ಕೇರಳದ ನಾಟಿ ವೈದ್ಯರೊಬ್ಬರು ಏಡ್ಸ್‌ಗೆ ಔಷಧಿ ಕೊಡುತ್ತೇನೆಂದು ಜನಪ್ರಿಯ ಕನ್ನಡ ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿದ್ದರು. ತಾವು ೧೦ಕ್ಕೂ ಹೆಚ್ಚು ರೋಗಿಗಳನ್ನು ಗುಣಪಡಿಸಿರುವುದಾಗಿಯೂ, ಅವರೆಲ್ಲ ಈಗ ಆರೋಗ್ಯಯುತ ಜೀವನ ನಡೆಸುತ್ತಿದ್ದಾರೆಂಬ ಪೂರಕ ಹೇಳಿಕೆಗಳೂ ಆ ಜಾಹೀರಾತಿನಲ್ಲಿತ್ತು. ಬೇರೆ ಬೇರೆ ರೋಗಗಳಿಗೂ ಈ ರೀತಿಯ ಜಾಹೀರಾತು ಬರುತ್ತಿರುವುದನ್ನು ದಿನನಿತ್ಯ ಕಾಣಬಹುದು.

ಗ್ರಾಹಕರು ಯಾವುದೇ ಜಾಹೀರಾತು ನಿಜವಲ್ಲದಿದ್ದರೆ, ಅದರ ವಿರುದ್ಧ ಗ್ರಾಹಕರ ವೇದಿಕೆಗೆ ತಮ್ಮಲ್ಲಿರುವ ಸಾಕ್ಷಿಸಹಿತ ದೂರು ನೀಡಬಹುದು ಅಥವಾ ಪೋಲೀಸರಿಗೆ ದೂರು ನೀಡಬಹುದು. ಕೇರಳದಲ್ಲಿ ಆದದ್ದೂ ಅದೇ. ನಾಟಿವೈದ್ಯರಿಂದ ಏಡ್ಸ್ ವಾಸಿಯಾಯಿತೆಂದು ಪ್ರಮಾಣಪತ್ರ ಪಡೆದ ರೋಗಿಯೊಬ್ಬ ರಾಜಾರೋಷವಾಗಿ ರೋಗವನ್ನು ಇತರರಿಗೆ ಹಂಚುತ್ತಿದ್ದ. ಆದರೆ ರೋಗಿಯ ಪತ್ನಿಯೇ ಪೋಲೀಸರಿಗೆ ದೂರು ನೀಡಿದಳು. ಈಗ ರೋಗಿ ಹಾಗೂ ನಾಟಿವೈದ್ಯ ಇಬ್ಬರೂ ಪೋಲೀಸರ ಅತಿಥಿಗಳಾಗಿದ್ದಾರೆ.

ಅನೇಕ ರೋಗಗಳಿಗೆ ಇಂದಿಗೂ ಗಿಡಮೂಲಿಕೆಗಳಿಂದ ತಯಾರಾದ ಔಷಧಗಳೇ ಹೆಚ್ಚು ಬಳಕೆಯಲ್ಲಿವೆ. ಆದರೆ ಒಂದು ರೋಗಕ್ಕೆ ಒಂದೇ ಜಾತಿಯ ಗಿಡಮೂಲಿಕೆಗಳನ್ನು ಬೇರೆ ಬೇರೆ ನಾಟಿವೈದ್ಯರು ಬೇರೆ ಬೇರೆ ರೀತಿ, ಬೇರೆ ಬೇರೆ ಪ್ರಮಾಣದಲ್ಲಿ ಕೊಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಬಹಳಷ್ಟು ನಾಟಿವೈದ್ಯರಿಗೆ ತಾವು ನೀಡುತ್ತಿರುವ ಔಷಧಿಯಲ್ಲಿರುವ ಅಂಶಗಳಾವುವು? ಪ್ರಮಾಣವೆಷ್ಟು? ಅವು ಅಡ್ಡ ಪರಿಣಾಮ ಬೀರಿದರೆ ಪರಿಹಾರವೇನು ಎನ್ನುವ ವಿಚಾರ ತಿಳಿದಿರುವುದಿಲ್ಲ. ಹಾಗೆಯೇ ಇದುವರೆಗೆ ನಾಟಿವೈದ್ಯರು ಔಷಧಗಳ ಅಡ್ಡಪರಿಣಾಮಗಳು-ವೈಫಲ್ಯಗಳನ್ನು ದಾಖಲಿಸುವ ಪ್ರಯತ್ನ ಸಹ ಮಾಡಿಲ್ಲದಿರುವುದು ವಿಷಾದನೀಯ. ಹೀಗೆ ದಾಖಲಾಗಿಲ್ಲದಿರುವುದರಿಂದಲೇ ಗಿಡಮೂಲಿಕಾ ಔಷಧಿಗಳು ಅತ್ಯಂತ ಪರಿಣಾಮಕಾರಿ ಎನ್ನುವ ತೀರ್ಮಾನ ಸರಿಯಲ್ಲ.

ಇಸವಿ ೧೯೯೦ರ ನಂತರ ಭಾರತೀಯ ವೈದ್ಯಪದ್ಧತಿಯ ಪುನರುತ್ಥಾನ ಎನ್ನುವ ಹೆಸರಿನಲ್ಲಿ ಬದಲೀ ವೈದ್ಯಕೀಯ ಅಥವಾ ಗಿಡಮೂಲಿಕಾ ವೈದ್ಯಕೀಯ ಜನಪ್ರಿಯವಾಗತೊಡಗಿತು. ಈಗ ಪ್ರಪಂಚದಾದ್ಯಂತ ಗಿಡಮೂಲಿಕೆಗಳದ್ದು ೧೪ ಬಿಲಿಯನ್ ಡಾಲರ್ ವ್ಯವಹಾರ. ಆಧುನಿಕ ವೈದ್ಯಶಾಸ್ತ್ರದ ಅಡ್ಡಪರಿಣಾಮಗಳು ಹಾಗೂ ಅಪನಂಬಿಕೆಗಳು ಬದಲೀ ವೈದ್ಯಕೀಯ ಜನಪ್ರಿಯವಾಗಲು ಕಾರಣವೆಂದು ಕೆಲವರ ಅಭಿಪ್ರಾಯ.

ಬದಲೀ ವೈದ್ಯಪದ್ಧತಿಯಲ್ಲಿ ಆಯುರ್ವೇದಕ್ಕೆ ಮೊದಲ ಸ್ಥಾನ. ಆಯುರ್ವೇದ ಸಾರದ ಪ್ರಕಾರ ಯಾವುದೇ ರೋಗಗಳಿಗೆ ಆಧುನಿಕ ವೈದ್ಯದ ಅವಶ್ಯಕತೆ ಇಲ್ಲ. ಆದರೆ ಜೀವನಕ್ರಮ ಆಧುನಿಕವಾಗಿರುವಾಗ ಆಯುವೇದವೇ ಅಂತಿಮ ಎನ್ನುವ ನಿರ್ಧಾರ ಸರಿಯಲ್ಲ. ಆಯುರ್ವೇದದಲ್ಲಿರುವ ಅನೇಕ ಔಷಧಿಗಳು ಆಧುನಿಕ ಸಂಶೋಧನೆಗಳಾಗಿರದೆ, ಕಾಲಾಂತರದಿಂದ ಬಂದದ್ದು. ಪೂರಕ ಮಾಹಿತಿಗಳು, ಕೇಸ್ ಸ್ಟಡಿಗಳು ಸಿಗದಿರುವುದು ಅದರ ಹಿನ್ನಡೆ. ಎಷ್ಟೋ ಸಾರಿ ಅಪಾಯಕಾರಿ ಹಂತದಲ್ಲಿ ಅಥವಾ ಕ್ಲಿಷ್ಟ ಸಮಯದಲ್ಲಿ ರೋಗಿಗಳನ್ನು ಕೈಬಿಟ್ಟ ವೈದ್ಯರಿದ್ದಾರೆ. ಬದಲೀ ಚಿಕಿತ್ಸೆ ಮಾಡುತ್ತಾ ರೋಗಿಯ ಕೊನೆಯ ಕ್ಷಣದವರೆಗೂ ಪ್ರಯೋಗ ಮಾಡುವ ವೈದ್ಯರಿದ್ದಾರೆ. ಆದರೆ ಇವರು ಮಾಡಿದ ತಪ್ಪು ಚಿಕಿತ್ಸೆಗೆ ಯಾವುದೇ ಪುರಾವೆ ಸಿಗುವುದಿಲ್ಲ. ಇನ್ನು ಶಿಕ್ಷೆಯ ಮಾತು ದೂರ ಉಳಿಯಿತು.

ಇತ್ತೀಚೆಗೆ ಗಿಡಮೂಲಿಕಾ ಔಷಧಿಗಳು ಭಾರೀ ಪ್ರಚಾರದಲ್ಲಿವೆ. ಮಾರುಕಟ್ಟೆಯಲ್ಲಿ ಸಿಗುವ ಆರೋಗ್ಯವರ್ಧಕ-ಸೌಂದರ್ಯವರ್ಧಕಗಳೆಲ್ಲ ಗಿಡಮೂಲಿಕೆಗಳಿಂದ ತಯಾರಿಸಿದ್ದು ಎಂಬ ದೊಡ್ಡಕ್ಷರದ ಹಣೆಪಟ್ಟಿ ಹೊತ್ತಿರುತ್ತವೆ. ಆದರೆ ಇವಕ್ಕೆ ಯಾವುದೇ ವೈಜ್ಞಾನಿಕ ತಳಹದಿ ಇಲ್ಲವೆನ್ನುವುದು ಸ್ಪಷ್ಟ.

ಆಯುರ್ವೇದ ಕ್ಷೇತ್ರದಲ್ಲಿ ೪೦ ವರ್ಷ ಅನುಭವ ಇರುವ ಡಾ. ಭಟ್ನಾಗರ್ ಹೇಳುವುದಿದು;

ಆರೋಗ್ಯವರ್ಧಕ-ಸೌಂದರ್ಯವರ್ಧಕ ಗಿಡಮೂಲಿಕಾ ಔಷಧಿಗಳಲ್ಲಿ ಹೆಚ್ಚಿನವುಗಳಲ್ಲಿ ಹೇಳಿಕೊಂಡಿರುವ ಯಾವುದೇ ಗಿಡಮೂಲಿಕೆ ಅಂಶಗಳೂ ಇರುವುದಿಲ್ಲ.

ಇತರ ಔಷಧಿಗಳಂತೆ ಇವುಗಳಲ್ಲೂ ಕೆಲಸ ಮಾಡುವುದು ರಾಸಾಯನಿಕಗಳೇ.

ಆರೋಗ್ಯ-ಸೌಂದರ್ಯವರ್ಧಕಗಳಲ್ಲಿ ಗಿಡಮೂಲಿಕೆಗಳು ಯಾವ ಆಧಾರದ ಮೇಲೆ, ಎಷ್ಟು ಅಂಶ ಇವೆ ಎಂಬ ಮಾಹಿತಿ ಇರುವುದಿಲ್ಲ.

ಅನೇಕ ಗಿಡಮೂಲಿಕೆಗಳಲ್ಲಿ ಒಂದಕ್ಕಿಂತ ಹೆಚ್ಚು ತೀಕ್ಷ್ಣ ರಾಸಾಯನಿಕಗಳಿರುವ ಸಾಧ್ಯತೆಗಳಿವೆ. ಬೆರೆಸುವಿಕೆಯಲ್ಲಿ ಚಿಕ್ಕ ಏರುಪೇರಾದರೂ ಔಷಧವಾಗಬೇಕಿದ್ದ ರಾಸಾಯನಿಕ ನಿಷ್ಕ್ರಿಯವಾಗುವ ಇಲ್ಲವೇ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.

ಒಮ್ಮೆಲೇ ತಯಾರಾದ ಗಿಡಮೂಲಿಕಾ ಔಷಧಿಗಳಲ್ಲಿ ಬೇರೆ ಬೇರೆ ಬಾಟಲಿಗಳಲ್ಲಿ ಬೇರೆ ಬೇರೆ ಪ್ರಮಾಣದ ರಾಸಾಯನಿಗಳಿರುವ ಸಾಧ್ಯತೆ ಇದೆ.

ಭಟ್ನಾಗರ್ ಸಂಶೋಧನೆಯನ್ನು ವೈದ್ಯಕೀಯ ವಲಯದಲ್ಲಿ ಗಂಭೀರವಾಗಿ ಪರಿಗಣಿಸಲಾಗಿದೆ. ಗಿಡಮೂಲಿಕೆಗಳಿಂದ ತಯಾರಾಗಿದೆ ಎಂದಕೂಡಲೇ ಅತ್ಯಂತ ಸುರಕ್ಷಿತ, ಪರಿಣಾಮಕಾರಿ ಮತ್ತು ಬೆಲೆ ಕಡಿಮೆ ಎನ್ನುವ ತಪ್ಪು ನಂಬಿಕೆ ಜನರಲ್ಲಿದೆ. ಸಹಜವಾಗಿ ಬಂದದ್ದೆಲ್ಲ ಸುರಕ್ಷಿತ ಎನ್ನುವ ವಿಚಾರವೇ ತಪ್ಪು. ಒಮ್ಮೊಮ್ಮೆ ರೋಗ ಗುಣಪಡಿಸಲು ಅಸಹಜ ಔಷಧಿಗಳನ್ನೂ ಬಳಸಬೇಕಾಗುತ್ತದೆ.

ಇಂದು ೧,೫೦೦ಕ್ಕೂ ಹೆಚ್ಚು ಗಿಡಮೂಲಿಕಾ ಔಷಧಿಗಳು ಮಾರುಕಟ್ಟೆಯಲ್ಲಿವೆ. ಅದರಲ್ಲಿ ಸುಮಾರು ೫೦ ಔಷಧಿಗಳು ವೈಜ್ಞಾನಿಕವಾಗಿ ಸಂಶೋಧಿತ ಹಾಗೂ ಅವುಗಳ ಅಡ್ಡ ಪರಿಣಾಮಗಳು, ಉಪಯೋಗಗಳು ಸಾಬೀತಾಗಿವೆ. ಆದರೆ ಉಳಿದ ಔಷಧಿಗಳು ಯಾವುದೇ ಸಂಶೋಧನೆಗೊಳಪಡದೆ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿವೆ. ಇದರಿಂದ ವೈದ್ಯಕೀಯ ಜಗತ್ತು ಉತ್ತರಿಸಲಾಗದ ಸ್ಥಿತಿಯಲ್ಲಿದೆ. ಇಲ್ಲಿಯವರೆಗೂ ಈ ಔಷಧಗಳು ಔಷಧ ನಿಯಂತ್ರಣ ಕಾನೂನಿನ ಅಡಿಯಲ್ಲಿ ಬಂದಿಲ್ಲ. ಔಷಧ ನಿಯಂತ್ರಣ ಮಂಡಳಿ ಕೇವಲ ಅಲೋಪತಿ ಔಷಧಗಳಿಗೆ ಮಾತ್ರ ಸೀಮಿತವೇ?

ಔಷಧ ಯಾವ ಮೂಲದಿಂದ ಬಂದರೂ ಔಷಧವೇ. ಅದು ಸೂಕ್ತ ಸಂಶೋಧನೆಗೊಳಪಟ್ಟು, ಅದರಲ್ಲಿರುವ ಅಂಶಗಳು, ಅದರ ಪರಿಣಾಮಗಳು ಸಾಬೀತಾದ ನಂತರ ಮಾರುಕಟ್ಟೆಗೆ, ಜನರ ಉಪಯೋಗಕ್ಕೆ ಬರಬೇಕು. ಈ ಬದಲೀ ಔಷಧಗಳ ಮೇಲೆ, ತಯಾರಕರ ಮೇಲೆ ಔಷಧ ನಿಯಂತ್ರಣ ಕಾಯಿದೆ ಅನ್ವಯವಾಗದಿರಲು ಕಾರಣವೇನು? ಇನ್ನು ಮುಂದಾದರೂ ಇದನ್ನು ಸರಿಪಡಿಸಲು ಮುಂದಾಗುತ್ತಾರಾ ಎಂದು ಕಾದು ನೋಡಬೇಕು.

– ಈ ಲೇಖನ ವಿವಿಧ ಪತ್ರಿಕೆಗಳ ವರದಿಯನ್ನು ಆಧರಿಸಿದೆ. ಹೆಚ್ಚುವರಿ ಮಾಹಿತಿಗಾಗಿ ತಜ್ಞ ವೈದ್ಯರನ್ನು ಸಹ ಸಂಪರ್ಕಿಸಲಾಗಿದೆ.