ಲಾವಣಿಯ ಪ್ರಾಚೀನತೆ

ಗೊಂದಲಿಗರ ಪ್ರಾಚೀನತೆಯನ್ನು ಹುಡುಕುತ್ತಾ ಹೋಗಿ “ಗುಂಭೀಶಂ” ರವರು ‘ಗೊಂದಣಿ’ ಮತ್ತು ಲಾವಣಿ ಶಬ್ದಗಳು ಏಕಕಾಲಕ್ಕೆ ಕಾಣಸಿಗುತ್ತವೆ ಎಂದು ಹೇಳಿದ್ದಾರೆ. ‘ಕರ್ನಾಟಕ ಶಬ್ದಸಾರಂ’, ‘ಕವಿಕಂಠಹಾರ’, ‘ಕಬ್ಬಿಗರ ಕಾವ್ಯ’, ‘ಕರ್ನಾಟಕ ನಿಘಂಟು’, ‘ಚತುರಾಸ ನಿಘಂಟು’, ‘ಕರ್ನಾಟಕ ಶಬ್ದಮಂಜರಿ’ಗಳಲ್ಲಿ ‘ಲಾವಣಿ ಶಬ್ದ’ವನ್ನು ಪತ್ತೆ ಹಚ್ಚಿದ್ದಾರೆ. ಹನ್ನೊಂದನೆಯ ಶತಮಾನದಲ್ಲಿ ‘ಅಭಿನವ ಪಂಪ’ನು ಈ ಶಬ್ದವನ್ನು ಒಂದು ಬಗೆಯ ಗೋಷ್ಠಿ ಎಂಬ ಅರ್ಥದಲ್ಲಿ ಬಳಸಿಕೊಂಡಿದ್ದಾನೆ ಎಂಬ ಅರ್ಥವನ್ನು ಗುಂಭೀಶಂ ನೀಡುತ್ತಾರೆ. ಮರಾಠಿಯ ಭೂತ ಸಂಪ್ರದಾಯದಲ್ಲಿ ಗೊಂದಲದ ಜೊತೆಗೆ ‘ಲಾವಣಿ’ ಬಂದಿದೆ ಎಂದರೆ ಲಾವಣಿಗಳು ಆಗ ಪ್ರಚಲಿತದಲ್ಲಿದ್ದವು ಎಂದು ನಿರ್ಧಾರಕ್ಕೆ ಬರುತ್ತಾರೆ. ‘ನಾವು ನಾಗೇಶಿ ವಳೀಚೆ- ನಾವು ನಾಗೇಶಿ ಸಂಪ್ರದಾಯದವರು ಎಂದು ಅಭಿಮಾನಪೂರ್ವಕವಾಗಿ ಅವರು ಹೇಳುವುದಾದಲ್ಲಿ ಇದರ ಮೂಲ ಪುರುಷ ನಾಗೇಶಿ ಇರಬೇಕು ಎಂದು ತರ್ಕಕ್ಕೆ ಬರಬಹುದು. ಇದರ ಆಧಾರದಿಂದ ಈಗ ಲಾವಣಿಯ ಇತಿಹಾಸ ಮಹಾರಾಷ್ಟ್ರದಲ್ಲಿರುವ ಜ್ಞಾನೇಶ್ವರರ ಕಾಲಕ್ಕೆ ಹೋಗುತ್ತದೆ. ಜ್ಞಾನೇಶ್ವರರ ಕಾಲ ೧೨೬೯ ಅಂದರೆ ಹದಿಮೂರನೆಯ ಶತಮಾನ. ಈ ಶತಮಾನದಲ್ಲಿ ಲಾವಣಿ ಆಗಿರಲೇಬೇಕು. ಇದಕ್ಕೆ ಅತೀಸ್ಪಷ್ಟ ದಾಖಲೆಗಳು ಮರಾಠಿ ಸಾಹಿತ್ಯದಲ್ಲಿ ಸಿಗುತ್ತವೆ. ಭಾರತ ಇತಿಹಾಸ ಸಂಶೋಧನಾ ಮಂಡಳಿ ಪುಣೆಯ ಸಂಗ್ರಹಾಲಯದಲ್ಲಿ ಹಸ್ತಲಿಖಿತ ಲಾವಣಿಯೊಂದು ದೊರೆತಿದೆ. ಅದರ ಫೈಲ್ ನಂ. ೫೦-೩೧೧(೫). ಇದರಲ್ಲಿ ‘ಮನ್ಮಥ ಲಿಂಗ’ ಎಂಬ ಹೆಸರಿನ ಲಾವಣಿ ಲಭ್ಯವಾಗಿದೆ. ‘ಲಾವಣಿಹಾಸ’ ಕರಡಾಬೌಭವಾನಿವರೀ ಲಾವಣಿ (ಕರಡದಲ್ಲಿಯ ದೇವರ ಮೇಲಿನ ಲಾವಣಿ)ಯನ್ನು ದಿವಂಗತ ಗಂಗಾಧರ ಅಷ್ಟಾಚಾದ್ರಿ ಅವರು ಕೊಲ್ಲಾಪುರದ ‘ಜ್ಞಾನಪ್ರಸಾರ’ ಪತ್ರಿಕೆಯಲ್ಲಿ ಪ್ರಸ್ತುತ ಪಡಿಸಿದ್ದಾರೆ. ಸಂಶೋಧನಾ ದೃಷ್ಟಿಯಿಂದ ಲಾವಣಿ ಶಬ್ದದ ಇತಿಹಾಸ ಹದಿನಾರನೇ ಶತಮಾನದಲ್ಲಿ ಗಟ್ಟಿಗೊಂಡಿತು. ‘ಪರಮರಹಸ್ಯ ಗ್ರಂಥ’ವನ್ನು ಸಹ ಈ ಶತಮಾನದಲ್ಲಿ ರಚಿಸಲಾಯಿತು. ಇಲ್ಲಯೂ ಲಾವಣಿಯ ಪದಪ್ರಯೋಗವಾಗಿದೆ.

ಮಹಾರಾಷ್ಟ್ರದಲ್ಲಿರುವ ಅಂಬಾಭವಾನಿಯ ಕೊಲ್ಲಾಪುರ ಹಾಗೂ ತುಳಜಾಪುರ ಪ್ರದೇಶಗಳು ‘ಕಾವೇರಿಯಿಂದ ಗೋದಾವರಿ’ ಯವರೆಗೆ ವಿಸ್ತಾರವಾದ ಕರ್ನಾಟಕದಲ್ಲಿದ್ದವು. ಆಳರಸರ ಬಲಾಬಲತೆಯಿಂದ, ಭಾಷಾವಾರು ಪ್ರಾಂತಗಳಾದ ನಂತರ ಅವು ಮಹಾರಾಷ್ಟ್ರಕ್ಕೆ ಸೇರಿದವು. ಸವದತ್ತಿ ಎಲ್ಲಮ್ಮ, ತಾಳಿಕೋಟಿ ಅಂಬಾಬಾಯಿ, ವಿಜಾಪುರದ ಮಹಾಲಕ್ಷ್ಮಿ, ಸನ್ನತಿ ಗ್ರಾಮದ ಚಂದ್ರಕಲಾ ಪರಮೇಶ್ವರಿ ಮುಂತಾದ ದೇವರುಗಳ ಉಪಾಸಕರು ಮರಾಠಿಯವರಾದರೂ ಕರ್ನಾಟಕದಲ್ಲಿ ಉಳಿದರು. ಇಲ್ಲಿ ಮರಾಠಿ, ಕನ್ನಡ ಎರಡೂ ಭಾಷಾ ಸಂಸ್ಕ್ರತಿಗಳು ಸಮ್ಮಿಲನಗೊಂಡವು. ಹೀಗಾಗಿ ಮರಾಠಿಯ ಶೃಂಗಾರ ಗೀತೆಗಳು ಅಂದರೆ ಕನ್ನಡದ ಲಾವಣಿಗಳಾಗಿ ಪರಿವರ್ತನೆ ಹೊಂದಿವೆ. ಎಂದು ಈ ಮೇಲಿನ ಎಲ್ಲ ಅಂಶಗಳಿಂದ ಗುರುತಿಸಬಹುದಾಗಿದೆ. ಮರಾಠಿಯ ವೀರರಸ ಪ್ರಧಾನವಾದ ಹಾಡುಗಳನ್ನು ‘ಪೋವಾಡಾ’ ಎಂದೂ ಶೃಂಗಾರರಸ ಪ್ರಧಾನವಾದ ಪದಗಳನ್ನು ‘ಲಾವಣಿ’ ಎಂದು ಗುರುತಿಸಿದ್ದನ್ನು ಡಾ. ಬಿ.ಬಿ. ಹೆಂಡಿಯವರು ದಾಖಲಿಸಿದ್ದಾರೆ. ೧೮೨೦ರ ಉತ್ತರ ಪೇಶ್ವೆಯವರ ಕಾಲದಲ್ಲಿ ಲಾವಣಿ ಹಾಡುಗಾರರಿಗಾಗಿಯೇ ಅವರ ದರ್ಬಾರಗಳಲ್ಲಿ ಸ್ಥಾನ ಒಂದು ಇರುತ್ತದೆಂದು ತಿಳಿದುಬಂದಿದೆ. ಆಸ್ಥಾನ ಲಾವಣಿಕಾರರು ಪೇಶ್ವೆಯವರನ್ನು ಶೃಂಗಾರ ಲಾವಣಿ ಹಾಡಿ ಖುಷಿ ಪಡಿಸುತ್ತಿದ್ದರು ಮತ್ತು ಅವರನ್ನು ವರ್ಣನೆ ಮಾಡುತ್ತಿದ್ದರು. ಇನ್ನು ಕೆಲವು ಕಡೆ ಪೇಶ್ವೆಯವರ ಆಸ್ಥಾನದಲ್ಲಿ ಹಣಕೊಟ್ಟು ಲಾವಣಿಕಾರರನ್ನು ವೃತ್ತಿಗಾಗಿ ಇಟ್ಟುಕೊಳ್ಳುತ್ತಿದ್ದರು. ಆದರೆ ಈ ವೃತ್ತಿ ಲಾವಣಿಕಾರರು ಆಳರಸರ ದುರಾಡಳಿತ, ಸಿಂಹಾಸನದ ಹಿಂದಿನ ಚಿತ್ರಗಳನ್ನು ಲಾವಣಿಗಳಲ್ಲಿ ಹೇಳುತ್ತಿರಲಿಲ್ಲ. ಕನ್ನಡದ ರಾಜಮನೆತನಗಳಲ್ಲಾಗಲಿ ದರ್ಬಾರಗಳಲ್ಲಾಗಲಿ ಹೀಗೆ ಲಾವಣಿಕಾರರು ಇದ್ದ ಬಗ್ಗೆ ನನ್ನ ಮಿತಿಗೆ ಮಾಹಿತಿ ಇಲ್ಲ. “ಹೃದಯಾಲಾ ಚಟಕಾ ಲಾವತೇ ಲೇ ಲಾವಣೇ” (ಹೃದಯಕ್ಕೆ ಚುರುಕು ಮುಟ್ಟಿಸುವ ಹಾಡು) ‘ಶೇತಾತ ಲಾವಣಿ ಕರತಾನಾ ಮಟಲೇ ಜಾತೇ ತೇ ಲಾವಣಿ ಗೀತ” (ಹೊಲದಲ್ಲಿ ಬಿತ್ತನೆ ಮಾಡುವಾಗ ಹೇಳುವ ಪದ್ಯ). ಹೀಗೆಂದು ಎಂ.ವೈ. ಧೊಂಡಿ ಅವರು ತಮ್ಮ “ಮರಾಠಿ ಲಾವಣ್ಯ” ಪುಸ್ತಕದಲ್ಲಿ ಚರ್ಚಿಸಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲ ಉತ್ತರ ಹಿಂದುಸ್ಥಾನದಲ್ಲಿಯ ಹಿಂದಿ ಲಾವಣಿಗಳಿಗೂ ಮರಾಠಿಯ ಲಾವಣಿಗಳೇ ಮೂಲವೆಂದು ಹೇಳಲಾಗುತ್ತಿದೆ. ಹಿಂದಿಯಲ್ಲಿ ‘ಮರಹಟೇಗಾನಾ’ (ಮರಹಟೇಬಾಜಿ) ಎಂದು ಅಕ್ಬರನ ಕಾಲದಲ್ಲಿ (೧೫೫೬-೧೬೦೫) ಇವುಗಳನ್ನು ಹಾಡುವವರಿಗೆ ವಿಶೇಷ ಸ್ಥಾನಮಾನ ಇದ್ದುದು ತಿಳಿದುಬರುತ್ತದೆ.

ಕನ್ನಡದಲ್ಲಿ ಲಾವಣಿ ಸಾಹಿತ್ಯದ ಚರಿತ್ರೆಯನ್ನು ಬಹಳ ಹಿಂದಕ್ಕೆ ಒಯ್ಯಲು ಎಷ್ಟು ಪ್ರಯತ್ನಿಸಿದರೂ ನಿಖರ ದಾಖಲೆಗಳು ಕಡಿಮೆಯಾಗುತ್ತಲಿವೆ. ಕಿತ್ತೂರಿನ ಬಂಡಾಯದ ಸನ್ನಿವೇಶದಲ್ಲಿ ನಮಗೆ ಲಾವಣಿಗಳು ದಕ್ಕುತ್ತಿವೆ. ಬಂಗಾಳದ ಡಾಕಾ ಸಾಹಿತ್ಯ ಪರಿಷತ್ತು, ಮಹಾರಾಷ್ಟ್ರದ ಸಾಹಿತ್ಯ ಸಂಘಟನೆಗಳು ಹಳ್ಳಿಯ ಸಾಹಿತ್ಯವನ್ನು ಅಚ್ಚು ಹಾಕಿಸಿದಂತೆ, ಕನ್ನಡದಲ್ಲಿ ಕೆಲಸ ಆಗಿಲ್ಲವೆಂದು ಮಧುರಚೆನ್ನರು ೨೨.೧೧.೧೯೨೫೩ರಂದು ಹೇಳಿದ ಮಾತನ್ನು ಗಮನಿಸಿದರೆ, ಕಿತ್ತೂರಿನ ಲಾವಣಿಗಳು ನಮಗೆ ದಕ್ಕಬೇಕಾದ ಸಮಯದಲ್ಲಿ ದಕ್ಕಿಲ್ಲವೆಂದೇ ಹೇಳಬೇಕು. ಲಾವಣಿ, ಲಾವಣಿಗ ಎಂಬ ಪದಗಳು ನಮ್ಮ ಕುಮಾರವ್ಯಾಸ, ಕುಮಾರ ವಾಲ್ಮೀಕಿ ಕಾವ್ಯಗಳಲ್ಲಿ ಕಾಣಬಹುದಾಗಿದೆ. ನಾಗಚಂದ್ರನ ‘ಛಂದೋಂಬುಧಿ’ಯಲ್ಲಿ ಲಾವಣಿಯ ಲಕ್ಷಣವುಳ್ಳ ಪದ್ಯ ಸಿಕ್ಕಿದೆ.

ಸುಟ್ಸಿ ಇಲ್ಲಿಗೆ ತುರಾಕಲ್ಗಿ ಚರ್ಚೆ ತಿಳಿಯದೋ ಜಾಹೀ ರಾ |
ಒಂದು ಸಾವಿರ ಒಂಬೈನೂರಾ ವರ್ಷಗಳ ಮ್ಯಾಲ ಚಿಲ್ಲರಾ |

ಈ ಪದ್ಯದ ಸಾಲುಗಳಿಂದ ಒಂದು ಸಾವಿರ ಒಂಬೈನೂರಾ ವರ್ಷಗಳ ಮ್ಯಾಲ ಹಿಂದೆಯೆ ಹುಟ್ಟಿದೆ ಎಂದು ಹೇಳಲಾಗದು. ಹೆಣ್ಣು ಗಂಡಿನ ಚರ್ಚೆ ಪ್ರಾಚೀನವಾಗಿತ್ತೆಂದು ಗುರ್ತಿಸಬಹುದೇನೋ? ಲಾವಣಿಕಾರರು ಶಿಷ್ಟಕವಿಗಳಂತೆ ತಮ್ಮ ಕೃತಿರಚನೆಯಾದ ಕಾಲವನ್ನು ಹೇಳಿಕೊಂಡಿದ್ದು ಬಹಳ ಕಡಿಮೆ. ಅದಕ್ಕಾಗಿ ತಕ್ಕ ಆಧಾರಗಳನ್ನು ದಕ್ಕಿಸಿಕೊಳ್ಳುವಲ್ಲಿ ನಾವು ಸೋತಿದ್ದೇವೆ. ೧೯೧೫ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಮಂಡಳಿಯ ಅಪೇಕ್ಷೆಗನುಗುಣವಾಗಿ ವಿಜಾಪುರದ ಫ.ಗು.ಹಳಕಟ್ಟಿಯವರು ಪರಿಷತ್ತಿಗೆ ಒಂದು ಲಾವಣಿ ಸಂಗ್ರಹಿಸಿ ಕಳಿಸಿದ್ದರೆನ್ನಲಾಗಿದೆ. ಇನ್ನು ೧೯೧೯ರಲ್ಲಿ ಹಣಮಂತಗೌಡರು ಎಂಬುವವರು “ಹೈದ್ರಾಬಾದಿನ ಲಾವಣಿಪದ” ಎಂಬ ನಾಲ್ಕು ಪುಟಗಳ ಲಾವಣಿ ಕೊಟ್ಟಿದ್ದರೆಂದು ಮಧುರಚೆನ್ನರು ತಮ್ಮ “ಹಳ್ಳಿಯ ಹಾಡು” ಲೇಖನದಲ್ಲಿ ದಾಖಲಿಸಿದ್ದಾರೆ. ೧೯೨೩ರಲ್ಲಿ ವಿಜಾಪುರದಲ್ಲಿ ಜರುಗಿದ ೯ನೇಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಿ.ಧೋಲಾ ಸಾಹೇಬರು ‘ಲಾವಣಿಯ ಲಾವಣ್ಯ’ ಎಂಬ ನಿಬಂಧವನ್ನು ಪ್ರಸ್ತುತ ಪಡಿಸಿದ್ದೂ ಇದೇ ಸಮಯದಲ್ಲಿ ‘ಹಳ್ಳಿಯ ಹಾಡು’ ಭಾಷಣದಲ್ಲಿ ಮಧುರಚೆನ್ನರು ಒಂದು ಲಾವಣಿಯನ್ನು ಉದಾಹರಿಸಿದ್ದು ಎಲ್ಲರಿಗೂ ಗೊತ್ತಿದ್ದ ಮಾತಾಗಿದೆ. ಇಲ್ಲಿಗೆ ನಾವು ಹಲಸಂಗಿ ಭಾಗದ ಒಟ್ಟು ಸಾಹಿತ್ಯ ಗುರುತಿಸಲು ನಾಂದಿ ಹಾಡಿದಂತಾಗಿದೆ.

ಶಿಷ್ಟ ಸಾಹಿತ್ಯ ಜೀವಂತವಾಗಲು ಜನಪದ ಸಾಹಿತ್ಯದ ಬೇರಿನಿಂದ ನೀರು ಕುಡಿಯಬೇಕಾಗಿದೆ. ಮುತ್ತಜ್ಜನೆಂತು ಮೊಮ್ಮಗನಿಗೆ ಪೋಜ್ಯನೋ ಅಂತೆಯೇ ಶಿಷ್ಟಪದಕ್ಕೇ ಜಾನಪದ ಆರಾಧ್ಯವಾಗುತ್ತದೆ. ಶಿಷ್ಟ ಸಾಹಿತ್ಯ ಪಾಡುಗೊಂಡು ಪಾಚಿ ಬೆಳೆದು, ಬಗ್ಗಡಗೊಂಡು ನಾರುವಂತಾದಾಗ, ಜನಪದ ಸಾಹಿತ್ಯವಾಹಿನಿ ಅದರ ಮೇಲೆ ಹರಿದು ಪಾಚಿ, ಕೊಳಕುಗಳನ್ನು ಕೊಚ್ಚಿ ನೂತನ ಜೀವನವನ್ನು ನೀಡಿದ್ದುಂಟು. (ದೇ.ಜವರೇಗೌಡ, ಜಾನಪದ ಅಧ್ಯಯನ-೯೧)

ಹಲಸಂಗಿ ಗ್ರಾಮ

ಪ್ರಸ್ತುತ ನಾವು ಗಮನಿಸಬೇಕಾದುದು ಹಲಸಂಗಿ ಮತ್ತು ಹಲಸಂಗಿ ಭಾಗದ ಲಾವಣಿಕಾರರು. ಈ ಭಾಗದ ಲಾವಣಿ ಸಾಹಿತ್ಯ ಕುರಿತು ಮಾತನಾಡುವಾಗ ಹಲಸಂಗಿ ಬಗ್ಗೆ ೧೯೪೪ರಲ್ಲಿ ಮಧುರಚೆನ್ನರು ಉಲ್ಲೇಖಿಸಿದ್ದನ್ನು ಗಮನಿಸಬೇಕಾಗುತ್ತದೆ. “ಯಾದದಾಸ್ತ ದಿಲ್ಲೀ ಬದಶ್ಯಾನ ಹುಕುಂ ಆಯಿತಲ್ಲಾ ದಕ್ಷಿಣಾ ದೇಶದಲ್ಲಿ ನಮ್ಮ ಸ್ವಥಾ ಜಾತಿಯಿಂದ ಕಿಲ್ಲೇಕಟ್ಟಿ ಸರಂಜಾಮ ಅಂದ್ರೆ ಲಕ್ಕಂ ಇಡಲಿಕ್ಕೆ ಜಾಗ ಮಾಡಬೇಕು. ಸದರಿ ಹುಕುಮದ ಮೇಲಿಂದ ಸುಲತಾನ ಬಾದಶಾಹಾ ಇತನು ಬಾಜೀಜ್ಯಹಾನ್ ಸರದಾರಗ ಕಳಿಸಿಕೊಟ್ಟನು. ಈತನು ಈ ಸರಹದ್ದಿಗೆ ಬಂದು ಹಲಸಂಗಿಯಲ್ಲಿ ಸಂಗಿ ಅಂಬುವಾಕಿ ಕುರುಬರಾಕಿ ಕುರೀಹಟ್ಟೀ ಹಾಕಿಕೊಂಡು ಇದ್ದಳು. ಸದರೀ ಹಟ್ಟೀ ಬದಲಿ ಒಂದು ವಸ್ತೀ ಮಾಡಲಿಕ್ಕೆ ಸರದಾರನು ಹೇಳಿದನು. ಅವನು ಹಲಸಂಗಿಯಲ್ಲಿ ಸಂನ್ ೮೦೦ ಫಸಲಿಗೆಯಲ್ಲಿ ಕಿಲ್ಲೇ ಕಟ್ಟಿ ಇರೋದು ಮಾಡಿದನು. ಕಿಲ್ಲೇ ಕಟ್ಟಿದ ಜಾಗೆಯಲ್ಲಿ ಸಂಗಿ ಅಂಬುವಾ ಕುರುಬರಾಕಿ ಹಟ್ಟೀಹಾಕಿಕೊಂಡು ಇದ್ದಳು. ಅದರ ದಶಿಯಿಂದ ಅಕೀ ಹೆಸರಲೆ ಹಲ್ಸಂಗ ಅಂತ ಹೆಸರು ಇಟ್ಟನು. ಮತ್ತು ಅದರಿ ದಿವಸದಿಂದ ಹಿಡಿದೂ ಹಲಸಂಗಿ ಅಂತ ಕಾಗದ ಪತ್ರದಲ್ಲಿ ಬರಿತಾರೆ” ಹೀಗೆ ಹಲಸಂಗಿ ಎಂದು ಹೆಸರು ಈ ಊರಿಗೆ ಬಂದಿದೆ.

ಹಲಸಂಗಿ ಒಂದು ಕೊಂಪೆಹಳ್ಳಿ. ಆದರೆ ಅಲ್ಲಿಯ ನವಿಲುಗಳು ಕುಣಿಯುವುದನ್ನು ಕಂಡವರು ಅಖಿಲ ಕರ್ನಾಟಕದ ದಶದಿಕ್ಕಿನ ವಿಚಾರವಂತರು. ಮಧುರಚೆನ್ನರು ಇರುವಷ್ಟು ಕಾಲ ಹಲಸಂಗಿ ಕನ್ನಡ ವಿಚಾರವಂತರಿಗೆ ಒಂದು ಯಾತ್ರಾಸ್ಥಳದಂತಾಗಿತ್ತು. (ದ.ಬಾ.ಕುಲಕರ್ಣಿ – ಸೀಮಾಪುರುಷರು). ನಿಸರ್ಗದತ್ತ ಶಾಂತಿಯಲ್ಲಿ ನೆಲೆಸಿದ ಹಳ್ಳಿ, ಹತ್ತಿರದಲ್ಲಿ ಹರಿಯುವ ಹಳ್ಳದ ನೀರಿನ ಜುಳುಜುಳು ನಿನಾದ, ನವಿಲುಗಳ ಕೇಕೆ, ಹಲಸಂಗಿ ಊರಿನ ಮಗ್ಗುಲಲ್ಲಿ ಹಳ್ಳವಿದೆ. ಅದರ ಬಯಲಲ್ಲೇ ಬೇವಿನ ಮರದ ತೋಪಿದೆ. ಸಂಜೆ ನೂರಾರು ನವಿಲುಗಳು ಬಂದು ತೋಪಿನಲ್ಲಿ ಸೇರುತ್ತವೆ. ಒಮ್ಮೆ ನಾನು ಆ ಊರಿಗೆ ಹೋದಾಗ ಬಾನಿನಲ್ಲಿ ಕಾರ್ಮುಗಿಲು ಕವಿದಿತ್ತು. ಆ ನವಿಲುಗಳ ಹುಚ್ಚು ಕುಣಿತವನ್ನು ಪ್ರದರ್ಶಿಸಿದ ನೋಟವನ್ನಂತೂ ನನ್ನ ಮನಸ್ಸನ್ನು ಮುಗ್ಧನನ್ನಾಗಿ ಮಾಡಿತ್ತು. ಅದೇ ನೆನಪಿನಿಂದ ಒಂದು ದಿನ “ಮೇಘ ಮಯೂರ” ಎಂಬ ನೃತ್ಯ ಯೋಜನೆಯನ್ನು ಮಾಡಿದೆ. ಹೊಸಗನ್ನಡ ಸಾಹಿತ್ಯದ ಇತಿಹಾಸವನ್ನು ಬರೆಯುವಾಗ ಕೆಲವೇ ಕೇಂದ್ರಗಳಲ್ಲಿ ಅದೊಂದು (ಸಿದ್ಧಯ್ಯ ಪುರಾಣಿಕ-ಮಧುರ ಚೆನ್ನರ ಸ್ಮೃತಿ). ಹೀಗೆ ಹಲಸಂಗಿಯನ್ನು ಕುರಿತು ನಾಡಿನ ಸುಪ್ರಸಿದ್ಧರು ಹೇಳಿದ್ದನ್ನು ಗಮನಿಸಬಹುದಾಗಿದೆ.

ಸಾಹಿತ್ಯ ಕ್ಷೇತ್ರವಾಗಿ ಹಲಸಂಗಿ

ಬಿ.ಎಂ.ಶ್ರೀಯವರ ಕೇಂದ್ರಿತ ಮೈಸೂರು, ಗೋವಿಂದ ಪೈ ಅವರ ಕೇಂದ್ರಿತ ಮಂಗಳೂರು, ಬೇಂದ್ರೆ ಗೋಕಾಕರ ಕೇಂದ್ರಿತ ಧಾರವಾಡಗಳನ್ನು ನವೋದಯ ಕಾವ್ಯದ ಹುಟ್ಟಿಗೆ ಕಾರಣವಾದ ನೆಲೆಗಳು ಎಂದು ಗುರ್ತಿಸಿದ್ದಾರೆ. ಆದರೆ ಧಾರವಾಡ ಕೇಂದ್ರದ ಜೊತೆಗೆ ಹಲಸಂಗಿಯನ್ನು ಸಮೀಕರಿಸಲಾಗಿದೆ (ಶಿವರಾಮ ಕಾರಂತ: ಹುಚ್ಚು ಮನಸ್ಸಿನ ಹತ್ತು ಮುಖಗಳು) “ಹಾಗೆ ನೋಡಿದಲ್ಲಿ ಮಧುರಚೆನ್ನರ ಕೇಂದ್ರಿತ ಹಲಸಂಗಿಯ ನಾಲ್ಕನೆಯ ಕೇಂದ್ರವಾಗಿ ಗುರುತಿಸಬೇಕಾದ ಅಗತ್ಯತೆ ಕಾಣುತ್ತದೆ.” ೧೯೬೧ರಲ್ಲಿ “ಮಧುರಚೆನ್ನರ ಸ್ಮೃತಿಗಳು” ಎಂಬ ಲೇಖನದಲ್ಲಿ ಸಿದ್ಧಯ್ಯಪುರಾಣಿಕರು ಗುರುತಿಸುವವರೆಗೂ ಹಲಸಂಗಿಯನ್ನು ಧಾರವಾಡದ ಗೆಳೆಯರ ಗುಂಪಿಗೆ ಸೇರಿಸಿ ನೋಡುತ್ತಿದ್ದರು. ನವೋದಯದ ನಾಲ್ಕನೆಯ ಕೇಂದ್ರವಾಗಿ ಹಲಸಂಗಿಯನ್ನು ನಾವು ಗಟ್ಟಿಯಾಗಿ ಪ್ರತ್ಯೇಕಿಸಿ ಅಧ್ಯಯನ ಮಾಡಬೇಕಿದೆ. ಡಾ. ಪ್ರಕಾಶಖಾಡೆ ಅವರು “ನವೋದಯದ ಕಾವ್ಯದ ಮೇಲೆ ಜಾನಪದದ ಪ್ರಭಾವ” ಎಂಬ ತಮ್ಮ ಪಿ.ಎಚ್.ಡಿ. ಮಹಾಪ್ರಬಂಧದಲ್ಲಿ ಇದನ್ನು ಬಹಳ ಸಮರ್ಥವಾಗಿ ಸೀಳಿದ್ದಾರೆ, ಪ್ರತ್ಯೇಕಿಸಿ ನೋಡಿದ್ದಾರೆ. ಹೊಸದಾಗಿ ಇತಿಹಾಸ ಮುರಿದು ಕಟ್ಟಿದ್ದಾರೆ. ಈ ಗೆಳೆಯರ ಗುಂಪಿಗೆ ಮಧುರಚೆನ್ನರೇ ಹಿರಿಯಣ್ಣ. ಈ ಗುಂಪಿನಲ್ಲಿ ಸಿಂಪಿ ಲಿಂಗಣ್ಣ, ಪಟೇಲ ಧೂಲಾ ಸಾಹೇಬ, ಕಾಪಸೆ ರೇವಪ, ಓಲೇಕಾರ ಮಾದಣ್ಣ, ರೇವಣ ಸಿದ್ದಪ್ಪ ಮಧಬಾವಿ, ಚೆನ್ನಮಲ್ಲಪ್ಪ ಸರಸಂಬಿ, ವಿಜಾಪುರದ ಬಸಣ್ಣ ಅಕ್ಕಿ, ಪದ್ಮರಾಜ ಹುನಗುಂದ, ಮಸಬಿನಾಳದ ತಿಪ್ಪಣ್ಣ ಗುದ್ದಿ, ಚಡಚಣದ ಗುರುಪಾದಪ್ಪ ಜೇದಂಕಲಗಿ, ಆಗರಖೇಡದ ಅಣ್ಣಾರಾವ್ ಪಾಟೀಲ, ಮರಗೂರ ಕಮಾಲ, ಸಂಖದ ಬಸಯ್ಯ ಮುಂತಾದವರು ಸೇರಿದ್ದರು. ೧೯೨೨ರಲ್ಲಿ ಶಾರದಾ ವಾಚನಾಲಯ ಸ್ಥಾಪಿಸಿ ಸುಮಾರು ೧೭೦೦ರಷ್ಟು ಜನಸಂಖ್ಯೆ ಇರುವ ಪುಟ್ಟ ಹಳ್ಳಿಯಲ್ಲಿ ೫೯೧ರಷ್ಟು ಇದ್ದ ಪುಸ್ತಕಗಳ ಸಂಖ್ಯೆಯನ್ನು ಒಂದು ವರ್ಷದೊಳಗಾಗಿ ೧೭೫೯ಕ್ಕೆ ಏರಿಸಿ ಓದುಗರನ್ನು ಹೆಚ್ಚಿಸಿದ್ದು ಆಗಿನ ಕಾಲದ ದಾಖಲೆಯೇ ಸರಿ. ಈ ಎಲ್ಲ ಸಾಧನೆ ನೋಡಿದರೆ ಹಲಸಂಗಿಯನ್ನು ಎಂದೋ ಸಾಹಿತ್ಯಕವಾಗಿ ಒಂದು ಗಟ್ಟಿ ನೆಲೆಯಾಗಿ ಗುರ್ತಿಸಬೇಕಾಗಿತ್ತು. ಅದು ತಡವಾಗಿ ಆಗಿವೆ.

ಈ ಕೇಂದ್ರದ ಗೆಳೆಯರ ಗುಂಪಿಗೆ ಮೊದಲ ಕಣ್ಣಿಗೆ ಬಿದ್ದದ್ದೆ ಜಾನಪದ ಸಾಹಿತ್ಯ ಅದರಲ್ಲೂ ಲಾವಣಿ ಸಾಹಿತ್ಯ. ಕೃಷಿಕರ ನೆಲೆವೀಡಾದ ಹಲಸಂಗಿ ಲಾವಣಿಕಾರ ಸಂಗಣ್ಣನ ಹಾಡುಗಳಿಂದ ಧುಮಿಧುಮಿಸುತ್ತಿತ್ತು. ಅಲ್ಲಿಯ ತರುಣ ಮನಸ್ಸುಗಳಷ್ಟೇ ಅಲ್ಲ ಆ ಊರಿನ ನವಿಲುಗಳು ಸಂಗಣ್ಣನ ಲಾವಣಿ ಕೇಳಿ ಗರಿಗೆದರಿ ಕುಣಿಯುತ್ತಿದ್ದವು. ಮಧುರಚೆನ್ನರು ಅವರ ಗೆಳೆಯರು ಆಗ ಹದಿಹರೆಯದ ತರುಣರೆ. ಹುಟ್ಟು ಪ್ರತಿಭಾವಂತರಾದ ಮಧುರಚೆನ್ನರು ತಮ್ಮ ಬಾಲ್ಯದಲ್ಲಿ ಸಂಗುರಾಯಪ್ಪನ ಶಿಷ್ಯನಾದ ಖಾಜಾಭಾಯಿಯನ್ನು ಪ್ರತ್ಯಕ್ಷವಾಗಿ ಕಂಡಿದ್ದವರು. ಅವರ ಲಾವಣಿಗೆ ಮಾರುಹೋಗಿದ್ದವರು. ಇಲ್ಲಯ ಇತರ ಪ್ರಮುಖ ಲಾವಣಿಕಾರರಾದ ಸಿದ್ಧು ಶಿವಲಿಂಗ, ಸಂಖದ ಬಸಯ್ಯ, ರಾಮಚಂದ್ರ ಓಲೇಕಾರ ಮುಂತಾದವರ ಲಾವಣಿಗಳು ಅಂದು ಜನಸಾಮಾನ್ಯರ ನಾಲಿಗೆಯ ಮೇಲೆ ಉಲಿಯುತ್ತಿದ್ದವು. ನವೋದಯ ಕಾವ್ಯ ಅದೇ ತಾನೇ ರೂಪುಗೊಳ್ಳುವ ಯತ್ನದಲ್ಲಿತ್ತು. ಇಂಥ ಪ್ರಮುಖ ಘಟ್ಟದಲ್ಲಿ ಹಲಸಂಗಿ ಗೆಳೆಯರು ಲಾವಣಿಗಳ ಶ್ರೇಷ್ಠತೆಯನ್ನು ಅಭಿವ್ಯಕ್ತಗೊಳಿಸಿ ಆ ಕಾಲದ ಲಾವಣಿ ಕವಿಗಳ ಆಕರ್ಷಣೆಗೆ ರಾಜಮಾರ್ಗ ಹಾಕಿಕೊಟ್ಟರು. ಗರತಿಯ ಹಾಡು (೧೯೩೧), ಜೀವನ ಸಂಗೀತ (೧೯೩೩), ‘ಮಲ್ಲಿಗೆ ದಂಡೆ’ (೧೯೩೫) ಮೌಲಿಕ ಕೃತಿಗಳನ್ನು ಸಂಗ್ರಹಿಸಿ ಕನ್ನಡ ಜಾನಪದ ಅಧ್ಯಯನವನ್ನು ಅಧಿಕೃತವಾಗಿ ಪ್ರಾರಂಭಿಸುವುದರ ಮುಖಾಂತರ ಕನ್ನಡ ನಾಡಿನ ಜಾನಪದ ಹೆಬ್ಬಾಗಿಲು ತೆರೆದರು.

ಸಂಗುರಾಯಪ್ಪ

‘ಹಲಸಂಗಿ ಭಾಗದ ಲಾವಣಿ ಸಾಹಿತ್ಯ’ ಎಂದಾಗ ಥಟ್ಟನೆ ನೆನಪಾಗುವ ಹೆಸರು ಖಾಜಾಭಾಯಿ ಎಂದು. ಆದರೆ….! ಖಾಜಾಭಾಯಿಗೆ ಒಬ್ಬ ಗುರುವಿರಬೇಕಲ್ಲ, ಆದರೆ ಸಂಗೂರಾಯಪ್ಪ ಗುರುದ್ವಯರು. ಈ ಸಂಗು ಪಟ್ಟಣಶೆಟ್ಟಿ ಮತ್ತು ರಾಯಪ್ಪ ಕೋಳಿ (ತಳವಾರ) ಇಬ್ಬರನ್ನು ಒಬ್ಬರೆ ಎಂದು ಇತಿಹಾಸಕಾರರು ಗುರ್ತಿಸಿದ್ದೆ ಹೆಚ್ಚು. ಹಲಸಂಗಿ ಭಾಗದ ಲಾವಣಿ ಸಾಹಿತ್ಯಕ್ಕೆ ಅಡಿಪಾಯ ಹಾಕಿದವರು ಸಂಗು ಪಟ್ಟಣಶೆಟ್ಟಿ ಮತ್ತು ರಾಯಪ್ಪ ಕೋಳಿ (ತಳವಾರ) ಇವರಿಬ್ಬರು ಇಂದಿನ ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿಯವರು.

೧೮೨೦ರ ಸುಮಾರಿಗೆ ಅಂದರೆ ಇಂಗ್ರೇಜಿ ಸರ್ಕಾರದವರು (ಬ್ರಿಟಿಷ್ ಸರ್ಕಾರ) ಇಲ್ಲಿ ತನ್ನ ಅಧಿಕಾರ ನಡೆಸುವುಕ್ಕಿಂತ ಮೊದಲು (ಮೆ. ಕಲ್ಲೇಕೈರ ಸಾಹೇಬ ಬಹಾದ್ದೂರ ಸೋಲಾಪುರ ಜಾವಕಂ ಸಂ ೮೮೦, ೨೪.೯.೧೮೪೨).[1] ಇವರಿಬ್ಬರು. ಇಲ್ಲಿ ಲಾವಣಿ ರಚಿಸಿ ಹಾಡುತ್ತಿದ್ದರು. ಸಂಗು ಪಟ್ಟಣಶೆಟ್ಟಿ ಬರೆದ ‘ಗೋಕುಲಾಷ್ಟಮಿ’ ಲಾವಣಿಯೇ ನಮಗೆ ಸಿಕ್ಕ ಹಲಸಂಗಿ ಭಾಗದ ಮೊದಲ ಲಾವಣಿ ಹಾಡು. ಸಂಗಣ್ಣಗೆ ಜತೆಯಾಗಿ ಏರುಧ್ವನಿಯಲ್ಲಿ ಆ ಕಾಲದಲ್ಲಿ ಲಾವಣಿ ಹಾಡಿದವನೆಂದರೆ ರಾಯಪ್ಪ. ಸಂಗು ಬರೆದ ಇತರ ಲಾವಣಿಗಳಾಗಲಿ ರಾಯಪ್ಪ ಹೇಳಿದನೆಂಬ ಮತ್ತೊಂದು ಹಾಡಾಗಲಿ ಇತಿಹಾಸಕ್ಕೆ ಲಭ್ಯವಾಗಿಲ್ಲ. ವಿಲಾಸಿ ಪುರುಷರಾದ ಪೇಶ್ವೆಯ ಕಾಲದೊಳಗೆ ಕೆಲವು ಲಾವಣಿಕಾರರು ಆಳರಸರ ವರ್ಣನೆ ಮಾಡಿ ಹಾಡುವುದು, ಶೃಂಗಾರ ಪದ್ಯಗಳನ್ನು ರಚಿಸಿ ಪೇಶ್ವೆಯರ ಮನ ತಣಿಸಿ ಹಣ ಗಳಿಸುವುದು ಕೆಲವರ ವೃತ್ತಿಯಾಗಿತ್ತು.[2] ಅರಸರ ನ್ಯುನತೆಗಳನ್ನು ಸಿಂಹಾಸನದ ಹಿಂದಿನ ಕೆಟ್ಟ ಕಥೆಗಳನ್ನು ಹಾಡಿನಲ್ಲಿ ಹಾಡಲು ಅವರಿಗೆ ಅವಕಾಶವಿರುತ್ತಿದ್ದಿಲ್ಲ. ಇಂತಹ ಸಮಯದಲ್ಲಿ ಸಂಗು-ರಾಯಪ್ಪ ಸಾಮಾನ್ಯ ಜನರ ವಾಸ್ತವಿಕತೆಯ ಕಹಿ-ಸಿಹಿಗಳನ್ನು ತಮ್ಮ ಲಾವಣಿಗಳಲ್ಲಿ ಹಾಡಿ ಜನರ ಹೃದಯ ಗೆದ್ದಿದ್ದರು. ಆಳರಸರ ಅರಮನೆ ಆವರಣ, ದೇವಸ್ಥಾನಗಳಲ್ಲಿ ಮಾತ್ರ ಸೀಮಿತವಾಗಿದ್ದ ಈ ಹಾಡುಗಳನ್ನು ರಸ್ತೆಯಲ್ಲಿ, ಗಿಡದ ಕೆಳಗೆ ಬಹಿರಂಗವಾಗಿ ಹಾಡಿ ಜನರ ಹತ್ತಿರಕ್ಕೆ ತಂದ ಶ್ರೇಯಸ್ಸು ಹಲಸಂಗಿ ಭಾಗದಲ್ಲಿ ಇವರಿರ್ವರಿಗೆ ಸಲ್ಲಬೇಕು. ತಮ್ಮ ವಿದ್ವತ್ತಿನಿಂದ ಪದಗಳ ಪೋಣಿಸಿ ಲಾವಣಿ ರಚಿಸಿ ಗ್ರಾಮದ ಹಬ್ಬ- ಹರಿದಿನ, ಜಾತ್ರೆ- ಉತ್ಸವಗಳಲ್ಲಿ ಹಾಡುತ್ತಿದ್ದರು.

ಸಂಗೂನ ಹಿರಿಯರ ವ್ಯಾಪಾರ ಮತ್ತು ಬಂಧುಗಳ ಮನೆಗೆಂದು ಮಹಾರಾಷ್ಟ್ರದ ಕೊಲ್ಲಾಪುರ ಪುಣೆಗಳಿಗೆ ಹೋದಾಗ ಅಲ್ಲಿ ಒಂದೆರಡು ಮರಾಠಿ ಹಾಡನ್ನು ಕೇಳಿದ ಆತ ಅದೇ ಗುಂಗಿನಲ್ಲಿ ಬಂದು ಲಾವಣಿ ರಚಿಸಲು ತೊಡಗಿದ. ಪ್ರಾರಂಭದಲ್ಲಿ ತಾನೋಬ್ಬನೇ ಲಾವಣಿ ಹಾಡತೊಡಗಿದ. ಒಂದೆರಡು ಪಲ್ಲವಿ ರಚಿಸಿ ಕವಿಯಾಗಿಬಿಟ್ಟ. ಮಧ್ಯದಲ್ಲಿ ರಾಯಪ್ಪ ಅವನಿಗೆ ಜೊತೆಗಾರನಾದ. ನಂತರದ ದಿನಗಳಲ್ಲಿ ತಮ್ಮ ಮನೆಯ ತಳವಾರ ರಾಯಪ್ಪನನ್ನು ತನ್ನ ಕಡೆಗೆ ಸೆಳೆದುಕೊಂಡು ‘ಸಂಗೂರಾಯಪ್ಪ’ ಎಂಬ ಜಂಟಿ ಹೆಸರಿನಲ್ಲಿ ಅವರು ಹಾಡು ರಚಿಸಿ ಹಾಡತೊಡಗಿದರು.[3]

ಸಿಗವೊಲ್ಲ ಶ್ರೀ ಹರಿ || ಎಲ್ಲಿ ಕುಂತ ಮರ ಏರಿ ||
ಮಾಡತಾನ ಮಸ್ಕರಿ || ನೀಲ ವರ್ಣ ನಿರ್ಗುಣಿ ||

ಹೀಗೆ ಶಬ್ದಗಳನ್ನು ಹೆಣೆದು ಆ ಕಾಲದ ಜನರನ್ನು ಜಾನಪದ ಲಾವಣಿಗಳ ಮೋಡಿಯಲ್ಲಿ ತೇಲಿಸಿಬಿಡುತ್ತಿದ್ದ ಸಂಗು ಪಟ್ಟಣಶೆಟ್ಟಿ, ತಾನು ರಚಿಸಿದ ಲಾವಣಿಗಳನ್ನು ಮೊದಮೊದಲು ತಾನೊಬ್ಬನೆ ಹಲಸಂಗಿಯಲ್ಲಿ ಹಾಡಿ ಜನಾನುರಾಗಿಯಾದ. ಅವನಿಗೆ ಧ್ವನಿ ಸೋತಾಗ ಏರುಧ್ವನಿಯಲ್ಲಿ ಹಾಡಲು ರಾಯಪ್ಪ ಸೇರಿಕೊಂಡ. ಸಂಗೂರಾಯಪ್ಪ ಜೊತೆಯಾಗಿ ಹಾಡುವ ಇವರ ಹೊಸನಮೂನೆಯ ಈ ಹಾಡುಗಳ ಜನಪ್ರಿಯತೆ ಹಲಸಂಗಿಯ ಜನರನ್ನು ದಂಗುಬಡಿಸಿತು. ಇವರ ಮಾತು ಪ್ರಚಾರಗಳು ದೂರದ ಊರುಗಳಿಗೂ ಮುಟ್ಟಿದವು.

ಮರಾಠಿ ಲಾವಣಿ ಸಾಹಿತ್ಯ ಗಮನಿಸಿದಾಗ ‘ನಾವು ನಾಗೇಶಿ ವಳೀಚೆ’ ನಾವು ನಾಗೇಶಿ ಸಂಪ್ರದಾಯದವರು ಎಂದು ಹೇಳಿಕೊಳ್ಳುವ ಶಬ್ದಗಳು ಕಾಣಬರುತ್ತವೆ. ೧೨೬೯ ಆ ಕಡೆ ಜ್ಞಾನೇಶ್ವರರ ಕಾಲ. ಹದಿಮೂರನೇ ಶತಮಾನಕ್ಕೆ ಅದರ ಇತಿಹಾಸ ಹೋಗುತ್ತದೆ. ಭಾರತ ಇತಿಹಾಸ ಸಂಶೋಧನಾ ಮಂಡಳಿ ಪುಣೆಯ ಹಸ್ತಲಿಖಿತದಲ್ಲಿ ‘ಲಾವಣಿ’ ಯ ಒಂದು ಪ್ರತಿ ದೊರೆತಿದೆ. ಪೈಲ್ ನಂ. ೫೦-೨೧೧(೫)[4] ಇದರಲ್ಲಿ ಮನ್ಮಥ ಶಿವಲಿಂಗ ಲಾವಣಿ ಸಿಕ್ಕಿದೆ. ‘ಲಾವಣಿ ಹಾಸ’ ‘ಕರಡಾಜೌ ಭವಾನಿವರೀ ವಾವಣಿ’ ಅಂದರೆ ಕರಡದಲ್ಲಿಯ ದೇವರ ಮೇಲಿನ ಲಾವಣಿ ಇದೆ ಎಂದು ದಿವಂಗತ ಲೇಖಕ ಗಂಗಾಧರ ಅಷ್ಟಾಚಾದ್ರಿ ಅವರು “ಮರಾಠಾವಾಡಚ ಸಂತಭೂಮಿವರ ಶ್ರೀ ಮನ್ಮಥ ಶಿವಯೋಗಿಚೆ ಅಸಲೇ ಅಢಳ್ ಸ್ಕಾನ್”ವನ್ನು ಶೈವ ಪತ್ರಿಕೆಯಾದ ಕೊಲ್ಲಾಪುರದ “ಜ್ಞಾನಪ್ರಸಾರ”ದಲ್ಲಿ ದಾಖಲಿಸಿದ್ದಾರೆ. ಹೀಗೆ ಮೇಲೆ ತಿಳಿಸಿದ ಕನ್ನಡ ಮತ್ತು ಮರಾಠಿ ಲಾವಣಿ ಸಾಹಿತ್ಯವನ್ನು ಗಮನಿಸಿದರೆ, ಇಲ್ಲಿ ಹಲಸಂಗಿಯಲ್ಲಿ ಮಹಾರಾಷ್ಟ್ರದ ಸೊಲ್ಲಾಪುರ, ಕೊಲ್ಲಾಪುರ ನಗರಗಳೇ ಸಾಂಸ್ಮ್ರತಿಕ ವ್ಯಾಪಾರಿ ಕೇಂದ್ರಗಳಾಗಿದ್ದವು. ಅದಕ್ಕಾಗಿ ಸಹಜವಾಗಿ ಮರಾಠಿ ಪ್ರಭಾವ ಅವರ ಲಾವಣಿ ಹುಟ್ಟಿಗೆ ಕಾರಣವಾಗಿರಬಹುದೆಂದು ತರ್ಕಿಸಬಹುದಾಗಿದೆ.

ಸಂಗೂ ಮೇಲ್ವರ್ಗದ ಪಂಚಮಸಾಲಿ ಜನಾಂಗಕ್ಕೆ ಸೇರಿದವನಾಗಿದ್ದು, ಅವರ ಮನೆ ಓದುಗಳಿ ಮನೆತನವಾಗಿತ್ತು. ಅವನು ಮೋಡಿಲಿಪಿ ಬರೆಯುವವನಾಗಿದ್ದು ಮರಾಠಿ ಮತ್ತು ಕನ್ನಡವನ್ನು ಮಾತನಾಡಬಲ್ಲವನಾಗಿದ್ದ. ರಾಯಪ್ಪ ತಳವಾರನಾಗಿದ್ದು ಅನಕ್ಷರಸ್ತನಾಗಿದ್ದ. ಸಂಗೂನ ಮುತ್ತಾತ ಮತ್ತು ರಾಯಪ್ಪನ ಮುತ್ತಾತರಿಂದಲೂ ಈ ಎರಡೂ ಮನೆಗಳು ಆಯಾ ಕೊಡುವ ಮತ್ತು ಆಯಾ ತೆಗೆದುಕೊಳ್ಳುವ ಸಂಬಂಧ ಹೊಂದಿದ್ದವು. ಸಂಗೂನ ಹಾಡಿಗೆ ರಾಯಪ್ಪ ಧ್ವನಿಯಾಗಿದ್ದ.[5] ರಾಯಪ್ಪನ ಲಾವಣಿ ಹಾಡುವ ಆಸಕ್ತಿಗೆ ಸಂಗೂ ಮನಸೋತು, ಅವನೊಬ್ಬ ಕಡಿಮೆ ಜಾತಿಯವನೆಂದು ಗೊತ್ತಿದ್ದರೂ ಅವನನ್ನು ಗೆಳೆಯನಂತೆ ಕಾಣತೊಡಗಿದ. ಲಾವಣಿ “ಕಟ್ಟುವಿಗೆ ಲಾವಣಿ ಹಾಡುವಿಕೆ” ಇಬ್ಬರನ್ನು ಜಾತಿ ಮೀರಿ ಗಟ್ಟಿಯಾಗಿ ಬೆಸೆಯಿತು.

ಹೀಗೆ ಸಂಗೂ-ರಾಯಪ್ಪ ಇಬ್ಬರೂ ಒಬ್ಬರಾಗಿ ಕವಿಗಳಾಗಿ ಬರೆದಿದ್ದಾರೆ, ವಸ್ತಾದರಾಗಿ ಕಲಿಸಿದ್ದಾರೆ, ಗಾಯಕರಾಗಿ ಹಾಡಿದ್ದಾರೆ, ಬಹುಶೃತರಾಗಿ ಇತರರಿಗೆ ಸಲಹೆ ನೀಡಿದ್ದಾರೆ. ಹುರಿದುಂಬಿಸಿದ್ದಾರೆ. ಲಾವಣಿ ಸಾಹಿತ್ಯಕ್ಕೆ ‘ಖಾಜಾಭಾಯಿ’ ಎನ್ನುವಂಥ ರತ್ನವನ್ನು ನೀಡಿದ್ದಾರೆ ಎನ್ನುವುದಕ್ಕಿಂತ ‘ಹಲಸಂಗಿಯ ಲಾವಣಿ’ ಎಂಬ ಒಂದು ಸಂಪ್ರದಾಯವನ್ನು ಹುಟ್ಟು ಹಾಕಿ ಅದರ ಮೂಲ ಪುರುಷರಾಗಿದ್ದಾರೆ.[6] ಅವರ “ಗೋಕುಲಾಷ್ಟಮಿ” ಲಾವಣಿಯಲ್ಲಿ ಇದೆಲ್ಲವನ್ನು ಗಮನಿಸಬಹುದಾಗಿದೆ.

ಗೋಕುಲಾಷ್ಟಮಿ

೧ನೇ ಚೌಕ

ಶ್ರೀಗೋಪಿಕಾ ಸ್ತ್ರೀಯರು | ಅಷ್ಟನಾಯಕಿಣೆರು |
ಬಾಲಗರುಡರು ಹುಡುಕತಾರ ಕೃಷ್ಣನ |
ಸಾವಿತ್ರಿ ಸತ್ಯಭಾಮೆ ಕೂಡಿ ಹುಡುಕತಾರ
ಗೋಕುಲಾಷ್ಟಮಿ ದಿನಾ ||
ಆದಿನಾರಾಯಣ ನರಹರಿ | ಅನಿಸಿದ ಬ್ರಹ್ಮಚಾರಿ |
ಮುಕುಂದ ಮುರಹರಿ | ಗೋವಿಂದ ಗಿರಿಧಾರಿ |
ವಾಮನ ಲಂಬೋದರಿ ವಸುದೇವ ದೇವಕಿನಂದನ |
ಯಶೋಧಾ ಕೇಳತಾಳ ಕಂಡಿರೇನ | ಗೋಪಾಲ ಬಾಲಪಾಲನ ||
ಮಾಯಾರೂಪದವ ತ್ರಿಲೋಕ ಸಂಚಾರಿ | ಪೀತಾಂಬರಧಾರಿ |
ಸಿಗವೊಲ್ಲ ಶ್ರೀಹರಿ | ಎಲ್ಲಿ ಕುಂತ ಮರ ಏರಿ |
ಮಾಡತಾನ ಮಸ್ಕರಿ | ನೀಲ ವರ್ಣ ನಿರ್ಗುಣ ||
ಗೋಗ್ರಾಣದೊಳಗ ಇರುವಂಥ ಗೋವಿಂದ ಅನಿಸಿದ ಗೋವರ್ಧನ |
(ಇಳುವು) ಮತ್ಸ್ಯಕೂರ್ಮ ವರಾಹ ವಾಮನ ಬಳಿಗೆ ಪಾತಾಳ ಮೆಟ್ಟಿದ ಕೇಶವಾ |
ನರಸಿಂಹ ಪರಶುರಾಮ ರಾಮನಾಮ ಹೆಚ್ಚಿಂದು ನಿಂದು ಮಾಧವಾ |
ಪಾಂಡವರ ಪ್ರತಿಯ ಪಾಲ ಮಾಡಿದಂಥ ಶ್ರೀಕೃಷ್ಣ ದೇವಾ ಭಾರ್ಗವಾ |
ಛಪ್ಪನ್ನಕೋಟಿ ಯಾದವರ ಮನಿಯ ಕುಲದೀಪ ಸ್ವಾಮಿ ಆದವ ||
(ಏರು) ಸ್ವಾಮೀ ಗುಣ ವರ್ಣಿಸುತ ಹೊಂಟಾಳ ರಾಧಾರಾಣಿ |
ಅವಡಿ ಅಂಬಿ ಪದ್ಮಿಣಿ | ಭೀಮಿ ರಾಮಿ ನಾಗಿಣಿ |
ಚೋಳಿ ನೂಳಿ ಚಿಂಚಿಣಿ | ಭೈರಾಳಿಶಂಕಿಣಿ
ಮಧುರ ಮೈನಿ ಹಸ್ತಿನೀ |
ನಾಗಕನ್ಯೆ ದೇವಕನ್ಯೆ ನೋಡೂನ ನೀರಾಟ |
ಸ್ತ್ರೀಯರ ಚೆಲ್ಲಾಟ | ಕೃಷ್ಣ ತಂದ ಸಂಕಟ |
ಕಂಡಿರೇನ ಅವನ ಮುಕುಟ | ಕಿರೀಟ ಕುಂಡಲ ಕುಂದನ ||
ಯಮುನಾದ ಹೊಳಿಯ ದಂಡೀಲಿ ಬಂದು, ನೆರದಾರ ಅಷ್ಟಮಿ ದಿನ ||

ಸಿದ್ದುಶಿವಲಿಂಗ

ಸಂಗು-ರಾಯಪ್ಪ ಹಾಡಲು ಹಲಸಂಗಿಯಲ್ಲಿ ಡಪ್ಪು ಹಿಡಿದು ನಿಂತರೆ ಅವರ ಹಾಡಿಗೆ ಎದುರಾಗಿ ಪ್ರತಿ ಹಾಡು ಕಟ್ಟಲು ಆಗಲೆ ಇಲ್ಲಿ ಮತ್ತಿಬ್ಬರು ಕವಿಗಳು ಸಿದ್ಧರಾಗೆ ಇದ್ದರು. ಅವರ ಹೆಸರು “ಸಿದ್ದು-ಶಿವಲಿಂಗ” ಇವರೂ ಕೂಡಾ ಬೇರೆ ಬೇರೆ ವ್ಯಕ್ತಿಗಳಾಗಿದ್ದು ಹಲಸಂಗಿಯ ಲಾವಣಿ ಸಾಹಿತ್ಯವನ್ನು ಕಟ್ಟಿದವರಲ್ಲಿ ಅಷ್ಟೇ ಪ್ರಮುಖವಾಗಿ ಕಾಣಸಿಗುತ್ತಾರೆ. ಈ ಊರಿನ ಪೂರ್ವ ಸುಕೃತವೇನೋ, ಈ ಸಾಹಿತ್ಯ ಹುಲುಸಾಗಿ ಬೆಳೆಯಲು ವಾದಿ-ಪ್ರತಿವಾದಿಗಳು ಇಲ್ಲೇ ಹುಟ್ಟಿದರು. ಜತ್ತಿನ ಗೆಳೆಯರಾದ ಇವರಿಬ್ಬರೂ ಸಖಿ-ಖ್ಯಾಲಿ ರಚಿಸುವುದರಲ್ಲಿ ಬಹಳ ನಿಪುಣರಿದ್ದರು. ಸಿದ್ದು ದನಗಾಯಿ, ಅನಕ್ಷರಸ್ತ, ಕುಡುಒಕ್ಕಲಿಗ ಜಾತಿಯವನಾಗಿದ್ದ. ಶಿವಲಿಂಗನೂ ಸಹ ಅಕ್ಷರ ಬಾರದವನಿದ್ದರೂ ಅವನ ನೆನಪಿನ ಶಕ್ತಿ ಅಗಾಧವಾಗಿತ್ತು. ಶಬ್ದಗಳ ಜೋಡನೆಯನ್ನು ಬಹಳ ಸುಲಭದಲ್ಲಿ ಮಾಡುತ್ತಿದ್ದ.

ಶ್ರೀನಾನಿಧಪ ಪಧನಿಸ ಸರಿಗಮ ನಾರಿನಿನ ಗತ್ತ ||
ನಮ್ಮ ಕಂಡು ಹೋಗಬ್ಯಾಡ ಚದರಿ | ಓಡಿದಂಗ ಬೆದರಿ ಕಾರ್ಹುಣವಿ ಎತ್ತ ||

ಉಭಯ ಪಂಗಡದವರು ಗ್ರಾಮದ ಆಲದ ಗಿಡದ ಕೆಳಗೆ ಹಾಡಲು ನಿಂತರೆ, ಎಷ್ಟೋ ಸಲ ರೈತರು ಸುಗ್ಗಿಯ ಕೆಲಸಗಳನ್ನು ಮರೆತು ಕೇಳುತ್ತಿದ್ದರಂತೆ, ಬಿತ್ತಿದ ಹೊಲರಾಶಿ ಮಾಡದ ಉದಾಹರಣೆಗಳುಂಟು.

ಸಾಮಾಜಿಕ, ಐತಿಹಾಸಿಕ ಪದಗಳನ್ನಲ್ಲದೆ ಗ್ರಾಮದಲ್ಲಿ ದಿನಾಲು ಕಂಡುಂಡ ಸನ್ನಿವೇಶಗಳನ್ನು ಹಾಡಾಗಿ ಪರಿವರ್ತಿಸುವ ಕಲೆಗಾರಿಕೆ ಸಿದ್ದು ಮತ್ತು ಶಿವಲಿಂಗರಿಗಿತ್ತು. “ಗಿಡ್ಡಪೋರಿ ಮಡ್ಡ ಹರಿ ಮಕ್ಕರ್, ಕಣ್ಣ ತಿರುವಿ ಚಕ್ಕರ್, ನಿಂತು ನಿ ನಕ್ಕರ್ ಉಳ್ಳತಾವ ಮುತ್ತ….” ಎನ್ನುವಲ್ಲಿ ಅವರ ಶಬ್ದ ಚಮತ್ಕಾರಿಕೆಯನ್ನು ಗುರುತಿಸಬಹುದಾಗಿದೆ. ಈ ಸಿದ್ದು-ಶಿವಲಿಂಗ ಮತ್ತು ಸಂಗೂರಾಯಪ್ಪ ಎದುರು ಬದರಾಗಿ ಲಾವಣಿಯಲ್ಲಿ ಬೌದ್ಧಿಕ ಜಗಳ ಮಾಡಿದ್ದರಿಂದಲೆ ಹಲಸಂಗಿಯ ಲಾವಣಿ ಹಾಡುಗಳು ಚಕಮಕಿ ಕಲ್ಲಿನಂತೆ ಪ್ರಸಿದ್ಧಿಯಾಗಿವೆ ಎಂದೆನಿಸುತ್ತದೆ. ಇವರ ಜೀವನ ಎಂದಿನಿಂದ ಪ್ರಾರಂಭವಾಯಿತೆನ್ನುವುದಕ್ಕೆ ನಿಶ್ಚಿತವಾಗಿ ದಾಖಲೆಗಳು ಸಿಗುತ್ತಿಲ್ಲ. ಇವರು ಬದುಕಿದ ಕಾಲ ಸುಮಾರು ೧೮೨೦ ರಿಂ ೧೯೦೦ ಇರಬಹುದು. ಹೆಚ್ಚು ಶ್ರಮವಹಿಸದೆ ನಿಪುಣ ಹಾಡುಗಾರನಾದ ಶಿವಲಿಂಗನ ಲಾವಣಿಗಳು ಆ ಕಾಲದ ಪ್ರಸಿದ್ಧ ಲಾವಣಿಕಾರರ ಮತ್ತು ಜನಸಾಮಾನ್ಯರ ಗಮನ ಸೆಳೆದದ್ದು ಮೆಚ್ಚಬೇಕಾದ ಮಾತಾಗಿದೆ. ಹಾಡುಗಳನ್ನು ರಚನೆ ಮಾಡಿ ಹಾಡುಗಾರಿಕೆಯನ್ನು ಮುಂದುವರಿಸಿಕೊಂಡು ಬರುವುದರ ಜೊತೆಗೆ ತರುಣ ಪೀಳಿಗೆಯವರನ್ನು ನಿರ್ಮಾಣಗೊಳಿಸಲು ಶ್ರಮಪಟ್ಟರು. ಸಿದ್ದು-ಶಿವಲಿಂಗ ಎಂಬುದು ಅವರ ಶಿಷ್ಯ ಬಳಗವನ್ನು ಗಮನಿಸಿದಾಗ ತಿಳಿಯುತ್ತದೆ, ಕಂಠಪಾಠ ಮಾಡಿಸುವುದು, ಡಪ್ಪು ಬಾರಿಸುವುದು, ಹಾಡುಗಾರಿಕೆಯನ್ನು ಹೇಳಿಕೊಡುವುದು ಸುತ್ತಾಲ ಹಳ್ಳಿಗಳಲ್ಲಿ ಈ ಹಾಡುಗಳ ಬಗ್ಗೆ ತಿಳುವಳಿಕೆ ಮಾಡಿಕೊಡುವಲ್ಲಿ ಈತ ಬಹಳ ಶ್ರಮಪಟ್ಟಿದ್ದಾನೆಂದು ಇವರ ಶಿಷ್ಯ ರಾಮು ರಗಚಿಯ ಶಾಂತೇಶ ರಗಚಿ ಹೇಳುತ್ತಾರೆ. ಲಭ್ಯವಿದ್ದ ಎರಡು ಪ್ರಸಿದ್ಧ ಲಾವಣಿಗಳಾದ ‘ಗಿಡ್ಡ ಪೋರಿ’, ‘ಭೀಷ್ಮಪರ್ವ’ದಲ್ಲಿಯ ಇವರ ಹಾಡಿನ ಸೊಗಸುಗಾರಿಕೆಯನ್ನು ಓದಿಯೇ ಆನಂದಿಸಬೇಕು. ‘ಏನು ಮುಂಗಾರಿ ಮಳಿಹಂಗ ಸಿಡಲ್ ಬಿದ್ದಿತು ಖಡಲ್’, ‘ನಿನ್ನ ಎದಿಮ್ಯಾಲ ಕುಚಗಳ ನಗರಿ, ನಿಂತಾವ ನಿಗರಿ’ ಕಂಡ ಕಂಡಲ್ಲಿ ತರಬಲೆ ಸಂದ್ಯಾಗ, ಮಾನಕಳದಿ ಮಂದ್ಯಾಗ’, ‘ಭೀಮಸೇನಂದು ಇತ್ತು ಒಳ ಧಸಕ, ತುಳದಾನ ಕಚಕ’ ಹೀಗೆ ಶಬ್ದಗಳ ಮೋಡಿಗಾರಿಕೆಯನ್ನು ಅವರ ಗಿಡ್ಡಪೋರಿ ಲಾವಣಿಯ ತುಂಬಾ ಗಮನಿಸಬಹುದು.

ಸಿದ್ದು-ಶಿವಲಿಂಗ ಬರೆದದ್ದು ಅದೆಷ್ಟೋ ಲಾವಣಿಗಳು ಗೊತ್ತಿಲ್ಲ. ನಮಗೆ ಓದಲು ಸಕ್ಕಿದ್ದು ‘ಜೀವನ ಸಂಗೀತ’ದಲ್ಲಿ ಎರಡು ಮಾತ್ರ.

ಕಿರೀಟ ತುಟಿ ಕಚ್ಚಿ ಧನನನ
ಧನುಷ ಎತ್ತಿ ಹಿಡಿದ | ಹಿಡಿದ ತಾ ಹಿಡಿದ ||
ಅಗಳಾ ಡಿಸಿಕೋರಿ ಘಣಣಣ
ಚಾಪಿನ ಗಂಟಿ ಬಣ್ಣದ | ಬಡಿದ ತಾ ಬಡಿದ ||
ಅಂದ ಎರಡು ಕೈಲೆ ಸಣಣಣ[7]

ಇಂತಹ ಪದಗಳ ಪ್ರಯೋಗದಿಂದ ‘ಭೀಷ್ಮಪರ್ವ’ದಲ್ಲಿಯ ಅವರ ಲಯ, ಗತ್ತುಗಾರಿಕೆ ಎಂತವರನ್ನು ಬೆರಗುಗೊಳಿಸುತ್ತದೆ.

ನಾಗೇಶಿ ಪರಂಪರೆಯ ಸಿದ್ದು-ಶಿವಲಿಂಗರ ಶಿಷ್ಯ ಪರಂಪರೆಯಲ್ಲಿ ಇತಿಹಾಸಕ್ಕೆ ದಕ್ಕದೇ ಹೋದ ಮತ್ತೊಬ್ಬ ಲಾವಣಿಕಾರ ‘ರಾಮು-ರಾಯಪ್ಪ’.[8] ಈ ರಾಮು-ರಾಯಪ್ಪ ಮತ್ತು ತೇರದಾಳ ಭಾಗದ ಲಾವಣಿಕಾರ ಸಂಗ್ರಹದ ಚತುರ ತುಕಾರಾಂ (೧೭೮೦) ಲಾವಣಿಕಾರನ ಶಿಷ್ಯರಾದ ರಾಮ-ರಾಯಣ್ಣ ನನಗೆ ಇಬ್ಬರು ಗೊಂದಲ ಹಿಡಿಸಿದ್ದಾರೆ. ಸಂಗಮೇಶ ಬಿರಾದಾರ ಅವರ ‘ಚಾಪಹಾಕತೀವ ಡಪ್ಪಿನ ಮ್ಯಾಲ’ದಲ್ಲಿ ಅವರು ‘ರಾಮ-ರಾಯಣ್ಣ’[9] ಹೆಸರಿನ ಲಾವಣಿಕಾರರನ್ನು ಗುರ್ತಿಸಿದ್ದಾರೆ. ಆದರೆ ಹಲಸಂಗಿ ಭಾಗದ ಲಾವಣಿಕಾರರ ಮಾಹಿತಿ ಪಡೆಯಲು ನಾನು ಹಲಸಂಗಿಗೆ ಹೋದಾಗ, ರಾಮ-ರಾಯಣ್ಣರ ಬಗ್ಗೆ ನನಗೆ ಗೊತ್ತಿಲ್ಲ. ‘ರಾಮ-ರಾಯಪ್ಪ’ ಹಲಸಂಗಿಯವರು ಸಿದ್ದು-ಶಿವಲಿಂಗರ ಶಿಷ್ಯರು. ಅವರ ಪೂರ್ಣ ಹೆಸರು ರಾಮು ರಗಟಿ, ರಾಯಪ್ಪ ಗೌಂಡಿ ಇವರಿಬ್ಬರು ಸೇರಿ[10] ಈ ಭಾಗದಲ್ಲಿ ಸಿದ್ದ-ಶಿವಲಿಂಗರ ಪರಂಪರೆ ಬೆಳೆಸಿದ್ದಾರೆ. ಇವರು ಸ್ವತಃ ಹಾಡು ಬರೆದಿದ್ದರು. ಅವರ ಮನೆಯಲ್ಲಿ ಹಾಡಿನ ದಫ್ತರ್‌ನಾ ನೋಡಿದ್ದೇನೆ. ಆದರೆ ಅದು ಈಗ ಎಲ್ಲಿಯೋ ಕಳೆದುಹೋಗಿದೆ ಎಂದು ಅಮೋಗಿ ತೀರ್ಥಪ್ಪ ಕಟ್ಟಿಮನಿ ಹೇಳುತ್ತಾರೆ. ಗೌಂಡಿ ಕೆಲಸ ಮಾಡುತ್ತಿದ್ದ ರಾಯಪ್ಪ ಲಾವಣಿಯ ಹಾಡು ಹೇಳುತ್ತ ತನ್ನ ಬದುಕಿಗೆ ಆಸರೆಯಾದ ಕೆಲಸವನ್ನು ಬಿಟ್ಟು ಇದನ್ನೆ ವೃತ್ತಿಯನ್ನಾಗಿ ಮಾಡಿಕೊಂಡಿದ್ದ. ಇಂಡಿ, ಸಾಲೊಟಗಿ, ಲಚ್ಯಾಣ, ಹೊರ್ಲೆ, ಮಸಬಿನಾಳ, ನಂದಾಳ, ಬಾಗೇವಾಡಿ ಮುಂತಾದ ನಾಡಿನ ಹಲವಾರು ಊರುಗಳಲ್ಲಿ ರಾಮು-ರಾಯಪ್ಪ ಲಾವಣಿ ಹಾಡಿ ಆ ಊರಿಂದ ಭಕ್ಷೀಸು ತಂದಿದ್ದನ್ನು ಅಮೋಗಿ ತೀರ್ಥಪ್ಪ ಕಟ್ಟಿಮನಿ ನೆನೆಸಿಕೊಳ್ಳುತ್ತಾರೆ.[11] ಇವರು ಸುಮಾರು ೧೮೭೫ ರಿಂದ ೧೯೪೫ರ ಅವಧಿಯಲ್ಲಿ ಬದಿಕಿದ್ದರೆಂದು ಕ್ಷೇತ್ರಕಾರ್ಯಕ್ಕೆ ಹೋದಾಗ ತಿಳಿದುಬಂದಿದೆ.

ರಾಮು-ರಾಯಪ್ಪ ಹಾಡಲು ಹೋದಲ್ಲೆಲ್ಲಾ ಮೇಲುಗೈಯಾಗಿಯೇ ಬರುತ್ತಿದ್ದ ಸೋಲೆಂಬುದೇ ಅವನಿಗೆ ಇರಲಿಲ್ಲ. ಆಲಮೇಲದ ಜಾತ್ರೆಗೆ ಒಮ್ಮೆ ಹಾಡಲು ಹೋದಾಗ ಸೋತಿದ್ದ. ಮೂರು ತಿಂಗಳು ಸೋತ ಗುಂಗಿನಲ್ಲಿದ್ದು ಹಾಡುವುದನ್ನು ನಿಲ್ಲಿಸಬೇಕೆಂದಾಗ, ‘ನೀನು ಪುನಃ ಹಾಡು ರಚಿಸಿ ಹೊಸ ಖ್ಯಾಲಿ ಮಾಡು, ನಾವು ನಿಮ್ಮ ಮನೆಗೆ ಊಟಕ್ಕೆ ಜೋಳಕಾಳು ಕೊಡುವೆವು’ ಎಂದು ಇತರರು ಹೇಳಿ ಅವನನ್ನು ಹುರಿದುಂಬಿಸಿದರು. ಜರದರುಂಬಾಲ ಕಾಣಿಕೆಯಾಗಿ ತಂದಿದ್ದ ಎಂದು ಅವರನ್ನು ತಾನು ಸಣ್ಣವನಿದ್ದಾಗ ಹತ್ತಿರದಿಂದ ನೋಡಿದ ಈಗ ೭೫ ವರ್ಷದ ಭೀಮಣ್ಣ ತಳವಾರ ಹೇಳುತ್ತಾ, ನೆನಸಿಕೊಳ್ಳುತ್ತಾರೆ.[12]

ರಾಮು-ರಾಯಪ್ಪ ರಚಿಸಿದ ಹಾಡುಗಳು ಈಗ ಪೂರ್ಣವಾಗಿ ಎಲ್ಲೂ ಸಿಗದಿದ್ದರೂ, ಹಾಡು ರಚಿಸುವುದನ್ನು ವೃತ್ತಿಯನ್ನಾಗಿಸಿಕೊಂಡ ಇವರು ಹಾಡು ಕಲಿಯುವವರಿಗೆ ಕಲಿಸುತ್ತಿದ್ದರು. ಕೆಲವು ಜನರು ಇವರನ್ನು ತಮ್ಮ ತಮ್ಮ ಊರುಗಳಿಗೆ ಕರೆಯಿಸಿಕೊಂಡು ಹಾಡು ಕಂಠಪಾಠ ಮಾಡಿಸಿಕೊಳ್ಳುತ್ತಿದ್ದರು. ಪಕ್ಷದ ನಿಷ್ಠೆಗಿಂತ ಸ್ಪರ್ಧಾತ್ಮಕತೆಗೆ ಹೆಚ್ಚು ಅವಕಾಶ ಕೊಡುತ್ತಿದ್ದರು.

ಎರಡು ಕಾಲ ಭೂಮಿಮ್ಯಾಲ ಊರಿ ನಡಿದು ಮುಂದಕ |
ಎಪರಾಟಿ ನಾಲ್ಕು ಕಾಲ ಮ್ಯಾಕ ಸಂವತಕ ||
ಅದರ ಬೆನ್ನ ಇರುವುದು ತಿಳಿನೋಡ ನೆಲಕ |
ಸುಳ್ಳಂದ್ರ ತೋರಸ್ತಿನಿ ಆಗು ನಿ ಮದಲ ಸೇವಕ ||[13]

ಇಂತಹ ಹಲವು ಹಾಡುಗಳನ್ನು ಹಲಸಂಗಿ ಸುತ್ತಮುತ್ತಲ ಭಾಗದಲ್ಲಿ ಇನ್ನು ಲಾವಣಿ ಪ್ರಿಯರ, ನಾಲಿಗೆ ಮೇಲೆ ಕೆಳಬಹುದಾಗಿದೆ. ಸಿದ್ದು-ಶಿವಲಿಂಗರ ಒಂದು ದೊಡ್ಡ ಲಾವಣಿ ‘ಭೀಷ್ಮಪರ್ವ’[14] ಇಲ್ಲಿ ಗಮನಿಸಬಹುದು.

[1] ಹಲಸಂಗಿಯ ಹಿಂದಿನ ಇತಿಹಾಸ, ಮಧುರಚೆನ್ನರು.

[2] ಗೊಂಧಳಿ ಮತ್ತು ಲಾವಣಿ ಸಂಬಂಧ, ಗುಂಭೀರಂ.

[3] ಭೀಮಣ್ಣ ರಾಯಪ್ಪ ತಳವಾರ ೮೦ ವರ್ಷ, ರಾಯಪ್ಪನ ವಂಶಸ್ಥ ಹೇಳಿದ್ದು.

[4] ಗೊಂಧಳಿ ಮತ್ತು ಲಾವಣಿ ಸಂಬಂಧ, ಗುಂಭೀರಂ.

[5] ಹಲಸಂಗಿಯಲ್ಲಿ ಅವರ ವಂಶಸ್ಥರು ಲಿಂಗಾಯತರು (ಪಂಚಮಸಾಲಿ ಜನಾಂಗದವರು)

[6] ಜೀವನ ಸಂಗೀತ, ಸಿಂಪಿ ಲಿಂಗಣ್ಣ, ಪಿ.ಧೋಲಾ ಸಾಹೇಬ.

[7] ಜೀವನ ಸಂಗೀತ, ಸಂ. ಸಿಂಪಿಲಿಂಗಣ್ಣ, ಪಿ.ಧೋಲಾ ಸಾಹೇಬ.

[8] ಭೀಮಣ್ಣ ಲಾಯಪ್ಪ ಗುಮ್ಮಟದ. ೭೫ ವರ್ಷ ಅವರು ಹೇಳಿದ್ದು.

[9] ಚಾಪ ಹಾಕತೀವ ಡಪ್ಪಿನ ಮ್ಯಾಲ, ಡಾ.ಸಂಗಮೇಶ ಬಿರಾದಾರ

[10] ಭೀಮಣ್ಣ ರಾ.ಗುಮ್ಮಟದ ಸದ್ಯ ಗೀ ಗೀ ಪದಗಾರ ಹೇಳಿದ್ದು.

[11] ಸದ್ಯ, ಭಜನೆ, ಗೀ ಗೀ ಹಾಡುಗಳನ್ನು ಹಾಡುವವ.

[12] ಭೀಮಣ್ಣ ಲಾ ಗುಮ್ಮಟದ ಗೀ ಗೀ ಹಾಡುಗಾರ ೭೫ ವರ್ಷ

[13] ಯಲ್ಲಪ್ಪ ಕಟ್ಟೀಮನಿ, ಹಲಸಂಗಿ ಅವರು ಹೇಳಿದ್ದು, ನನ್ನ ಸಂಗ್ರಹದಲ್ಲಿದೆ.

[14] ಜೀವನ ಸಂಗೀತದಿಂದ ಆಯ್ದುಕೊಳ್ಳಲಾಗಿದೆ.