ಹದಿನಾರು ವರ್ಷದ ಹುಡುಗ.

ಪ್ರಸಿದ್ಧನೂ, ಸಮರ್ಥನೂ ಆದ ರಾಜನ ಮಗ. ತಂದೆತಾಯಿಯ ಪ್ರೀತಿಯ ಮಗ. ಅರಮನೆಯಲ್ಲಿ ಅಣ್ಣ ಮತ್ತು ತಂಗಿಯರೊಂದಿಗೆ ಸಂತೋಷವಾಗಿ ಬೆಳೆದವನು. ಅಣ್ಣ-ತಮ್ಮ, ತಂಗಿಯಲ್ಲಿ ತುಂಬಾ ಪ್ರೀತಿ.

ಸಂತೋಷ, ಸಂಭ್ರಮ, ಪ್ರೀತಿಗಳ ಮಧ್ಯೆ ಬೆಳೆದ ಹುಡುಗನಿಗೆ ಇದ್ದಕ್ಕಿದ್ದಂತೆ ವಿಪತ್ತಿನ ಬೆಟ್ಟವೇ ಮೈಮೇಲೆ ಕಳಚಿ ಬಿದ್ದಂತಾಯಿತು.

ಶತ್ರುಗಳು ಗಡಿಗೆ ಬಂದರೆಂದು ಅಣ್ಣ ಸೈನ್ಯದೊಡನೆ ಹೊರಟ. ಅವನೊಡನೆ ಹೊರಟ ಹುಡುಗ. ತಂದೆಗೆ ಕಾಯಿಲೆ ಎಂಬ ಸುದ್ದಿ ಕೇಳಿ ಹಿಂದಕ್ಕೆ ಧಾವಿಸಿದ.

ತಂದೆಗೆ ಗುಣವಾಗದ ಕಾಯಿಲೆ; ತಾನು ಸುಮಂಗಲಿಯಾಗಿಯೇ ಜಗತ್ತನ್ನು ಬಿಡಬೇಕೆಂದು ತಾಯಿ ಅಗ್ನಿ ಪ್ರವೇಶ ಮಾಡಿದಳು. ತಂದೆ ತೀರಿಕೊಂಡ.

ತಂಗಿಯ ಗಂಡನನ್ನು ಶತ್ರುಗಳು ಕೊಂದು, ತಂಗಿಯನ್ನು ಸೆರೆಯಲ್ಲಿಟ್ಟರು.

ಅವನ್ನು ಸದೆಬಡಿದು ತಂಗಿಯನ್ನು ರಕ್ಷಿಸಲು ಹೋದ ಅಣ್ಣ ಶತ್ರುಗಳ ಮೋಸಕ್ಕೆ ಬಲಿಯಾದ. ಅವನ ಜೊತೆಗೆ ಹೋದ ಸೋದರಮಾವನೂ ಹಿಂದಕ್ಕೆ ಬರಲಿಲ್ಲ.

ಎಲ್ಲ ಕೆಲವೇ ದಿನಗಳಲ್ಲಿ ನಡೆದುಹೋಯಿತು. ಸುತ್ತ ರಾಜ್ಯವನ್ನು ನುಂಗಲು ಹದ್ದಿನಂತೆ ಕಾದಿರುವ ರಾಜರುಗಳು. ಹದಿನಾರು ವರ್ಷದ ಹುಡುಗ ಇಂತಹ ಪರಿಸ್ಥಿತಿಯನ್ನು ಎದುರಿಸಬೇಕಾಯಿತು.

ಧೈರ್ಯವಾಗಿ ಎದುರಿಸಿದ, ಉತ್ತರ ಭಾರತದ ಚಕ್ರವರ್ತಿಯಾದ, ಧರ್ಮಕ್ಕೆ ಆಶ್ರಯನಾದ.

ಎಂತಹ ಧೈರ್ಯ! ಎಂತಹ ಚಿತ್ತಸ್ಥೈರ್ಯ! ಆ ಹುಡುಗನೇ ಹರ್ಷವರ್ಧನ.

ಪ್ರಭಾಕರವರ್ಧನ

ಹರ್ಷವರ್ಧನ “ವರ್ಧನ” ವಂಶಕ್ಕೆ ಸೇರಿದವನು. ಹರ್ಷನ ತಂದೆ ಪ್ರಭಾಕರವರ್ಧನನ ಕಾಲದಲ್ಲಿಯೇ ವರ್ಧನರ ರಾಜ್ಯ ವಿಸ್ತಾರಗೊಂಡು ಪ್ರಾಬಲ್ಯಕ್ಕೆ ಬಂದುದು.

ಪ್ರಭಾಕರವರ್ಧನನು ತನ್ನ ಬಾಹುಬಲ, ಪರಾಕ್ರಮಗಳಿಂದ ಶತ್ರುರಾಜರನ್ನು ಗೆದ್ದು ಅವರ ರಾಜ್ಯಗಳನ್ನು ಸ್ಥಾನೇಶ್ವರದೊಂದಿಗೆ ವಿಲೀನಗೊಳಿಸಿದನು. ಹೊಣರು, ಸಿಂಧುರಾಜ, ಗುರ್ಜರ, ಗಾಂಧಾರ, ಲಾಟರು ಮತ್ತು ಮಾಳವಾಧಿಪತಿಗಳನ್ನು ಸಮಮಾಡಿ ತನ್ನ ಸಾರ್ವಭೌಮತ್ವವನ್ನು ಸ್ಥಾಪಿಸಿದ.

ಸಂತೋಷ ಉಕ್ಕಿ ಹರಿಯುವ ಅರಮನೆಯಲ್ಲಿ

ಪುರುಷಸಿಂಹನೆನಿಸಿಕೊಂಡ ಮಹಾರಾಜಾಧಿರಾಜ ಪ್ರಭಾಕರವರ್ಧನ, ಅವನ ಹೆಂಡತಿ ಮಹಾರಾಣಿ ಯಶೋಮತಿ ದೇವಿಗೆ ಮೂವರು ಮಕ್ಕಳು. ಇಬ್ಬರು ಗಂಡುಮಕ್ಕಳು: ರಾಜವರ್ಧನ, ಹರ್ಷವರ್ಧನ; ರಾಜಶ್ರೀ ಮಗಳು.

ಕ್ರಿಸ್ತಶಕ 590ರಲ್ಲಿ ಹರ್ಷವರ್ಧನ ಹುಟ್ಟಿದ. ಅವನ ಜನ್ಮದಿನ ಜೇಷ್ಠಮಾಸದ ಶುಕ್ಲಪಕ್ಷದ ದ್ವಾದಶಿ. ಆಗಿನ ಪದ್ಧತಿಯಂತೆ ರಾಜನು ಜ್ಯೋತಿಷ್ಯದಲ್ಲಿ ಪ್ರಸಿದ್ಧರಾದ ವಿದ್ವಾಂಸರನ್ನು ಬರಮಾಡಿಕೊಂಡು ಮಗುವಿನ ಜಾತಕವನ್ನು ಬರೆಸಿದ. “ಈ ಮಗು ಮುಂದೆ ಪ್ರಸಿದ್ಧ ಚಕ್ರವರ್ತಿಯಾಗುತ್ತಾನೆ” ಎಂದು ಅವರು ಹೇಳಿದರಂತೆ.

ಹರ್ಷನು ಅಂಬೆಗಾಲಿಡುವ ಮಗುವಾಗಿದ್ದಾಗ ರಾಜ್ಯಶ್ರೀ ಜನಿಸಿದಳು. ರಾಜ್ಯವರ್ಧನ ಹಾಗೂ ಹರ್ಷವರ್ಧನರ ಪ್ರೀತಿಯ ತಂಗಿಯಾಗಿ ರಾಜ್ಯಶ್ರೀ ಬೆಳೆದಳು. ತಂದೆಯು ಮಕ್ಕಳ ವಿದ್ಯಾಭ್ಯಾಸಕ್ಕೆ ಏರ್ಪಾಡು ಮಾಡಿದ.

ರಾಜಕುಮಾರಿ ರಾಜ್ಯಶ್ರೀಯು ಕ್ಷತ್ರಿಯ ಹೆಣ್ಣು ಮಕ್ಕಳು ಪಡೆಯಬೇಕಾಗಿದ್ದ ವಿದ್ಯೆಯನ್ನು ಪಡೆದು ಸಕಲ ಗುಣಸಂಪನ್ನೆಯಾದಳು. ಅನೇಕ ರಾಜಕುಮಾರರು ಈ ಸೌಂದರ್ಯಸಿರಿಯನ್ನು ಮದುವೆಯಾಗಲು ಹಾತೊರೆಯುತ್ತಿದ್ದರು. ಕನ್ಯಾಕುಬ್ಜವನ್ನಾಳುತ್ತಿದ್ದ ಮೌಖರೀ ವಂಶದ ಅವಂತಿವರ್ಮನ ಹಿರಿಯ ಮಗ ಗೃಹವರ್ಮ ಸದ್ಗುಣಗಳಿಗೆ ಹೆಸರಾಗಿದ್ದು, ರಾಜ್ಯಶ್ರೀಗೆ ಅವನೇ ತಕ್ಕ ವರನೆಂದು ಪ್ರಭಾಕರವರ್ಧನನು ತೀರ್ಮಾನಿಸಿದನು. ಅವನೊಂದಿಗೆ ರಾಜ್ಯಶ್ರೀಯ ವಿವಾಹ ವಿಜೃಂಭಣೆಯಿಂದ ನಡೆಯಿತು.

ಅಣ್ಣನ ಸೈನ್ಯದೊಡನೆ

ಬೆಳೆದುನಿಂತ ರಾಜಪುತ್ರರು ರಾಜ್ಯಭಾರವನ್ನು ಹೊತ್ತಿದ್ದ ತಂದೆಗೆ ಹಲವು ವಿಧದಲ್ಲಿ ನೆರವಾಗತೊಡಗಿದರು. ವರ್ಧನ ವಂಶದ ಕೀರ್ತಿ ದಶದಿಕ್ಕುಗಳಿಗೂ ಮುಟ್ಟಿತ್ತು.

ಆದರೆ ವಿಪತ್ತು ಕಾದಿತ್ತು.

ಹಿಂದೆ ಪ್ರಭಾಕರವರ್ಧನನಿಂದ ಪರಾಜಿತರಾಗಿ ಹಿಮ್ಮೆಟ್ಟಿದ್ದ ಹೂಣರು ಪುನಃ ಉತ್ತರದ ಹಿಮಾಲಯದ ಕಡೆ ದಾಳಿ ಮಾಡಲು ಪಕ್ರಮಿಸಿದರು. ಇವರು ಅನಾಗರಿಕರು, ಕ್ರೂರಿಗಳು. ರಾಜನಿಗೆ ಮುಪ್ಪು. ಉತ್ತರದ ಗಡಿಯಲ್ಲಿ ಆರಂಭವಾದ ಈ ಹಾವಳಿಯನ್ನು ತಡೆಯಲು ಅರಸನು ಯುದ್ಧಭೂಮಿಗೆ ಹೊರಡುವಂತಿರಲಿಲ್ಲ. ಆದ್ದರಿಂದ ಸರ್ವ ಸಿದ್ಧತೆಗಳನ್ನೂ ಮಾಡಿ ಹಿರಿಯ ಮಗ ರಾಜ್ಯವರ್ಧನನನ್ನು ಸ್ಥಾನೇಶ್ವರದ ಮಹಾಸೇನೆಗೆ ಪ್ರಧಾನ ದಂಡನಾಯಕನನ್ನಾಗಿ ನೇಮಿಸಿ ಕಳುಹಿಸಿದ.

ಹರ್ಷವರ್ಧನ ಇನ್ನೂ ಚಿಕ್ಕವ. ತಂದೆ ಅವನನ್ನು ಯುದ್ಧಕ್ಕೆ ಕಳುಹಿಸಲಿಲ್ಲ. ಹರ್ಷವರ್ಧನನಿಗೆ ತಾನೂ ಯುದ್ಧ ಮಾಡಬೇಕೆಂಬ ಆಕಾಂಕ್ಷೆ. ತಾನೂ ಯುದ್ಧಕ್ಕೆ ಹೊರಡುವೆನೆಂದು ಹರ್ಷವರ್ಧನ ಹಟ ಹಿಡಿದನು. ಕಡೆಗೆ ಯುದ್ಧ ರಂಗಕ್ಕೆ ಪ್ರವೇಶ ಮಾಡದಿದ್ದರೂ ಅಣ್ಣನ ಸೇನೆಯೊಡನೆ ಹೋಗುತ್ತೇನೆ ಎಂದನು. ತಂದೆ ಒಪ್ಪಿದ. ಹರ್ಷನು ಧನುರ್ಧಾರಿಯಾಗಿ ಕುದುರೆಯನ್ನೇರಿ ತಾನೂ ಅಣ್ಣನನ್ನು ಹಿಂಬಾಲಿಸಿದನು.

ತಾಯಿ-ತಂದೆ ಇನ್ನಿಲ್ಲ

ಇತ್ತ ರಾಜಧಾನಿಯಲ್ಲಿ ಅರಸ ಪ್ರಭಾಕರವರ್ಧನನು ರೋಗಪೀಡಿತನಾಗಿ ಹಾಸಿಗೆ ಹಿಡಿದಿದ್ದನು. ಸ್ಥಾನೇಶ್ವರದಿಂದ ದೂತನೊಬ್ಬನು ಸುದ್ದಿಯನ್ನು ಹರ್ಷನಿಗೆ ಮುಟ್ಟಿಸಿದ.

ಹರ್ಷವರ್ಧನನಿಗೆ ತಂದೆಯಲ್ಲಿ ತುಂಬಾ ಪ್ರೀತಿ. ಅವನ ತೀವ್ರ ಅನಾರೋಗ್ಯದ ಸುದ್ದಿಕೇಳಿ ತಳಮಳಿಸಿದ. ತಂದೆಗೆ ಗುಣವಾಗಲಿ ಎಂದು ಪ್ರಾರ್ಥನೆ ಮಾಡಿದ, ದಾನಗಳನ್ನು ಮಾಡಿದ. ಅಹಾರ ತೆಗೆದುಕೊಳ್ಳುವಷ್ಟೂ ಅವನಿಗೆ ತಾಳ್ಮೆ ಇಲ್ಲ, ತಂದೆಯನ್ನು ನೋಡಬೇಕೆಂಬ ಕಾತರ. ಕೂಡಲೇ ತನ್ನ ಅಶ್ವದಳದೊಂದಿಗೆ ರಾಜಧಾನಿಯತ್ತ ಧಾವಿಸಿದನು. ಹೂಣರೊಂದಿಗೆ ಹಿಮಾಲಯದ ತಪ್ಪಲಲ್ಲಿ ಹೋರಾಡುತ್ತಿದ್ದ ಅಣ್ಣನಿಗೂ ತಂದೆಯ ರೋಗವಾರ್ತೆಯನ್ನು ತಿಳಿಸಲು ದೂತರನ್ನು ಅಟ್ಟಿದನು. ಅವಸರದಿಂದ ದಾರಿಯನ್ನು ಸವೆಸಿ ಮಾರನೆಯ ಮಧ್ಯಾಹ್ನವೇ ರಾಜಧಾನಿಯನ್ನು ಮುಟ್ಟಿದನು.

ಅರಮನೆಯಲ್ಲಿನ ದೃಶ್ಯಗಳನ್ನು ಕಂಡು ಅವನಿಗೆ ಬಹು ಸಂಕಟವಾಯಿತು. ವೈದ್ಯರು ಔಷಧ ಸಿದ್ಧತೆಯಲ್ಲಿ ತೊಡಗಿದ್ದರು. ವೈದಿಕರು ಅರಸನು ಗುಣಮುಖನಾಗಲು ಶಾಂತಿ-ಹೋಮಗಳನ್ನು ನಡೆಸುತ್ತಿದ್ದರು. ಸಾಮಂತ ರಾಜರೂ ಹಿರಿಯ ದಂಡನಾಯಕರೂ ಚಿಂತಾಮಗ್ನರಾಗಿ ಬಾಡಿದ ಮುಖಗಳನ್ನು ತಗ್ಗಿಸಿ ನಿಂತಿದ್ದರು. ಒಳಗೆ ದವಳಗೃಹದಲ್ಲಿ ಅರಸನು ಹಾಸಿಗೆ ಹಿಡಿದಿದ್ದನು. ಮಹಾಸಾಧ್ವಿ ಯಶೋಮತಿ ದೇವಿ ದುಃಖತಪ್ತಳಾಗಿ ರೋಗಪೀಡಿತನಾದ ಪತಿಯ ಶುಶ್ರೂಷೆಯಲ್ಲಿ ತೊಡಗಿದ್ದಳು.

ಹರ್ಷನು ತಂದೆಯ ಪಾದಗಳಿಗೆ ನಮಸ್ಕರಿಸಿದ. ರಾಜನು ಅವನನ್ನು ಸಂತೈಸುತ್ತ ತನ್ನ ರೋಗವು ಉಲ್ಬಣಿಸಿರುವ ಕಾರಣ ಇನ್ನು ಹೆಚ್ಚು ಕಾಲ ತಾನು ಉಳಿಯಲಾರೆನೆಂದು ಹೇಳಿದನು. “ನೀನೂ, ನಿನ್ನ ಅಣ್ಣನೂ ಧೈರ್ಯಗೆಡಬೇಡಿ. ರಾಜ್ಯವನ್ನು ಚೆನ್ನಾಗಿ ಆಳಿ” ಎಂದು ಹೇಳಿದನು. ನಿದ್ರಾಹಾರಗಳಿಲ್ಲದೆ ಸೊರಗಿದ್ದ ಮಗನನ್ನು ಊಟ ಮಾಡುವಂತೆ ಆಗ್ರಹಪಡಿಸಿದನು.

ಇಂತಹ ವಿಷಮ ಪರಿಸ್ಥಿತಿಯಲ್ಲಿ ಹರ್ಷನು ತಂದೆಯ ಪಕ್ಕದಲ್ಲಿಯೇ ಇದ್ದು ಔಷದೋಪಚಾರಗಳನ್ನು ನೋಡಿಕೊಳ್ಳುತ್ತಿದ್ದನು. ಅಣ್ಣನಾದ ರಾಜ್ಯವರ್ಧನನನ್ನು ಕರೆತರಲು ಶೀಘ್ರಗಾಮಿ ದೂತರನ್ನು ಅಟ್ಟಿದನು. ರಾಜನ ಸ್ಥಿತಿ ಉಲ್ಬಣಗೊಳ್ಳುತ್ತಿದ್ದುದನ್ನು ಸಾಧ್ವೀಮಣಿ ಯಶೋಮತಿ ದೇವಿಯು ಗಮನಿಸಿದಳು. ಅವನಿಗೆ ಇನ್ನು ಗುಣವಾಗುವುದಿಲ್ಲ ಎಂದು ತಿಳಿದುಕೊಂಡಳು. ತನಗಿನ್ನೂ ಮಾಂಗಲ್ಯ ಭಾಗ್ಯ ಇರುವಂತೆಯೇ ಮುತ್ತೈದೆಯಾಗಿ ಸಾಯಬೇಕು, ಅದಕ್ಕಾಗಿ ಅಗ್ನಪ್ರವೇಶ ಮಾಡಬೇಕು ಎಂದು ತೀರ್ಮಾನಿಸಿದಳು. ಸಿದ್ಧತೆಗಳನ್ನು ಮಾಡಿಕೊಂಡಳು. ಈ ಭೀಕರ ಸುದ್ದಿಯನ್ನು ಕೇಳಿದ ಹರ್ಷನು ತಲ್ಲಣಿಸಿಹೋದನು. ತಾಯಿಯು ಆಗಲೇ ಅಗ್ನಿಪ್ರವೇಶಕ್ಕೆ ಸಿದ್ಧಳಾಗಿದ್ದಳು. ಆಕೆ ಸ್ನಾನಾದಿಗಳನ್ನು ಮುಗಿಸಿ ಪರಿಶುಭ್ರಳಾಗಿ ಅರಿಶಿನಕುಂಕುಮ ಶೋಭಿತಳಾಗಿ, ದುಃಖಿಸುತ್ತಿದ್ದ ಪರಿವಾರದವರನ್ನೆಲ್ಲಾ ಸಂತೈಸುತ್ತಿದ್ದಳು. ಹರ್ಷವರ್ಧನ ಅವಳ ಬಳಿಗೋಡಿ ಅಪ್ಪಿಕೊಂಡ. ತನ್ನನ್ನೂ ತನ್ನ ಅಣ್ಣ-ತಂಗಿಯರನ್ನೂ ಬಿಟ್ಟು ಹೋಗಬಾರದೆಂದು ಬೇಡಿಕೊಂಡ. ಯಶೋಮತಿಯು ಮುತ್ತೈದೆಯ ಸಾವು ಸಾಧ್ವೀಮಣಿಗಳಿಗೆ ತಕ್ಕುದೆಂದು ಹೇಳಿ ಮಗನನ್ನು ಸಮಾಧಾನಪಡಿಸಿದಳು. ಅವನು ಕಣ್ಣೀರು ಅವಳ ಪಾದಗಳನ್ನು ತೊಳೆಯಿತು. ಅನಂತರ ಯಶೋಮತಿ ದೇವಿಯು ಅಗ್ನಿಪ್ರವೇಶ ಮಾಡಿ ಪುಣ್ಯ ಸತಿಯಾದಳು.

ಎಲ್ಲವನ್ನೂ ತಿಳಿದುಕೊಂಡ ಪ್ರಭಾಕರವರ್ಧನನು ಹರ್ಷನನ್ನು ಹತ್ತಿರಕ್ಕೆ ಕರೆದು ಸಂತೈಸಿ ಸ್ಥೈರ್ಯಗೆಡದೆ ರಾಜ್ಯವನ್ನು ಸ್ವೀಕರಿಸಿ ಪ್ರಜಾಪಾಲನೆ ನಡೆಸುವಂತೆ ಅಣತಿಯಿತ್ತನು. ರಾಜ್ಯವನ್ನು ಕಬಳಿಸಲು ಹವಣಿಸುತ್ತಿದ್ದ ಶತ್ರುಗಳ ಬಗ್ಗೆ ಎಚ್ಚರಿಸಿ ಶತ್ರು ಶೇಷವನ್ನುಳಿಸದೇ ನಾಶ ಪಡಿಸಬೇಕೆಂದು ತಿಳಿಯಹೇಳಿದನು.

ಇನ್ನೂ ರಾಜ್ಯವರ್ಧನನು ರಾಜಧಾನಿಗೆ ಬಂದಿರಲಿಲ್ಲ. ಕಿರಿಯನಾದ ತಾನು ರಾಜ್ಯಭಾರವನ್ನು ವಹಿಸಿಕೊಳ್ಳುವುದು ಸರಿಯೇ ಎಂದು ಹರ್ಷ ಚಿಂತಿಸುತ್ತಿದ್ದನು.

ಪ್ರಭಾಕರವರ್ಧನನು ಕಾಲವಶನಾದನು. ನಾಡಿನಲ್ಲಿ ಚೈತನ್ಯವೇ ಇಲ್ಲದಂತಾಯಿತು.

ಸಿಂಹಾಸನ ಬೇಡದ ಅಣ್ಣ-ತಮ್ಮ

ಅಣ್ಣನು ಬಂದ ಕೂಡಲೆ ರಾಜ್ಯಭಾರದ ಹೊರೆಯನ್ನು ಅವನಿಗೆ ವಹಿಸಿಕೊಡಲು ಹರ್ಷನು ತೀರ್ಮಾನಿಸಿದನು. ಸಮಸ್ತ ರಾಜ್ಯವೂ ಹರ್ಷನ ಕೈಯಲ್ಲಿತ್ತು; ತಂದೆಯು ಬಿಟ್ಟುಹೋದ ಸಿಂಹಾಸನಕ್ಕೆ ಅವನು ಈಗ ಸುಲಭವಾಗಿ ಉತ್ತರಾಧಿಕಾರಿಯಾಗಬಹುದಿತ್ತು. ಆದರೆ ಅವನು ಅಣ್ಣನ ಬರುವಿಕೆಯನ್ನೇ ನೋಡುತ್ತಾ ಕಾತರದಿಂದ ಕಾಯುತ್ತಿದ್ದ.

ರಾಜ್ಯವರ್ಧನನಿಗೂ ತಂದೆಯ ಮರಣವಾರ್ತೆ ತಲುಪಿತು. ಅದನ್ನು ಕೇಳಿ ಅವನು ಕುಸಿದುಬಿದ್ದನು. ಅತಿವೇಗದಿಂದ ಪ್ರಯಾಣಮಾಡಿ ರಾಜಧಾನಿಯನ್ನು ಸೇರಿದನು. ಅಣ್ಣ-ತಮ್ಮಂದಿರಿಗೆ ದುಃಖ ತಡೆಯದಾಯಿತು. ರಾಜ್ಯವರ್ಧನನಿಗೆ ರಾಜ್ಯವೂ ಬೇಡವೆನಿಸಿತು. ವಿರಾಗಿಯಾಗಿ ಸಂನ್ಯಾಸ ಸ್ವೀಕರಿಸುವೆನೆಂದು ನಿರ್ಧರಿಸಿದ, ಹರ್ಷವರ್ಧನನೇ ರಾಜ್ಯಭಾರವನ್ನು ವಹಿಸಿಕೊಳ್ಳಬೇಕೆಂದು ಒತ್ತಾಯ ಮಾಡಿದ. ಆದರೆ ಹರ್ಷ ಒಪ್ಪಲಿಲ್ಲ. ಅಣ್ಣ ಸಂನ್ಯಾಸಿಯಾದರೆ ತಾನೂ ಅಣ್ಣನನ್ನೇ ಹಿಂಬಾಲಿಸುವುದಾಗಿ ಹಟಮಾಡಿದನು.

ವಿಪತ್ತುಗಳ ಪರಂಪರೆ

ಪ್ರಭಾಕರವರ್ಧನ ಶೂರ ರಾಜನಾಗಿದ್ದನು. ಅವನ ಸಾವು ಅವನ ಶತ್ರುಗಳಿಗೆ ಸಂತೋಷವನ್ನುಂಟುಮಾಡಿತು. ತಾವು ಅವನ ರಾಜ್ಯವನ್ನು ನುಂಗಬಹುದು ಎಂದು ಕೊಂಡರು.

ತಂದೆತಾಯಿಯ ಸಾವಿನಿಂದ ಶೋಕತಪ್ತರಾದ ಸೋದರರಿಗೆ ಮತ್ತೊಂದು ಭಯಂಕರ ಸುದ್ದಿ ಹಿಂದೆಯೇ ಬಂದಿತು.

ಪ್ರಭಾಕರವರ್ಧನನು ಮರಣ ಹೊಂದಿದ ದಿನವೇ ಕನ್ಯಾಕುಬ್ಜದ ಗೃಹವರ್ಮ ಮಹಾರಾಜನನ್ನು ಕ್ರೂರಿಯಾದ ಮಾಳವದ ರಾಜ ಕೊಂದ; ಆತನ ರಾಣಿ ರಾಜ್ಯಶ್ರೀಯನ್ನು ಸೆರೆಯಲ್ಲಿಟ್ಟಿದ್ದಾನೆ-ರಾಜ್ಯಶ್ರೀ ಕಡೆಯಿಂದ ಬಂದ ದೂತ ಸಂವಾದಕ ಎದೆಯನ್ನು ತಲ್ಲಣಗೊಳಿಸುವ ಸುದ್ದಿಯನ್ನು ತಂದ. ಅಲ್ಲದೆ “ವರ್ಧನರ ರಾಯ ಅರಾಜಕವಾಗಿದೆಯೆಂದು ತಿಳಿದು ಸ್ಥಾನೇಶ್ವರವನ್ನೂ ಕಬಳಿಸಲು ದಂಡೆತ್ತಿ ಬರಲು ಮಾಳವದ ರಾಜ ಸಿದ್ಧತೆಗಳನ್ನು ನಡೆಸುತ್ತಿದ್ದಾನೆ ಎಂದು ವದಂತಿ ಕೇಳಿ ಬರುತ್ತಿದೆ” ಎಂದೂ ಹೇಳಿದ.

ಈ ಘೋರ ವಾರ್ತೆಯನ್ನು ಕೇಳಿ ರಾಜ್ಯವರ್ಧನನು ಕೆರಳಿದ ಸಿಂಹದಂತಾದ. “ಈಗಲೇ ಮಾಳವ ವಂಶವನ್ನು ನಿರ್ನಾಮ ಮಾಡಲು ಹೊರಡುವೆನು” ಎಂದು ರಾಜ್ಯವರ್ದನನು ಪ್ರತಿಜ್ಞೆಯನ್ನು ಮಾಡಿದ.

“ನನ್ನ ತಂಗಿಯ ಬಾಳನ್ನು ನುಚ್ಚುನೂರು ಮಾಡಿದ ನೀಚನನ್ನು ಸದೆಬಡಿಯಲು ನಾನೂ ಬರುತ್ತೇನೆ” ಎಂದು ಹಟ ಹಿಡಿದ ಹರ್ಷವರ್ಧನ. ಆದರೆ ರಾಜ್ಯವರ್ಧನನು ಅವನನ್ನು ತಡೆದ. “ಇಬ್ಬರೂ ಹೊರಟರೆ ರಾಜ್ಯದ ಗತಿ ಏನು? ಮೊದಲೇ ಶತ್ರುಗಳು ಮೇಲೆ ಬೀಳಲು ಸಿದ್ಧರಾಗುತ್ತಿದ್ದಾರೆ. ನೀನು ಇಲ್ಲಿಯೇ ಇದ್ದು ರಾಜ್ಯದ ಯೋಗಕ್ಷೇಮ ನೋಡಿಕೋ” ಎಂದು ತಮ್ಮನಿಗೆ ಹೇಳಿ, ಒಪ್ಪಿಸಿದ.

ರಾಜ್ಯವರ್ಧನ ಹತ್ತುಸಾವಿರ ಕುದುರೆಗಳ ಸೈನ್ಯದೊಂದಿಗೆ ಹೊರಟ. ಜೊತೆಗೆ ಅವನ ಸೋದರಮಾವ ಭಣ್ಡಿ.

ಮಾಳವದವರೊಂದಿಗೆ ನಡೆದ ಕಾಳಗದಲ್ಲಿ ರಾಜ್ಯವರ್ಧನನು ವಿಜಯಗಳಿಸಿದನು. ಇನ್ನೇನು ಶತ್ರುಗಳ ಸರ್ವನಾಶವಾಯಿತೆನ್ನುವಷ್ಟರಲ್ಲಿ ಗೌಡರಾಜ್ಯಾಧಿಪನಾದ ಶಶಾಂಕನು ಮಾಳವದ ರಾಜನೊಂದಿಗೆ ಸೇರಿ ಅವನನ್ನು ರಕ್ಷಿಸಲು ಒಂದು ಪಿತೂರಿ ನಡೆಸಿದನು. ಅವರ ಮಾತನ್ನು ನಂಬಿದ ರಾಜ್ಯವರ್ಧನನನ್ನು ಅವರು ಮೋಸದಿಂದ ಕೊಂದರು.

ದಿಗ್ವಿಜಯದ ಘೋಷಣೆ

ತಾಯಿ ಹೋದಳು, ತಂದೆ ಹೋದ, ತಂಗಿ ಗಂಡನನ್ನು ಕಳೆದುಕೊಂಡು ಶತ್ರುಗಳ ಸೆರೆಯಲ್ಲಿ.

ಈ ದುಃಖ ಪರಂಪರೆಯಲ್ಲಿ ಮುಳುಗಿದ್ದ ಹರ್ಷವರ್ಧನನಿಗೆ ಸುದ್ದಿ ಬಂದಿತು- ಅಣ್ಣ ರಾಜ್ಯವರ್ಧನ ಶತ್ರುಗಳ ಮೋಸಕ್ಕೆ ಬಲಿಯಾದ!

ಹರ್ಷವರ್ಧನನಿಗೆ ದುಃಖ ಒತ್ತಿರಿಸಿತು. ಕೋಪದಿಂದ ಮೈಯೆಲ್ಲ ನಡುಗಿತು. “ಶಶಾಂಕನ ಗೌಡವಂಶವನ್ನೇ ನಿರ್ಮೂಲ ಮಾಡುತ್ತೇನೆ” ಎಂದು ಪ್ರತಿಜ್ಞೆ ಮಾಡಿದ.

ಪ್ರಭಾಕರವರ್ಧನನ ಕಾಲದಿಂದಲೂ ಮಹಾಸೇನಾಧಿಪತಿಯಾಗಿ ಪುಷ್ಪಭೂತಿ ವಂಶಕ್ಕೆ ಸೇವೆ ಸಲ್ಲಿಸಿದ್ದ ವಯೋವೃದ್ಧನೂ, ಜ್ಞಾನವೃದ್ಧನೂ ಸಮರ ಚತುರನೂ ಆಗಿದ್ದ ಸಿಂಹನಾದನು ಹರ್ಷನನ್ನು ಹುರಿದುಂಬಿಸಿದನು. ಅವನು, “ಪ್ರಭೂ, ಪುಷ್ಪಭೂತಿ ವಂಶದ ಕುಡಿಯಾದ ನೀನು ಈಗ ದುಷ್ಟರನ್ನು ಸೆದೆಬಡಿಯುವ ಹೊಣೆಯನ್ನು ಹೊರಬೇಕಾಗಿದೆ. ದೇವಗುಪ್ತ ಹಾಗೂ ಗೌಡರಾಜರನ್ನು ಮಾತ್ರ ಅಪ್ಪಳಿಸಿದರೆ ಸಾಲದು. ನಿನ್ನ ಪೂರ್ವಜರ ಜಾಡನ್ನು ಹಿಡಿದು ಮೂರು ಲೋಕಗಳನ್ನೂ ಜಯಿಸು. ಗೌಡದೊರೆಯಂತೆ ಮುಂದೆ ಯಾರೂ ನಡೆಯದಂತೆ ನಿನ್ನ ಪರಾಕ್ರಮವನ್ನು ತೋರಿಸು” ಎಂದು ಹೇಳಿದನು. ಹರ್ಷ ಈ ಸಲಹೆಯನ್ನು ಒಪ್ಪಿದ. ದಿಗ್ವಿಜಯವನ್ನು ಘೋಷಿಸಿ ಸಿದ್ಧತೆಗಳನ್ನೂ ಮಾಡತೊಡಗಿದ. “ತನ್ನ ಸಾರ್ವಭೌಮತ್ವವನ್ನು ಒಪ್ಪಿಕೊಂಡು ಕಪ್ಪಕಾಣಿಕೆಗಳನ್ನೊಪ್ಪಿಸಬೇಕು. ಇಲ್ಲದಿದ್ದರೆ ರಣರಂಗದಲ್ಲಿ ನನ್ನನ್ನು ಎದುರಿಸಬೇಕು” ಎಂದು ಎಲ್ಲಾ ರಾಜರಿಗೂ ತಿಳಿಸುವಂತೆ ತನ್ನ ಅಧಿಕಾರಿ ಅವಂತಿ ಎಂಬುವನಿಗೆ ಆಜ್ಞೆ ಮಾಡಿದನು.

ಈ ಸಮಯದಲ್ಲಿ ಕನ್ಯಾಕುಬ್ಜದಲ್ಲಿ ಅರಾಜಕತೆ ಉಂಟಾಯಿತು. ರಾಜ ಗೃಹವರ್ಮನು ತೀರಿಕೊಂಡಿದ್ದ. ರಾಜ್ಯಶ್ರೀ ಶತ್ರುಗಳ ಸೆರೆಯಲ್ಲಿದ್ದಳು. ಅಲ್ಲಿನ ಹಿರಿಯರೂ ಮಾರ್ಗದರ್ಶಕರೂ ಆದ ಕೆಲವರು ಹರ್ಷನಲ್ಲಿಗೆ ಬಂದು ತೆರವಾಗಿರುವ ಕನ್ಯಾಕುಬ್ಜದ ಸಿಂಹಾಸನವನ್ನು ಸ್ವೀಕರಿಸಿ ರಾಜ್ಯವಾಳಬೇಕೆಂದು ಅವನನ್ನು ಬೇಡಿಕೊಂಡರು. ಆದರೆ ಹರ್ಷನು, “ನನಗೆ ಜೀವನವೇ ಬೇಸರವಾಗಿದೆ. ರಾಜನಾಗುವ ಬಯಕೆ ಇಲ್ಲ” ಎಂದು ಕನ್ಯಾಕುಬ್ಜದ ಸಿಂಹಾಸನವನ್ನು ನಿರಾಕರಿಸಿದನು. ಕಡೆಗೆ ಪ್ರಜೆಗಳ ಹಿತರಕ್ಷಣೆಗಾಗಿ ಕನ್ಯಾಕುಬ್ಜವನ್ನು ಆಳಲು ಒಪ್ಪಿದನು.

ಹೊಸ ಸ್ನೇಹಿತ

ದಿಗ್ವಿಜಯದ ಘೋಷಣೆಯನ್ನು ಮಾಡಿದ್ದಾಯಿತು. ಎಲ್ಲವೂ ಸಿದ್ಧವಾದ ಕೂಡಲೇ ಒಂದು ದಿನ ಸುಮುಹೂರ್ತದಲ್ಲಿ ಸಮಸ್ತ ಸೇನೆಯೂ ವಿಜಯಯಾತ್ರೆಗೆ ಹೊರಟು ನಿಂತಿತು.

ಪಾಳೆಯದಲ್ಲಿ ಉತ್ಸಾಹಭರಿತರಾಗಿದ್ದ ದಂಡನಾಯಕರನ್ನೂ ಸಾಮಂತರಾಜರನ್ನೂ ಕಂಡು ಹರ್ಷನ ವೀರೋತ್ಸಾಹವೂ ಉಕ್ಕಿತು. ಈ ಸಮಯದಲ್ಲೆ ಹರ್ಷನ ಉತ್ಸಾಹಕ್ಕೆ ಮೆರಗುಕೊಡುವ ಮತ್ತೊಂದು ಸಂಗತಿ ನಡೆಯಿತು. ಪ್ರಾಗ್ಜ್ಯೋತಿಷ ರಾಜ್ಯ (ಈಗಿನ ಅಸ್ಸಾಂ) ರಾಜ ಭಾಸ್ಕರವರ್ಮನ ದೂತ ಹಂಸವೇಗನು ಹರ್ಷನ ಶಿಬಿರಕ್ಕೆ ಬಂದ.

ಹರ್ಷನು ಅವನನ್ನು ಆದರದಿಂದ ಬರಮಾಡಿಕೊಂಡ.

ಭಾಸ್ಕರವರ್ಮನು ಹರ್ಷನಿಗೆ ಅನೇಕ ಉಡುಗೊರೆಗಳನ್ನು ಕಳುಹಿಸಿದ್ದ. ಅವುಗಳಲ್ಲಿ ಅಪೂರ್ವವಾದ ಶ್ವೇತಚ್ಛತ್ರ ಒಂದಿತ್ತು. ಭಾಸ್ಕರವರ್ಮ ಹರ್ಷನ ಸ್ನೇಹವನ್ನು ಬಯಸಿದ್ದ.

ಹರ್ಷವರ್ಧನನು ಮೊದಲೇ ಭಾಸ್ಕರವರ್ಮನ ಗುಣಾತಿಶಯಗಳನ್ನು ಕೇಳಿ ತಿಳಿದಿದ್ದ. ಸಂತೋಷದಿಂದ ತನ್ನ ಸ್ನೇಹಹಸ್ತವನ್ನು ಭಾಸ್ಕರವರ್ಮನಿಗೆ ನೀಡುವುದಾಗಿ ಹರ್ಷನು ಹಂಸವೇಗನಿಗೆ ಭರವಸೆಯಿತ್ತ. ಅವನನ್ನು ಸಕಲ ಗೌರವಗಳಿಂದ ಬೀಳ್ಕೊಟ್ಟ.

ಹಿಂದುರುಗಿದ ಸೋದರಮಾನ

ಹಂಸವೇಗನನ್ನು ಬೀಳ್ಕೊಟ್ಟ ಹರ್ಷನು ವೇಗವಾಗಿ ತನ್ನ ಸೇನೆಯನ್ನು ನಡೆಸಿ ಶತ್ರುಗಳನ್ನರಸಿ ಮಾಳವದತ್ತ ಬಿರುಗಾಳಿಯಂತೆ ಸಾಗಿದ. ಈ ಸಮಯದಲ್ಲಿ ಮತ್ತೊಂದು ಒಳ್ಳೆಯ ಸುದ್ದಿ ಬಂದಿತು.

ರಾಜ್ಯವರ್ಧನ ಮಾಳವ ಸೈನ್ಯದ ಬಹುಭಾಗವನ್ನು ಗೆದ್ದಿದ್ದ. ಆ ಸೈನ್ಯದೊಡನೆ ಹರ್ಷನ ಸೋದರಮಾವ ಭಣ್ಡಿ ಬರುತ್ತಿದ್ದಾನೆ ಎಂದು ಸೇವಕರು ವರದಿ ಮಾಡಿದರು.

ಅನತಿ ದೂರದಲ್ಲಿ ಕುದುರೆಯನ್ನೇರಿ ಬರುತ್ತಿದ್ದ ಭಣ್ಡಿಯನ್ನು ಹರ್ಷನು ಕಂಡನು. ದುಃಖ-ಸಂತೋಷಗಳೆರಡೂ ಹೃದಯ ತುಂಬಿ ಬಂದವು. ಸಮೀಪಕ್ಕೆ ಬಂದ ಭಣ್ಡಿಯು ಹರ್ಷನಿಗೆ ವಂದಿಸಿ ಮಾಳವದಲ್ಲಿ ನಡೆದ ರಾಜ್ಯವರ್ಧನನ ಕೊಲೆಯ ವಿವರಗಳನ್ನು ಸವಿಸ್ತಾರವಾಗಿ ತಿಳಿಸಿದನು. ಅವನ ಮಾತುಗಳನ್ನು ಕೇಳಿ ಮತ್ತೆ ಹರ್ಷವರ್ಧನ ಸಂತಾಪದಿಂದ ಕುದಿದನು.

ಇನ್ನೊಂದು ಪ್ರಶ್ನೆಗೆ ಉತ್ತರ ಪಡೆಯಲು ಅವನು ತವಕ ಪಡುತ್ತಿದ್ದ: ತಂಗಿ ರಾಜ್ಯಶ್ರೀ ಎಲ್ಲಿ? ಅವಳ ಗತಿ ಏನಾಯಿತು? ಭಣ್ಡಿಯು, “ರಾಜ್ಯಶ್ರೀ ಸೆರೆಯಿಂದ ತಪ್ಪಿಸಿಕೊಂಡು ವಿಂಧ್ಯಾಟವಿಯನ್ನು ಪ್ರವೇಶಿಸಿದಳೆಂದು ವದಂತಿ ಮಾತ್ರ ಕೇಳಿಬರುತ್ತಿದೆ. ಖಚಿತವಾಗಿ ಏನೂ ತಿಳಿಯದು” ಎಂದ.

ಪರಾಜಯಗೊಂಡು ಶರಣಾಗತಿಯಾಗಿದ್ದ ಮಾಳವ ಸೇನೆಯನ್ನೂ ಅಲ್ಲಿ ಸಿಕ್ಕಿದ ಧನಕನಕಾದಿಗಳನ್ನೂ ಹರ್ಷನು ಪರಿಶೀಲಿಸಿದ. ಈಗ ಅವನು ಹೃದಯವನ್ನು ತುಂಬಿದ್ದ ಬಯಕೆ ಒಂದೇ: ರಾಜ್ಯಶ್ರೀಯನ್ನು ಕಾಣಬೇಕು, ರಕ್ಷಿಸಬೇಕು.

ಯುವತಿಯೊಬ್ಬಳು "ಅಗ್ನಿಪ್ರವೇಶ" ಮಾಡಲು ಪ್ರಾರಂಭಿಸಿದ್ದಳು.

ಅಗ್ನಿಯ ಅಂಚಿನಲ್ಲಿ ತಂಗಿ

 

ಹರ್ಷನು ತಂಗಿಯನ್ನು ಹುಡುಕಿಕೊಂಡು ಹೊರಟ. ವಿಂಧ್ಯದ ಕಾಡಿನಲ್ಲೆಲ್ಲ ಅಲೆದ. ಯಾರಿಂದ ಸ್ವಲ್ಪ ವಿಷಯ ತಿಳಿಯಬಹುದು ಎಂದು ತೋರಿದರೂ ಅವರಲ್ಲಿಗೆ ಓಡಿದ. ದಿವಾಕರಮಿತ್ರ ಎಂಬ ಬೌದ್ಧ ಸನ್ಯಾಸಿಯಿಂದ ಏನಾದರೂ ಸಂಗತಿ ತಿಳಿಯಬಹುದು ಎಂದು ಆಪ್ತರೊಬ್ಬರು ಹೇಳಿದರು, ಅಲ್ಲಿಗೆ ಧಾವಿಸಿದ. ಅಲ್ಲಿ ಒಬ್ಬ ಬೌದ್ಧಭಿಕ್ಷು ಒಂದು ಸಂಗತಿ ಹೇಳಿದ.

ಕಾಡಿನಲ್ಲಿ ಯುವತಿಯೊಬ್ಬಳು ತುಂಬಾ ದುಃಖಿತಳಾಗಿ, ಅಗ್ನಿಪ್ರವೇಶ ಮಾಡಲು ತೀರ್ಮಾನಿಸಿದ್ದಾಳೆ. ಆ ಸಿದ್ಧತೆಯಲ್ಲಿದ್ದಾಳೆ.

ಆ ಯುವತಿ ತನ್ನ ತಂಗಿಯೇ ಇರಬೇಕು ಎನ್ನಿಸಿತು ಹರ್ಷವರ್ಧನನಿಗೆ. ಭಿಕ್ಷುವಿನಿಂದ ಅವಳಿದ್ದ ಸ್ಥಳದ ಗುರುತು ತಿಳಿದುಕೊಂಡ. ಹೃದಯ ಡವಡವನೆ ಹೊಡೆದುಕೊಳ್ಳುತ್ತಿತ್ತು. ತಾನು ಹೋಗುವ ಹೊತ್ತಿಗೆ ಎಲ್ಲಿ ತೀರ ತಡವಾಗುತ್ತದೋ ಅನಾಹುತವಾಗುತ್ತದೋ ಎಂದು ದಿವಾಕರಮಿತ್ರನನ್ನೂ ಭಿಕ್ಷುವನ್ನೂ ಸಹಚರರನ್ನೂ ಕರೆದುಕೊಂಡು ಆ ಸ್ಥಳಕ್ಕೆ ಓಡಿದ.

ಅಗ್ನಿ ಜ್ವಲಿಸುತ್ತಿತ್ತು. ಯುವತಿಯೊಬ್ಬಳು ಅದಕ್ಕೆ ಪ್ರದಕ್ಷಿಣೆ ಮಾಡಲು ಪ್ರಾರಂಭಿಸಿದ್ದಳು.

ಆಸ್ಥಾನದಲ್ಲಿ ಹರ್ಷ ಸಾಮಂತರಾಜರಿಂದ ಗೌರವ ಸ್ವೀಕರಿಸುತ್ತಿರುವುದು.

ಅವಳು ರಾಜ್ಯಶ್ರೀಯೇ!

ಹರ್ಷ ಮುಂದಕ್ಕೋಡಿದ. ತಂಗಿಯ ಹೆಸರು ಹಿಡಿದು ಕೂಗಿದ.

ಜಗತ್ತಿನಲ್ಲಿ ತನ್ನವರೆನ್ನುವವರು ಯಾರೂ ಇಲ್ಲ ಎಂದು ಭಾವಿಸಿ ಅಗ್ನಿಯ ಮೊರೆಹೋಗುವುದರಲ್ಲಿದ್ದ ರಾಜ್ಯಶ್ರೀ ಅಣ್ಣನನ್ನು ಕಂಡು ಮೂರ್ಛೆಹೋದಳು.

ಹರ್ಷನು ತಂಗಿಗೆ ಉಪಚಾರ ಮಾಡಿದನು. ಅವಳು ಚೇತರಿಸಿಕೊಂಡಳು. ಹರ್ಷ ಅವಳನ್ನು ಸಂತೈಸಿದ.

ಹೀಗೆ ಕಳೆದುಹೋಗಿದ್ದ ಸೋದರಿಯನ್ನು ಮರಳಿ ಪಡೆದ ಹರ್ಷ ಆನಂದಕ್ಕೆ ಮೋರೆಯಿಲ್ಲದಂತಾಗಿತ್ತು.

ವಿಜಯಮಾಲೆ

ತಂಗಿಯನ್ನುಳಿಸಿಕೊಂಡ ಹರ್ಷನಿಗೆ ಒಂದು ಬಗೆಯ ಸಮಾಧಾನವಿತ್ತು. ಆದರೆ ಇನ್ನೂ ರಾಜ್ಯ ರಕ್ಷಣೆಯ ಕೆಲಸವಿತ್ತು. ಇಡೀ ಭಾರತದಲ್ಲಿ ಶಾಂತಿಯನ್ನು ಸ್ಥಾಪಿಸುವ ಅಗತ್ಯವನ್ನು ಅವನು ಮನಗಂಡನು. ಆಗ ಭಾರತದಲ್ಲಿ ನೂರಾರು ಸಣ್ಣಪುಟ್ಟ ರಾಜ್ಯಗಳಿದ್ದವು. ಅವುಗಳ ನಡುವೆ ಸದಾ ಜಗಳಗಳು, ಕದನಗಳು. ಇಂತಹ ಸನ್ನಿವೇಶದಲ್ಲಿ ಬಹಳ ಕಷ್ಟಪಡುವವರೆಂದರೆ ಸಾಮಾನ್ಯ ಜನ. ವ್ಯವಸಾಯ, ವ್ಯಾಪಾರ ಎಲ್ಲಕ್ಕೆ ಈ ಕದನಗಳು ಅಡ್ಡಿ. ಜನ ನೆಮ್ಮದಿಯಿಂದ ಬದುಕುವಂತಿಲ್ಲ. ಇದನ್ನು ಮನಗಂಡಿದ್ದ ಹರ್ಷನು ಈ ಸಣ್ಣಪುಟ್ಟ ರಾಜ್ಯಗಳನ್ನೆಲ್ಲಾ ಒಂದು ಆಡಳಿತಕ್ಕೆ ತಂದು ಏಪಚಕ್ರಾಧಿಪತ್ಯವನ್ನು ಸ್ಥಾಪಿಸಿದರೆ ಮುಂದೆ ಉಂಟಾಗಬಹುದಾದ ದುರ್ದೆಶೆಯಿಂದ ರಾಷ್ಟ್ರವನ್ನು ಉಳಿಸಿಬಹುದೆಂದು ತೀರ್ಮಾನಿಸಿದನು. ಇದಕ್ಕಾಗಿ ತನ್ನೆಲ್ಲಾ ಶಕ್ತಿಯನ್ನೂ ಒಟ್ಟುಗೂಡಿಸಿದನು. 5,000 ಆನೆಗಳು, 20,000 ಕುದುರೆಗಳು ಹಾಗೂ 50,000 ಪದಾತಿಗಳ ಸೈನ್ಯ ಸಿದ್ಧವಾಗಿತ್ತು. ಅದನ್ನು ಈ ಕಾರ್ಯದಲ್ಲಿ ತೊಡಗಿಸಿದನು.

ಸೌರಾಷ್ಟ್ರ, ಕನ್ಯಾಕುಬ್ಜ, ಗೌಡ, ವಿಥಿಲ ಮತ್ತು ಒರಿಸ್ಸಗಳು ಪಂಚಭಾರತಗಳು ಎನ್ನಿಸಿಕೊಂಡಿದ್ದವು. ಹರ್ಷನು ಆರು ವರ್ಷಗಳ ಸತತ ಹೋರಾಟದ ನಂತರ ಅವನ್ನು ತನ್ನ ಅಧೀನ ಮಾಡಿಕೊಂಡನು. ಹರ್ಷನು ಸಿಂಧು ರಾಜನನ್ನು ಪರಾಜಯಗೊಳಿಸಿದ್ದನು. ಹಿಮವತ್ಪರ್ವತ (ನೇಪಾಳ), ಪ್ರಾಂತದಿಂದ ಕಪ್ಪಕಾಣಿಕೆಗಳನ್ನು ಪಡೆದನು. ಆರಂಭದಲ್ಲಿಯೇ ಪ್ರಾಗ್ಜ್ಯೋತಿಷಿ (ಅಸ್ಸಾಂ) ರಾಜನು ಹರ್ಷನ ಸ್ನೇಹವನ್ನು ಬೇಡಿದ್ದನು. ಹರ್ಷನಿಂದ ಪರಾಜಿತನಾದ ವಲ್ಲಭಿಯ ರಾಜನು ಗುರ್ಜರ ರಾಜನಾದ ಎರಡನೆಯ ದದ್ದನಲ್ಲಿ ಆಶ್ರಯ ಪಡೆದಿದ್ದನೆಂದು ತಿಳಿದು ಬರುತ್ತದೆ. ಇವೆಲ್ಲಾ ಹರ್ಷನ ಶೌರ್ಯ ಸಾಹಸಗಳಿಗೆ ಕನ್ನಡಿಯಂತಿವೆ. ಪೂರ್ವ, ಪಶ್ಚಿಮ ಹಾಗೂ ಉತ್ತರ ಭಾರತದ ರಾಜರನೇಕರನ್ನು ಗೆದ್ದ ಹರ್ಷನು “ಉತ್ತರಾ ಪಥೇಶ್ವರ”ನೆಂಬ ಮತ್ತು “ಪರಮೇಶ್ವರ” ಎಂಬ ಬಿರುದನ್ನೂ ಹೊಂದಿದ್ದನು.

ಒಂದು ಸೋಲು

ಉತ್ತರ ಭಾರತವನ್ನೆಲ್ಲ ತನ್ನ ಕೈಗೆ ತೆಗೆದುಕೊಂಡ ಹರ್ಷನಿಗೆ, ಇಡೀ ಭಾರತವನ್ನು ಒಂದು ಆಡಳಿತಕ್ಕೆ ತರುವ ಯೋಚನೆ. ದಕ್ಷಿಣ ಭಾರತವನ್ನೂ ಗೆಲ್ಲುವ ಆಕಾಂಕ್ಷೆ. ದಕ್ಷಿಣ ಭಾರತದ ಕರ್ನಾಟಕದಲ್ಲಿ ಬಾದಾಮಿಯ ಚಾಳುಕ್ಯ ಚಕ್ರೇಶ್ವರ ಎರಡನೆಯ ಪುಲಿಕೇಶಿ ಬಹಳ ಪ್ರಬಲನಾಗಿದ್ದ. ಅವನೇ ಹರ್ಷನಿಗೆ ಬಹುಶಕ್ತನಾದ ವಿರೋಧಿ. ಅವನನ್ನು ಗೆಲ್ಲದೆ ಹರ್ಷ ಇಡೀ ಭಾರತಕ್ಕೆ ಚಕ್ರವರ್ತಿಯಾಗುವಂತಿರಲಿಲ್ಲ.

ಹರ್ಷ ದಕ್ಷಿಣಕ್ಕೆ ಬಂದ. ಪುಲಕೇಶಿಗೆ ಈ ದಂಡಯಾತ್ರೆಯ ಸುದ್ದಿ ತಿಳಿಯಿತು. ತನ್ನ ಸೈನ್ಯದೊಡನೆ ನರ್ಮದಾ ನದಿಯ ತೀರದ ಕಡೆ ಪ್ರಯಾಣ ಮಾಡಿದ. ಯುದ್ಧ ನಡೆಯಿತು.

ಎಂದೂ ಸೋಲನ್ನೇ ಕಾಣದಿದ್ದ ಹರ್ಷನು ಇಲ್ಲಿ ಸೋಲನ್ನು ಒಪ್ಪಿಕೊಳ್ಳಬೇಕಾಯಿತು. ಕಡೆಗೆ ಇಬ್ಬರು ವೀರರಿಗೂ ಸಂಧಿಯಾಗಿ, ಹರ್ಷ ಉತ್ತರ ಭಾರತಕ್ಕೆ ಹಿಂದುರುಗಿದ. ಇದರ ನಂತರ ಅವನು ಯುದ್ಧ ಮಾಡಲಿಲ್ಲ ಎಂದು ಕಾಣುತ್ತದೆ.

ವಿಜಯಯಾತ್ರೆಯ ಅನಂತರ ಹರ್ಷನು ರಾಷ್ಟ್ರದಲ್ಲಿ ಶಾಂತಿ ನೆಲೆಗೊಳಿಸಿ, ಪರಾಜಿತರಾದ ರಾಜರು ತಲೆಯೆತ್ತದಂತೆ ನೋಡಿಕೊಳ್ಳಲು ನೇಮಿಸಿದ್ದ ಸೈನ್ಯದಲ್ಲಿ 60,000 ಆನೆಗಳೂ, 100,000 ಕುದುರೆಗಳೂ ಇದ್ದವೆಂದರೆ ಹರ್ಷನ ಪರಾಕ್ರಮ ನಮಗರಿವಾಗುತ್ತದೆ.

ಹರ್ಷನ ರಾಜ್ಯವೈಭವ

606ರಲ್ಲಿ ಹರ್ಷವರ್ಧನನು ಸಿಂಹಾಸನವನ್ನೇರಿದನೆಂದು ಇತಿಹಾಸಕಾರರ ಅಭಿಪ್ರಾಯ. ಆಗ ಹರ್ಷನಿಗೆ ಹದಿನಾರು ವರ್ಷ! ಇವನ ಮೇಲೆ ಆಕಾಶವೇ ಬಿದ್ದಂತೆ ಕಷ್ಟ ಉರುಳಿತೆನ್ನಬೇಕು. ಅನೇಕ ಯುದ್ಧಗಳು ಪ್ರಾಪ್ತವಾದವು. ಆದರೂ ಮೂವತ್ತು ವರ್ಷಗಳ ಕಾಲ ಶಾಂತಿ-ಸಮೃದ್ಧಿಗಳಿಂದ ಕೂಡಿದ ರಾಜ್ಯವನ್ನು ಆಳಿದ. ವರ್ಧನ ರಾಜ್ಯದ ಸಿಂಹಾಸನವೂ, ಮೌಖರೀ ಸಿಂಹಾಸನವೂ ಇವನಿಗೆ ಅನಿರೀಕ್ಷಿತವಾಗಿ, ತಾವಾಗಿ ಲಭಿಸಿದವು. ಆದರೆ ಎರಡು ರಾಜ್ಯಗಳ ಸುತ್ತಲೂ ಅಪಾಯಗಳು ಕಾದು ಕುಳಿತಿದ್ದವು.

ಕೇವಲ ಹದಿನಾರರ ಹರೆಯದ ಬಾಲಕನಾದರೂ ಈ ಗುರುತರವಾದ ಜವಾಬ್ದಾರಿಯನ್ನು ಹೊರಲು ಸಿದ್ಧನಾಗಿ ತನ್ನ ಸಾಮರ್ಥ್ಯವನ್ನು ಪ್ರಕಟಗೊಳಿಸಿದನು. ಎಲ್ಲೆಲ್ಲೂ ಶತ್ರುಗಳ ಹಾವಳಿ ಎದುರಾಗುತ್ತಿದ್ದರೂ ಎದೆಗುಂದಲಿಲ್ಲ. ಅವರನ್ನೆಲ್ಲ ಸೋಲಿಸಿ ಅಪ್ರತಿಮ ವೀರಾಗ್ರಣಿ ಎನಿಸಿಕೊಂಡನು. ಭಾರತೀಯರನ್ನು ಒಂದೇ ಚಕ್ರಾಧಿಪತ್ಯದ ಚೌಕಟ್ಟಿನೊಳಗೆ ತಂದು ರಾಜಕೀಯ ಸಂಘಟನೆಯನ್ನುಂಟು ಮಾಡುವ ಮಹಾದಾಕಾಂಕ್ಷೆಯಿಂದ ಉತ್ತರ ಭಾರತವನ್ನೆಲ್ಲ ಗೆದ್ದುಕೊಂಡ.

ಹರ್ಷನ ಆಸ್ಥಾನ ಕವಿಯಾಗಿದ್ದ ಬಾಣಭಟ್ಟ ಎಂಬವನು “ಹರ್ಷಚರಿತ” ಎಂಬ ಪುಸ್ತಕವನ್ನು ಬರೆದಿದ್ದಾನೆ. ಅದರಲ್ಲಿ ಹರ್ಷನ ವೈಭವದ ಚಿತ್ರಣವಿದೆ. ವಿಜಯ ಯಾತ್ರೆಯ ಕಾಲದಲ್ಲಿ ಅಜಿರಾವತೀ ತೀರದಲ್ಲಿನ ಮಣಿತಾರ ಎಂಬಲ್ಲಿ ಹರ್ಷನ ಪಾಳೆಯ ಬೀಡುಬಿಟ್ಟಿದ್ದ ಸನ್ನಿವೇಶ ಹರ್ಷ ಚರಿತೆಯಲ್ಲಿ ರಮ್ಯವಾಗಿ ಚಿತ್ರಿತವಾಗಿದೆ. “ಪಾಳೆಯದ ಸುತ್ತಲೂ ಪರಾಜಿತಗೊಂಡ ಸಾಮಂತ ರಾಜರು ನೆರೆದಿದ್ದರು. ಅವರಲ್ಲನೇಕರು ಚಕ್ರವರ್ತಿಯನ್ನು ನೋಡಲು ಅವಕಾಶ ಸಿಕ್ಕದೆ ನಾಚಿ ತಲೆಬಾಗಿದ್ದವರಾಗಿದ್ದರು. ಕೆಲವರು ಮಾತ್ರ ಒಳಗೆ ಪ್ರವೇಶ ಮಾಡಿ ತಾವು ತಂದಿದ್ದ ಚೌರಿ-ಚಾಮರಗಳನ್ನೂ, ಕತ್ತಿಗಳನ್ನೂ ಕಾಣಿಕೆಯಾಗಿ ಚಕ್ರವರ್ತಿಗೆ ಒಪ್ಪಿಸಿ ಚಕ್ರೇಶ್ವರನಿಗೆ ಸೇವೆ ಮಾಡುವ ಅವಕಾಶವನ್ನು ಪಡೆದುಕೊಂಡು ಧನ್ಯರಾಗಿದ್ದರು. ಇನ್ನೂ ಕೆಲವರು ಹರ್ಷನಂತಹ ಪರಾಕ್ರಮಿ ತಮ್ಮನ್ನು ಸೋಲಿಸಿದುದರಿಂದ ತಮಗೆ ಅಪಮಾನವಿಲ್ಲ ಎಂದು ಭಾವಿಸಿದ್ದರು. ಸಾರ್ವಭೌಮನು ತಮಗೆಂದು ದರ್ಶನ ಕೊಡುವನೆಂದು ರಾಜಸೇವಕರನ್ನೂ ಪಾರಿಚಾರಕರನ್ನೂ ತವಕದಿಂದ ಆಗಾಗ ವಿಚಾರಿಸುತ್ತಿದ್ದರು. ಇವರಲ್ಲದೆ ಇತರರು ಅನೇಕ ರಾಜರು ಹರ್ಷನ ವೈಭವವನ್ನು ಕಣ್ಣಾರೆ ನೋಡಿ ಆನಂದಿಸಲು ನೆರೆ ರಾಜ್ಯಗಳಿಂದ ಬರುತ್ತಿದ್ದರು. ಜೈನರೂ, ಅರ್ಹತರೂ, ಭಿಕ್ಷುಗಳೂ, ವೈದಿಕರೂ, ವಿವಿಧ ದೇಶಗಳವರೂ ಗುಡ್ಡಗಾಡಿನ ಜನರೂ, ಸಮುದ್ರ ತೀರದಲ್ಲಿ ವಾಸಮಾಡುತ್ತಿದ್ದವರೂ, ರಾಜದೂತರೇ ಮೊದಲಾದವರೂ ಒಂದೇ ಸಮನೆ ಬರುತ್ತಿದ್ದರು. ಹರ್ಷನ ಪಾಳೆಯದಲ್ಲಿ ಬಿಳಿಯ ಕುದುರೆಗಳು ಕೆನೆಯುತ್ತಾ ನೆಗೆದಾಡುತ್ತಿದ್ದುದು ಪಾಲ್ಗಡಲ ತೆರೆಗಳ ನೊರೆಯಂತೆ ಇತ್ತು. ಆನೆಗಳ ಸಮೂಹ ನೀಲ್ಗಡಲಂತೆ ಇತ್ತು. ಇನ್ನು ಅವನ ರಾಜಧಾನಿಯು ದಕ್ಷಿಣ ಭಾರತದ ಆಂಧ್ರರನ್ನೂ, ದ್ರಾವಿಡರನ್ನೂ ಆಕರ್ಷಿಸಿದ್ದಿತು.”

ಧರ್ಮ ಸಮ್ಮೇಳನಗಳು

ಚಿಕ್ಕ ವಯಸ್ಸಿನಲ್ಲೆ ದಿವಾಕರಮಿತ್ರನಿಂದ ಪ್ರಭಾವಿತನಾಗಿದ್ದ ಹರ್ಷವರ್ಧನನು ಕ್ರಮೇಣ ಬೌದ್ಧ ಧರ್ಮದತ್ತ ಒಲಿದಿದ್ದನು. ಈ ಒಲವು ಚೀಣದ ಯಾತ್ರಿಕ ಹುಯೆನ್ ತ್ಸಾಂಗನ ಆಗಮನದಿಂದ ಮತ್ತೂ ಹೆಚ್ಚಿತು. ದಿಗ್ವಿಜಯದ ಅನಂತರ ತನ್ನ ಮೂವತ್ತು ವರ್ಷಗಳ ಆಳ್ವಿಕೆಯಲ್ಲಿ ಹರ್ಷನು ಧರ್ಮದಲ್ಲಿ ಶ್ರದ್ಧೆಯನ್ನು ಕೇಂದ್ರೀಕರಿಸಿದನು. ಬೌದ್ಧ ಪುಣ್ಯಕ್ಷೇತ್ರಗಳಿದ್ದಲ್ಲೆಲ್ಲಾ ಸಂನ್ಯಾಸಿಗಳಿಗಾಗಿ ಸಂಘಾರಾಮಗಳನ್ನು ಕಟ್ಟಿಸಿ ಅನೇಕ ಸ್ತೂಪಗಳನ್ನು ನಿರ್ಮಿಸಿದನು. ಇಲ್ಲಿ ಬೌದ್ಧ ಸಂನ್ಯಾಸಿಗಳು ವಾಸಿಸಿ, ಧ್ಯಾನ, ಅಧ್ಯಯನಗಳನ್ನು ಮಾಡಿಕೊಳ್ಳಬಹುದಾಗಿತ್ತು. ಇವೆಲ್ಲಕ್ಕೂ ಮಿಗಿಲಾಗಿ ಐದು ವರ್ಷಗಳಿಗೊಮ್ಮೆ ಮೋಕ್ಷಪರಿಷತ್ತನ್ನು ಏರ್ಪಡಿಸುತ್ತಿದ್ದನು. ಪುಣ್ಯ ಸಂಪಾದನೆಗಾಗಿ ನಡೆಸುತ್ತಿದ್ದ ಸಮ್ಮೇಳನಗಳು ಇವು. ಆದುದರಿಂದ ಇವನ್ನು ಮೋಕ್ಷಪರಿಷತ್ತುಗಳು ಎಂದು ಕರೆಯುತ್ತಿದ್ದರು. ಈ ಧರ್ಮ ಸಮ್ಮೇಳನಗಳಿಗೆ ಹರ್ಷನು ತಮ್ಮ ತಮ್ಮ ಧರ್ಮಗಳವರನ್ನೂ ಆಹ್ವಾನಿಸುತ್ತಿದ್ದನು. ಅವರೆಲ್ಲರೂ ತಮ್ಮ ತಮ್ಮ ಧಮ್ಗಳ ಹಿರಿಮೆಯನ್ನು ಕುರಿತು ಸಭಿಕರಿಗೆ ತಿಳಿಸುತ್ತಿದ್ದರು. ವಾದದಲ್ಲಿ ಸಮರ್ಥರೆನಿಸಿಕೊಂಡವರನ್ನು ದರ್ಮ ಸಿಂಹಾಸನದಲ್ಲಿ ಕುಳ್ಳಿರಿಸಿ ಗೌರವಿಸಲಾಗುತ್ತಿತ್ತು.

ಸಮ್ಮೇಳನದ ಕಡೆಯಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮ, ಎಲ್ಲಿಯೂ ಕಾಣಲಾಗದಂತಹ ದೃಶ್ಯ.

ಹರ್ಷನು ತಾನು ಐದು ವರ್ಷಗಳ ಕಾಲ ಕೂಡಿಟ್ಟಿದ್ದ ಎಲ್ಲ ಸಂಪತ್ತನ್ನೂ ದಾನಮಾಡಿಬಿಡುತ್ತಿದ್ದ.

ಒಂದು ಧರ್ಮ ಸಮ್ಮೇಳನ

ಹರ್ಷನು ಕನ್ಯಾಕುಬ್ಜದಲ್ಲಿ ಏರ್ಪಡಿಸಿದ್ದ ಒಂದು ಧರ್ಮಕೂಟವು ಪ್ರಸಿದ್ಧಿ ಪಡೆದಿದೆ. ಅದರ ವೈಶಿಷ್ಟ್ಯವೇನೆಂದರೆ ಚೀಣೀ ಯಾತ್ರಿಕನಾದ ಹುಯೆನ್‌ತ್ಸಾಂಗನು ಸಮ್ಮೇಳನದಲ್ಲಿ ಮುಖ್ಯ ಅತಿಥಿ ಹಾಗೂ ಧರ್ಮಾಧ್ಯಕ್ಷಕನಾಗಿದ್ದನು. ಅವನೊಂದಿಗೆ ಆಗಮಿಸಿದ್ದ ಪ್ರಾಗ್ಜೋತಿಷದ ಭಾಸ್ಕರವರ್ಮನೂ ಪ್ರಮುಖ ಪಾತ್ರವನ್ನು ವಹಿಸಿದ್ದನು.

ಈ ಕೂಟಕ್ಕೆ ಪಂಚಹಿಂದೂದೇಶಗಳ ರಾಜರೂ ಮಹಾಯಾನ ಹಾಗೂ ಹೀನಯಾನ ಪಂಥಗಳ ಮೂರು ಸಾವಿರ ಭಿಕ್ಷುಗಳೂ, ಮೂರುಸಾವಿರ ವೈದಿಕರೂ, ಜೈನರೂ ನಲಂದಾ ವಿಶ್ವವಿದ್ಯಾನಿಲಯದ ಸಾವಿರ ಪಂಡಿತರೂ ಬಂದಿದ್ದರು.

ಧರ್ಮಕೂಟವು ಸೇರಲು ಎರಡು ವಿಶಾಲವಾದ ಸಭಾಮಂಟಪಗಳನ್ನು ನಿರ್ಮಿಸಲಾಗಿತ್ತು. ಆಳೆತ್ತರದ ಬುದ್ಧದೇವನ ವಿಗ್ರಹವನ್ನು ಚಿನ್ನದಲ್ಲಿ ಮಾಡಿಸಲಾಗಿತ್ತು.

ಈ ವಿಗ್ರಹವನ್ನು ಆನೆಯಮೇಲೆ ಇಟ್ಟು ಮೆರವಣಿಗೆಯಲ್ಲಿ ಸಭಾಮಂಟಪಕ್ಕೆ ಕರೆತಂದರು. ಈ ಸಂದರ್ಭದಲ್ಲಿ ಹರ್ಷನು ಕೈಯಲ್ಲಿ ಶ್ವೇತಚ್ಛತ್ರವನ್ನು ಹಿಡಿದು ಎಡಬದಿಯಲ್ಲಿ ನಡೆದು ಬರುತ್ತಿದ್ದರೆ ಭಾಸ್ಕರವರ್ಮನು ಬಿಳಿಯ ಚಾಮರದೊಂದಿಗೆ ಬಲಬದಿಯಲ್ಲಿ ಬರುತ್ತಿದ್ದನು. ಇವರ ಹಿಂದೆ ಹುಯೆನ್‌ತ್ಸಾಂಗನೂ, ಸಾಮಂತರೂ ಅನೇಕ ಅಧಿಕಾರಿಗಳೂ ನಡೆದು ಬರುತ್ತಿದ್ದರು. ವಿಜೃಂಭಣೆಯಿಂದ ಮೆರವಣಿಗೆ ಸಭಾಮಂಟಪವನ್ನು ತಲುಪಿದನಂತರ ಹರ್ಷನು ಆ ವಿಗ್ರಹಕ್ಕೆ ಪವಿತ್ರಜಲದಿಂದ ಅಭಿಷೇಕ ಮಾಡಿದನು. ಅಲ್ಲಿಂದ ತಾನೇ ಆ ವಿಗ್ರಹವನ್ನು ಹೆಗಲ ಮೇಲೆ ಹೊತ್ತು ಅದಕ್ಕಾಗಿಯೇ ನಿರ್ಮಿಸಿದ್ದ ಮಂಟಪದಲ್ಲಿನ ಸಿಂಹಾಸನದಲ್ಲಿ ಪ್ರತಿಷ್ಠಾಪನೆ ಮಾಡಿದನು. ಎಲ್ಲ ಅತಿಥಿಗಳು ಸಭಾಮಂಟಪದೊಳಗೆ ಪ್ರವೇಶ ಮಾಡಿದ ಅನಂತರ ವಿಶೇಷ ಗೌರವ, ಭಕ್ತಿ, ಶ್ರದ್ಧೆಗಳಿಂದ ಬುದ್ಧನ ವಿಗ್ರಹಕ್ಕೆ ಪೂಜೆ ನಡೆಯಿತು. ಅನಂತರ ನೆರೆದಿದ್ದ ಸಮಸ್ತರಿಗೂ ಊಟೋಪಚಾರವಾಯಿತು.

ಹೀಗೆ ಉತ್ಸವದ ಒಂದು ಹಂತ ಮುಗಿದನಂತರ ಇನ್ನೊಂದು ಮಂಟಪದಲ್ಲಿ ಏರ್ಪಡಿಸಲಾಗಿದ್ದ ಧರ್ಮಪೀಠದಲ್ಲಿ ಹುಯೆನ್‌ತ್ಸಾಂಗನನ್ನು ಹರ್ಷನೇ ತಂದು ಕುಳ್ಳಿರಿಸಿ, ಆ ದಿನದ ಧರ್ಮ ಸಭಾಧ್ಯಕ್ಷತೆಯನ್ನು ವಹಿಸಬೇಕೆಂದು ಬೇಡಿಕೊಂಡನು. ಅಧ್ಯಕ್ಷ ಪೀಠದಿಂದ ಹುಯೆನ್‌ತ್ಸಾಂಗನು ಮಹಾಯಾನ ದರ್ಶನದ ಹಿರಿಮೆಯನ್ನು ಸಭಿಕರಿಗೆ ವಿವರಿಸಿದನು. ಅನಂತರ ನಲಂದಾದಿಂದ ಆಗಮಿಸಿದ್ದ ಮಹಾಯಾನ ಪಂಡಿತನೊಬ್ಬನನ್ನು ಒಂದು ವಿಶೇಷ ವಿಷಯವನ್ನು ಕುರಿತು ವಾದ ಹೂಡುವಂತೆ ಆಹ್ವಾನಿಸಿದನು. ಈ ವಾದದಲ್ಲಿ ಏನಾದರೂ ತಪ್ಪಿದ್ದಲ್ಲಿ ದಂಡವಾಗಿ ತನ್ನ ತಲೆಯನ್ನು ಕೊಡುವುದಾಗಿ ಪಣವೊಡ್ಡಿದನು. ಯಾರೂ ಈ ಮಹಾಯಾನ ಪಂಡಿತನ ವಾದಕ್ಕೆ ಪ್ರತಿ ಹೇಳುವ ಸಾಹಸ ಮಾಡಲಿಲ್ಲ. ಸಭೆಯಲ್ಲಿ ಹುಯೆನ್‌ತ್ಸಾಂಗನ್ನಾಗಲೀ ಮಹಾಯಾನವನ್ನು ಪ್ರತಿಪಾದಿಸಿದ ಇತರ ಸಂನ್ಯಾಸಿಗಳನ್ನಾಗಲೀ ವಿರೋಧಿಸುವ ಧೈರ್ಯ ಯಾರಿಗೂ ಇರಲಿಲ್ಲ. ಆದರೆ ಮಹಾಯಾನಕ್ಕೆ ದೊರೆತ ಸನ್ಮಾನದಿಂದ ಹಲವರಿಗೆ ಹೊಟ್ಟೆ ಉರಿಯಾಯಿತು. ಅವರು ಹುಯೆನ್‌ತ್ಸಾಂಗನನ್ನು ಕೊಲ್ಲಲು ಸಂಚು ನಡೆಸಿದರು.

ಇದನ್ನು ಕೇಳಿದ ಹರ್ಷನು ಕೋಪದ ಕಿಡಿಕಾರಿದನು. ಹುಯೆನ್‌ತ್ಸಾಂಗನನ್ನು ಕೊಲ್ಲುವುದಿರಲಿ, ಯಾರೇ ಆಗಲಿ ಅವನನ್ನು ಕೆಣಕಿದರೆ ಸಾಕು, ಅವನ ತಲೆಯನ್ನು ತೆಗೆಸುವೆನು! ಎಂದು ಶಾಸನ ವಿಧಿಸಿದನು. ಇದಕ್ಕೆ ಅಂಜಿದ ಮೂರ್ಖರು ಸುಮ್ಮನಾದರು. ಮುಂದೆ ಹಂದಿನೆಂಟು ದಿನಗಳ ಕಾಲ ಮಹಾಯಾನದ ಕೀರ್ತಿ ಸಭೆಯಲ್ಲಿ ಮೆರೆಯಿತು. ಹುಯೆನ್‌ತ್ಸಾಂಗನು ಬುದ್ಧದೇವನ ಬೋಧನೆಗಳನ್ನು ಸರ್ವರಿಗೂ ಮನಮುಟ್ಟುವಂತೆ ವಿವರಿಸಿದನು. ಇದನ್ನು ಕೇಳಿದವರನೇಕರು ಮಹಾಯಾನ ಧರ್ಮವನ್ನವಲಂಬಿಸಿದರು. ಇಂತಹ ವಿಜಯೋತ್ಸಾಹದಲ್ಲಿ ಹುಯೆನ್‌ತ್ಸಾಂಗನಿಗೆ ಹರ್ಷನು ಹತ್ತು ಸಹಸ್ರ ಚಿನ್ನದ ನಾಣ್ಯಗಳನ್ನೂ ಮೂವತ್ತು ಸಹಸ್ರ ಬೆಳ್ಳಿಯ ನಾಣ್ಯಗಳನ್ನೂ ಉಣ್ಣೆಯ ವಸ್ತ್ರಗಳನ್ನೂ ಗೌರವ ಸೂಚಕವಾಗಿ ಕೊಟ್ಟನು. ಚಕ್ರವರ್ತಿಯ ಮನಸ್ಸನ್ನು ಹೀಗೆ ತನ್ನ ಪಾಂಡಿತ್ಯದಿಂದ ಸೂರೆಗೊಂಡ ಹುಯೆನ್‌ತ್ಸಾಂಗನನ್ನು ಆನೆಯ ಮೇಲೆ ಕುಳ್ಳಿರಿಸಿ ಮೆರವಣಿಗೆ ಮಾಡಲು ಆಜ್ಞೆಮಾಡಿದನು.

ಇದೆಲ್ಲವನ್ನೂ ಕಂಡು ಕರುಬಿದವರು ಹರ್ಷನನ್ನೇ ಕೊಲ್ಲಲು ಯೋಚಿಸಿ ಬುದ್ದದೇವನ ವಿಗ್ರಹವಿದ್ದ ಸಭಾ ಮಂಟಪಕ್ಕೆ ಬೆಂಕಿಯಿಟ್ಟರು. ಈ ದುರ್ಘಟನೆಯನ್ನು ಕಂಡವರು ಬೆಂಕಿಯನ್ನು ಆರಿಸಲು ಪ್ರಯತ್ನಿಸುತ್ತಿದ್ದರು. ಅದನ್ನು ನೋಡಲೆಂದು ಹರ್ಷನು ಬಳಿಯಲ್ಲಿದ್ದ ಒಂದು ಸ್ತೂಪವನ್ನು ಹತ್ತಿದನು.

ದ್ರೋಹಿಗಳು ಇಂತಹ ಸಂದರ್ಭವನ್ನೇ ಕಾಯುತ್ತಿದ್ದರು. ಚಕ್ರವರ್ತಿಯು ಸೂಪ್ತದಿಂದ ಇಳಿಯುತ್ತಿದ್ದಾಗ ಅವನನ್ನು ಕೊಲ್ಲಲು ಒಬ್ಬ ದುರಾತ್ಮನನ್ನು ಕಳುಹಿಸಿದರು. ಈ ಹಂತಕನು ಕತ್ತಿಯನ್ನು ಮೇಲೆತ್ತಿದ್ದ.

ಹರ್ಷನು ಕೂಡಲೇ ಅವನ ಮೇಲೆರಗಿ ಅವನನ್ನು ಹಿಡಿದನು. ಅವನಿಂದ ಹತ್ಯೆಗೆ ಸಂಚುಮಾಡಿದವರ ವಿವರಗಳು ಬಯಲಾದವು. ಸಂಚಿನ ನಾಯಕನಿಗೆ ಕ್ರೂರ ಶಿಕ್ಷೆಯನ್ನು ವಿಧಿಸಲಾಯಿತು. ಅವನ ಸಹಕಾರಿಗಳಾದ ಐದುನೂರು ದ್ರೋಹಿಗಳನ್ನು ಕ್ಷಮಿಸಿ ಅವರನ್ನು ಹಿಂದೂ ದೇಶದಿಂದ ಗಡೀಪಾರು ಮಾಡಿದನು. ಹರ್ಷನ ಉದಾರತೆಗೆ ಇದೊಂದು ಅನುಪಮ ಸಾಕ್ಷಿಯಾಗಿದೆ.

ಪ್ರಯಾಗದಲ್ಲಿ

ಕನ್ಯಾಕುಬ್ಜದ ಧರ್ಮ ಸಭೆಯನಂತರ ಪ್ರಯಾಗದಲ್ಲಿ ನಡೆಸಲಿರುವ ಮೋಕ್ಷ ಪರಿಷತ್ತಿಗೆ ಬರುವಂತೆ ಹುಯೆನ್‌ತ್ಸಾಂಗನನ್ನು ಹರ್ಷ ಒತ್ತಾಯ ಮಾಡಿದ.

ಗಂಗಾ-ಯಮುನಾ ನದಿಗಳ ಸಂಗಮವಾದ ಪ್ರಯಾಗ ಅನಾದಿ ಕಾಲದಿಂದಲೂ ದಾನಭೂಮಿಯೆಂದೂ ಪವಿತ್ರ ಭೂಮಿಯೆಂದೂ ಹೆಸರು ಪಡೆದಿದ್ದಿತು.

ಅಲ್ಲಿ ಹರ್ಷನು ಮೋಕ್ಷ ಪರಿಷತ್ತನ್ನು ಏರ್ಪಡಿಸಿದನು. ಇದು ಪಂಚವಾರ್ಷಿಕ ಮೋಕ್ಷ ಪರಿಷತ್ತುಗಳನ್ನು ಆರನೆಯದೆಂದು ಹುಯೆನ್‌ತ್ಸಾಂಗನ ವಿವರಣೆಯಿಂದ ತಿಳಿಯಬಹುದು. ಹರ್ಷನು ದಾನ ಕೊಡಲೆಂದು ತಂದಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನೂ ಮುತ್ತು-ರತ್ನಗಳನ್ನೂ ಮಣಿಗಳನ್ನೂ ಬೇರೆಬೇರೆಯಾಗಿ ರಾಶಿ ಹಾಕಿಸಿದನು. ಅಲ್ಲಿಗೆ ಬಂದ ಎಲ್ಲರಿಗೂ ಊಟೋಪಚಾರಗಳಿಗಾಗಿ ಹರ್ಷನು ಅನುವು ಮಾಡಿದನು. ಬುದ್ಧ ದೇವನ ವಿಗ್ರಹಕ್ಕೆ ಪೂಜೆಯಾದ ನಂತರ ಮೋಕ್ಷ ಪರಿಷತ್‌ಶುಭ ಮುಹೂರ್ತದಲ್ಲಿ ಪ್ರಾರಂಭವಾಯಿತು. ಬೆಲೆಬಾಳುವ ವಸ್ತುಗಳನ್ನೂ ವಸ್ತ್ರಗಳನ್ನೂ ದಾನ ಮಾಡಲಾಯಿತು.

ಎರಡನೆಯ ದಿನ ಆದಿತ್ಯನ ಪುಜೆಯಾದನಂತರ ದಾನಕಾರ್ಯ ನಡೆಯಿತು. ಮೂರನೆಯ ದಿನ ಈಶ್ವರನ ಪೂಜೆಯನಂತರ ದಾನಧರ್ಮಗಳು ನಡೆದವು. ನಾಲ್ಕನೆಯ ದಿನ ಸಾವಿರ ಭಿಕ್ಷುಗಳನ್ನು ಕರೆದು ಅವರಿಗೆ ಚಿನ್ನದ ನಾಣ್ಯಗಳನ್ನು ಹರ್ಷನು ದಾನಕೊಟ್ಟನು. ಬಡವರೂ ಭಿಕ್ಷುಕರೂ ಅನಾಥರೂ ಮೊದಲ್ಗೊಂಡು ದಾನ ಪಡೆದರು. ಎಪ್ಪತ್ತೈದು ದಿನಗಳ ಕಾಲ ದಾನಕಾರ್ಯ ನಡೆದ ನಂತರ ಮೋಕ್ಷ ಪರಿಷತ್ತು ಪ್ರಯಾಗದಲ್ಲಿ ಮುಗಿಯುತ್ತಿದ್ದಂತೆ ಹಿಂದಿನ ಐದು ವರ್ಷಗಳಲ್ಲಿ ಹರ್ಷನು ಕೂಡಿಸಿಟ್ಟಿದ್ದ ಸಕಲ ಸಂಪತ್ತೂ ಕರಗಿತು. ಉಳಿದಿದ್ದ ತನ್ನ ಕಿರೀಟವನ್ನೂ ದಿವ್ಯ ವಸ್ತ್ರಗಳನ್ನೂ ಸಹ ದಾನ ಮಾಡಿದ ಹರ್ಷನು ನಿರ್ಗತಿಕನಾಗಿ ನಿಂತನು. ಕೇವಲ ಶರೀರವನ್ನು ಮುಚ್ಚಿಕೊಳ್ಳಲು ಮಾತ್ರ ತಂಗಿಯಾದ ರಾಜ್ಯಶ್ರೀಯಿಂದ ಒಂದು ಹಳೆಯ ವಸ್ತ್ರವನ್ನು ಬೇಡಿ ಪಡೆದುಕೊಂಡ. ಚಕ್ರವರ್ತಿಯ ಹಿರಿಮೆಯನ್ನು ನೋಡುತ್ತಿದ್ದ ಸಾಮಂತರು ಬೆರಗಾದರು. ಅವರು ಚಕ್ರೇಶ್ವರನ ರಾಜಚಿಹ್ನೆಗಳಾದ ಕಿರೀಟ ಮೊದಲಾದವನ್ನು ದಾನವಾಗಿ ಪಡೆದುಕೊಂಡಿದ್ದವರಿಗೆ ಬೇಡಿದಷ್ಟು ಹಣ ನೀಡಿ ಅವನ್ನು ಹಿಂದಕ್ಕೆ ಪಡೆದು ಸಾರ್ವಭೌಮನಾದ ಹರ್ಷವರ್ಧನನಿಗೆ ತಮ್ಮ ಸಾಮಂತ ಸೂಚಕ ಕಾಣಿಕೆಯಾಗಿ ಅರ್ಪಿಸಿದರು. ಇದಾದನಂತರ ಹುಯೆನ್‌ತ್ಸಾಂಗನು ಚಕ್ರವರ್ತಿಯನ್ನು ಬೀಳ್ಕೊಂಡು ಸ್ವದೇಶಕ್ಕೆ ಪ್ರಯಾಣ ಬೆಳೆಸಿದನು. ಅವನನ್ನು ಹರ್ಷನ ದೂತರು ವರ್ಧನ ಚಕ್ರಾಧಿಪತ್ಯದ ಗಡಿಯಂಚಿನವರೆಗೂ ಸುರಕ್ಷಿತವಾಗಿ ಕಳುಹಿಸಿಕೊಟ್ಟರು.

ಹರ್ಷನ ಗುಣಶೀಲತೆಗೆ ಹುಯೆನ್‌ತ್ಸಾಂಗನು ಬೆರಗಾಗಿದ್ದನು. ಅವನು ಬರೆದಿರುವ ಅನೇಕ ವಿವರಗಳು ಹರ್ಷನ ಘನತೆಯನ್ನು ಪ್ರಕಟಪಡಿಸುತ್ತವೆ.

ಸರಸ್ವತಿಯ ಸಾಮ್ರಾಜ್ಯ

ಭಾರತೀಯರು ಅನಾದಿ ಕಾಲದಿಂದಲೂ ತಮ್ಮ ವಿದ್ಯಾಸಂಪತ್ತನ್ನು ಬೆಳೆಸಿಕೊಂಡು ಬಂದಿದ್ದಾರೆ. ಇದಕ್ಕೆ ವಿದ್ಯಾಕಾಂಕ್ಷೆ ಹೊಂದಿ ಪರದೇಶಗಳಿಂದ ನಮ್ಮ ದೇಶಕ್ಕೆ ಬಂದು ಕಲಿತ ಪಂಡಿತರನೇಕರು ಸಾಕ್ಷಿಯಾಗಿರುವರು. ಅವರಲ್ಲಿ ಮುಖ್ಯರಾದವರು ಚೀಣೀ ಯಾತ್ರಿಕರಲ್ಲಿ ಮೊದಲಿಗನಾದ ಫಾಹಿಯಾನ್‌ಮತ್ತು ಎರಡನೆಯವನಾದ ಹುಯೆನ್‌ತ್ಸಾಂಗ್‌. ಫಾಹಿಯಾನನು ಗುಪ್ತರ ಕಾಲದಲ್ಲಿ ಬಂದ ಬೌದ್ಧ ಯಾತ್ರಿಕ. ಹುಯೆನ್‌ತ್ಸಾಂಗನು ಹರ್ಷನ ಕಾಲದಲ್ಲಿ ಬಂದವನು. ಹುಯೆನ್‌ತ್ಸಾಂಗನ ಮೂಲ ಉದ್ದೇಶ ಭಾರತದಲ್ಲಿ ಬೌದ್ಧಕ್ಷೇತ್ರಗಳ ಸಂದರ್ಶನ ಮಾಡಿ ಬೌದ್ಧ ತತ್ವಗಳನ್ನು ನೇರವಾಗಿ ಅರಿತುಕೊಳ್ಳಬೇಕೆಂದಿತ್ತು. ಇವರಿಬ್ಬರೂ ಬರೆದಿಟ್ಟಿರುವ ವಿವರಗಳಿಂದ ನಮಗೆ ಭಾರತೀಯರು ಬೆಳೆಸಿಕೊಂಡು ಬಂದಿದ್ದ ವಿದ್ಯಾಪರಂಪರೆಯ ಸ್ವರೂಪ ಅರ್ಥವಾಗುತ್ತದೆ.

ಹರ್ಷನ ಕಾಲದಲ್ಲಿ ರೂಢಿಯಲ್ಲಿದ್ದ ವಿದ್ಯಾಕ್ರಮ ವೈಜ್ಞಾನಿಕ ರೀತಿಯಲ್ಲಿತ್ತು. ಅಧ್ಯಯನ ಮಾಡಲಾಗುತ್ತಿದ್ದ ವಿಶೇಷ ವಿಷಯಗಳು ಒಂದಲ್ಲ, ಎರಡಲ್ಲ, ಹತ್ತಾರು. ವ್ಯಾಕರಣ, ವೈದ್ಯಶಾಸ್ತ್ರ, ತರ್ಕಶಾಸ್ತ್ರ, ತತ್ವಶಾಸ್ತ್ರ ಮತ್ತು ವಾಸ್ತುಶಿಲ್ಪ ಮೊದಲಾದವುಗಳು ಮುಖ್ಯವಾದ ವಿಷಯಗಳಾಗಿದ್ದವು. ಇವುಗಳೊಂದಿಗೆ ಕಾವ್ಯ ಮತ್ತು ನಾಟಕ ಸಾಹಿತ್ಯವೂ ಹೆಚ್ಚಿಗೆ ಬೆಳೆದು ಬಂದಿತ್ತು. ಜೈನ, ಬೌದ್ಧ ಹಾಗೂ ವೈದಿಕ ಪಂಥಗಳು ಈ ವಿದ್ಯಾಕ್ರಮದ ಬೆಳವಣಿಗೆಗೆ ಪೂರಕವಾಗಿದ್ದವು. ಇದು ಕೇವಲ ಸಾಮಾನ್ಯ ವಿದ್ಯಾಭ್ಯಾಸವಾದರೆ, ಹಲವರು ಇವುಗಳಲ್ಲಿ ಬೇರೆ ಬೇರೆ ವಿಷಯಗಳನ್ನಾರಿಸಿಕೊಂಡು ಪ್ರೌಢಿಮೆ ಪಡೆದು ಪಂಡಿತರಾಗುತ್ತಿದ್ದರು. ಅವರ ವಿದ್ಯಾಸಂಪನ್ನತೆಯಿಂದ ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುತ್ತಿದ್ದರು.

ಗುರುಕುಲಗಳಲ್ಲಿ ವೈದಿಕರು ವೇದಾಧ್ಯಯನ, ಉಪನಿಷತ್‌ಪ್ರವಚನಗಳನ್ನು ನಡೆಸುತ್ತಿದ್ದರು. ಬೌದ್ಧ ವಿಹಾರಗಳಲ್ಲಿ ಬೌದ್ಧ ದರ್ಶನಗಳ ಅಧ್ಯಯನ ನಡೆಯುತ್ತಿತ್ತು. ಇಂತಹ ವಿದ್ಯಾಪೀಠಗಳು ರಾಷ್ಟ್ರದಲ್ಲಿ ಎಲ್ಲಾ ಕಡೆಗಳಲ್ಲಿಯೂ ಹರಡಿಕೊಂಡಿದ್ದವು. ದೇಶದ ಮೂಲೆ ಮೂಲೆಗಳಿಂದ ವಿದ್ಯಾಕಾಂಕ್ಷಿಗಳು ಪ್ರೌಢ ವಿದ್ಯಾಭ್ಯಾಸಕ್ಕೆ ಹೆಸರು ಪಡೆದಿದ್ದ ನಲಂದಾದ ವಿದ್ಯಾಪೀಠವನ್ನರಸಿ ಬರುತ್ತಿದ್ದರು. ನಲಂದಾದ ವಿದ್ಯಾಪೀಠವು ಹೊರದೇಶಗಳ ವಿದ್ಯಾರ್ಥಿಗಳನ್ನು ಸಹ ಆಕರ್ಷಿಸಿದ್ದಿತು. ಈ ವಿದ್ಯಾಪೀಠವನ್ನು ಹುಯೆನ್‌ತ್ಸಾಂಗನು ವರ್ಣಿಸಿದ್ದಾನೆ. ಇದರಲ್ಲಿ ನಾವು ಪ್ರಾಚೀನ ಭಾರತದಲ್ಲಿದ್ದ ಒಂದು ಪ್ರಗತಿಪರ ವಿಶ್ವವಿದ್ಯಾನಿಲಯದ ಸ್ವರೂಪವನ್ನು ಕಾಣಬಹುದು. ಅವನು ಕಂಡಂತೆ ನಲಂದಾದಲ್ಲಿ 10,000 ವಿದ್ಯಾರ್ಥಿಗಳಿದ್ದರು. ಇಲ್ಲಿಗೆ ಬರುತ್ತಿದ್ದ ದೇಶವಿದೇಶಗಳ ವಿದ್ಯಾರ್ಥಿಗಳು ತಮ್ಮ ಸಂದೇಹಗಳಿಗೆ ಪರಿಹಾರವನ್ನು ಪಡೆದು ಜ್ಞಾನವನ್ನು ಹೆಚ್ಚಿಸಿಕೊಂಡು ಸ್ವದೇಶಗಳಿಗೆ ಹಿಂದಿರುತ್ತಿದ್ದರು. ಊಟ, ವಸತಿ, ಉಡುಪು ಮೊದಲಾದವನ್ನು ಉಚಿತವಾಗಿ ಒದಗಿಸಲಾಗಿತ್ತು. ಇಲ್ಲಿನ ವಿದ್ಯಾಭ್ಯಾಸ ಮೂಲತಃ ಮಹಾಯಾನ ಬೌದ್ಧದರ್ಶನದ ವಿವಿಧ ಶಾಖೆಗಳ ಬೋಧನೆಯಾಗಿದ್ದರೂ ವೈದಿಕ ವಿದ್ಯೆಗೆ ಸಂಬಂಧಪಟ್ಟ ವಿಷಯಗಳಾದ ಷಡ್ದರ್ಶನಗಳು, ಜೈನಸಾಹಿತ್ಯ, ಜ್ಯೋತಿಷ, ಗಣಿತ, ವ್ಯಾಕರಣ ಮುಂತಾದವುಗಳ ಬೋಧನೆಯೂ ನಡೆಯುತ್ತಿತ್ತು.

ತಂಗಿಯಿಂದ ಬೇಡಿದ ಹಳೆಯ ವಸ್ತ್ರದಲ್ಲಿ ಚಕ್ರವರ್ತಿ ನಿಂತ.

ನಲಂದಾದ ವಿದ್ಯಾಪೀಠದಲ್ಲಿ ಪ್ರವೇಶ ದೊರೆಯುವುದು ಸುಲಭವಿರಲಿಲ್ಲ. ಆರಂಭದಲ್ಲಿ ದ್ವಾರಪರೀಕ್ಷಕರೆನ್ನುವವರು ವಿದ್ಯಾರ್ಥಿಯನ್ನು ಪರೀಕ್ಷಿಸುತ್ತಿದ್ದರು. ಅವರ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಮಾತ್ರ ಆ ವಿದ್ಯಾರ್ಥಿಯನ್ನು ಒಬ್ಬ ಭಿಕ್ಷುವಿನ ವಶಕ್ಕೆ ಒಪ್ಪಿಸುತ್ತಿದ್ದರು. ಆ ಭಿಕ್ಷುವು ತನ್ನ ವಶಕ್ಕೆ ಬಂದ ವಿದ್ಯಾರ್ಥಿಯನ್ನು ಮುಂದಿನ ಪರೀಕ್ಷೆಗಳಿಗೆ ಸಿದ್ಧಪಡಿಸಬೇಕಾಗಿತ್ತು. ಅನಂತರ ವಿದ್ಯಾಪೀಠದಲ್ಲಿ ನಡೆಯುತ್ತಿದ್ದ ದೈನಂದಿನ ಚರ್ಚಾಕಾರ್ಯಕ್ರಮಗಳಲ್ಲಿ ಭಾಗವಹಿಸಿ ತನ್ನ ಪ್ರೌಢಿಮೆಯನ್ನು ಪ್ರದರ್ಶಿಸಿದ ವಿದ್ಯಾರ್ಥಿಗೆ ನಲಂದಾದ ವಿದ್ಯಾರ್ಥಿ ಎನಿಸಿಕೊಳ್ಳುವ ಅದೃಷ್ಟ ಲಭಿಸುತ್ತಿತ್ತು. ಹರ್ಷನಂತಹ ಸಾರ್ವಭೌಮರೂ ರಾಜರೂ ಈ ವಿದ್ಯಾಪೀಠಕ್ಕೆ ಪೋಷಣೆ ನೀಡಿದ್ದರು. ಇಲ್ಲಿನ ಪಂಡಿತರು ಜ್ಞಾನ ಸಂಪಾದನೆಗೆ ಇತಿಮಿತಿಯಾಗಲೀ ಅಡಚಣೆಯಾಗಲೀ ಇಲ್ಲದೆ ವಿದ್ಯಾ ಸ್ವಾತಂತ್ರ‍್ಯವನ್ನು ಕಾಪಾಡಿಕೊಂಡು ಬಂದಿದ್ದರು.

ಇದೇ ಕಾಲಕ್ಕೆ ಸಂದ ಮತ್ತೊಂದು ಪ್ರಮುಖ ವಿದ್ಯಾಪೀಠವೆಂದರೆ ದಿವಾಕರಮಿತ್ರನ ಆಶ್ರಮ. ಈ ವಿದ್ಯಾಪೀಠವು ವಿಂಧ್ಯಾಟಿವಿಯಲ್ಲಿ ಒಂದು ಸಾಂಸ್ಕೃತಿಕ ಕೇಂದ್ರವಾಗಿದ್ದಿತು. ಅನೇಕ ಕಡೆಗಳಿಂದ ಬರುತ್ತಿದ್ದ ವಿದ್ಯಾರ್ಥಿಗಳನ್ನು ಆಕರ್ಷಸಿತ್ತು. ಜೈನರು, ಭಾಗವತ ಪಂಥದವರು, ಪಂಚರಾತ್ರ ವೈಷ್ಣವ ಸಂನ್ಯಾಸಿಗಳು, ಶೈವ, ಚಾರ್ವಾಕ ಮೊದಲಾದ ಪಂಥಗಳಿಗೆ ಸೇರಿದವರು ಎಲ್ಲ ವಿದ್ಯಾರ್ಥಿಗಳೂ ಇಲ್ಲಿಗೆ ಬರುತ್ತಿದ್ದರು. ಉತ್ತಮ ಜ್ಞಾನವು ಯಾವ ಪಂಥದವರಿಂದ ಬಂದರೇನು? ಅದನ್ನು ಆದರಿಸಿ ಪುರಸ್ಕರಿಸುತ್ತಿದ್ದರು.

ಸಾಹಿತ್ಯ ಪ್ರಗತಿ

ಹರ್ಷವರ್ಧನನು ಸ್ವತಃ ಕವಿ ಹಾಗೂ ನಾಟಕಕಾರನಾಗಿದ್ದನು. ಕವಿಗಳಿಗೆ ಉದಾರ ಆಶ್ರಯದಾತನಾಗಿದ್ದನು. ಚಕ್ರವರ್ತಿಯು ತನ್ನ ಆಳ್ವಿಕೆಯ ಆದಿಭಾಗದಲ್ಲಿಯೇ ದಿಗ್ವಿಜಯವನ್ನು ನಡೆಸಿ, ಸಾಮ್ರಾಜ್ಯದಲ್ಲಿ ಶಾಂತಿಯನ್ನು ಸ್ಥಾಪಿಸಿದುದರಿಂದ ಅನಂತರದ ವರ್ಷಗಳಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಲು ಅನುಕೂಲವಾಯಿತು. ಕತ್ತಿಯನ್ನು ಝಳಪಿಸಿ ಯುದ್ಧ ಭೂಮಿಯಲ್ಲಿ ಲೀಲಾಜಾಲವಾಗಿ ಶತ್ರುಗಳೊಡನೆ ಕಾದಾಡಿದಂತೆಯೇ, ಲೇಖನಿ ಹಿಡಿದು ಪದಮಾಲೆಯನ್ನು ಹಣೆಯುವ ಕಾರ್ಯದಲ್ಲಿಯೂ ಹರ್ಷನು ಅಪ್ರತಿಮನಾಗಿದ್ದನು. ಇವರ ಮರಣಾನಂತರ 673ರ ಸುಮಾರಿಗೆ ಭಾರತಕ್ಕೆ ಬಂದಿದ್ದ ಚೀಣೀಯಾತ್ರಿಕನಾದ ಇಟ್ಸಿಂಗನು, “ಶೀಲಾದಿತ್ಯ ರಾಜನು (ಹರ್ಷವರ್ಧನ) ಸಾಹಿತ್ಯದಲ್ಲಿ ಮಿತಿಯಿಲ್ಲದ ಪ್ರೀತಿಯಿಟ್ಟಿದ್ದನು. ಒಮ್ಮೆ ಕವಿಗಳನ್ನೆಲ್ಲಾ ಕರೆಸಿ ಕಾವ್ಯರಚನೆ ಮಾಡುವಂತೆ ಹೇಳಿದನು. ಈ ಕವಿಗಳು ಆಗಿನ ಕಾಲದಲ್ಲಿ ಪ್ರಚಲಿತವಾಗಿದ್ದ ಜಾತಕ ಕಥೆಗಳ ಆಧಾರದ ಮೇಲೆ 500 ಕವಿತೆಗಳನ್ನು ರಚಿಸಿಕೊಟ್ಟರು” ಎಂದಿದ್ದಾನೆ.

ಇತಿಹಾಸ ಪಂಡಿತರು “ನಾಗನಂದ”, “ರತ್ನಾವಳಿ” ಮತ್ತು “ಪ್ರಿಯದರ್ಶಿಕೆ” ಎಂಬ ಮೂರು ಕೃತಿಗಳನ್ನು ಹರ್ಷವರ್ಧನನೇ ರಚಿಸಿದನೆಂದು ತೀರ್ಮಾನಿಸಿರುವರು. “ನಾಗಾನಂದ” ನಾಟಕವು ಬೋಧಿಸತ್ವನಾದ ಜೀಮೂತ ವಾಹನದ ಕಥೆ. ಅದನ್ನು ಹರ್ಷನು ಸಂಗೀತರೂಪಕವನ್ನಾಗಿ ಸಿದ್ಧಗೊಳಿಸಿ ರಂಗದ ಮೇಲೆ ನೃತ್ಯದೊಂದಿಗೆ ಪ್ರದರ್ಶಿಸಲು ವ್ಯವಸ್ಥೆ ಮಾಡಿದನು. “ರತ್ನಾವಳಿ” ಹಾಗೂ “ಪ್ರಿಯದರ್ಶಿಕ”ಗಳೆರಡೂ ನಾಟಕಗಳೆ. ಇವು ಹರ್ಷವರ್ಧನನ ಸಂಸ್ಕೃತ ಸಾಹಿತ್ಯ ಪ್ರೌಢಿಮೆಯನ್ನು ಪ್ರಕಟಪಡಿಸುತ್ತವೆ. ಹರಿದತ್ತ, ಒರಿಸ್ಸದ ಜಯಸೇನ ಮೊದಲಾದ ಕವಿಗಳಿಗೆ ಆದರದ ಆಶ್ರಯವನ್ನಿತ್ತು ಅವರನ್ನು ಹರ್ಷನು ಪೋಷಿಸಿದ್ದನೆಂದು ಶಾಸನಗಳಿಂದಲೂ, ಸಮಕಾಲೀನ ಸಾಹಿತ್ಯದಿಂದಲೂ ತಿಳಿದುಬರುತ್ತದೆ. ಇಂತಹ ಚಕ್ರೇಶ್ವರನ ಕಾಲದಲ್ಲಿ ಸಾಹಿತ್ಯ ಪ್ರಗತಿ ನಡೆದಿತ್ತೆಂಬುದು ನಿಸ್ಸಂದೇಹವಾಗಿದೆ.

ಧಾರ್ಮಿಕ ಮತ್ತು ಸಾಮಾಜಿಕ ಪರಿಸ್ಥಿತಿ

ಹರ್ಷನು ಮಹಾಯಾನ ತತ್ವಗಳಲ್ಲಿ ವಿಶೇಷ ಆಸಕ್ತಿಯನ್ನಿಟ್ಟಿದ್ದರೂ ಅನ್ಯ ಧರ್ಮಗಳ ಬಗ್ಗೆ ಅಸಹನೆ ತೋರಿರಲಿಲ್ಲ. ಅವನು ಸೂರ್ಯನನ್ನೂ, ಶಿವನನ್ನೂ ಆರಾಧಿಸುತ್ತಿದ್ದು ಮಹಾಯಾನ ದರ್ಶನದಲ್ಲಿ ಗೌರವವನ್ನಿಟ್ಟಿದ್ದನು. ರಾಷ್ಟ್ರದಲ್ಲಿ ವಿವಿಧ ಪಂಥದವರು ಅವರವರ ದೇವತಾರಾಧನೆಯನ್ನು ನಡೆಸಲು ಯಾವ ರೀತಿಯ ನಿರ್ಬಂಧವೂ ಇರಲಿಲ್ಲ.

ಬೇರೆ ಬೇರೆ ವರ್ಗಗಳವರು ತಮ್ಮ ತಮ್ಮ ಕರ್ತವ್ಯ ಪಾಲನೆಯಲ್ಲಿ ತೊಡಗಿದ್ದರು. ಅವರೆಲ್ಲರೂ ಅನ್ಯೂನ್ಯವಾಗಿ ಜೀವಿಸುತ್ತಾ ಸಮಾಜದ ಬಹುಮುಖ ಪ್ರಗತಿಗೆ ಕಾರಣರಾಗಿದ್ದರು.

ವಿಶಾಲವಾದ ರಾಷ್ಟ್ರದಲ್ಲಿ ವ್ಯಾಪಾರ ವಾಣಿಜ್ಯಗಳೂ ಪ್ರಗತಿ ಹೊಂದಿದ್ದವು. ನಾನಾ ದೇಶಗಳೊಂದಿಗೆ ವ್ಯವಹಾರ ನಡೆಸಿಕೊಂಡು ಬರುತ್ತಿದ್ದ ಭಾರತೀಯರು ರಾಷ್ಟ್ರದ ಸಂಪತ್ತು ವೃದ್ದಿಹೊಂದುವಂತೆ ಮಾಡಿದ್ದರು. ಇದೆಲ್ಲಕ್ಕೂ ಏಕಚಕ್ರಾಧಿಪತ್ಯವನ್ನು ಸ್ಥಾಪಿಸಿ, ಸುಭದ್ರ ಸರ್ಕಾರವನ್ನು ನಿರ್ಮಾಣ ಮಾಡಿದ್ದ ಚಕ್ರೇಶ್ವರನ ಸಾಮರ್ಥ್ಯ, ಗುಣಶೀಲಗಳೇ ಕಾರಣ. ಹೀಗೆ ಭಾರತೀಯರನ್ನು ಒಂದೇ ರಾಷ್ಟ್ರೀಯ ಪರಮಾಧಿಕಾರದೊಳಗೆ ಸಂಘಟಿತರಾಗುವಂತೆ ಮಾಡಲು ಯತ್ನಿಸಿದ ಕೊನೆಯ ರಾಷ್ಟ್ರೀಯ ಚಕ್ರವರ್ತಿ ಹರ್ಷವರ್ಧನ.

ಪರಾಕ್ರಮ ಮೆಚ್ಚಬೇಕಾದ ಗುಣವೇ. ಆದರೆ ಅದೊಂದನ್ನೇ ಪಡೆದಿದ್ದರೆ ಹರ್ಷವರ್ಧನನಿಗೆ ನಾವು ಇಷ್ಟು ಗೌರವವನ್ನು ಕೊಡುತ್ತಿರಲಿಲ್ಲ.

ರಾಜ್ಯದಲ್ಲಿ ಶಾಂತಿಯನ್ನು ಸ್ಥಾಪಿಸಿದ. ಜನರು ನೆಮ್ಮದಿಯಿಂದ ಬದುಕಲು, ವಾಣಿಜ್ಯ ವ್ಯಾಪಾರ ದಿನನಿತ್ಯ ವ್ಯವಹಾರಗಳು ಸುಗಮವಾಗಿ ಸಾಗಲು ಅವಕಾಶ ಮಾಡಿಕೊಟ್ಟ. ಎಲ್ಲ ಧರ್ಮಗಳನ್ನೂ ಗೌರವದಿಂದ ಕಂಡ.

ಗಳಿಸಿದ ಸಂಪತ್ತನ್ನು ವಿದ್ವಾಂಸರಿಗೆ, ಬಡಬಗ್ಗರಿಗೆ ಹಂಚಿ ತಾನು ಹಳೆಯ ಬಟ್ಟೆಯುಟ್ಟು ನಿಂತ.

ವಿದ್ಯೆಗೆ ಗೌರವ ಕೊಟ್ಟ. ಚೀನಾದಿಂದ ಬಂದ ಹುಯೆನ್‌ತ್ಸಾಂಗನ ವಿದ್ವತ್ತಿಗೆ ನಿಷ್ಟಕ್ಷಪಾತವಾಗಿ ಉದಾರ ಮನ್ನಣೆ ಸಲ್ಲಿಸಿದ.

ಶೀಲದಿಂದ ಸೂರ್ಯನಂತೆ ಬೆಳಗುವವನೆಂದು ಜನ ಇವನನ್ನು “ಶೀಲಾದಿತ್ಯ” ಎಂದು ಕರೆದುದರಲ್ಲಿ ಆಶ್ಚರ್ಯವಿಲ್ಲ.