಯಕ್ಕೆ ಮಣಿಯಲೇಬೇಕಾಯಿತು. ಮರುಮದುವೆ ಮಾಡಿಕೊಳ್ಳುವುದೇ ಆದರೆ ವಿಧವಾವಿವಾಹವನ್ನಾದರೂ ಮಾಡಿಕೊಳ್ಳಬೇಕೆಂಬ ಅವರ ಅಪೇಕ್ಷೆಯನ್ನೂ ಮನೆಯವರು ನಡೆಯಗೊಡಲಿಲ್ಲ. ಕೊನೆಗೆ ಮನಸ್ಸಿಲ್ಲದ ಮನಸ್ಸಿನಿಂದೆಂಬಂತೆ ಬಾರಾಮತಿಯ ಚೋಳಕರ್ ವಕೀಲರ ಮಗಳಾದ ವೇಣಾತಾಯಿ ಎಂಬ ಹನ್ನೊಂದು ವರ್ಷದ ಹುಡುಗಿಯನ್ನು ೧೮೯೨ ರಲ್ಲಿ ಮದುವೆಯಾದರು. ಸಮಾಜ ಸುಧಾರಕ ಪಂಥದವರೆಂದು ಹೆಸರು ಪಡೆದ ಹರಿಭಾವು ಅವರು ಈ ಮದುವೆಯಿಂದಾಗಿ ವೈಯಕ್ತಿಕ ಟೀಕೆಯನ್ನು ಎದುರಿಸಬೇಕಾಯಿತು. ಮನೆಯ ಹಿರಿಯರ ಮಾತು ನಡೆಸಿದ ಹರಿಭಾವು ಇಂಥ ಕಹಿಯನ್ನು ನುಂಗಿಕೊಂಡಿರಬೇಕಾಯಿತು. ತಾನು ಮದುವೆಯಾದವಳು ಐದನೆಯ ತರಗತಿಯವರೆಗೆ ಓದಿದವಳಾಗಿದ್ದಳೆನ್ನವು ದೊಂದೇ ಅವರಿಗೆ ಸಮಾಧಾನದ ವಿಷಯವಾಗಿತ್ತು.

ಹಾಗಿದ್ದರೂ ಹರಿಭಾವು ಅವರಿಗೆ ಹೊಸ ಸಂಸಾರದಲ್ಲಿ ಉತ್ಸಾಹ ಮೂಡಲಿಲ್ಲ. ಹೆಚ್ಚುಕಡಿಮೆ ನಿರ್ಲಕ್ಷ ದಿಂದಲೇ ಇರುತ್ತಿದ್ದರು. ಆದರೆ ಹದಗೆಡುತ್ತ ನಡೆದ ಹೆಂಡತಿಯ ಆರೋಗ್ಯ ಎಚ್ಚರ ತಂದಿತು. ‘‘ನನ್ನದು ಎನ್ನಬಹುದಾದ ಒಂದು ಮನೆ ಎಂದಾದರೂ ನನ್ನದಾಗುತ್ತದೆಯೇ?’’  ಎಂಬ ವಿವಂಚನೆಗೊಳಗಾಗಬೇಕಾದಾಗ ಹಿರಿಯರ ಸಲಹೆಯನ್ನು ಒಪ್ಪಿ ಹೆಂಡತಿಯೊಡನೆ ‘ಆನಂದಾಶ್ರಮ’ ದಲ್ಲಿ ಬೇರೆಯಾಗಿ ಇರತೊಡಗಿದಾಗ ಗಂಡ ಹೆಂಡರಿಬ್ಬರೂ ನೆಮ್ಮದಿ ಪಡೆಯುವಂತಾಯಿತು. ೧೯೦೬ರಲ್ಲಿ ಹುಟ್ಟಿದ ಹೆಣ್ಣು ಮಗುವಿಗೆ ‘‘ಶಾಂತಾ’’ ಎಂದು ಹೆಸರಿಟ್ಟರು. ಹರಿಭಾವು ಆಕೆಯನ್ನು ತುಂಬಾ ಅಕ್ಕರೆಯಿಂದ ಕಾಣುತ್ತಿದ್ದರಲ್ಲದೆ ಅಚ್ಚುಕಟ್ಟಾಗಿ ಆಕೆಯನ್ನು ‘‘ತಾಯೀ’’ ಎಂದು ಸಂಬೋಧಿಸುತ್ತಿದ್ದರು. ಬರಬರುತ್ತ ಆಕೆ ಅವರ ಕಣ್ಣ ಗೊಂಬೆಯಾದಳು.

ಆನಂದಾಶ್ರಮದಲ್ಲಿಯ ಅವರ ನೆಮ್ಮದಿಯ ಜೀವನ ಒಂದು ನಿಯತವಾದ ಕ್ರಮಕ್ಕೆ ಒಳಪಟ್ಟಿರುತ್ತಿತ್ತು. ಬೆಳಗಿನ ಮೂರುವರೆಗೆ ಎದ್ದು ತಮ್ಮ ಬರವಣಿಗೆಗೆ ತೊಡಗುತ್ತಿದ್ದರು. ವಾಯುವಿಹಾರ, ಪತ್ರವ್ಯವಹಾರ, ಆಶ್ರಮದ ಕೆಲಸ, ಓದು ಅಥವಾ ಭಜನೆ ಇವುಗಳಲ್ಲಿ ದಿನ ಕಳೆಯುತ್ತಿತ್ತು. ಪ್ರತಿ ಕಾರ್ಯಕ್ರಮಕ್ಕೂ ಖಚಿತವಾಗಿ ಇಷ್ಟು ಸಮಯ ಎಂದು ನಿಗದಿ.

ಮುದ್ದಿನ ಮಗಳು ಇನ್ನಿಲ್ಲ

ಹರಿಭಾವು ಅವರಿಗೆ ತಮ್ಮ ‘ತಾಯಿ’ಯ ಹಾಗೆ ಎಲ್ಲ ಮಕ್ಕಳೆಂದರೆ ತುಂಬಾ ಪ್ರೀತಿ. ಮಗು ಮೂರು ತಿಂಗಳದ್ದಾಗುವಾಗಲೇ ಏನೋ ಒಂದು ಕಾಯಿಲೆ ಸೇರಿಕೊಂಡಿತು. ಎರಡು ತಿಂಗಳಲ್ಲಿ ಮೂರು ಸಲ ಶಸ್ತ್ರಚಿಕಿತ್ಸೆ ಮಾಡಿಸಬೇಕಾಯಿತು. ಅದೆಲ್ಲದರಿಂದ ಮಗು ಚೇತರಿಸಿಕೊಂಡರೂ ಸುದೃಢವಾಗಿ ಬೆಳೆಯಲಿಲ್ಲ. ನೋಡುವುದಕ್ಕೆ ಸಾಮಾನ್ಯವಾಗಿದ್ದರೂ ತಿಳುವಳಿಕೆಯಲ್ಲಿ ತುಂಬಾ ಚುರುಕಿನ ಮಗುವಾಗಿತ್ತು. ತಾಯಿ ಎಲ್ಲಿದ್ದಾಳೆ? ಎಂದು ಹರಿಭಾವು ತುಂಬಾ ಅಕ್ಕರೆಯಿಂದ ಕೇಳಿದಾಗ ಮಗು ಅವರ ಹೃದಯದ ಮೇಲೆ ಬೆರಳಿರಿಸುತ್ತಿತ್ತಂತೆ! ಮಕ್ಕಳನ್ನು ಎಂದಿಗೂ ಮಮತೆಯಿಂದ ಕಾಣುತ್ತಿದ್ದ ವರು ತಮಗೆ ಗೊತ್ತಿದ್ದ ಎಳೆಯ ಮಕ್ಕಳನ್ನು ಕರೆತಂದು ಒಂದು ಸಲ ‘‘ಬಾಲ ದಿನ’’ ವನ್ನಾಚರಿಸಿದರು. ಊಟ ಆಟಪಾಠಗಳಲ್ಲಿ ತೊಡಗಿ ಮೈಮರೆಯುತ್ತಿದ್ದ ಮಕ್ಕಳನ್ನು ಅಂಥ ಸಂದರ್ಭದಲ್ಲಿ ಕಂಡಾಗ ಅವರ ಕಣ್ಣುಗಳು ತೇವಗೊಳ್ಳುತ್ತಿದ್ದವು.ಆದರೆ ಅವರ ತಾಯಿ ಮುಂದೆ ಕೆಲವೇ ದಿನಗಳಲ್ಲಿ (೧೯೧೩) ಸತ್ತು ಹೋದಳು. ಆಗ ಅವಳಿಗೆ ಏಳುವರ್ಷ.ಆಕೆಯ ಸಾವು ಅವರ ದೇಹ ಮನಸ್ಸುಗಳೆರಡರಮೇಲೂ ಪರಿಣಾಮ ಬೀರತೊಡಗಿತು. ಬದುಕು ಶೂನ್ಯವೆನಿಸತೊಡಗಿತು. ಆಕೆ ತೀರಿಹೋದಂದಿನಿಂದ ಮಗುವಿಗೆ ಪ್ರಿಯವಾಗಿದ್ದ ಮಾವು ಹಾಗೂ ಬಾಳೆಯ ಹಣ್ಣುಗಳನ್ನು ತಿನ್ನುವುದನ್ನು ಹರಿಭಾವು ಬಿಟ್ಟುಕೊಟ್ಟರು!

ಕಾಯಿಲೆ, ಕಣ್ಮರೆಯಾದರು

೧೮೮೮ ರಲ್ಲಿ ಇನ್‌ಫ್ಲುಯೆನ್‌ಜಾ ಬೇನೆಯಿಂದ ಬಳಲಿದಾಗ ಹರಿಭಾವು ಅವರಿಗೆ ಹೃದಯ ವಿಕಾರ ಬಾಧಿಸಿತ್ತು. ಮುದ್ದುಮಗಳು ತೀರಿಹೋದಾಗ ಆ ವಿಕಾರ ಮತ್ತೆ ಮರುಕಳಿಸಿತು. ಇದಲ್ಲದೆ ಒಂದೇ ಸಮನಾಗಿ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿರುವವರಾಗಿದ್ದರಿಂದ ದೇಹ ಬಳಲುತ್ತಿತ್ತು. ಸಾಲದ್ದಕ್ಕೆ ಯಾರದೋ ದಾಕ್ಷಿಣ್ಯಕ್ಕೆ ಒಳಗಾಗಿ ಬಂಗಾಳದಲ್ಲಿಯ ಒಂದು ರೈಲು ಶಾಖೆಯ ನಿರ್ಮಾಣಕ್ಕಾಗಿ ಸಂಗ್ರಹಿಸಬೇಕಾದ ಶೇರು ಬಂಡವಾಳವನ್ನು ಸಂಗ್ರಹಿಸುವ ಕೆಲಸವನ್ನು ಮೈಮೇಲೆ ಹಾಕಿಕೊಂಡಿದ್ದರು. ಹೇಳಿಕೊಳ್ಳಬಹುದಾದ ದೇಹ ದಾರ್ಢ್ಯವನ್ನು ಎಂದಿಗೂ ಪಡೆದಿರದ ಅವರಿಗೆ ೧೯೧೮ರಲ್ಲಿ ಈ ಕೆಲಸಕ್ಕಾಗಿ ಕಲಕತ್ತೆಗೆ ಹೋಗಬೇಕಾಗಿ ಬಂದಿತು. ಅಲ್ಲಿ ಅನಾರೋಗ್ಯಕ್ಕೆ ಒಳಗಾದರು. ಹಿಂದಿರುಗುವಾಗ ಇಂದೂರಿನಲ್ಲಿ ತಂಗಿದರು. ಬೇನೆ ಉಲ್ಬಣಗೊಂಡಿತು. ಮುಂಬಯಿ ತಲುಪಿ ಇಬ್ಬರು ಮೂವರು ನಿಷ್ಣಾತ ಡಾಕ್ಟರರಿಂದ ಶುಶ್ರೂಷೆ ಮಾಡಿಸಿಕೊಂಡರೂ ಪ್ರಯೋಜನವಾಗಲಿಲ್ಲ. ಅಂಥ ಸ್ಥಿತಿಯಲ್ಲಿಯೂ ಸಾರ್ವಜನಿಕ ಸೇವಾ ಆಯೋಗದೆದುರು ಹೇಳಬೇಕಾಗಿದ್ದ ಸಾಕ್ಷ ವನ್ನು ಹೇಳಿ ಪೂರೈಸಿದರು. ಆರೋಗ್ಯ ದಿನದಿನಕ್ಕೆ ಕುಸಿಯುತ್ತ ನಡೆಯಿತು. ೧೯೧೯ ರ ಮಾರ್ಚ್ ತಿಂಗಳ ಮೂರನೆಯ ದಿನಾಂಕದಂದು ಅವರನ್ನು ಮುಂಬಯಿಯಿಂದ ಪುಣೆಯಲ್ಲಿಯ ಅವರ ಆನಂದಾಶ್ರಮಕ್ಕೆ ಕರೆತರಲಾಯಿತು. ದಾರಿಯಲ್ಲಿ ರಕ್ತ ವಾಂತಿಯಾಯಿತು. ಕೊನೆ ಸಮೀಪಿಸಿತೆಂದು ಆಶ್ರಮಕ್ಕೆ ಬಂದಕೂಡಲೆ ವಕೀಲರನ್ನು ಕರೆಯಿಸಿಕೊಂಡು ಮೃತ್ಯು ಪತ್ರವನ್ನು ಬರೆಯಿಸಿ ಹೆಂಡತಿಯ ಯೋಗಕ್ಷೇಮದ ಏರ್ಪಾಡನ್ನು ಮಾಡಿದರು. ‘ನನ್ನ ಕೈಯಿಂದ ಸಾಧ್ಯವಿದ್ದುದನ್ನು ಮಾಡಿದ್ದೇನೆ, ಸಾವು ನನ್ನ ಕೈಯಲ್ಲಿಯದಲ್ಲ’’ ಎಂದು ಹೇಳಿದ್ದೇ ಅವರ ಕೊನೆಯ ಮಾತಾಯಿತು. ಆನಂದಾಶ್ರಮಕ್ಕೆ ಹಿಂದಿರುಗಿ ಆರುಗಂಟೆಗಳಾಗುವಷ್ಟರಲ್ಲಿ ಸಾಯಂಕಾಲದ ಏಳು ಸುಮಾರಿಗೆ ಅಸುನೀಗಿದರು.

ಸ್ವಾತಂತ್ರ್ಯಪ್ರಿಯರು

ಶ್ರೇಷ್ಠಗ್ರಂಥ ಅದನ್ನು ಬರೆದವನ ವ್ಯಕ್ತಿತ್ವವನ್ನು ತೋರಿಸುತ್ತದೆ; ಹಾಗೆಯೇ ಅದರ ಹಿರಿಮೆ ಅವನ ವ್ಯಕ್ತಿತ್ವದ ಹಿರಿಮೆಯನ್ನು ಹೊಂದಿಕೊಂಡಿರುತ್ತದೆ. ಆದ್ದರಿಂದ ಆಪಟೆಯವರು ನಿರ್ಮಿಸಿದ ಸಾಹಿತ್ಯದ ಹಿರಿಮೆಯನ್ನು ಗುರುತಿಸುವ ಮೊದಲು ಅವರ ವ್ಯಕ್ತಿತವದ ಗುಣಲಕ್ಷಣಗಳನ್ನು ನಾವು ತಿಳಿದುಕೊಳ್ಳುವುದೊಳಿತು.

ಯಾರಿಗೂ ಅಡಿಯಾಳಾಗದೆ ಸ್ವತಂತ್ರವಾಗಿ ಬದುಕಬೇಕೆಂಬ ಮನೋವೃತ್ತಿ ಮೊದಲಿನಿಂದಲೂ ಅವರಲ್ಲಿ ಬೆಳೆದಿತ್ತು. ‘‘ಏನು ಹರಿ, ಬದುಕಿನುದ್ದಕ್ಕೂ ನೌಕರಿಯಲ್ಲಿರುವುದು ಒಳ್ಳೆಯದೊ ಅಥವಾ ಸ್ವತಂತ್ರವಾಗಿ ಉದ್ಯೋಗ ಮಾಡಿಕೊಂಡಿರುವುದೊ?’’ ಎಂದು ಅವರ ಚಿಕ್ಕಪ್ಪ ಕೇಳಿದಾಗ ‘‘ಸ್ವತಂತ್ರ ಉದ್ಯೋಗ!’’ ಎಂದು ತತ್‌ಕ್ಷಣ ಉತ್ತರ ಹೊರಬಂದಿತ್ತು. ಕಾಲೇಜನ್ನು ಬಿಟ್ಟಾಗ ತಂದೆಯವರು ಅವರ ಮುಂದಿನ ಯೋಜನೆಯನ್ನು ಕುರಿತು ವಿಚಾರಿಸಿದಾಗ ‘‘ನನಗೆ ಯಾರಲ್ಲಿಯೂ ಕೆಲಸಕ್ಕೆ ಸೇರಿಕೊಳ್ಳುವುದು ಬೇಕಿಲ್ಲ. ಸೇರದೆಯೂ ಹೊಟ್ಟೆ ಹೊರೆದುಕೊಳ್ಳಬಹುದು’’ ಎಂದು ಹೇಳಿದ್ದರು. ‘ಕರಮಣೂಕ’ ಪತ್ರಿಕೆಗಾಗಿ ಹಣವನ್ನು ತಾವು ಕೊಡುವುದಿಲ್ಲ ಎಂದು ಚಿಕ್ಕಪ್ಪ ಹೇಳಿದಾಗ ಹರಿಭಾವು ಅವರು ‘‘ನೀವು ಕಷ್ಟಪಟ್ಟು ಗಳಿಸಿದ ದುಡ್ಡಿಗೆ ನೀವು ಒಡೆಯರು. ಅದರ ಮೇಲೆ ನಾನು ಕನಸಿನಲ್ಲಿಯೂ ಕಣ್ಣಿರಿಸಿದ್ದಿಲ್ಲ!’’ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದರು. ಅವರ ಚಿಕ್ಕಪ್ಪನಿಗೆ ಏನು ಉತ್ತರ ಹೇಳಬೇಕೆಂದು ತೋರಲಿಲ್ಲ. ಸರಕಾರದಿಂದ ಬಿರುದು ಬಾವಲಿಗಳನ್ನು ಪಡೆದವರು ತಿಲಕರೊಡನೆ ಸಂಪರ್ಕ ವಿರಿಸಿಕೊಳ್ಳಕೂಡದೆಂದು ಸರಕಾರ ೧೯೧೪ರಲ್ಲಿ ಪರಿಪತ್ರವನ್ನು ಹೊರಡಿಸಿತ್ತು; ಆಗ ಹರಿಭಾವು ತಮಗೆ ದೊರಕಿದ್ದ ‘‘ಕೈಸರ್ ಈ ಹಿಂದ್’’ ರಜತಪದಕವನ್ನು ಹಿಂದಿರುಗಿಸಬೇಕೆಂದರು. ಅವರ ಸ್ವತಂತ್ರ ಮನೋವೃತ್ತಿಗೆ ಇಂಥ ಅನೇಕ ನಿದರ್ಶನಗಳನ್ನು ಹೇಳಬಹುದು.

ತಾವಿನ್ನು ಬದುಕುವುದಿಲ್ಲ ಎಂದು ಖಚಿತವೆನಿಸಿದಾಗ ಮೃತ್ಯುಪತ್ರ ಬರೆಯಿಸಿ ಮಡದಿಯನ್ನು ಕುರಿತು ಮಾಡಬೇಕಾದುದನ್ನು ಮಾಡಿ ತಮ್ಮ ಕರ್ತವ್ಯವನ್ನು ಪೂರೈಸಿದರು. ಅಕಸ್ಮಾತ್ತಾಗಿ ಅವರ ಸ್ನೇಹಿತರೊಬ್ಬರು ತೀರಿಕೊಂಡರು. ಹರಿಭಾವು ಅವರು ಆತನ ಹೆಂಡತಿಯನ್ನೂ ಮಗುವನ್ನೂ ನೋಡಿಕೊಳ್ಳುವುದಾಗಿ ಮಾತು ಕೊಟ್ಟರು. ಕೊನೆಯವರೆಗೆ ಹಾಗೆಯೇ ಮಾಡಿದರು.

ಹರಿಭಾವು ಅವರಿಗೆ ಪುಸ್ತಕಗಳೆಂದರೆ ಪ್ರೀತಿ. ಡೆಕ್ಕನ್ ಕಾಲೇಜಿನಲ್ಲಿದ್ದಾಗ ಗ್ರಂಥಾಲಯದಲ್ಲಿ ಇಂಗ್ಲಿಷ್ ಪುಸ್ತಕಗಳ ಜೊತೆಯಲ್ಲಿ ಮರಾಠೀ ಪುಸ್ತಕಗಳಿಗೂ ಸ್ಥಾನವಿರಬೇಕೆಂದು ವಾದಿಸಿ ಅವುಗಳಿಗೆ ಅಲ್ಲಿ ಪ್ರವೇಶವನ್ನು ದೊರಕಿಸಿಕೊಟ್ಟಿದ್ದರು. ಓದುವುದು, ಓದಿದ್ದನ್ನು ಸ್ನೇಹಿತರೊಡನೆ ಚರ್ಚೆ ಮಾಡುವುದು ಅವರ ನಿತ್ಯದ ಕಾರ್ಯಕ್ರಮವಾಗಿರುತ್ತಿತ್ತು. ಗ್ರಂಥಗಳೇ ಅವರ ನಿಜವಾದ ಆಪ್ತಬಂಧುಗಳು ಎನ್ನಬಹುದಾಗಿತ್ತು. ಅಸ್ವಾಸ್ಥ ದಿಂದ ಹಾಸಿಗೆ ಹಿಡಿದು ಮಲಗಿದಾಗ ಅವರು ‘‘ಗ್ರಂಥಗಳೇ ನನ್ನ ನಿಜವಾದ ಸ್ನೇಹಿತರು. ಈಗಿನ ನನ್ನ ಸ್ಥಿತಿಯಲ್ಲಿ ಅವುಗಳ ಸಹವಾಸವೂ ಸುಖದಾಯಕವೆನಿಸುತ್ತದೆ’’ ಎಂದು ಸ್ನೇಹಿತರಿಗೆ ಹೇಳುತ್ತಿದ್ದರು. ಅವರ ಬದುಕಿನ ಕೊನೆಯ ದಿನ ಅವರ ಸ್ನೇಹಿತ ಸೀತಾರಾಮಪಂತ ಕೇಳ್ಕರರು ತಾವು ತೆಗೆದುಕೊಂಡು ಹೋಗಿದ್ದ ಕೆಲವು ಪುಸ್ತಕಗಳನ್ನು ಹಿಂದಿರುಗಿಸುವುದಕ್ಕೆಂದು ಬಂದಿದ್ದರು. ಅವರನ್ನು ಹರಿಭಾವು ಹತ್ತಿರ ಕರೆದು ‘‘ಆ ಎದುರಿಗಿನ ಬೀರುವಿನಲ್ಲಿಯ ಎಲ್ಲ ಪುಸ್ತಕಗಳನ್ನು ಇಲ್ಲಿ ತಂದುಕೊಡು. ಕೆಲವನ್ನು ನನ್ನ ಮೈಮೇಲೆ ಹರವಿಹಾಕು. ನನ್ನ ಬದುಕೆಲ್ಲ ಗ್ರಂಥಗಳ ಮಧ್ಯದಲ್ಲಿ ಕಳೆಯಿತು. ಮರಣವಾದರೂ ಗ್ರಂಥಗಳ ಮಧ್ಯದಲ್ಲಿಯೇ ಬರಲಿ’’ ಎಂದರಂತೆ

ಪ್ರೀತಿ ವಿಶ್ವಾಸಗಳ ಮೂರ್ತಿ

ಮಕ್ಕಳನ್ನು ತುಂಬ ವಾತ್ಸಲ್ಯದಿಂದ ಕಾಣುತ್ತಿದ್ದ ಅವರು ಸ್ನೇಹಿತರ ವಿಷಯದಲ್ಲಿ ತೀರ ಆತ್ಮೀಯರಾಗಿರುತ್ತಿದ್ದರು. ಅವರ ಸ್ನೇಹ ಪರಿವಾರವೂ ದೊಡ್ಡದಾಗಿತ್ತು. ಅವರ ನಡೆನುಡಿಗಳ ಬಗೆಯಲ್ಲಿ ನಿಷ್ಠುರದ ಮಾತನ್ನು ಹೇಳಿದವರು ತೀರಾ ಅಪರೂಪ. ಅಗತ್ಯವಿದ್ದಾಗ ಕೈಲಾದ ಸಹಾಯವನ್ನು ಯಾರಿಗಾದರೂ ಅವರು ಮಾಡುತ್ತಿದ್ದರು. ಆನಂದಾಶ್ರಮ ದಲ್ಲಿಯ ಸೇವಕನೊಬ್ಬನಿಗೆ ಕಾಲಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿ ಬಂದಾಗ ತಿಂಗಳುಗಟ್ಟಲೆ ಆತನ ಶುಶ್ರೂಷೆಯನ್ನು ನೋಡಿಕೊಂಡರಲ್ಲದೆ ಆತ ಆಸ್ಪತ್ರೆಯಿಂದ ಹಿಂದಿರುಗಿದ ನಂತರ ಕುಳಿತಲ್ಲಿಯೇ ಮಾಡಬಹುದಾದ ಕೆಲಸದ ಏರ್ಪಾಡನ್ನು ಆತನಿಗಾಗಿ ಮಾಡಿದರು. ಸ್ನೇಹಿತರಿಗೆ ಅವರು ತೋರುತ್ತಿದ್ದ ಸೌಹಾರ್ದದ ಕಥೆಗಳಿಗೆ ಕೊನೆಯೇ ಇಲ್ಲ. ಚರ್ಚೆಗಾಗಿ, ಹರಟೆಗಾಗಿ, ಊಟಕ್ಕಾಗಿ, ವಿನೋದಕ್ಕಾಗಿ ಅವರನ್ನು ಮನೆಗೆ ಕರೆದುಕೊಂಡು ಬರುವುದು, ಊಟಕ್ಕೆ ಉಳಿಸಿಕೊಳ್ಳುವುದು ತೀರ ಸಾಮಾನ್ಯವಾಗಿತ್ತು.

ವಿಚಾರಧಾರೆ

ಹರಿಭಾವು ಅವರು ಹಲವಾರು ಇಂಗ್ಲಿಷ್ ವಿಚಾರವಂತರ ಪುಸ್ತಕಗಳನ್ನು ಓದಿದ್ದರು. ಸಮಾಜದಲ್ಲಿ ಬದಲಾವಣೆಗಳಾಗಬೇಕು ಎಂದು ಅರ್ಥಮಾಡಿ ಕೊಂಡಿದ್ದರು. ಆದರೂ ಹಿರಿಯರ ಮತ್ತು ಮನೆಯವರ ಮನಸ್ಸನ್ನು ನೋಯಿಸಲು ಇಷ್ಟಪಡುತ್ತಿರಲಿಲ್ಲ.  ಮನೆಯಲ್ಲಿ ಧರ್ಮಕಾರ್ಯಗಳನ್ನು ಯಥಾಸಾಂಗವಾಗಿ ಮಾಡುತ್ತಿದ್ದರು. ಕಾಲೇಜಿನ ಹಾಸ್ಟೆಲ್‌ನಲ್ಲಿರುವಾಗಲೂ ಮಡಿಯನ್ನುಟ್ಟು ಊಟಕ್ಕೆ ಕುಳಿತುಕೊಳ್ಳುತ್ತಿದ್ದರು. ಆನಂದಾಶ್ರಮ ದಲ್ಲಿಯಾದರೂ ಪೂಜೆ, ಉತ್ಸವಗಳನ್ನು, ಹೋಮ, ಹವನಾದಿಗಳನ್ನು, ವ್ರತ ಉಪವಾಸಗಳನ್ನು ವಿಧ್ಯುಕ್ತವಾಗಿ ನಡೆಸುತ್ತಿದ್ದರು. ಹರಿಭಾವು ಅವರು ಸಂಪ್ರದಾಯವಂತ ಮನುಷ್ಯ ಎಂದು ಅನೇಕರು ಭಾವಿಸಿದ್ದು ಆಶ್ಚರ್ಯವಲ್ಲ. ಆದರೆ ನಿಜವಾಗಿ ಅವರಿಗೆ ಸಮಾಜವನ್ನು ತಿದ್ದುವ, ಬದಲಿಸುವ ಉದ್ದೇಶ. ವಿಧವೆಯರು ಮದುವೆ ಮಾಡಿಕೊಳ್ಳಬಾರದು ಎಂದು ಹಿಂದೂ ಸಮಾಜದಲ್ಲಿ ಬಹುಮಂದಿ ನಂಬಿದ್ದ ಕಾಲ ಅದು. ಆದರೆ ವಿಧವೆಯರು ಮದುವೆ ಮಾಡಿಕೊಳ್ಳುವುದರಲ್ಲಿ ತಪ್ಪಿಲ್ಲ ಎಂದು ಹರಿಭಾವು ಅವರ ಬಲವತ್ತರವಾದ ಅಭಿಪ್ರಾಯ. ಅವರೇ ವಿಧವೆಯನ್ನು ಮದುವೆಯಾಗಬೇಕು ಎಂದು ಮನಸ್ಸು ಮಾಡಿ, ಮನೆಯಲ್ಲಿ ಹಿರಿಯರು ಒಪ್ಪದೆ ಇದ್ದುದರಿಂದ ಆ ಯೋಚನೆಯನ್ನು ಬಿಡಬೇಕಾಯಿತು. ದೇವರಿಗೆ ಪ್ರಾರ್ಥನೆ ಮಾಡಿಕೊಂಡು ಅವನು ಏನಾದರೂ ಮಾಡುತ್ತಾನೆ ಎಂದು ಕಾಯುವುದರಲ್ಲಿ ಅವರಿಗೆ ನಂಬಿಕೆ ಇರಲಿಲ್ಲ.

ಅವರ ‘ಕರ್ಮಯೋಗ’ ಕಾದಂಬರಿಯಲ್ಲಿಯ ಚಂದ್ರಶೇಖರ ಎಂಬ ಪಾತ್ರದ ಬಾಯಲ್ಲಿ ಅವರು ಹಾಕಿದ ಮಾತುಗಳನ್ನು ಅವರೇ ಹೇಳಬಹುದಾಗಿತ್ತು. ಆ ಮಾತುಗಳು ಹೀಗಿವೆ: ‘‘ಮನುಷ್ಯ ತನಗೆ ನೀತಿಯುತವಾದದ್ದು ಎಂದು ತೋರಿದುದನ್ನು ಮಾಡಬೇಕು. ಪ್ರಪಂಚವೇ ಪರಮೇಶ್ವರ. ಜನರ ಹಿತಕ್ಕಾಗಿ ದುಡಿಯುವುದೇ ಪರಮೇಶ್ವರನ ಸೇವೆ.’’

ಹೀಗೆ ಅನೇಕ ಒಳ್ಳೆಯ ಗುಣಗಳಿಗೆ ಆಶ್ರಯವಾಗಿದ್ದ ಹರಿಭಾವು ಅವರ ವ್ಯಕ್ತಿತ್ವದಲ್ಲಿ ಕೆಲವೊಂದು ಲೋಪದೋಷಗಳು ಇದ್ದವು. ತಾಯಿಯನ್ನು ಕಳೆದುಕೊಂಡು ಅಜ್ಜಿಯ ಅಕ್ಕರೆಯಲ್ಲಿ ಬೆಳೆದ ಮಗುವಾಗಿದ್ದರಿಂದ ಹಟಮಾರಿತನ ಅವರ ಸ್ವಭಾವದ ಅಂಶವಾಗಿಬಿಟ್ಟಿತ್ತು. ಶಾಲೆ ಕಾಲೇಜುಗಳಲ್ಲಿಯ ಓದು ವ್ಯವಸ್ಥಿತವಾಗಿರುತ್ತಿರಲಿಲ್ಲ. ಕೈಬರಹವನ್ನು ಸರಿಯಾಗಿ ರೂಢಿಸಿಕೊಂಡಿರಲಿಲ್ಲ. ಪತ್ರಿಕಾ ಪ್ರಪಂಚವನ್ನು ಸೇರಿದ ಮೇಲೆಯೂ ಲೆಕ್ಕಪತ್ರಗಳ ವಿಷಯದಲ್ಲಿಯ ನಿರ್ಲಕ್ಷ ದ ಮೂಲಕ ತಮ್ಮ ಬರವಣಿಗೆಯಿಂದ ಹೆಚ್ಚಿನ ಪ್ರತಿಫಲವನ್ನು ಪಡೆಯಲಾಗಲಿಲ್ಲ. ದಾಕ್ಷಿಣ್ಯದ ಸ್ವಭಾವದವರಾದ್ದರಿಂದ ಉಳಿದವರನ್ನು ನೋಯಿಸಲಾಗದ್ದಕ್ಕೆ ತಮ್ಮ ಮಡದಿಯನ್ನು ನೋಯಿಸು ತ್ತಿದ್ದೇನೆ ಎನ್ನುವುದನ್ನು ಗಮನಿಸದೆ ಹೋದರು. ನೂರಾರು ಪಾತ್ರಗಳ ಅಂತರಂಗವನ್ನು ಒಳಹೊಕ್ಕು ನೋಡಬಲ್ಲ ಕಾದಂಬರಿಕಾರನಿಗೆ ಹೆಂಡತಿಯ ಅನಾರೋಗ್ಯ ಉಲ್ಬಣಿಸುವವರೆಗೂ ಕಣ್ಣಿಗೆ ಬೀಳಲಿಲ್ಲ. ಹಲವು ಸಂಘಗಳ ಕೆಲಸವನ್ನು ಕಟ್ಟಿಕೊಂಡು ಒದ್ದಾಡುತ್ತಿದ್ದರು. ಅವಸರದ ಅಭಿಪ್ರಾಯಗಳ ಮೂಲಕ ತಪ್ಪು ತಿಳುವಳಿಕೆಗಳಿಗೆ ಅವಕಾಶ ಕೊಡುತ್ತಿದ್ದರು. ಆದರೆ ನಿಜಾಂಶ ತಿಳಿದಾಗ ಸಂತೋಷವಾಗಿ ತಿದ್ದಿಕೊಳ್ಳುತ್ತಿದ್ದರು. ಬರಹ ತಮ್ಮ ನಿಜವಾದ ಒಲವಿನ ಕೆಲಸವಾದರೂ ಬೇಡದ ಕೆಲಸಗಳನ್ನು ಕೊರಳಿಗೆ ಕಟ್ಟಿಕೊಂಡು ಒದ್ದಾಡುತ್ತಿದ್ದರು. ನಗರ ಸಭೆಯ ಸಮಿತಿಯ ಸಭೆಗಳಲ್ಲಿ ತಾವು ಹನ್ನೆರಡು ನೂರು ಗಂಟೆಗಳ ಕಾಲವನ್ನು ವ್ಯಯಿಸಿದರೆಂದು ಲೆಕ್ಕ ಹೇಳಿದ್ದಾರೆ.

ಸಮಾಜಕ್ಕಾಗಿ

ಒಂದು ದೃಷ್ಟಿಯಿಂದ ಹರಿಭಾವು ಅವರ ಸಾಹಿತ್ಯ ಸೇವೆಯೇ ಅವರ ಸಮಾಜಸೇವೆ ಎನ್ನಬಹುದು. ಲೋಕರಂಜನೆ ಲೋಕ ಶಿಕ್ಷಣ ಎರಡರ ಸಮತೂಕವನ್ನು ಅವರು ತಮ್ಮ ಬರವಣಿಗೆಯಲ್ಲಿ ಸಾಧಿಸಿದ್ದಾರೆ. ಎಂದರೆ ಓದಿದವರಿಗೆ ಸಂತೋಷವೂ ಆಗುತ್ತದೆ, ಅವರು ಸಮಾಜದ ಜೀವನದಲ್ಲಿ ಯಾವುದು ಸರಿ, ಯಾವುದ ತಪ್ಪು ಎಂದು ಯೋಚಿಸುವಂತೆಯೂ ಆಗುತ್ತದೆ. ಸಮಾಜದಲ್ಲಿಯ ದೌರ್ಬಲ್ಯ, ದೈನ್ಯ, ದುರ್ಗುಣಗಳು ಇಲ್ಲದಾಗಿ ಜನರ ಜೀವನ ಪ್ರಗತಿ ಪರವಾಗಿ ಮುಂದುವರಿಯಬೇಕೆಂಬ ದೃಷ್ಟಿಯಿಂದ ಅವರು ಸಾಮಾಜಿಕ ಕಾದಂಬರಿಗಳನ್ನು ಬರೆದರು. ಹಾಗೆಯೆ ಜನರಲ್ಲಿ ದೇಶಾಭಿಮಾನವನ್ನು ಜಾಗೃತವಾಗಿಸಬೇಕೆಂಬ ದೃಷ್ಟಿಯಿಂದ ಚರಿತ್ರೆಯಿಂದ ಚಿತ್ತಾಕರ್ಷಕ ಸನ್ನಿವೇಶಗಳನ್ನು ಎತ್ತಿಕೊಂಡು ಐತಿಹಾಸಿಕ ಕಾದಂಬರಿಗಳನ್ನು ಬರೆದರು. ಹೀಗೆ ಲೇಖಕರಾಗಿ ಅವರು ಸಮಾಜದಲ್ಲಿನ ಒಪ್ಪು ತಪ್ಪುಗಳನ್ನು ಯೋಚಿಸುತ್ತಿದ್ದರು. ಆದರೆ ಬರೀ ಬರವಣಿಗೆಯಿಂದ ತೃಪ್ತರಾಗದೆ ಹರಿಭಾವು ಅವರು ಪ್ರತ್ಯಕ್ಷ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿರುತ್ತಿದ್ದರು.

ಸ್ತ್ರೀಯರ ವಿದ್ಯಾಭ್ಯಾಸದ ವಿಷಯದಲ್ಲಿ ಅವರಿಗೆ ಮೊದಲಿನಿಂದಲೂ ತೀವ್ರವಾದ ಆಸಕ್ತಿ ಇದ್ದಿತು. ಅದನ್ನು ಕುರಿತು ಪ್ರಚಾರ ನಡೆಸುತ್ತಿದ್ದರಲ್ಲದೆ ಪುಣೆಯ ಹೆಸರಾದ ಸ್ತ್ರೀ ಶಿಕ್ಷಣ ಸಂಸ್ಥೆಯಾದ ‘‘ಹುಜೂರ್ ಪಾಗಾ’’ ದ ಆಡಳಿತ ಮಂಡಳಿಯ ಸದಸ್ಯರಾಗಿ ಕೆಲಸ ಮಾಡುತ್ತಿದ್ದರು. ವಿಷ್ಣುಶಾಸ್ತ್ರಿ ಚಿಪಳೂಣಕರ್ ಅವರಿಗೆ ಯೋಗ್ಯ ಸ್ಮಾರಕವೆಂದು ನೂತನ ಮರಾಠೀ ವಿದ್ಯಾಲಯದ ಸ್ಥಾಪನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಅದು ಮುಂದೆ ನ್ಯೂ ಪೂನಾ ಕಾಲೇಜ್ ಆಗಿ ಬೆಳೆಯುವಂತೆ ಶ್ರಮಿಸಿದರು. ನ್ಯಾಯಮೂರ್ತಿ ರಾನಡೆಯವರ ಅನುಯಾಯಿಗಳಾಗಿದ್ದ ಬುದ್ಧಿಜೀವಿಗಳ ಸಂಘವಾಗಿದ್ದ ‘‘ಮಿತ್ರಮಂಡಲಿ’’ಯ ಸಾಮಾಜಿಕ ವಿಚಾರಗಳ ಚರ್ಚೆಯಲ್ಲಿ ಹರಿಭಾವು ಪಾತ್ರ ವಹಿಸುತ್ತಿದ್ದರು. ಮುಂದೆ ಅದೇ ಸಂಸ್ಥೆ ‘‘ಡೆಕ್ಕನ್ ಸಭಾ’’ಎಂದು ಪರಿವರ್ತನೆಯಾದಾಗ ೧೮೯೬ರಲ್ಲಿಯ ಬರಗಾಲದ ವಿಷಯದಲ್ಲಿ ಸಂಸ್ಥೆಯ ಕಾರ್ಯದರ್ಶಿಯೆಂದು ಸಮಗ್ರ ವರದಿಯನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದರು. ಮರುವರ್ಷ ತಲೆದೋರಿದ ಪ್ಲೇಗ್ ಬೇನೆ ಹರಡಿಕೊಂಡಾಗ ಜನಗಳಿಗೆ ಅಗತ್ಯವಿದ್ದ ಸೌಲಭ್ಯಗಳನ್ನು ಒದಗಿಸುವುದರಲ್ಲಿ ಮುಂದಾಗಿ ದುಡಿದರು. ಸುಮಾರು ಹತ್ತೊಂಬತ್ತು ವರ್ಷ ನಗರಸಭೆಯ ಸರಕಾರನಿಯುಕ್ತ ಸದಸ್ಯರಾಗಿ, ಅದರಲ್ಲಿಯೆ ಮೂರು ವರ್ಷ ಅಧ್ಯಕ್ಷರಾಗಿ, ಹದಿಮೂರು ವರ್ಷ ಶಾಲಾಸಮಿತಿಯ ಸದಸ್ಯರಾಗಿ ನಗರ ಜೀವನದಲ್ಲಿ ಅನೇಕ ಸುಧಾರಣೆಗಳಿಗೆ ಕಾರಣರಾದರು.

ಹರಿಭಾವು ಅವರು ಪದವೀಧರರಾಗಿರಲಿಲ್ಲ; ಆದರೆ ಅವರ ವಿದ್ವತ್ತನ್ನು ಗಮನಿಸಿ ಮುಂಬಯಿ ವಿಶ್ವವಿದ್ಯಾಲಯ ಅವರನ್ನು ೧೯೦೫ ರಿಂದ ಹನ್ನೆರಡು ವರ್ಷಗಳ ಕಾಲ ಎಂ.ಎ. ಮರಾಠೀ ಪರೀಕ್ಷಕರನ್ನಾಗಿ ಹಾಗೂ ಕೆಲವು ಕಾಲ ಸೆನೆಟ್ ಸಭೆಯ ಸದಸ್ಯರನ್ನಾಗಿ ನಿಯಮಿಸಿತ್ತು. ನಾಡಿನ ಹಿರಿಯ ವಿದ್ವಾಂಸರಿಗೆ ಮಾತ್ರ ಮೀಸಲಾದ ‘‘ವಿಲ್ಸನ್ ಫೈಲಾಲಾಜಿಕಲ್ ವ್ಯಾಖ್ಯಾನ’’ ಗಳನ್ನು ನೀಡುವಂತೆ ೧೯೧೫ ರಲ್ಲಿ ಆಹ್ವಾನಿಸಿತ್ತು. ತಮ್ಮಷ್ಟಕ್ಕೆ ಕುಳಿತುಕೊಂಡು ಬರೆಯುವ ಲೇಖಕರಾಗಿ ಉಳಿಯದೆ ಹರಿಭಾವು ಅವರು ಜೀವನದ ವಿವಿಧ ಕ್ಷೇತ್ರಗಳಲ್ಲಿ ಪ್ರತ್ಯಕ್ಷವಾಗಿ ಭಾಗವಹಿಸಿ ತಮ್ಮಿಂದಾದ ಸಮಾಜಸೇವೆಯನ್ನು ಸಲ್ಲಿಸುತ್ತಿದ್ದರು.

ಮರಾಠೀ ಸಾಹಿತ್ಯದ ಚರಿತ್ರೆಯಲ್ಲಿ ಹರಿಭಾವು ಒಂದು ಹೊಸಯುಗವನ್ನೇ ಪ್ರಾರಂಭಿಸಿದರೆನ್ನಲಾಗಿದೆ. ಅವರಿಗೆ ಹಿಂದಿನ ಗದ್ಯ ಸಾಹಿತ್ಯದಲ್ಲಿ ಅದ್ಭುತಗಳಿಂದ ತುಂಬಿದ ಕಥೆಗಳೇ ಹೆಚ್ಚು. ಹರಿಭಾವು ಅವರಾದರೂ ತಮ್ಮ ಕಥಾನಕಗಳಲ್ಲಿ ಅದ್ಭುತವನ್ನು ಬಳಸುತ್ತಾರೆ. ಆದರೆ ಅದು ವಾಸ್ತವಕ್ಕೆ ಒಂದು ಬಗೆಯ ಹಿನ್ನೆಲೆಯಾಗಿರುತ್ತದೆ. ಅವರ ಕಾದಂಬರಿಗಳಲ್ಲಿ ಹಲವು ಪಾತ್ರಗಳು ದೊಡ್ಡ ಆದರ್ಶಗಳನ್ನು ಇಟ್ಟುಕೊಂಡವರು. ಅವರು ಕಷ್ಟಗಳನ್ನು ಎದುರಿಸ ಬೇಕಾಗುತ್ತದೆ. ಅವರ ಕಥಾಸಾಹಿತ್ಯದ ಇನ್ನೊಂದು ಮುಖ್ಯ ಲಕ್ಷಣವೆಂದರೆ ತಾವು ಚಿತ್ರಿಸುವ ಕಾಲಮಾನದ ಸ್ಥಿತಿಗತಿಗಳೊಡನೆ ಒಂದಾಗಿ ಅಂದಂದಿನ ಸಾಮಾಜಿಕ ಜೀವನದ ಕೇಂದ್ರವನ್ನೇ ಬೆರಳಿಟ್ಟು ಗುರುತಿಸುತ್ತಾರೆ ಎನ್ನುವುದು. ಆಯಾ ಕಾಲದ ಜೀವನದ ಶಕ್ತಿಯ ಮೂಲವನ್ನೇ ಅವರು ಆರಿಸಿಕೊಂಡು ಹೋಗುವುದರಿಂದ ಚಿತ್ರಣ ಓದುಗರಿಗೆ ಮನದಟ್ಟಾಗುತ್ತದೆ. ಸಾಹಿತ್ಯ ಮನುಷ್ಯನ ಮನಸ್ಸನ್ನು ಬೆಳೆಸಬೇಕು, ಆತನನ್ನು ಮೇಲೆಕ್ಕೆತ್ತಬೇಕು, ಹಿರಿಯದರತ್ತ ಮನುಷ್ಯ ಒಲಿಯುವಂತೆ ಮಾಡಬೇಕು ಎಂಬ ನಂಬಿಕೆ ಅವರದಾಗಿತ್ತು. ಅವರು ವಾಸ್ತವಾಂಶಗಳನ್ನು ಸಮರ್ಥವಾಗಿ ಚಿತ್ರಿಸುತ್ತಾರಲ್ಲದೆ ಪಾತ್ರಗಳ ಚಿತ್ರಣದಲ್ಲಿ ಗಂಭೀರದೊಡನೆ ಹಾಸ್ಯ ಮತ್ತು ಕರುಣಗಳೂ ಸೇರಿಕೊಳ್ಳುತ್ತವೆ. ಅವರ ನಾಯಕರು ಎಳೆತನದಿಂದ ಪ್ರತಿಕೂಲ ಪರಿಸ್ಥಿತಿಯೊಡನೆ ಹೋರಾಡಿ ಆತ್ಮವಿಶ್ವಾಸವನ್ನು ಸಾಧಿಸುತ್ತಾರೆ. ಅವರ ಕಾದಂಬರಿಗಳ ಮೇಲೆ ಇಂಗ್ಲಿಷ್ ಕಾದಂಬರಿಕಾರರ ಪ್ರಭಾವ ಆಗಿದೆ ಎಂದು ಕೆಲವರು ಹೇಳುತ್ತಾರೆ. ಆಪಟೆಯವರ ಕಾದಂಬರಿಗಳಿಗೂ ಇಂಗ್ಲಿಷ್ ಲೇಖಕರ ಕಾದಂಬರಿಗಳಿಗೂ ಕೆಲವು ಸಾಮ್ಯಗಳಿವೆ ನಿಜ, ಆದರೆ ಭಾರತೀಯತ್ವದ ಅಭಿಮಾನ ಅವರಿಗೆ ಎಲ್ಲಕ್ಕೂ ಮೀರಿದ ಪ್ರೇರಕ ಶಕ್ತಿಯಾಗಿತ್ತು. ಸಮಾಜದಲ್ಲಿನ ತಪ್ಪುಗಳನ್ನು, ಅನ್ಯಾಯಗಳನ್ನು ತೊಡೆದು ಹಾಕಿ ಸಮಾಜವನ್ನು ಉತ್ತಮ ಗೊಳಿಸುವ ಹಂಬಲ ಅವರ ಸಾಮಾಜಿಕ ಕಾದಂಬರಿಗಳನ್ನು ಬರೆಸಿತು.

ಕಾದಂಬರಿಗಳು

ಹರಿಭಾವು ಹೈಸ್ಕೂಲಿನ ಐದನೆಯ ತರಗತಿಯಲ್ಲಿರು ವಾಗಲೆ ಒಂದು ಕಥೆಯನ್ನು ತರಗತಿ ನಡೆಯುತ್ತಿರುವಾಗಲೆ ಬರೆದು ಮಧ್ಯಾಂತರದ ಅವಧಿಯಲ್ಲಿ ಸಹಪಾಠಿಗಳಿಗೆ ಓದಿ ತೋರಿಸಿದ್ದರಂತೆ. ವಿದ್ಯಾರ್ಥಿದೆಸೆಯಲ್ಲಿಯೇ ಷೇಕ್ಸ್‌ಪಿಯರ್ ನಾಟಕದ ಒಂದು ಅನುವಾದವನ್ನು ಕುರಿತು ಹರಿಭಾವು ಅವರು ಎಪ್ಪತ್ತೆರಡು ಪುಟಗಳ ಒಂದು ಟೀಕಾತ್ಮಕ ಪ್ರಬಂಧವನ್ನು ಬರೆದಿದ್ದರು. ಅವರ ಮೊದಲ ಕಾದಂಬರಿಯಾದ ‘ಮಧಲೀಸ್ಥಿತಿ’ ಯನ್ನು  ಬರೆದಾಗ ಅವರಿಗೆ ಇಪ್ಪತೊಂದು ವರ್ಷ ಎನ್ನುವುದನ್ನು ನೆನೆದಾಗ ಸಾಹಿತ್ಯದ ಕಡೆಗಿನ ಒಲವು ಎಳೆತನದಲ್ಲಿಯೇ ಕಾಣಿಸಿಕೊಂಡಿತ್ತೆನ್ನುವುದು ಗೊತ್ತಾಗುತ್ತದೆ.

ಹರಿಭಾವು ಮುಖ್ಯವಾಗಿ ಮರಾಠೀ ಕಾದಂಬರಿಕಾರರ ಕುಲಗುರುಗಳೆಂದು ಪ್ರಸಿದ್ದರಾಗಿದ್ದರೂ ಸಾಹಿತ್ಯದ ಇತರ ಪ್ರಕಾರಗಳಲ್ಲಿಯೂ ಅವರು ಸಿದ್ದಹಸ್ತರು. ಕಥೆ, ಪ್ರಬಂಧ, ಪತ್ರಲೇಖನ, ಸಾಹಿತ್ಯಚರ್ಚೆ ಮುಂತಾಗಿ ಹಲವಾರು ಬಗೆಯ ಬರಹಗಳನ್ನು ಅವರ ಸಾಹಿತ್ಯ ಜೀವನ ಒಳಗೊಂಡಿದೆ.

ಹರಿಭಾವು ಬರೆದ ಸಾಮಾಜಿಕ ಕಾದಂಬರಿಗಳು ಹತ್ತು. ಅದರಲ್ಲಿ ಮೂರು ಅಪೂರ್ಣವಾಗಿ ಉಳಿದಿವೆ.

ಈ ಕಾದಂಬರಿಗಳನ್ನು ಕುರಿತು ಅವರೇ ಒಂದು ಕಡೆಯಲ್ಲಿ ‘ಸದ್ಯದ ಸಾಮಾಜಿಕ ಸ್ಥಿತಿಯ್ನು ಚಿತ್ರಿಸುವುದು ಇಲ್ಲಿಯ ಉದ್ದೇಶ. ಇದು ಸಮಾಜದ ಚರಿತ್ರೆ’ ಎಂದಿದ್ದಾರೆ. ೧೮೮೫ ರಿಂದ ೧೯೧೫ ರವರೆಗೆ ಮೂವತ್ತು ವರ್ಷಗಳಲ್ಲಿ ಮಹಾರಾಷ್ಟ್ರದ ಜನಜೀವನದಲ್ಲಿ ಆದ ಬದಲಾವಣೆಗಳನ್ನು ಈ ಕಾದಂಬರಿಗಳು ಚಿತ್ರಿಸುತ್ತವೆ. ಪಾಶ್ಚಾತ್ಯ ವಿದ್ಯಾಭ್ಯಾಸ ದಿಂದ ಆ ಸಮಾಜದ ಪರಿಚಯ ನಮ್ಮವರಿಗಾಯಿತು. ಮೊದಮೊದಲು ಆ ಸಮಾಜವನ್ನು ತುಂಬಾ ಮೆಚ್ಚಿ, ಅದರಲ್ಲಿ ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಎಂದು ಯೋಚಿಸದೆ ಕುರುಡಾಗಿ ಅದನ್ನು ಅನುಕರಿಸಿದ್ದಾಯಿತು. ಅನಂತರ ವಿವೇಚನೆಯಿಂದ ಯಾವುದು ನಮಗೆ ಅಗತ್ಯ ಯಾವುದು ಬೇಡ ಎಂದು ಯೋಚಿಸಿ ಅಗತ್ಯವಾದದ್ದನ್ನು ಅನುಸರಿಸುವ ಪ್ರಯತ್ನವಾಯಿತು. ಹಿಂದಿನ ಆಚಾರ ವಿಚಾರಗಳಲ್ಲಿ ಶ್ರದ್ಧೆ, ಹೊಸ ಆಚಾರ ವಿಚಾರಗಳಲ್ಲಿ ಉತ್ಸಾಹ ಇವುಗಳು ಒಂದಕ್ಕೊಂದು ವಿರುದ್ಧವಾದುದರಿಂದ ಘರ್ಷಣೆಯಾಯಿತು. ಇವೆಲ್ಲವನ್ನು ಈ ಕಾದಂಬರಿಗಳು ಚಿತ್ರಿಸುತ್ತವೆ.

ಮೀ

ಅವರ ಒಂದು ಕಾದಂಬರಿಯ ಕಥೆಯನ್ನು ಪರಿಚಯ ಮಾಡಿಕೊಂಡರೆ ಅವರ ಕಾದಂಬರಿಗಳ ಹಿಂದಿನ ವಿಚಾರರೀತಿ ಪರಿಚಯವಾಗುತ್ತದೆ. ಅವರ ‘ಮೀ’ ಎಂಬ ಕಾದಂಬರಿ ತುಂಬಾ ಪ್ರಸಿದ್ಧವಾದದ್ದು. ಮರಾಠಿಯಲ್ಲಿ ‘ಮೀ’ ಎಂದರೆ ‘ನಾನು’ ಎಂದು ಅರ್ಥ. ಈ ಕಾದಂಬರಿಯಲ್ಲಿ ಭಾವಾನಂದ ಅಥವಾ ಭಾವೂ ಎಂಬ ಪಾತ್ರ ತನ್ನ ಬದುಕಿನ ಕಥೆಯನ್ನು ತಾನೇ ಹೇಳುತ್ತದೆ. ಅವನ ತಂದೆ ತೀರಿಕೊಂಡಿದ್ದಾನೆ. ಅವನ ತಂಗಿಯನ್ನು ಎಲ್ಲರೂ ‘ತಾಯಿ’ ಎಂದು ಕರೆಯುತ್ತಾರೆ. ಭಾವೂನ ತಂದೆ ಹೋದಮೇಲೆ ಭಾವೂನ ಸೋದರಮಾವ ಶಿವರಾಮ ಪಂತನು ಅವರೆಲ್ಲರನ್ನೂ ನೋಡಿಕೊಳ್ಳಲು ಒಪ್ಪಿಕೊಳ್ಳುತ್ತಾನೆ. ಅವರ ಮನೆಯ ಹತ್ತಿರವೇ ತಾನೂ ಮನೆ ಮಾಡುತ್ತಾನೆ. ಅವನು ಒಳ್ಳೆಯವನು. ಓದು ಬರಹಗಳಲ್ಲಿ ಅವನಿಗೆ ತುಂಬಾ ಆಸಕ್ತಿ. ಇದರಿಂದ ಭಾವೂನ ವಿದ್ಯಾಭ್ಯಾಸ ಒಂದು ಕ್ರಮದಲ್ಲಿ ನಡೆಯುವ ಹಾಗಾಗುತ್ತದೆ. ಶಿವರಾಮ ಪಂತನಿಗೆ ಸುಂದರಿ ಎಂಬ ಒಬ್ಬಳೇ ಮಗಳು. ತಾಯಿ ಮತ್ತು ಸುಂದರಿ ಆತ್ಮೀಯ ಸ್ನೇಹಿತರಾಗುತ್ತಾರೆ. ಭಾವೂ ಸುಂದರಿಯನ್ನು ಪ್ರೀತಿಸುತ್ತಾನೆ. ಭಾವೂನ ಅಮ್ಮನ ಹಟದಿಂದ ತಾಯಿ ಒಬ್ಬ ಮುದುಕನನ್ನು ಮದುವೆಯಾಗುತ್ತಾಳೆ. ಅವನೋ ತೀರ ಕೆಟ್ಟ ಮನುಷ್ಯ. ಮದುವೆಯಾದ ನಂತರ ದಿನಗಳು ಕಳೆದ ಹಾಗೆ ಈ ವಿಷಯ ಸ್ಪಷ್ಟವಾಗುತ್ತದೆ. ತಾಯಿ ಅವನ ಜೊತೆಗೆ ಇರಲು ಸಾಧ್ಯವಿಲ್ಲದೆ ತವರುಮನೆಗೆ ಹಿಂದಿರುಗುತ್ತಾಳೆ. ಅವಳ ಅಮ್ಮನಿಗೆ ಇದೇ ಕೊರಗಾಗುತ್ತದೆ-ತನ್ನಿಂದ ಮಗಳ ಬದುಕೇ ಹಾಳಾಯಿತು ಎಂದು, ಅದೇ ಕೊರಗಿನಲ್ಲಿ ಅವಳು ಸಾಯುತ್ತಾಳೆ. ಸುಂದರಿಯ ಸ್ನೇಹದಿಂದ ತಾಯಿಯೂ ಓದುಬರಹ ಕಲಿಯಲು ಪ್ರಾರಂಭಿಸುತ್ತಾಳೆ. ಕ್ರಮೇಣ ವಿದ್ಯಾವತಿ ಯಾಗುತ್ತಾಳೆ. ಅವಳ ಮುದುಕ ಗಂಡ ಸತ್ತುಹೋಗುತ್ತಾನೆ. ಭಾವೂ ಎಲ್.ಎಲ್.ಬಿ. ಪರೀಕ್ಷೆಯನ್ನು ಮುಗಿಸಿ ವಕೀಲನಾಗುತ್ತಾನೆ. ಆದರೆ ಅವನಿಗೆ ಆ ವೃತ್ತಿಯಲ್ಲಿ ಮನಸ್ಸು ನಿಲ್ಲುವುದಿಲ್ಲ. ಹೆಂಗಸರ ವಿದ್ಯಾಭ್ಯಾಸವನ್ನು ಬೆಳಸುವುದಕ್ಕಾಗಿ ಮತ್ತು ದೇಶದ ಒಳಿತಿಗಾಗಿ ದುಡಿಯಬೇಕು ಎಂದು ಅವನ ಆಸೆ. ಇದಕ್ಕಾಗಿ ಒಂದು ಆಶ್ರಮವನ್ನು ಸ್ಥಾಪಿಸಲು ನಿಶ್ಚಯಿಸುತ್ತಾನೆ. ತಾನು ಸುಂದರಿಯನ್ನು ಮದುವೆಯಾಗಿ ಸುಖವಾಗಿರಬಹುದು, ಆದರೆ ತನ್ನ ಆದರ್ಶದಂತೆ ಬದುಕುವುದಕ್ಕಾಗಿ ತಾನು ಆ ಸುಖವನ್ನು ಬಿಡಬೇಕು ಎಂದು ತೀರ್ಮಾನಿಸುತ್ತಾನೆ. ಸಂನ್ಯಾಸಿಯಾಗುತ್ತಾನೆ. ಜನತೆಯ ಒಳಿತಿಗಾಗಿ ದುಡಿಯುತ್ತಾನೆ. ತನ್ನನ್ನು ತೇಯ್ದುಕೊಳ್ಳುತ್ತಾನೆ. ವಿಶ್ರಾಂತಿಯೇ ಇಲ್ಲದೆ ದುಡಿದು ದುಡಿದು ಇನ್ನೂ ಚಿಕ್ಕವಯಸ್ಸಿನಲ್ಲೆ ತೀರಿಕೊಳ್ಳುತ್ತಾನೆ. ಹೀಗೆ, ಒಂದು ದೊಡ್ಡ ಆದರ್ಶಕ್ಕಾಗಿ ಬದುಕಬೇಕೆಂಬ ವಿಚಾರದೃಷ್ಟಿ ರೂಪಿತವಾಗುತ್ತದೆ. ಕಾದಂಬರಿಯಲ್ಲಿ. ಭಾವೂನ ಧ್ಯೇಯನಿಷ್ಠೆ, ಸ್ತ್ರೀಯರ ಉನ್ನತಿಗಾಗಿ ಅವನು ಪಟ್ಟ ಶ್ರಮ ವಿವರ ವಿವರವಾಗಿ ಮೂಡಿ, ಅವನ ಪಾತ್ರ ಸೊಗಸಾಗಿ ನಿರೂಪಿತವಾಗುತ್ತದೆ

ಐತಿಹಾಸಿಕ ಕಾದಂಬರಿಗಳು

ಸಮಾಜದ ವಾಸ್ತವ ದರ್ಶನ ಅವರ ಸಾಮಾಜಿಕ ಕಾದಂಬರಿಗಳ ಉದ್ದೇಶವಾಗಿದ್ದರೆ ದೇಶಾಭಿಮಾನದ ಭವ್ಯ ಆದರ್ಶವನ್ನು ಜನರ ಮನಸ್ಸಿನಲ್ಲಿ ಬೆಳಗಿಸುವುದು ಅವರು ಬರೆದ ಐತಿಹಾಸಿಕ ಕಾದಂಬರಿಗಳ ಉದ್ದೇಶವಾಗಿತ್ತು. ತಮಗೆ ದೊರೆತ ಚಾರಿತ್ರಿಕ ಸಂಗತಿಗಳನ್ನು, ಐತಿಹ್ಯಗಳನ್ನು ಬಳಸಿ ಉಜ್ವಲವಾದ ಕಥಾನಕಗಳನ್ನು ಕಟ್ಟಿದರು. ಕಥೆಯಯಲ್ಲಿಯ ಚಾರಿತ್ರಿಕ ಅಂಶಗಳಿಗಿಂತ ಒಟ್ಟು ಕಥೆಯ ಉದ್ದೇಶ ಅವರಿಗೆ ಮುಖ್ಯವಾಗಿತ್ತು. ಐತಿಹಾಸಿಕ ಕಾದಂಬರಿ ಬರಿಯ ಚರಿತ್ರೆಯಲ್ಲ. ಚರಿತ್ರೆಯ ಆಧಾರದ ಮೇಲೆ ಬರೆದ, ಮನಸ್ಸಿಗೆ ಹಿಡಿಸುವ ಕಥಾನಕ. ಇದರಲ್ಲಿ ಕೆಲವು ವಾಸ್ತವಿಕ ಅಂಶಗಳು, ಹಲವು ಕಾದಂಬರಿಕಾರನು ಸೃಷ್ಟಿಸಿ ಸೇರಿಸಿದ ಅಂಶಗಳು.

ತಮ್ಮ ಚಾರಿತ್ರಿಕ ಕಾದಂಬರಿಗಳಿಗೆ ಆಪಟೆಯವರು ಭಾರತದ ಚರಿತ್ರೆಯ ಬೇರೆ ಬೇರೆ ಕಾಲಗಳ ಪ್ರಸಿದ್ಧ ಘಟನೆಗಳನ್ನು ಆರಿಸಿಕೊಂಡರು. ಚಾಣಕ್ಯನ ಸಹಕಾರದಿಂದ ಗ್ರೀಸಿನಿಂದ ಬಂದ ಅಲೆಗ್ಸಾಂಡರನನ್ನು ಸೋಲಿಸಿ ಮೌರ್ಯ ಚಕ್ರಾಧಿಪತ್ಯವನ್ನು ಸ್ಥಾಪಿಸಿದ ಚಂದ್ರಗುಪ್ತ, ಅಫಝಲ್‌ಖಾನನ್ನು ಸೋಲಿಸಿದ ಶಿವಾಜಿ, ಸ್ವಾಮಿಭಕ್ತ ಖಂಡೋಬಲ್ಲಾಳ ಮೊದಲಾದ ವೀರ ನಾಯಕರನ್ನು ಅವರು ಚಿತ್ರಿಸಿದ್ದಾರೆ. ದೇಶಭಕ್ತರಾದ ಮರಾಠಿಯರ ಮತ್ತು ರಜಪೂತರ ಹೋರಾಟದ ಕಥೆಯನ್ನು ಹೇಳಿದ್ದಾರೆ.

ಸಮಕಾಲೀನ ಸಮಾಜದಲ್ಲಿಯ ದುಃಖದೈನ್ಯಗಳನ್ನು ಚಿತ್ರಿಸಿ ಅವನ್ನು ಹೋಗಲಾಡಿಸುವಂತೆ ಪ್ರಗತಿಪರ ವಿಚಾರಗಳನ್ನು ಕಥಾನಕಗಳ ಮೂಲಕ ಪ್ರಚುರಪಡಿಸುವುದೇ ಅವರ ಸಾಮಾಜಿಕ ಕಾದಂಬರಿಗಳ ಗುರಿಯಾಗಿತ್ತು. ಆದ್ದರಿಂದ ಓದುಗರಿಗೆ ಕಥೆಯಲ್ಲಿಯ ಅನುಭವ ಮನವರಿಕೆಯಾಗಬೇಕಾದರೆ ಅದರ ನಿರೂಪಣೆ ವಾಸ್ತವವಾಗಿರಬೇಕಾದದ್ದು ಅನಿವಾರ್ಯವಾಗಿತ್ತು. ‘‘ಸಮಾಜದಲ್ಲಿ ನೋಡಲು ಸಿಕ್ಕದ ಒಂದು ಪಾತ್ರವೂ ನನ್ನ ಕಾದಂಬರಿಗಳಲ್ಲಿಲ್ಲ. ಬಹುಜನ ಸಮಾಜದ ರೀತಿ ನೀತಿಗಳಿಗೆ ಹೊಂದಿಕೊಂಡಿಲ್ಲವೆನ್ನಬಹುದಾದ ಒಂದು ಸನ್ನಿವೇಶವೂ ನಿಮಗೆ ಅಲ್ಲಿ ಸಿಕ್ಕಲಾರದು’’ ಎಂದು ಅವರೇ ಹೇಳಿದ್ದಾರೆ. ಮೊದಮೊದಲಿನ ಕಾದಂಬರಿಗಳಲ್ಲಿ ಸಮಾಜದಲ್ಲಿರುವ ಸಾಮಾನ್ಯ ವಿಷಯಗಳನ್ನಾದರೆ ಬರಬರುತ್ತ ಗಂಭೀರ ಪ್ರಶ್ನೆಗಳ್ನು ಎತ್ತಿಕೊಂಡದ್ದಾಗಿಯೂ ತಿಳಿಸಿದ್ದಾರೆ. ಅವರ ಕಾದಂಬರಿಗಳನ್ನು ಓದಿದಾಗ ಈ ಮಾತುಗಳು ಪೂರ್ತಿ ಸತ್ಯ ಎಂದು ಮನವರಿಕೆಯಾಗುತ್ತದೆ. ಅವರು ಚಿತ್ರಿಸುವ ಪಾತ್ರಗಳು ಒಂದು ವಿಶಿಷ್ಟ ಸಮಾಜಕ್ಕೆ  ಸೇರಿದ ವಿಶಿಷ್ಟ ಸನ್ನಿವೇಶದಲ್ಲಿ ಸಿಲುಕಿಕೊಂಡ ಪಾತ್ರಗಳಾದರೂ ಅವು ಜೀವಂತ ಎನ್ನಿಸುತ್ತದೆ. ಆದುದರಿಂದ ಅವುಗಳ ಸುಖದುಃಖಗಳು ಸಾರ್ವತ್ರಿಕ ವೆನಿಸುತ್ತವೆ. ಎಲ್ಲರ ಹೃದಯವನ್ನೂ ಸೆಳೆಯಬಲ್ಲವಾಗುತ್ತವೆ. ಬಗೆಬಗೆಯ ಮನುಷ್ಯರ ಸ್ವಭಾವಗಳಿಗೆ ಪ್ರತಿನಿಧಿಗಳಾಗುತ್ತವೆ.

ಸಾಮಾಜಿಕವೇ ಆಗಲಿ, ಐತಿಹಾಸಿಕವೇ ಆಗಲಿ, ಅವರ ಕಾದಂಬರಿ ಅಗತ್ಯವಿದ್ದ ವಾತಾವರಣವನ್ನು ಯಶಸ್ವಿಯಾಗಿ ನಿರ್ಮಿಸಿಕೊಳ್ಳುತ್ತದೆ. ಜೀವಂತ ಪಾತ್ರಗಳ ಮೂಲಕ ಜೀವನವನ್ನು ಕಾಣುವ ಒಂದು ದೃಷ್ಟಿಯನ್ನು ಒದಗಿಸುತ್ತದೆ.

ಕಾದಂಬರಿಯ ಚರಿತ್ರೆಯಲ್ಲಿ ಹೊಸಯುಗ

ಆಪಟೆಯವರು ಕಾದಂಬರಿಗಳನ್ನು ಬರೆಯುವ ಮೊದಲು ಕಾದಂಬರಿ ಎಂದರೆ ಜನರು ಹೊತ್ತು ಕಳೆಯಲು ಒಂದು ಸಾಧನ ಎಂದೇ ಬಹು ಜನರ ಅಭಿಪ್ರಾಯವಾಗಿತ್ತು. ಆದರೆ ಆಪಟೆಯವರು ಕಾದಂಬರಿಗೆ ಹೊಸ ಮಹತ್ವವನ್ನು ತಂದುಕೊಟ್ಟರು. ಸಾಮಾಜಿಕ ಕಾದಂಬರಿಗಳಲ್ಲಿ ಜನ ಹೊಸ ರೀತಿಯಲ್ಲಿ ಯೋಚನೆ ಮಾಡುವಂತೆ ಮಾಡಿದರು. ಹಿಂದಿನಿಂದ ಬಂದ ಸಂಪ್ರದಾಯಗಳಲ್ಲಿ, ನಂಬಿಕೆಗಳಲ್ಲಿ ಯಾವುದು ಸರಿ, ಯಾವುದು ತಪ್ಪು, ಬದಲಾಯಿಸುತ್ತಿರುವ ಕಾಲದಲ್ಲಿ ನಾವು ಯಾವ ಹೊಸ ರೀತಿಗಳನ್ನು ಅನುಸರಿಸಬೇಕು ಎಂದು ಓದುಗರು ಯೋಚಿಸುವಂತೆ ಮಾಡಿದರು. ಚಾರಿತ್ರಿಕ ಕಾದಂಬರಿಗಳಲ್ಲಿ ಜನರ ದೇಶಾಭಿಮಾನ ಜಾಗೃತವಾಗುವಂತೆ ಮಾಡಿದರು. ಹೀಗೆ ಸಮಾಜ ಸುಧಾರಣೆಗೆ ಒಂದು ಸಾಧನವನ್ನಾಗಿ ಕಾದಂಬರಿಯನ್ನು ಬಳಸಿದರು.

ಸಮಾಜ ಸುಧಾರಣೆ ಹಾಗೂ ರಾಜಕೀಯ ಜಾಗೃತಿ ಒಂದರಿಂದೊಂದು ಬೇರೆಯಾಗಿ ಅವರು ಕಾಣುತ್ತಿರಲಿಲ್ಲ. ಇವೆರಡರ ಸಮತೂಕವನ್ನು ಅವರು ತಮ್ಮ ಬರಹದಲ್ಲಿ ಸಾಧಿಸಿದರೆನ್ನುವುದು ಅವರ ವಿಶೇಷ. ಅಜ್ಞಾನ ಮತ್ತು ಕುರುಡು ನಂಬಿಕೆ ಎರಡರಿಂದಲೂ ದೇಶ ಹಿಂದುಳಿಯುತ್ತದೆ ಎಂದು ಅವರ ನಂಬಿಕೆ. ಆದುದರಿಂದ ವಿದ್ಯಾಭ್ಯಾಸವು ಅವರ ದೃಷ್ಟಿಯಲ್ಲಿ ಅತ್ಯಂತ ಮಹತ್ವದ ಹಾಗೂ ಅಗತ್ಯದ ಸಾಧನವಾಗಿತ್ತು. ತಮ್ಮ ಬರಹಗಳನ್ನು ಅದರಲ್ಲಿಯೂ ವಿಶೇಷವಾಗಿ ತಮ್ಮ ಕಥಾನಕಗಳನ್ನು ಇಂಥ ಶಿಕ್ಷಣಕ್ಕೆ ಮಾಧ್ಯಮವನ್ನಾಗಿಸಿಕೊಂಡು ಅದನ್ನು ಪ್ರಯೋಜನಕಾರಿ ಯಾಗಿ ದುಡಿಸಿದರು. ಜನರ ಮನಸ್ಸುಗಳನ್ನು ತಟ್ಟಿ ಮಾಡಬೇಕಾದ ಕೆಲಸ; ಅವಸರದಲ್ಲಿ ಆಗಲಾರದು; ಬೀಜ ಮೊಳೆತು ಮರವಾಗಿ ಬೆಳೆಯುವ ರೀತಿಯಲ್ಲಿ ಹೊಸ ಯೋಚನೆಗಳು ಬೆಳೆಯಬೇಕು ಎಂದರು. ಹಾಗೆ ಅಂಥವನ್ನು ಬೆಳೆಸಿದರು. ಕ್ರಾಂತಿ ನಡೆಯಬೇಕಾದದ್ದು ಸಮಾಜದಲ್ಲಿರು ವವರ ಮನಸ್ಸಿನಲ್ಲಿ, ಹೊರಗಡೆಯಲ್ಲಲ್ಲ ಎಂದು ಅವರು ನಂಬಿದ್ದರು. ಅಂಥದನ್ನು ಸಾಧಿಸುವುದರಲ್ಲಿ ತಮ್ಮ ಕಲೆಯನ್ನು ಸಫಲವಾಗಿ ವಿನಿಯೋಗಿಸಿದರು. ಅವರಲ್ಲಿ ಎದ್ದು ಕಾಣು ವುದು ಮುಖ್ಯವಾಗಿ ಅವರ ಜೀವನ ಶ್ರದ್ಧೆ; ಬದುಕು ಒಳ್ಳೆಯದಾಗಬೇಕೆನ್ನುವ ಅಭಿಲಾಷೆಯೇ ಅವರ ಬರವಣಿಗೆಯ ಹಿಂದಿನ ಪ್ರೇರಣೆ. ಈ ಪ್ರೇರಕ ಸಾತ್ವಿಕಯಾಗಿ ದ್ದಷ್ಟೂ, ಪ್ರಾಮಾಣಿಕವಾಗಿದ್ದಷ್ಟೂ, ಪರಿಣಾಮಕಾರಿ ಯಾಗಿತ್ತು. ಹಾಗೆಂದೇ ಆಪಟೆಯವರದು ಮರಾಠೀ ಸಾಹಿತ್ಯದಲ್ಲಿಯ ‘ಓಂಕಾರ ಧ್ವನಿ’ ಎನ್ನಲಾಗಿದೆ.