“ಬಹುರತ್ನಾನಿ ವಸುಂಧರಾ”, ರತ್ನ ವ್ಯಕ್ತಿಯೊಬ್ಬ ಬದುಕಿದ ಎನ್ನುವುದಕ್ಕಿಂತಲೂ ಹೇಗೆ ಬದುಕಿದ ಎಂಬುದು ಗಮನಿಸಿಬೇಕಾದ ಅಂಶ. ಲೋಕದಲ್ಲಿ ಬದುಕಿದ್ದರೂ ಸತ್ತಂತಿರುವವರದೊಂದು ಬಗೆಯಾದರೆ, ಸತ್ತಮೇಲೂ ಬದುಕಿರುವವರದು ಇನ್ನೊಂದು ಬಗೆ. ಇವರು ಅಮರರು. “ಕತಿ ಕವಯ: ಕತಿ ಕೃತಯ: ಕತಿ ನಷ್ಟಾ: ಕತಿ ಚಲಂತಿ. ಕತಿ ಅಮರಾಃ” ಈ ಮಾಲೆಗೆ ಸೇರುವವರು ವೇ.ಬ್ರ.ಶ್ರೀ . ಹರಿಸರ್ವೋತ್ತಮದಾಸರು ಮೂಲತಃ ಮುಂಡರಗಿಯವರು . ಅವರು ನಾಡು ನುಡಿಗೆ ಸಲ್ಲಿಸದ ಸೇವೆ ಅಪಾರ, ಅಗಾಧ, ಅವಿಸ್ಮರಣೀಯ.

ಇವರು ಗದಗ ಸಮೀಪದಲ್ಲಿರುವಕ ಮುಂಡರಗಿಯಲ್ಲಿ ೧೯೦೬ನೇ ಇಸ್ವಿಯಲ್ಲಿ, ಲಕ್ಷ್ಮೀಬಾಯಿ, ನಾರಾಯಣಾಚಾರ್ಯ ದಂಪತಿಗಳಲ್ಲಿ ಜನಿಸಿದರು. ತಾಯಿ, ‘ಸರ್ವೋತ್ತಮ’ನೆಂದು ಹೆಸರಿಟ್ಟು ತೊಟ್ಟಿಲನ್ನು ತೂಗಿದರು . ೧೯೧೩ರಲ್ಲಿ ಮುಂಡರಗಿಯಲ್ಲಿ ವಿದ್ಯಾಭ್ಯಾಸ ಪ್ರಾರಂಭ. ಧಾರಾವಾಡದ ಕರ್ನಾಟಕ ಹೈಸ್ಕೂಲ್‌ನಲ್ಲಿ ಪ್ರೌಢ ವಿದ್ಯಾಭ್ಯಾಸ. ವಿದ್ಯಾರ್ಥಿ ದೆಸೆಯಲ್ಲೇ, ವಿಡಿ. ನಂಜನಗೂಡ ಅವರ ‘ರಾಣಾಪ್ರತಾಪ’, ಜೆ.ಬಿ. ನಾಮದೇವಿ ಅವರ ‘ರಾಜನಿಷ್ಟ ಎಚ್ಚೆಮ್ಮನಾಯಕ’, ಎಸ್‌.ಎನ್‌. ಜೋಶಿ ಅವರ ‘ದುಸ್ಸಂಗ,’ ನಾಟಕಗಳಲ್ಲಿ ಪ್ರದಾನ ಮಾಡಿದರು. ನಗರೇಶ್ವರ ದೇವಾಲಯದಲ್ಲಿ ಹಾಡಿದ ಬಾಲಕನ ಕಂಠಸಿರಿಗೆ ಭಕ್ತರು, ‘ದಂಬಡಿ’, ‘ಬಿಲ್ಲಿ’, ‘ಪಾವಲಿ’ ಬೆಳ್ಳಿ ನಾಲ್ಕಾಣೆ ನಾಣ್ಯಗಳನ್ನು ಕೊಟ್ಟು ಪ್ರೋತ್ಸಾಹಿಸಿದರಿಉ. ಕೂಡಿಟ್ಟ ನಾಣ್ಯದಿಂದ ಬಾಲಕ ಸರ್ವೋತ್ತಮ ಕೊಂಡದ್ದು ಮತ್ತೇನಲ್ಲ, ಹಾರ್ಮೋನಿಯಂ ಅನ್ನು! ತಾಯಿಗೆ ಮೊದಮೊದಲು ಮಗ ಹಾರ್ಮೋನಿಯಂ ನುಡಿಸುವುದು ಇಷ್ಟವಾಗದಿದ್ದರೂ, ಕ್ರಮೇಣ ಪ್ರೋತ್ಸಾಹಿಸಿ ಆಶೀರ್ವದಿಸಿದರು. ಕಲಾ ಬೆಳವಣಿಗೆಗೆ ಅಡ್ಡಿಯುಂಟೆ? ಪ್ರತಿಭೆ ದಿನದಿನಕ್ಕೆ ಪ್ರಕಾಶಿಸಿ, ಬಾಲಕ ಸರ್ವೋತ್ತಮ ಕೀರ್ತನಕಲೆಗೆ ಪ್ರವೇಶಿಸಿದ್ದು ಆಕಸ್ಮಿಕವೇಕ ಸರಿ! ಬಾಲಕನಾಗಿ ಬಹು ಉತ್ಸಾಹದಿಂದ ಮರದಿಂದ ಜಿಗಿಯುವುದು, ಈಜುವುದು, ಮರಕೋತಿ ಆಟ, ಹುಲಿಕುರಿ ಆಟಗಳಲ್ಲಿ ಸಾಹಸ ಪ್ರದರ್ಶಿಸುತ್ತಿದ್ದರೂ ಗಾಢವಾಗಿ ಪ್ರಭಾವ ಬೀರಿ ಸರ್ವೋತ್ತಮನನ್ನು ಸೆಳೆದದ್ದು ಕೀರ್ತನ ಕಲೆಯ! ಸ್ವಂತ ಪರಿಶ್ರಮದಿಂದ, ಸತತ ಅಭ್ಯಾಸದಿಂದ ಕೀರ್ತನ ಕಲೆಯನ್ನು ರೂಢಿಸಿಕೊಂಡು, ಆ ಸೇತುಹಿಮಾಚಲದವರೆಗೆ ಸಂಚರಿಸಿ ಜನಮೆಚ್ಚುಗೆಗಳಿಸಿ ಕೀರ್ತಿವಂತರಾಗಿ “ಹರಿಸರ್ವೋತ್ತಮದಾಸರು” ಎಂದು  ಪ್ರಖ್ಯಾತಿಯಾಗಿದ್ದು ಒಂದು ಪವಾಡವೇ ಸರಿ.

ದಾಸರು, ಹಾರ್ಮೋನಿಯಂ ಜೊತೆಗೆ ಪಿಟೀಲು, ಜಲತರಂಗ್‌, ತಬಲ ಮೊದಲಾದ ವಾದ್ಯಗಳನ್ನು ನುಡಿಸುವುದರಲ್ಲೂ ಪರಿಣತರಾದರು. ಹಿಂದುಸ್ತಾನಿ ಸಂಗೀತದಲ್ಲಿ ಸಾಕಷ್ಟು ಪರಿಶ್ರಮ ದಾಸರಿಗೆ ಇತ್ತು. ಕೀರ್ತನೆಯನ್ನು ಹಿಂದುಸ್ತಾನಿ ಶೈಲಿಯಲ್ಲಿ ಹಾಡುವ ಇವರ ವೈಶಿಷ್ಟ್ಯ ಜನಮನವನ್ನು ಸೆಳೆಯುತ್ತಿತ್ತು. ಆಶುಕವಿಗಳೂ ಆಗಿದ್ದ ಸರ್ವೋತ್ತಮದಾಸರು, ಸಾಹಿತ್ಯದ ಆಳವಾದ ಅಧ್ಯಯನದೊಂದಿಗೆ ಸ್ವತಃ ಕೀರ್ತನೆಗಳನ್ನು ರಚಿಸುವ ಸಾಮರ್ಥ್ಯ ಹೊಂದಿದ್ದರು. ಶ್ರೋತೃಗಳು ಅಪೇಕ್ಷಿಸುವ ಪೌರಾಣಿಕ, ಐತಿಹಾಸಿಕ, ರಾಜಕೀಯ ವಸ್ತುಗಳನ್ನು ತಮ್ಮ ಕೀರ್ತನೆಯಲ್ಲಿ ಅಳವಡಿಸಿಕೊಂಡು ಎಲ್ಲರನ್ನೂ ಆಕರ್ಷಿಸುತ್ತಿದ್ದರು. ಗಮಕಿಯೂ ಹಾಗೂ ನಾಟಕಕರರೂ ಆಗಿದ್ದ ಸರ್ವೋತ್ತಮದಾಸರು ಬಹುಮುಖ ಪ್ರತಿಭಾವಂತ ಕಲಾವಿದರಾಗಿದ್ದರು. ನೀತಿ, ಧರ್ಮ, ತತ್ವಗಳನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ತಿಳಿಸುತ್ತಿದ್ದ ಇವರ ನಿರೂಪಣೆ,  ಪಾಶ್ಚಿಮಾತ್ಯಪಂಡಿತರ ಅಭಿಪ್ರಾಯವನ್ನು ವೈದಿಕವಾಙ್ಮಯಕ್ಕೆ ತುಲನೆಮಾಡಿ ತಿಳಿಸುತ್ತಿದ್ದ ಇವರ ರೀತಿ ಸಹೃದಯರ ಮೆಚ್ಚುಗೆ ಪಡೆಯುತ್ತಿತ್ತು.

ಸರ್ವೋತ್ತಮದಾಸರು, ಧಾರವಾಡ ಬಿಟ್ಟು ಪ್ರಥಮ ಕೀರ್ತನ ಸಂಚಾರಕ್ಕೆ ಹೊರಟದ್ದು ೧೯೨೫ರಲ್ಲಿ, ಅಂದರೆ ೧೯ ವರ್ಷದ ಯುವಕನಾಗಿದ್ದಾಗ. ಮದಲಗಟ್ಟಿ, ಕೊರ್ಲಹಳ್ಳಿ, ಬೆಳಧಡಿ, ಶಿರಹಟ್ಟಿ, ಮುಳಗುಂದ, ಹೊಸಪೇಟೆ ಮುಂತಾದ ಸ್ಥಳಗಳಲ್ಲಿ ಕೀರ್ತನೆ ಮಾಡುತ್ತ ಜನರಿಂದ ನಾರದರೆಂದೇ ಕರೆಸಿಕೊಳ್ಳುವಷ್ಟು ಜನಪ್ರಿಯರಾದರು. ನಾರದರ ಕೈಯಲ್ಲಿ ತಂಬೂರಿಯಿದ್ದರೆ, ಈ ದಾಸರ ಕೈಯಲ್ಲಿ ಹಾರ್ಮೋನಿಯಂ ಹೀಗೆ ಆರಂಭವಾದ ಕೀರ್ತನಕ ಕಲೆ ದಾಸರಲ್ಲಿ ಓತಪ್ರೋತವಾಗಿ ಬೆಳಕಿಗೆ ಬರಲಾರಂಭಿಸಿತು.

ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಪ್ರತಿಶ್ರಾವಣ ಮಾಸದಲ್ಲಿ ಸರ್ವೋತ್ತಮದಾಸರ ಕೀರ್ತನಕಾರ್ಯಕ್ರಮಕ ನಡೆಯುತ್ತಿತ್ತು. ಅವರ ಕೀರ್ತನೆಗೆ ಜನರು ಕಿಕ್ಕಿರಿದು ಸೇರುತ್ತಿದ್ದುದು; ಮಳೆ ಬಂದರೂ ಲೆಕ್ಕಿಸದೆ ಭಕ್ತಿಪರವಶರಾಗಿ ಜನ ಕೇಳುತ್ತಿದ್ದುದನ್ನು ಈಗಲೂ ಅನೇಕರು ನೆನೆಸಿಕೊಳ್ಳುತ್ತಾರೆ. ಮೂರುಸಾವಿರ ಮಠದಲ್ಲಿ ಯಾವ ಕಂಬದ ಬಳಿ ನಿಂತು ದಾಸರು ಕೀರ್ತನೆ ನಡೆಸುತ್ತಿದ್ದರೋ ಆ ಕಂಭಕ್ಕೆ “ಸರ್ವೋತ್ತಮಾಚಾರ್ಯ ಕಂಭ”ವೆಂದೇ ಜನ ಹೆಸರಿಟ್ಟಿದ್ದು,ಈಗಲೂ ಆ ರೀತಿ ಕರೆಯುವ ಪ್ರತೀತಿ ಇದೆ. ಜಂಗಮವಾಡಿ ಮಠ, ಕಾಶಿ, ಸೊಂಡೂರು, ಜಮಖಂಡಿ,ಬಡೋದಾ ಮುಂತಾದ ಸಂಸ್ಥಾನಗಳಲ್ಲಿ ಇವರು ಆಸ್ಥಾನ ವಿದ್ವಾಂಸರಾಗಿ ಸನ್ಮಾನಿತರಾದದ್ದಲ್ಲದೇ ಸುವರ್ಣ ಪದಕಗಳನ್ನು ಪಡೆದರು.

ಹರಿಸರ್ವೋತ್ತಮದಾಸರ ಕೀರ್ತಿ ಮೈಸೂರು ಪ್ರಾಂತ್ಯಕ್ಕೂಹರಡಿ, ಸುಮಾರು ೧೯೩೩-೩೪ರಲ್ಲಿ ಮೈಸೂರಿನ ಪ್ರಸಿದ್ಧ ವಕೀಲರಾಗಿದ್ದ ಎಂ.ಎಸ್‌. ರಂಗಾಚಾರ್ಯರೆಂಬುವರು ದಾಸರನ್ನು ಮೈಸೂರಿಗೆ ಬರಮಾಡಿಕೊಂಡು ಮೈಸೂರಿನಲ್ಲೇ ಅವರು ನೆಲೆಸುವಂತೆ ಮಾಡಿದರು. ಮೈಸೂರು ನಗರದಲ್ಲಿ ಹಾಗೂ ಸುತ್ತಮುತ್ತಲು ಸರ್ವೋತ್ತಮದಾಸರ ಕೀರ್ತನ ಕಾರ್ಯಕ್ರಮ ಅವಿತರವಾಗಿನಡೆದು ಇವರ ಬಗ್ಗೆ ಅಂದಿನ ಮೈಸೂರು ಅರಸರಾಗಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡಯರ್ ವರೆಗೂ ಸುದ್ದಿ ಮುಟ್ಟಿತು. ಅರಸರು ದಾಸರನ್ನು  ಅರಮನೆಗೆ ಬರಮಾಡಿಕೊಂಡು ಸನ್ಮಾನಿಸಿದ್ದಲ್ಲದೇ, ಅರಮನೆಯಲ್ಲಿ ತಿಂಗಳಾನುಗಟ್ಟಲೆ ಹರಿಕಥಾ ಕಾರ್ಯಕ್ರಮವನ್ನು ಏರ್ಪಡಿಸಿದರು. ದಾಸರ ಕೀರ್ತನ ಕಾರ್ಯಕ್ರಮಗಳಲ್ಲಿ ರಾಜರು ತಪ್ಪದೇ ಭಾಗವಹಿಸುತ್ತಿದ್ದರು. ಒಮ್ಮೆ ದಾಸರು ಝಾನ್ಸಿ ಲಕ್ಷ್ಮೀಬಾಯಿ ಬಗ್ಗೆ ಕೀರ್ತನೆಯನ್ನು ಮಾಡುತ್ತಿರುವಾಗ ದಾಸರ ವೀರರಸದ ನಿರೂಪಣೆಗೆ ಪರವಶರಾದ ಮಹಾರಾಜರು ಎದ್ದುನಿಂತು ಗೌರವ ಸೂಚಿಸಿದ್ದು ಉಲ್ಲೇಖಾರ್ಹ. ‘ಅರಮನೆ ಚರಿತ್ರೆ’ಯ ಗ್ರಂಥದಲ್ಲಿ ಸುಮಾರು ೫೦ ಪುಟದಷ್ಟು ಮಾಹಿತಿ ಹರಿಸರ್ವೋತ್ತಮದಾಸರ ಬಗ್ಗೆ ಇರುವುದು ಒಂದು ವಿಶೇಷವೇ ಸರಿ!

ಹರಿಸರ್ವೋತ್ತಮದಾಸರು, ಯಾವುದೇ ಕಥಾವಸ್ತುವನ್ನು ಆರಿಸಿಕೊಳ್ಳಲಿ, ಅದನ್ನು ನವರಸಭರಿತವಾಗಿ ವಿರಾಜಿಸಿ, ಆ ಯಾರಸ ಸನ್ನಿವೇಶಕ್ಕೆ ತಕ್ಕಂತೆ ಸಾಹಿತ್ಯ-ಸಂಗೀತ-ಕೃತಿ ರಚಿಸಿ, ಸೂಕ್ತ ರಾಗ-ತಾಳಗಳೊಂದಿಗೆ ಕೀರ್ತನೆ ಮಾಡುತ್ತಿದ್ದ ವೈಖರಿ ಶ್ರೋತೃವೃಂದವನ್ನು ತನ್ಮಯರಾಗುವಂತೆ ಮಾಡುತ್ತಿತ್ತು. ಇವರ ಪ್ರತಿಭೆಯನ್ನು ಗುರುತಿಸಿ ಅರಮನೆ-ಗುರುಮನೆಗಳಲ್ಲದೆ ಹಲವಾರು ಸಂಘ ಸಂಸ್ಥೆಗಳೂ ಗೌರವಿಸಿಕ ಬಿರುದು , ಪ್ರಶಸ್ತಿಗಳನ್ನು ಪ್ರಧಾನ ಮಾಡಿದವು. ಸತ್ಕೀರ್ತನಾಚಾರ್ಯ ಹರಿಕಥಾಧುರೀಣ, ಕೀರ್ತನ ಕಂಠೀರವ ಕೀರ್ತನಾಲಂಕಾರ, ಕೀರ್ತನಕ ಭೂಷಣ, ರಾಮಾಯಣಾಚಾರ್ಯ, ರಾಮಾಯಣಶಿರೋಮಣಿ ಮುಂತಾದ ಅನೇಕ ಬಿರುದಾಲಂಕೃತರಾಗಿದ್ದರು ಹರಿಸರ್ವೋತ್ತಮದಾಸರು.

ಉತ್ತರಾದಿ ಮಠಾಧೀಶರಾಗಿದ್ದ ಶ್ರೀಸತ್ಯಧ್ಯಾನರು ತಿರುಪತಿಯಲ್ಲಿ ನಡೆಸಿದ ಮಹಾಸಭೆಯಲ್ಲಿ ಹರಿಸರ್ವೋತ್ತಮದಾಸರು ಕೀರ್ತನೆ ಮಾಡಿದಾಗ ಮೆಚ್ಚಿಕ ಅನುಗ್ರಹಿಸಿದ ಶ್ರೀಗಳವರು “ತಂದೆ ನಾರಾಯಣಾಚಾರ್ಯರಲ್ಲಿ ಸುಪ್ತವಾಗಿದ್ದ ಸರಸ್ವತಿ ಮಗ ಸರ್ವೋತ್ತಮನಲ್ಲಿ ಪ್ರಕಟವಾದಳು” ಎಂದು ಶ್ಲಾಘಿಸಿದರಂತೆ. ಉಡುಪಿಯ ಅಷ್ಟಮಠಾಧಿಪತಿಗಳು ದಾಸರ ಪ್ರತಿಭೆಯನ್ನು ಕಂಡು ಸುವರ್ಣ ಕಡಗವನ್ನು ನೀಡಿದರು. ಪೂನದಲ್ಲಿ ದಾಸರ ಪಾಂಡಿತ್ಯಕ್ಕೆ ಮೆಚ್ಚಿ ಅವರನ್ನು ಅಂಬಾರಿ ಮೇಲೆ ಮೆರವಣಿಗೆ ಮಾಡಿ ಸನ್ಮಾನಿಸಿದ್ದು ಉಲ್ಲೇಖಾರ್ಹವಾದದ್ದು.

ಗದುಗಿನ ವೀರನಾರಾಯಣನ ದೇವಸ್ಥಾನದಲ್ಲಿ ಪ್ರತಿಒರುಷವೂ ಗೋಕುಲಾಷ್ಟಮಿಯ ದಿನದಂದು ರಾತ್ರಿ ೧೨.೦೦ ಗಂಟೆಗೆ ಹರಿಸರ್ವೋತ್ತಮದಾಸರ ಕೀರ್ತನೆಯಾದ ಮೇಲೆಯೇ ದೇವರದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸುತ್ತಿದ್ದರಂತೆ. ಅಂಬಿಕಾನಗರದಲ್ಲಿ ಶ್ರೀ ವರದಾಂಜನೇಯ ಸ್ವಮಿ ದೇವಸ್ಥಾನದಲ್ಲಿ ದಾಸರು ಒಂದು ವಾರದ ಕಾಲ ಕೀರ್ತನೆ ಮಾಡಿದಾಗ, ಧಾರವಾಡದ ಪ್ರಹ್ಲಾದ ಕೋನೇರಿ ರಾಯರು ಎಂಬುವವರು ದಾಸರ ನಾಲ್ಕಾರು ಕಥಾಪ್ರಸಂಗಗಳ ಕೀರ್ತನೆಯನ್ನು ಧ್ವನಿಸುರುಳಿ ಮಾಡಿಕೊಂಡು ತಮ್ಮ ಬಳಿ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಮುಂಬಯಿಯ ಮತ್ತು ಧಾರವಾಡ ಬಾನುಲಿ ಕೇಂದ್ರಗಳಲ್ಲಿ ದಾಸರ ಕೀರ್ತನ ಕಾರ್ಯಕ್ರಮಗಳು  ಪ್ರಸಾರವಗಿದ್ದುಂಟು.

ಸರ್ವೋತ್ತಮದಾಸರು ಕೃತಿಕಾರರೂ ಆಗಿದ್ದರು ಎಂದು ಹಿಂದೆ ತಿಳಿಸಿರುವುದು ಸರಿಯಷ್ಟೆ. ದಾಸರ ಹುಟ್ಟೂರಿನಲ್ಲಿದ್ದ ಗುಡ್ಡವೊಂದಕ್ಕೆ ಕನಕರಾಮನ ಗುಡ್ಡವೆಂದು ಹೆಸರಿತ್ತು. ಆ ಗುಡ್ಡದಲ್ಲಿ ಒಡಮೂಡಿದ್ದ ದೇವರು ನರಸಿಂಹ. ದಾಸರು ರಚಿಸಿದ ಮೊದಲ ಕೃತಿಗಳಲ್ಲಿ ಮೃಡಗಿರಿಯ ಕನಕನರಸಿಂಹವಿಠಲ ಮುಂಡರಗೀಶ ಮುಂತಾದ ಅಂಕಿತನಾಮಗಳನ್ನು ಕಾಣಬಹುದು. ನಂತರ ರಚಿಸಿದ ಕೃತಿಗಳಲ್ಲಿ ಹರಿಸರ್ವೋತ್ತಮ, ಸರ್ವೋತ್ತಮ, ಹರಿಸರ್ವೋತ್ತಮದಾಸ ಇತ್ಯಾದಿ ಅಂಕಿತಗಳು ಕಾಣ ಬರುತ್ತವೆ. ದಾಸರು ರಚಿಸಿದ ಕೃತಿಗಳ ಕೆಲವನ್ನು ಇಲ್ಲಿ ಉಲ್ಲೇಖಿಸುವುದು ಸಮಂಜಸವೆನಿಸುತ್ತದೆ.

ಮೈಸೂರು ಮಹಾರಾಜರು ನಾಲ್ವಡಿ ಕೃಷ್ಣರಾಝ ಒಡಯರ್ ರವರ ವರ್ಧಂತಿ ಸಂದರ್ಭದಲ್ಲಿ ದಾಸರು ನಡೆಸಿದ “ಶ್ರೀ ಕೃಷ್ಣ ಸುಧಾಮ” ಹರಿಕಥಾ ಪ್ರಸಂಗಕ್ಕೆ ಹಿಂದುಸ್ತಾನಿ ರಾಗದಲ್ಲಿ ರಚಿಸಿದ ಮಂಗಳಗೀತೆ ಈ ಕೆಳಗಿನಂತಿದ್ದು, ಅದರ ಪ್ರತಿಯೊಂದು ಸಾಲಿನ ಒಂದೊಂದು ಅಕ್ಷರ ಸೇರಿಸಿದಾಗ ಕೃಷ್ಣ ಮಹಾರಾಜರಿಗೆ ಶುಭಂ ಎಂದಾಗುವುದು ರಚನೆಯ ಒಂದು ವೈಶಿಷ್ಟ್ಯ.

 

ಶ್ರೀಕೃಷ್ಣಮಹರಾಜ ನಾಲ್ವಡಿ| ಜಯಜಯ ||ಪ||

ಕೃಷ್ಣ ಮಹಾತ್ಮನ ವಂಶದೊಳುದಿಸಿದ |ಶಿಷ್ಣುಸಮತೇಜಾ ||೧||

ಅಧಮಹಿಷ ಮದಮರ್ಧಿನಿ ದೇವಿಯ|ಸದಮಲ ಕೃತಪೂಜಾ ||೨||

ವರಮಹಾನವಮಿ ಗಜಮಂಡಿತ ಸುರ|ಕರವರ್ಷಿತ ಲಾಜಾ ||೩||

ಅಭಯಕಲರಾಶ್ರಿತ ಪಂಡಿತ ಪ್ರಕರಾ|ಅಭಿನವ ನೃಪಭೋಜಾ ||೪||

ಕಾವೇರಿ ಜಲ ನಿತ ಪ್ರಕಾಶದಿ ಗರ್ವಹರಣ ರವಿಜಾ ||೫||

ನಹುಷ ಧರ್ಮ ಶಿರಿಯದು ನೃಸರಂತೆ| ಮಹೀಸುರ ಸುವಿರಾಝಾ ||೬||

ನಾರದ ಗಾನಕೆ ಮಿಗೆ ಪೋಲುವ ಗೀ|ತಾರಾಸದ ಮೃತ ಭುಜಾ ||೭||

ನತ ನೃಪ ಶಿರಮಣಿ ಶುಭವನದೊಳು ವಿಕ|ಸಿತ ಪಾದ ಸರೋಜಾ ||೮||

ಕರಿನಾಡಿನ ದಾರಿದ್ಯ್ರ ವಿಭಂಜನ| ಧರೆಗಿಳಿದ ಬಿಡೌಜಾ ||೯||

ಸಾಸಿರ ಭೂಜುಜದೊಳು ಸರ್ವೋತ್ತಮದಾಸರ ಸುರಭೂಜಾ ||೧೦||

 

ಹನುಮಂತ ದೇವರ ಬಗ್ಗೆ ರಚಿಸಿರುವ ೩೭೨ ಚೌಪದಿಗಳ ಕೃತಿಯಲ್ಲಿ ಕರ್ನಾಟಕದ ಅನೇಕ ಸ್ಥಳಗಳ ಉಲ್ಲೇಖವಿದ್ದು ಅದು ಒಂಧು ‘ಮಿನಿ ಅಟ್ಲಾಸ್‌’ ಆಗಿದೆ. ಇದರಲ್ಲಿ ದಾಸರು ತಮ್ಮ ಜೀವನ ಪರಿಚಯವನ್ನು ಮಾಡಿಕೊಂಡಿರುತ್ತಾರೆ. ಈ ಕೃತಿ ಹಸ್ತ ಪ್ರತಿಯಾಗಿಯೇ ಉಳಿದಿರುವುದು ಒಂದು ವಿಷಾದ.

ದಾಸರು, ಹಾಸ್ಯರಸಭರಿತ ರಚನೆಗಳಿಂದ ಜನಪದ ಸಾಹಿತ್ಯ ರಚಿಸಿ ರಸಿಕರಿಂದ ಮೆಚ್ಚುಗೆ ಗಳಿಸುತ್ತಿದ್ದರು. ವೃದ್ಧೆಯೊಬ್ಬಳು ಯಮರಾಯ ಬಂದಾಗ ತನ್ನ ಅನೇಕ ಕೆಲಸಗಳನ್ನು  ಮುಗಿಸಿ ಬರುವುದಾಗಿ ತಿಳಿಸಿ ಹಿಂತಿರುಗಿ ಹೋಗುವಂತೆ ಹೇಳುವ ಪದದ ಒಂದೆರಡು ನುಡಿ ಹೀಗಿದೆ.

 

ಕಟ್ಟಿಯ ಮನಿನಂದು ತಟ್ಟೆಯ ಬಾಗಿಲು

ಬಿಟ್ಯಾಂಗ ಬರಲೊ ಯಮರಾಯ ||ಪ||

ಹಪ್ಪಳ ಸಂಡಿಗೆ ತುಪ್ಪದಿ ಕರಿದಿಹೆ

ಉಪ್ಪಿಟ್ಟಿಗೆ ಜಓಡು ಯಮರಾಯ ||

ಉಪ್ಪಿನಕಾಯಿ ತಿನ್ನದೆ ಬಂದರೆ

ಒಪ್ಪದು ಎನ್ನ ಮನ ಯಮರಾಯ ||

ಉದ್ದಿನವಡೆ ಒಳ್ಳೆದಧ್ಯಾನ್ನ ಹುಳಿಯನ್ನ

ಮುದ್ದಿ ಪಲ್ಯಾ ಚಟ್ನಿ ಯಮರಾಯ ||

ಕದ್ದು ತಿನ್ನಬೇಕೆಂದು ಸಿದ್ಧಮಾಡಿಟ್ಟಿರುವೆ

ಬುದ್ಧಿ ಇಲ್ಲವೆ ನಿನಗೆ ಯಮರಾಯ

ಹೀಗೆ ಮುಂದುವರೆಯುತ್ತದೆ.

ಹರಿಸರ್ವೋತ್ತಮದಾಸರು ಆಂಗ್ಲಭಾಷೆಯಲ್ಲಿ ಹರಿಕಥೆ ಮಾಡುತ್ತಿದ್ದುದೂ ಉಂಟು. ಮಹಾರಾಷ್ಟ್ರದ ನಾಗಪುರದ ಬಳಿ ಹಾಗೂ ಬೆಂಗಳೂರಿನ ವಕೀಲರ ಸಂಘದ ಆಶ್ರಯದಲ್ಲಿ ಇಂಗ್ಲೀಷಿನಲ್ಲಿ ಹರಿಕಥೆ ಮಾಡಿ ಮೆಚ್ಚುಗೆ ಗಳಿಸಿದರು . ಅಲ್ಲದೆ, ಇಂಗ್ಲೀಷ್‌ನಲ್ಲೂ ಕೃತಿಗಳನ್ನು  ರಚಿಸುತ್ತಿದ್ದರು. ದಾಸರ ಇಂಗ್ಲೀಷ್‌ ರಚನೆಯ ಒಂದೆರಡು ತುಣುಕುಗಳು ಇಲ್ಲಿವೆ.

 

Raga: YamunakalyaniTala: Trital.

Oh! God Ganapathi Show Sympathy!

Your are the son of Umapathi ||

Harisarvothama Das is singing

Everywhere is your glory ringing

This is the Dwaraka City very pretty

All the other countries are dirty

Always quarrelling municipality

Hari Sarvothamadas is singing

Krishna’s glory is ever ringing

 

ಹರಿಸರ್ವೋತ್ತಮದಾಸರ ಕೃತಿಗಳಲ್ಲಿ ಶಬ್ದಾಲಂಕಾರ, ಅರ್ಥಾಲಂಕಾರಗಳನ್ನು ನೋಡಬಹುದು. ರಚನೆಯಲ್ಲಿ ವೈವಿಧ್ಯ ಕಾಣಬಹುದು. ಕೀರ್ತನೆಗೆ ಪೂರಕವಾದ ಕೃತಿಗಳನ್ನು ರಚಿಸುತ್ತಿದ್ದುದಲ್ಲದೆ, ಬೀಗರ ಹಾಡು, ಭೂಮದ ಹಾಡು, ಉರುಟಣೆ ಹಾಡು, ಉಯ್ಯಾಲೆ ಹಾಡುಗಳನ್ನೂ ಬರೆಯುತ್ತಿದ್ದರು.

ಹರಿಸರ್ವೋತ್ತಮ ದಾಸರ ಹರಿಕಥಾಪ್ರಸಂಗಗಳಲ್ಲಿ ಎಷ್ಟೋ ಅದ್ಭುತ ಘಟನೆಗಳು ನಡೆದದ್ದುಂಟು.  ಅಂಥಹ ಒಂದೆರಡು ಪ್ರಸಂಗಗಳನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಒಮ್ಮೆ ಮೈಃಸೂರಿನ ಬಾಡಿಗಾರ್ಡ್‌ ಕಾಲೋನಿಯಲ್ಲಿ ಶ್ರೀ ಕೃಷ್ಣಘಾರುಡಿ ಕಥಾಪ್ರಸಂಗ ದಾಸರಿಂಧ ನಡೆಯುತ್ತಿತ್ತು. ದಾಸರು ಪುಂಗಿಯ ನಾದವನ್ನು ಯಥಾವತ್ತಾಗಿ ಹಾರ್ಮೋನಿಯಂನಲ್ಲಿ ನುಡಿಸುತ್ತಿದ್ದಾಗ ನಾಗರಹಾವು ಪ್ರತ್ಯಕ್ಷ. ಹಾವಾಡಿಗನು ಬರುವವರೆಗೂ ದಾಸರು ಹಾರ್ಮೋನಿಯಂನಲ್ಲಿ ಪುಂಗಿನಾದವನ್ನು ಮುಂದುವರೆಸಿದರು. ಈ ದೃಶ್ಯ ಅನೇಕರ ನೆನಪಿನಲ್ಲಿ ಇನ್ನೂ ಉಳಿದಿದೆ.

ಇನ್ನೊಮ್ಮೆ, ಶ್ರೀ ರಾಮೋತ್ಸವದ ಸಂಧರ್ಭದಲ್ಲಿ ಮೈಸೂರಿನ ಶಿವರಾಂಪೇಟೆಯ ಶ್ರೀ ರಾಮಮಂದಿರದಲ್ಲಿ ಸರ್ವೋತ್ತಮ ದಾಸರು ಹರಿಕಥೆ ಮಾಡುತ್ತಿದ್ದರು. ಭಕ್ತಪ್ರಹ್ಲಾದ ಹಿರರ್ಣಯಕಶಿಪುವಿನ ಸಂಔಆದ ಮುಗಿದು ಪರಮಾವಧಿಯಲ್ಲಿ ಶ್ರೀನೃಸಿಂಹಾವತಾರವನ್ನು ದಾಸರು  ನಿರೂಪಿಸುತ್ತಿದ್ದಾಗ ಕಾಕತಾಲೀಯವೋ ಎನ್ನುವಂತೆ ದಾಸರ ವರ್ಣನೆಗನುಗುಣವಾಗಿ ಗುಡುಗು ಮಿಂಚು ಸಿಡಿಲು ಆರ್ಭಟಗೊಂಡು ಎದುರುಗಡೆ ಇದ್ದ ಎಲೆಕ್ಟ್ರಿಕ್‌ ಕಂಭವೊಂದು ಸೀಳಿದ್ದು ನೆನೆದರೆ ಮೈರೋಮಾಂಚನವಾಗುತ್ತದೆ.

ಹರಿಸರ್ವೋತ್ತಮದಾಸರು ಕೌಟುಂಬಿಕ ಜವಾಬ್ದಾರಿಯನ್ನು ಹೊತ್ತು, ತನ್ನಿಂದ ಐದು ಮಕ್ಕಳು, ತಂಗಿಯ ನಾಲ್ಕು ಮಕ್ಕಳನ್ನು ಸಾಕಿ ಸಲಹಿದ್ದಲ್ಲದೆ ಸಂಗೀತ ಸಾಹಿತ್ಯ ಜ್ಞಾನ ಸುಧೆಯನ್ನೂ ಉಣಬಡಿಸಿದರು. ಸದಾ ಹಸನ್ಮುಖಿ, ಸರಳಜೀವನ, ಶ್ರಮಜೀವಿ ಯಾರಿಗೂ ತೊಂದರೆ ಕೊಟ್ಟವರಲ್ಲ. ದಾಸರ ಧರ್ಮಪತ್ನಿ ತಿಲೋತ್ತಮಾಬಾಯಿ (ತೌರಿನ ಹೆಸರು ಪದ್ಮಾವತಿ) ಪತಿಯ ನೆರಳಿನಂತೆ ಸಹಕಾರ ನೀಡಿದ ಪರಮಸಾಧ್ವೀಮಣಿಯಾಗಿದ್ದರು. ದಾಸರ ಪುತ್ರ ಸುಶೀಲೇಂದ್ರ, ಪುತ್ರಿ ಸುನೀತಾ ತಂದೆಯ ಕಲೆ ಕೀರ್ತನೆಯನ್ನು ರೂಢಿಸಿ ಬೆಳೆಸಿಕೊಂಡಿರುವರು. ಮತ್ತೊಬ್ಬ ಪುತ್ರಿ ಪ್ರೊ.ಎಂ.ಹೆಚ್‌. ಸುಕನ್ಯ ಸಂಸ್ಕೃತ ಪ್ರಾಧ್ಯಾಪಕಳಾಗಿ ಸೇವೆಯಲ್ಲಿದ್ದು ಈಗ ನಿವೃತ್ತರಾಗಿದ್ದಾರೆ. ದಾಸರ ಶಿಷ್ಯರಲ್ಲಿ ಒಬ್ಬರಾದ ರುದ್ರಮುನಿಶಾಸ್ತ್ರಿ ಎಂಬುವರು ಗುರುಗಳ ಮಾರ್ಗದರ್ಶನದಲ್ಲಿ “ಹಿಂದೂ ವೀರಶೈವಧರ್ಮ” ಎಂಬ ಗ್ರಂಥ ರಚನೆ ಮಾಡಿ, ಅದನ್ನು ಹಾನಗಲ್ಲಿನ ನೀಲಕಂಠ ಮಠದವರು ಮುದ್ರಿಸಿದ್ದಾರೆ.

ಹೀಗೆ ಸಾಹಿತ್ಯ, ಸಂಗೀತ, ಕೀರ್ತನೆ , ಗಮಕ, ನಾಟಕ ಮೊದಲಾದ ನಾನಾ ಕಲೆಗಳಲ್ಲಿ ಪರಿಣತರಾಗಿದ್ದ ಹರಿಸರ್ವೋತ್ತಮ ದಾಸರು ಏಳೆಂಟು ದಶಕಗಳ ತುಂಬು ಸಾರ್ಥಕವಾದ ತುಂಬುಜೀವನ ನಡೆಸಿ, ಕೀರ್ತನ ಕಲೆಯ ಶಿಖರವನ್ನೇರಿ ನಾಡಿನಾದ್ಯಂತ ಕಲಾಪ್ರಚಾರ ಮಾಡಿ ನಾಡು ನುಡಿಯ ಸೇವೆಸಲ್ಲಿಸಿ ಬೆಂಗಳೂರಿನ ಮಗಳ ಮನೆಯಲ್ಲಿ ದಿನಾಂಕ ೧೫.೧೨.೧೯೮೩ರಂದು ಮಾರ್ಗಶಿರ ಶುದ್ಧದಶಮಿ ಗೀತಾಜಯಂತಿಯ ಹಿಂದಿನ ದಿನ ಅನಾಯಾಸವಾಗಿ ಈ ದೇಹಬಿಟ್ಟು ವೈಕುಂಠ ವಾಸಿಗಳಾದರು.

ಕೀರ್ತನೆಯ  ಪರಂಪರೆಯಲ್ಲಿನ ಕಲಾವಿದರಲ್ಲಿ ಅಗ್ರ ಶ್ರೇಣಿಯಲ್ಲಿ ಬರುವವರು ಹರಿಸರ್ವೋತ್ತಮದಾಸರು.