ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಒಂದು ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಡಬೇಕೆಂದು ಒಂದು ಕರೆ ಬಂತು. ತಕ್ಷಣ ಒಪ್ಪಿಕೊಂಡೆ. ಸುಮಾರು ಇಪ್ಪತ್ತು ವಿದ್ಯಾರ್ಥಿಗಳು ದೂರದರ್ಶನದ ಸ್ಟುಡಿಯೋದಲ್ಲಿ ಸಕಾಲಕ್ಕೆ ಒಂದು ಸೇರಿದರು.  ಕೆಲವು ಸೂಚನೆಗಳನ್ನು ಕೊಟ್ಟ ನಂತರ ನನ್ನ ಮೊದಲ ಪ್ರಶ್ನೆ ಆರಂಭವಾಯಿತು. ‘ಪ್ಯೆ ಎಂದರೇನು?’ ಪ್ರಶ್ನೆ ಕೇಳಿದ್ದೇ ತಡ ಎಲ್ಲರೂ ಬಟನ್ ಒತ್ತಿದ್ದೇ. ಮೊದಲು ಒತ್ತಿದವನನ್ನು ಉತ್ತರ ಕೇಳಿದೆ 22/7 ಎಂದ. ಉಳಿದವರನ್ನು ಒಬ್ಬೊಬ್ಬರನ್ನಾಗಿ ಕೇಳಿದೆ. ಒಂದೇ ಉತ್ತರ. ಕೊನೆಯ ಒಬ್ಬಳು ವಿದ್ಯಾರ್ಥಿನಿ ನನಗೆ ಬೇಕಾದ ಸಮರ್ಪಕ ಉತ್ತರ ನೀಡಿದಳು. “ಯಾವ ವೃತ್ತದಲ್ಲೇ ಆಗಲಿ ಪರಿಧಿಗೂ ವ್ಯಾಸಕ್ಕೂ ನಿಯತವಾದ ಪ್ರಮಾಣವಿದೆ, ಇದನ್ನೇ ಪೈ ಎನ್ನುವುದು” ಎಂಬುದೇ ಬಂದ ಉತ್ತರ. ತುಂಬ ಸಂತೋಷವಾಯಿತು. ಒಬ್ಬಳಾದರೂ ಸರಿಯಾದ ಉತ್ತರ ನೀಡಿದಳಲ್ಲಾ ಎಂದು. ಏಕೆಂದರೆ 22/7, pನ ಸಮೀಪ ಬೆಲೆಯಷ್ಟೆ, ವ್ಯಾಖ್ಯೆಯಲ್ಲ. ರಸಪ್ರಶ್ನೆ ನಂತರ ಒಬ್ಬ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ದೀರ್ಘ ಉತ್ತರ ಹೀಗೆ ನೀಡಿದೆ.

ಈ ವಿಷಯವು ಬಹಳ ಪ್ರಾಚೀನ ಕಾಲದಿಂದಲೂ ತಿಳಿದು ಬಂದಿದೆ. ಆದರೆ ಈ ಪ್ರಮಾಣಕ್ಕೆ ಪ್ಯೆ ಎಂಬ ಚಿಹ್ನೆ ಈಚಿನದು. ವಿಲಿಯಂ ಜೋನ್ಸ್ ಎಂಬುವನು 1706ರಲ್ಲಿ ಬರೆದ ಪುಸ್ತಕದಲ್ಲಿ ಈ ಚಿಹ್ನೆಯನ್ನು ಮೊದಲು ಉಪಯೋಗಿಸಿದನು. ಇದಕ್ಕೆ ಮುಂಚೆ ಔಟ್‌ರೆಡ್ ಎಂಬುವನು ವೃತ್ತದ ಪರಿಧಿಗೆ ಪ್ಯೆ ಎಂದು ಬರೆದಿದ್ದ. ಅಯ್‌ಲರ್‌ನ ಕಾಲದಿಂದೀಚೆಗೆ ಪ್ಯೆ ಚಿಹ್ನೆಯು ಈಗ ನಾವು ತಿಳಿದಿರುವ ಅರ್ಥದಲ್ಲಿ ಸಾರ್ವತ್ರಿಕವಾಗಿ ಬಳಕೆಯಲ್ಲಿದೆ. ಪ್ಯೆ=3 ಎಂಬ ಬಹಳ ಸ್ಥೂಲವಾದ ಬೆಲೆಯನ್ನು ಪ್ರಾಚೀನ ದೇಶಗಳಲ್ಲೆಲ್ಲಾ ಬ್ಯಾಬಿಲೋನಿಯರು, ಯಹೂದ್ಯರು, ಚೀನೀಯರು, ಭಾರತೀಯರು ಮುಂತಾದವರು ಉಪಯೋಗಿಸಿದ್ದಾರೆ ಬೈಬಲ್ಲಿನಲ್ಲಿಯೂ ಕೂಡ p=3 ಎಂಬ ಅಭಿಪ್ರಾಯ ನಮಗೆ ದೊರಕುತ್ತದೆ. ಪುರಾತನ ಭಾರತೀಯರಲ್ಲಿ ಪ್ಯೆ=Ö10 ಎಂಬ ಬೆಲೆಯು ವಿಶೇಷ ಉಪಯೋಗದಲ್ಲಿದ್ದಿತು. ಕ್ರಿ.ಪೂ. 287ರಲ್ಲಿ ಗ್ರೀಸ್ ದೇಶದ ಆರ್ಕಿಮಿಡೀಸನ ಪ್ರಕಾರ  31/7 ಕ್ಕಿಂತ ಕಡಿಮೆ  310/71 ಕ್ಕಿಂತ ಹೆಚ್ಚು ಎಂಬ ಅಭಿಪ್ರಾಯವಿತ್ತು.  ಕ್ರಿ.ಶ. 125ರಲ್ಲಿ ಚಿಯಾಂಗ್ ಚುಂಗ್ (Chiang Chung) ಎಂಬ ಚೀನಾದ ಗಣಿತಜ್ಞನ ಪ್ರಕಾರ ಪ್ಯೆ=Ö10=3.162..

ಕ್ರಿ.ಶ. 265ರಲ್ಲಿ ವಾಂಗ್ ಫಾನ್ (Vaung Fan) ಎಂಬ ಚೀನಾದ ಖಗೋಲ ಶಾಸ್ತ್ರಜ್ಞನ ಪ್ರಕಾರ ಪ್ಯೆ=142/45 = 3.1555. ಚೀನಿಯರು ಪ್ಯೆಗೆ ಅನೇಕ ಸನ್ನಿಹಿತ ಬೆಲೆಗಳನ್ನು ಕೊಟ್ಟರು. ಇದರಲ್ಲಿ ತ್ಸುಚುಂಗ್ ಚಿಹ್ (Tsu ch’ung chih) ಎಂಬಾತನು ಸುಮಾರು ಕ್ರಿ.ಶ. 476ರಲ್ಲಿ ಕೊಟ್ಟ ಪ್ಯೆ=355/113=3.141593 ಎಂಬ ಬೆಲೆಯು ಶ್ಲಾಘನೀಯವಾದುದು. ಕ್ರಿ.ಶ. 499ರಲ್ಲಿ ಭಾರತದ ಮೊದಲ ಆರ್ಯಭಟ ಪ್ಯೆ=62832/20,000 = ಸುಮಾರು 3.1416 ಎಂಬ ಉತ್ತಮವಾದ ಬೆಲೆಯನ್ನು ಕೊಟ್ಟಿದ್ದ. ಆರ್ಕಿಮಿಡೀಸನೂ ಆರ್ಯಭಟನೂ ವೃತ್ತದಲ್ಲಿ ಬಹುಬಾಹುಗಳುಳ್ಳ ಸಮಾಕೃತಿಗಳನ್ನು ರಚಿಸುವುದರ ಮೂಲಕ ಪ್ಯೆನ ಬೆಲೆಯನ್ನು ನಿರ್ಧರಿಸಿದರು.

ಹಿಂದೂ ತ್ರಿಕೋನ ಮಿತಿಯಲ್ಲಿ ಪ್ಯೆ=600/191 ಎಂಬ ಮತ್ತೊಂದು ಬೆಲೆಯು ಪ್ರಾಯಶಃ ಎರಡನೆಯ ಆರ್ಯಭಟನ ಕಾಲದಿಂದ ಕಂಡು ಬರುತ್ತದೆ. ಮೊದಲ ಆರ್ಯಭಟನ ಬೆಲೆಗೆ ಹೋಲಿಸಿದರೆ ಇದೇನು ಅಷ್ಟು ಉತ್ತಮವಾದ ಬೆಲೆಯಲ್ಲ. ಕ್ರಿ.ಶ. 628ರಲ್ಲಿ ಭಾರತದ ಬ್ರಹ್ಮಗುಪ್ತನು ಪ್ಯೆ:Ö10 ಎಂದು ತಿಳಿಸಿದನು. ಅನಂತರ 9ನೆಯ ಶತಮಾನದ ಮಧ್ಯಭಾಗದಲ್ಲಿ ಭಾರತದ ಮಹಾವೀರಾಚಾರ್ಯ ಪ್ಯೆ=3.03(3/4) ಎಂಬ ಅಭಿಪ್ರಾಯ ಕೊಟ್ಟನು. ಕ್ರಿ.ಶ. 499ರಲ್ಲಿ ಮೊದಲನೆಯ ಆರ್ಯಭಟ ನೀಡಿದ್ದ ಪ್ಯೆ=3.1416 ಎಂಬ ಬೆಲೆಯನ್ನೇ, ಕ್ರಿ.ಶ. 1150ರಲ್ಲಿ ಭಾರತದ ಎರಡನೆಯ ಭಾಸ್ಕರಾಚಾರ್ಯನು ಪ್ಯೆ=3927/1250=3.1416 ಎಂದು ತಿಳಿಸಿದನು.

1685ರಲ್ಲಿ ಕೊಷಾನ್ಸ್ಕಿ ಎಂಬುವನು ರೇಖಾಗಣಿತವೇ ಮುಂತಾದ ವಿಧಾನಗಳಿಂದ ತಿಳಿಸಿದ ಬೆಲೆ ಹೀಗಿದೆ:

pನ ದೀರ್ಘಯಾತ್ರೆ ಇಲ್ಲಿಗೇ ಮುಗಿಯದೆ ಜಪಾನಿನ ಅರಿಮ ರೇಡೋ (Arima Raido) ಎಂಬುವನು pನ ಬೆಲೆಯನ್ನು 29 ದಶಮಾಂಶ ಸ್ಥಾನದವರೆಗೂ, 1739ರಲ್ಲಿ ಜಪಾನಿನ ಮಾಟ್ಸು ನಾಗ ಎಂಬುವನು 49 ದಶಮಾಂಶ ಸ್ಥಾನದವರೆಗೂ ಆವಿಷ್ಕರಿಸಿದರು. 1828ರಲ್ಲಿ ಸ್ವೆಖ್ಟ್‌ನ ಪ್ರಕಾರ

ಇನ್ನೂ ಮುಂದುವರೆಯುತ್ತ 1873ರಲ್ಲಿ ವಿಲಿಯಂ ಷ್ಯಾಂಕ್ಸ್ (William Shanks) pನ ಬೆಲೆಯನ್ನು 707 ದಶಮಾಂಶ ಸ್ಥಾನಗಳವರೆಗೂ ಆವಿಷ್ಕರಿಸಿದ.

ವಿದ್ಯಾರ್ಥಿಯು ಇದೇನು ಸಾರ್ ಹನುಮಂತನ ಬಾಲದಂತೆ ಹೇಳ್ತನೇ ಇದ್ದೀರಲ್ಲಾ ಎಂದ. ಹೌದಪ್ಪಾ ಹಿಂದಿನ ಗಣಿತಜ್ಞರು p ಬಗ್ಗೆ ಎಷ್ಟು ತಲೆಕೆಡಿಸಿಕೊಂಡಿದ್ದಾರೆ ಅನ್ನೋ ವಿಷಯ ನಿಮಗೆಲ್ಲಾ ತಿಳಿಯಬೇಕು ಎಂದು ಹೇಳಿದೆ. ಪುಸ್ತಕಗಳನ್ನು ಓದಿ ವಿಷಯವನ್ನು ಸಂಗ್ರಹಿಸಬೇಕು. ಕೇವಲ ಪಠ್ಯಪುಸ್ತಕದ ಮೇಲೆ ಅವಲಂಬಿತವಾಗಿರಬಾರದು ಎಂದಾಗ ವಿದ್ಯಾರ್ಥಿಯ ಮುಖದಲ್ಲಿ ಹೊಸ ಚೇತನ ಉಂಟಾಯಿತು.