ಓಲೇಕಾರ ರಾಮಚಂದ್ರ

ಈತನ ಪೂರ್ಣ ಹೆಸರು ರಾಮಚಂದ್ರ ಲಾಯಪ್ಪ ಓಲೇಕಾರ (ವಾಲೀಕಾರ) ಇಂಡಿ ತಾಲೂಕಿನ ಹಲಸಂಗಿ ಇವನ ಜನ್ಮ ಸ್ಥಳ. ಇವನು ಬದುಕಿದ ಅವಧಿ ಸುಮಾರು ೧೯೧೦ ರಿಂದ ೧೯೭೦ರವರೆಗೆ. ೧೯೨೪ರಲ್ಲಿ ಖಾಜಾಭಾಯಿ ತೀರಿಕೊಂಡ ಮೇಲೆ ಅವನ ರಚನೆಗಳಿಗೆ ಹಾಗೂ ಹಲಸಂಗಿ ಭಾಗದ ಲಾವಣಿಗಳನ್ನು ತನ್ನ ಏರುಧ್ವನಿಯಲ್ಲಿ ಕಂಠದಲ್ಲಿ ಹಾಡಿ ಜೀವ ತುಂಬಿದವನಾಗಿದ್ದಾನೆ. ‘ಜೀವನ ಸಂಗೀತ’ದಲ್ಲಿ ಸಂಗ್ರಹವಾದ ಲಾವಣಿಗಳು ಮೂಲ ಕವಿಗಳಿಂದ ಪಡೆದವುಗಳಲ್ಲ. ಆಗಿನ ಕಾಲದ ಬೇರೆ ಬೇರೆ ಹಾಡುಗಾರರಿಂದ ಸಂಗ್ರಹಿಸಿದವುಗಳಾಗಿವೆ. ಬಹಳಷ್ಟು ಲಾವಣಿಗಳು ಈ ಓಲೇಕಾರ ರಾಮಚಂದ್ರನಿಂದ ಉಳಿದುಕೊಂಡು ಬಂದಿವೆ. ಹಲಸಂಗಿ ಭಾಗದ ಲಾವಣಿ ಕವಿಗಳ ವಿಶೇಷತೆಯಂತೆ ಈ ಭಾಗದ ಹಾಡುಗಾರರಲ್ಲಿಯೂ ವಿಶೇಷತೆ ಇದೆ. ಅದಕ್ಕಾಗಿಯೇ ರಾಮಚಂದ್ರ ಇಲ್ಲಿ ಎದ್ದು ಕಾಣುತ್ತಾನೆ. ಈತನು ಮೂಲ ಕವಿಗಳ ರಚನೆಗಳಿಗೆ ಧಕ್ಕೆ ಬಾರದಂತೆ ಹಾಡಿ, ಆ ಕಾಲದ ಕೆಲವೇ ಕೆಲವು ಸುಪ್ರಸಿದ್ಧ ಹಾಡುಗಾರರಲ್ಲಿ ಒಬ್ಬನಾಗಿದ್ದನು. ಹಾಡಲು ನಿಂತರೆ ಇವನ ಆಕರ್ಷಕ ಧ್ವನಿ ಎಂಥವರನ್ನು ಬೆರಗುಗೊಳಿಸುತ್ತಿತ್ತು.

೧೯೩೬ರಲ್ಲಿ ಹಲಸಂಗಿಯಲ್ಲಿ ಶ್ರೀರಾಮಕೃಷ್ಣ ಪರಮಹಂಸರ ಶತಮಾನೋತ್ಸವ ಕಾರ್ಯಕ್ರಮ ನಡೆದಾಗ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಡಾ.ಶಿವರಾಮ ಕಾರಂತರು ಬಂದಿದ್ದರಂತೆ.[1] ಈ ಸಂದರ್ಭದಲ್ಲಿ ರಾಮಚಂದ್ರನ ಬಾಯಿಂದ ಲಾವಣಿಗಳನ್ನು ಆಲಿಸಿದ ಕಾರಂತರು ತಮ್ಮನ್ನು ತಾವೇ ಮರೆತರು. ಅಷ್ಟೇ ಅಲ್ಲ ಲಾವಣಿಯ ಲಾವಣ್ಯ, ಇಲ್ಲಿಯ ಸಾಹಿತ್ಯ ಮೆಚ್ಚಿ ರಾಮಚಂದ್ರನನ್ನು ತಮ್ಮ ಪುತ್ರರಿಗೂ ಕರೆಸಿ ಹಾಡಿಸಿ ಕೇಳಿ ಸಂತೋಷಪಟ್ಟರು. ಸದರಿ ಘಟನೆಯನ್ನು ಅವರು ತಮ್ಮ “ಹುಚ್ಚು ಮನಸ್ಸಿನ ಹತ್ತು ಮುಖಗಳು” (ಪುಟ.ನಂ.೧೪೧) ಪುಸ್ತಕದಲ್ಲಿ ದಾಖಲಿಸಿದ್ದಾರೆ. ರಾಮಚಂದ್ರನ ಲಾವಣಿಗಳನ್ನು ಕೇಳಲು ಆ ದಿನ ಕಲೆತ ಹಿಂದೂ ಮುಸಲ್ಮಾನರ ಒಕ್ಕೂಟವು ನನ್ನ ಸ್ಮರಣೆಯಲ್ಲಿ ಬಹಳ ಕಾಲ ಇತ್ತು. ನಾನು ಮುಂದೊಮ್ಮೆ ಅವನನ್ನು ನಮ್ಮೂರಿಗೂ ಕರೆಸಿಕೊಂಡು ಹಾಡಿಸಿ ಕೇಳಿದ್ದೆ. ಒಮ್ಮೆ ಅವನಿಂದ ನಮ್ಮ ಶಾಲೆಯ ಹುಡುಗರಿಗೂ ಲಾವಣಿಗಳನ್ನು ಕಲಿಸುವ ಏರ್ಪಾಟು ಮಾಡಿದ್ದೆ” ಅವರ ಈ ನುಡಿಗಳು ರಾಮಚಂದ್ರನ ಅಗ್ಗಳಿಕೆ ಹಾಗೂ ಲಾವಣಿ ಸಾಹಿತ್ಯದ ಹಿರಿಮೆಯನ್ನು ಸ್ಪಷ್ಟೀಕರಿಸುತ್ತವೆ. ರಾಮಚಂದ್ರನ ಜೊತೆಯಾಗಿ ಅವರ ಸಹೋದರ ಓಲೇಕಾರ ಮಾದಣ್ಣನು ಅಷ್ಟೇ ಸೊಗಸಾಗಿ ಲಾವಣಿ ಹಾಡಬಲ್ಲವನಾಗಿದ್ದ. ರಾಮಚಂದ್ರನನ್ನು ಪಟೇಲ ಧೋಲಾ ಸಾಹೇಬರೊಂದಿಗೆ ಪತ್ರವ್ಯವಹಾರ ಮಾಡಿದ ವಿಷಯವನ್ನು ಡಾ.ಗುರುಲಿಂಗ ಕಾಪಸೆ ಅವರು “ಪಟೇಲ ಧೋಲಾ ಸಾಹೇಭ” ಎಂಬ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ.[2]

ಕನ್ನಡ ಮರಾಠಿ ಎರಡೂ ಭಾಷೆಗಳಲ್ಲಿ ಮಾತನಾಡಬಲ್ಲ ರಾಮಚಂದ್ರ ಅನಕ್ಷರಸ್ತನಾಗಿದ್ದ. ದುಸ್ಕಳಬಿದ್ದಾಗ ನಾಲ್ಕೆಂಟುವರ್ಷ ಮಹಾರಾಷ್ಟ್ರದ ಪುಣೆಗೆ ಹೊಟ್ಟೆತುಂಬಿಸಿಕೊಳ್ಳಲು ಹೋಗಬೇಕಾಗುತ್ತದೆ. ಪುಣೆಯ ಗೋಲಟೆಕಡಿ, ನಿಗಡಿ, ವಿಠಲ್‌ಚೌಕಗಳಲ್ಲಿ (ಕನ್ನಡಿಗರಿರುವ ಸ್ಥಳ) ಲಾವಣಿ ಹಾಡಿ ಅಲ್ಲಿರುವವರಿಗೆ ಖುಷಿಪಡಿಸಿದಲ್ಲದೆ ಅವರಿಂದ ಕಾಣಿಕೆಯನ್ನು ಪಡೆದಿರುತ್ತಾರೆ. ಇವರ ಹಾಡಿಕೆಯನ್ನು ಮೆಚ್ಚಿದ ಪುಣಾದಲ್ಲಿರುವ ಹಲಸಂಗಿಯ ಗಾಡಿವಡ್ಡರ ಗೋಪಾಲ (ಗುತ್ತಿಗೆದಾರ) ತಮ್ಮ ಮನೆಗೆ ಕರೆಸಿಕೊಂಡು ತುಂಬ ಆಹೇರಿ ಮಾಡಿದ್ದರೆಂದು[3] ಈಗ ಹಾಡಕಿ ಮಾಡುತ್ತಿರುವ ಭೀಮಣ್ಣ ಲಾಯಪ್ಪ ತಳವಾರವರು ನೆನೆಸಿಕೊಳ್ಳುತ್ತಾರೆ.

ರಾಮಚಂದ್ರ ಧ್ವನಿ ಏರಿಸಿ ಹಾಡಲು ನಿಂತರೆ ಹಲಸಂಗಿಯ ಮೈಲುದೂರದ ಅಡವಿಯಲ್ಲಿಯ ನವಿಲುಗಳು ಎಚ್ಚರಗೊಂಡು ಅವು ತಮ್ಮ ನಾಟ್ಯದಲ್ಲಿ ತೊಡಗುತ್ತಿದ್ದ ದೃಶ್ಯ ಸರ್ವೆ ಸಾಮಾನ್ಯವಾಗಿರುತ್ತಿತ್ತು. ಇವನ ಧ್ವನಿ ಜನಗಳಿಗಷ್ಟೇ ಅಲ್ಲ ಸುತ್ತಲ ಪಶುಪಕ್ಷಿಗಳಿಗೂ ಕೇಳಿಸಿ ಅವು ಚಿಲಿಪಿಲಿ ಗುಟ್ಟುತ್ತಿದ್ದವಂತೆ.

ಅಷ್ಟೊರ ಮಾತಿದು ನಿಷ್ಟೂರ ಹೇಳತಿನಿ |
ಬಿಟ್ಟಿಲ್ಲ ತುಂಬಿತು ಜಗವೆಲ್ಲ |
ಹೊಟ್ಟೆಯಂತ ವೈರಿ ಯಾವುದಿಲ್ಲ |
ರೊಟ್ಟಿಯಂತ ಮೈತರು ಇಲ್ಲ |
ಗೋಪಾಲ ದುರದುಂಡಿ
(
ಅಷ್ಟೂರ ಮಾತಿದು)[4]

ಪಂಚಮಿ ಮುಂದ ಇರಚ್ಚೆಗಾಗಿ | ಹಂಚಿಕೆ ಹಕತಾಳ |
ಸಂಜೀಗಿ ನಮ್ಮವರು ಬರತಾರೂ | ಏನು ಮಾಡುತಾರೋ |
ಗೊಂಡ್ಯಾದ ಹಣೆಪಟ್ಟಿನ | ಹಂಡಹೋರಿ ನನಗಾಗಿ |
ಕೊಂಡಾರ ನಮ್ಮವರು ತರತಾರೋ | ಇಂದ ಬರತಾರೋ |
ನ್ಯಾಮಣ್ಣ (ನಾಗರ ಪಂಚಮಿ)[5]

ತೆರದಾಳ ಭಾಗದ ಈ ಲಾವಣಿಗಳು ಹಲಸಂಗಿ ಭಾಗದಲ್ಲಿ ಇನ್ನು ಕೆಲವೊಬ್ಬರ ನಾಲಿಗೆಯಲ್ಲಿ ನಲಿದಾಡಲು ಕಾರಣ ಬಹುಶಃ ರಾಮಚಂದ್ರನೇ ಇರಬೇಕು. ಹಲಸಂಗಿಯು ಮಹಾರಾಷ್ಟ್ರದ ಗಡಿಭಾಗಕ್ಕೇ ಸಮೀಪವಾಗಿರುವುದರಿಂದ ಮರಾಠಿಯ ಸಂಪರ್ಕ ರಾಮಚಂದ್ರನಿಗೆ ಬಂದು, ಮರಾಠಿ ವೀರರಸ ಪ್ರಧಾನವಾದ ಒಂದೆರಡು ಲಾವಣಿ ಹಾಡುಗಳನ್ನು ಆಗ ಹಾಡಿದ್ದನೆಂದು ಕಲ್ಲಣ್ಣ ಯಳಸಂಗಿಯವರು ನಾನು ಕ್ಷೇತ್ರಕಾರ್ಯಕ್ಕೆ ಹೋದಾಗ ಹೇಳಿದರು.[6] ಅದಕ್ಕೆ ಯಾವುದೇ ದಾಖಲೆಗಳಿಲ್ಲ. ಕೇವಲ ಊಹೆ ಎನ್ನುವ ರಿತಿಯಲ್ಲಿ ಅವರು ಮಾತನಾಡಿದರು.

ಖಾಜಾಭಾಯಿಯ ಶಿಷ್ಯರಾಗಿ ಇಷ್ಟೆಲ್ಲಾ ಬೆಳೆದ ರಾಮಚಂದ್ರ ಓಲೇಕಾರ ಅವನ ಲಾವಣಿಗಳನ್ನು ಅವನದೇ ಧ್ವನಿ ಎನ್ನುವಂತೆ ಹಾಡುವುದರ ಮುಖಾಂತರ ಮುಂದಿನ ಜನಾಂಗಕ್ಕೆ ಲಾವಣಿಗಳನ್ನು ತಲುಪಿಸಿದ ಬಹಳ ಮಹತ್ವದ ಹಾಡುಗಾರನಾಗಿ ಈ ಭಾಗದಲ್ಲಿ ಗುರ್ತಿಸಿಕೊಳ್ಳುತ್ತಾನೆ. ನಾಗರಪಂಚಮಿ ಅವನ ಮೆಚ್ಚುಗೆಯ ಲಾವಣಿಯಾಗಿದೆ.

ನಾಗರ ಪಂಚಮಿ

೧ನೇ ಚೌಕ

ಪಂಚಮಿ ಮುಂದ ಇರಟ್ಟೆಗಾಗಿ | ಹಂಚೀಕೆ ಹಾಕತಾಳ
ಸಂಜೀಗಿ ನಮ್ಮವರು ಬರತಾರೋ | ಏನು ಮಾಡತಾರೋ |
ಗೊಂಡ್ಯಾದ ಹಣಿಪಟ್ಟಿನ | ಹಂಡಹೋರಿ ನನಗಾಗಿ |
ಕೊಂಡಾರ ನಮ್ಮವರು ತರತಾರೋ | ಇಂದ ಬರತಾರೋ ||

ನಾಗರ ಪಂಚಮಿ | ನಾಡೀಗಿ ದೊಡ್ಡದು |
ನಾಗೇಶಿಗ್ಹಾಲಾ ಎರಯುವುದು | ಒಂದ್ಹೊತ್ತಿರುವುದು |
ಎಂದಿದ್ದರೂ ನಮ್ಮವರು | ಮುಂದಾಗಿ ಬರೂದಿಲ್ಲ |
ಸಂಜೀಗಿ ನನ್ನ ಎರೆಯುವುದು | ಅಳ್ಳ ಹುರಿಯುವುದು ||

ಹಬ್ಬದ ದಿನ ಹರೆಹೊತ್ತಿಲೆ | ಜತ್ತಾಗಿ ಗೆಳತೇರು |
ಹೊತ್ತೇರಿ ನೀರಾ ತರುsವದು | ಭಾಳ ಮೆರೆಯುವುದು |
ಇಳಿಹೊತ್ತಿನ ಕಡದಿಂದ | ಗೆಳೆತೇರ ಕೂಡಿ ಹೋಗಿ
ಜೋಕಾಲಿ ಆಡಿ ಬಂದು ದಣಿಯುವುದು | ಭಾಳ ಉಣ್ಣುವದು ||

(ಇಳುವು) ಹಸರ ಡಪಳಾ | ಸೀರಿ ಪಪ್ಪಳಾ ಜರಕಾಟೀ
ನಿತ್ತ ನಿಲಗಿ ತೀಡಿಕ್ಕಿ ತುದಿಗಟ್ಟಿ ||

ಮಗ್ಗಿ ತಗಿಸಿ | ಒಗಸಿದ ಕುಬಸ ಕರವತಕಾಟೀ
ಹಂಗೇ ಇಟ್ಟಿದಿನವ್ವ ಗಂಟಿನಾಗ ಕಟ್ಟಿ ||

ಚಂದ ಚಂದ ಒಂದೇ ವಾರೀಗಿ ಗೆಳತೇರು ಹೊಸ ಧಾಟಿ
ಅದರಾಗೊಬ್ಬಾಕಿ ನನ್ನ ಸವತಿ ಖೊಟ್ಟಿ ||

(ಏರು) ಜೋಟಿಯವರು ಗೆಳತೇರು | ನೋಡುವರು ನನ್ನ ದಾರಿ
ನಾನಾ ತರದ ಸೀರಿ ಉಡುವವರು | ನನ್ನ ಕರೆವವರು ||

ಗೊಂಡ್ಯಾದ ಹಣಿಪಟ್ಟಿನ | ಹಂಡ ಹೋರಿ ನನಗಾಗಿ
ಕೊಂಡಾರ ನಮ್ಮವರ ತರತಾರೋ | ಇಂದ ಬರತಾರೋ ||

ಗುಮ್ಮಟದ ಲಾಯಪ್ಪ

ಈತನ ಹೆಸರು ಲಾಯಪ್ಪ ತಳವಾರ. ಲಾಯಪ್ಪ ಮನಗೇನಿ ಮತ್ತು ಸತ್ಯವ್ವ ಮಗನಾಗಿ ೨೨.೭.೧೯೨೨ ರಂದು ಹಲಸಂಗಿಯಲ್ಲಿ ಜನಿಸಿದನು. ಊರ ಹೊರಗೆ ಟೊಪನ್‌ಭಾಷಾನ ಮಜಾರ್‌ದ ಹತ್ತಿರ ಇವನ ಮನೆ ಇದೆ (ಅವರ ಹೊಲದಲ್ಲಿ). ಈ ಮಜಾರವು ಗೋಲಗುಮ್ಮಟ್ಟದ ಹಾಗೆ ದೊಡ್ಡದಾಗ ಗುಮ್ಮಟ ಹೊಂದಿದೆ. ಗುಮ್ಮಟ ಇರುವ ಮಜಾರ್‌ದಲ್ಲಿ ಈತ ವಾಸಿಸುತ್ತಿದ್ದರಿಂದ ಇವನಿಗೆ ಗುಮ್ಮಟದ ಲಾಯಪ್ಪ ಎಂದು ಕರೆಯುತ್ತಿದ್ದರು. ಮುಂದೆ ಅದೇ ಹೆಸರು ಖಾಯಂ ಆಯಿತು. ಇವನು ಕನ್ನಡ ೫ನೇ ತರಗತಿಯವರೆಗೆ ಓದಿದವನಾಗಿದ್ದ.

ಖಾಜಾಭಾಯಿಯ ಇನ್ನೊಬ್ಬ ಶಿಷ್ಯ[7] ಮೌಲಾ ರಾಮಚಂದ್ರ’ (೧೯೦೨-೧೯೭೪) ಇದ್ದ ಆಗಾಗ ಲಾವಣಿ ಗೀಗೀಗಳನ್ನು ಹಾಡುತ್ತಿದ್ದ. ಮೌಲಾ ಪಿಂಜಾರ (ತಾಂಬೊಳಿ) ಹಾಗೂ ರಾಮಚಂದ್ರ ವಾಲೀಕಾರ (ತಳವಾರ). ಈ ಇಬ್ಬರ ಸೇರಿ ಮೌಲಾ ರಾಮಚಂದ್ರ ವಾಲೀಕಾರ ಎಂಬ ಒಂದೇ ಹೆಸರಿನಿಂದ ಕೆಲವೇ ಹಾಡು ರಚಿಸಿದರು, ಸ್ವಲ್ಪ ಸಮಯದಲ್ಲಿ. ಲಾವಣಿ ಮೇಳ ಇತಿಹಾಸದಲ್ಲಿ ಅಷ್ಟಾಗಿ ಗುರ್ತಿಸಿಕೊಂಡಿಲ್ಲ. ಶಿವರಾಮ ಕಾರಂತರು ತಮ್ಮ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಪುಸ್ತಕದಲ್ಲಿ ದಾಖಲಿಸಿದ ಓಲೇಕಾರ ರಾಮಚಂದ್ರ ಈತನಲ್ಲ. ಈ ಮೌಲಾ ರಾಮಚಂದ್ರ ಗುಮ್ಮಟದ ಲಾಯಪ್ಪನಿಗೆ ಲಾವಣಿ ಕಲಿಸಿದ ಗುರುವಾಗಿದ್ದನು.

ಗುಮ್ಮಟದ ಲಾಯಪ್ಪ ಕವಿಗಾರ ಅಲ್ಲ. ಅವನು ಸಹ ಓಲೇಕಾರ ರಾಮಚಂದ್ರನ ಹಾಗೆ ಲಾವಣಿಗಳನ್ನು ಬಹಳ ಸೊಗಸಾಗಿ ಪ್ರಾಸಬದ್ಧವಾಗಿ ಹಾಡುತ್ತಿದ್ದ ಹಲಸಂಗಿ ಭಾಗದ ಲಾವಣಿಕಾರರ ಲಾವಣಿಗಳನ್ನಲ್ಲದೆ, ಬೀಬೀ ಇಂಗಳಿಗಿಯ ಹಸನನ ಹಾಡು, ಮರಗೂರ ಕಮಾಲನ ಹಾಡುಗಳನ್ನು ತನ್ನ ಮೇಳದಲ್ಲಿ ಹೇಳುತ್ತಿದ್ದನು. ಇವನ ವೃತ್ತಿಯೋ ಲಾವಣಿ ಗೀ ಗೀ ಹಾಡುವುದಾಗಿತ್ತು. ಮುಂದೆ ಇವನು ಹರದೇಶಿ ಪರವಾಗಿ ಹಾಡುತ್ತಾ ಅಲ್ಲಲ್ಲಿ ಸವಾಲು ಜವಾಬುಗಳಲ್ಲಿ ಭಾಗವಹಿಸುತ್ತಾ ಬಂದ. ಒಮ್ಮೆ ಈ ನಾಡಿನಲ್ಲಿ ಬರಗಾಲ ಬಿದ್ದಾಗ ಪುಣೆ, ಕೊಲ್ಲಾಪುರಗಳಿಗೆ ದುಡಿಯಲು ಹೋಗಿ ಅಲ್ಲಿ ದುಡಿತದೊಂದಿಗೆ ಲಾವಣಿಯನ್ನು ಹಾಡಿ ಹಣ ಪಡೆದು ನಮ್ಮನ್ನು ಸಾಕಿ ಬೆಳೆಸಿದ[8] ಎಂದು ಅವರ ಮಗ ಭೀಮಣ್ಣ ತಳವಾರ (ಗುಮ್ಮಟದ) ಹೇಳುತ್ತಾರೆ. ಮೌಲಾ ರಾಮಚಂದ್ರ ಹಲವಾರು ಜನರಿಗೆ ಈ ಹಾಡಿಕೆ ಹೇಳಿಕೊಟ್ಟಿದ್ದರೂ ಅವರ ಶಿಷ್ಯಂದಿರಲ್ಲಿ ಲಾಯಪ್ಪನದೇ ಹಿರಿಯ ಸ್ಥಾನ.

ಬೀಬೀ ಇಮಗಳಗಿಯ ಸಂಪ್ರದಾಯದ ಚಾಂದಕವಚೆ ನಬಿಸಾಬನಿಗೆ, ಈತನಿಗೆ ಆಗಾಗ ಈ ಭಾಗಗಳಲ್ಲಿ ಸ್ಪರ್ಧೆ ಏರ್ಪಡುತ್ತಿತ್ತು. ಇಂಡಿ ತಾಲ್ಲೂಕಿನ ಮಸಳಿಯಲ್ಲಿ ಮೂರು ರಾತ್ರಿ ಮೂರು ಹಗಲು ಹಾಡಿಕೆ ನಡೆದಾಗ ಗುಮ್ಮಟದ ಲಾಯಪ್ಪನು ಹರದೇಶಿ ಪರವಾಗಿ ಹಾಡಿ ಗೆದ್ದಿದ್ದನಂತೆ[9] ಊರವರು ಆವಾಗ ಖುಷಿಗೊಂಡು ನೋಟಿನ ಹಾರ ಹಾಕಿದ್ದರು. ಸವಾಲ್ ಜವಾಬ್ ಹಾಡುವಾಗ ಒಳ್ಳೆಯ ಹಾಡನ್ನು ಹಾಡಿದರೆ ಜನ ಸಂತೋಷಗೊಂಡು ಬಕ್ಷೀಸು ಎಂದು ಸಾಕಷ್ಟು ಹಣ ಕೊಡುತ್ತಿದ್ದರು.

ಲಾಯಪ್ಪ ತನ್ನ ಹಾಡಿನ ಶ್ರೇಷ್ಠತೆಯನ್ನು ಹಲಸಂಗಿ ಭಾಗದಲ್ಲಿ ಅಲ್ಲದೆ ಮಹಾರಾಷ್ಟ್ರದ ಕೆಲ ಪ್ರದೇಶಗಳಲ್ಲಿ ಸ್ತಾಪಿಸಿ ಬಂದನು. ತನ್ನ ಹರದೇಶಿ ಸಂಪ್ರದಾಯವನ್ನು ಮುಂದುವರಿಸಿ ಕೊಂಡು ಬಂದು ಅದನ್ನು ಸಮೃದ್ಧಗೊಳಿಸಲು ಯೋಜನೆ ಹಾಕಿದನು. ತರುಣರಿಗೆ ಕಲಿಸುವುದಲ್ಲದೆ ಮಗ ಭೀಮಣ್ಣನಿಗೆ ತನ್ನ ಸ್ಥಿರ ಆಸ್ತಿಯನ್ನು ಬಿಟ್ಟುಕೊಟ್ಟನು. ಆಸ್ತಿ ಬಿಟ್ಟುಕೊಡುವಾಗ ಗೀಗೀ ಹಾಡಿನ ಸಂಪತ್ತು ಡಪ್ಪು, ತಾಳಗಳನ್ನು ನೀಡಿ ಇದನ್ನು ನಿನ್ನ ಆಸ್ತಿಯೇ ಎಂದು ಹೇಳಿದನು.[10] ಕನ್ನಡ ಲಾವಣಿ ಹಾಡುಗಳ ಕಣಜ ಇಂದು ಹಲಸಂಗಿ ಭಾಗದಲ್ಲಿ ಒಬ್ಬರ ಬಾಯಿಯಿಂದ ಒಬ್ಬರ ಬಾಯಿಗೆ ಹರಿದು ಬರುವಲ್ಲಿ ಬಹಳಷ್ಟು ಲಾವಣಿಕಾರರ ಶ್ರಮ ಇದೆ ಅಂದರೆ ಅಲ್ಲಿ ಗುಮ್ಮಟದ ಲಾಯಪ್ಪನ ಹೆಸರು ಪ್ರಮುಖವಾಗಿ ಸೇರಿಸಿಕೊಳ್ಳುತ್ತದೆ.

ಯಳಮೇಲಿಯ ಭೀಮ-ಬಸಯ್ಯ ರಚಿಸಿದ ‘ಒಂದು ಪ್ರಸಿದ್ಧ ಹಾಡು ಹೇಳೊದು ಖರೆ’[11]ಯನ್ನು ಲಾಯಪ್ಪ ತನ್ನ ಜೀವನದುದ್ದಕ್ಕೂ ಬಹಳಷ್ಟು ವೇದಿಕೆಗಳಲ್ಲಿ ಊರುಗಳಲ್ಲಿ ಹಾಡುತ್ತಿದ್ದ. ೧೯೯೪ ತಾನು ಜೀವಿಸಿರುವವರೆಗೂ ಅದನ್ನು ತನ್ನ ದಪ್ತಾರದಲ್ಲಿರಿಸಿಕೊಂಡಿದ್ದ. ಓದುಗರ ಅನುಕೂಲಕ್ಕಾಗಿ ಆ ಹಾಡನ್ನು ಇಲ್ಲಿ ಪೂರ್ತಿ ಮುದ್ರಿಸಿಲಾಗಿದೆ.

ಹೇಳೊದು ಖರೆ

ಸೂತ್ರದಾರ ಬಂದು ಸ್ತೋತ್ರ ಮಾಡತೀನಿ ಪವಿತ್ರ ಮಾಡು ಪರಮಾತ್ಮ ಖರೆ |
ಮಿತ್ರ ಕೇಳೊ ನನ್ನ ಹತ್ರ ಬಾರೊ ಇನ್ನ ಉತ್ರ ಸಭಾದಾಗ ಹೇಳೂದು ಖರೆ ||
ತ್ರೀ ಭುವನದಾಗ ತ್ರಿಶೂಲ ಎರಡು ತ್ರಿಪೂರ ಸಂಹಾರ ಮಾಡಿದ್ದು ಖರೆ |
ತ್ರಿದಳ ಪತ್ರ ತ್ರೀಮೂರ್ತಿ ತ್ರಿಕಾಲ ಪೂಜಾ ಆಗುದು ಖರೆ || ||

ಕಚ್ಚಾ ಕವಿಯಲ್ಲಾ ಮುಚ್ಚಿ ಇಡುದಿಲ್ಲಾ ಬಿಚ್ಚಿ ಸಭಾದಾಗ ಹೇಳೂದ ಖರೆ |
ಅಚ್ಚಾ ಉಚ್ಚಾ ಮಾಡತಾವ ಉಚ್ಚಿ ಹಾದ್ಯಾಗ್ಹೊಯ್ಯತಾವ ಲುಚ್ಯಾ ಹೆಂಗಸರ
ಮಾತಲ್ಲೊ ಖರೆ || ||

ಚ್ಯಾಲ: ಸರಸ್ವತಿ ಕತಂತರ ಹೇಳತಿನಿ ಜರಾ ಕೇಳು |
ನಾಲಿಗಿ ಮಾಡಿ ಎರಡು ಹೋಳು || ||

ಪಾಪಂಬುದು ಕೆಟ್ಟ ಆದ ಕೇಳಾಕ ನಿವಳು |
ನಿವಳದಲ್ಲಿ ಆಗ್ಯಾದ ಕೇಳ ಇನ್ನ ಹೋಳು || ||

ಏರು: ಮಂತ್ರ ಅಲ್ಲ ತಮ್ಮ ಯಂತ್ರವಿಲ್ಲದ ಅಂತರಲೆ ಸೂರ್ಯತಿರುಗುದು ಖರೆ ||

೧ನೇ ಚೌಕ

ಎಂಟು ಅವತಾರಕ ಕೃಷ್ಣ ಹುಟ್ಟಿದಾ ಯಶೋಧನ ಬಲ್ಲಿ ಬಂದದ್ದು ಖರೇ
ತಂದಿ ತಾಯಿ ಬಂಧಿಖಾನೆ ಬಿದ್ದು ಮಾವ ಕಂಸನ ಕೊಂದದ್ದು ಖರೆ || ||

ಚಿಲ್ಲಾಳನ ಪುಣ್ಯದಿಂದ ಚಂಗಳೆವ್ವ ತಾನು ಕೈಲಾಸಕ ಹೋಗಿದ್ದು ಖರೆ |
ಬೇಡಿದ ಶಿವನಿಗೆ ನೀಡೀದಂದರ ತೊಗಲಬವಲಿ ಮಾಡಿದ್ದು ಖರೆ || ||

ಐರಾವಣ ಮಹಿರಾವಣ ಗುಡಾ ಆಗ ಲಡಾಯಿ ಮಾಡಿದ್ದು ಖರೆ |
ಹುಲಿಯಂಥ ಗಂಡನ ಹೊಡಿಸಿ ನಿಲದೇವಿ ಬಲ್ಲಿದ ರಾಮಗ ಕೂಡಿದ್ದು ಖರೆ || ||

ಚಾಲ: ಗೌತುಮನ ಶಾಪಕ ಅಹಿಲ್ಯಾದೇವಿ ಕಲ್ಲ ಆದಾಳು |
ರಾಮನ ಪಾದದಿಂದ ಉದ್ಧಾರಾಗಿ ಎದ್ದಾಳು || ||
ಮಂಡಿ ಬಿಟ್ಟು ತಿರುಗುವ ಹೆಂಗಸರಗಿ ಬಾಳ ಬಂತು ಗೋಳು
ಹೇಳತೀನಿ ನಾನು ಸರಳು || ||

ಏರು : ಸುರರೊಳಗ ಅರ್ಜುನಗ ರಂಭಾ ಮನಸ ಮಾಡಿದ್ದು ಖರೆ ||

೨ನೇ ಚೌಕ

ದುರ್ವಾಸ ಮುನಿ ಒಬ್ಬ ದೂರ ತಪಾ ಮಾಡುತ ಕುಂತಿದ್ದು ಖರೆ |
ಗುಂಗಸೇರಿ ಅವಗ ಭಂಗ ಪಡಿಸಬೇಕೆಂದು ಮಂಗರಂಡಿ ಕುಣದಿದ್ದು ಖರೆ || ||
ನಾಚ ಮಾಡಿ ಅವನ ಮೆಚ್ಚಿಸಬೇಕೆಂದು ಮಂಗ ರಂಬಾ ಕುಣಿದಿದ್ದು ಖರೇ
ಕೋಪ ಬಂದು ಮುನಿ ಶಾಪ ಕೊಟ್ಟಿದಾ ಪಾಪದೊಳಗ ರಂಬಾ ಆಗಿದ್ದು ಖರೆ | |

ಚಾಲ : ಋಷಿಶಾಪ ಕೊಟ್ಟಿದ್ದು ಹುಸಿ ಹೋಗೂದಿಲ್ಲಾ ಪೂರಾ |
ಹೊತ್ತಮುಳಗಿ ಗುಡ್ಡ ಗಂವಾರಾ || ||

ಉಶ್ಶಾಪ ಬೇಡತಾಳ ಹಲಬಿ ನಾನಾಪ್ರಕಾರಾ |
ಮೂರುವರಿ ವಜ್ರ ಯಾವಾಗ ಕುಡಾಂವ ಶಾಹಿರಾ || ||

ಇದು ತಿಳಿಸಿ ಹೇಳ್ಯಾಕ ಮಜಕೂರಾ |
ರಹಿವಾಸ ಯಳಮೇಲಿ ಭೀಮಬಸಯ್ಯ ಮಾಡಿದ ಕವಿಗಾರಾ ||
ಏರು : ಧಾತ್ರಿಯಲ್ಲಿ ಜಾತ್ರಿಯಾಗ ತಾವು ಪುತ್ರ ಬಸಯ್ಯ ಹೇಳಿದ್ದು ಖರೆ |

ಮಲಕಾರಿ ಕಟ್ಟಿಮನಿ

ಇವನ ಹೆಸರು ಮಲಕಾರಿ ಕಟ್ಟಿಮನಿ. ತೀರ್ಥಪ್ಪ ಶರಣವ್ವರ ಮಗನಾಗಿ ಮಲಕಾರಿಯು ಆಗಸ್ಟ್ ತಿಂಗಳ ೧೯೪೨ರಲ್ಲಿ ಹಲಸಂಗಿಯಲ್ಲಿ ಜನಿಸಿದನು. ಈತನು ಸಮಗಾರ ಜಾತಿಯವನಾಗಿದ್ದ. ಮನೆಯಲ್ಲಿ ಕಡುಬಡತನವಿತ್ತು. ತನಗೆ ೧೨ ವರ್ಷವಾದಾಗ ‘ಮರಗೂರ ಕಮಾಲ’ನ ಹತ್ತಿರ ಜೀತಕ್ಕೆ ನಿಂತನು.

ಮರಗೂರ ಕಮಾಲನೂ ಒಬ್ಬ ಲಾವಣಿ ಹಾಡುಗಾರನಾಗಿದ್ದನು (ಸುಮಾರು ೧೮೯೫-೧೯೮೦). ಹಲಸಂಗಿ ಭಾಗದ ಅನೇಕ ಹಾಡುಗಳನ್ನು ಈತ ಹಾಡಿ ಜನಪ್ರಿಯಗೊಳಿಸಿದವನಾಗಿದ್ದ. ಈತನು ಸ್ವತಃ ಕವಿಯೂ ಆಗಿದ್ದನೆಂದು ಕೆಲವರು ಹೇಳುತ್ತಾರೆ. ಮನೆಕಡೆಯಿಂದ ತೋಟ ಸಾಕಷ್ಟು ಜಮೀನು ಹೊಂದಿದ್ದ. ಹಾಡಿಕೆಯನ್ನು ತನ್ನ ಆನಂದ ಮತ್ತು ಹವ್ಯಾಸಕ್ಕಾಗಿ ಆಗಾಗ ಹಾಡುತ್ತಿದ್ದ. ಇವನ ಹೊಲದಲ್ಲಿ ಜೀತಕ್ಕೆ ಇದ್ದ ಮಲಕಾರಿಯ ಆಸಕ್ತಿಯನ್ನು ಗುರ್ತಿಸಿ ಅವನಿಗೆ ಹಾಡು ಕಂಠಪಾಠ ಮಾಡಿಸಿದ ಗುರುವಾದನು. ಕಮಾಲನು ತನ್ನೆಲ್ಲಾ ಲಾವಣಿ ಸಂಪತ್ತನ್ನು ಮಲಕಾರಿಗೆ ಪ್ರೀತಿಯಿಂದ ಧಾರೆ ಎರೆದನು. ಈ ಸಂಬಂಧವು ‘ಒಡೆಯ ಅಥವಾ ಆಳುಮಗ’ ಅಂತರವನ್ನು ತೆಗೆದುಹಾಕಿ ಇಬ್ಬರ ನಡುವೆ ಅನ್ಯೋನ್ಯ ಬಾಂಧವ್ಯ ಏರ್ಪಟ್ಟಿತ್ತು. ದಲಿತನಾದ ಮಲಕಾರಿಗೆ ಇದರಿಂದ ಅಂದು ಸಮಾಜದಲ್ಲಿ ವಿಶೇಷ ಗೌರವ ಸಿಗುತ್ತಿತ್ತು. ಊರ ಹಿರಿಯರು, ಮುಖಂಡರು ಇವನನ್ನು ಸಮಾನ ರೀತಿಯಿಂದ ಕಾಣುತ್ತಿದ್ದರು. ಮಲಕಾರಿ ಕಟ್ಟಿಮನಿ ಅನಕ್ಷರಸ್ತನಾಗಿದ್ದರೂ ಜ್ಞಾಪಕಶಕ್ತಿ, ಹಾಡಿನ ಏರು-ಇಳುವಿಕೆಯಲ್ಲಿ ಹೇಗೆ ಧ್ವನಿ ಸಡಿಲಿಸಬೇಕು ಎಂಬುದನ್ನು ತಕ್ಷಣ ಹಿಡಿದುಕೊಳ್ಳಬಲ್ಲವನಾಗಿದ್ದನು.

ಹಾಡು ಕಲಿಸಲು ಕಮಾಲ, ಹಾಡು ಕಲಿಯಲು ಮಲಕಾರಿ ತೋಟದ ಒಂದು ಮೂಲೆಯಲ್ಲಿ ಕುಳಿತರೆ ಎಷ್ಟೋ ಸಲ ರೈತಾಪಿ ಕೆಲಸ ಮರೆಯುತ್ತಿದ್ದರು[12] ಎಂದು ಮಲಕಾರಿಯ ಸಹೋದರ ತುಕಾರಾಂ ತೀರ್ಥಪ್ಪ ಕಟ್ಟೀಮನಿ ನಿವೃತ್ತ ಶಿಕ್ಷಕರು, ಸೊಲ್ಲಾಪುರ ನೆನೆಸಿಕೊಳ್ಳುತ್ತಾರೆ.[13] “ನಮ್ಮ ಮಲಕಾರಿದು ಎಂಥಾ ದನಿರಿs…ಸಾಹೇಬ್ರ! ಅಂವಾ ನಮ್ಮ ಜಾತ್ಯಾಗ ಹುಟ್ಟಿದ ತಪ್ಪಾ. ಕಮಾಲ್ನ ಹಾಡಾ ಹಾಡಾಕ ನಿಂತ್ರss… ಅವುನೌನ ಗಳಿಗ್ಯಾಗ ಗುಂಪ್ಮಂದಿ ಸೇರಬೇಕು. ಹಾs… ಹಾಂs… ಗs…. ಢಣ್ ಅಂತ ಟಪ್ಪ ಬಡಿದ್ರ, ಮಲಕಾರಿ ಹಾಡಕಿ ಚಾಲು ಅದು ನೋಡ್ರಿ”[14] ಅಂತ ಜನಾ ಮಾತಾಡತಿದ್ರು. ಈತ ಮರಗೂರ ಕಮಾಲ, ಖಾಜಾಭಾಯಿ, ಸಂಗೂರಾಯಪ್ಪ, ಸಿದ್ಧು -ಶಿವಲಿಂಗ ಅಲ್ಲದೆ ತೇರದಾಳ ಭಾಗದ ಲಾವಣಿಕಾರರಾದ ನಾನಾಸಾಹೇಬ ಗೋಪಾಳ ದುರದಂಡಿ ಅವರೆಲ್ಲರ ಹಾಡುಗಳನ್ನು ಹಾಡುತ್ತಿದ್ದ. ಹಾಡಿನ ಕಲೆ ಕರಗತವಾದ ಮೇಲೆ ಸ್ಥಳೀಯ ಸಮಸ್ಯೆಗಳಾದ ಕುಟುಂಬ ಯೋಜನೆ, ನಿರಕ್ಷರತೆ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಚಡಚಣಕ್ಕೆ ಹೋಗಿ ಸಿಂಪಿ ಲಿಂಗಣ್ಣನವರಿಂದ ಪಡೆದುಕೊಂಡು ಬಂದಿದ್ದರು. ಆದರೆ ಹಾಡು ರಚಿಸಿದ್ದರ ಬಗ್ಗೆ ಎಲ್ಲಿಯೂ ಮಾಹಿತಿ ಇಲ್ಲ. ಮತ್ತು ಮಲಕಾರಿಯು ಹಲಸಂಗಿ ಊರು ಬಿಟ್ಟು ಲಾವಣಿಗಳನ್ನು ಹಾಡಲು ಬೇರೆ ಊರುಗಳಿಗೆ ಹೋದ ಸನ್ನಿವೇಶಗಳು ಬಹಳ ಕಡಿಮೆ. ಒಂದು ಸಲ ಈತ ತನ್ನ ಸ್ವಸಂತೋಷಕ್ಕಾಗಿ ಹೊಲಗಳ ಗಿಡಗಳ ಕೆಳಗೆ ಹಾಡುತ್ತ ಹಾಡಿನಲ್ಲಿ ತಲ್ಲೀನನಾಗುತ್ತಿದ್ದ.

ಸಣ್ಣವನಿದ್ದಾಗ ಜೀತದ ಸಮಯದಲ್ಲಿ ಅಂಟಿದ ಈ ಲಾವಣಿ ಹಾಡಿನ ಗುಂಗು ಇವನಿಗೆ ಬಹಳ ದಿನ ಬಿಡಲಿಲ್ಲ. ಸ್ವಾಂತ್ರ ಪಡೆದ ನಂತರ ದೇಶದ ಹಳ್ಳಿಗಳ ಸಾಮಾಜಿಕ ವ್ಯವಸ್ಥೆ ಬದಲಾಯಿತು. ಆಗ ಇವನ ಹಿಂದೆ ಇದ್ದಿದ್ದ ಗೌಡರಿರುವ ಹಲಸಂಗಿಯಲ್ಲಿ ಇವನ ಹಾಡಿಗೆ ನೈತಿಕ ಬೆಂಬಲ ಕಡಿಮೆಯಾಯಿತು. ಇವನು ಮೇಳ ಕಟ್ಟಿ ಹಾಡಬೇಕೆಂದರೆ ಜೊತೆಗಾರರ ಸಮಸ್ಯೆಯಾಯಿತು. ಅಷ್ಟರೊಳಗೆ ಇವನು ವಯಸ್ಸು ಕಡಿಮೆಯಾಗುತ್ತ ಬಂದಿತು. ಸ್ವಲ್ಪ ಪ್ರಮಾಣದ ವೈರಾಗ್ಯ ನಿಷ್ಕಾಳಜಿ ಮಲಕಾರಿಗೆ ಬಂದು, ಬರಬರುತ್ತಾ ಒಂಟಿಯಾಗಿ ಬದುಕ ನಡೆಸತೊಡಗಿದ. ತನ್ನ ಜೀವನದ ಕೊನೆಗಾಲದಲ್ಲಿ ಲಾವಣಿ ಹಾಡುಗಳನ್ನು ಬದಿಗಿಟ್ಟು ಭಜನೆ ಹಾಗೂ ಹಂತಿ ಹಾಡುಗಳನ್ನು ಹಾಡುತ್ತ ೧೯೯೯ರ ಸುಮಾರಿಗೆ ತೀರಿಕೊಂಡನು.

ಮಲಕಾರಿ ಕಟ್ಟಿಮನಿ ಹಾಡುವ, ಗೋಪಾಳ ದುರದುಂಡಿ ಬರೆದ ಅಪ್ರಕಟಿತ ಹಾಡೊಂದು ಲಭ್ಯವಾಗಿದ್ದು ಅದು ಅಪೂರ್ಣವಿದೆ ಹಾಗೂ ಅದಕ್ಕೆ ತಲೆಬರಹ ಇಲ್ಲ. ವಿಷಯ ಗ್ರಹಿಸಿ “ಅಗಣಿತ ಮಾತು” ಎಂದು ಹೆಸರನ್ನಿಟ್ಟು ಇಲ್ಲಿ ಪ್ರಕಟಿಸಲಾಗಿದೆ.

ಅಗಣಿತ ಮಾತು

ಎಷ್ಟ ಹೇಳಿದರೆ ತೀರುದಿಲ್ಲ ತಂಗಿ ತೀರಿಸಿ ಪಾರಾಗಿಲ್ಲ ಯಾವಾ |
ಅಗಣಿತ ಮಾತೊಯ್ದು ಗಣಿತಗ್ಹಚ್ಚಿದರ ಆಗ ಬಲ್ಲಿರಿ ಅನುಭವಾ || ||

ಅನುಭವಾ ಅನ್ನುದು ಹ್ಯಾಂಗ ಇರತತಿ ಅದರ ಕೂನ ಹೇಳಬೇಕು ಎಲ್ಲಾ |
ಎಲ್ಲಾ ಎಲ್ಲಾ ಈಗ ಅಲ್ಲಾ ಒಬ್ಬನೆ ಸಂಬನ್ಹೊರ್ತ ಮತ್ಯಾರಿಲ್ಲಾ || ||

ಐತಿ ಇಲ್ಲಾ ಇಲ್ಲ ಅನುದರೊಳಗ ಆತ್ಮ ದೃಷ್ಟಿಯೊಳಗದು ಎಲ್ಲಾ |
ಅಲ್ಲಿ ಇಲ್ಲ ನಾ ಹುಡಿಕಿ ನೋಡಿದೆನೊ ಅಲ್ಲೆನ ನಮ್ಮ ಗುರುಬರಲಾ || ||

ಚ್ಯಾಲ: ಬಲವಂತ ಬೈಲ ರೂಪಾ |
ರೂಪ ಕಣ್ಣಾಗ ಹಚ್ಯಾದ ದೀಪಾ |
ಮಾತ ಹಿಡಿಯೊ ನೀ ನೆಪ್ಪಾ |
ಸುಳ್ಳೆ ದಿನಾಗಳಿಯಬ್ಯಾಡಪ್ಪ ||

ಏರು: ಅಪ್ಪ ಹೇಳಿದ ಮಾತ ನೆಪ್ಪಿನ್ಯಾಗ ಇಟಗೊಂಡು ಹಾಲಿಗ್ಹಾಕಿ ತನುಭಾವ ||

೧ನೇ ಚೌಕ

ಕವಿಯ ಮಾಡಬೇಕು ಗೂಟ ಜಡದಂಗ ತಿಳಿಸಿ ಹೇಳಬೇಕೊ ಜನಕೆಲ್ಲಾ |
ಜನನವೊಳಗ ಅವ ಜ್ಯಾಣನಾದರ ಜನರಗೊಡವಿ ಅವಗೇನಿಲ್ಲಾ || ||

ಇಲ್ಲದ ಸುಖ ವಿಪರೀತ ತೋರುತ ಇಲ್ಲದಂಗ ಆದಿತ ಮದಲಾ |
ತೆಳಗ ಮ್ಯಾಗ ಒಳಗ ಹೊರಗ ನೋಡಿದರ ನೀ ಇಲ್ದ ಭಾಗಾ ಯಾವಾದ್ದಿದಿಲ್ಲಾ || ||

ಚ್ಯಾಲ: ನೀ ನಿರಾಳ ನಿಜ ಹೌದಲ್ಲ |
ನಿನ್ನೊಳಗ ಹುಟ್ಟಿತು ಜಗವೆಲ್ಲಾ || ||

ಜಗಕ ಭಾಗ (ಭಗಾ) ಬಿಟ್ಟಿಲ್ಲಾ |
ಭಂಗ ಜಗಜ್ಯಾತಿ ಹುಟ್ಟಿಲ್ಲಾ || ||

ಏರಾ: ತಿಳಿಲಿಕ್ಕಾಗಿ ನಿ ತಿರತಿರಗಿ ಬರ್ತಿ ಮಾಯಾಜೀವಕ ಮರಗಿ ಬಿಟ್ಟಿತವ್ವಾ |

೨ನೇ ಚೌಕ

ಹಾಡ ಹಾಡ ಅಂತಿರಿ ನೀವು ಯಲ್ಲರು ನನ್ನ ಹಾಡಿನ ಮ್ಯಾಲ ನಿಮ್ಮದಿನ್ನ ದ್ಯಾಸ ವಿರಲಿ
ದ್ಯಾಸದಿಂದ ಮತ್ತು ನಿದಾನದಿಂದ ಆತ್ಮಾಗ ಆರುವಿರಲಿ || ||

ಇರಲಿ ಅಲ್ಲ ಕ್ಯಾರು ಇಟಗೊಳುದಿಲ್ಲ ತಂಗಿ ಗಟ್ಟಿಮನಸಬೇಕು ನಿನ್ನ ಬಲ್ಲಿ |
ಸತ್ತ ಸತ್ತ ಹುಟ್ಟಿದವ ಅತ್ತಾತ್ರಾ ಬಾರದಂಗಾ ಆತ ಇರಲಿ ಸ್ವಾಮಿ ನಿಮ್ಮ ಪಾದ ಬದಿಲಿ || ||

ಚ್ಯಾಲ: ನೀ ನಿರಾಳ ನಿಜಗುಣ ಮೂರ್ತಿ
ನೀ ಮಾಡಿದಲ್ಲೆ ಆಗೈತಿ ಮೂರ್ತಿ || ||

ನೀ ನೆನಸಿದವರ ಮನಸಿನಲ್ಲಿ ಇರತಿ |
ಸೈ ಸದ್ಗುರು ಸಲುಹಿದ ಸಾರಥಿ || ||

ಗೋಪಾಳ ದುರದುಂಡಿ ಯಂಕಣವರ ಧರತಿ | ಕವಿ ಮಾಡಿ ಇಟ್ಟಾರ ಭರತಿ || ||

[1] ಪಟೇಲ ಧೋಲಾ ಸಾಹೇಭ, ಡಾ.ಗುರುಲಿಂಗ ಕಾಪಸೆ.

[2] ಭೀಮಣ್ಣ ತಾಯಪ್ಪ ತಳವಾರ ಹೇಳಿದ್ದು.

[3] ಜೀವನ ಸಂಗೀತ, ಸಿಂಪಿ ಲಿಂಗಣ್ಣ, ಪಿ.ಧೋಲಾ ಸಾಹೇಬ.

[4] ಅದೇ

[5] ಕಲ್ಲಣ್ಣ ಎಳಸಂಗಿ (ಸಾಲೋಟಗಿ) ಹೇಳಿದ್ದು.

[6] ಭೀಮಪ್ಪ ಗುಮ್ಮಟದ ಗೀಗೀ ಪದಗಾರ ಹೇಳಿದ್ದು

[7] ಅದೇ

[8] ಡಾ.ಬಿ.ಎಸ್. ಕೋಟ್ಯಾಳ ಮೌಖಿಕವಾಗಿ ಹೇಳಿದ್ದು

[9] ಮಹಾದೇವ ಶ.ಹಂಜಗಿ (ಭೀಮಣ್ಣನ ಸಹ ಕಲಾವಿದ ಹೇಳಿದ್ದು)

[10] ಭೀಮ-ಬಸಯ್ಯ ರಚಿಸಿದ ಅಪ್ರಕಟಿತ ಹಸ್ತಪ್ರತಿ ನನ್ನ ಸಂಗ್ರಹದಲ್ಲಿದೆ.

[11] ತುಕಾರಾಂ, ತೀರ್ಥಪ್ಪ ಕಟ್ಟಿಮನಿ, ನಿವೃತ್ತ ಶಿಕ್ಷಕರು, ೭೫ ವರ್ಷ ಹೇಳಿದ್ದು.

[12] ಯಲ್ಲಪ್ಪ ಶರಣಪ್ಪ ಕಟ್ಟಿಮನಿ, ಸಧ್ಯ ಭಜನಾ ಹಾಡುಗಾರ ಹಲಸಂಗಿ, ೬೦ ವರ್ಷ

[13] ತುಕಾರಾಂ ಕಟ್ಟಿಮನಿ ಅವರ ಹಳೇ ಡೈರಿಯಲ್ಲಿ ಸಿಕ್ಕಿದ್ದು, ನನ್ನ ಸಂಗ್ರಹದಲ್ಲಿದೆ.

[14] ಮಸಬಿನಾಳ ಗ್ರಾಮದ ಸ್ವಾತಂತ್ರ ಸಮರ ಶಕಂಕರ ಬೈಚಬಾಳ, ಕೌಜಲಗಿ ಹಣಮಂತರಾಯರು ಈ ಗ್ರಾಮದಲ್ಲಿ ಬ್ರಿಟೀಷ್ ಸರ್ಕಾರ ವಿರುದ್ಧ ಗಾಂಧಿ ಟೊಪಿಗಿ ಹಾಕಿ ಹಾಕಿಕೊಂಡು ಬಂಧನಕ್ಕೊಳಗಾಗಿದ್ದರು.