ಶೇಕಡಾ ೨೦ರಷ್ಟು ಹರೆಯದವರು ಒಂದಲ್ಲ ಒಂದು ಬಗೆಯ ಮಾನಸಿಕ ಅನಾರೋಗ್ಯದಿಂದ ಬಳಲುತ್ತಾರೆ. ಆದರೆ ಅವರಾಗಲೀ, ಅವರ ತಂದೆ ತಾಯಿಗಳಾಗಲೀ ಮನೆಯವರಾಗಲೀ, ಮಾನಸಿಕ ಅನಾರೋಗ್ಯವನ್ನು ಗುರುತಿಸುವುದಿಲ್ಲ. ಸಂಬಂಧಪಟ್ಟ ತಜ್ಞರನ್ನು ಕಾಣುವುದಿಲ್ಲ. ದೀರ್ಘಕಾಲ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ಹರೆಯದವರಲ್ಲಿ ಕಂಡು ಬರುವ ಸಾಮಾನ್ಯ ಮಾನಸಿಕ ಅಸ್ವಸ್ಥತೆಗಳೆಂದರೆ.

ಆತಂಕ ಮನೋರೋಗಗಳು

ವೇದಿಕೆ ಭಯ: ಅನೇಕ ಹರೆಯದವರಿಗೆ ವೇದಿಕೆಗೆ ಹೋಗುವುದೆಂದರೆ ಭಯ. ಚೆನ್ನಾಗಿ ಮಾತಾಡಲು ಬಂದರೂ, ಚೆನ್ನಾಗಿ ಸುಶ್ರಾವ್ಯವಾಗಿ ಹಾಡಲು ಬಂದರೂ, ತನ್ನಲ್ಲಿರುವ ಕಲೆಯನ್ನು ಪ್ರಕಟಿಸಲು ಶಕ್ತನಾದರೂ, ಹುಡುಗ/ಹುಡುಗಿ ಆತಂಕಕ್ಕೆ ಒಳಗಾಗುತ್ತಾರೆ. ವೇದಿಕೆ ಮೇಲೆ ಹೋಗಿ ಬಾಯಿ ಒಣಗಿ, ಕೈಕಾಲು ನಡುಗಿ, ಮಾತಾಡಲಾಗದೇ ಅಥವಾ ತಮ್ಮ ಕಲಾನೈಪುಣ್ಯತೆಯನ್ನು ಪ್ರದರ್ಶಿಸಲಾಗದೇ ಅಥವಾ ಅನೇಕ ತಪ್ಪುಗಳನ್ನು ಮಾಡಿ ನೋವನ್ನು ನಿರಾಶೆಯನ್ನು ಅನುಭವಿಸುತ್ತಾರೆ. ಒಮ್ಮೆ ಈ ರೀತಿ ಆಯಿತೆಂದರೆ, ಪ್ರತಿ ಸಲ ವೇದಿಕೆಗೆ ಹೋಗುವಾಗ, ಭಯ ದ್ವಿಗುಣವಾಗುತ್ತದೆ. ವ್ಯಕ್ತಿಯ ಆತ್ಮವಿಶ್ವಾಸಕ್ಕೆ ಧಕ್ಕೆಯಾಗುತ್ತದೆ, ವೇದಿಕೆ ಭಯವನ್ನು ನಿವಾರಿಸಲು ಹೀಗೆ ಮಾಡಿ.

 • ಸರಿಯಾದ ಪೂರ್ವ ಸಿದ್ಧತೆ ಮಾಡಿ, ಏನು ಮಾತಾಡಬೇಕು, ಏನು ಹಾಡಬೇಕು ಇತ್ಯಾದಿ.
 • ನಿಮ್ಮ ಕೆಲವು ಸ್ನೇಹಿತರು/ಮನೆಯವರ ಮುಂದೆ ಮಾತನಾಡಿ/ ಹಾಡಿ, ಪ್ರಾಕ್ಟೀಸ್ ಮಾಡಿ.
 • ‘ನಾನು ಸರಿಯಾಗಿ ಸಿದ್ಧತೆ ಮಾಡಿದ್ದೇನೆ, ನನ್ನ ನಿರ್ವಹಣೆ-ಪರ್‌ಫಾರ್ಮ್‌ಮೆನ್ಸ್ ಚೆನ್ನಾಗೇ ಇರುತ್ತದೆ, ಎಂದು ಹೇಳಿಕೊಳ್ಳಿ.
 • ‘ನಾನು ಚೆನ್ನಾಗಿ ಮಾತನಾಡಲಾರೆ ಹಾಡಲಾರೆ. ತಪ್ಪುಗಳಾಗುತ್ತವೆ. ಸಭಿಕರು ನಗುತ್ತಾರೆ. ನಾನು ಅಪಹಾಸ್ಯ/ಅವಮಾನಕ್ಕೆ ಈಡಾಗುತ್ತೇನೆ ಎಂಬ ನಕಾರಾತ್ಮಕ ಆಲೋಚನೆಗಳಿಗೆ ಮನಸ್ಸಿನಲ್ಲಿ ಎಡೆ ಕೊಡಬೇಡಿ.
 • ವೇದಿಕೆಗೆ ಹೋಗುವ ಮೊದಲು, ನೀವು ಕುಳಿತಲ್ಲೇ ಪ್ರಾಣಾಯಾಮ ಮಾಡಿ-ಕಣ್ಣು ಮುಚ್ಚಿ, ಆರಾಮವಾಗಿ ಮೈ ಸಡಿಲ ಬಿಡಿ, ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳಿ ಹಾಗೇ ನಿಧಾನವಾಗಿ ಉಸಿರನ್ನು ಬಿಡಿ.
 • ವೇದಿಕೆಯ ಮೇಲೆ ಹೋದಾಗ, ಸಭಿಕರನ್ನೆಲ್ಲಾ ನೋಡಬೇಡಿ. ಕೆಲವೇ ಸಭಿಕರನ್ನು/ ನಿಮ್ಮ ಪರಿಚಿತರನ್ನು, ಆಯ್ಕೆ ಮಾಡಿಕೊಂಡು ಅವರತ್ತ ನೋಡುತ್ತಾ ಮಾತನಾಡಿ/ಹಾಡಿ.

ಹೀಗೆ ಪ್ರಾಕ್ಟೀಸ್ ಮಾಡುತ್ತಾ ಇದ್ದರೆ ಭಯ ತಗ್ಗುತ್ತದೆ. ಸ್ಪರ್ಧೆಯಾದರೆ, ಫಲಿತಾಂಶದ ಬಗ್ಗೆ ಚಿಂತೆ ಮಾಡಬೇಡಿ. ‘ಐ ವಿಲ್ ಟ್ರೈ ಬೆಸ್ಟ್, ರಿಸಲ್ಟ್ ವಿಲ್ ಬಿ ಗುಡ್ ಎನ್ನುವ ಧೋರಣೆ ಬೆಳೆಸಿಕೊಳ್ಳಿ. (ನಾನು ಉತ್ತಮವಾಗಿಯೇ ಮಾತಾಡುತ್ತೇನೆ. ಪೂರ್ಣ ಪ್ರಯತ್ನ ನನ್ನದು. ಫಲಿತಾಂಶ ಒಳ್ಳೆಯದೇ ಆಗಿರುತ್ತದೆ)

ಸಾಮಾಜಿಕ ಭಯಗಳು

ಕೆಲವು ವಿದ್ಯಾರ್ಥಿಗಳಿಗೆ, ಹರೆಯದವರಿಗೆ ಇತರರೊಡನೆ ಮಾತನಾಡಲು ವ್ಯವಹರಿಸಲು ಭಯ. ಸಭೆ ಸಮಾರಂಭಗಳಿಗೆ ಹೋಗಲು ಹೆದರಿಕೆ. ಇತರರು ನೋಡುತ್ತಿದ್ದಾರೆ. ತನ್ನನ್ನು ಗಮನಿಸುತ್ತಿದ್ದಾರೆ ಎಂದರೆ, ಅವರಿಗೆ ಊಟ ಮಾಡಲೂ ಆಗುವುದಿಲ್ಲ. ಮಾತನಾಡಲೂ ಆಗುವುದಿಲ್ಲ, ಕೈಕಾಲು ನಡುಗುತ್ತದೆ. ಎಷ್ಟು ಬೇಗ ಅಲ್ಲಿಂದ ಹೊರಹೋದರೆ ಸಾಕು ಎನಿಸಿಬಿಡುತ್ತದೆ. ಆದರೆ ಮನಸ್ಸಿನೊಳಗೆ ಜನರೊಂದಿಗೆ ಬೆರೆಯಬೇಕು. ಆಕರ್ಷಕವಾಗಿ ಮಾತನಾಡಬೇಕು. ಜನರ ಮೆಚ್ಚುಗೆ ಪಡೆಯಬೇಕು ಎಂಬ ಆಸೆ ಇದ್ದೇ ಇರುತ್ತದೆ. ಆದರೆ ಆತಂಕ ಭಯ ಅವರನ್ನು ಕಟ್ಟಿಹಾಕುತ್ತದೆ. ಹೀಗಾಗಿ, ಸಭೆ, ಸಮಾರಂಭಕ್ಕೆ ಹೋಗದೇ ತಪ್ಪಿಸಿಕೊಳ್ಳುತ್ತಾರೆ. ಹೋದರೂ ಒಂದು ಮೂಲೆಯಲ್ಲಿ ಕೂರುತ್ತಾರೆ. ಊಟಮಾಡದೇ, ವೇದಿಕೆಗೆ ಹೋಗಿ, ಸಂಬಂಧಪಟ್ಟವರಿಗೆ ಶುಭಾಶಯವನ್ನು ಹೇಳದೇ ವಾಪಸ್ಸಾಗುತ್ತಾರೆ. ಯಾರಾದರೂ ಪ್ರಶ್ನೆ ಕೇಳಿದರೆ, ತಬ್ಬಿಬ್ಬಾಗಿ ಉತ್ತರ ಗೊತ್ತಿದ್ದರೂ, ಹೇಳಲಾರರು. ತೊದಲುತ್ತಾರೆ. ಅಥವಾ ಅಸಂಬದ್ಧವಾಗಿ ಉತ್ತರಿಸಿ ನಗೆಗೀಡಾಗುತ್ತಾರೆ. ಮನೆಗೆ ಬಂಧುಮಿತ್ರರು ಬಂದರೆ ಅವರೊಂದಿಗೆ ಕುಶಲ ಸಂಭಾಷಣೆಯನ್ನು ಮಾಡಲಾಗದೇ ರೂಮು ಸೇರುತ್ತಾರೆ. ಮುಖೇಡಿಗಳಾಗುತ್ತಾರೆ, ತಾವೂ ಮುಜುಗರ ಪಟ್ಟು, ಮನೆಯವರಿಗೂ ಮುಜುಗರವನ್ನುಂಟುಮಾಡುತ್ತಾರೆ.

‘ಯಾರಾದರೂ ಬಂದರೆ ಸಾಕು, ಓಡಿ ಹೋಗಿ ರೂಮಿನಲ್ಲಿ ಕೂಡುತ್ತಾಳೆ. ಹೊರಗೆ ಬಾರೇ, ಆಂಟಿ ಹೇಗಿದ್ದೀರಿ ಎಂದು ಮಾತನಾಡಿಸು. ಕಾಫಿ ತೆಗೆದುಕೊಂಡು ಹೋಗಿ ಕೊಡು ಎಂದರೆ ‘ಹೋಗಮ್ಮ ನನ್ನ ಕೈಲಿ ಆಗೋದಲ್ಲ, ನೀನೇ ಕೊಡು, ಎಂದು ತಲೆತಗ್ಗಿಸಿಕೂರುತ್ತಾಳೆ. ಹೀಗಾದರೆ ಹೇಗೆ? ಬಂದವರು ಈ ಹುಡುಗಿಗೆ ಎಷ್ಟು ಜಂಭ, ಅಹಂಕಾರ, ಮನೆಗೆ ಬಂದವರನ್ನು ಮಾತಾಡಿಸುವ ಸೌಜನ್ಯತೆ ಇಲ್ಲ ಎಂದುಕೊಂಡರೆ ಹೇಗೆ? ನಾಳೆ ಇವಳನ್ನು ಯಾರು ಮದುವೆಯಾಗುತ್ತಾರೆ, ಎಂದರು ವಿಶಾಲಾಕ್ಷಿ.

‘ಬೆಲೆ ಎಷ್ಟು, ಕಡಿಮೆ ಬೆಲೆಗೆ ಕೊಡುತ್ತೀರಾ ಎಂದು ಕೇಳಲು ಸಂಕೋಚ. ಕ್ಯೂನಲ್ಲಿ ನಿಂತಾಗ ಯಾರಾದರೂ ಮಧ್ಯೆ ಸೇರಿಕೊಂದರೆ, ಬೇಡ ಹಾಗೆ ಮಾಡಬೇಡಿ ಎಂದು ಹೇಳಲಾರೆ. ಸಾಮಾನಿನ ಚೀಟಿಯನ್ನು ಅಂಗಡಿಯವರಿಗೆ ಕೊಟ್ಟು, ಅವನು ಕೊಟ್ಟದ್ದನ್ನು ತೆಗೆದುಕೊಂಡು ಬರುತ್ತೇನೆ, ಈರುಳ್ಳಿ ಗಡ್ಡೆ ಕೊಳೆತಿದೆ, ಬೇರೆ ಹಾಕಿ ಎಂದೂ ಹೇಳಲಾರೆ. ಭಯದಿಂದ ಬಾಯಿ ಕಟ್ಟಿಹೋಗುತ್ತದೆ. ಎಷ್ಟು ಧೈರ್ಯ ತಂದುಕೊಂಡು, ಸ್ಪಷ್ಟವಾಗಿ ಮಾತಾಡಬೇಕು. ನನಗೆ ಇಂಥದು ಬೇಕು, ಇಂಥದು ಬೇಡ ಎಂದು ಹೇಳಬೇಕು ಎಂದುಕೊಂಡರೂ ಆಗುವುದಿಲ್ಲ ಸಾರ್ ಎಂದ ರಮಾಕಾಂತ.

‘ಕಣ್ಣಲ್ಲಿ, ಕಣ್ಣಿಟ್ಟು, ಮುಖ ನೋಡುತ್ತಾ ಮಾತನಾಡಲಾರೆ ಸರ್. ತಲೆ ತಗ್ಗಿಸಿ ಬಿಡುತ್ತೇನೆ. ಹೃದಯ ಬಾಯಿಗೆ ಬಂದಂತಾಗುತ್ತದೆ. ಎದೆ ಢವಗುಟ್ಟುತ್ತದೆ. ನನ್ನನ್ನು ಮಾತನಾಡಿಸಿದ ವ್ಯಕ್ತಿ, ದೊಡ್ಡ ಅಧಿಕಾರಿ, ತಿಳುವಳಿಕೆಯುಳ್ಳವರು ಅಥವಾ ಮುಖಗಂಟಿಕ್ಕಿರುವವರಾದರಂತೂ ಮುಗಿದೇ ಹೋಯಿತು. ನನ್ನ ಬಾಯಿಗೆ ಬೀಗ ಬೀಳುತ್ತದೆ. ಇದಕ್ಕೆ ಪರಿಹಾರವಿಲ್ಲವೇ ಎಂದಳು ಸಂಜನಾ.

ಈ ಸಾಮಾಜಿಕ ಭಯ (Social Anxiety/phobia) ಕ್ಕೆ ಕಾರಣಗಳಿವು.

 • ಕೀಳರಿಮೆ: ನಾನು ಚೆನ್ನಾಗಿಲ್ಲ, ನನ್ನ ಬುದ್ಧಿ ಕಡಿಮೆ, ನಾನು ಚೆನ್ನಾಗಿ ಮಾತನಾಡಲಾರೆ, ಬಾಯಿ ಬಿಟ್ಟರೆ, ತಪ್ಪು ಮಾತುಗಳು ಬರುತ್ತದೆ. ಇತ್ಯಾದಿ ನಕಾರಾತ್ಮಕ ಯೋಚನೆಗಳು.
 • ಇತರರಿಂದ ತಿರಸ್ಕಾರದ/ಹೀನಾಯದ ನಿರೀಕ್ಷೆ: ಎದುರಿಗಿರುವ ವ್ಯಕ್ತಿ ನನ್ನನ್ನು ಮೆಚ್ಚುವುದಿಲ್ಲ. ತಿರಸ್ಕರಿಸಬಹುದು. ನನ್ನ ಕೊರತೆ, ಹುಳುಕು, ತಪ್ಪುಗಳನ್ನು ಕಂಡು ನಗಾಡುತ್ತಾನೆ/ಳೆ. ಅಪಹಾಸ್ಯ ಮಾಡಿ ಅವಮಾನ ಮಾಡುತ್ತಾನೆ/ಮಾಡುತ್ತಾಳೆ.
 • ಹಿಂದಿನ ನೋವಿನ ಅನುಭವಗಳು: ಹಿಂದೆ ಜನರೊಂದಿಗೆ ಮಾತನಾಡಲು ವ್ಯವಹರಿಸಿದಾಗ ಆದ ನೋವು/ಅವಮಾನ/ವಿಫಲತೆಗಳು.
 • ಭಾಷಾ ಸಾಮರ್ಥ್ಯ/ತಿಳುವಳಿಕೆ ಕಡಿಮೆ ಇರುವುದು.
 • ಬಾಲ್ಯದಲ್ಲಿ ಜನರೊಂದಿಗೆ ವ್ಯವಹರಿಸುವ ತರಬೇತಿ ಇಲ್ಲದಿರುವುದು

ಈ ಸಾಮಾಜಿಕ ಭಯಕ್ಕೆ ಚಿಕಿತ್ಸೆ

 • ಸರಳವಾಗಿ ಸ್ಪಷ್ಟವಾಗಿ ಮಾತನಾಡುವ ಅಭ್ಯಾಸ ಮಾಡುವುದು. ಮೊದಲು ಕನ್ನಡಿಯ ಮುಂದೆ ಆನಂತರ ಪರಿಚಿತ ವ್ಯಕ್ತಿಗಳ ಜೊತೆ.
 • ಜ್ಞಾನ ತಿಳುವಳಿಕೆ ಭಾಷಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದು, ವಿವಿಧ ವಿಷಯಗಳ ಬಗ್ಗೆ ಸಂಭಾಷಣೆ ನಡೆಸುವ ಕೌಶಲವನ್ನು ಪಡೆಯುವುದು.
 • ನಾನು ಎಲ್ಲರನ್ನೂ ಮೆಚ್ಚಿಸಬೇಕಿಲ್ಲ, ನನಗೆ ಗೊತ್ತಿದ್ದಷ್ಟನ್ನು ಹೇಳುತ್ತೇನೆ. ಇತರರು ನನ್ನಿಂದ ಹೆಚ್ಚು ನಿರೀಕ್ಷೆ ಮಾಡಿದರೆ, ನಾನು ಏನು ಮಾಡಲು ಸಾಧ್ಯವಿಲ್ಲ. ನನ್ನನ್ನು ಕೆಲವರಾದರೂ ಮೆಚ್ಚುತ್ತಾರೆ ಅಷ್ಟು ಸಾಕು ಎಂಬ ಧೋರಣೆ ಇಟ್ಟುಕೊಳ್ಳುವುದು.
 • ಎಲ್ಲರೂ ಸಮಾನರೇ, ನನ್ನೆದುರು ಇರುವ ವ್ಯಕ್ತಿ ದೊಡ್ಡವರಿರಬಹುದು, ಜ್ಞಾನಿ ಇರಬಹುದು. ಅಧಿಕಾರದಲ್ಲಿರಬಹುದು, ಅವರೂ ಮನುಷ್ಯರೇ, ಅವರಲ್ಲೂ ಕೆಲವು ಕುಂದು ಕೊರತೆಗಳು ಇರುತ್ತವೆ. ನಾನು ಚಿಕ್ಕವನಿರಬಹುದು. ನನ್ನಲ್ಲಿ ಅಧಿಕಾರ ಇಲ್ಲದಿರಬಹುದು, ಆದರೆ ನನ್ನ ಅನಿಸಿಕೆ, ಅಭಿಪ್ರಾಯ, ಬೇಕು, ಬೇಡಗಳನ್ನು ಹೇಳುವ ಹಕ್ಕು ನನಗಿದೆ ಎಂದು ಹೇಳಿಕೊಳ್ಳುವುದು.
 • ‘ಹೇಳಬೇಕಾದ್ದನ್ನು ವಿನಯ, ಗೌರವ, ಪ್ರೀತಿಯಿಂದ ಹೇಳುತ್ತೇನೆ. ಯಾರಿಗೂ ಅಗೌರವ, ಅವಮಾನ ಮಾಡುವ ಉದ್ದೇಶವಿಲ್ಲ ಆದ್ದರಿಂದ ನಾನು ಹೆದರುವ ಅಗತ್ಯವಿಲ್ಲ ಎಂದುಕೊಳ್ಳಿ.
 • ಅಗತ್ಯಬಿದ್ದರೆ ಮನಶಾಸ್ತ್ರಜ್ಞರು ಅಥವಾ ಮನೋವೈದ್ಯರನ್ನು ಕಾಣಿ. ಆತಂಕವನ್ನು ತಗ್ಗಿಸುವ ಔಷಧಿ ಇದೆ , ನಡವಳಿಕೆ ಚಿಕಿತ್ಸೆ ಇದೆ.

ನಿರ್ದಿಷ್ಟ, ಅತಿ ಭಯಗಳು (phobia)

ಕೆಲವರಿಗೆ ಕೆಲವು ವಸ್ತುಗಳನ್ನು ಕಂಡರೆ ಅಥವಾ ಕೆಲವು ಸನ್ನಿವೇಶ, ಸಂದರ್ಭಗಳನ್ನು ಕಂಡರೆ ವಿಪರೀತ ಭಯ. ಆ ವಸ್ತು / ಸನ್ನಿವೇಶದಿಂದ ದೂರವಿರಲು ಪ್ರಯತ್ನಿಸುತ್ತಾರೆ. ಆ ವಸ್ತು/ ಸನ್ನಿವೇಶವೂ ನಿರಪಾಯಕಾರಿ ಎಂದು ಎಲ್ಲರೂ ಹೇಳಿದರೂ ಅವರಿಗೆ ಅವು ಭಯಕಾರಿಯಾಗಿ ತೋರುವುದೇ ಫೋಬಿಯಾ ಆತಂಕ ರೋಗದ ಮುಖ್ಯ ಲಕ್ಷಣ. ಫೋಬಿಯಾವನ್ನುಂಟು ಮಾಡುವ ಸಾಮಾನ್ಯ ಅಂಶಗಳೆಂದರೆ

 • ನಾಯಿ, ಬೆಕ್ಕು, ಜಿರಳೆ, ಇಲಿ, ಜೇಡದಂತಹ ಪ್ರಾಣಿ/ಕೀಟಗಳು.
 • ಸೇತುವೆ, ಸುರಂಗ, ಗುಹೆ
 • ಟೆಲಿಫೋನ್ ಬೂತ್/ಲಿಫ್ಟ್‌ನಂತಹ ಚಿಕ್ಕ ಜಾಗಗಳು.
 • ಕತ್ತಲೆ/ಒಂಟಿತನ.
 • ಜನರ ಗುಂಪು, ರಕ್ತ, ಸೂಜಿ, ಆಪರೇಶನ್ ಥೇಟರ್, ಸ್ಕ್ಯಾನಿಂಗ್ ಅಥವಾ ಎಂ.ಆರ್.ಐ, ವಿಶೇಷ ತಪಾಸಣೆ ಯಂತ್ರಗಳು, ಆಸ್ಪತ್ರೆ, ವೈದ್ಯರು.
 • ತುಂಬಾ ಜನಸಂದಣಿ ಇರುವ ಬಸ್/ಟ್ರೇನ್.
 • ಎತ್ತರದ ಜಾಗಗಳು.
 • ನೀರು, ಬೆಂಕಿ ಇತ್ಯಾದಿ.

ಅತಿ ಭಯ ಇರುವ ವಸ್ತು/ಸನ್ನಿವೇಶಕ್ಕೆ ಒಗ್ಗಿಕೊಳ್ಳುವುದು. ನನಗೇನೂ ಆಗುವುದಿಲ್ಲ ಎಂದು ಹೇಳಿಕೊಳ್ಳುವುದರಿಂದ ಭಯ ತಗ್ಗುತ್ತದೆ. ಮನೋ ವೈದ್ಯಕೀಯ ನೆರವೂ ಬೇಕಾಗುತ್ತದೆ.

ಗೀಳು ಮನೋರೋಗ

ಯಾವುದೇ ಅರ್ಥವಿಲ್ಲದ ಅಸಂಬದ್ಧ, ಕೊಳಕು ಅಥವಾ ಹೊಲಸು ಅಥವಾ ಭಯವನ್ನು/ಜುಗುಪ್ಸೆಯನ್ನುಂಟು ಮಾಡುವ ವಿಚಾರ, ಆಲೋಚನೆ, ಚಿತ್ರಗಳು ಬೇಡ, ಬೇಡ ಎಂದರೂ ಮನಸ್ಸಿನೊಳಕ್ಕೆ ಬರುವುದು. ದೇವರನ್ನು ಪೂಜಿಸುವಾಗ, ಕೆಟ್ಟ ಆಲೋಚನೆಗಳು ಬರುವುದು, ಯಾವುದೇ ಗಂಡಸು, ಹೆಂಗಸನ್ನು ನೋಡಿದಾಗ ಕೆಟ್ಟ, ಲೈಂಗಿಕ ಆಲೋಚನೆಗಳು ಬರುವುದು. ಕತ್ತಿ, ಚಾಕು, ಸೂಜಿ, ಹರಿತವಾದ ಆಯುಧಗಳನ್ನು ಕಂಡಾಗ, ತನಗೆ, ಇತರರಿಗೆ ಹಿಂಸೆಯನ್ನುಂಟುಮಾಡಬೇಕು ಎನಿಸಿವುದು. ಚಲಿಸುವ ವಾಹನದಿಂದ ಜಿಗಿಯಬೇಕು ಅಥವಾ ಇತರರನ್ನು ನೂಕಬೇಕು ಎನ್ನಿಸುವುದು. ಇತರರಿಗೆ ಬೈದು, ಹೊಡೆಯಬೇಕು, ಅವಮಾನ ಮಾಡಬೇಕು ಎಂಬ ಆಲೋಚನೆಗಳು ಇತ್ಯಾದಿ.

ಪದೇ-ಪದೇ ಕೈ ತೊಳೆಯಬೇಕು. ಸ್ನಾನ ಮಾಡಬೇಕು, ಮನೆಯ ಗೋಡೆ, ನೆಲವನ್ನು ಒರೆಸಬೇಕು. ಧೂಳು, ಹೊಲಸು, ಕೊಳಕಿದೆ ಅದನ್ನು ಹೆಚ್ಚು ನೀರು ಬಳಸಿ, ತೊಳೆದು ತೆಗೆಯಬೇಕು. ಗೋಡೆಯನ್ನು, ಬಾಗಿಲನ್ನು ಹತ್ತು ಸಲ ಮುಟ್ಟಬೇಕು. ಇಲ್ಲದಿದ್ದರೆ ಅದು ಬಿದ್ದು ಹೋಗುತ್ತದೆ ಎನಿಸುವುದು. ಎಲ್ಲವನ್ನು ಅಚ್ಚುಕಟ್ಟಾಗಿ ಒಂದು ಕ್ರಮದಲ್ಲಿ ಇಡುವುದು, ಸ್ವಲ್ಪ ಕೂದಲೆಳೆಯಷ್ಟು ವ್ಯತ್ಯಾಸವಾದರೂ ಮತ್ತೆ ಸರಿಪಡಿಸುವುದು.

‘ಬೋಲ್ಟ್ ಹಾಕಿದ್ದೇನೋ ಇಲ್ಲವೊ, ನಲ್ಲಿಯನ್ನು ನಿಲ್ಲಿಸಿದೆನೋ ಇಲ್ಲವೋ, ಹಣವನ್ನು ಸರಿಯಾಗಿ ಎಣಿಸಿದೆನೋ ಇಲ್ಲವೋ, ಬೀಗವನ್ನು ಸರಿಯಾಗಿ ಹಾಕಿದೆನೋ ಇಲ್ಲವೋ, ಎಂದು ಹಲವಾರು ಸಲ ಚೆಕ್ ಮಾಡುವುದು.

ಮಾಡುವುದೋ, ಬೇಡವೋ, ಹೋಗುವುದೋ, ಹೋಗಬಾರದೋ, ಈ ಹೊತ್ತೇ ಶುರುಮಾಡುವುದೋ, ನಾಳೆ ಶುರುಮಾಡುವುದೋ, ತಂದೆ ತಾಯಿಗೆ ಹೇಳುವುದೋ, ಬೇಡವೋ ಹೀಗೆ ದ್ವಂದ್ವ/ಗೊಂದಲಗಳಿಂದ ಏನೂ ಮಾಡದೆ ನಿಷ್ಕ್ರಿಯನಾಗಿರುವುದು.

ಇವೆಲ್ಲ ಗೀಳು ಮನೋರೋಗದ ಲಕ್ಷಣಗಳು. ಈ ರೋಗಲಕ್ಷಣಗಳಿಂದ ವ್ಯಕ್ತಿ ಸಾಕಷ್ಟು ಮಾನಸಿಕ ಹಿಂಸೆಯನ್ನು ಅನುಭವಿಸುವುದಲ್ಲದೆ, ಇತರರರಿಗೂ ಸಾಕಷ್ಟು ಹಿಂಸೆ, ತೊಂದರೆಯನ್ನು ಕೊಡುತ್ತಾನೆ/ಳೆ. ಸ್ನಾನದ ಮನೆ/ಟಾಯ್ಲೆಟ್ಟಿಗೆ ಹೋದರೆ ಇರುವ ನೀರನ್ನೆಲ್ಲಾ ಖರ್ಚು ಮಾಡಿ, ಈಚೆಗೆ ಬರದೇ ತೊಂದರೆ. ನಾನು ಹೋಗಲಾ, ನಾನು ಮಾಡಿದ್ದು ಸರೀನಾ, ಎಂದು ಹತ್ತಾರು ಸಲ ಮನೆಯವರನ್ನು ಕೇಳುತ್ತಾ ತಲೆ ಚಿಟ್ಟು ಹಿಡಿಸುವುದು. ಶಾಲೆಗೆ ಹೋಗದೇ, ಅಧ್ಯಯನ ಮಾಡದೇ ಸುಮ್ಮನೆ ಕೂರುವುದರಿಂದ ತಂದೆ, ತಾಯಿ, ಮನೆಯವರು ಚಿಂತೆಗೆ ಒಳಗಾಗುತ್ತಾರೆ.

ಮಿದುಳಿನ ನರಕೋಶಗಳಲ್ಲಿ ಸೆರೋಟೊನಿನ್ ಎನ್ನುವ ರಾಸಾಯನಿಕ ವಸ್ತು ಕಡಿಮೆಯಾಗುವುದೇ ಈ ಗೀಳು ಮನೋರೋಗಕ್ಕೆ ಕಾರಣ. ಸೆರೋಟೊನಿನ್‌ನ್ನು ಹೆಚ್ಚಿಸುವ ಔಷಧಿಗಳಾದ ಫ್ಲೂಯಾಕ್ಸೆಟಿನ್, ಸರ್ಟ್ರಾಲಿನ್, ಎಸ್ಸಿಟಾಲೋಪಾಂ, ಕ್ಲೋಮಿಪ್ರಮಿನ್ ಅನ್ನು ಕೊಡುವುದರಿಂದ ಗೀಳು ಮನೋರೋಗ ಹತೋಟಿಗೆ ಬರುತ್ತದೆ. ಔಷಧಿ ಚಿಕಿತ್ಸೆ ದೀರ್ಘಕಾಲ ನಡೆಯಬೇಕು. ಗೀಳು ಮನೋರೋಗ ಹತೋಟಿಗೆ ಬರುವಂತಹ ಕಾಯಿಲೆ.

ಪ್ಯಾನಿಕ್ ಡಿಸಾರ್ಡರ್: ಅತಿ ಭಯ/ಹಠಾತ್ ಭಯದ ಕಾಯಿಲೆ. ಇಲ್ಲಿ ತೀವ್ರ ಭಯ ಥಟ್ಟನೆ ವ್ಯಕ್ತಿಯನ್ನು ಕಾಡತೊಡಗುತ್ತದೆ. ಇದ್ದಕ್ಕಿದ್ದಂತೆ ವ್ಯಕ್ತಿಗೆ ತನಗೇನೋ ತೊಂದರೆ ಆಗಲಿದೆ. ತನಗೆ ಹೃದಯಾಘಾತ ಆಗಲಿದೆ. ತಾನು ಪ್ರಜ್ಞೆ ತಪ್ಪಿ ಬೀಳಬಹುದು. ತನಗೆ ಹುಚ್ಚು ಹಿಡಿಯಬಹುದು. ಪ್ರಾಣಾಪಾಯ ಆಗಬಹುದೆಂಬ ಭಯ ಬಂದು, ವ್ಯಕ್ತಿ ಸಂಪೂರ್ಣವಾಗಿ ಹತಾಶನಾಗುತ್ತಾನೆ. ಭಯದ ತೀವ್ರತೆಯಿಂದ ಚಡಪಡಿಸುತ್ತಾನೆ. ಭಯದ ಲಕ್ಷಣಗಳು ೨೦ ರಿಂದ ೩೦ ನಿಮಿಷಗಳ ಕಾಲ ಇರಬಹುದು. ಆಗ ವ್ಯಕ್ತಿ ಸಹಾಯವನ್ನು ಯಾಚಿಸುತ್ತಾನೆ. ಅವನ ಸ್ಥಿತಿ ಚಿಂತಾಜನಕವಾಗುತ್ತದೆ. ಇದು ಪುನರಾವರ್ತನೆಗೊಳ್ಳುತ್ತದೆ. ಅಟ್ಯಾಕ್ ಇದ್ದಕ್ಕಿದ್ದಂತೆ ಬರಬಹುದು ಅಥವಾ ಕೆಲವು ನಿರ್ದಿಷ್ಟ ಜಾಗ, ನಿರ್ದಿಷ್ಟ ಸಂದರ್ಭದಲ್ಲಿ ಬರಬಹುದು. ಪ್ಯಾನಿಕ್ ಡಿಸಾರ್ಡರ್‌ಗೆ ಔಷಧೀಯ ಚಿಕಿತ್ಸೆ ಇದೆ. ಇಮಿಪ್ರಮಿನ್ ಮಾತ್ರೆ, ಪ್ಯಾರಾಕ್ಸಿಟಿನ್ ಮಾತ್ರೆ ಇತ್ಯಾದಿ.

ಖಿನ್ನತೆ ಕಾಯಿಲೆ( Depressive disorder)

ಶೇಕಡಾ ೧೫ ರಷ್ಟು ಹರೆಯದವರು ಖಿನ್ನತೆ ಖಾಯಿಲೆಯಿಂದ ಬಳಲುತ್ತಾರೆ. ಯಾವುದೇ ಕಷ್ಟ, ನಷ್ಟ, ಸೋಲು, ನೋವು ಅವಮಾನ ಕೊರತೆ ನ್ಯೂನತೆಗಳಿಂದ ಖಿನ್ನತೆಯುಂಟಾಗುವುದು. ಅಥವಾ ಯಾವುದೇ ಕಾರಣವಿಲ್ಲದೆ, ಖಿನ್ನತೆ ಕಾಣಿಸಿಕೊಳ್ಳಬಹುದು. ಇದನ್ನು ಒಳ ಜನ್ಯ ಖಿನ್ನತೆ ಎನ್ನುತ್ತಾರೆ. ಖಿನ್ನತೆಯಲ್ಲಿ ಮಿದುಳಿನ ನರಕೋಶಗಳಲ್ಲಿ ಡೊಪಮಿನ್, ಸೆರೋಟೊನಿನ್‌ನಂತಹ ರಾಸಾಯನಿಕ ನರವಾಹಕಗಳ ಪ್ರಮಾಣ ತಗ್ಗಿರುತ್ತದೆ. ಹುಡುಗರಿಗೆ ಹೋಲಿಸಿದರೆ ಹುಡುಗಿಯರಲ್ಲಿ ಡಿಪ್ರೆಶನ್ ಹೆಚ್ಚು. ಖಿನ್ನತೆಯ ಖಾಯಿಲೆಯ ಸಾಮಾನ್ಯ ಲಕ್ಷಣಗಳಿವು. ಇವು ಎರಡು ವಾರಗಳಿಗಿಂತ ಹೆಚ್ಚು ಕಾಲ ವ್ಯಕ್ತಿಯಲ್ಲಿರುತ್ತದೆ.

ಯಾವಾಗಲೂ ಬೇಸರ, ದುಃಖದ ಭಾವನೆ, ಇದರಿಂದಾಗಿ ಅಳುಬರುವುದು. ಎಲ್ಲದರಲ್ಲೂ ನಿರಾಸಕ್ತಿ, ನಿರುತ್ಸಾಹ, ಉದಾಸೀನತೆ ಹಿಂದೆ ಸಂತೋಷ, ಉತ್ಸಾಹಗಳನ್ನು ನೀಡುತ್ತಿದ್ದ ಚಟುವಟಿಕೆಗಳಿಂದ ಕೂಡ ಈಗ ಸಂತೋಷವಿಲ್ಲ. ಸಂಭ್ರಮವಿಲ್ಲ. ಅಸಹಾಯಕ ಹಾಗೂ ನಿರಾಶಾಭಾವನೆ.

ನಾನು ಅಪ್ರಯೋಜಕ, ಯಾವ ಕೆಲಸವೂ ನನ್ನಿಂದಾಗದು, ಇನ್ನೊಬ್ಬರಿಗೆ ಮನೆಯವರಿಗೆ, ಸಮಾಜಕ್ಕೆ ನಾನು ಹೊರೆ ಎಂಬ ಆಲೋಚನೆ, ತಪ್ಪಿತಸ್ಥ ಭಾವನೆಗಳು, ನಗು-ನಲಿವು, ಯಶಸ್ಸು, ಒಳ್ಳೆಯ ದಿನಗಳು ಇನ್ನೆಂದಿಗೂ ಬರುವುದಿಲ್ಲ ಎನಿಸುವುದು. ನಿದ್ರಾ ತೊಂದರೆಗಳು ಅಥವಾ ಹೆಚ್ಚು ನಿದ್ರೆ.

ಹಸಿವು ಕಡಿಮೆಯಾಗುವುದು ಬಾಯಿ ರುಚಿ ಇಲ್ಲದಿರುವುದು. ತೂಕ ಕಡಿಮೆಯಾಗುವುದು.

ದೇಹದ ಚಲನ-ವಲನಗಳು ನಿಧಾನವಾಗುವುದು.

ಮನಸ್ಸಿನ ಆಲೋಚನೆ, ನಿರ್ಧಾರ ಮಾಡುವ ಪ್ರಕ್ರಿಯೆಗಳೂ ನಿಧಾನವಾಗಿ, ವ್ಯಕ್ತಿ ಮಂಕಾಗುವುದು.

ಅಸ್ಪಷ್ಟ ಆದರೆ ತೀವ್ರವಾದ ಶಾರೀರಿಕ ನೋವುಗಳು, ಸುಸ್ತು, ನಿಶ್ಯಕ್ತಿ ಕಾಣಿಸಿಕೊಳ್ಳುವುದು, ಸಾಯುವ ಇಚ್ಚೆ, ಆತ್ಮಹತ್ಯೆಯ ಆಲೋಚನೆ, ಪ್ರಯತ್ನ.

ಓದು, ಅಧ್ಯಯನದಲ್ಲಿ ಹಿಂದೆ ಬೀಳುವುದು, ತರಗತಿಗಳಿಗೆ ಕ್ರಮವಾಗಿ ಹೋಗದಿರುವುದು, ಮೊದಲಿನಂತೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸದಿರುವುದು.

ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆಯುವುದು ಅಥವಾ ಫೇಲಾಗುವುದು. ಖಿನ್ನತೆ ತೀವ್ರವಾದಾಗ, ವ್ಯಕ್ತಿ ಮನೆಯಲ್ಲೇ ಉಳಿಯಬಹುದು. ಶರೀರದ ಬೇಕು ಬೇಡಗಳನ್ನು ನಿರ್ಲಕ್ಷಿಸಬಹುದು.

ಅನುಮಾನ, ಸಂಶಯ, ಸಿಟ್ಟನ್ನು ಪ್ರದರ್ಶಿಸಬಹುದು.

ಖಿನ್ನತೆ ಕಾಯಿಲೆಯನ್ನು ಅಂತಿಮವಾಗಿ ನಿರ್ಣಯಿಸುವವರು ವೈದ್ಯರು. ಮೇಲೆ ಕಾಣಿಸಿದ ಲಕ್ಷಣಗಳಲ್ಲಿ ಮೂರಕ್ಕಿಂತ ಹೆಚ್ಚಿನ ಲಕ್ಷಣಗಳು ಯಾರಲ್ಲಾದರೂ ಇದ್ದರೆ ಅವರು ವೈದ್ಯರನ್ನು ಅಥವಾ ಮನೋವೈದ್ಯರನ್ನು ಕಾಣಬೇಕು.

ಖಿನ್ನತೆಗೆ ಚಿಕಿತ್ಸೆ ಯಾವುದು?

೧. ಔಷಧಿಗಳು: ಇಮಿಪ್ರಮಿನ್, ಅಮಿಟ್ರಿಫ್ಟಲಿನ್, ಡಾತಿಪಿನ್, ಎಸ್ಸಿಟಲೋಪ್ರಾಂ, ಪ್ಲೂಯಾಕ್ಸೆಟೀನ್, ಸಾರ್ಟ್ರಾಲೀನ್‌ಗಳು ಈಗ ಲಭ್ಯವಿದೆ. ಇವೆಲ್ಲ ಮಿದುಳಿನ ಮೇಲೆ ಪರಿಣಾಮ ಬೀರಿ, ಡೊಪಮಿನ್ ಮತ್ತು ಸೆರೋಟೊನಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ.

ಇವು ನಿದ್ರಾಮಾತ್ರೆಗಳಲ್ಲ. ಅಭ್ಯಾಸವನ್ನುಂಟುಮಾಡುವುದಿಲ್ಲ. ಸುರಕ್ಷಿತವಾದ ಔಷಧಿಗಳು ಎಂಬುದನ್ನು ಗಮನಿಸಿ, ಕೆಲವು ಅಡ್ಡ ಪರಿಣಾಮಗಳಾಗಬಹುದು. ಬಾಯಿ ಒಣಗುವುದು, ಮಲಬದ್ಧತೆ, ಕಣ್ಣು ಮಂಜಾಗುವುದು, ತಲೆಸುತ್ತು, ನಿದ್ರೆ ಹೆಚ್ಚುವುದು, ತೂಕಡಿಕೆ, ಮೂತ್ರ ಬಂದ್ ಆಗುವುದು, ಇತ್ಯಾದಿ, ಅದನ್ನು ವೈದ್ಯರಿಗೆ ತಿಳಿಸಿ.

ಔಷಧಿಗಳು ಕೆಲಸ ಮಾಡಿ, ಖಿನ್ನತೆಯ ಲಕ್ಷಣಗಳು ಕಡಿಮೆಯಾಗಲು, ಎರಡು ಮೂರು ವಾರಗಳು ಬೇಕಾಗಬಹುದು ಸಹನೆ ಇರಲಿ.

ಔಷಧಿಗಳನ್ನು ಕನಿಷ್ಟ ೩ ತಿಂಗಳು ಸೇವಿಸಬೇಕು. ಎಷ್ಟು ಕಾಲ ಸೇವಿಸಬೇಕೆಂಬುದನ್ನು ವೈದ್ಯರು ಹೇಳುತ್ತಾರೆ. ಸಾಮಾನ್ಯವಾಗಿ ಆರು ತಿಂಗಳಿಂದ ಒಂದು ವರ್ಷದವರೆಗೆ ಔಷಧಿ ಸೇವಿಸಬೇಕಾಗಿ ಬರಬಹುದು.

ಈ ಔಷಧ ಸೇವಿಸುವಾಗ ಇತರ ಕಾಯಿಲೆಗಳು ಬಂದರೆ ಬೇರೆ ಔಷಧಿ ಸೇವಿಸಲು ಅಡ್ಡಿ ಇಲ್ಲ ಆದರೆ, ವೈದ್ಯರ ಉಸ್ತುವಾರಿ ಅಗತ್ಯ.

೨. ಆಪ್ತ ಸಲಹೆ ಸಮಾಧಾನ: ರೋಗಿಯೊಂದಿಗೆ ಸ್ನೇಹ ಪೂರ‍್ವಕವಾಗಿ ಮಾತನಾಡಿ, ಆತನ ಕಷ್ಟ ಸುಖ ಸಮಸ್ಯೆಗಳನ್ನು ವಿಚಾರಿಸಿ, ಆಪ್ತ ಸಲಹೆ ಸಮಾಧಾನ ನೀಡುವುದು. ಒಂದು ಮೌಲಿಕವಾದ ಚಿಕಿತ್ಸಾ ವಿಧಾನ. ಇದನ್ನು ವಾರಕ್ಕೆ ಎರಡು ಮೂರು ಸಲ-ಪ್ರತಿ ಸಲ ೩೦ ರಿಂದ ೪೦ ನಿಮಿಷಗಳ ಕಾಲ ಮಾಡಬೇಕಾಗುತ್ತದೆ. ವ್ಯಕ್ತಿಯ ಮನಸ್ಸನ್ನಾವರಿಸಿರುವ ನಕಾರಾತ್ಮಕ ಆಲೋಚನೆಗಳು, ತೀರ್ಮಾನಗಳನ್ನು ತೆಗೆದು, ಸಕಾರಾತ್ಮಕ ಹಾಗೂ ಉತ್ತೇಜನಾತ್ಮಕ ಆಲೋಚನೆಗಳು-ತೀರ್ಮಾನಗಳು ಬರುವಂತೆ ಮಾಡಬೇಕು. ಕಷ್ಟ, ನಷ್ಟಗಳನ್ನು ನಿಭಾಯಿಸಲು, ಸಮಸ್ಯೆಗಳನ್ನು ಪರಿಹರಿಸಲು ಸಲಹೆಗಳನ್ನು ನೀಡಬೇಕು.

೩. ಬೌದ್ಧಿಕ ಚಿಕಿತ್ಸೆ: ನಿರಾಶಾಜನಕ ಆಲೋಚನೆಗಳನ್ನು ನಿವಾರಿಸಿ, ಆಶಾಜನಕ ಆಲೋಚನೆಗಳನ್ನು ಮಾಡುವಂತೆ, ವ್ಯಕ್ತಿಗೆ ತರಬೇತಿ ನೀಡಲಾಗುವುದು. ಹಿಂದಿನ ಅಥವಾ ಪ್ರಸಕ್ತ ನೋವು, ಕಹಿ ಘಟನೆಗಳನ್ನು ನೆನೆಸಿಕೊಳ್ಳದೆ, ಸಂತೋಷ, ಹಿತಕರವಾದ ಘಟನೆಗಳನ್ನು ಮೆಲುಕು ಹಾಕುವಂತೆ ಪ್ರೇರೇಪಿಸುವುದು. ಯಾವುದೇ ವಿಷಯ, ಘಟನೆ, ವಸ್ತು, ವ್ಯಕ್ತಿಯ ಬಗ್ಗೆ ಆಲೋಚಿಸುವಾಗ ಒಳ್ಳೆಯದನ್ನು ಗುರುತಿಸುವುದು, ನಾಳೆ ಒಳ್ಳೆಯದಾಗುತ್ತದೆ, ನಾಳೆ ನನ್ನ ಸಮಸ್ಯೆ ಬಗೆಹರಿಯುತ್ತದೆ, ಜನ ನನಗೆ ಆಸರೆಯಾಗಿ ನಿಲ್ಲುತ್ತಾರೆ ಎಂಬಿತ್ಯಾದಿ ಸಕಾರಾತ್ಮಕ ಧೋರಣೆಯನ್ನು ಬೆಳೆಸುವುದು ಈ ಚಿಕಿತ್ಸೆಯ ಪ್ರಮುಖ ಅಂಶ.

ಯೋಗ, ಧ್ಯಾನ, ಪ್ರಾಣಾಯಾಮ, ಸಂಗೀತ, ನೃತ್ಯ, ಚಿತ್ರಕಲೆಯನ್ನು ಬಳಸಿ ನೀಡುವ ಪ್ರಯತ್ನಗಳು ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿದೆ.

Adjustment disorders: ಹೊಂದಾಣಿಕೆಯ ಅಸ್ವಸ್ಥತೆಗಳು

ಯಾವುದೇ ಹೊಸ ಸನ್ನಿವೇಶ, ಸಂದರ್ಭ, ಸ್ಥಳ, ಜನ, ಸಮಸ್ಯೆ, ಜವಾಬ್ದಾರಿಗೆ ಹೊಂದಿಕೊಳ್ಳಲು ಕಷ್ಟವಾದಾಗ, ಈ ಅಸ್ವಸ್ಥತೆ ಕಂಡುಬರುತ್ತದೆ. ಆತಂಕ, ಭಯ, ಬೇಸರ, ದುಃಖಗಳು, ಸಿಟ್ಟು, ಕೋಪಗಳು, ಆಹಾರ ನಿದ್ರೆಯ ವ್ಯತ್ಯಯ, ದೈನಂದಿನ ಕೆಲಸ, ಚಟುವಟಿಕೆ ಮಾಡಲಾಗದಿರುವುದು. ತಲೆನೋವು, ದೈಹಿಕ ನೋವುಗಳು, ಇತ್ಯಾದಿ ಲಕ್ಷಣಗಳು ಕಂಡುಬರುತ್ತವೆ. ಈ ಲಕ್ಷಣಗಳು ಕೆಲವೇ ದಿನಗಳಿಂದ ಹಿಡಿದು ಒಂದೆರೆಡು ತಿಂಗಳು ಇರಬಹುದು. ಮನೋಚಿಕಿತ್ಸೆ, ವಾತಾವರಣದ ಬದಲಾವಣೆ, ಅಲ್ಪ ಪ್ರಮಾಣದಲ್ಲಿ ಖಿನ್ನತೆ ನಿರೋಧಕಗಳು ಶಮನ ಕಾರಿ ಮಾತ್ರೆಗಳನ್ನು ನೀಡಲಾಗುತ್ತದೆ. ವ್ಯಕ್ತಿ, ಸನ್ನಿವೇಶ, ಪರಿಸರಕ್ಕೆ ಹೊಂದಿಕೊಳ್ಳಲು ಸಂಬಂಧಪಟ್ಟವರಲ್ಲಿ ಸಹಾಯ ಮಾಡಬೇಕು. ಓದುವ ಶಾಲೆಯನ್ನು ಬದಲಿಸಿದಾಗ, ಮನೆ ಬಿಟ್ಟು ಹಾಸ್ಟೆಲ್ ಸೇರಿದಾಗ, ಹೊಂದಾಣಿಕೆಯ ಅಸ್ವಸ್ಥತೆ ಸಾಮಾನ್ಯ.

ಸೊಮ್ಯಾಟೋಫಾರಂ ಡಿಸಾರ್ಡರ್ Somatoform Disorders:

ಈ ಕಾಯಿಲೆಯ ಸಾಮಾನ್ಯ ಲಕ್ಷಣಗಳು, ದೇಹದಲ್ಲಿ ಏನೂ ಕಾಯಿಲೆ ಇಲ್ಲದಿದ್ದರೂ ಕಾಣಿಸಿಕೊಳ್ಳುತ್ತವೆ. ವೈದ್ಯರಿಗೆ ಗೊಂದಲವನ್ನುಂಟುಮಾಡುತ್ತವೆ. ಮೇಲ್ನೋಟಕ್ಕೆ ಶಾರೀರಕ ಕಾಯಿಲೆಯಂತೆ ಕಂಡರೂ, ಶರೀರದಲ್ಲಿ ಯಾವ ನ್ಯೂನತೆ/ಕೊರತೆ ಇರುವುದಿಲ್ಲ. ಲಕ್ಷಣಗಳು ಬಹಳ ನಾಟಕೀಯವಾಗಿ ಎಲ್ಲರ ಗಮನವನ್ನು ಸೆಳೆಯುವಂತೆ ಪ್ರಕಟಗೊಳ್ಳುತ್ತವೆ. ಮನೆಯವರಿಗೆ ಇದು ಗಂಭೀರ ಸ್ಥಿತಿ ಎನ್ನುವ(ಹುಸಿ) ಆತಂಕವನ್ನು ಸೃಷ್ಟಿಸುತ್ತವೆ.

 • ಪ್ರಜ್ಞೆ ತಪ್ಪಿ ಬೀಳುವುದು.
 • ಫಿಟ್ಸ್ ಬಂದಂತೆ ಕೈಕಾಲು ಅದುರುವುದು.
 • ಕೈ ಕಾಲುಗಳು ಪಾರ್ಶ್ವವಾಯು ಬಡಿದಂತೆ ನಿಷ್ಕ್ರಿಯವಾಗುವುದು.
 • ಇದ್ದಕ್ಕಿದ್ದಂತೆ ಮಾತು ನಿಂತುಹೋಗುವುದು, ಕಣ್ಣು ಕಾಣದಂತೆ ಆಗುವುದು.
 • ವಿಚಿತ್ರ ಮಾತು, ವರ್ತನೆಯನ್ನು ತೋರುವುದು.
 • ಮೈಮೇಲೆ ದೇವರು, ದೆವ್ವ ಬಂದಂತೆ ಆಡುವುದು.
 • ನಿರ್ದಿಷ್ಟ ಅವಧಿಯ ಘಟನೆಗಳ ನೆನಪೇ ಇಲ್ಲದಿರುವುದು.
 • ಭ್ರಮಾಧೀನ ಸ್ಥಿತಿಯಲ್ಲಿ ಮನೆಬಿಟ್ಟು, ಅಲೆದಾಡುವುದು, ತನ್ನ ಗುರುತು, ಪರಿಚಯವನ್ನು ಮರೆಯುವುದು, ಪರಿಚಿತರನ್ನು ಗುರುತಿಸಲು ವಿಫಲವಾಗುವುದು, ಇತ್ಯಾದಿ.

ಇದ್ದಕ್ಕಿದ್ದಂತೆ ಮಾತು ನಿಂತು ಹೋಗಿದೆ, ಮೂಕಿಯಾಗಿದ್ದಾಳೆ ಎಂದು ೧೬ ವರ್ಷದ ಶಕೀಲಳನ್ನು ತಂದೆ-ತಾಯಿ ಕರೆ ತಂದರು. ಕಿವಿ, ಗಂಟಲು ತಜ್ಞರು ಪರೀಕ್ಷೆ ಮಾಡಿ ಧ್ವನಿಪೆಟ್ಟಿಗೆ ಸರಿಯಾಗಿದೆ. ಶರೀರದಲ್ಲಿ ಏನೂ ಕಾಯಿಲೆ ಇಲ್ಲ ಎಂದು ಬರೆದಿದ್ದರು. ಮೂರು ದಿನಗಳ ಹಿಂದೆ ಸಂಜೆ ಐದು ಗಂಟೆಗೆ, ಥಟ್ಟನೆ ಮಾತು ನಿಂತುಹೋಯಿತೆಂದು ಶಕೀಲಳ ತಾಯಿ, ರೇಷ್ಮಾ ಹೇಳಿದಳು. ಯಾವ ಸಂದರ್ಭದಲ್ಲಿ ಎಂದು ಕೇಳಿದಾಗ, ತಾನು ಅಡುಗೆಮನೆಯಲ್ಲಿ ಕಾಫಿ ಮಾಡುತ್ತಿದ್ದುದಾಗಿ, ಆ ಸಮಯಕ್ಕೆ ಶಾಲೆಯಿಂದ ಬಂದ ಶಕೀಲ ಅಣ್ಣ ರಫೀಕ್ ಜೊತೆ ಜಗಳ ಮಾಡುತ್ತಿದ್ದದನ್ನು ಕೇಳಿ ಹೊರ ಬಂದಾಗ, ಶಕೀಲ ನೆಲದ ಮೇಲೆ ಬಿದ್ದದ್ದಳು. ರಫೀಕ್ ಗಾಬರಿಗೊಂಡಿದ್ದನ್ನು ಕಂಡು ಏನಾಯಿತೆಂದು ಕೇಳಿದೆ. ಶಕೀಲ ಮಾತಾಡಲಿಲ್ಲ. ಅಳುತ್ತಿದ್ದಳು, ರಫೀಕ್ ತನ್ನದೇನು ತಪ್ಪಿಲ್ಲ, ತಾನೇನೂ ಮಾಡಲಿಲ್ಲ, ನಿನ್ನೆ ರಾತ್ರಿ ಏಕೆ ಮನೆಗೆ ಬರಲಿಲ್ಲ ಎಂದಷ್ಟೇ ಕೇಳಿದೆ ಎಂದ. ಆದರೆ ಅವರಿಬ್ಬರಲ್ಲಿ ಜಗಳವಾಗಿ, ರಫೀಕ್ ತಂಗಿಯನ್ನು ದೂಡಿರಬೇಕು, ರೇಷ್ಮಾ ಹೇಳಿದಳು. ಅವರಿಬ್ಬರ ನಡುವೆ ಏನು ಸಮಸ್ಯೆ ಏಕೆ ಜಗಳವಾಡಿದರು ಎಂದು ವಿಚಾರಿಸಲಾಯಿತು. ತಂದೆ-ತಾಯಿಯಿಂದ ತಿಳಿದು ಬಂದದ್ದು ಇಷ್ಟು. ರಫೀಕ ಆಗಾಗ ತನ್ನ ಕ್ಲಾಸ್‌ಮೇಟ್ ಮನೆಯಲ್ಲಿ ಕಂಬೈನ್ಡ್ ಸ್ಟಡಿ ಮಾಡಲು ಉಳಿದುಕೊಳ್ಳುತ್ತಿದ್ದ. ಶಕೀಲಳೂ ತನ್ನ ಕ್ಲಾಸ್ ಮೇಟ್ ಮನೆಯಲ್ಲಿ ರಾತ್ರಿ ಉಳಿದುಕೊಳ್ಳಲು ಇಷ್ಟಪಟ್ಟಳು. ಅದಕ್ಕೆ ತಂದೆ-ತಾಯಿ ಇಬ್ಬರೂ ಒಪ್ಪಿಗೆ ಕೊಟ್ಟಿರಲಿಲ್ಲ. “ನೀನು ಹುಡುಗಿ ಬೇರೆಯವರ ಮನೆಯಲ್ಲಿ ರಾತ್ರಿ ಹೊತ್ತು ಉಳಿಯುವುದು ಸರಿ‌ಅಲ್ಲವೆಂದರು. ಶಕೀಲ ಮುನಿಸಿಕೊಂಡಳು. ‘ಅಣ್ಣನಿಗಾದರೆ ಅನುಮತಿ ಕೊಡುತ್ತೀರಿ, ನನಗೆ ಮಾತ್ರ ಇಲ್ಲ ಎಂದು ವಾದ ಮಾಡಿದಳು. ಹಿಂದಿನ ದಿನ ಗೆಳತಿ ಮನೆಯಿಂದಲೇ ಫೋನ್ ಮಾಡಿ, ಮಳೆ ಬರುತ್ತಿದೆ, ನಾನು ಮನೆಗೆ ಬರುವುದಿಲ್ಲ ಎಂದು ತಾಯಿಗೆ ತಿಳಿಸಿದ್ದಳು. ಆದರೆ ಅವಳು ಮನೆಗೆ ಬಂದಾಗ ರಫೀಕ್ ಜಗಳ ತೆಗೆದಿದ್ದ. ‘ಅಪ್ಪ, ಅಮ್ಮ ನಿನಗೆ

ಪರ್ಮಿಶನ್ ಕೊಟ್ಟಿಲ್ಲ. ಆದರೂ ನೀನು ನಿನ್ನೆ ರಾತ್ರಿ ನಿನ್ನ ಫ್ರೆಂಡ್ ಮನೆಯಲ್ಲಿ ಉಳಿದುಕೊಂಡಿದ್ದೀಯಾ, ಅಪ್ಪ ಬರಲಿ ಹೇಳುತ್ತೇನೆ ಎಂದು ಹೆದರಿಸಿದ. ಶಕೀಲ ಸಿಟ್ಟುಕೊಂಡು, ‘ನನ್ನ ಮೇಲೆ ಹತೋಟಿ ಇಡಲು ನೀನು ಯಾರು ಹೋಗೋ ಎಂದಳು. ರಫೀಕ ಕೋಪದಿಂದ ಅವಳನ್ನು ನೂಕಿ ಬೀಳಿಸಿದ್ದ. ‘ನಿನ್ನ ಕಷ್ಟವೇನು, ಕಾಗದದ ಮೇಲೆ ಬರೆಯಮ್ಮ ಎಂದಾಗ, ‘ನಾನು ಹೆಣ್ಣಾಗಿ ಹುಟ್ಟಬಾರದಿತ್ತು, ನನ್ನ ತಂದೆ-ತಾಯಿ ಅಣ್ಣನನ್ನು ಹೆಚ್ಚು ಪ್ರೀತಿ ಮಾಡುತ್ತಾರೆ, ನಾನು ಹುಡುಗಿ ಎಂದು ನನ್ನ ಆಸೆ-ಆಕಾಂಕ್ಷೆಗಳಿಗೆ ಬೆಲೆ ಕೊಡುವುದಿಲ್ಲ. ನಾನೇಕೆ ಮಾತನಾಡಬೇಕು. ಮೂಕಿಯಾಗಿರುವುದೇ ಚೆಂದ, ಎಂದು ಬರೆದಳು! ಅವಳ ಪ್ರಕ್ಷುಬ್ದಗೊಂಡ ಮನಸ್ಸು, ಪ್ರತಿಭಟನಾ ರೂಪದಲ್ಲಿ ಮೂಕತನವನ್ನು ಸೃಷ್ಟಿಮಾಡಿತ್ತು.

೧೭ ವರ್ಷದ ವಿವೇಕನಿಗೆ ಪೆರಾಲಿಸಿಸ್, ತಂದೆ ತಾಯಿಗಳು ಗಾಬರಿಗೊಂಡರು. ಇದೇನಪ್ಪ ಗ್ರಹಚಾರ. ಬುದ್ಧಿವಂತ ಹುಡುಗ. ಇವನು ಇಂಜಿನೀಯರೋ, ಡಾಕ್ಟರೋ ಆಗುತ್ತಾನೆ ಎಂದು ಕನಸು ಕಂಡ ನಮಗೆ ಆಘಾತವಾಗಿದೆ ಡಾಕ್ಟರೇ, ಏನಾದರೂ ಮಾಡಿ, ಅವನ ಬಲಗೈಗೆ ಮತ್ತೆ ಶಕ್ತಿ ಬರುವಂತೆ ಮಾಡಿ ಎಂದು ದೈನ್ಯತೆಯಿಂದ ಪ್ರಾರ್ಥಿಸಿದರು. ವೈದ್ಯರು ಪರೀಕ್ಷಿಸಿದಾಗ ಸ್ನಾಯುಗಳ ಬಲ, ಬಿಗಿತ, ರಿಪ್ಲೆಕ್ಷಸ್ ಎಲ್ಲಾ ಸರಿಯಾಗೇ ಇತ್ತು. ಬಲಗೈ ಸಂಪೂರ್ಣವಾಗಿ ನಿಷ್ಕ್ರಿಯವಾಗಿತ್ತು. ವಿವರವಾದ ಆತ್ಮೀಯ ಸಂದರ್ಶನದ ಮೂಲಕ ಅವನ ಮನಸ್ಸಿನ ಕ್ಲೇಶಗಳನ್ನು ಪತ್ತೆ ಹಚ್ಚಲಾಯಿತು. ಶಾಲೆಯಲ್ಲಿ ಅವನ ಮೇಲೆ ಮಿಥ್ಯಾರೋಪವನ್ನು ಹೊರಿಸಲಾಗಿತ್ತು. ಸಹಪಾಠಿಯೊಬ್ಬಳಿಗೆ ಆತ ಹೊಲಸು ವಿಚಾರಗಳ ಪತ್ರ ಬರೆದಿದ್ದ ಎಂದು ಆ ಹುಡುಗಿಯೇ ಹೆಡ್ ಮಾಸ್ಟರಿಗೆ ದೂರು ಕೊಟ್ಟಿದ್ದಳು. ಅದೊಂದು ಟೈಪ್ ಮಾಡಿದ ಪತ್ರ. ಕೆಳಗೆ ಇವನ ಹೆಸರು ಇತ್ತು. ಆದರೆ ಸಹಿ ಇರಲಿಲ್ಲ. ಇದು ನಾನು ಬರೆದಿದ್ದಲ್ಲ ಎಂದು ಎಷ್ಟು ಹೇಳಿದರೂ ಕೇಳದೆ, ಹೆಡ್‌ಮಾಸ್ಟರ್ ಇವನನ್ನು ಸಸ್ಪೆಂಡ್ ಮಾಡಿದರು. ತಂದೆ-ತಾಯಿಗಳೊಂದಿಗೆ ಬಂದು ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು ತಾಕೀತು ಮಾಡಿದರು. ತಂದೆ-ತಾಯಿಗಳಿಗೆ ಹೋಗಿ ಈ ವಿಚಾರವನ್ನು ತಿಳಿಸಿದ. ಇದು ತಾನು ಮಾಡಿದ ತಪ್ಪಲ್ಲ. ತನ್ನ ಕ್ಲಾಸಿನಲ್ಲಿ ತನ್ನನ್ನು ಕಂಡರೆ ಮತ್ಸರಪಡುವ ರಂಗನಾಥ ಎನ್ನುವ ಹುಡುಗನಿದ್ದಾನೆ. ಇದು ಅವನ ಕೆಲಸವಿರಬೇಕು ಎಂದು ಹೇಳಿದ. ವಿವೇಕನ ತಂದೆ, ಸ್ವಲ್ಪ ಯೋಚಿಸಿ, ಆ ಹುಡುಗ ರಂಗನಾಥನ ಮನೆಗೆ ಹೋದರು. ಅಲ್ಲಿ ಟೈಪ್‌ರೈಟರ್ ಇದ್ದುದನ್ನು ಕಂಡು, ರಂಗನಾಥನ ತಂದೆ-ತಾಯಿಗಳಿಗೆ ವಿಷಯವನ್ನು ವಿವರಿಸಿ, ಅ ಟೈಪ್‌ರೈಟರ್‌ನಲ್ಲಿ ಸ್ವಲ್ಪ ಟೈಪ್ ಮಾಡಿದರು. ಅದನ್ನು ಆ ಹುಡುಗಿಗೆ ಬರೆದಿದ್ದ ಎನ್ನಲಾದ ಪತ್ರದೊಂದಿಗೆ ಹೋಲಿಸಿ ನೋಡಲು ಹೆಡ್‌ಮಾಸ್ಟ್‌ರ್‌ಗೆ ಹೇಳಿದರು. ಆಶ್ಚರ್ಯ, ಆ ಎರಡೂ ಪತ್ರಗಳು ಒಂದೇ ಟೈಪ್‌ರೈಟರ್‌ನಲ್ಲಿ ಟೈಪ್ ಆದುವು ಎಂದು ಸುಲಭವಾಗಿ ಗೊತ್ತಾಯಿತು. ಹೆಡ್‌ಮಾಸ್ಟರ್ ರಂಗನಾಥ್ ಮತ್ತು ಆತನ ತಂದೆಯನ್ನು ಕರೆಸಿ, ರಂಗನಾಥನ ಈ ಅಪರಾಧವನ್ನು ವಿವರಿಸಿ, ಆತನನ್ನು ಸ್ಕೂಲಿನಿಂದ ತೆಗೆಯುವುದಾಗಿ ಹೇಳಿದರು. ‘ವಿವೇಕ ನನಗೆ ಆಗಾಗ ಹೊಡೆಯುತ್ತಾನೆ, ಕೀಟಳೆ ಮಾಡುತ್ತಾನೆ, ಆದಕ್ಕೆ ಹೀಗೆ ಮಾಡಿದೆ ಎಂದು ರಂಗನಾಥ ಸಬೂಬು ಹೇಳಿದ. ಅದು ಅಪ್ಪಟ ಸುಳ್ಳಾಗಿತ್ತು. ವಿವೇಕನಿಗೆ ಅಸಾಧ್ಯವಾದ ಸಿಟ್ಟು ಬಂತು. ಅಲ್ಲೇ ಎಲ್ಲರೆದುರೇ ರಂಗನಾಥ್‌ನ ಮುಖಕ್ಕೆ ಗುದ್ದಬೇಕು, ಅವನ ಬಾಯಿ, ಹಲ್ಲುಗಳು, ಮೂಗಿನಿಂದ ರಕ್ತ ಬರುವಷ್ಟು ಹೊಡೆಯಬೇಕು  ಎಂದು ಕೈ‌ಎತ್ತಲು ಪ್ರಯತ್ನಿಸುತ್ತಾನೆ. ಕೈ ಬರುತ್ತಿಲ್ಲ ನಿಷ್ಕ್ರಿಯವಾಗಿದೆ ಎಂದು ಬಿಕ್ಕಳಿಸಿದ. ತತ್‌ಕ್ಷಣ ಅವನನ್ನು ಸಮೀಪದ ವೈದ್ಯರಲ್ಲಿಗೆ ಕರೆದೊಯ್ಯಲಾಯಿತು. ಅವರು ಪರೀಕ್ಷಿಸಿ, ಇವನನ್ನು ಕೂಡಲೇ ನರರೋಗ ತಜ್ಞರಲ್ಲಿಗೆ ಕರೆದೊಯ್ಯಿರಿ ಎಂದರು.

ಅತೀವ ಮನೋಕ್ಲೇಶದಿಂದ ವಿವೇಕನಿಗೆ ‘ಮಾನಸಿಕ ಜನ್ಯ ರೋಗಲಕ್ಷಣ ಕಾಣಿಸಿಕೊಂಡಿತ್ತು. ಮನಸ್ಸಿನಲ್ಲಿ ಹುಟ್ಟಿದ ಆಕ್ರಮಣ ಭಾವ ಅವನನ್ನು ನಡುಗಿಸಿತು. ಸಿಟ್ಟಿನಿಂದ ರಂಗನಾಥನಿಗೆ ನಾನು ಹೊಡೆದುಬಿಡುತ್ತೇನೆ. ಎಲ್ಲರೂ ತನ್ನನ್ನು ಅಪರಾಧಿಯಂತೆ ನೋಡುತ್ತಾರೆ. ಹೊಡೆಯದಿರುವುದೇ ಕ್ಷೇಮವೆಂದು ಯೋಚಿಸಿ ಅವನ ಸುಪ್ತ ಮನಸ್ಸು, ಕೈಗಳ ಸ್ನಾಯುಗಳಿಗೆ ನಿಷ್ಕ್ರಿಯವಾಗಲು ಸೂಚಿಸಿತು. ಮಿಥ್ಯಾರೋಪದಿಂದ ಬಳಲಿದ ವಿವೇಕನಿಗೆ , ಈಗ ಪೆರಾಲಿಸ್ ಆಯಿತೆಂದು ಕಂಡ ಎಲ್ಲರೂ ಅವನ ಬಗ್ಗೆ ಸಹಾನುಭೂತಿಯನ್ನು ವ್ಯಕ್ತಪಡಿಸಿದರು. ರಂಗನಾಥನ ಮೇಲೆ ಅವರ ಕೋಪ ಹೆಚ್ಚಾಯಿತು. ಅವನನ್ನು ಟಿಸಿ ಕೊಟ್ಟು, ಕಳುಹಿಸಲು ತೀರ್ಮಾನ ಮಾಡಿದರು. ವಿವೇಕನಿಗೆ ಈಗ ಸಮಾಧಾನವಾಯಿತು. ರೋಗಲಕ್ಷಣ ಅವನಿಗೆ ಬಹುವಾಗಿ ನೆರವಾಗಿತ್ತು. ಇದನ್ನೆಲ್ಲಾ ಅವನಿಗೆ ವಿವರಿಸಿ, ಇನ್ನು ರೋಗಲಕ್ಷಣದ ಅವಶ್ಯಕತೆ ಇಲ್ಲ. ಔಷಧಿ ಕೊಡುತ್ತೇವೆ. ನಿನ್ನ ಕೈ ಮೊದಲಿನಂತಾಗುತ್ತದೆ ಎಂದು ಬಲವಾಗಿ ಅವನಿಗೆ ಮನೋಸೂಚನೆ ನೀಡಲಾಯಿತು. ವಿವೇಕ ಚೇತರಿಸಿಕೊಂಡ.

ರಾಧಿಕಾಳ ಮೇಲೆ ಅವಳ ತಾಯಿಯ ದೆವ್ವ ಬಂದಿದೆಯಂತೆ. ಅದು ಜೋರಾಗಿ ಗಲಾಟೆ ಮಾಡುತ್ತಾ, ರಾಧಿಕಾಳ ಅಪ್ಪ ಮತ್ತು ಮಲತಾಯಿಯನ್ನು ಬಾಯಿಗೆ ಬಂದಂತೆ ಬೈಯುತ್ತಿದೆಯಂತೆ. ಅವರಿಬ್ಬರೂ ಸೇರಿ ರಾಧಿಕಾಳಿಗೆ ಹಿಂಸೆ ಕೊಡುತ್ತಿದ್ದಾರೆ. ತಾನು ಸುಮ್ಮನಿರುವುದಿಲ್ಲ, ಅವರು ರಕ್ತ ಕಾರಿ ಸಾಯುವಂತೆ ಮಾಡುತ್ತೇನೆ. ಪಾರ್ಶ್ವವಾಯು ಬಡಿದು ನರಳಿ ಸಾಯುವಂತೆ ಮಾಡುತ್ತೇನೆ ಎಂದು ಅಬ್ಬರಿಸುತ್ತಿದೆಯಂತೆ.

ಹತ್ತು ನಿಮಿಷ ಹೀಗೆ ಕೂಗಾಡಿ, ಕಿರುಚಾಡಿ ದೆವ್ವ ಹೊರಟು ಹೋಗುತ್ತದೆ. ರಾಧಿಕಾ ಕುಸಿದು ಬಿದ್ದು ಪ್ರಜ್ಞಾಶೂನ್ಯಳಾಗುತ್ತಾಳೆ. ಐದು ನಿಮಿಷಗಳ ನಂತರ ಕಣ್ಣುಬಿಟ್ಟು ತನಗೇನಾಯಿತು ತಾನೇಕೆ ನೆಲದ ಮೇಲೆ ಮಲಗಿದ್ದೇನೆ ಎಂದು ಕೇಳುತ್ತಾಳೆ. ತಾಯಿಯ ದೆವ್ವ ಬಂದದ್ದಾಗಲೀ, ಅದು ಏನು ಹೇಳಿತೆನ್ನುವುದಾಗಲೀ ಅವಳಿಗೆ ನೆನಪಿರುವುದಿಲ್ಲ. ರಾಧಿಕಾಳ ತಂದೆ ರಾಮಚಂದ್ರಯ್ಯ, ಅನೇಕ ಮಂತ್ರವಾದಿಗಳನ್ನು ಕರೆತಂದು ಭೂತವನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಅನೇಕ ದೇವಸ್ಥಾನಗಳಿಗೆ ರಾಧಿಕಾಳ ಕರೆದೊಯ್ದು ಪೂಜೆ ಹರಕೆ ಸಲ್ಲಿಸಿದ್ದಾರೆ. ಏನೂ ಪ್ರಯೋಜನವಾಗಲಿಲ್ಲ. ತಿಂಗಳಿಗೆ, ಎರಡು ತಿಂಗಳಿಗೊಮ್ಮೆ ರಾಧಿಕಾಳ ಅಮ್ಮನ ದೆವ್ವ ಅವಳ ಮೇಲೆ ಬರುವುದು ನಿಂತಿಲ್ಲ. ರಾಧಿಕಾ ಈಗ ಶಾಲೆಗೆ ಹೋಗುತ್ತಿಲ್ಲ. ಮನೆಯಲ್ಲೇ ಇದ್ದಾಳೆ. ಆಸ್ಪತ್ರೆಯ ಲೇಡಿವಿಸಿಟರ್ ವಿಮಲಮ್ಮನ ಸಲಹೆ ಮೇರೆಗೆ, ರಾಧಿಕಾಳನ್ನು ಮನೋವೈದ್ಯರ ಬಳಿಗೆ ಕರೆತಂದರು.

ವಿವರವಾದ ಸಂದರ್ಶನದಿಂದ, ರಾಧಿಕಾಳನ್ನು ಕಾಡುತ್ತಿದ್ದ ಮಾನಸಿಕ ನಿರಾಶೆ, ದ್ವಂದ್ವಗಳು ಹೊರಬಂದುವು. ರಾಧಿಕಾಳ ಅಮ್ಮ ರಾಧಿಕಾಳಿಗೆಂದೇ ಹಲವು ಒಡವೆಗಳನ್ನು ಇಟ್ಟು ಹೋಗಿದ್ದರು. ಆದರೆ ಮಲತಾಯಿ, ಒಂದೊಂದಾಗಿ ಅವುಗಳನ್ನು ಕರಗಿಸಿ ತನಗೆ ಒಡವೆ ಮಾಡಿಸಿಕೊಂಡಿದ್ದಳು. ಇದನ್ನು ರಾಧಿಕಾ ತಂದೆಗೆ ಹೇಳಿದಾಗ, ಅವರು ಹೋಗಲಿ ಬಿಡು, ನಿನ್ನ ಮದುವೆಯಾಗುವ ಸಮಯಕ್ಕೆ ಹೊಸ ಒಡವೆಗಳನ್ನು ಮಾಡಿಸಿಕೊಡುತ್ತೇನೆ ಎಂದು ಸಮಾಧಾನ ಹೇಳಿದ್ದರು.

ಕಳೆದ ವರ್ಷ ರಾಧಿಕಾಳ ತಾಯಿಗೆ ಅವಳ ತೌರಿನವರು ಕೊಟ್ಟಿದ್ದ ಮನೆಯನ್ನು ಮಾರಾಟ ಮಾಡಲು ರಾಧಿಕಾಳ ತಂದೆ ನಿರ್ಧರಿಸಿದ್ದರು. ನನ್ನ ತೌರುಮನೆಯವರು ಕೊಟ್ಟ ಮನೆ, ತನ್ನ ಮಗಳಿಗೇ ಸಲ್ಲಬೇಕು ಎಂದು ಸಾಯುವಾಗ ಹೇಳಿದ್ದರು. ಗಂಡನಿಂದ ಭಾಷೆ ತೆಗೆದು ಕೊಂಡಿದ್ದರು. ರಾಧಿಕಾಳ ಮಲತಾಯಿ, ಆ ಹಳೇ ಮನೆ ಮಾರಿ, ಒಳ್ಳೆಯ ಬೆಲೆಗೆ ಹೋಗುತ್ತದೆ, ಹೊಸ ಮನೆ ಕಟ್ಟಿ ಎಂದು ಗಂಡನ ಮೇಲೆ ಅತಿಯಾದ ಒತ್ತಡ ತಂದಿದ್ದಳು. ರಾಧಿಕಾ ಮಾತ್ರ ‘ಬೇಡ ಅಪ್ಪ ಇದು ಅಮ್ಮನ ನೆನಪಾಗಿ ಇರಲಿ. ಮಾರಬೇಡ ಎಂದಿದ್ದಳು. ಆದರೆ ರಾಧಿಕಾಳ ತಂದೆ, ಎರಡನೆಯ ಹೆಂಡತಿಯ ಒತ್ತಾಯಕ್ಕೆ ಮಣಿದು, ಮಾರಾಟ ಮಾಡಲು ಅಡ್ವಾನ್ಸ್ ತೆಗೆದುಕೊಂಡರು. ರಾಧಿಕಾ ಪ್ರತಿಭಟಿಸಿ, ಊಟ ಬಿಟ್ಟಳು. ತಂದೆಯೊಂದಿಗೆ ಮಾತನಾಡುವುದನ್ನು ಬಿಟ್ಟಳು. ಮಲತಾಯಿ ಬಂದವರೊಂದಿಗೆಲ್ಲ ರಾಧಿಕಾ ಹಠಮಾರಿ, ಕೆಟ್ಟ ಮನಸ್ಸಿನ ಹುಡುಗಿ. ಕುಟುಂಬದ ಆಭ್ಯುದಯದ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲದಿರುವವಳು ಎಂದು ಹೇಳತೊಡಗಿದಳು. ಅವಳ ಬೇಕು ಬೇಡಗಳನ್ನು ಕಡೆಗಣಿಸತೊಡಗಿದಳು. ಪ್ರತಿದಿನ ಏನಾದರೂ ಒಂದು ದೂರು ಹೇಳಿ, ರಾಧಿಕಾ ಅಪ್ಪನಿಂದ ಬೈಸಿಕೊಳ್ಳುತ್ತಿದ್ದಳು. ರೋಸಿಹೋದ ರಾಧಿಕಾಳ ಸುಪ್ತ ಮನಸ್ಸು ಅಮ್ಮನ ದೆವ್ವ ತನ್ನ ಮೇಲೆ ಬಂದಂತೆ ಆಡಲು ನಿರ್ಧರಿಸಿತು. ರಾಧಿಕಾಳ ಮೇಲೆ ಅವಳಮ್ಮನ ದೆವ್ವ ಬರುವುದು, ಮನೆ ಮಾರದಂತೆ ಎಚ್ಚರಿಕೆ ನೀಡುವುದನ್ನು ಕೇಳಿದ, ಆ ಮನೆಯನ್ನು ಕೊಂಡುಕೊಳ್ಳಲು ಅಡ್ವಾನ್ಸ್ ಕೊಟ್ಟಿದ್ದ ವ್ಯಕ್ತಿ ಬಂದು ಆ ಮನೆಯನ್ನು ತಾನು ಕೊಂಡುಕೊಳ್ಳುವುದಿಲ್ಲ ಎಂದು ಹೇಳಿಹೋದ. ಮನೆ ಮಾರಾಟ ನೆನೆಗುದಿಗೆ ಬಿತ್ತು!

ಹೀಗೆ ದೆವ್ವ ಬರುವ ಪ್ರಕ್ರಿಯೆಯಿಂದ ರಾಧಿಕ ತನ್ನ ಅದುಮಿಟ್ಟ ಆಕ್ರೋಶ, ದುಃಖವನ್ನು ಹೊರಹಾಕಿದ್ದಳು. ಮನೆಮಾರಾಟವಾಗುವುದನ್ನು ತಡೆದಿದ್ದಳು. ತಂದೆ ಮತ್ತು ಮಲತಾಯಿಯ ಕೆಲಸಗಳನ್ನು ಜಗಜ್ಜಾಹೀರು ಮಾಡಿದ್ದಳು.

ಹೀಗೆ ಮೈಮೇಲೆ ದೆವ್ವ ಬರುವ ಪ್ರಕರಣಗಳಲ್ಲಿ ವ್ಯಕ್ತಿ ತನ್ನ ಮನದಾಳದ ಭಾವನೆ, ಅನಿಸಿಕೆ, ಅಭಿಪ್ರಾಯಗಳನ್ನು ಪ್ರಕಟಿಸುತ್ತಾನೆ. ಇತರರ ಗಮನವನ್ನು ಸೆಳೆಯುತ್ತಾನೆ. ಆದರೆ ಆತನ ಜಾಗೃತ ಮನಸ್ಸಿಗೆ ತಾನೇನು ಮಾಡುತ್ತಿದ್ದೇನೆ ಎಂಬುದರ ಅರಿವಿರುವುದಿಲ್ಲ. ಆಪ್ತ ಸಲಹೆ ಸಮಾಧಾನ. ಪರಿಸರದಲ್ಲಿ ಸೂಕ್ತ ಬದಲಾವಣೆಗಳಿಂದ ಈ ವರ್ತನೆ ನಿಲ್ಲುತ್ತದೆ. ವಾಸ್ತವದಲ್ಲಿ ದೆವ್ವ, ಭೂತಗಳು ಇಲ್ಲ, ಅವೆಲ್ಲ ನಮ್ಮ ಕಲ್ಪನೆ ಅಷ್ಟೆ. ಸತ್ತ ಮೇಲೆ ಏನೂ ಉಳಿಯದು.

ಸ್ಕಿಜೋಫ್ರಿನಿಯಾ

“ಈತ ನನ್ನ ಮಗ ಗಂಗಾಧರ. ಪಿಯು ಮೊದಲನೇ ವರ್ಷದಲ್ಲಿ ಎರಡೇ ತಿಂಗಳು ಕಾಲೇಜಿಗೆ ಹೋಗಿದ್ದು. ಒಂದೂವರೆ ವರ್ಷದಿಂದ ಮನೆಯಲ್ಲೇ ಇದ್ದಾನೆ. ನನ್ನನ್ನು ಚರ್ಚ್‌ನವರು ಕರೆಯುತ್ತಿದ್ದಾರೆ. ಅವರ ಧರ್ಮಕ್ಕೆ ಸೇರು ಎಂದು ಕಿವಿಯಲ್ಲಿ ಹೇಳುತ್ತಿದ್ದಾರೆ ಎನ್ನತೊಡಗಿದ. ನಮ್ಮ ಮನೆಯ ಹತ್ತಿರ ಇರುವ ಚರ್ಚ್‌ಗೆ ಹೋಗತೊಡಗಿದ. ಅಲ್ಲಿ ಪ್ರಾರ್ಥನೆಯಲ್ಲಿ ಭಾಗವಹಿಸತೊಡಗಿದ. ಅಲ್ಲಿಯ ಫಾದರ್ ಅವರನ್ನು ಕಂಡು, ‘ನೀವೇ ನನಗೆ ಕ್ರೈಸ್ಥ ಧರ್ಮಕ್ಕೆ ಸೇರಲು ಹೇಳುತ್ತಿದ್ದೀರಿ. ಸೇರಿಸಿಕೊಳಿ ಎಂದ. ನನಗೆ ಆ ಫಾದರ್ ಗೊತ್ತು. ಅವರು ನನ್ನನ್ನು ಕರೆದು, ನಿನ್ನ ಮಗ ಈ ರೀತಿ ಹೇಳುತ್ತಿದ್ದಾನಮ್ಮ. ನಾನು ಯಾವೊತ್ತು ಅವನಿಗೆ ಈ ರೀತಿ ಹೇಳಿಲ್ಲ. ಏನು ಮಾಡುತ್ತೀರಿ ಎಂದರು. ನಾವೆಲ್ಲ ಸೇರಿ ಬುದ್ಧಿ ಹೇಳಿದ ಮೇಲೆ ಚರ್ಚಿಗೆ ಹೋಗುವುದನ್ನು ನಿಲ್ಲಿಸಿದ. ಒಂದು ದಿನ ನಾನು ಮನೆ ನಲ್ಲಿಯಲ್ಲಿ ನೀರು ಬರಲಿಲ್ಲ. ಬೀದಿ ನಲ್ಲಿಯಿಂದ ನೀರು ಕುಡಿಯಲು ಹೋದೆ. ವಯಸ್ಸಾದ ಮುದುಕರೊಬ್ಬರು ನೀರು ಹಿಡಿಯಲು ಬಂದರು. ನಾನು ಅವರಿಗೆ ನೀರು ಕೊಟ್ಟುಬಿಟ್ಟೆ. ಅದನ್ನು ಕಂಡ ಗಂಗಾಧರ, ನನ್ನ ಗಂಡನ ಹತ್ತಿರ ಹೋಗಿ, ಅಮ್ಮನ ಕ್ಯಾರೆಕ್ಟರ್ ಸರಿ ಇಲ್ಲ, ನಾನೆ ಕಣ್ಣಾರೆ ಕಂಡೆ ಎಂದ. ನನಗೂ ಮತ್ತು ನನ್ನ ಗಂಡನಿಗೂ ಮೊದಲಿನಿಂದಲೂ ಮನಸ್ತಾಪ. ಜಗಳ ನಡೆಯುತ್ತಲೇ ಇತ್ತು. ಈ ನೆಪಮಾಡಿಕೊಂಡು ‘ಗಂಗಾಧರನೇ ನಿನ್ನ ಶೀಲ ಸರಿಯಿಲ್ಲ ಎನ್ನುತ್ತಿದ್ದಾನೆ. ನಿನ್ನೊಂದಿಗೆ ನಾನಿರುವುದಿಲ್ಲ ಎಂದು ಹೋಗೇಬಿಟ್ಟರು. ಎರಡು ವರ್ಷಗಳಾದವು. ಇತ್ತ ತಲೆಹಾಕಿಲ್ಲ. ಗಂಗಾಧರ ದಿನದಿನಕ್ಕೆ ವಿಚಿತ್ರವಾಗಿ ವರ್ತಿಸತೊಡಗಿದ. ‘ಯಾರೋ ನಮ್ಮ ಮೇಲೆ ಕಣ್ಣಿಟ್ಟಿದ್ದಾರೆ. ಟೆಲಿಸ್ಕೋಪ್‌ನಿಂದ ನನ್ನನ್ನು ಗಮನಿಸುತ್ತಿದ್ದಾರೆ ನಾನು ಮಾಡುವುದೆಲ್ಲ ಅವರಿಗೆ  ಗೊತ್ತಾಗುತ್ತಿದೆ ಎನ್ನತೊಡಗಿದ. ‘ಯಾರು ನಿನ್ನನ್ನು ಗಮನಿಸುತ್ತಿದ್ದಾರೆ. ನಿನ್ನನ್ನು ಗಮನಿಸಿ ಅವರಿಗೇನು ಪ್ರಯೋಜನ ಎಂದರೆ ‘ನನಗೂ ಗೊತ್ತಿಲ್ಲ ಆದರೆ, ಅವರಿಗೆ ನನ್ನ ಯೋಚನೆಗಳೆಲ್ಲವೂ ಗೊತ್ತಾಗುತ್ತಿದೆ. ನಾನು ಮಾಡುವ ಪ್ರತಿಯೊಂದು ಕೆಲಸ, ಚಟುವಟಕೆಯೂ ಗೊತ್ತಾಗುತ್ತಿದೆ ಎನ್ನತೊಡಗಿದ. ಹಾಗೇ ಯಾವಾಗಲೂ ಮನೆಯ ಎಲ್ಲ ಕಿಟಕಿಗಳು, ಬಾಗಿಲುಗಳನ್ನು ಮುಚ್ಚತೊಡಗಿದ. ರೂಮಿನಲ್ಲಿ ಕತ್ತಲೆಯಲ್ಲಿ ಕುಳಿತಿರುತ್ತಾನೆ. ಸ್ನಾನ ಮಾಡಲು, ಊಟ ಮಾಡಲು, ಬಟ್ಟೆ ಬದಲಾಯಿಸಲು, ನಾನು ಒತ್ತಾಯ ಮಾಡಬೇಕು. ಮನೆಗೆ ನೆಂಟರಿಷ್ಟರು ಬಂದರೆ ಅವರೊಂದಿಗೆ ಮಾತನಾಡುವುದಿಲ್ಲ ಯಾವುದೇ ಮದುವೆ, ನಾಮಕರಣ ಸಮಾರಂಭಗಳಿಗೆ ಬರುವುದಿಲ್ಲ. ಯಾವ ಕೆಲಸವನ್ನೂ ಮಾಡುವುದಿಲ್ಲ. ಬಲವಂತ ಮಾಡಿದರೆ, ಸಿಟ್ಟಿಗೇಳುತ್ತಾನೆ. ಇವನಿಗೇನಾಗಿದೆ ಸರ್ ಎಂದರು ಸೀತಾಲಕ್ಷ್ಮೀ.

‘೧೮ ವರ್ಷವಾಗಿದೆ. ಮೊದಲನೇ ಬಿ‌ಎಸ್ಸಿ ಓದುತ್ತಿದ್ದಾಳೆ. ಎರಡು ತಿಂಗಳ ಹಿಂದೆ ರಮ್ಯಳಿಗೆ ನಿಶ್ಚಿತಾರ್ಥವಾಯಿತು. ಮದುವೆ ಬೇಡ ಎನ್ನುತ್ತಿದ್ದವಳು, ಹುಡುಗನನ್ನು ನೋಡಿ, ಅವನೊಂದಿಗೆ ಮಾತನಾಡಿದ ಮೇಲೆ, ಮದುವೆಯಾಗಲು ಒಪ್ಪಿದಳು. ಎಲ್ಲರಿಗೂ ಸಂತೋಷವಾಯಿತು. ಆದರೆ ಒಂದೇ ವಾರದಲ್ಲಿ, ‘ನನಗೆ ಮದುವೆ ಬೇಡ, ಅವನನ್ನು ಮದುವೆಯಾಗುವುದಿಲ್ಲ ಎನ್ನತೊಡಗಿದ್ದಾಳೆ. ‘ಏಕಮ್ಮಾ, ಏನಾಯಿತು ಎಂದರೆ ‘ಏನೂ ಆಗಿಲ್ಲ, ಏನೂ ಕಾರಣವಿಲ್ಲ, ನನಗೆ ಮದುವೆ ಬೇಡ. ಮದುವೆಯಾದರೆ ನಾನು ಸತ್ತು ಹೋಗುತ್ತೇನೆ, ಅವನಿಗೆ ಹುಚ್ಚು ಹಿಡಿಯುತ್ತದೆ ಎನ್ನುತ್ತಾಳೆ. ‘ಈ ರೀತಿ ಕೆಟ್ಟ ಮಾತೇಕೆ ಆಡುತ್ತೀಯೆ, ನೀನು ಸಾಯಲು, ಅವನಿಗೂ ಹುಚ್ಚು ಹಿಡಿಯಲು ಕಾರಣವೇನಿದೆ ಯಾರು ನಿನಗೆ ಇದನ್ನು ಹೇಳಿದರು ಎಂದರೆ, ‘ಯಾರೂ ನನಗೆ ಹೇಳಿಲ್ಲ. ನನಗೇ ಗೊತ್ತಾಗಿದೆ ಎನ್ನುತ್ತಾಳೆ. ಕಾಲೇಜಿಗೆ ಹೋಗುತ್ತಿಲ್ಲ. ‘ಏಕೆ ಹೋಗಬೇಕು, ಓದಿ ಏನು ಪ್ರಯೋಜನಎನ್ನುತ್ತಾಳೆ. ಬೆಳಗ್ಗಿನಿಂದ ರಾತ್ರಿಯವರೆಗೆ ಹಾಲಿನಲ್ಲಿ ರೂಮಿನಲ್ಲಿ ಸುಮ್ಮನೆ ಕೂತಿರುತ್ತಾಳೆ. ತನ್ನಷ್ಟಕ್ಕೇ ತಾನೇ ಮಾತಾಡಿಕೊಳ್ಳುತ್ತಾಳೆ. ನಗುತ್ತಾಳೆ. ಹಾವಭಾವಗಳನ್ನು ತೋರಿಸುತ್ತಾಳೆ. ಯಾರೊಂದಿಗೋ ಸಂಭಾಷಣೆ ಮಾಡಿದಂತೆ ವರ್ತಿಸುತ್ತಾಳೆ. ಯಾವುದೋ ಜೋಕ್ ಕೇಳಿದಂತೆ ಗಟ್ಟಿಯಾಗಿ ನಗುತ್ತಾಳೆ. ಇದ್ದಕ್ಕಿದ್ದಂತೆ ಅಳುತ್ತಾಳೆ. ಪ್ರಪಂಚ ಹಾಳಾಗಿ ಹೋಗಿದೆ. ಯಾರೂ ಸರಿಯಿಲ್ಲ ಎನ್ನುತ್ತಾಳೆ. ತಲೆ ಬಾಚಿಕೊಳ್ಳುವುದಿಲ್ಲ. ಅಲಂಕಾರ ಮಾಡಿಕೊಳ್ಳುವುದಿಲ್ಲ. ಬೇರೆಯವರು ಬಂದು ಪಕ್ಕದಲ್ಲಿ ಕುಳಿತರೂ ಸ್ಪಂದಿಸುವುದಿಲ್ಲ. ಪರಿಚಿತರು ಬಂದರೂ ಸುಮನಿದ್ದು, ‘ ಯಾರು ನೀವು, ಇಲ್ಲೇಕೆ ಕುಳಿತಿದ್ದೀರಿ, ನಿಮಗೆ ಕೆಲಸವಿಲ್ಲವೇ, ನಾನು ಬಿಸಿಯಾಗಿದ್ದೇನೆ, ಹೋಗಿ ನಿಮ್ಮ ಕೆಲಸ ಕಾರ್ಯ ನೋಡಿಕೊಳ್ಳಿ ಎನ್ನುತ್ತಾಳೆ ಇಷ್ಟಬಂದಾಗ ಊಟ ಮಾಡುತ್ತಾಳೆ. ನಿದ್ದೆ ಮಾಡುವುದಿಲ್ಲ, ಹಾಸಿಗೆಯ ಮೇಲೆ ಕೂತಿರುತ್ತಾಳೆ. ಇಲ್ಲವೆ ಕಣ್ಣುಬಿಟ್ಟುಕೊಂಡೆಲ್ಲ ಮಲಗಿರುತ್ತಾಳೆ. ಇದ್ದಕ್ಕಿದ್ದಂತೆ ಎದ್ದು ಪುಸ್ತಕ ತೆಗೆದು ಬರೆಯುತ್ತಾಳೆ. ನೋಡಿ ಸರ್, ಸುಮ್ಮನೆ ಪದಗಳು, ಅರ್ಧಂಬರ್ಧ ವಾಕ್ಯಗಳು ಏನೂ ಅರ್ಥವಿಲ್ಲ. ‘ನಾನೇಕೆ ಹುಟ್ಟಿದೆ, ಬಾಂಬು ಹಾಕಿದರೆ ಎಲ್ಲರೂ ಫನಾ. ಸನ್ಯಾಸಿಗಳು ನಿಜವಾದ ಸನ್ಯಾಸಿಗಳಲ್ಲ. ಬಡವರಿಗೆ ಬುದ್ದಿ ಇಲ್ಲವೇ? ಕಾರ್ಲ್‌ಮಾರ್ಕ್ಸ್, ಕಾರಂಜಿಕೆರೆ, ಕಪಿಲವಸ್ತು, ಕಾಗೆ, ಕಪ್ಪು, ಕಸ್ತೂರಿ, ಮಹಿಳೆಯರಿಗೆ ಹೆಚ್ಚು ಅಧಿಕಾರ ಬೇಕಿಲ್ಲ. ಕೊಡಿ ಎಂದರೆ ಕೊಟ್ಟು ಬಿಡಬೇಕು. ಲಾಟರಿ ಟಿಕೆಟ್ ತೆಗೆದುಕೊಳ್ಳುವವರೆಲ್ಲ ಮೂರ್ಖರು. ಮೋಸ ಮಾಡುವರೇ ಬುದ್ಧಿ ಜೀವಿಗಳು. ಹೀಗೆ ಒಂದಕ್ಕೊಂದು ಸಂಬಂಧವೇ ಇರುವುದಿಲ್ಲ. ಮಾಟಮಂತ್ರದ ಪರಿಣಾಮ ಎಂದು ಜನ ಹೇಳುತ್ತಾರೆ. ಪೂಜೆಮಂತ್ರ ತಂತ್ರ ಎಲ್ಲ ಆಯಿತು ಸರ್. ಏನೂ ಪ್ರಯೋಜನವಿಲ್ಲ. ಮದುವೆ ಯಾವಾಗ ಇಟ್ಟುಕೊಳ್ಳುತ್ತೀರಿ ಎಂದು ಹುಡುಗನ ಕಡೆಯವರು ಕೇಳುತ್ತಿದ್ದಾರೆ, ಅವರಿಗೇನು ಉತ್ತರ ಕೊಡುವುದು ಗೊತ್ತಾಗುತ್ತಿಲ್ಲ, ಇವಳಿಗೇನಾಗಿದೆ ಸರ್, ಇದೇನು ಹುಚ್ಚು ಕಾಯಿಲೆಯೇ, ಮನೋದೌರ್ಬಲ್ಯವೇ ಎಂದರು ಆಕೆಯ ದೊಡ್ಡಪ್ಪ.

‘ಇವನು ನನ್ನ ಮಗ ಬಾಲಾಜಿ ಎರಡನೇ ಪಿಯುಸಿಯಲ್ಲಿ, ನಮ್ಮೆಲ್ಲರ ನಿರೀಕ್ಷೆಯನ್ನು ಮಣ್ಣುಪಾಲು ಮಾಡಿ ಫೇಲಾದ. ಎಸ್ಸೆಸ್ಸೆಲ್ಸಿಯಲ್ಲಿ ೮೬% ಮಾರ್ಕ್ಸ್ ಸಾರ್. ಒಳ್ಳೆಯ ಬುದ್ಧಿವಂತ ಹುಡುಗ. ಈಗ ಅವನಿರುವ ಸ್ಥಿತಿಯನ್ನು ಕಂಡರೆ ಮರುಕವಾಗುತ್ತದೆ. ಏನೇನೋ ವಿಚಿತ್ರ ಮಾತನಾಡುತ್ತಾನೆ. ಅವನು ಹೇಳುವ ವಿಚಾರ/ವಿಷಯಗಳು ಅಸಂಭವ, ಅಸಾಧ್ಯ ಎನಿಸುತ್ತದೆ. ಯಾರೋ ಲೇಸರ್ ಕಿರಣಗಳನ್ನು ಬಿಟ್ಟು ಅವನ ಮಿದುಳು, ಹೃದಯ, ಕಿಡ್ನಿಗಳನ್ನೆಲ್ಲಾ ನಾಶ ಮಾಡಿಬಿಟ್ಟಿದ್ದಾರಂತೆ. ಅವನ ರಕ್ತದೊಳಕ್ಕೆ ಆರ್ಸೆನಿಕ್ ಕಣಗಳನ್ನು ಬಿಟ್ಟಿದ್ದಾರಂತೆ. ದೇಹದ ಮೂಲೆಮೂಲೆಯಲ್ಲಿ, ಈ ಕಣಗಳು, ರಕ್ತನಾಳಗಳನ್ನು ಚುಚ್ಚುವುದು ಅವನಿಗೆ ಗೊತ್ತಾಗುತ್ತದಂತೆ. ಅವನು ತಿಂದ ಆಹಾರ ಪದಾರ್ಥಗಳೆಲ್ಲ, ಕರುಳಿಗೆ ಹೋಗದೆ, ಮೂಳೆ ಮಾಂಸಖಂಡಗಳಲ್ಲಿ ಶೇಖರವಾಗುತ್ತದಂತೆ. ಅವನಿಗೆ ಮರಗಿಡ, ಪಕ್ಷಿಪ್ರಾಣಿಗಳು ಮಾತಾಡುವುದು ಕೇಳಿಸುತ್ತದೆಯಂತೆ. ಅವನ ಹೊಟ್ಟೆಯೊಳಗೆ ಮೂರು ಆತ್ಮಗಳಿವೆಯಂತೆ. ಅವು ತಮ್ಮತಮ್ಮಲ್ಲೇ ಪ್ರಪಂಚದ ಎಲ್ಲಾ ವಿಚಾರಗಳನ್ನು ಮಾತಾಡಿಕೊಳ್ಳುವುದು ಇವನಿಗೆ ಕೇಳಿಸುತ್ತಿದೆಯಂತೆ ಇತ್ಯಾದಿ ಇತ್ಯಾದಿ. ಬೆಳಿಗ್ಗೆ ಮನೆಬಿಟ್ಟು ಹೊರಟರೆ ಊರೆಲ್ಲ ಸುತ್ತಿಕೊಂಡು ರಾತ್ರಿ ಒಂಭತ್ತಕ್ಕೆ ಬರುತ್ತಾನೆ. ಊಟ, ನಿದ್ರೆ, ಸ್ವಚ್ಛತೆ ಬಗ್ಗೆ ಗಮನವಿಲ್ಲ. ಇದು ಯಾವ ರೀತಿಯ ಹುಚ್ಚು, ಇದು ವಾಸಿಯಾಗುತ್ತದೆಯೇ ಎಂದರು ಕೇಶವರಾವ್.

ಗಂಗಾಧರ, ರಮ್ಯ, ಬಾಲಾಜಿ ಇವರೆಲ್ಲರೂ ಒಂದೇ ಕಾಯಿಲೆ ಸ್ಕಿಜೋಫ್ರಿನಿಯಾ. ಸಾಮಾನ್ಯವಾಗಿ ೧೫ನೇ ವಯಸ್ಸಿನಿಂದ ೩೦ನೇ ವಯಸ್ಸಿನವರೆಗೆ ಈ ಕಾಯಿಲೆ ಪ್ರಾರಂಭವಾಗುತ್ತದೆ. ಥಟ್ಟನೆ ಇಲ್ಲವೇ ಬಹುನಿಧಾನವಾಗಿ ವ್ಯಕ್ತಿಯ ಮಾತು, ಆಲೋಚನೆಗಳು ವರ್ತನೆ, ಭಾವನೆಗಳು, ಕ್ರಿಯೆ, ಪ್ರತಿಕ್ರಿಯೆಗಳು ಅಸಂಬದ್ದವಾಗುತ್ತವೆ. ವಿಚಿತ್ರವಾಗಿರುತ್ತದೆ. ಹಲವು ರೀತಿಯ ಭ್ರಮೆಗಳುಂಟಾಗುತ್ತವೆ. ವ್ಯಕ್ತಿ ತನ್ನ ಆಹಾರ ಸೇವನೆ, ನಿದ್ರೆ, ದೈಹಿಕ ಸ್ವಚ್ಚತೆ, ಕೆಲಸ-ಕರ್ತವ್ಯಗಳನ್ನು ನಿರ್ಲಕ್ಷಿಸುತ್ತಾನೆ. ಕುಟುಂಬಕ್ಕೆ, ಸಮಾಜಕ್ಕೆ ಹೊರೆಯಾಗುತ್ತಾನೆ. ಸ್ಕಿಜೋಫ್ರಿನಿಯಾದ ರೋಗಲಕ್ಷಣಗಳು:

 • ವ್ಯಕ್ತಿ ಮಂಕಾಗಬಹುದು ಅಥವಾ ಅತಿ ಚಟುವಟಿಕೆ ತೋರಿಸಬಹುದು.
 • ಮಾತು ಕಡಿಮೆ ಅಥವಾ ಜಾಸ್ತಿ, ಅಸಂಬದ್ಧ, ಅರ್ಥಹೀನ ಮಾತುಗಳನ್ನಾಡ ಬಹುದು.
 • ವರ್ತನೆ ಅಸಂಬದ್ಧ, ಅಸಹಜ, ಸಮಯ-ಸಂದರ್ಭಕ್ಕೆ ಹೊಂದುವುದಿಲ್ಲ. ಇತರರಿಗೆ ಮುಜುಗರ, ತೊಂದರೆದಾಯಕವಾಗಬಹುದು.
 • ಆಕ್ರಮಣಶೀಲತೆ, ಹಿಂಸಾಚಾರಕ್ಕೆ ಇಳಿಯಬಹುದು.
 • ಆತ್ಮಹತ್ಯೆಗೆ ಪ್ರಯತ್ನಿಸಬಹುದು.
 • ಭ್ರಮೆಗಳು, ತಪ್ಪು ನಂಬಿಕೆಗಳು, ಅವಾಸ್ತವಿಕ ನಂಬಿಕೆಗಳು ಯಾರೋ ಮಾತಾಡಿದಂತೆ ಕೇಳಿಸುವುದು, ಇತರರ ಕಣ್ಣಿಗೆ ಕಾಣದ ವಸ್ತು, ಜನ, ವಿಶೇಷಗಳು ತನಗೆ ಕಾಣುತ್ತವೆ ಎನ್ನುವುದು. ಚಿತ್ರ, ವಿಚಿತ್ರವಾದ ಭ್ರಮಾತ್ಮಕ ನಂಬಿಕೆಗಳು, ಸಂಶಯ, ಅನುಮಾನಗಳು.
 • ನಿದ್ರೆ, ಆಹಾರ ಸೇವನೆ, ಲೈಂಗಿಕ ಚಟುವಟಿಕೆ, ಮಲಮೂತ್ರ ವಿಸರ್ಜನೆಯ ಏರಪೇರುಗಳು.
 • ಯಾವುದೇ ಉಪಯುಕ್ತ ಕೆಲಸ ಮಾಡದೆ, ಸುಮ್ಮನೆ ಕಾಲ ಕಳೆಯುವುದು, ಊರೆಲ್ಲ ಅಲೆದಾಡುವುದು ಇತ್ಯಾದಿ.

ಮಿದುಳಿನ ನರ ಕೋಶಗಳಲ್ಲಿ ಡೋಪಮಿನ್ ನರವಾಹಕ ವ್ಯವಸ್ಥೆ ಅತಿ ಸಂವೇದನಾಶೀಲವಾಗಿರುವುದೇ ಈ ಕಾಯಿಲೆಗೆ ಕಾರಣ ಎನ್ನಲಾಗಿದೆ. ಶೇಕಡಾ ೧೦ ರಿಂದ ೧೪ ಪ್ರಕರಣಗಳಲ್ಲಿ ಕಾಯಿಲೆ ಅನುವಂಶೀಯವಾಗಿ ಬರಬಹುದು. ದೀರ್ಘಕಾಲ ಉಳಿಯುವ ಸ್ಕಿಜೊಫ್ರಿನಿಯಾ ಕಾಯಿಲೆಯವರಲ್ಲಿ ಮಿದುಳು ಸವೆದಿರುತ್ತದೆ. ಮಿದುಳಿನ ವಸ್ತು ಕಡಿಮೆಯಾಗಿರುತ್ತದೆ.

ಚಿಕಿತ್ಸೆ, ಔಷಧಿಗಳು, ವಿದ್ಯುತ್ ಕಂಪನ ಚಿಕಿತ್ಸೆ, ಕೆಲಸ ಕಾರ್ಯ ಮಾಡಲು ತರಬೇತಿ, ದೀರ್ಘಕಾಲ ನಡೆಯಬೇಕು.

ಆದ್ದರಿಂದ ಹದಿಹರೆಯದವರಲ್ಲಿ ಕಾಣಿಸಿಕೊಳ್ಳುವ ಮಾನಸಿಕ ಅಸ್ವಸ್ಥತೆಗಳನ್ನು ಆದಷ್ಟು ಗುರುತಿಸಬೇಕು. ಸಂಕೋಚ ಪಟ್ಟುಕೊಳ್ಳದೆ ಮನೋವೈದ್ಯರನ್ನು ಕಾಣಬೇಕು. ಅವರು ಸೂಚಿಸುವ ಔಷದೋಪಚಾರವನ್ನು ಅವರು ಎಷ್ಟು ದಿನಗಳ ಕಾಲ ಕೊಡಬೇಕೆಂದು ಹೇಳುತ್ತಾರೋ ಅಷ್ಟು ದಿನಗಳು ಕ್ರಮವಾಗಿ ಕೊಡಬೇಕು. ಅಸ್ವಸ್ಥ ವ್ಯಕ್ತಿಯ ಬೇಕು ಬೇಡಗಳನ್ನು ಗಮನಿಸಬೇಕು. ಪ್ರೀತಿ ಆಸರೆಗಳಿಂದ ಅಸ್ವಸ್ಥತೆ ಬೇಗ ವಾಸಿಯಾಗುತ್ತದೆ.