(ಜನನ: ೧೯೨೨) (ಕೃತಕ ವಂಶವಾಹಿ ಸಂಶೋಧನೆ)

ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರಗಳಲ್ಲಿ ಭಾರೀ ಸಂಶೋಧನೆಗಳನ್ನು ಮಾಡಿ ಜಗತ್ತಿಗೆ ಸುಪರಿಚಿತವಾಗಿರುವ ಹರ್ಗೋವಿಂದ ಖೊರಾನ ಜನವರಿ ೨, ೧೯೨೨ರಲ್ಲಿ ರಾಯಪುರದಲ್ಲಿ ಜನಿಸಿದರು. ರಾಯಪೂರ್ ಈಗ ಪಾಕಿಸ್ತಾನದಲ್ಲಿದೆ. ಲಾಹೋರಿನಲ್ಲಿ ಬಿ.ಎಸ್‌ಸಿ ಮತ್ತು ಎಂ.ಸಿಸಿ ಪದವಿಗಳನ್ನು ಪಡೆದ ತರುವಾಯ ಅವರು ೧೯೫೪ರಲ್ಲಿ ಬ್ರಿಟನ್‌ನಲ್ಲಿರುವ ಲಿವರ್ಪೂಲ್ ವಿಶ್ವವಿದ್ಯಾಲಯಕ್ಕೆ ಹೋದರು. ಅಲ್ಲಿ ಜೈವಿಕ ರಸಾಯನಶಾಸ್ತ್ರದಲ್ಲಿ ಪಿ‌ಎಚ್.ಡಿ ಪದವಿಯನ್ನು ಪಡೆದರು. ಇಂಗ್ಲೆಂಡ್, ಕೆನಡಾ ಮತ್ತು ಅಮೆರಿಕ ದೇಶಗಳ ವಿಶ್ವವಿಖ್ಯಾತ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡಿದರು.

‘ಕೊ‌ಎಂಸೈಮ್ ಎ’ ಎಂಬ ರಾಸಾಯನಿಕ ವಸ್ತುಗಳನ್ನು ತಯಾರು ಮಾಡಿದ್ದು ರಸಾಯನಶಾಸ್ತ್ರದಲ್ಲಿನ ಅವರ ಒಂದು ದೊಡ್ಡ ಸಂಶೋಧನೆ. ಮಾನವ ಶರೀರದಲ್ಲಿ ಕೆಲವು ಕ್ರಿಯೆಗಳಿಗೆ ಅಗತ್ಯವಾದ ಈ ರಾಸಾಯನಿಕ ವಸ್ತುವನ್ನು ಅವರು ಕೆನಡಾದಲ್ಲಿನ ಬ್ರಿಟಿಷ್ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿದ್ದಾಗ ತಯಾರಿಸಿದರು.

ಜೀವಗಳ ಉತ್ಪತ್ತಿಯಲ್ಲಿ ಬಹುಮುಖ್ಯವಾದ ಪಾತ್ರವಹಿಸುವ ಕೃತಕ ವಂಶವಾಹಿಯನ್ನು (ಜೀನ್) ಹರಗೋವಿಂದ ಖೊರಾನ ಮತ್ತು ಅವರ ತಂಡದವರು ಲ್ಯಾಬೋರೇಟರಿಯಲ್ಲಿ ತಯಾರು ಮಾಡಿ ಇಡೀ ಜಗತ್ತಿನ ಶ್ಲಾಘನೆಗೆ ಪಾತ್ರರಾದರು. ಇಂಥ ವಂಶವಾಹಿ ವಸ್ತು ಮನುಷ್ಯರ ಮತ್ತು ಪ್ರಾಣಿಗಳ ಕರುಳಿನಲ್ಲಿ ಇರುತ್ತದೆ. ಅವರು ಕೃತಕ ವಂಶವಾಹಿಯನ್ನು ಕರುಳಿನಲ್ಲಿರುವ ‘ಎಶ್ಚೆರೀಚಿಯ ಕೋಲಿ’ ಎಂಬ ಬ್ಯಾಕ್ಟೀರಿಯಕ್ಕೆ ಸೇರಿಸಿದರು. ಅದು ಸಹಜವಾದ ವಂಶವಾಹಿಯಂತೇ ಕಾರ್ಯ ಮಾಡಿತು. ವಂಶವಾಹಿ ದೋಷಗಳಿಗೆ ಕಾರಣಗಳೇನು ಮತ್ತು ಕ್ಯಾನ್ಸರ್ ಹೇಗೆ ಉಂಟಾಗುತ್ತದೆ ಎಂಬ ಪ್ರಶ್ನೆಗಳಿಗೆ ಉತ್ತರ ನೀಡಲು ಅವರ ಅಧ್ಯಯನಗಳು ಸಹಾಯಕವಾಗಬಹುದುದೆಂದು ವಿಜ್ಞಾನಿಗಳ ಆಶಯ.

೧೯೬೮ರಲ್ಲಿ ಅವರು ಮಾರ್ಷಲ್ ಡಬ್ಲ್ಯೂ. ನಿರೆನ್‌ಬರ್ಗ್ ಮತ್ತು ರಾಬರ್ಟ್ ಡಬ್ಲ್ಯೂ. ಹಾಲಿ ಅವರುಗಳ ಜತೆ ಔಷಧ ವಿಜ್ಞಾನಕ್ಕೋಸ್ಕರವಾದ ಮೊಬೆಲ್ ಪಾರಿತೋಷಕವನ್ನು ಪಡೆದರು.