ಭೀಷ್ಮಪರ್ವ

೧ನೇ ಚೌಕ

ಜನಮೇಜಯನ ಮುಂದ ವೈಶಂಪಾಯನ ಕತಿ
ಅರಸ ಕೇಳಿ ತೂಗಿದ್ದ ತಲಿ |
ಯುದ್ಧಾಗಿ ಹೋಯ್ತು ದ್ವಾಪಾರದಲಿ |
ಆ ಬೀಷ್ಮ ಲಡಾಯಿ ಮಾಡಿದ್ದ ಕಲಿ |
ಪಾಂಡು ಪ್ರತಾಪದೊಳಗಾದ ಕೌತುಕಾ
ಎಷ್ಟೆಂತ ನಾ ವರ್ಣಿಸಲಿ | ಒಂದು ಬಾಯೀಲಿ ||

ಧರ್ಮ ದುರ್ಯೋಧನಗ ಮರ್ಮ ಸೊಕ್ಕಿ
ಓಳಿತಾಗಿ ಹಿರಸ ಬಿದ್ದಿತ್ತು ಕಿಡಿ |
ಪರಮಾತ್ಮ ಆದ ಪಾಂಡವರ ಕಡಿ |
ಪೃಥಿವಿಭೂಭಾರ ಇಳಸೂನ ನಡಿ |
ನರ ನಾರಾಯಣ ಅವತಾರ ತೊಟ್ಟು
ಅರ್ಜುನ ಕೃಷ್ಣ ಇಬ್ಬರು ಕೂಡಿ | ಮಸಲತ ಮಾಡಿ ||

ಯುದ್ಧ ಮಾಡೂದನು ಸಧ್ಯ ನೇಮಿಸಿ ತಾ
ಉದ್ಧ ತಂದು ರಣಗಂಬ ಹೂಡಿ |
ಆ ಭೀಷ್ಮ ಇದ್ದ ಬೆಂಕೀಯ ಕಿಡಿ |
ದಂಡ ತಯಾರಾಗಿ ಬಂತು ಎರಡು ಕಡಿ |
ರಣಗಂಬದ ಪೂಜಿ ಮಾಡಿ ಹಾಕಾರಿ
ಹೊಡೆದು ಹೇಳತಾನ ಖಡಾ ಮುಡಿ | ಹಿಡಿಲಿಲ್ಲ ಭಿಡಿ ||

(ಇಳುವು) ತಮ್ಮ ದಂಡಿನ ಕಡೀ ಮಾರ್ಯಾಗಿ ಹೊಡಿದ ಹಾಕಾರಿ |
ಹೇಳತಾನ ಒದರಿ ||
ಪಾಂಡವರ ಸಾರಥಿ ಅನುಕೂಲ ಆದಾ ಕೈವಾರಿ ತಾನೆ ಗಿರಿಧಾರಿ ||
ಜಯ ಪ್ರಾಪ್ತಿ ಆದ ಪಾಂಡವರಿಗಿಂತ ಬ್ರಹ್ಮಚಾರಿ ಹೇಳಿದಾ ಸಾರಿ ||
ಇಂದ ಬೇಕಾದ ಹೋಗಿರಿ ಭಡಡಡ
ಪಾಂಡವರ ರಡಿ ಹೊರಟ | ಹೊಂಟನೀವು ಹೊಂಟ |
ರಥೇರಿ ಹೊಡೆದ ಘಡಡಡ
ದಂಡಿನೊಳಗ ಭಂಟ | ಭಂಟ ತಾನು ಭಂಟ ||
ಮೀಸಿ ಹುರಿಯ ಹಾಕಿ ಖಡಡಡ
ಬಾಣ ಜಗ್ಗಿ ಬಿಟ್ಟ | ಬಿಟ್ಟ ತಾನು ಬಿಟ್ಟ ||

(ಏರು) ಪೈಲಿ ಪ್ರಥಮದಾಗ ಭೀಷ್ಮ ಲಡಾಯಿಗಿ |
ಸೈನ್ಯದೊಳಗ ಇದ್ದಂಗ ಹುಲಿ
ಬಾಣದ ಮಂಟಪ ಹಾಕಿದ್ದ ಬಲಿ |
ಸೂರ್ಯ ಮುಣಗಿದಾಂಗ ಬಿತ್ತು ಕತ್ತಲಿ |
ಪಾಂಡು ಪ್ರತಾಪದಾಗ ಆದ ಕೌತುಕಾ |
ಎಷ್ಟೆಂತ ನಾ ವರ್ಣಿಸಲಿ | ಒಂದು ಬಾಯೀಲಿ ||

ಖಾಜಾಭಾಯಿ

“ಬಡೇಸಾಬನಿಗೆ ನಾನು ಸರಿಗಟ್ಟಿ ಹಾಡುವವನಿರಲಿಕ್ಕಾಗಿ ನೀವು ಆತನಿಗೆ ಜಯಪತ್ರ ಸದೃಶವಾದ ಮಯ್ಯವನ್ನು ಕೊಡುವುದು ಅನ್ಯಾಯವಾಗುತ್ತದೆ. ಅವನ ಹಾಡಿಗೆ ನೀವು ಮೆಚ್ಚಿದರೆ ಅವನಿಗೆ ಬೇಕಾದಷ್ಟು ಹಣವನ್ನು ಕೊಡಬಹುದು. ಆದರೆ ‘ಅಹೇರಿ’ಯನ್ನು ಮಾತ್ರ ಕೊಡಬೇಡಿರಿ”[1] ತರುಣ ಖಾಜಾಭಾಯಿಯ ಈ ಮಾತಿಗೆ ಹಲಸಂಗಿ ಜನರು ನಕ್ಕು ಇವನೆಂಥಾ ಹುಚ್ಚು ಪೋರ ಎಂದು ಅಂದು ಗೇಲಿ ಮಾಡಿದ್ದರು. ನಿಜ ಹೌದು, ಇದೇ ಪೋರ ಖಾಜಾಭಾಯಿ ಕನ್ನಡ ಲಾವಣಿ ಸಾಹಿತ್ಯದ ಅನರ್ಘ್ಯ ರತ್ನ, ಮೇರು ಕವಿಕಾರ, ಹಲಸಂಗಿಯ ಲಾವಣಿ ಪರಂಪರೆಗೆ ಗಟ್ಟಿತನ ತಂದುಕೊಟ್ಟಾತ.

ಈತ ಹುಟ್ಟಿದ್ದು ಬಿಜಾಪೂರ ಜಿಲ್ಲೆ ಇಂಡಿ ತಾಲ್ಲೂಕಿನ ಹಲಸಂಗಿಯಲ್ಲಿ ಸುಮಾರು ೧೮೪೭ರ ಸುಮಾರಿನಲ್ಲಿ. ಒಮ್ಮೆ ಸಂಗೂರಾಯಪ್ಪ, ಸಿದ್ದು-ಶಿವಲಿಂಗ ಎದುರು ಬದುರಾಗಿ ಹಾಡಲು ನಿಂತಾಗ ಹದಿನಾರರ ಚಿಗುರುಮೀಸೆಯ ಹುಡುಗನಿಗೆ ಈ ಲಾವಣಿ ಹಾಡುಗಳು ಗುಂಗು ಹಿಡಿಸಿದವು ದಂಗುಬಡಿಸಿದವು.

ನೀರಾಟ ಜಕಣ್ಯಾರು ನಿಂತಾರ ನಿಸ್ಸಂಗ |
ಪೀತಾಂಬರ ಇಲ್ಲದಂಗ ಕೃಷ್ಣ ಹೋದ ಕಳ್ಳನಂಗ |[2]
– ಸಂಗಣ್ಣ

ಬಿಸಿರಕ್ತ, ಸುರುಳಿಗಡ್ಡ, ರಸಮುಖದ ರಸಿಕತೆ ಕಾಣುವ ಖಾಜಾಭಾಯಿ ಅಲ್ಲಿ ಸೇರಿದ ಜನರಲ್ಲಿಯೇ ಮಿಂಚುವ ಎದೆಕಟ್ಟು, ಆಕರ್ಷಕ ಅಂಬುಲ ಮೈ ಹೊಂದಿದವನಾಗಿದ್ದ. ಇವನ ಮುಖವನ್ನು ಕೊನೆಗಾಲದಲ್ಲಿ ಸಮೀಪದಿಂದ ಕಂಡ ಮಧುರಚೆನ್ನರು ರಸ್ಕಿನ್ ಮುಖಕ್ಕೆ ಹೋಲಿಸಿದ್ದಾರೆ. ಲಾವಣಿ ಮೇಲಿನ ಇವನ ಆಸಕ್ತಿಯನ್ನು ಕವಿವರ್ಯ ಸಂಗಣ್ಣ ಆಗಲೆ ಗುರ್ತಿಸಿ ಕರೆದು ಅಪ್ಪಿಕೊಂಡ. ಹಾಡು ಕಲಿಸಿ ಡಪ್ಪು ಕೈಗಿಟ್ಟ. ಸಂಗೂರಾಯಪ್ಪನ ಮುದ್ದಿನ ಶಿಷ್ಯನಾಗಿ ಹಾಡಿಕೆಯನ್ನು ನಡೆಸತೊಡಗಿದನು ಈ ಖಾಜಾಭಾಯಿ. ಇವನ ಏರುಧ್ವನಿಗೆ ಅವರ್ಯಾರು ಕೊಡಲಿಲ್ಲ. ಒಂಡು ಹಾಡಿಕೆಯನ್ನು ಹಾಡಲು ಸುರು ಮಾಡಿದನು. ಮೊದಮೊದಲು ಇನ್ನೊಬ್ಬರ ಹಾಡುಗಳನ್ನು ಹಾಡುತ್ತಿದ್ದ ಖಾಜಾ ನಾಲ್ಕಾರು ವರ್ಷಗಳಲ್ಲಿ ಸ್ವತಃ ತಾನೇ ಕವಿಗಾರನಾದನು. ಪೌರಾಣಿಕ ಮತ್ತು ಐತಿಹಾಸಿಕ ಲಾವಣಿಗಳು, ತತ್ವದ ಲಾವಣಿಗಳು, ಸಾಮಾಜಿಕ ಲಾವಣಿಗಳನ್ನು ರಚಿಸಿ ತನ್ನ ಅದ್ಭುತ ಕಂಚಿನ ಕಂಠದಿಂದ ಹಾಡಿ ಹಲಸಂಗಿ ಸುತ್ತಲ ಹಳ್ಳಿಗಳಿಗೆ ಪರಿಚಿತನಾದನು.

ನಿನ್ನ ಮೂಗ ಸಂಪಿಗಿ ತೆನಿ | ಮುತ್ತಿನ ಗೊನಿ |
ಕೋಗಿಲಂಗ ಧನಿ ಎಳಿಯ ಕಮಲ |
ಓಣಿ ಹಿಡಿದ ಹೊಂಟಿ ಕುಣಿದಂಗ ಗಂಡ ನವಿಲ |
ಮಂದಿ ದಂಗವರದ ನಿಂತ ನೋಡಿ ನಿನ್ನ ಮಜಲ |
ಖಾಜಾ (ಚಂದ್ರುಣಿ)

ಹರುಷದಿಂದ ಲೋಬಾನ ಸುಡಸಿ |
ವಾದ್ಯವಾಲಗ ಸಂಬಾಳ ಬಾರಿಸಿ |
ಕಾಯಿಕಪ್ಪರ ನೈವೇದ್ಯ ತೋರಿಸಿ |
ಶಿರಬಾಗಿ ನಿಂತೆ ನಾ ಕೈ ಜೋಡಿಸಿ |
ಎನ್ನ ಮ್ಯಾಗ ಆಗಿರಿ ಖುಷಿ |
ಖಾಜಾ (ಪ್ರಾರ್ಥನೆ)

ಕಲಬುರ್ಗಿ ಕಲ್ಯಾಣ ಹಂಪಿ ಹದರಿಯ ಪೀರಾ |
ಹುಲಜಂತಿ ಉಮರ್ಜಿ ಸೊಲ್ಲಾಪುರ ಸಿದ್ರಾಮೇಶ್ವರ |
ಇವರು ದೇವರೇ ಅಲ್ಲ, ಇವರು ಹಾರೂ ಮಾನೂ ಮನಸ್ಯಾರಾ |
ದುಡಕೊಂಡು ದುಡಕೊಂಡು ಇವರು ಆಗ್ಯಾರ ದೊಡ್ಡ ದೊಡ್ಡ ಶರಣರಾ |
ಖಾಜಾ (ನಿನ್ನ ಹೊರತು ದೇವರಿಲ್ಲ)

ಕುಂತ್ರ ನಿಂತ್ರ ಇವನ ಧ್ಯಾನ, ಜೀವಕಿಲ್ಲ ಸಮಾಧಾನ |
ನಿದ್ದಿಯಲ್ಲ ಕಣ್ಣೀಗಿ ಹಗಲಿರುಳ |
ಇವನ ಹಸ್ತನ್ ಸಿಸ್ತ ಮಾವಿನ ತರಳ್ |
ಮ್ಯಾಲ ಕಂದಲದ್ಹ್ರಳ ಉಂಗರೊಪ್ಪು ಬೆರಳ್ |
ಖಾಜಾ (ಸಂಪಿಗಿ ತೆನಿಯಂತ ಹುಡುಗ)

ಸಿಂಪಿ ಲಿಂಗಣ್ಣ, ಫಿ.ಧೋಲಾ ಸಾಹೇಬ ಅವರು ಸಂಗ್ರಹಿಸಿದ ‘ಜೀವನ ಸಂಗೀತ’ ಲಾವಣಿಯಲ್ಲಿಯ ಈ ಸಾಲುಗಳ ಕಟ್ಟುವಿಕೆಯಲ್ಲಿ ಅವನೊಬ್ಬ ನಿಜವಾದ ವರಕವಿ ಎಂದು ಮನಗಂಡು ಬಿಡುವುದರಲ್ಲಿ ಸಂದೇಹವಿಲ್ಲ. ಆತನ ಚಿತ್ರಕ ಶಕ್ತಿ, ಚಿಕಿತ್ಸಕ ಬುದ್ಧಿ ಎಂತಹದಿತ್ತು ಎಂಬುದನ್ನು ಈ ಮೇಲಿನ ಲಾವಣಿ ತುಣುಕುಗಳು ನಿರ್ಧರಿಸಿ ಬಿಡುತ್ತವೆ.

ಖಾಜಾಭಾಯಿಯ ಗುರುಗಳಾದ ಸಂಗೂರಾಯಪ್ಪರಿಗೆ ವಯಸ್ಸಾಯಿತು. ಅವರು ಮರೆಯಾದರು. ಆದರೆ ಇವನ ಲೋಕಪ್ರಿಯತೆ ಇನ್ನೂ ಹೆಚ್ಚಾಯಿತು. ಆ ಕಾಲದ ಪ್ರಸಿದ್ಧ ಲಾವಣಿಕಾರರಾದ ಹದರಿಯ ಬಡೇಸಾ ಕ್ವಾರಳ್ಳಿಯ ರಾಮಚಂದ್ರ, ಬೈಚಬಾಳ ಸರ್ವೋತ್ತಮ, ಚಾಣಕೋಟಗಿಯ ನಭೀಶದ ಹೆಸರುಗಳ ಸಾಲಿನಲ್ಲಿ ಇವನ ಹೆಸರೂ ಸೇರಿಕೊಂಡು ಜನಜನಿತವಾಯಿತು.[3] ಇವರೆಲ್ಲರಲ್ಲಿಯು ಬಡೇಸಾಬ ಬಹಳ ಮಿಗಿಲಾದವನು. ಇವನ ಹಾಡುಗಳು ಇತರರಿಗೆ ಹೇಳಲು ಬಾರದಷ್ಟು ಉದ್ಧವಾಗಿರುತ್ತಿದ್ದವು. ಬಡೇಸಾಬನ ಹಾಡಿಕೆಯೆಂದರೆ ಆಗ ನಾಡಿನ ತುಂಬೆಲ್ಲಾ ಹೆಚ್ಚುಗಾರಿಕೆ ಪಡೆದದ್ದಾಗಿತ್ತು.[4] ಅಂತಹ ಬಡೇಸಾಬ ಹಲಸಂಗಿಯಲ್ಲಿ ಹಾಡು ಹೇಳಿ ಮುಯ್ಯ ಹೇಳುವಾಗ ಮುಯ್ಯಬಿಡಿಸಿ ಅವನಿಗೆ ಸವಾಲು ಹಾಕಿದ್ದ ಈ ಖಾಜಾಭಾಯಿ.

ಖಾಜಾಭಾಯಿಯು ಬಡೇಸಾಬನಿಗೆ ಬೆಂಬಿಡದೆ ಕಾಡತೊಡಗಿದ. ಹದರಿಯ ಜಾತ್ರೆಗೆ ಹೋಗಿ ಬಡೇಸಾನ ತೆಕ್ಕೆಗೆ ಬಿದ್ದನು. ಒಮ್ಮೆಯಲ್ಲ ಎರಡು ಸಲವಲ್ಲ. ಅವನ ಹಾಡುಗಾರಿಕೆ ಎಲ್ಲಿದೆ ಅಲ್ಲೆಲ್ಲಾ ಹೋಗಿ ಡಪ್ಪು ಬಾರಿಸಿ ಸವಾಲ್ ಹಾಕಿ ರಿಂಗಣಿಸತೊಡಗಿದ. “ಬಡೇಸಾಬನು ನಾನು ಹೋದಲ್ಲೆಲ್ಲಾ ಏನಾದರೂ ನೆವಮಾಡಿ ತಪ್ಪಿಸಿಕೊಂಡು ಹೋಗುತ್ತಿದ್ದಾನೆ. ಇಲ್ಲಿ ಒಂದೇ ಸವನೆ ಎಷ್ಟು ದಿನ ಹಾಡಿಕೆ ನಡೆಯುವುದೋ ನಡೆಯಲಿ ಕೊನೆಗೆ ಯಾರು ಸೋಲುವರೋ ಅವರು ಮುಂದೆ ಜನ್ಮದಲ್ಲಿ ಎಂದೂ ಹಾಡಿಕೆಯನ್ನೇ ಮಾಡಲಾಗದೆಂದು ಕಾಗದ ಬರೆದು ಕೊಡಬೇಕು” ಎಂದು ಖಾಜಾಭಾಯಿಯು ತೆಲ್ಲಣಗಿಯಲ್ಲಿ ನೆರೆದ ಸಾವಿರಾರು ಜನರ ಮಧ್ಯ ಕರಾರು ಮಾಡಿ ಹಾಡಿಕೆ ಪ್ರಾರಂಭಿಸುತ್ತಾರೆ. ಹರದೇಶಿ-ನಾಗೇಶಿ, ಕಲ್ಗೀ-ತುರಾ ಕತ್ತಲು-ಬೆಳಕುಗಳ ಮಧ್ಯ ವಾದ-ಪ್ರತಿವಾದಗಳು ನಡೆದು ಇಲ್ಲಿ ಬಡೇಸಾಬನ ಹಾಡಿಕೆಯು ಕುಂಠಿತವಾಗುತ್ತದೆ. “ಇಂದಿನಿಂದ ನೀನೇ ಗುರು, ನಾನೇ ಶಿಷ್ಯ” ಎಂದು ಬಾಯಿಬಿಟ್ಟು ನುಡಿದು, ಇಂದಿನಿಂದ ಹಾಡಿಕೆಯನ್ನು ಬಿಟ್ಟುಬಿಟ್ಟೆ ಎಂಬ ಪ್ರತಿಜ್ಞೆ ಮಾಡಿ ಡಪ್ಪನು ನೆಲಕ್ಕಿಡುತ್ತಾನೆ ಬಡೇಸಾಬ. ಮುಂದೆ ಒಂದೆರಡು ವರ್ಷಗಳಲ್ಲಿ ಇಂಡಿಯ ಶಾಂತೇಶ್ವರ ಜಾತ್ರೆಯಲ್ಲಿ ಹತ್ತಾರು ಹಾಡಿಕೆ ಮೇಳಗಳು ಸೇರಿದಾಗ ಪುನಃ ಖಾಜಾಭಾಯಿ ಬಡೇಸಾಬ ಸೇರುವ ಸಂದರ್ಭ ಬರುತ್ತದೆ. ಜನರು ಬಡೇಸಾಬನಿಗೆ ಹಾಡಲು ಕೇಳಿ ಒತ್ತಾಯ ಮಾಡುತ್ತಾರೆ. ಆಗ ಬಡೇಸಾಬನು ಗುರುವಿನ ಅಪ್ಪಣೆ ಆದರೆ ಹಾಡುವೆನೆಂದು ಖಾಜಾಭಾಯಿಯ ಅಪ್ಪಣೆ ಪಡೆದು ಒಂದೆರಡು ಸಾಲುಗಳನ್ನು ಮಾತ್ರ ಹಾಡುತ್ತಾನೆ. ನೊಂದು ಮತಿಗೆಟ್ಟವನಂತಾಗಿ, ತನ್ನ ಮೈಮೇಲಿನ ಅರಿವೆಗಳನ್ನೆಲ್ಲಾ ಹರಿದುಕೊಂಡು ಸುಡುತ್ತಾನೆ. ಶಾವಿಯ ಕಪನಿಯ ಧರಿಸಿ ಅಂತರ್ಮುಖಿಯಾಗಿ ‘ಜೈ ಗುರುವೆ’ ಎಂದು ಬೈರಾಗಿಯಾಗಿ ಹೋಗುತ್ತಾನೆ.

ಖಾಜಾಭಾಯಿಗೆ ಎನೋ ಒಂದು ಅಳುಕು ಹದರಿಯ ಬಡೇಸಾಬನಿಗೆ ಹಾಡಿಕೆಯ ವಿಚಾರದಲ್ಲಿ ನಾನು ದುಡುಕಿದೆ ಎಂದು ಮನ ಆಗಾಗ ಕಲಕುತ್ತಿರುತ್ತದೆ. ಕೆಲವು ವರ್ಷಗಳ ನಂತರ ಲಚ್ಯಾಣ ರೈಲು ನಿಲ್ದಾಣದಲ್ಲಿ ಖಾಜಾಭಾಯಿಯು ಹಾಡಕಿಗೆ ಹೋಗುವಾಗ ರೊಟ್ಟಿ ಬಿಚ್ಚಿ ಊಟ ಮಾಡುತ್ತಿರುತ್ತಾರೆ. ಆಗ ಅಲ್ಲಿ ಅವರಿಗೆ ಒಬ್ಬ ಬೈರಾಗಿ ಕಾಣಿಸುತ್ತಾನೆ. ಇವರು ಅವನ್ಯಾರೋ ಎಂದುಕೊಂಡರು. ಆದರೆ ಅವನು ಬಂದವನೇ ಖಾಜಾಭಾಯಿಯನ್ನು ಅಪ್ಪಿಕೊಂಡು ‘ಗುರುವೆ ಕೊನೆಯ ಕಾಲಕ್ಕೆ ನನಗೆ ದರ್ಶನ ಕೊಟ್ಟಿ ! ಆನಂದವಾಯಿತು ! ಮಹಾದಾನಂದವಾಯಿತು. ಹೀಗೆಂದು ಆವೇಶದಿಂದ ಉದ್ಗಾರ ತೆಗೆಯ ಹತ್ತಿದನು. ಆಗ ಖಾಜಾಭಾಯಿಗೆ ಬಡೇಸಾಬನ ಗುರುತು ಹತ್ತಿ ಆಶ್ಚರ್ಯಗೊಂಡು ಏನೋ ಬಡೇಸಾಬ ಇದೇನು ನಿನ್ ಆಟ? ನನಗಂತೂ ಒಂದು ತಿಳಿಯದು ಬಾ ನಮ್ಮೊಡನೆ ಊಟ ಮಾಡು ಬಾ ಎಂದನು. ಅದಕ್ಕವನಿಗೆ ಮತ್ತಷ್ಟು ಹರ್ಷವಾಯಿತು. ಗುರುವಿನ ಪ್ರಸಾದ ಎಂದು ಊಟ ಮಾಡಿದನು. ಬಡೇಸಾಬನು ಆನಂದ! ಆನಂದ! ಎಂದು ಮಾತನಾಡುತ್ತಲೇ ಇದ್ದನು. ಖಾಜಾ ಉಗಿಬಂಡಿ ಏರಿ ಮುಂದಿನ ಊರಿಗೆ ಹಾಡಿಕಿಗೆ ಹೋದ. ನಾಲ್ಕೆಂಟು ದಿನ ಹಾಡಕಿ ಮುಗಿಸಿ ತಿರುಗಿ ಇಲ್ಲಿಗೆ ಬಂದಾಗ ಮುಸಲ್ಮಾನದೊಂದು ಹೊಸಗೋರಿಯು ಖಾಜಾಭಾಯಿಯ ಕಣ್ಣಿಗೆ ಬಿತ್ತು. ಅದು ಬಡೇಸಾಬನದು ಎಂದು ತಿಳಿದಾಗ ಖಾಜಾಭಾಯಿ ಬಿಕ್ಕಿ ಬಿಕ್ಕಿ ಅಳ ಹತ್ತಿದನು. “ನನ್ನಲ್ಲೇನೂ ಅಂಥಾದ್ದು ಇದ್ದಿದ್ದಿಲ್ಲ; ಆದರೆ ಆತನು ಅದರಲ್ಲಿಯೇ ಪಡೆದುಕೊಂಡನು” ಎಂದು ಖಾಜಾಭಾಯಿ ಮನದಲ್ಲಿ ಅಂದುಕೊಂಡನು. ಖಾಜಾನಾ ಜೀವನವು ಕೊನೆಯಲ್ಲಿ ಸುಖಕರವಾಗಿದ್ದಿಲ್ಲ. ಹಲಸಂಗಿಯನ್ನು ಬಿಟ್ಟು ಬೇರೆ ಬೇರೆ ಊರುಗಳ ದರ್ಗಾ ಗುಡಿಗಳಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ. ಪಟೇಲ ಧೋಲಾ ಸಾಹೇಬರು ಖಾಜಾಭಾಯಿಯನ್ನು ಹಲಸಂಗಿಗೆ ಕರೆಯಲು ಹೋದರೆ ಕೆಲ ಕಾರಣಗಳಿಂದ ಅವರು ತಿರುಗಿ ಬರಲಿಲ್ಲ”[5]. ೧೯೨೪ರಲ್ಲಿ ಅವರು ತೀರಿಕೊಂಡರು ಎಂಬ ಸುದ್ಧಿ ಮಾತ್ರ ಹಲಸಂಗಿಗೆ ತಲುಪಿತು. ಖಾಜಾಭಾಯಿಯ ಹಲವು ಪ್ರಸಿದ್ಧ ಲಾವಣಿಗಳಲ್ಲಿ ಒಂದಾದ ‘ಚಂದ್ರುಣಿ’ಯಲ್ಲಿ ಅವರ ಕವಿತಾಶಕ್ತಿಯನ್ನು ಗಮನಿಸಬಹುದು.

ಚಂದ್ರುಣಿ

೧ನೇ ಚೌಕ

ಚಂದ್ರುಣಿ ಚಂದನದ ಗೊಂಬಿ | ರತ್ನದ ಕಂಬಿ |
ಆದಿ ಜಗದಂಬಿಯಂಗ ಡೌಲ |
ನಿನ್ನ ಸರಿ ಈಗ ದೇವತೆರು ಯಾರೂ ಇಲ್ಲ |
ಏನು ಬೇಡಿ ಬಂದೆ ಶಿವನಲ್ಲಿ ಎಷ್ಟು ಅಮಲ |
ಮದವೇರಿಸಿ ಹೊಂಟಂಗ ಆನಿ ಜಾತ ಪದ್ಮಿನಿ |
ಪಟ್ಟದಾ ರಾಣಿ ಗಾದಿ ಮ್ಯಾಲ ||

ನಿನ್ನ ಪ್ರಾಯ ತುಂಬಿದಾ ಹೊಳಿ | ಬಾಳಿಯ ಸುಳಿ |
ಚಂದ್ರನ ಕಳಿ ಕಸರಯಿಲ್ಲ ||
ಆದಿ ವಿಷ್ಣು ಪಿಂಡ ಮಾಡಿದಾನ ತೆಗೆದ ಹೊಯ್ಲಾ |
ಬಿನ್ನಬ್ಯಾಸರಿಲ್ಲದೆ ತಿದ್ದಿ ಕೈ ಕಾಲ |
ಮಹೇಶ್ವರ ಜೀವದ ಧನಿ | ಬ್ರಹ್ಮ ಬರೆದ ಫಣಿ |
ಬೇಡಿ ಬಂದೆ ಜಾಣಿ ಸುಳ್ಳೇನಲ್ಲ ||

ನಿನ್ನ ಮೂಗ ಸಂಪಿಗೀ ತೆನಿ | ಮುತ್ತಿನ ಗೊನಿ |
ಕೋಗಿಲಂಗ ಧನಿ ಎಳಿಯ ಕಮಲ |
ಓಣಿ ಹಿಡಿದ ಹೊಂಟಿ ಕುಣಿದಂಗ ಗಂಡನವಿಲ |
ಮಂದಿ ದಂಗವರದ ನಿಂತ ನೋಡಿ ನಿನ್ನ ಮಜಲ |
ನಿನ್ನ ಒನಪ ನೋಡಿ ನಾ ಬೆರತ | ಮನಿಯ ಮಾರ ಮರತ |
ಹಾರಿತ ನನ್ನ ಸುರತ ಬಿದ್ದಂಗ ಸಿಡಿಲ ||

(ಇಳುವು) ಹೆಣ್ಣ ತೇಜಿಯ ಮರಿ | ಉಚ್ಚಿದಂಗ ವರಿ |
ಅಲ್ಲ ಇಕಿ ಸರಿ ಶಿವನ ಮನಿರಂಭಾ ||
ಉಟ್ಟ ಶಾಲಿ ಪಿತಾಂಬರ ಜರದ | ಕಣ್ಣ ನೋಡಿ ತೆರೆದ |
ಹೊರಟಿ ಮೂಗ ಮುರದ ಎಷ್ಟ ನಿನ್ನ ಜಂಬಾ ||

ನೀ ಹೆಣ್ಣ ರಾಧಿ ರುಕ್ಮಿಣಿ | ರತ್ನದಾ ಮಣಿ |
ಮಾವಿನ ಗೊನಿ ಉಚ್ಚಿದಂಗ ತುಂಬಾ |
(
ಏರು) ತುಂಬ ಉಚ್ಚಿದಂಗ ಮೈನರದಿ | ಭಾರದಾಗ ದೊರದಿ
ಕೇಳ ನನ್ನ ವರದಿ ಮಾಡಿ ಖುಲ್ಲಾ |
ನಿನ್ನ ಕಂಡು ಮರತ ಮನಿಯಾರ ಜಿಂದಗಿ ಎಲ್ಲ |
ಏನು ಬೇಡಿ ಬಂದೆ ಶಿವನಲ್ಲಿ ಎಷ್ಟು ಅಮಲ |
ಮದವೇರಿಸಿ ಹೊಂಟಂಗ ಆನಿ. ಜಾತ ಪದ್ಮಿನಿ
ಪಟ್ಟದಾ ರಾಣಿ ಗಾದಿ ಮ್ಯಾಲ ||

ನಿಂಗಪ್ಪ ಖೈರಾಟ

ನಿಂಗಪ್ಪ ಶಿವಪ್ಪ ಖೈರಾಟರವರು ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಸಾಲೋಟಗಿಯವರು. ಇವರ ತಂದೆ ಶಿವಪ್ಪ, ತಾಯಿ ನೀಲಮ್ಮ. ೫.೮.೧೮೯೯ರಂದು ಸಾಲೋಟಗಿಯಲ್ಲಿಯೇ ಜನಿಸಿದರು. ಇವರು ಹಡಪದ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಅಜ್ಜ-ಮುತ್ತಜ್ಜರ ಮೂರು ತಲೆಮಾರುಗಳಿಂದ ಲಾವಣಿ, ಗೀಗೀ, ಹರದೇಶಿ-ನಾಗೇಶಿ ಪದ ಹಾಡುತ್ತ ಬಂದಿರುವರು. ಸಹಜವಾಗಿ ಅಜ್ಜನ ಪ್ರಭಾವ, ಮನೆಯ ಪರಿಸರ, ತಂದೆ ಹಾಡುವ ಸನ್ನಿವೇಶಗಳು ಇವರನ್ನು ಲಾವಣಿ ಹಾಡುಗಳತ್ತ ವಾಲಿಸಿತು. ಒಮ್ಮೆ ಯಳಮೇಲಿ (ಆಲಮೇಲ) ಗಾಲಿಬ ಸಾಹೇಬನ ಉರುಸ್‌ನಲ್ಲಿ ಲಾವಣಿ ಮೇಳಗಳು ಸೇರಿದವು. ಶಿವಪ್ಪನು ಈ ಜಾತ್ರೆಗೆ ಬಂದಿದ್ದನಾದರೂ ಅವನಿಗೆ ಸ್ವಲ್ಪ ಆರಾಮ ತಪ್ಪಿ ಹಾಡು ಹಾಡುವುದು ಬೇಡ ಊರಿಗೆ ಹೋಗೋಣ ಎಂದು ಅನುಮಾನಿಸತೊಡಗಿದ. ಆಗ ಅಪ್ಪನಿಗೆ ಧೈರ್ಯ ಕೊಟ್ಟು ಡಪ್ಪು ಹಿಡಿದು ಲಾವಣಿ ಕಟ್ಟೆಯನ್ನು ಹತ್ತಿಯೇ ಬಿಟ್ಟ ನಿಂಗಪ್ಪ.

ಸುದ್ದಿ ಕೇಳಿ ಬಂದೆ ಸಾಲೋಟಗಿ ಇಂದ ನಿಮ್ಮದು ವಾರ್ತೆ |
ಸಾರಥದ ಕೀರ್ತಿ |
ಮದಲ್ ಮಜಲಿಗಾಯಿತೋ ನಮ್ಮ ನಿಮ್ಮದು ಶರಣಾರತಿ |
ಯಳಮೇರಿ ಜಾತ್ರ್ಯಾಗ ಆಗಿ ಕುಂತಿರೋ ಮೇಲ |
ಮಾಡತೀರಿ ಡೌಲ |[6]

ಹೀಗೆ ಹಾಡು ಪ್ರಾರಂಬಿಸಿದ ಇಪ್ಪತ್ತರ ತರುಣ ನಿಂಗಪ್ಪ ನಂತರ ಡಪ್ಪಿನಲ್ಲಿ ಹಿಂದೆ ಸರಿದಿದ್ದೇ ಕಡಿಮೆ.

ಶಂಕರ ಗೌಡ ಬಿರಾದಾರ ಸಾ.ಪಡಗಾನೂರ ಇವರ ಜತೆ ಸೇರಿ ಕಾಂಗ್ರೆಸ್ ಚಳುವಳಿಯಲ್ಲಿ ೧೯೩೫ರಿಂದ ೪೦ರಲ್ಲಿ ಕೆಲವು ಲಾವಣಿ ರಚಿಸಿ ಹಾಡಿದ್ದರು.[7] ಮನೆ ಬಿಟ್ಟು, ಹೆಂಡರು ಮಕ್ಕಳು ಬಿಟ್ಟು ಬಹಳ ದಿನ ಗುಪ್ತವಾಗಿರಬೇಕಾದಾಗ ಇವರ ಮನೆ ಪರಿಸ್ಥಿತಿ ಸರಿಯಾಗಿರಲಿಲ್ಲ. ಆದ ಕಾರಣ ಸ್ವಾತಂತ್ರ್ಯ ಚಳುವಳಿಯನ್ನು ಕೈಬಿಟ್ಟು ಈ ಹಾಡಿಕೆಯನ್ನೇ ಮುಖ್ಯ ವೃತ್ತಿಯನ್ನಾಗಿಸಿಕೊಂಡರು. ಜನಪದ ಕಲೆಗಳ ಬಗ್ಗೆ ಕಳಕಳಿ ಹೊಂದಿದ ಸ್ಥಳಿಯ ಶಿಕ್ಷಕ ಕಲ್ಲಣ್ಣ ಯಳಸಂಗಿ ಇವರನ್ನು ಪ್ರೋತ್ಸಾಹಿಸಿ ಪ್ರಾಥಮಿಕ ಸೌಲಭ್ಯ ಒದಗಿಸಿ ಕೊಡುವುದಲ್ಲದೇ ಇವರ ಕಲೆ ನಾಡಿನ ಮುಖ್ಯ ವಾಹಿನಿಯಲ್ಲಿ ಬರುವಂತೆ ನೋಡಿಕೊಂಡರು.

ಹಲಸಂಗಿ ಭಾಗದ ಲಾವಣಿಕಾರರ ಪ್ರಭಾವ ಇವರ ಮೇಲಿದ್ದರೂ, ಬೀಬೀ ಇಂಗಳಗಿಯ ಗೀಗೀ ಮೇಳಗಳ ಸಂಪರ್ಕ ಹೆಚ್ಚಾಗಿತ್ತು. ಸ್ವಾತಂತ್ರ್ಯ ಪರ ಲಾವಣಿ ಸಣ್ಣಪುಟ್ಟ ಖ್ಯಾಲಿ, ಕಲ್ಕೀಗಳನ್ನು ರಚಿಸುತ್ತಿದ್ದ ನಿಂಗಪ್ಪ ಇತರರು ಬರೆದ ಹಾಡುಗಳನ್ನು ಹಾಡುತ್ತಿದ್ದ. ಕವಿ ಗಿರಮಲ್ಲ, ಸಂಗುರಾಯಪ್ಪ, ಖಾಜಾಭಾಯಿ, ಯಳಮೇಲಿ ಭೀಮಬಸಯ್ಯ, ಗೋಪಾಲ ದುರದುಂಡಿ, ತುಕರಾಮರ ಪದ್ಯಗಳನ್ನು ಹೆಚ್ಚಾಗಿ ಹಾಡುತ್ತಿದ್ದ.

ಒಮ್ಮೆ ಕಲಬುರ್ಗಿಯಲ್ಲಿ ಹರದೇಶಿ-ನಾಗೇಶಿ ಮೇಳಗಳ ಸಮ್ಮೇಳನ ಏರ್ಪಾಡಾಗಿತ್ತು. ಹೆಚ್ಚು ಕಡಿಮೆ ಅಲ್ಲಿ ಉತ್ತರ ಕರ್ನಾಟಕದ ಎಲ್ಲಾ ಲಾವಣಿ ಗೀಗೀ ಮೇಳಗಳು ಬಂದು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಆವಾಗ ನಿಂಗಪ್ಪನ ಹಾಡಿಗೆ ಪ್ರಥಮ ಸ್ಥಾನ ಬಂದಿತ್ತು[8] ಎಂದು ಶಿಕ್ಷಕ ಎಸ್.ವಿ. ನಾವಿ (ಸಿಂದಗಿ) ಅವರು ಸ್ಮರಿಸಿಕೊಳ್ಳುತ್ತಾರೆ.[9]ಶಿವನೇ ಶ್ರೇಷ್ಠ”, “ನೀರು ಶ್ರೇಷ್ಠ”, “ಬೆಳಕು ಶ್ರೇಷ್ಠ” ಈ ಲಾವಣಿಗಳನ್ನು ನಿಂಗಪ್ಪ ಖೈರಾಟನ ಕಂಚಿನ ಕಂಠದಲ್ಲಿ ಕೇಳಲು ಇಂಡಿ, ಹೊರತಿ ಭಾಗದ ಜನ ಮುಗಿ ಬೀಳುತ್ತಿದ್ದರು. ಇವರ ಹಾಡಿನ ಕರೆಗೆ ಮನಸೋತು ಬಸಯ್ಯ ಪರುತಯ್ಯ ಮಠಪತಿ, ಶಿವಪ್ಪ ಹಾವಳಗಿ, ರೇವಣಸಿದ್ದಪ್ಪ ಕಂಬಾರ ಮತ್ತು ಕೇಶಪ್ಪ ಹಡಪದ ಇತರರು ಇವರಲ್ಲಿ ಗೀಗೀ ಪದಗಳ ಹಾಡು ಕಲಿತು ಸ್ವತಂತ್ರ ತಂಡ ರಚಿಸಿಕೊಂಡು ಗೀಗೀ ಮೇಳದವರಾದರು.

ಸತ್ತರ ಸಾಯದಂಗ ಮಾಡಕೋರಿ ಜೀವ ಇರತಾ |
ಜೀವ ಇರತಾ ಮಾಡಕೋರಿ ಜನ್ಮ ಸ್ವಾರಥ |
ಜನ್ಮ ಕಲ್ಮ ಎಲ್ಲ ಆಳಕೋ ಬೇಕ ಪೂರ್ತ |
ಪೂರ್ತಿ ತಿಳಿಯಲಾಕ ಏನ ಪುಗಸಟ್ಟಿ ಬಂದಿಲ್ಲ ಅಗಟಿವಿಗಟ ಅನುಭವವಾರ್ಥ |

ಉತ್ತರ ಕರ್ನಾಟಕ ಯುವ ಲೇಖಕರ ವೇದಿಕೆ ಅಡಿಯಲ್ಲಿ ಶಾಂತೇಶ್ವರ ಕಾಲೇಜ್, ಇಂಡಿ ಆವರಣದಲ್ಲಿ ೧೯೯೫ರಲ್ಲಿ ಜಾನಪದ ಮೇಳ ನಡೆದಾಗ ಈ ಲಾವಣಿಕಾರ ಮೇಲಿನ ಹಾಡು ಹೇಳಿದ್ದ. ಆಗ ಅವರಿಗೆ ವಯಸ್ಸು ೬೯ರ ಆಸು-ಪಾಸು.[10]

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಬೆಂಗಳೂರಿನಲ್ಲಿ ೧೪.೧೧.೧೯೭೮ರಂದು, ೫೪ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮಡಿಕೇರಿ, ೨೮.೧೧.೧೯೮೧ರಂದು, ಎಸ್.ಕೆ.ಕರೀಂಖಾನ್ ಮತ್ತು ಸಿಂಪಿ ಲಿಂಗಣ್ಣನವರ ಹಿರಿತನದಲ್ಲಿ ಹಲಸಂಗಿಯಲ್ಲಿ ನಡೆದ ೨೭.೧೧.೧೯೮೧ ಜಾನಪದ ಸಮ್ಮೇಳನಗಳಲ್ಲಿ ಕಲಾಪ್ರದರ್ಶನ ಹಾಗೂ ಸನ್ಮಾನ ಪಡೆದ ಬಗ್ಗೆ ಮಾಹಿತಿಗಳಿವೆ.[11]

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ೧೯೮೦ರ ರಾಜ್ಯ ಪ್ರಶಸ್ತಿಯನ್ನು ಈ ಕಲಾವಿದನಿಗೆ ನೀಡಿ, ತನ್ನ ಘನತೆ ಹೆಚ್ಚಿಸಿಕೊಂಡಿತು. ಇವರ ಶ್ರೀಮತಿಯವರಾದ ಗಂಗಾಬಾಯಿ ಖೈರಾಟರವರು ಹಳೆಯ ಬಟ್ಟೆಗಳ ಕಸೂತಿ ಕಲೆಯಾದ ‘ಕೌದಿ’ಯನ್ನು ಹೊಲೆದು ಬೆಂಗಳೂರಿನ ಜಾನಪದ ವಸ್ತು ಸಂಗ್ರಹಾಲಯಕ್ಕೆ ಕಳಿಸಿದ್ದಾರೆ. ಅವರು ಆಗಾಗ ಹೆಚ್ಚು ಹೆಚ್ಚಾಗಿ ಹಾಡುತ್ತಿರುವ ಹಾಡು “ತ್ರಿಕಾಲ ಹಾಡು” ಹಾಗೂ “ಶಿವನೇಶ್ರೇಷ್ಠ” ಲಾವಣಿಗಳನ್ನು ಇಲ್ಲಿ ಓದುಗರ ಅನುಕೂಲಕ್ಕೆ ಕೊಡಲಾಗಿದೆ.

ತ್ರಿಕಾಲ ಹಾಡು

ಅಳುದರಚ್ಚಿಕಿಲ್ಲ ನಗುದಕಿಚ್ಚಿಕಿಲ್ಲ ಸತ್ತ ಹುಟ್ಟುದರಾಗ ಏನ ಸುಖಾ ಇಲ್ಲಾ |
ಸುಖಕ ದುಃಖಾ ಇಲ್ಲ ದುಃಖಕ್ಕ ಸುಖಾ ಇಲ್ಲ ಆಕ್ಕೊ ಬೆಳರೆ ಐತಿ ಇದರ ಗುರುಕೀಲಾ |
ಜ್ಞಾನದ ಮೂಲಾ || ||

ಪದದ ಅರ್ಥ ಒಂದು ಪಲ್ಲಿನಾಗ ಹೇಳತಾರ ಬಲ್ಲವಗ ಬಿರಿ ಇಲ್ಲ ಬಿಕ್ಕಟ್ಟ |
ಮಾಡುವ ಅಡಿ ನುಡಿಗಳು ಬರತಾವ ಮುಕ್ಕಟ್ಟ |
ತಮ್ಮಿಂದ ತಾವೆ ಕೂಡತಾವ ಅಜಕಟ್ಟಾ |
ಪಲ್ಲಿನ ಪದರ ಹರಿದು ಪದಾಮಾಡಿ ಪದಾ ಮಾಡಬೇಕ ಹದಾ ಇಳುತಾವರಿ
ರುಚಿಕಟ್ಟಾ | ಕವಿಗಳೇ ತಾ || ||

ಹೊಸ ಮಾತು ತಗಿದು ರಸಾ ತುಂಬಿದಂಗ ಹಸನ ಆದು ಕವಿಗಳು ಥೇಟ
ನೀ ಮಿಟುಕುವಂಗ ಹಾಡತೀವ ಧುಡುಕಿ ಇಟ್ಟಾ |
ತೋಡ ಇದ್ರ ಹಾಡ ಇದರ ತೋಡ ಇದ್ರ ಮಾಡ ಜಾಂಗ ಜಾಂಗುಟಿ ಬಡಿದಂಗ
ಭೋರಿಟ್ಟ ದನಿ ಆರ್ಭಟಾ || ||

ದುಡುಕಿ ದನಿ ತಗದ ಹಾಡ ಢಣ್ ಢಣ್ಣಾ | ಗಾಡಿ ರೂಪಾಯಿ ಭಾರಿಸಿದಂಗ ಛಣ್ ಛಣ್ಣಾ |
ಕೆನ್ನಿ ಮೇಲಿಗಿನ್ನ ಒಗದಂಗ ಖಣ್ ಖಣ್ಣಾ |
ಕೂಡುಪಲ್ಲ || ಕರದ ಕಾಗದ ಬರದ ವಿರುದ್ಧ ಮಾಡತೀವ ನಿಮ್ಮ ಗುಡಾ
ಸಾಲಿ ಹುಡುಗರಂತಾವ ಕವಿ ಮಾಡುದಕೇನ ಅರಿದಿಲ್ಲಾ ||

೧ನೇ ಚೌಕ

ಇದ್ದದ್ದ ವೈದದ್ದ ಹೋದದ್ದ ಮದಲಿಂದ ಮಾತಾಡತಾರ ಇವರು ಬರೆಬಾಯಿ |
ಸುಳ್ಳ ಮಾತಾಡಿ ಆಗತಾವ ಅಲ್ಲಛಾಯಿ | ನೀ ಹಾಡಕೆಂತ ನಾಡವಳಗ
ಆತ ಆವಾಯಿ ||
ಹನ್ನೊಂದು ತಾಸ ಹೋದ ಮೇಲೆ ಇನ್ನೊಂದು ತಾಸ ಉಳದೀತ ಸಾವಿಗಂಜಿದರೇನಾತ
ನೀ ನಿಂದ (ನಿನ್ನದು) ತಿಂತಿ ಖರೆ ನಿಂದ ಅಲ್ಲ ದೇಹಿ | ಕಿಸಬಾಯಿ |೧ |
ದೇಹದೊಳ ಇಂಥಾ ದೊಡ್ಡ ದೇವರೈತ ಗುಡ್ಡಾ ಇಳದ ನೋಡಬೇಕ ಬಾಗಶಾಯಿ
ಈ ಭಾಗದಾಣೆ ಇದ್ದಾರ ಬಸುವ ಲಿಂಗ ತಂದಿ ತಾಯಿ |
ನಾವು ದೀಪ ಧೂಪಕೊಟ್ಟ ಒಡೆದೇವ ಕಪ್ಪರ ಶಾಯಿ |
ಅವರ ಕಾಯಿದಿದ್ದರ ಇಲ್ಲರೆಪ್ಪಾ ನಮ್ಮ ಉಪಾಯಿ |
ದುಡುಕಿ: ಕಾಮದಿಂದ ಇಳದ ಬತ್ತ ಝರ್ ಝರ್‌ರರಾ | ಭಾವದಿಂದ ಇಳಿದ ಬಂತ ಬರವಣ
ಸಾವುದಾನಸದ್ಗತಿ ಸರರಾ |
ಕೂಡುಪಲ್ಲ | ಒಸ್ತಿಲ ಸಿಸ್ತಲ ಒಳೆ ಮಸ್ತಿಲಿ ಇರುದೇನ ಜರೂರಾ
ತಮ್ಮ ಪಾಪಿನಲ್ಲಿ ತಾವು ಸತ್ತ ಹೋಗವರ ಸತ್ತ ಹುಟ್ಟುವದರಲ್ಲಿ
ಏನ ಸುಖಾ ಇಲ್ಲಾ

೨ನೇ ಚೌಕ

ಸತ್ತರ ಸಾಯದಂಗ ಮಾಡಕೋರಿ ಜೀವ ಇರತಾ |
ಜೀವ ಇರತಾ ಮಾಡಕೋರಿ ಜನ್ಮ ಸ್ವಾರ್ಥ |
ಜನ್ಮ ಕಲ್ಮ ಎಲ್ಲ ಆಳಕೋ ಬೇಕ ಪೂರ್ತ |
ಪೂರ್ತ ತಿಳಿಯಲಿಕ್ಕೆ ಏನ ಪುಗಸಟ್ಟಿ ಬಂದಿಲ್ಲ ಅಗಟಿವಿಗಟ ಅನುಭವವಾರ್ಥ |
ತಿಳಿದ ಆತ್ಮ ಹಿತಾ ||೧ ||

ಓದಿಕೊಂಡ ತಿಳಿಬೇಕ ನಿನ್ನ ಒಳಗ ನಿನ್ನ ಧೇಯಾ |
ಜಲ್ಲಗಿಲ್ಲ ಅಂದಿಯೆಪ್ಪಾ ಜೀವ ಇರತಾ |
ಈ ಝಲ್ಲಿನೊಳಗ ಮರ್ತಿ ಮಹಾರಾಯಾ ಮಾಡಿ ಅನರ್ಥಾ ||
ಜಾತಿ ಹೊರ್ತಾಗಿ ನಿಂತಾ ದೊಡ್ಡ ಪಂಡಿತಾ ||೨ ||

ದುಡುಕಿ: ಘಟದವೊಳಗ ಘಗ್ಗರಿ ನುಡದಂಗ ಗಲಲಲಾ |
ಮನಾ ಬುದ್ಧಿ ಅಲ್ಲ ನಿಂದ ಅಲಲಲಾ |
ನೀರ ಚಲ್ಲಿದಂಗ ಪಲಲಾ |
ಕೂಡಪಲ್ಲ: ಅಲ್ಲಕ್ಕ ಗುರುವಿನ ಮೆಲ್ಲಕ್ಕ ಬಿಡುಬಿಡು ನಿನ್ನ ರಾಮಾಮಣಿ |
ಸುಳ್ಳೆ ಸುಂಟಿ ಮೆಣಸ ಮಾರಿದಂಗ ಕಿರಾಣಿ |
ಬಾಳಮಂದಿ ಹೇಳತಾರ ನಿನ್ನ ಗಾರಾಣಿ
ಯಂಕ ಅಣ್ಣಾರಾಮ ಹಿಂಗ ಹೇಳತಾರ ಅವರಿಗೈತಿ ಗುರುವಿನ ಬಲಾ

[1] ಈ ಪರಿಚಯವನ್ನು ‘ಮಧುರ ಚೆನ್ನರ’ ರಮ್ಯ ಜೀವನ ಲೇಖನದ ಪ್ರಮುಖ ಅಂಶ ಆಧರಿಸಿ ಬರೆಯಲಾಗಿದೆ.

[2] ಜೀವನ ಸಂಗೀತ, ಸಿಂಪಿ ಲಿಂಗಣ್ಣ, ಪಿ. ಧೋಲಾ ಸಾಹೇಭ.

[3] ಬೀಬೀ ಇಳಗಳಗಿಯ ಸಂಪ್ರದಾಯದ ಗೀಗೀ ಪದಗಳು, ಡಾ. ಬಿ.ಎಸ್.ಕೋಟ್ಯಾಳ.

[4] ಪಟೇಲ ಧೋಲಾ ಸಾಹೇಬರು, ಡಾ.ಗುರುಲಿಂಗ ಕಾಪಸೆ.

[5] ಕಲ್ಲಣ್ಣ ಯಳಸಂಗಿ, ಜಾನಪದ ಕಲೆಗಳ ಪ್ರೋತ್ಸಾಹಕರು ಹೇಳಿದ್ದು.

[6] ಎಸ್.ವಿ.ನಾವಿ. ಶಿಕ್ಷಕರು, ಸಿಂದಗಿ ಹೇಳಿದ್ದು.

[7] ಅದೇ

[8] ಡಾ.ಟಿ.ಎಸ್. ಕೊಟ್ಯಾಳ ಹಸ್ತಪ್ರತಿ ಸಂಗ್ರಹ

[9] ಕಾರ್ಯಕ್ರಮ ನಿರೂಪಕ ಡಿ. ಜೋಸೇಫ್ ಆಗ ಬರೆದುಕೊಂಡದ್ದು. ಡೈರಿಯಲ್ಲಿ (೧೯೯೫)

[10] ಲಭ್ಯವಿದ್ದ ದಾಖಲೆ ಪ್ರಮಾಣ ಪತ್ರ ಫೋಟೋ ಇತ್ಯಾದಿ.

[11] ಹಲಸಂಗಿ ಹಾಡು ಪ್ರಸ್ತಾವನೆ, ಗುರುಲಿಂಗ ಕಾಪಸೆ.