೧೯೦೬ನೆಯ ಸೆಪ್ಟಂಬರ್‌!

ಕರ್ನಾಟಕದಲ್ಲಿ ದಾವಣಗೆರೆ ನಗರದ ಇತಿಹಾಸದಲ್ಲೊಂದು ನೂತನ ಅಧ್ಯಾಯ.

ಅಂದು ನಾಲ್ಕು ಪುಟಗಳ ಉಜ್ವಲ ರಾಷ್ಟ್ರೀಯ ವಾರಪತ್ರಿಕೆಯೊಂದು ಬೆಳಕಿಗೆ ಬಂತು.

ದೇಶಭಕ್ತಿಯ ಕಿಡಿಗಳನ್ನು ಕನ್ನಡ ನಾಡಿನ ಮೂಲೆ ಮೂಲೆಗೂ ಪ್ರಸಾರ ಮಾಡುವುದೇ ಅದರ ಉನ್ನತ ಉದ್ದೇಶ. ಕನ್ನಡಿಗರಲ್ಲಿ ತನ್ನತನದ ಅರಿವು ಮೂಡಿಸುವುದಕ್ಕೆ ಅದು ಮೀಸಲಾಗಿತ್ತು. ಆ ವಾರಪತ್ರಿಕೆ ಹೆಸರು “ಧನುರ್ಧಾರಿ”. ಈ ಪತ್ರಿಕೆಯ ಸಮರ್ಥ ಸಂಪಾದಕರೇ ಹರ್ಡೇಕರ್ ಮಂಜಪ್ಪ.

“ಧನುರ್ಧಾರಿ” ಪತ್ರಿಕೆಯ ಮಂಜಪ್ಪನವರಿಗೆ ಹೊಟ್ಟೆ ಹೊರೆಯುವ ಜೀವನಮಾರ್ಗವಾಗಿರಲಿಲ್ಲ. ಕೇವಲ ರಾಜಕೀಯ ಪ್ರಚಾರದ ಸಾಧನವೂ ಆಗಿರಲಿಲ್ಲ. ಉನ್ನತ ಆದರ್ಶಗಳಿಂದ ಪ್ರೇರಿತವಾದ ಜ್ಞಾನಪ್ರಸಾರವೇ ಅದರ ಗುರಿಯಾಗಿತ್ತು. ಆ ಗುರಿ ಸಾಧನೆಗಾಗಿ ಏಕನಿಷ್ಠೆಯಿಂದ ದುಡಿದ ಮಂಜಪ್ಪನವರು ಬಿರುದು ಬಾವಲಿ ಬಯಸಲಿಲ್ಲ. ಪ್ರಚಾರ – ಪ್ರತಿಷ್ಠೆಗಳಿಗೆ ಮಾರು ಹೋಗಲಿಲ್ಲ. ಯಾರ ಹಂಗಿಗೂ ಒಳಗಾಗಲಿಲ್ಲ. ಸತ್ಯವೆಂದು ಕಂಡದ್ದನ್ನು ನಿರ್ಭಯವಾಗಿ ಪ್ರತಿಪಾದಿಸಿದರು.

ಊರಲ್ಲಿ ಮನೆಯಿಲ್ಲ. ಕೈಯಲ್ಲಿ ಕಾಸಿಲ್ಲ. ಪದವಿಯ ಬಲವಿಲ್ಲ. ಶಿಕ್ಷಣವೋ ಕೇವಲ ಕನ್ನಡ ಶಾಲಾಂತ್ಯ ಪರೀಕ್ಷೆ. ಸ್ವಂತ ಮುದ್ರಣಾಯವಿಲ್ಲ. ಅದರ ಬಗೆಗೆ ಯಾವ ಅನುಭವವೂ ಇಲ್ಲ. ವಯಸ್ಸೋ ಕೇವಲ ಇಪ್ಪತ್ತೊಂದು. ಅನಾಯಸವಾಗಿ ದೊರೆತ ಶಿಕ್ಷಕ ವೃತ್ತಿಗೆ ತ್ಯಾಗ ಪತ್ರವಿತ್ತರು. ಕಷ್ಟಕರವಾದ ಪತ್ರಿಕಾ ಲೋಕಕ್ಕೆ ಕಾಲಿಟ್ಟರು. ಅವರು ಅಪ್ರತಿಮ ಸಾಹಸಿಗಳು; ಅದಮ್ಮ ಉತ್ಸಾಹಿಗಳು. ಶ್ರೇಷ್ಠ ಸಮಾಜ ಸೇವಕರು. ಉಜ್ವಲ ರಾಷ್ಟ್ರಭಕ್ತರು. ಕನ್ನಡ ನುಡಿಯ ಪರಮ ಭಕ್ತರು.

ಜನನ

ಬನವಾಸಿ ಸೃಷ್ಟಿ ಸೌಂದರ್ಯದ ರಮ್ಯ ತಾಣ. ಪಂಪ ಹೊಗಳಿದ ಸ್ಥಳ. ಅಲ್ಲಮಪ್ರಭು ಕಾಲಿಟ್ಟ ಸ್ಥಳ. ಇತಿಹಾಸ ಪ್ರಸಿದ್ಧ ಸ್ಥಳ. ಶಿಲ್ಪಕಲಾ ಕೌಶಲಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ೧೮೮೬ನೆಯ ಫೆಬ್ರವರಿ ೧೮ರಂದು ಒಂದು ಬಡ ಕುಟುಂಬದಲ್ಲಿ ಹರ್ಡೇಕರ್ ಮಂಜಪ್ಪ ಜನಿಸಿದರು. ಅಣ್ಣ ಮಧುಲಿಂಗಪ್ಪ ಸಿರ್ಸಿ ತಾಲ್ಲೂಕು ಕಛೇರಿಯಲ್ಲಿ ಕರಣಿಕ. ಅವನ ಆಶ್ರಯದಲ್ಲಿ ಬಾಲಕ ಮಂಜು ಬೆಳೆದ. ವಿದ್ಯಾಭ್ಯಾಸ ಮಾಡಿದ. ಚುರುಕು ಬುದ್ಧಿಯಿಂದಾಗಿ ಶಿಕ್ಷಕರ ಪ್ರೇಮಾದರಳಿಗೆ ಪಾತ್ರನಾದ. ೧೯೦೩ರಲ್ಲಿ ಕನ್ನಡ ಶಾಲಾಂತ್ಯ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಸಂಪಾದಿಸಿ ತೇರ್ಗಡೆ ಹೊಂದಿದ್ದ.

ಆಗ ಸಿರ್ಸಿಯಲ್ಲಿ ಸಂಗನಬಸಯ್ಯ ಎಂಬವರು ಕನ್ನಡ ಶಾಲೆಯ ಮುಖ್ಯೋಪಾಧ್ಯಾಯರು. ಅವರಿಗೆ ವಿದ್ಯಾರ್ಥಿಗಳ ಮೇಲೆ ಅಪಾರ ವಾತ್ಸಲ್ಯ. ಮಂಜುವಿನ ಯಶಸ್ಸು ಕೇಳಿ ಹಿಗ್ಗಿದರು. ಆ ಬಡ ವಿದ್ಯಾರ್ಥಿಗೆ ಸರಿಯಾದ ಮಾರ್ಗದರ್ಶನ ಮಾಡಿದರು. ಅವನನ್ನು ಬಡತನದ ಬೇಗೆಯಿಂದ ಬಿಡುಗಡೆ ಮಾಡಲು ಮನಸ್ಸು ಮಾಡಿದರು. ತಮ್ಮ ಶಾಲೆಯಲ್ಲಿ ಅಧ್ಯಾಪಕನನ್ನಾಗಿ ತರುಣನನ್ನು ನೇಮಿಸಿದರು. ಮಂಜುವಿಗೆ ಇನ್ನೂ ಹೆಚ್ಚು ಕಲಿಯಬೇಕೆಂಬ ಹಂಬಲವೇನೋ ಇತ್ತು. ಆದರೆ ಪರಿಸ್ಥಿತಿ ಅನುಕೂಲವಿರಲಿಲ್ಲ. ಸಂಸ್ಕೃತ ಕಲಿಯಬೇಕೆಂಬ ಅವನ ಆಶೆಗೂ ಕಲ್ಲು ಬಿತ್ತು. ಆದರೂ ನಿರಾಶನಾಗಲಿಲ್ಲ. ಸ್ವಪ್ರಯತ್ನದಿಂದಲೇ ತಕ್ಕ ಮಟ್ಟಿಗೆ ಮರಾಠಿ ಭಾಷೆಯ ಜ್ಞಾನವನ್ನು ಸಂಪಾದಿಸಿದ. ಮಂಜುವಿಗೆ ಆಗ ಸಂಬಳ ತಿಂಗಳಿಗೆ ಏಳು ರೂಪಾಯಿ. ರಾತ್ರಿ ಇಬ್ಬರು ಹುಡುಗರಿಗೆ ಪಾಠ ಹೇಳುತ್ತಿದ್ದ. ಇದರಿಂದ ನಾಲ್ಕು ರೂಪಾಯಿ ವರಮಾನ.

ಆದರ್ಶ ಶಿಕ್ಷಕ

ಮಂಜು ಆದರ್ಶ ವಿದ್ಯಾರ್ಥಿಯಾಗಿದ್ದಂತೆ ಸ್ವಲ್ಪ ಕಾಲದಲ್ಲಿ ಆದರ್ಶ ಶಿಕ್ಷಕನೆಂದು ಹೆಸರುವಾಸಿಯಾದ. ಬಿಡುವಿಲ್ಲದ ದುಡಿಮೆಯಿಂದ ಮಕ್ಕಳ ಮನಸ್ಸನ್ನು ಗೆದ್ದ. ಅವರ ಅಚ್ಚುಮೆಚ್ಚಿನ ಗುರುವಾದ, ಮಾರ್ಗದರ್ಶಕನಾದ. ತಾಳ-ಲಯಬದ್ಧವಾದ ಚಿಕ್ಕ ಚೊಕ್ಕ ಪದ್ಯಗಳನ್ನು ರಚಿಸಿ ಹಾಡಿದ. ಮಕ್ಕಳನ್ನೂ ಕುಣಿಸಿದ. ಅವರು ಹಾಡುತ್ತಿದ್ದಂತೆಯೇ ಪಾಠ ಕಲಿಸಿದ.

ಮಂಜಪ್ಪ ಮಾಸ್ತರರಲ್ಲಿ ಸಮಾಜ ಸೇವಾ ಭಾವನೆ ಚಿಗುರತೊಡಗಿತ್ತು.

ಬೆಳೆಯ ಸಿರಿ ಮೊಳಕೆಯಲ್ಲಿ

ಮಂಜಪ್ಪ ಮಾಸ್ತರರ ಶಾಲೆಯ ಬದಿಯಲ್ಲಿಯೇ ಹಾಳಕರ್ ವಕೀಲರ ಮನೆ. ಅವರು ಮುಂಬಯಿಯಲ್ಲಿ ವಕೀಲ ವೃತ್ತಿ ಮಾಡುತ್ತಿದ್ದರು. ಆರ್ಯಸಮಾಜದ ಕಾರ್ಯದರ್ಶಿಗಳೂ ಆಗಿದ್ದರು. ಸ್ವಾಮಿ ದಯಾನಂದರ “ಸತ್ಯಾರ್ಥ ಪ್ರಕಾಶ” ಎಂಬ ಗ್ರಂಥವನ್ನು ಕನ್ನಡದಲ್ಲಿ ಬರೆಸಬೇಕೆಂಬ ಆಶೆ ಅವರದು. ಸಮರ್ಥ ಅನುವಾದಕರನ್ನು ಹುಡುಕುತ್ತಿದ್ದರು. ಮಂಜಪ್ಪ ಮಾಸ್ತರರು ಆಗಲೇ ಪದ ಪದ್ಯಗಳನ್ನು ರಚಿಸಿ ಹೆಸರು ಪಡೆದಿದ್ದರು. ಹಾಳಕರ್‌ರು ಮಂಜಪ್ಪನವರಿಗೆ ಈ ಕಾರ್ಯವನ್ನು ಒಪ್ಪಿಸಿದರು. ಯಾವುದೇ ಕೆಲಸವನ್ನು ಶ್ರದ್ಧೆ-ನಿಷ್ಠೆಯಿಂದ ಮಾಡುವುದು ಮಂಜಪ್ಪ ಮಾಸ್ತರರಿಗೆ ರಕ್ತಗತವಾಗಿತ್ತು. ಸುಮಾರು ನೂರು ಪುಟಗಳ ಅನುವಾದ ಮಾಡಿಕೊಟ್ಟರು. ಇವರ ಅಂದವಾದ ಅನುವಾದವನ್ನು ಓದಿ ಹಾಳಕರ್‌ರಿಗೆ ತುಂಬಾ ಸಂತೋಷವಾಯಿತು. ವಕೀಲರು ಇವರನ್ನು ಮುಂಬಯಿಗೆ ಕರೆದೊಯ್ಯಬೇಕೆಂದು ಉದ್ದೇಶಿಸಿದರು. ಆದರೆ ಅನಿವಾರ್ಯಕಾರಣಗಳಿಂದ ಮುಂಬಯಿ ಪ್ರವಾಸ ತಪ್ಪಿತು. ಅದೇ ಸಮಯದಲ್ಲಿ ಸ್ವದೇಶಿ ವಸ್ತುಗಳನ್ನೇ ಉಪಯೋಗಿಸಿರೆಂದು ಉಪದೇಶಿಸಿ ಮಂಜಪ್ಪನವರು ಬರೆದ ಒಂದು ಸುಂದರವಾದ ಪದ್ಯ ಮೈಸೂರಿನ “ಸ್ಟಾರ್” ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಅವರಲ್ಲಿ ಬರೆಯುವ ಕಲೆ ದಿನದಿನಕ್ಕೂ ಬೆಳೆಯತೊಡಗಿತ್ತು. ದಯಾನಂದರ “ಸತ್ಯಾರ್ಥ ಪ್ರಕಾಶ”ವೂ ಅವರ ಜೀವನದ ಮೇಲೆ ಪ್ರಭಾವ ಬೀತಿತ್ತು. ಸ್ವದೇಶಿ ವ್ರತಧಾರಿಗಳೂ ಆದರು. ಆಗಾಗ ಸಮಾಜ ಸುಧಾರಣೆಗಾಗಿ ಭಾಷಣಗಳನ್ನೂ ಮಾಡುತ್ತಿದ್ದರು. ಭಾಷಣ ಮಾಡುವ ಕಲೆಯೂ ಅವರಿಗೆ ಕರಗತವಾಗಿತ್ತು.

ಆಗಲೇ ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಬಿರುಗಾಳಿ ಭರದಿಂದ ಬೀಸುತ್ತಿತ್ತು. ಲೋಕಮಾನ್ಯ ತಿಲಕರು “ಕೇಸರಿ” ಎಂಬ ಪತ್ರಿಕೆಯಲ್ಲಿ ಮೈನವರೇಳಿಸುವಂತಹ ಲೇಖನಗಳನ್ನು ಬರೆಯುತ್ತಿದ್ದರು. ಅವರ ಗರ್ಜನೆ ಮಾಸ್ತರ ಮಂಜಪ್ಪನವರ ಮನವನ್ನು ಕೆಣಕಿತ್ತು. ರಾಷ್ಟ್ರ ಪ್ರೇಮದ ಬೀಜವನ್ನು ಬಿತ್ತಿತ್ತು. ರಾಷ್ಟ್ರಸೇವೆಗೆ ಅಣಿ ಮಾಡಿತ್ತು. ಆಗ ಜನರಲ್ಲಿ ಅಜ್ಞಾನ ತುಂಬಿತ್ತು. ಮೂಢನಂಬಿಕೆಗಳು ಮನೆ ಮಾಡಿಕೊಂಡಿದ್ದವು. ಬಹುಮಂದಿಗೆ ಸ್ವದೇಶಾಭಿಮಾನ ಇರಲಿಲ್ಲ. ಉತ್ಕಟ ರಾಷ್ಟ್ರಪ್ರೇಮಿಗಳಾದ ಮಂಜಪ್ಪನವರಲ್ಲಿ ಜನಜಾಗ್ರತೆ ಮಾಡಬೇಕೆಂಬ ಹೆಬ್ಬಯಕೆ ಬೆಳೆಯತೊಡಗಿತ್ತು. ಅವರು ಅವಕಾಶಕ್ಕಾಗಿ ಕಾಯತೊಡಗಿದರು.

ಗರಿಗೆದರಿದ ಹಕ್ಕಿ

ಕನ್ನಡಿಗರಲ್ಲಿ ರಾಷ್ಟ್ರೀಯ ಮನೋಭಾವ ಕೆರಳಿಸಿ ಪ್ರಚೋದನೆ ಮಾಡಲು ಆಗ ರಾಷ್ಟ್ರೀಯ ಪತ್ರಿಕೆಯೊಂದರ ಅವಶ್ಯಕತೆಯಿತ್ತು. ಆಗಲೇ ಬಂಗಾಳ, ಮಹಾರಾಷ್ಟ್ರ, ಗುಜರಾತ್‌ ಮೊದಲಾದ ಪ್ರಾಂತಗಳಲ್ಲಿ ಸ್ವಾಮಿ ವಿವೇಕಾನಂದರು, ಲೋಕಮಾನ್ಯ ತಿಲಕರು, ಮುಂತಾದ ರಾಷ್ಟ್ರೀಯ ಮಹಾಪುರುಷರು ಸ್ವಾತಂತ್ರ‍್ಯ  ಹೋರಾಟಕ್ಕಾಗಿ ಜೀವನವನ್ನೇ ಮುಡಿಪಿಟ್ಟು ದುಡಿಯುತ್ತಿದ್ದರು. ಅವರ ಆದರ್ಶ ಜೀವನ ಮಂಜಪ್ಪನವರಲ್ಲಿ ಉತ್ಸಾಹ ತಂದಿತ್ತು. ಮಬ್ಬಿನ ಮುಸುಕಿನಲ್ಲಿ ಮಲಗಿದ ಜನತೆಯನ್ನು ಎಚ್ಚರಿಸಲು ಪತ್ರಿಕೆ ಪ್ರಾರಂಭಿಸಲು ಸಿದ್ಧತೆ ಮಾಡಿಕೊಂಡರು. ಬನವಾಸಿ, ಹುಬ್ಬಳ್ಳಿ, ಸಿರ್ಸಿ, ಹಾವೇರಿ ಮೊದಲಾದ ಕಡೆಗಳಲ್ಲಿ ಚಂದಾದಾರರನ್ನು ಮಾಡಿಕೊಂಡರು. ಅವರು ರೈಲನ್ನು ಮೊದಲು ನೋಡಿದ್ದು ಹಾವೇರಿಯಿಂದ ಹೊರಟಾಗಲೆ. ಅದು ವೇಗವಾಗಿ ಹೋಗುತ್ತಿದ್ದುದನ್ನು ನೋಡಿ ಬೆರಗಾದರು.

ದಾವಣಗೆರೆ ಮೈಸೂರು ಸೀಮೆಯ ಉತ್ತರ ಗಡಿ. ಹೊಸ ಹೊಸ ಉದ್ಯೋಗ, ವ್ಯಾಪಾರಗಳ ಸಾಹಸಕ್ಕೆ ಅನುಕೂಲ ಸ್ಥಳ. ಭರದಿಂದ ಬೆಳೆಯುತ್ತಿದ್ದ ನಗರ. ಉತ್ತರ ಕರ್ನಾಟಕಕ್ಕೂ ನಿಕಟ ಸಂಪರ್ಕವಿದೆ. ಇಂಥ ಮಧ್ಯವರ್ತಿ ಕೇಂದ್ರವನ್ನೇ ಮಂಜಪ್ಪನವರು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು. ಮಂಜಪ್ಪನವರ ಅಣ್ಣ ಮಧುಲಿಂಗಪ್ಪನವರೂ ಅವರ ಸಹಾಯಕ್ಕೆ ಬಂದರು. ದಾವಣಗೆರೆಯಲ್ಲಿ ಕೈಯಿಂದ ನಡೆಸುವ ಮುದ್ರಣ ಯಂತ್ರವೊಂದನ್ನು ಬಾಡಿಗೆಗೆ ತೆಗೆದುಕೊಂಡರು. ಮುದ್ರಣ ಯಂತ್ರಕ್ಕೆ ವರ್ಷಕ್ಕೆ ಮುನ್ನೂರು ರೂಪಾಯಿ ಬಾಡಿಗೆ. ದಾವಣಗೆರೆಯಲ್ಲಿ ಬೇರೆ ಮುದ್ರಣಾಲಯ ಇರಲಿಲ್ಲ. ಆದ್ದರಿಂದ ಇಷ್ಟು ಬಾಡಿಗೆ ಕೊಡುವುದು ಕಷ್ಟವಾಗಲಾರದು, ತಕ್ಕಷ್ಟು ಮುದ್ರಣದ ಕೆಲಸ ಬಂದು ಸಂಪಾದನೆ ಆಗುತ್ತದೆ ಎಂದು ತೋರಿತು. ಹಾವೇರಿಯಿಂದ ಅನುಭವಿಕ ಅಕ್ಷರ ಜೋಡಿಸುವವನನ್ನು ಕರೆಸಿದರು. ತಜ್ಞ ವಕೀಲನ ಸಲಹೆ ಪಡೆದರು. ೧೯೦೬ರ ಸೆಪ್ಟೆಂಬರ್ ೬ರಂದು ಪತ್ರಿಕೆ ಹೊರಬಂತು.

ಆದರೂ ೭೦೦ ಜನ ಚಂದಾದಾರರ ಹಣದಿಂದ ಹೆಚ್ಚಿನ ಆದಾಯವೇನೂ ಆಗಲಿಲ್ಲ. ಪತ್ರಿಕೆಯ ಧೋರಣೆ ಉಗ್ರವಾಗಿತ್ತು. ಮಂಜಪ್ಪನವರಿಗೂ ಅವರ ಅಣ್ಣನವರಿಗೂ ಬೇಕಾದಷ್ಟು ಉತ್ಸಾಹವಿತ್ತು. ಆದರೆ ಅನುಭವ ಸಾಲದು. ಕೈಯಲ್ಲಿ ಹಣವೂ ಇಲ್ಲ. ಮುದ್ರಣಾಲಯದ ಯಜಮಾನ ಹೆಚ್ಚು ಹೆಚ್ಚು ಹಣ ಕೇಳಿದ. ಪತ್ರಿಕೆ ನಿಂತು ಹೋಯಿತು. ಮಂಜಪ್ಪನವರ ಕಾರ್ಯಗಳಿಗೆ ಬಲವಾದ ವಿಘ್ನ ಬಂದಿತು.

ನಿರಾಶೆಯಲ್ಲಿ ಆಶೆಯ ಕಿರಣ

ಅತ್ತ ಮಾಸ್ತರಿಕೆ ಹೋಯಿತು; ಇತ್ತ ಪತ್ರಿಕೆಯೂ ನಿಂತಿತು. ವೆಚ್ಚಕ್ಕೆ ಕೈಯಲ್ಲಿ ಕಾಸಿಲ್ಲ. ಮೇಲಾಗಿ ಪ್ಲೇಗ್ ಬೇನೆ ಬೇರೆ ಹರಡಿತ್ತು. ಆಗ ಯಾರ ಸಹಾಯವೂ ದೊರೆಯುವಂತಿರಲಿಲ್ಲ. ಇಂಥ ಬಹು ಕಷ್ಟದ ಪ್ರಸಂಗದಲ್ಲಿಯೂ ಮಂಜಪ್ಪನವರೂ ಧೈರ್ಯಗೆಡಲಿಲ್ಲ.

ಇನ್ನೂ ಮುದ್ರಣಾಲಯ ನಡೆಸುವ ಹಂಬಲ ಅವರಿಗೆ. ಬೋಂದಾಡೆ ಬಾಳಪ್ಪ ಎಂಬವರು ಅವರಿಗೆ ಬಹು ಬೇಕಾದವರು. ಅವರು ವ್ಯಾಪಾರಿಗಳು. ಅವರಿಂದ ನಾಲ್ಕು ನೂರು ರೂಪಾಯಿ ಪಡೆದು ಮುದ್ರಣಾಲಯವನ್ನು ಮತ್ತೆ ನಡೆಸಬೇಕು ಎಂಬ ಆಸೆ ಮಂಜಪ್ಪನವರಿಗೆ.

ಕೈಯಲ್ಲಿದ್ದ ಹಣವೆಲ್ಲ ಖರ್ಚಾಯಿತು. ಒಪ್ಪತ್ತಿನ ಊಟಕ್ಕೂ ಕೈಯಲ್ಲಿ ಕಾಸಿಲ್ಲ. ಒಂದು ದಿನ ಮಂಜಪ್ಪನವರು ಆತ್ಮೀಯರಾಗಿದ್ದ ಬಾಳಪ್ಪನವರಲ್ಲಿ ಹಣ ಕೇಳಲು ಅವರ ಅಂಗಡಿಗೆ ಹೋದರು. ಸಂಕೋಚ ಸ್ವಭಾವದ ಮಂಜಪ್ಪನವರು ಅಂಗಡಿಯಲ್ಲಿ ಬಹಳ ಜನರಿದ್ದುದರಿಂದ ಹಾಗೆಯೇ ಮನೆಗೆ ಹಿಂದಿರುಗಿದರು. ಮನೆಯಾದರೋ ಸಣ್ಣ ಗುಡಿಸಲು. ಬಹಳ ದುಃಖದಿಂದ ಬರುತ್ತಿರುವಾಗ ದಾರಿಯಲ್ಲಿ ಅರ್ಧ ಆಣೆ ದೊರೆಯಿತು. ಆಗ ಅವರಿಗಾದ ಸಂತೋಷ ಅಷ್ಟಿಷ್ಟಲ್ಲ. ಆಗ ಅರ್ಧ ಆಣೆಗೆ (ಈಗಿನ ೩ ಪೈಸೆ) ಸೇರು ಜೋಳ ದೊರೆಯುತ್ತಿತ್ತು. ಜೋಳ ತಂದು ರೊಟ್ಟಿಯನ್ನು ತಿಂದೇ ದಿನ ಕಳೆದರು.

ಇಂಥ ವಿಪರೀತ ವಿಷಯ ಪರಿಸ್ಥಿತಿಯಲ್ಲಿಯೂ ಪತ್ರಿಕೆಯನ್ನು ಪುನಃ ಹೊರಡಿಸಬೇಕೆಂಬ ಹಂಬಲ ಅವರ ಮನದಲ್ಲಿ ತುಂಬಿ ನಿಂತಿತ್ತು.

ಕೊನೆಗೊಮ್ಮೆ ಬಾಳಪ್ಪನವರು ನೆರವಿಗೆ ಬಂದರು. ಮಂಜಪ್ಪನವರು ಅವರಿಂದ ೪೦೦ ರೂಪಾಯಿಗಳನ್ನು ಸಾಲ ಪಡೆದುಕೊಂಡರು. “ಸಚ್ಚಿದಾನಂದ” ವೆಂಬ ಹೆಸರಿನ ಸ್ವಂತ ಮುದ್ರಣಾಲಯವನ್ನೂ ಪ್ರಾರಂಭಿಸಿದರು. ಸಂಪಾದಕರು, ವ್ಯವಸ್ಥಾಪಕರು, ಅಕ್ಷರ ಜೋಡಿಸುವವರು ಎಲ್ಲರೂ ಅವರೇ! ಪ್ರಸಂಗ ಬಂದಲ್ಲಿ ಕಾರ್ಡುಬೋರ್ಡುಗಳನ್ನು ಕತ್ತರಿಸಿ ಪಂಕ್ತಿಗಳ ಮಧ್ಯೆ ಇಡಲು ಬಳಸಿಕೊಂಡರು. ಯಂತ್ರಕ್ಕೆ ಮಸಿ ಸರಿಯಾಗಿ ಹತ್ತದಿದ್ದರೆ ಅಂಗೈಯಿಂದ ಮಸಿ ಹಚ್ಚುತ್ತಿದ್ದರು. ವಾರಕ್ಕೊಮ್ಮೆ ಪತ್ರಿಕೆ ಹೊರಬಂದರೆ ತಾವು ಪಟ್ಟ ಶ್ರಮವೇ ಅವರಿಗೆ ತೋರುತ್ತಿರಲಿಲ್ಲವಂತೆ, ಅಷ್ಟು ಸಂಭ್ರಮ, ಸಡಗರ! ಅವರ ಛಲ ಗೆದ್ದಿತ್ತು. ನಿರಾಶೆಯಲ್ಲಿಯೂ ಆಶೆಯ ಕಿರಣ ಮೂಡಿತ್ತು.

ಕಣ್ಣೀರು ಸುರಿಸಿದರು!

೧೯೦೮ನೆಯ ಇಸವಿ. ಲಾಲ್‌, ಬಾಲ್‌, ಪಾಲ್‌ರು (ಲಾಲಾ ಲಜಪತ ರಾಯ್, ಬಾಲ ಗಂಗಾಧರ ತಿಲಕ್‌, ಬಿಪಿನ್‌ಚಂದ್ರ ಪಾಲ್‌) ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ದಿವ್ಯಮೂರ್ತಿಗಳಾಗಿದ್ದರು. ಇವರ ಭಾಷಣ ಮತ್ತು ಲೇಖನಗಳನ್ನು ಓದುವುದೆಂದರೆ ಮಂಜಪ್ಪನವರಿಗೆ ಬಹು ಹುರುಪು. ಅವುಗಳನ್ನು ಅನುವಾದಿಸಿ ಪ್ರತಿವಾರ “ಧನುರ್ಧಾರಿ”ಯಲ್ಲಿ ತಪ್ಪದೇ ಪ್ರಕಟಿಸುತ್ತಿದ್ದರು. ಅನಂತರ ಲೋಕಮಾನ್ಯ ತಿಲಕರಿಗೆ ಆರು ವರ್ಷ ಕಠಿಣ ಶಿಕ್ಷೆಯಾಯಿತೆಂಬ ದಾರುಣ ಸಮಾಚಾರ ಬಂತು. ಮಂಜಪ್ಪನವರು ಅಂದು ಬಿಕ್ಕಿಬಿಕ್ಕಿ ಅತ್ತರು. ಊಟವನ್ನು ಸಹ ಮಾಡಲಿಲ್ಲ.

ಬಸವ ಜಯಂತಿ ಆಚರಣೆಗೆ ಚಾಲನೆ

ಪತ್ರಿಕೆಯ ಮೂಲಕವಾಗಿ ಮಂಜಪ್ಪನವರಿಗೆ ಅನೇಕ ಸಮಾಜ ಸೇವಾ ಸಂಘಗಳ ಸಂಪರ್ಕ ಬಂದಿತು. ಆಗ ದಾವಣಗೆರೆ ವಿರಕ್ತ ಮಠದಲ್ಲಿ ಮೃತ್ಯುಂಜಯ ಶ್ರೀಗಳು ಉತ್ಸಾಹದಿಂದ ಸಮಾಜಸೇವೆ ಮಾಡುತ್ತಿದ್ದರು. ಅವರ ಅಪ್ಪಣೆಯಂತೆ ಮಂಜಪ್ಪನವರು ಸಮಾಜಸೇವಾ ಕಾರ್ಯವನ್ನು ಮನಃಪೂರ್ವಕ ಮಾಡತೊಡಗಿದರು. ಮಂಜಪ್ಪನವರ ಸಲಹೆ-ಸೂಚನೆಗಳಿಗೆ ಶ್ರೀಗಳು ಕೂಡಲೇ ಒಪ್ಪಿಗೆ ಕೊಡುತ್ತಿದ್ದರು. ಇದರ ಫಲವಾಗಿ ಭಜನಾ ಸಂಘ, ಶ್ರಾವಣಮಾಸೋಪನ್ಯಾಸಮಾಲೆ, ಬಸವ ಜಯಂತಿ, ಅಕ್ಕನ ಜಯಂತಿ ಮೊದಲಾದ ಧಾರ್ಮಿಕ ಚಟುವಟಿಕೆಗಳು ವಿಜೃಂಭಣೆಯಿಂದ ನಡೆಯತೊಡಗಿದವು. ಬಸವ ಜಯಂತಿಯಂದು ಬಸವೇಶ್ವರರ ಉತ್ತಮ ವಚನಗಳ ಸಂಗ್ರಹವನ್ನು ಪ್ರಕಟಿಸಿ ಹಂಚುವ ಪದ್ಧತಿಯನ್ನು ಬಳಕೆಯಲ್ಲಿ ತಂದ ಶ್ರೇಯಸ್ಸು ಮಂಜಪ್ಪನವರದು. ತರುಣರಲ್ಲಿ ದೇಶಾಭಿಮಾನ, ಪತ್ರಿಕೆಗಳನ್ನು ಓದುವ ಅಭ್ಯಾಸ ಮೊದಲಾದ ಉತ್ತಮ ಗುಣ ಸಂವರ್ಧನೆಗೆ ಬೆಂಬಲವಾಗಿ ನಿಂತರು.

ನೈಷ್ಠಿಕ ಬ್ರಹ್ಮಚಾರಿ, ಜನಹಿತ ವ್ರತಧಾರಿ

ಮೊದಲಿನಿಂದಲೂ ಮಂಜಪ್ಪನವರಿಗೆ ಸಾರ್ವಜನಿಕ ಕಾರ್ಯಗಳ ಕಡೆಗೆ ವಿಶೇಷ ಒಲವು. ಅಲ್ಲದೆ ವಿಪರೀತ ಬಡತನ. ಆದುದರಿಂದ ಮದುವೆಯ ಯೋಚನೆಯನ್ನೇ ಮಾಡಿರಲಿಲ್ಲ. ಲಗ್ನವಾದರೆ ಸಾರ್ವಜನಿಕ ಕಾರ್ಯಗಳಿಗೆ ಅಡ್ಡಿ ಉಂಟಾಗುವುದೇ ಹೆಚ್ಚೆಂದು ಅವರ ಭಾವನೆಯಾಗಿತ್ತು. ಆದುದರಿಂದ ಕಠಿಣವಾದ ಬ್ರಹ್ಮಚರ್ಯ ಜೀವನವನ್ನೇ ಆರಿಸಿಕೊಂಡರು. ಅದುವೇ ಅವರ ಎಲ್ಲ ಕಾರ್ಯಗಳಿಗೆ ಪ್ರೇರಕ ಶಕ್ತಿಯಾಗಿತ್ತು. ಕಟ್ಟುನಿಟ್ಟಾದ ಆಹಾರ, ಸಾಧಾರಣ ಉಡುಗೆ, ಮಿತವ್ಯಯ, ಶಿಸ್ತು, ಸ್ವಚ್ಛತೆ, ಅಚ್ಚುಕಟ್ಟತನ ಅವರ ಬಾಳಿನ ಸೋಪಾನಗಳಾಗಿದ್ದವು. ಉಪ್ಪನ್ನು ಸಹ ಬಿಟ್ಟರು. ಕೊನೆಯವರೆಗೂ ಉನ್ನತಮಟ್ಟದ ನೈತಿಕ ಜೀವನ ಸಾಗಿಸಿದ ಮಹಾನುಭಾವರು ಇವರು.

ಆದರ್ಶ ಸಂಪಾದಕರು

ಮನಮುಟ್ಟುವ ಶೈಲಿಯ ಅವರ ವಿಚಾರಾತ್ಮಕ ವಿಶ್ಲೇಷಣಾತ್ಮಕ ಸಂಪಾದಕೀಯ ಲೇಖನಗಳು ಓದುಗರ ಮನ ಮಿಡಿಯುತ್ತಿದ್ದವು. ನಾಡು ಮುಂದುವರಿಯಬೇಕಾದರೆ ಜನರಲ್ಲಿ ಜ್ಞಾನ ಬೆಳೆಯಬೇಕು ಎಂದು ಅವರ ದೃಢ ನಂಬಿಕೆ. “ಧನುರ್ಧಾರಿ”ಯಲ್ಲಿ ಕೀಳು ಅಭಿರುಚಿಯ ಬರಹಗಳನ್ನು ಎಂದೂ ಪ್ರಕಟಿಸಲಿಲ್ಲ. ಕೇವಲ ದೇಶಭಕ್ತಿ ಪ್ರೇರಕವಾದ ಹಾಗೂ ಸಮಾಜ ಸುಧಾರಣೆಗೆ ಸಹಾಯಕವಾಗುವ ಲೇಖನಗಳನ್ನು ಪ್ರಕಟಿಸುತ್ತಿದ್ದರು. ಓದುಗರಿಗೆ ಸರಿಯಾದ ಮಾರ್ಗದರ್ಶನ ಮಾಡುತ್ತಿದ್ದರು. ವಿಚಾರ ಪ್ರಚೋದಕ ಲೇಖನಗಳಿಗೆ ಪ್ರಾಶಸ್ತ್ಯ ಕೊಡುತ್ತಿದ್ದರು. ತರುಣ ಬರಹಗಾರರಿಗೆ ಉತ್ತೇಜನ ಕೊಡುತ್ತಿದ್ದರು. ಅವರ ಲೇಖನಗಳನ್ನು ತಿದ್ದಿ ಪ್ರಕಟಿಸುತ್ತಿದ್ದರು. ಸತ್ಯವಾಗಿ ಕಂಡದ್ದನ್ನು ನಿರ್ಭಯವಾಗಿ ಪ್ರತಿಪಾದಿಸುತ್ತಿದ್ದರು.

ಆದರೆ ಪ್ರಚಂಡ ರಾಜಕೀಯ ಚಳವಳಿಯ ಪರಿಣಾಮ ಮೈಸೂರು ಸಂಸ್ಥಾನಕ್ಕೂ ತಟ್ಟಿತು. ಪತ್ರಿಕೆಗಳನ್ನು ನಡೆಸುವವರ ಮೇಲೆ ಬಲವಾದ ಹಿಡಿತ ಇಟ್ಟುಕೊಳ್ಳಲು ಬ್ರಿಟಿಷರು ಆಳುತ್ತಿದ್ದ ಪ್ರಾಂತಗಳಲ್ಲಿ ಕಾನೂನು ಇತ್ತು. ಮೈಸೂರು ಸಂಸ್ಥಾನದಲ್ಲಿ ಇರಲಿಲ್ಲ. ಆದರೆ ಮೈಸೂರು ಸಂಸ್ಥಾನದಲ್ಲಿಯೂ ಇಂತಹ ಹೊಸ ಕಾನೂನನ್ನು ಮಾಡಿದರು. ಜಿಲ್ಲಾಧಿಕಾರಿಗಳು ಮಂಜಪ್ಪನವರ ಅಣ್ಣನನ್ನು ಕರೆಸಿ, “ಧನುರ್ಧಾರಿಯ” ಲೇಖನಗಳನ್ನು ತೋರಿಸಿದರು. ಅವುಗಳಲ್ಲಿ ಬ್ರಿಟಿಷ್ ಸರ್ಕಾರದ ಟೀಕೆ ಇತ್ತು. “ಇನ್ನು ಮೇಲೆ ಹೀಗೆ ಬರೆದರೆ ನಿಮಗೆ ಶಿಕ್ಷೆ ಆಗುತ್ತದೆ” ಎಂದು ಎಚ್ಚರಿಕೆ ಕೊಟ್ಟರು.

ಪೊಲೀಸ್‌ ಅಧಿಕಾರಿಗಳಿಗೆ ಇವರ ಮೇಲೆ ಬಹು ಕೋಪ. ಒಬ್ಬ ಪೊಲೀಸ್‌ ಇನ್ಸ್‌ಪೆಕ್ಟರ್ ಇವರ ಕಚೇರಿಗೆ ಬಂದರು. ಬರೆಯುತ್ತ ಕುಳಿತಿದ್ದ ಮಂಜಪ್ಪನವರು ಮೇಲಕ್ಕೇಳಲಿಲ್ಲ. ಅವರ ಅಣ್ಣನವರು ಅಲ್ಲಿಯೇ ಇದ್ದರು. ಇನ್ಸ್‌ಪೆಕ್ಟರ್, “ನಿಮ್ಮಬ್ಬರಿಗೂ ಬೇಡಿ ಹಾಕಿ ಕರೆದುಕೊಂಡು ಹೋಗುತ್ತೇನೆ ನೋಡುತ್ತಿರಿ” ಎಂದರು. ಮಂಜಪ್ಪನವರ ಅಣ್ಣ, “ನಿಮ್ಮ ಈ ಬೆದರಿಕೆಗೆ ನಾವು ಜಗ್ಗುವುದಿಲ್ಲ. ನಮ್ಮ ಒಂದು ಕಾಲು ಸೆರೆಮನೆಯಲ್ಲಿ, ಒಂದು ಕಾಲು ಮನೆಯಲ್ಲಿ. ನಿಮಗೆ ತಿಳಿಯದು ಎಂದು ಕಾಣುತ್ತದೆ” ಎಂದರು. ಹೀಗೆ ಅಧಿಕಾರಿಗಳಿಂದ ತೊಂದರೆಯನ್ನು ಎದುರಿಸಬೇಕಾಯಿತು. ಚಂದಾದಾರರ ಸಂಖ್ಯೆಯೂ ಕಡಿಮೆಯಾಯಿತು. “ಧನುರ್ಧಾರಿ”ಯನ್ನು ಅನಿವಾರ್ಯವಾಗಿ ನಿಲ್ಲಿಸಬೇಕಾಯಿತು.

ಸತ್ಯಾಗ್ರಹಾಶ್ರಮ ಸ್ಥಾಪನೆ

ವೃತ್ತಿಯಿಂದ ಪತ್ರಿಕೋದ್ಯಮಿ, ಪ್ರವೃತ್ತಿಯಿಂದ ಸಮಾಜ ಸುಧಾರಕರಾದ ಮಂಜಪ್ಪನವರು ಸ್ವಾಮಿ ರಾಮತೀರ್ಥರ ಮತ್ತು ಗಾಂಧೀಜಿಯವರ ವಿಚಾರಗಳನ್ನು ಪ್ರಚಾರ ಮಾಡಲು ಮುಂದಾದರು. ರಾಮತೀರ್ಥರ ಉಪನ್ಯಾಸಗಳನ್ನು ಓದಿ ಮಂಜಪ್ಪನವರಿಗೆ ಹೊಸ ಸ್ಫೂರ್ತಿ ಬಂದಿತ್ತು. ಇತರರಿಗೂ ಸ್ವಾಮೀಜಿಯವರ ಉಪದೇಶ ತಿಳಿಯಬೇಕೆಂದು ಅವರ ಉಪನ್ಯಾಸಗಳ ನಾಲ್ಕು ಭಾಗಗಳನ್ನು ೧೯೨೧ರಲ್ಲಿ ಪ್ರಕಟಿಸಿದರು. ನಿಸರ್ಗ ಸುಮದರ ಪ್ರಶಾಂತ ವಾತಾವರಣ ಅವರಿಗೆ ಅಚ್ಚುಮೆಚ್ಚು. ಆದುದರಿಂದ ಹರಿಹರದ ಬಳಿ ತುಂಗಭದ್ರೆಯ ದಂಡೆಯ ಮೇಲೆ ಸತ್ಯಾಗ್ರಹಾಶ್ರಮ ಸ್ಥಾಪಿಸಿದರು. ಗಾಂಧೀಜಿಯವರು ಸಾಬರಮತಿ ಆಶ್ರಮದಲ್ಲಿ ೧೯೧೫ರಲ್ಲಿ ಗೊತ್ತು ಮಾಡಿದ್ದ ಸತ್ಯ, ಅಹಿಂಸೆ, ಬ್ರಹ್ಮಚರ್ಯ, ನಿರ್ಭಯ, ಸ್ವದೇಶಿ ಮತ್ತು ಅಸ್ಪೃಶ್ಯತಾ ನಿವಾರಣೆ ಮೊದಲಾದ ತತ್ವಗಳನ್ನು ಜನತೆಯ ಮನೋಮಂದಿರದಲ್ಲಿ ಪ್ರಸಾರ ಮಾಡಲು ಕಂಕಣ ಕಟ್ಟಿ ನಿಂತರು. ತಿಪ್ಪಯ್ಯ ಮಾಸ್ತರರೆಂಬುವರು ಗಾಂಧೀಜಿಯವರ ತತ್ವಗಳ ಮೇಲೆ ಪದ್ಯಗಳನ್ನು ಬರೆದುಕೊಟ್ಟರು. ಮಂಜಪ್ಪನವರು “ಸತ್ಯಾಗ್ರಹ ಧರ್ಮ” ಎಂಬ ಪುಸ್ತಕ ಪ್ರಕಟಣೆ ಮಾಡಿದರು. ಅವುಗಳ ಪ್ರತಿಗಳನ್ನು ಜನರಿಗೆ ಹಂಚಿದರು. ಸತ್ಯಾಗ್ರಹ ತತ್ವಗಳನ್ನು ಜನರಿಗೆ ತಿಳಿಸಿ ಹೇಳಲು ಒಂದು ಸಂಸ್ಥೆಯೇ ಅಗತ್ಯ ಎಂದು ಅವರಿಗೆ ತೋರಿತು. ಗಾಂಧೀಜಿಯವರ ೫೪ನೆಯ ಹುಟ್ಟಿದ ಹಬ್ಬದ ದಿನ ಸತ್ಯಾಗ್ರಹ ಸಮಾಜವನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಿದರು. ಇದಕ್ಕೆ ಪ್ರಚಾರಕರು ಬೇಕಲ್ಲವೇ? ಅವರ ಶಿಕ್ಷಣಕ್ಕಾಗಿಯೇ ಆಶ್ರಮ ಸ್ಥಾಪಿಸಿದರು. ದೇಶದ ಮುಖ್ಯ ಸಂಪತ್ತು ಅಲ್ಲಿನ ಜನರೇ, ಅದರಲ್ಲಿಯೂ ಯುವಕರೇ ಎಂಬುದು ಅವರಿಗೆ ಸ್ಪಷ್ಟವಾಗಿತ್ತು. ಅವರಲ್ಲಿ ಆತ್ಮಶುದ್ಧಿ, ಆತ್ಮಶಕ್ತಿ ಬೆಳೆಯುವಂತೆ ಮಾರ್ಗದರ್ಶನ ಮಾಡಲು ತಕ್ಕ ಏರ್ಪಾಟು ಮಾಡಿದರು. ಅವರದು ದೃಢ ನಿರ್ಧಾರ. ಎಂಥ ಕಷ್ಟವೇ ಬರಲಿ, ಅದಕ್ಕವರು ಹೆದರುವವರೇ ಅಲ್ಲ. ದಿನಾಂಕ ೧೯೨೩ರ ಮಾರ್ಚ್‌ ೨೬ರಂದು ಆಶ್ರಮದ ಪ್ರವೇಶ ಸಮಾರಂಭವು ಜರುಗಿತು. ಅಂದಿನಿಂದ ಮಂಜಪ್ಪನವರು ಮೇಲಂಗಿ ಹಾಕಿಕೊಳ್ಳುವುದನ್ನೂ ಬಿಟ್ಟರು. ಜೋಡು ಮೆಟ್ಟುವುದನ್ನು ತ್ಯಜಿಸಿದರು. ಆಶ್ರಮದಲ್ಲಿ ಅವರು ಬೆಳಗ್ಗೆ ನಾಲ್ಕೂವರೆಗೆ ಏಳುತ್ತಿದ್ದರು. ತೋಟದ ಕೆಲಸ, ನೂಲುವುದು, ಲೇಖನ – ಪತ್ರಿಕೆಗಳನ್ನು ಓದುವುದು, ಪ್ರಾರ್ಥನೆ ಎಲ್ಲದಕ್ಕೆ ನಿಯಮಿತವಾದ ಹೊತ್ತು. ಕಟುವಾದ ಶಿಸ್ತಿನ ಜೀವನ. ಬೆಳಿಗ್ಗೆ ನಾಲ್ಕೂವರೆಯಿಂದ ರಾತ್ರಿ ಒಂಬತ್ತುವರೆಯವರೆಗೆ ನಿಶ್ಚಿತವಾದ ವೇಳಾಪಟ್ಟಿಯಂತೆ ಕೆಲಸ. ಹಾಗೆಯೇ ಆಶ್ರಮದ ನಿಯಮಗಳು ಕಟ್ಟುನಿಟ್ಟಾಗಿದ್ದವು. ಯಾವ ಚಟಗಳಿಗೂ ಅಲ್ಲಿ ಅವಕಾಶವಿರಲಿಲ್ಲ. ತಪ್ಪದೆ ಏನಾದರೊಂದು ಕೆಲಸ ಮಾಡುತ್ತಿರಬೇಕು.

 

ಗಾಂಧೀಜಿಯವರೊಡನೆ.

ಆಶ್ರಮದಲ್ಲಿ ತಿಂಗಳಿಗೆ ಒಬ್ಬೊಬ್ಬರ ಊಟದ ಖರ್ಚು ಎರಡೂವರೆ, ಎರಡೂ ಮುಕ್ಕಾಲು ರೂಪಾಯಿಗಳಷ್ಟು ಆಗುತ್ತಿತ್ತು. ಪ್ರಚಾರಕರು ಆಶ್ರಮಕ್ಕೆ ಬಂದರೆ ಅವರ ಊಟ, ಬಟ್ಟೆ, ಪ್ರವಾಸ ಮೊದಲಾದ ಖರ್ಚುಗಳಿಗಾಗಿ ದೊರೆಯುತ್ತಿದ್ದದ್ದು ವರ್ಷಕ್ಕೆ ಎಪ್ಪತ್ತೈದು ರೂಪಾಯಿ.

ಆಶ್ರಮವನ್ನು ನಡೆಸುವುದು ಸುಲಭವಾಗಿರಲಿಲ್ಲ. ಹಣದ ತೊಂದರೆ, ಜೊತೆಗೆ ವಿದ್ಯಾವಂತ ತರುಣರು ಈ ಬಗೆಯ ತ್ಯಾಗದ, ಕಟ್ಟುನಿಟ್ಟಿನ ಜೀವನಕ್ಕೆ ಹೊಂದಿಕೊಳ್ಳುತ್ತಿರಲಿಲ್ಲ. ಪ್ರಚಾರಕವಾಗಿ ಇರಲು ಬಂದವರು ಒಂದೆರಡು ತಿಂಗಳಲ್ಲೇ ಹೊರಟು ಹೋಗುತ್ತಿದ್ದರು.

ಕಷ್ಟಗಳು

೧೯೨೩ರ ಜುಲೈ ತಿಂಗಳಲ್ಲಿ ಆಶ್ರಮಕ್ಕೆ ಒಂದು ಆಘಾತ ಎರಗಿತು. ವಿಶೇಷವಾಗಿ ಮಳೆ ಸುರಿಯಿತು. ಅರವತ್ತು ವರ್ಷಗಳಿಂದ ಅಂತಹ ಮಳೆ ಬಂದಿರಲಿಲ್ಲವಂತೆ. ಕಟ್ಟಡಗಳು ಹೊಳೆಯ ದಡದ ಮೇಲೆ ಇದ್ದವು. ಒಂದು ರಾತ್ರಿ ಹೊಳೆಯಲ್ಲಿ ನೀರು ಏರಲು ಪ್ರಾರಂಭವಾಯಿತು. ಬೆಳಗಾಗುವದರಲ್ಲಿ ಏನಾಗುತ್ತದೆಯೋ ಎಂದು ಚಿಂತೆಯಾಯಿತು. ಮಂಜಪ್ಪನವರ ಮುಪ್ಪಿನ ತಾಯಿಯೂ ಅವರ ಜೊತೆಗೆ ಆಶ್ರಮದಲ್ಲಿ ವಾಸವಾಗಿದ್ದರು ಬೆಳಗಾಗುತ್ತಲೇ ಮಂಜಪ್ಪನವರು ಒಂದೂವರೆ ಮೈಲಿ ದೂರ ಹೋಗಿ ಗಾಡಿಯನ್ನು ತಂದರು. ಅಷ್ಟು ಹೊತ್ತಿಗೆ ನೀರು ಆಶ್ರಮದೊಳಕ್ಕೆ ನುಗ್ಗಿತ್ತು. ತಾಯಿಯನ್ನೂ ಪುಸ್ತಕಗಳನ್ನೂ ಗಾಡಿಯಲ್ಲಿ ಕಳುಹಿಸಿದರು. ಇನ್ನು ಒಂದೇ ಗಂಟೆ ತಡವಾಗಿದ್ದರೆ ಗಾಡಿಯನ್ನು ತರುವುದೇ ಸಾಧ್ಯವಾಗುತ್ತಿರಲಿಲ್ಲ. ತಾಯಿಯನ್ನು ಕಳುಹಿಸುವುದೂ ಆಗುತ್ತಿರಲಿಲ್ಲ. ಕಟ್ಟಡದಲ್ಲಿ ಮೂರು ಅಡಿ ನೀರು ನಿಂತಿತು. ಎಷ್ಟೋ ದಿನ ಆಶ್ರಮದಲ್ಲಿ ವಾಸವೇ ಅಸಾಧ್ಯವಾಗಿತ್ತು.

ಇಷ್ಟೆಲ್ಲ ಆಶ್ರಮ ಪ್ರಾರಂಭವಾದ ಆರೆಂಟು ತಿಂಗಳಲ್ಲಿ.

ಯಾವ ಕಷ್ಟಗಳಿಗೂ ಹೆದರದೆ ಆಶ್ರಮದ ಕೆಲಸವನ್ನು ಮುನ್ನಡೆಸಿದರು ಮಂಜಪ್ಪನವರು.

ಸ್ವಾವಲಂಬಿ, ಸತ್ವಶಾಲಿ ರಾಷ್ಟ್ರಭಕ್ತರನ್ನು ಸಿದ್ಧಪಡಿಸುವುದೇ ಅವರ ಸಂಕಲ್ಪವಾಗಿತ್ತು. ದೀನದಲಿತರ ಬಗೆಗೆ ಅವರಿಗೆ ಅನುಕಂಪವಿತ್ತು. ಆಶ್ರಮದಲ್ಲಿ ಜಾತಿಭೇದಕ್ಕೆ ಅವಕಾಶ ಇರಲಿಲ್ಲ. ಲಂಬಾಣಿ ಹುಡುಗರಿಗೆ ಶಿಕ್ಷಣವನ್ನಿತ್ತರು. ಬಸವೇಶ್ವರ ಮತ್ತು ಮಹಾತ್ಮಾ ಗಾಂಧಿಯವರ ಜೀವನ ಚರಿತ್ರೆಗಳನ್ನು ಮತ್ತು ಅವರ ಉಪದೇಶಗಳನ್ನು ಸಂಗ್ರಹಿಸಿ ಪ್ರಕಟಿಸಿದರು. ೧೯೨೪ರಲ್ಲಿ ಜರುಗಿದ ಬೆಳಗಾವಿ ಕಾಂಗ್ರೆಸಿನ ಅಧಿವೇಶನಕ್ಕಾಗಿ “ಬಸವೇಶ್ವರ ಸೇವಾದಳ” ಎಂಬ ಸ್ವಯಂಸೇವಕ ದಳವನ್ನು ಒಯ್ದರು. “ಸತ್ಯಾಗ್ರಹ ಬಸವೇಶ್ವರ” ಎಂಬ ಚಿಕ್ಕ ಪುಸ್ತಕವನ್ನು ಹಿಂದಿ, ಮರಾಠಿ ಭಾಷೆಗಳಲ್ಲಿ ಬರೆಸಿ ಭಾರತೀಯ ನಾಯಕರಲ್ಲಿ ಉಚಿತವಾಗಿ ಹಂಚಿದರು.

ಮಂಜಪ್ಪನವರು ಶುದ್ಧ ಮನಸ್ಸಿನಿಂದ ಮಾಡುತ್ತಿದ್ದ ಒಳ್ಳೆಯ ಕೆಲಸಕ್ಕೂ ವಿರೋಧ ಇದ್ದಿತು. ಅವರ ವಿರೋಧಿಗಳು ಅವರಲ್ಲಿ ದೋಷಾರೋಪಣೆ ಮಾಡಿ ಪತ್ರಿಕೆಯಲ್ಲಿ ಲೇಖನವನ್ನು ಬರೆದರು. ಅದನ್ನು ಓದಿ ಮಂಜಪ್ಪನವರು ನಿಜವಾದ ಅಂಶಗಳನ್ನು ತಿಳಿಸಿ ಉತ್ತರ ಬರೆಯಬೇಕು ಎಂದು ಹಿಂದಿನ ದಿನಚರಿಗಳನ್ನು ತೆಗೆದು, ಬೇಕಾದ ವಿಷಯಗಳನ್ನು ಆರಿಸಿದರು. ಆದರೆ ಅನಂತರ ಅವರಿಗೆ ತೋರಿತು; ಇದು ಅನೇಕರಿಗೆ ಸಂಬಂಧಪಡುವ ವಿಷಯ, ನಾನು ಉತ್ತರದಲ್ಲಿ ಅವರ ವಿಷಯ ಹೇಳಬೇಕು. ಅವರು ಏನಾದರೂ ಹೇಳುತ್ತಾರೆ. ಹೀಗೆಯೇ ವಾದ ಬೆಳೆಯುತ್ತದೆ. ಸುಮ್ಮನಿದ್ದು ಬಿಡುವುದು ವಾಸಿ.

ಅವರು ತಮ್ಮ ಮೇಲೆ ಮಾಡಿದ ಸುಳ್ಳು ಆರೋಪಗಳಿಗೆ ಉತ್ತರ ಕೊಡುವ ಗೋಜಿಗೆ ಹೋಗಲಿಲ್ಲ.

ಆದರೆ ಅವರ ವಿಷಯ ತಿಳಿದು ಗೌರವವನ್ನಿಟ್ಟು ಕೊಂಡಿದ್ದ ಹಲವರು ಪತ್ರಿಕೆಗೆ ಅವರ ಹಿರಿಮೆಯನ್ನು ವಿವರಿಸಿ ಕಾಗದಗಳನ್ನು ಬರೆದರು.

ಕರ್ನಾಟಕದ ಗಾಂಧಿ”

ಮಂಜಪ್ಪನವರು ಸ್ವಂತ ಪರಿಶ್ರಮದಿಂದಲೇ ಮುಂದೆ ಬಂದವರು. ಸಾರ್ವಜನಿಕ ಸೇವೆಯನ್ನು ತಾವೇ ಇಷ್ಟಪಟ್ಟು ಕೈಗೊಂಡವರು. ಅವರ ಸನ್ಯಾಸ ಜೀವನವು ಪವಿತ್ರವಾಗಿತ್ತು; ಪರಿಶುದ್ಧವಾಗಿತ್ತು.

೧೯೨೪ರಲ್ಲಿ ಮಂಜಪ್ಪನವರು ಗಾಂಧೀಜಿಯವರನ್ನು ನೋಡಲು ಸಾಬರಮತಿ ಆಶ್ರಮಕ್ಕೆ ಹೋದರು. ಇದೊಂದು ಅವರ ಜೀವನದಲ್ಲಿ ಅಪೂರ್ವ ಅನುಭವ. ಬೆಳಗ್ಗೆ, ಸಂಜೆ ಗಾಂಧೀಜಿಯವರಲ್ಲಿ ಪ್ರಾರ್ಥನೆಗೆ ಹೋಗುವುದು, ಮಧ್ಯಾಹ್ನ ಅವರು ಕೆಲಸ ಮಾಡುವಾಗ ದೂರ ಕುಳಿತು ನೋಡುವುದು ಅವರ ದಿನಚರಿ. ಒಂದು ಬೆಳಗ್ಗೆ ಗಾಂಧೀಜಿ ತಿರುಗಾಡಲು ಹೊರಟಾಗ ಅವರೊಡನೆ ಮಾತನಾಡಲು ಮಂಜಪ್ಪನವರಿಗೆ ಅವಕಾಶ ಸಿಕ್ಕಿತು. ಕೆಲವರು ಪ್ರಮುಖರು ಮಹಾತ್ಮರೊಡನೆ ಮಾತನಾಡಲು ಬಂದರು. ತಾವು ಮರುದಿನ ಮಾತನಾಡಿದರಾಯಿತು ಎಂದು ಮಂಜಪ್ಪನವರು ಹಿಂದಕ್ಕೆ ಹೋದರು. ಆದರೆ ಗಾಂಧೀಜಿ ಅವರಿಗೆ ಹೇಳಿಕಳುಹಿಸಿದರು. “ನಿಮಗಾಗಿ ಈ ಕಾಲ ಕಾದಿಟ್ಟಿದ್ದೇನೆ, ಏನು ಮಾತನಾಡಬೇಕು ಹೇಳಿ” ಎಂದರು. ಹಾಗೆಯೇ ಅವರೊಡನೆ ತಿರುಗಾಟಕ್ಕೆ ಹೊರಟರು. “ಮನುಷ್ಯನಿಗೆ ಪುನರ್ಜನ್ಮ ಉಂಟೇ?” ಎಂದು ಮಂಜಪ್ಪನವರು ಕೇಳಿದರು. “ಈ ಸಾಬರಮತಿ ನದಿ ಹರಿಯುತ್ತಿರುವುದರಲ್ಲಿ ನನಗೆ ಹೇಗೆ ಸ್ವಲ್ಪವೂ ಅನುಮಾನವಿಲ್ಲವೋ ಹಾಗೆಯೇ ಪುನರ್ಜನ್ಮ ಉಂಟು ಎಂಬುದರಲ್ಲಿಯೂ ನನಗೆ ಅನುಮಾನವಿಲ್ಲ” ಎಂದರು ಗಾಂಧೀಜಿ. “ಆದರೆ ವಾದದಿಂದ ಇದನ್ನು ತೋರಿಸಿ ಕೊಡಲಾರೆ. ಇದು ನಂಬಿಕೆಯ ವಿಷಯ” ಎಂದರು. ಗಾಂಧೀಜಿ ಉಪದೇಶಿಸುತ್ತಿದ್ದ ತತ್ವಗಳಲ್ಲಿ “ಅಸ್ತೇಯ” ಎಂಬುದನ್ನು ವಿವರಿಸಬೇಕು ಎಂದು ಮಂಜಪ್ಪನವರು ಕೇಳಿದರು. “ಇನ್ನೊಬ್ಬರಿಗೆ ಸೇರಿದ್ದನ್ನು ನಾವು ಬಯಸಬಾರದು, ಬಳಸಬಾರದು. ಆ ವಸ್ತು ಅವರಿಗೆ ಉಪಯೋಗವಿಲ್ಲದೆ ಇರಬಹುದು, ಆದರೂ ಅದಕ್ಕೆ ಬೆಲೆ ಕೊಡದೆ ನಾವು ಉಪಯೋಗಿಸಿದರೆ ಕಳ್ಳತನ ಮಾಡಿದ ಹಾಗೆಯೇ” ಎಂದರು ಗಾಂಧೀಜಿ. ಹೀಗೇ ಮಾತು ಮುಂದುವರಿಯಿತು.

ಮಂಜಪ್ಪನವರು ತಮ್ಮ ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ: “ಗಾಂಧೀಜಿಯವರಲ್ಲಿ ವಾಸವಾಗಿದ್ದುದು ನನ್ನ ಧನ್ಯತೆಯೆಂದು ನನಗೆ ಬಹು ಸಂತೋಷ. ನಾನೆಂತಹ ಕ್ಷುದ್ರ ಮನುಷ್ಯನು? ನನ್ನ ಸ್ಥಳವೆಲ್ಲಿ? ನನ್ನ ವಿದ್ಯೆ ಎಷ್ಟು? ಜಗತ್ತಿಗೆ ಪೂಜ್ಯನಾಗಿರುವ ಈ ಮಹಾತ್ಮನ ಹತ್ತಿರ ಇರತಕ್ಕ ಪ್ರಸಂಗ ನನಗೆ ಸಂಭವಿಸಿದುದು ಎಷ್ಟು ಹೆಚ್ಚಿನದೆಂದೇ ನನಗೆ ಅಲ್ಲಿ ಆಗಾಗ್ಗೆ ಅನಿಸುತ್ತಿತ್ತು.”

ಮಂಜಪ್ಪನವರನ್ನು “ಕರ್ನಾಟಕದ ಗಾಂಧಿ” ಎಂದು ಜನರು ಕರೆದರು. ಸತ್ಯಾಗ್ರಹ ತತ್ವಗಳನ್ನು ಜನಸಾಮಾನ್ಯರಿಗೆ ಮನಸ್ಸಿಗೆ ಹಿಡಿಯುವಂತೆ ತಿಳಿಸಿಕೊಡುವುದರಲ್ಲಿ ಎತ್ತಿದ ಕೈಯಾಗಿದ್ದರು.

ಮಂಜಪ್ಪನವರು ತುಂಬ ಪರಿಣಾಮಕಾರಿಯಾಗಿ ಮಾತನಾಡುತ್ತಿದ್ದರು. ಅವರ ಮಾತುಗಳು ಅನುಭವದ ಆಗರ. ಕನ್ನಡನಾಡಿನ ಮೂಲೆ ಮೂಲೆಗಳಲ್ಲಿ ಸಂಚರಿಸಿದರು. ಬಸವಜಯಂತಿ, ನಾಡಹಬ್ಬ, ಗಣೇಶೋತ್ಸವ ಮೊದಲಾದ ಮಂಗಳ ಸಂದರ್ಭಗಳಲ್ಲಿ ಎಲ್ಲ ಕಡೆಯಿಂದಲೂ ಇವರಿಗೆ ಆತ್ಮೀಯ ಆಮಂತ್ರಣ. ಹೊಂದಿಕೆಯಾದ ಮಾತು, ಶ್ರೇಷ್ಠ ವಿಚಾರಗಳು, ತಿಳಿಯಾದ ಹಾಸ್ಯಗಳಿಂದ ತುಂಬಿದ ಜ್ಞಾನಗಂಗೆಯಂತಿದ್ದವು ಇವರ ಭಾಷಣಗಳು. ವಿಷಯ ಎಷ್ಟೇ ಕಷ್ಟವಿರಲಿ, ಅದನ್ನು ಸುಲಭವಾಗಿ ತಿಳಿಯುವಂತೆ ವಿವರಿಸುತ್ತಿದ್ದರು. ಅದರ ಗಾಂಭೀರ್ಯ ಕೆಡದಂತೆ ತಿಳಿಹಾಸ್ಯವನ್ನು ಹರಿಸುತ್ತಿದ್ದರು.

ವಿದ್ಯಾಲಯ

ಬಿಜಾಪುರ ಜಿಲ್ಲೆಯ ಮಧ್ಯಸ್ಥಳ ಆಲಮಟ್ಟಿ, ಬದಿಯಲ್ಲಿಯೇ ಕೃಷ್ಣೇ ಹರಿದಿದ್ದಾಳೆ. ರಮ್ಯ ಮನೋಹರ ಎತ್ತರದ ತಾಣ. ಸುತ್ತಲೂ ಗುಡ್ಡಗಳ ಸಾಲು. ಆರೋಗ್ಯಕರವಾದ ಒಣಹವೆ. ಸವಿನೀರು, ಸಮೀಪದಲ್ಲಿಯೇ ರೈಲ್ವೆ ನಿಲ್ದಾಣ. ಎಲ್ಲರಿಗೂ ಅನುಕೂಲವಾದ ಸೌಕರ್ಯವಿದ್ದ ಸುಂದರ ಸ್ಥಳದಲ್ಲಿ ಮಂಜಪ್ಪನವರು ನೂತನ ಮಾದರಿಯ ವಿದ್ಯಾಲಯವನ್ನು ಸ್ಥಾಪಿಸಿದರು. ದೇಶದ ಭಾಗ್ಯ ಪ್ರಜೆಗಳನ್ನೇ ಅವಲಂಬಿಸಿದೆ ಅಲ್ಲವೆ? ಅವರು ನೀತಿವಂತರಾಗಿದ್ದರೆ, ಕಷ್ಟಪಟ್ಟು ಕೆಲಸ ಮಾಡುವವರಾದರೆ, ಒಬ್ಬರೊಡನೊಬ್ಬರು ಹೊಂದಿಕೊಂಡು ಕೆಲಸ ಮಾಡುವವರಾದರೆ, ಅವರಲ್ಲಿ ದೇಶಪ್ರೇಮ ಇದ್ದರೆ ದೇಶವೂ ಭಾಗ್ಯವಂತವಾಗುತ್ತದೆ. ಈ ಒಳ್ಳೆಯ ಗುಣಗಳನ್ನು ಅವರು ಎಳೆಯವರಾಗಿದ್ದಾಗಲೇ ಕಲಿಸಬೇಕು. ಮಂಜಪ್ಪನವರು ಹುಟ್ಟಿನಿಂದಲೇ ಒಳ್ಳೆಯ ಶಿಕ್ಷಕರು. ಅವರು ತಮ್ಮ ವಿಚಾರಗಳನ್ನೆಲ್ಲ ಕಾರ್ಯರೂಪಕ್ಕಿಳಿಸಲು ತೆರೆದ ವಿದ್ಯಾಲಯವೇ “ವೀರಶೈವ ವಿದ್ಯಾಲಯ”. ೧೯೨೭ರ ಮೇ ೧೩ರಂದು ವಿದ್ಯಾಲಯದ ಪ್ರವೇಶ ಸಮಾರಂಭವು ಸಡಗರಿಂದ ನೆರವೇರಿತು. ನಾಡಿನ ಗಣ್ಯವ್ಯಕ್ತಿಗಳು, ಪೂಜ್ಯ ಸ್ವಾಮಿಗಳು ಮಂಜಪ್ಪನವರ ಈ ಹೊಸ ಯೋಜನೆಗೆ ಸಹಾಯ, ಸಹಕಾರ ನೀಡಿದರು. ಹದಿನೈದು ದಿನಗಳಲ್ಲಿ ಎಂಟು ಸಾವಿರ ರೂಪಾಯಿಗಳ ಸಂಗ್ರಹವಾಯಿತು. ಜನರಿಗೆ ಅವರಲ್ಲಿ ಎಷ್ಟೊಂದು ವಿಶ್ವಾಸ ಇದ್ದಿತು ಎಂಬುದನ್ನು ಇದು ತೋರಿಸುತ್ತದೆ.

ಮಂಜಪ್ಪನವರು ಈ ವಿದ್ಯಾಲಯದ ಜೀವನಾಡಿಯಾಗಿ ಆಧುನಿಕ ಶಿಕ್ಷಣ ಪದ್ಧತಿಯನ್ನು ರೂಪಿಸಲು ಬಹುವಾಗಿ ಪರಿಶ್ರಮಿಸಿದರು. ಅದರ ಅಭಿವೃದ್ಧಿಗಾಗಿ ಹೆಣಗಿದರು. ಒಳ್ಳೆಯ ಶಿಕ್ಷಕರನ್ನು ನೇಮಿಸಿದರು. “ವಿದ್ಯಯಾಮೃತ ಮಶ್ನುತೆ” (ವಿದ್ಯೆಯಿಂದ ಅಮೃತವನ್ನು ಸವಿಯುತ್ತಾನೆ) ಎಂಬ ಉಪನಿಷತ್‌ ವಾಕ್ಯವು ವಿದ್ಯಾಲಯದ ಧ್ಯೇಯ ಸೂಚಕವಾಯಿತು. ಪ್ರಾಚೀನ ಭಾರತದಲ್ಲಿ ಗುರುಕುಗಳಿದ್ದುವಲ್ಲವೆ? ಅವುಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಮನಸ್ಸನ್ನು ಸರಿಯಾಗಿ ರೂಪಿಸುತ್ತಿದ್ದರು. ಅಂತಹ ಸಂಸ್ಥೆಯಾಯಿತು. ವಿದ್ಯಾಲಯ, ಮಕ್ಕಳ ಧಾರ್ಮಿಕ ಮತ್ತು ನೈತಿಕ ಶಿಕ್ಷಣಗಳ ಕಡೆಗೆ ಹೆಚ್ಚು ಗಮನವಿತ್ತರು. ಪ್ರಾತಃಕಾಲ ಮತ್ತು ಸಾಯಂಕಾಲ ಭಜನೆಯ ಕಾರ್ಯಕ್ರಮವಿರುತ್ತಿತ್ತು.

ಆ ಕಾಲಕ್ಕೆ ಉಪನಿಷತ್‌, ಭಗವದ್ಗೀತೆ, ಶಿವಗೀತೆ, ಶಿವಶರಣರ ತತ್ವಪದಗಳು – ಇವುಗಳಿಂದ ಆರಿಸಿದ ಭಾಗಗಳನ್ನು ಪಠಣ ಮಾಡುತ್ತಿದ್ದರು. ವಿದ್ಯಾರ್ಥಿಗಳು ಕಷ್ಟಪಟ್ಟು ಕೆಲಸ ಮಾಡಬೇಕಾಗಿತ್ತು. ಅವರೇ ಊಟಕ್ಕೆ ಕುಳಿತವರಿಗೆ ಬಡಿಸುತ್ತಿದ್ದರು. ಬಂದ ಅತಿಥಿಗಳನ್ನು ನೋಡಿಕೊಳ್ಳುತ್ತಿದ್ದರು. ತಮ್ಮ ಕೋಣೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಾಗಿತ್ತು. ವಾಚನಾಲಯವನ್ನು ಏರ್ಪಡಿಸಿ ವೃತ್ತ ಪತ್ರಿಕೆಗಳನ್ನು ಓದುವ ಅಭ್ಯಾಸವನ್ನು ವಿದ್ಯಾರ್ಥಿಗಳಿಗೆ ಮಾಡಿಸಲಾಗಿತ್ತು. ವಿದ್ಯಾಲಯದಲ್ಲಿ ಶಿಕ್ಷಣ ಮುಗಿದ ಮೇಲೆ ಅವರ ಮನೆಗಳಲ್ಲಿ ಮಾಡಬೇಕಾದ ಕೆಲಸಕ್ಕೆ ಪ್ರತ್ಯೇಕವಾಗಿ ಶಿಕ್ಷಣವನ್ನು ಕೊಡುವ ವ್ಯವಸ್ಥೆ ಇತ್ತು.

ವಿದ್ಯಾರ್ಥಿಗಳು ಯಾವ ತಪ್ಪನ್ನೂ ಮಾಡಿದರೂ ಅವರನ್ನು ಬೈಯುತ್ತಿರಲಿಲ್ಲ. ಹೊಡೆಯುವುದಂತೂ ಇಲ್ಲವೇ ಇಲ್ಲ. ಅವರ ತಪ್ಪನ್ನು ಅವರಿಗೆ ತಿಳಿಸಿಕೊಟ್ಟೇ ಅವರನ್ನು ತಿದ್ದುವುದು.

ಆದರೂ ಯಾರಾದರೂ ಮೊಂಡು ವಿದ್ಯಾರ್ಥಿ ತಪ್ಪನ್ನು ತಿದ್ದಿಕೊಳ್ಳದೆ ಹೋದರೆ?

ಅವನನ್ನು ಬೈಯುತ್ತಿರಲಿಲ್ಲ. ಹೊಡೆಯುತ್ತಿರಲಿಲ್ಲ.

ಆದರೆ ಮಂಜಪ್ಪನವರು ಪ್ರಾಯಶ್ಚಿತ್ತವಾಗಿ ತಾವು ಉಪವಾಸ ಮಾಡುತ್ತಿದ್ದರು. ಮೊಂಡು ಹುಡುಗ ತನ್ನ ನಡತೆಗೆ ನಾಚಿಕೆಪಟ್ಟು ತಿದ್ದಿಕೊಳ್ಳುತ್ತಿದ್ದ.

ಆಶ್ರಮದ ವಿದ್ಯಾರ್ಥಿಗಳನ್ನು ಪ್ರತಿವರ್ಷ ಇತಿಹಾಸ ಪ್ರಸಿದ್ಧ ಸ್ಥಳಗಳಿಗೆ ಕರೆದೊಯ್ಯುವ ಪದ್ಧತಿ ಇತ್ತು. ವಿದ್ಯಾರ್ಥಿಗಳ ದೇಹಾರೋಗ್ಯದ ವಿಷಯದಲ್ಲಿ ಮಂಜಪ್ಪನವರು ವಿಶೇಷ ಎಚ್ಚರಿಕೆ ವಹಿಸುತ್ತಿದ್ದರು. ಈ ವಿದ್ಯಾಲಯದ ಗರಡಿಯಲ್ಲಿ ತಯಾರಾದ ಅನೇಕರು ಇಂದು ಗಣ್ಯ ಸಾಹಿತಿಗಳಾಗಿದ್ದಾರೆ; ಖ್ಯಾತ ಉದ್ಯಮಿಗಳಾಗಿದ್ದರೆ; ಶ್ರೇಷ್ಠ ಸಮಾಜ ಕಾರ್ಯಕರ್ತರಾಗಿದ್ದಾರೆ.

ಬಾಲ್ಯ ಸಾಹಿತ್ಯ ಪ್ರಚಾರ

ವಿದ್ಯಾಲಯ ಸಂಘಟನೆಯೊಂದಿಗೆ ಹರ್ಡೇಕರ್ ಮಂಜಪ್ಪನವರು ಆಲಮಟ್ಟಿಯಲ್ಲಿ ಮುದ್ರಣ ಮಂದಿರವನ್ನೂ ಸ್ಥಾಪಿಸಿದರು. ಎಳೆಯ ಮಕ್ಕಳ ಮನಸ್ಸು ಹಿಡಿಯುವಂತೆ ಸುಲಭ ಭಾಷೆಯಲ್ಲಿ ರಾಷ್ಟ್ರೀಯ ಮಹಾಪುರುಷರ ಜೀವನ ಚಿತ್ರಗಳನ್ನು ಬಿಡಿಸಿ ಪ್ರಕಟಿಸಿದರು. ಮಕ್ಕಳಿಗೆ ಅವು ಬಹು ಉಪಯುಕ್ತವಾದವು. ಅವರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸಲು ಸಹಾಯಕಾರಿಯಾದವು. ೧೯೩೩ರಲ್ಲಿ ಪ್ರತ್ಯೇಕ ಮಕ್ಕಳ ಪುಸ್ತಕ ಮಾಲೆಯನ್ನೇ ಹೆಣೆದರು. ಅವುಗಳಲ್ಲಿ ಅರಳಿದ ಕೆಲವು ಕುಸುಮಗಳಿವು. ೧. ಪುಲಿಕೇಶಿ ೨. ವಿವೇಕಾನಂದ ೩. ಲಜಪತ ರಾಯ್‌ ೪. ಏಕಲವ್ಯ ೫. ಕಚದೇವ ೬. ದೇವಯಾನಿ ೭. ಸುಕಲಾದೇವಿ ೮. ಬಸವಣ್ಣ ೯. ಪ್ರಭುದೇವ ೧೦. ಅಕ್ಕಮಹಾದೇವಿ ೧೧. ಶರಣ ಬಸವೇಶ.

ಒಟ್ಟಿನಲ್ಲಿ ಮಂಜಪ್ಪನವರನ್ನು ಕನ್ನಡದಲ್ಲಿ ಮಕ್ಕಳಿಗಾಗಿಯೇ ಪುಸ್ತಕಗಳನ್ನು ಬರೆದ ಪ್ರಾರಂಭದ ಲೇಖಕರಲ್ಲಿ ಒಬ್ಬರು ಎಂದು ಗೌರವಿಸಬೇಕು. ಮಕ್ಕಳಿಗಾಗಿ ಆಗಲಿ, ದೊಡ್ಡವರಿಗಾಗಿ ಆಗಲಿ ಅವರು ಪುಸ್ತಕ ಬರೆದಾಗ ಅವರಿಗಿರುತ್ತಿದ್ದುದು ಒಂದೇ ಗುರಿ – ದೇಶಕ್ಕೆ ಒಳ್ಳೆಯದಾಗಬೇಕು ಎಂದು.

ಶ್ರೇಷ್ಠ ಸಮಾಜ ಸುಧಾರಕರು

ಅಸ್ಪೃಶ್ಯತಾ ನಿವಾರಣೆಗಾಗಿ ಅವಿರತ ಹೋರಾಟ ಇವರದು. ಅದಕ್ಕೆ “ಆದಿ ಜನ ಸುಧಾರಣೆ” ಯೆಂಬ ಚಿಕ್ಕ ಹೊತ್ತಗೆಯೇ ಸಾಕ್ಷಿ. ಅಸ್ಪೃಶ್ಯತಾ ನಿವಾರಣೆಗಾಗಿ “ಶರಣ ಸಂದೇಶ”ದಲ್ಲಿ ಉಗ್ರವಾದ ಸಂಪಾದಕೀಯಗಳನ್ನು ಬರೆಯುತ್ತಿದ್ದರು. ಮಂಜಪ್ಪನವರು “ಸರ್ವಜ್ಞ”ನಂತೆ ಅಸ್ಪೃಶ್ಯತೆಯನ್ನು ಬಿಚ್ಚು ನುಡಿಗಳಲ್ಲಿ ಖಂಡಿಸಿದರು. ಮಹಿಳೆಯರ ಉದ್ಧಾರಕ್ಕಾಗಿಯೂ ಶ್ರಮಿಸಿದರು. “ಸ್ತ್ರೀಯರೇ ಜನಾಂಗದ ಜನನಿಯರು. ಅವರು ನೀತಿಪರಾಗಿದ್ದರೇನೇ ಜನಾಂಗವು ಸುಖಶಾಂತಿಗಳಿಂದ ಜೀವಿಸುವುದು. ರಾಷ್ಟ್ರವೆಂಬ ರಥಕ್ಕೆ ಸ್ತ್ರೀಪುರುಷರೇ ಎರಡು ಚಕ್ರಗಳು. ಆದಕಾರಣ “ಸ್ತ್ರೀಯರಿಗೆ ವಿದ್ಯಾಭ್ಯಾಸ ಕೊಡುವದು ಅಗತ್ಯ” ಎಂದು ಪ್ರತಿಪಾದಿಸಿದರು.”

ಶರಣ ಸಂದೇಶ” ವಾರಪತ್ರಿಕೆ

ಆಲಮಟ್ಟಿ ಆಶ್ರಮದಿಂದ ಅವರು ಮಾಡಿದ ಮಹತ್ವದ ಇನ್ನೊಂದು ಪವಿತ್ರ ಕಾರ್ಯವೆಂದರೆ “ಶರಣ ಸಂದೇಶ” ವಾರಪತ್ರಿಕೆಯನ್ನು ಹೊರಡಿಸಿದುದು. ೧೯೩೧ರಿಂದ ತಮ್ಮ ಜೀವನದ ಕೊನೆಯುಸಿರಿರುವವರೆಗೆ ಅದನ್ನು ನಡೆಸಿಕೊಂಡು ಬಂದರು. ಅವರ ಸ್ವತಂತ್ರವಾದ ವಿಚಾರಗಳ ಪ್ರತಿನಿಧಿಯಾಗಿ “ಶರಣ ಸಂದೇಶ” ನಾಡಿನ ಜನಮನವನ್ನು ತಟ್ಟಿತು. ರಾಷ್ಟ್ರದ ರಾಜಕೀಯ, ಸಾಮಾಜಿಕ ಹಾಗೂ ಸಾಂಪತ್ತಿಕ ಸುಧಾರಣೆಗಾಗಿ ಮೀಸಲಾಗಿತ್ತು. ಸಾಮಾಜಿಕ ಅನ್ಯಾಯ, ದಾಸ್ಯ, ದೋಷ, ದ್ವೇಷಾದಿಗಳೇ ಎಲ್ಲ ದುಃಖಗಳಿಗೆ ಮೂಲ ಕಾರಣವೆಂಬುದನ್ನು “ಶರಣ ಸಂದೇಶ”ದ ಮೂಲಕ ಸಾರಿದರು. “ಶರಣ ಸಂದೇಶ”ದ ಅಗ್ರ ಲೇಖನಗಳು ಇಂದಿಗೂ ಇತಿಹಾಸ, ರಾಜ್ಯಶಾಸ್ತ್ರ ಹಾಗೂ ಸಮಾಜ ಶಾಸ್ತ್ರದ ಅಭ್ಯಾಸಿಗಳಿಗೆ ಉಪಯುಕ್ತವಾಗಿವೆ. ಪತ್ರಿಕಾ ಬರಹಗಳನ್ನು ಸಾಹಿತ್ಯ ಮಟ್ಟಕ್ಕೇರಿಸಿದ ಕೀರ್ತಿ ಅವರದು. ಅಭಿಪ್ರಾಯವನ್ನು ಸ್ಪಷ್ಟವಾಗಿ, ಹರಿತವಾಗಿ, ಓದುಗರ ಮನಸ್ಸಿನಲ್ಲಿ ಬಹುಕಾಲ ನಿಲ್ಲುವಂತೆ ನಿರೂಪಿಸುತ್ತಿದ್ದರು ಅವರು. ಕೆಳಗಿನ ವಾಕ್ಯಗಳು ಅವರ ಬರಹದ ಶಕ್ತಿಗೆ ಕೆಲವು ಉದಾಹರಣೆಗಳು :

“ಜಪಾನಿನ ರಣಚಂಡಿ ಎತ್ತ ಸಾಗುವಳು?” ನೀರ ಕೊಡದಿರೆ ಎಣ್ಣೆಯ ಉಗ್ಗಬಹುದೆ?, “ತಗಣಿ ಕಚ್ಚಿದರೆ ಮನೆಗೆ ಬೆಂಕಿಯೇ?”, “ಬೆಳೆದವರಿಗೆ ಬರಿಗೈ ಮಾಡುವರೆ?”, “ಕತ್ತಿಯ ಕೊಡಬಹುದು, ಕಲಿತನವ ಕೊಡಬಹುದೆ?” ಈ ವಾಕ್ಯಗಳು ನಾಣ್ನುಡಿಗಳಂತೆ ಅರ್ಥಗರ್ಭಿತವಾಗಿವೆ. ಈ ಮಾತುಗಳು ಕಿರಿದಾಗಿ ಕಂಡರೂ ಇವುಗಳಿಗೆ ದೊಡ್ಡ ಹಿನ್ನೆಲೆಯಿದೆ. ಈ ಕೆಳಗಿನ ವಾಕ್ಯಗಳು ಮಂಜಪ್ಪನವರ ಉತ್ತಮ ಗದ್ಯಕ್ಕೆ ನಿದರ್ಶನವಾಗಿವೆ :

“ತತ್ವಮಾನ್ಯ, ಕೃತಿ ಶೂನ್ಯ.”

“ನೀರಡಿಸಿ ವಿಷಯ ಕುಡಿವಂತೆ”

“ಗಾಂಧೀಜಿ ಸ್ವರಾಜ್ಯದ ಕೀಲಿಕೈ”

“ಅರಬರ ಮನೆಯಲ್ಲಿ ಯುದ್ಧದ ಬೆಂಕಿ”

ಅವರ ಬರಹಗಳು ಸಾಹಿತ್ಯದ ಕೆಚ್ಚು, ವಿಜ್ಞಾನಿಯ ತರ್ಕ, ಪ್ರವಾದಿಯ ಮುನ್ನೋಟ ಇವುಗಳ ತ್ರಿವೇಣಿ ಸಂಗಮ. ದೇಶದ ಪರಿಸ್ಥಿತಿಯ ಸೂಕ್ಷ್ಮ ಅಭ್ಯಾಸದ ಫಲವಾಗಿ ಅವರ ನುರಿತ ಬರಹಗಳು ಖಡ್ಗಕ್ಕಿಂತಲೂ ಹರಿತವಾಗಿರುತ್ತಿದ್ದವು.

ಮಂಜಪ್ಪನವರ ಆಲೋಚನೆಗಳು ಯಾವಾಗಲೂ ರಚನಾತ್ಮಕವಾಗಿರುತ್ತಿದ್ದವು. ಸಮಾಜ, ಪಕ್ಷ, ಪಂಥ ಮತ್ತು ಸಂಸ್ಥೆಗಳ ಗುಣದೋಷಗಳ ವಿಮರ್ಶೆ ಅವರ ವೈಶಿಷ್ಟ್ಯವಾಗಿತ್ತು. “ನ್ಯಾಯನಿಷ್ಠುರ ದಾಕ್ಷಿಣ್ಯ ಪರನಾನಲ್ಲವಯ್ಯಾ, ಲೋಕವಿರೋಧಿ ಶರಣನಾರಿಗೂ ಅಂಜುವನಲ್ಲ” ಎಂಬ ಬಸವಣ್ಣನವರ ಮಾತು “ಶರಣ ಸಂದೇಶ”ದ ಧೋರಣೆಯಾಗಿತ್ತು. ಅವರಿಗೆ ಬಸವಣ್ಣನವರೊಬ್ಬರೇ ಪ್ರೇಮಾದರದ ಮೂರ್ತಿಯಾಗಿರದೆ ಬುದ್ಧ, ಮಹಾವೀರ, ಪರಮಹಂಸ, ಶಂಕರ, ಮಧ್ವ, ರಾಜಾನುಜ, ಗುರುನಾನಕ, ಸ್ವಾಮಿ ವಿವೇಕಾನಂದ, ರವೀಂದ್ರನಾಥ ಠಾಕೂರ್, ಮದನಮೋಹನ ಮಾಲವೀಯ, ಗಾಂಧೀಜಿ ಮೊದಲಾದ ಮಹಾ ವಿಭೂತಿಪುರುಷರ ಬಗ್ಗೆಯೂ ಅಷ್ಟೇ ಆದರವಿತ್ತು. ಈ ಮಹಾಪುರುಷರ ಭಾವಚಿತ್ರಗಳನ್ನು ಪತ್ರಿಕೆಯ ಮುಖಪುಟದ ಮೇಲೆ ಆಗಾಗ ಪ್ರಕಟಿಸಿ ತಮ್ಮ ಗೌರವಗಳನ್ನು ಸಲ್ಲಿಸುತ್ತಿದ್ದರು. ಮಂಜಪ್ಪನವರು ವಿಶಾಲ ಮನೋಭಾವದವರಾಗಿದ್ದರು. ಸಂಕುಚಿತ ಜಾತೀಯತೆಯನ್ನು ಎಂದೂ ತೋರಲಿಲ್ಲ. ಒಳ್ಳೆಯ ಕಾರ್ಯ ಮತ್ತು ನೀತಿಗಳನ್ನು ಇವರು ಶ್ರದ್ಧೆಯಿಂದ ಬೆಂಬಲಿಸುತ್ತಿದ್ದರು.

ಸೃಷ್ಟಿ ಸೌಂದರ್ಯೋಪಾಸಕರು

ಅವರು ಪಟ್ಟಣ ವಾಸವನ್ನು ಎಂದೂ ಬಯಸಲಿಲ್ಲ. ಪ್ರಶಾಂತ ಮನೋಹರವಾದ ಏಕಾಂತ ಸ್ಥಳವೆಂದರೆ ಅವರಿಗೆ ಬಹುಪ್ರಿಯ. ಅಡವಿ, ಗುಡ್ಡ, ಮರ, ನದಿ – ನಕ್ಷತ್ರಗಳನ್ನು ನೋಡುವುದರ ಕಡೆಗೆ ವಿಶೇಷ ಒಲವು. ರಾತ್ರಿ ಆಕಾಶವನ್ನು ನೋಡುವುದೊಂದು ಅವರ ಹವ್ಯಾಸವೇ ಆಗಿತ್ತು. ಆದುದರಿಂದಲೇ ಹರಿಹರದ ಆಶ್ರಮ, ಆಲಮಟ್ಟಿ ಆಶ್ರಮಗಳು ಅವರ ಕಾರ್ಯಕ್ಷೇತ್ರಳಾದವು. ಅವರ ಬರವಣಿಗೆಯ ಕಾರ್ಯಗಳು ನಿರಂತರವಾಗಿ ಸಾಗಲು ಹೆಚ್ಚು ಅನುಕೂಲಕರ ಸ್ಥಳಗಳಾದವು. ಅವರು ಯಾವ ಪಕ್ಷ-ಪಂಗಡಗಳಿಗೆ ಸೇರಲಿಲ್ಲ. ವೈಯಕ್ತಿಕ ಸ್ವಾತಂತ್ರ್ಯವನ್ನು ಕಾಯ್ದುಕೊಂಡರು. ಪ್ರತಿಯೊಂದನ್ನು ತರ್ಕದ ಒರೆಗಲ್ಲಿಗೆ ಹಚ್ಚಿ ಸತ್ಯವನ್ನು ಕಂಡುಹಿಡಿಯುವ ಗುಣವನ್ನು ರಕ್ತಗತ ಮಾಡಿಕೊಂಡರು.

ಆಕರ್ಷಕವಾದ ವ್ಯಕ್ತಿತ್ವ, ಬಂಗಾರದ ಬಾಳು

ತೇಜಃಪುಂಜವಾದ ಮುಖಮಂಡಲ, ವಿಶಾಲವಾದ ಹಣೆ, ತಿದ್ದಿದ ಮೂಗು, ಅಗಲವಾದ ಹೊಳಪಾದ ಕಣ್ಣುಗಳು ಅವರ ವ್ಯಕ್ತಿತ್ವಕ್ಕೆ ವಿಶೇಷ ಮೆರುಗನ್ನು ತಂದಿದ್ದವು. ಬಂಗಾರದಂತಹ ಚೊಕ್ಕ ಬಾಳು ಅವರದು. ಅವರ ಬಾಳೇ ಒಂದು ತಪಸ್ಸಾಗಿತ್ತು. ಫಲಾಪೇಕ್ಷೆಯಿಲ್ಲದ ಕಾರ್ಯತತ್ಪರತೆ, ಸಕಲರ ಸೇವೆ ಮಾಡುವ ಆಕಾಂಕ್ಷಿಗಳಿಂದಾಗಿ ನಾಡಿನ ಕಣ್ಮಣಿಯಾದರು. ಒಣ ಹರಟೆ ಅವರಿಗೆ ಸೇರದು. ಕಾರಣವಿಲ್ಲದೆ ಮಾತನಾಡುವ ಗೋಜಿಗೆ ಹೋಗುತ್ತಿರಲಿಲ್ಲ. ಯಾವಾಗಲೂ ಏನಾದರೊಂದು ಉಪಯುಕ್ತ ಕಾರ್ಯದಲ್ಲಿ ಮನಸ್ಸನ್ನು ತೊಡಗಿಸುತ್ತಿದ್ದರು. ಅನವಶ್ಯಕ ವಸ್ತುಗಳನ್ನು ಎಂದಿಗೂ ಉಪಯೋಗಿಸಲಿಲ್ಲ. ವರ್ಷಕ್ಕೆ ಬೇಕಾಗುವ ೮-೧೦ ಖಾದಿ ಬಟ್ಟೆಗಳಿಗಾಗಿ ೧೦-೧೨ ರೂಪಾಯಿ ಮಾತ್ರ ವೆಚ್ಚ ಮಾಡುತ್ತಿದ್ದರು. ಸರಳ ಜೀವನ, ಸರಳ ಸ್ವಭಾವ, ಉನ್ನತ ವಿಚಾರಗಳ ತ್ರಿವೇಣಿ ಸಂಗಮ ಅವರ ಬದುಕು. ಓದುಬರಹ ಬೇಸರವಾದರೆ ತೋಟದ ಕೆಲಸ ಅವರಿಗೆ ಪ್ರಿಯವಾಗಿತ್ತು. ಅವರ ಜೀವನ ಶರಣ ಜೀವನ.

ಕೊನೆಯ ಕೃತಿ : “ಎಚ್ಚೆತ್ತ ಹಿಂದೂಸ್ಥಾನ”

೧೯೨೧ರಿಂದ ಮಂಜಪ್ಪನವರು ಉಪಯುಕ್ತ ಗ್ರಂಥಗಳನ್ನು ರಚಿಸಲು ಮುಂದಾದರು. ಕನಿಷ್ಠ ಪ್ರತಿವರ್ಷ ಒಂದೊಂದು ಪುಸ್ತಕವನ್ನಾದರೂ ಪ್ರಕಟಿಸುತ್ತ ಬಂದರು. “ಭಾರತೀಯರ ದೇಶಭಕ್ತಿ” ಒಂದು ಹೊಸ ವಿಚಾರ ಸರಣಿಯ ಪುಸ್ತಕ. ಅವರ ಆತ್ಮಚರಿತ್ರೆ ಸಾಧಕ ಜೀವನದ ರನ್ನಗನ್ನಡಿ. ಖಾದಿಯ ಇತಿಹಾಸವನ್ನು “ಖಾದಿಶಾಸ್ತ್ರ”ವೆಂಬ ಗ್ರಂಥದಲ್ಲಿ ಕಾಣಬಹುದು. “ಬಸವ ಚರಿತ್ರೆ” ಅವರ ಶ್ರೇಷ್ಠ ಸಂಶೋಧನಾತ್ಮಕ ಕೃತಿ. “ಋಗ್ವೇದಸಾರ” ವೆಂಬ ೪೦೦ ಪುಟಗಳ ಬೃಹತ್‌ ಗ್ರಂಥ ಹಣದ ಮತ್ತು ಕಾಗದದ ಅಭಾವದಿಂದ ಪ್ರಕಟವಾಗದೆ ಹೋಯಿತು. “ಎಚ್ಚೆತ್ತ ಹಿಂದೂಸ್ಥಾನ” ಸುಮಾರು ೬೦ ಪುಟಗಳ ಚಿಕ್ಕ ಪುಸ್ತಕ ಅವರ ಕೊನೆಯ ಕೃತಿಯಾಯಿತು. ಅದು ಅವರ ಅರವತ್ತೊಂದನೆಯ ಹುಟ್ಟು ದಿನದಂದು ಬೆಳಕಿಗೆ ಬಂತು. ಇಲ್ಲಿ ಭಾರತ ಇತಿಹಾಸಗಳ ಸುಮಾರು ೫೦೦೦ ವರ್ಷಗಳ ಏರಿತಳದ ವಿವೇಚನೆಯಿದೆ. ಅತ್ಯಂತ ವಿಚಾರಪೂರಿತ ಮಹತ್ವದ ಪುಸ್ತಕ. ಸ್ವತಂತ್ರ ಭಾರತದ ಕನಸನ್ನು ಕಂಡ ಮಂಜಪ್ಪನವರು ಭಾರತದ ಪ್ರಗತಿಯ ಚಿತ್ರ ಇಲ್ಲಿ ಬಿಡಿಸಿದ್ದಾರೆ.

ಈ ಪುಸ್ತಕದಲ್ಲಿನ ಕೆಲವು ಮಾತುಗಳು ಇವು : “ಹಿಂದೂಸ್ಥಾನ ವಿವಿಧ ಸಾಂಪತ್ತಿನ ಕಣಜದಂತಿದೆ. ಅನೇಕ ಖನಿಜ ಪದಾರ್ಥಗಳೂ ವನಸ್ಪತಿಗಳೂ ಹಣ್ಣು ಹಂಪಲುಗಳೂ ಕಾಳು ಕಡ್ಡಿಗಳೂ ಗೆಡ್ಡೆ ಗೆಣಸುಗಳೂ ಹೂಗಳು ಪಶುಪಕ್ಷಿಗಳೂ ಹಿಂದೂಸ್ಥಾನದಲ್ಲಿರುವಷ್ಟು ಜಗತ್ತಿನ ಬೇರಾವ ದೇಶದಲ್ಲಿಯೂ ಇಲ್ಲ ಹಿಂದೂಸ್ಥಾನ ನಂದನವನದಂತಿದೆ. ಆದರೆ ಇದರ ಉಪಯೋಗವನ್ನು ಮಾಡಿಕೊಳ್ಳುವ ಬುದ್ಧಿ, ಸಾಮರ್ಥ್ಯಗಳು ಮಾತ್ರ ಬೇಕು ಇಲ್ಲದಿದ್ದರೆ ಹೇಡಿಯ ಕೈಯಲ್ಲಿ ಚಂದ್ರಾಯುಧ ಕೊಟ್ಟಂತಾಗುವುದು.”

ಕೊನೆಯ ದಿನಗಳು

ಅಖಂಡ ಜೀವನವನ್ನೇ ರಾಷ್ಟ್ರಸೇವೆಗೆ ಅರ್ಪಿಸಿಕೊಂಡ ಮಂಜಪ್ಪನವರು ೬೦ ವರ್ಷ ತುಂಬು ಬಾಳನ್ನು ಬಾಳಿದರು. ಇನ್ನೂ ತಮ್ಮ ಪರಿಪಕ್ವ ಅನುಭವಗಳ ಅನುಭವಾಮೃತವನ್ನು ಸಲ್ಲಿಸುವ ಆಕಾಂಕ್ಷೆ ಅವರದಾಗಿತ್ತು. ಕೆಲಸದ ಒತ್ತಡ ಹೆಚ್ಚಾಯಿತು. ಕಟ್ಟುನಿಟ್ಟಿನ ಜೀವನ ನಡೆಸಿದ ಈ ಮಹಾವ್ಯಕ್ತಿ ೧೯೪೭ರ ಜನವರಿ ಮೂರರಂದು ದೇಹವನ್ನು ಅಗಲಿದರು. ತೀರಿಕೊಳ್ಳುವ ಮುನ್ನ ಅವರು ಕೊಟ್ಟ ದಿವ್ಯ ಸಂದೇಶ : “ಧೀರರಾಗಿರಿ, ವೀರರಾಗಿರಿ, ಪವಿತ್ರರಾಗಿರಿ, ಸ್ವತಂತ್ರ ರಾಷ್ಟ್ರ ವೀರರಾಗಿರಿ.”

ಹರ್ಡೇಕರ್ ಮಂಜಪ್ಪನವರ ವ್ಯಕ್ತಿತ್ವವೂ ಹಿರಿದಾದುದು, ಬಾಳೂ ಹಿರಿದಾದುದು. ಸನ್ಯಾಸಿಯ ಜೀವನವನ್ನು ನಡೆಸಿದರು ಅವರು – ತಮ್ಮ ಮಟ್ಟಿಗೆ; ಮದುವೆಯಾಗದೆ, ತೀರ ಕ್ಲುಪ್ತವಾದ, ಉಪ್ಪು ಖಾರಗಳಿಲ್ಲದ ಆಹಾರ ಸೇವಿಸಿ, ತಮ್ಮದೆಂದು ಏನನ್ನೂ ಇಟ್ಟುಕೊಳ್ಳದೆ ಬಾಳಿದರು. ಆದರೆ ಸನ್ಯಾಸಿ ಎಂದು ಸಮಾಜದಿಂದ ದೂರ ಉಳಿಯಲಿಲ್ಲ, ಧ್ಯಾನ

 

"ಸ್ವತಂತ್ರ ರಾಷ್ಟ್ರ ವೀರರಾಗಿರಿ"

ಪೂಜೆಗಳಷ್ಟರಲ್ಲೇ ದಿನಗಳನ್ನು ಕಳೆಯಲಿಲ್ಲ. ಧ್ಯಾನ ಪೂಜೆಗಳೊಂದಿಗೆ ಸಮಾಜ ಸೇವೆ, ಸಹ ಮಾನವರ ಸೇವೆಗಳಲ್ಲಿ ಆಯುಷ್ಯವನ್ನೇ ಸವೆಸಿದರು. ಸಮಾಜ, ಆಶ್ರಮ, ವಿದ್ಯಾಲಯ ಏನನ್ನೇ ಯೋಚಿಸಲಿ, ಮಾಡಲಿ, ಅದೆಲ್ಲ ಸಮಾಜಕ್ಕಾಗಿ, ದೇಶಕ್ಕಾಗಿ. ಎಳೆಯ ಮಕ್ಕಳಿಂದ ವೃದ್ಧರವರೆಗೆ ಹೆಂಗಸರಿಗೆ ಗಂಡಸರಿಗೆ ಎಲ್ಲರಿಗೆ ಉಪಯುಕ್ತವಾಗುವ ಪುಸ್ತಕಗಳನ್ನು ಬರೆದರು. ಎಲ್ಲ ರೀತಿಯಲ್ಲಿ ಸಾರ್ಥಕವಾದ ಬಾಳು ಮಂಜಪ್ಪನವರದು.

ಅವರ ಜೀವನವು ಒಂದು ಪಾಲು ಬುದ್ಧಿಯ, ಒಂಬತ್ತು ಪಾಲು ಬೆವರಿನ ಕರ್ಮಯೋಗದ ಫಲ. ಅಂತೆಯೇ ಅವರು ಪ್ರತಿಭಾಶಾಲಿಗಳಾದರು; ಪ್ರಭಾವಶಾಲಿಗಳಾದರು. ವ್ಯವಸ್ಥಿತವಾದ ಸೂತ್ರಬದ್ಧವಾದ ಕಾರ್ಯಪದ್ಧತಿಯನ್ನು ರೂಪಿಸಿಕೊಂಡರು. ಅವರ ಸ್ಫೂರ್ತಿದಾಯಕ ಪಾವನ ಜೀವನ ಎಲ್ಲರಿಗೂ ಆದರ್ಶಪ್ರಾಯವಾಗಿದೆ.

ಮತ್ತೆ ಅವರು ಆಚರಿಸಿ ತೋರಿಸಿದ ಸಂದೇಶವನ್ನು ಸ್ಮರಿಸೋಣ :

“ಧೀರರಾಗಿರಿ, ವೀರರಾಗಿರಿ, ಪವಿತ್ರರಾಗಿರಿ, ಸ್ವತಂತ್ರ ರಾಷ್ಟ್ರ ವೀರರಾಗಿರಿ.”