ಭೀಮಣ್ಣ ತಳವಾರ

ಈತನ ಪೂರ್ಣ ಹೆಸರು ಭೀಮಣ್ಣ ಲಾಯಪ್ಪ ತಳವಾರ. ಭೀಮಣ್ಣ ಗುಮ್ಮಟದವನೆಂದೂ ಸಹ ಕರೆಯುತ್ತಾರೆ. ಅನಕ್ಷರಸ್ತನಾಗಿದ್ದು ೧೯೩೦ರ ಸುಮಾರಿಗೆ ಹುಟ್ಟಿರುವುದಾಗಿ ಹೇಳಿಕೊಳ್ಳುತ್ತಾನೆ. ತಾಯಿ ರಕಮಾಬಾಯಿ ಬಹಳ ಪ್ರೀತಿಯಿಂದ ಬೆಳೆಸಿದ್ದನ್ನು ಸ್ಮರಿಸುತ್ತಾನೆ. ಹಲಸಂಗಿ ಭಾಗದ ಲಾವಣಿ ಹಾಡುಗಳ ಕಟ್ಟಕಡೆಯ ಕೊಂಡಿಯಾಗಿ ಈಗ ಹಲಸಂಗಿ ಊರ ಹೊರಗಿರುವ ತನ್ನ ಚಿಕ್ಕದಾದ ಹಳೆಯ ಮನೆಯಲ್ಲಿ ವಾಸಿಸುತ್ತಿದ್ದಾನೆ. ತಂದೆ ಲಾಯಪ್ಪ ಬಹಳ ಪ್ರಸಿದ್ಧ ಹಾಡುಗಾರನಾಗಿದ್ದನು. ಅಪ್ಪನ ಹಾಡುಗಾರಿಕೆಯೇ ಇವನಿಗೆ ಬಳುವಳಿಯಾಗಿ ಬಂದು ಈಗ ಅದು ಬದುಕಿನ ಕೊನೆಯ ಅಂಚಿಗೆ ತಂದು ನಿಲ್ಲಿಸಿದೆ.

ಹಲಸಂಗಿ ಭಾಗದ ಹಾಡುಗಳನ್ನಲ್ಲದೆ, ಬೀಬೀ ಇಂಗಳಿಗಿ ಸಂಪ್ರದಾಯದ ಹಾಡುಗಳು, ತೇರದಾಳ ಭಾಗದ ಲಾವಣಿಕಾರರ ಹಾಡುಗಳನ್ನು ಸಹ ಹರದೇಶಿ-ನಾಗೇಶಿ ಯಾವ ಪಕ್ಷ ಪಂಗಡ ಇಲ್ಲದೆ ಹಾಡಿದ್ದಾನೆ. ಇವನದು ಸಧ್ಯ ಒಂದು ಹಾಡಿಕೆಯ ಮೇಳವು ಇದೆ. ಅದೂ ಕೂಡಾ ಕೊನೆಯ ಅಂಚಿಗೆ ಬಂದು ನಿಂತಿದೆ. ಈ ಮೇಳದಲ್ಲಿ ಮಹಾದೇವ ಹಂಜಗಿ (ಸೂರ) ನ್ಯಾಮದೇವ ತುಕಾರಾಮ ಅಂಜುಟಗಿ (ಹಿಮ್ಮೇಳ ತಾಳ) ಇದ್ದಾರೆ. ಹಿಮ್ಮೇಳದವರು ಆಗಾಗ ಬದಲಾಗುತ್ತಿರುತ್ತಾರೆ. ಒಂದೊಂದು ಸಲ ಅಪ್ಪಾಶ್ಯಾ ದೊ. ಸುಣಗಾರ, ಸೋಮಣ್ಣಲಕ್ಷ್ಮಣ ಏಳಗಿ ಇವರು ಸಹ ಈ ಮೇಳದಲ್ಲಿ ಕಾಣಿಸಿಕೊಳ್ಳುತ್ತಾರೆ. ಮುಖ್ಯ ಹಾಡುಗಾರನಾದ ಈ ಭೀಮಣ್ಣನು ಸುಮಾರು ೮೦ ವರ್ಷದವನಾಗಿದ್ದಾನೆ. ೨ ವರ್ಷವಾಯಿತು ಹಾಡುವುದನ್ನು ನಿಲ್ಲಿಸಿದ್ದಾನೆ. ಸ್ಥಳೀಯವಾಗಿ ಯಾವಾಗಲಾದರೊಮ್ಮೆ ಸಂದರ್ಭ ಬಂದಾಗ ಹಾಡುತ್ತಿರುತ್ತಾನೆ. ಶಕ್ತಿ ಕಡಿಮೆಯಾಗಿದೆ ಕಣ್ಣು ಸರಿಯಾಗಿ ಕಾಣಿಸುವುದಿಲ್ಲ. ಕೈಗಳು ನಡುಗುತ್ತವೆ. ಬ್ರಿಟಿಷರ ದಬ್ಬಾಳಿಕೆ, ಅಧಿಕಾರಶಾಯಿ ವ್ಯವಸ್ಥೆಗೆ ವಿರುದ್ಧವಾಗಿ ಒಂದು ದೊಡ್ಡ ಆಂದೋಲನ ರೂಪುಗೊಂಡು ಸ್ವಾತಂತ್ರ್ಯ ಚಳುವಳಿಯಲ್ಲಿ ಇವರಪ್ಪ ಲಾವಣಿ ಹಾಡಿದ್ದನ್ನು ನನ್ನ ಮುಂದೆ ಈತ ನೆನೆಸಿಕೊಂಡ. ಆ ಸಂದರ್ಭದಲ್ಲಿ ಒಂದೆರಡು ಸಲ ಅಪ್ಪನ ಸಂಗಡ ಡಪ್ಪು ಹಿಡಿದುಕೊಂಡು ಹೋಗಿದ್ದನಂತೆ. ನೀನು ಹಾಡುವುದಕ್ಕೂ ನಿಮ್ಮ ತಂದೆ ಹಾಡುವುದಕ್ಕೂ ಏನು ವ್ಯತ್ಯಾಸ? ಎಂದು ಪ್ರಶ್ನೆ ಮಾಡಿದಾಗ ನಮ್ಮಪ್ಪ ಮದಲ್ ಪಟಗಾ, ಕಸಿ ಅಂಗಿ ಹಾಕ್ಕೊಂಡು ಹಾಡ್ತಿದ್ದ. ಆಮ್ಯಾಲ ಪಟಗಾ ಹೋಗಿ ಗಾಂಧಿ ಟೋಪಿಗಿ, ನೆಹರು ಅಂಗಿ, ಕೈಯಾಗ ಡಪ್ಪ ಹಿಡಕೊಂಡು ಹಾಡುತ್ತಿದ್ದೆ ಎಂದು ಹೇಳುತ್ತಾನೆ. ಗಾಂಧಿ ಟೊಪಿಗಿ ಚಳುವಳಿ ಬಗ್ಗೆ ನಮ್ಮಪ್ಪ ಹಾಡಿದ ನೆನಪು ನನಗಿನ್ನು ಪಸಂದಾಗಿ ಗೊತ್ತಿದೆ.

[1] ಈಜಾಪುರ ಹತ್ಯಾಕ ಡೋಣಿಸಾಲಿನ ಯಾವದಹಳ್ಯಾಗ ಗಾಂಧಿ ಟೊಪಗಿ ಹಾಕ್ಕೊಳ್ಳು ಚಳುವಳಿ ಬಗ್ಗೆ ನೆನೆಸಿಕೊಂಡ…. ಊರು ಅವನ ಸ್ಮರಣೆಗೆ ಬರಲಿಲ್ಲ.

ಮೋಟರ್ಬಂದು ಹಿಂದಕ ಬಿದ್ದವು ಜಟಗಾ |
ಚಳುವಳಿ ಹೆಚ್ಚಾಗಿ ಟೊಪಗಿ ಬಂದು ಮೂಲಿಗಿ ಬಿದ್ದವು ಪಟಗಾ |[2]

ಸ್ವಾಂತಂತ್ರ್ಯ ಹೋರಾಟ, ಟೊಪ್ಪಿಗೆ ಚಳುವಳಿ ನೆನಪಿಗೆ ಬಂದಾಕ್ಷಣ ಆವೇಶಗೊಂಡು ದುಃಖ ಉಮ್ಮಳಿಸಿದಂತಾಗಿ ನಿರಾಶೆಯಾಗಿ ನಿಟ್ಟುಸಿರು ಬಿಟ್ಟ…. ಮುಖ ಅಲುಗಾಡಿಸಿ ಒಂದು ಕ್ಷಣ ಮೌನವಾದ…. ನಂತರ ಅದೆಲ್ಲಾ ಹಳೆಯ ಕಥೆ ಎಂದು ಮುಖ ಮೇಲೆತ್ತಿ ನನ್ನ ನೋಡಿದ.

ಮಂಜಪ್ಪ ಮಾರುದ್ರ ತಿಪ್ಪಣ್ಣ ಶಿವರುದ್ರರು |
ಗಂಡಗ ಬರುಗೋಳು ಮಸಿಮಾಳ ಊರವರು ||
ಹಂಡರ ಸಂಗ ಹೆಂಡಿಯ ತಿನಸ್ಸಾರಿವರು |
ಚೆಂಡಿಡಿದು ದುಡ್ಸಾರ ಅಂಗ್ರೇಜಿ ಕುಲದವರ ||[3]

ಕ್ಷೇತ್ರಕಾರ್ಯಕ್ಕೆ ಹೋಗಿ ನಾನು ಭೀಮಣ್ಣನ ಭೆಟ್ಟಿಗೆ ಹೋದಾಗ ಹೊಲದಲ್ಲಿ ಎಮ್ಮೆ ಮೇಯಿಸುತ್ತಿದ್ದ. “ನನಗೆ ಶಕ್ತಿ ಕಡಿಮೆಯಾಗಿದೆ. ಬಡತನವಿದೆ. ನೀವು ಮಾಶಾಸನ ಮಾಡಿಸಿ ಕೊಡಿರಿ” ಎಂದು ನನ್ನನ್ನು ಅಂಗಲಾಚಿದ. ಸ್ವಾತಂತ್ರ ಪಡೆಯಲು ಯಾವುದಕ್ಕಾಗಿ ಅಂದು ಅಪ್ಪನೊಂದಿಗೆ ಡಪ್ಪು ಹಿಡಿದು ಲಾವಣಿ ಹಾಡಿ ದೇಶದ ಜನರನ್ನು ಎಚ್ಚರಿಸಿದ್ದ ಈ ಕಲಾವಿದ ಸ್ವತಂತ್ರ ಭಾರತದಲ್ಲಿ ಹೀಗೆ ಅಂಗಲಾಚಿ ಸಹಾಯ ಕೇಳುತ್ತಿರುವುದು ನೋಡಿ ಒಂದು ಕ್ಷಣ ನನ್ನ ಮನ ಕಲುಕಿತು.

ಹಾಡಕಿ ಮಾಡುವ ಸಾಮಾನುಗಳ ಚೀಲದ ಒಳಗೆ ಹಳೆಯ ಕಾಗದ ಪತ್ರಗಳ ಮಧ್ಯದಲ್ಲಿ ಅವನು ಹಾಡುವ ನಾಲ್ಕಾರು ಅಪ್ರಕಟಿತ ಗೀಗೀ ಹಾಡುಗಳು ಲಭ್ಯವಾದವು. ಅದರಲ್ಲಿ ರಾಮಚಂದ್ರ (ಬಹುಶಃ ಹಲಸಂಗಿಯ ಮೌಲಾ ರಾಮಚಂದ್ರ ಇರಬಹುದು) ಬರದಿದ್ದೆನೆನ್ನಲಾದ ಹಾಡೊಂದನ್ನು ಓದುಗರಿಗೆ ಇಲ್ಲಿ ಕೊಡಲಾಗಿದೆ. ಇದಕ್ಕೆ ಸಿಂಧುಬಲ್ಲಾಳ ಎಂದು ಹೆಸರಿಸಲಾಗಿದೆ.

ಸಿಂಧುಬಲ್ಲಾಳನ ಕಥೆ

ಸಿವರದ್ದ ಸಿವಧ್ಯಾನ ವೈಶಾತ ಮನಮೇಲೆ ಸ್ತ್ರೀಯರ ಮಾಡುದು ಫಲವೇನಾ |
ಕಾಸ್ಮಿರ ಕೇಳ ನೀನು ವಂದಿನಾ |
ಪತಿವ್ರತಾ ಮಹಿಮಾ ಕೇಳ ಇಟ್ಟ ಧ್ಯಾನಾ |
ಲಕ್ಷ ಚೇರ್ಯಾಅಂಸಿ ಜಲ್ಮ ಮಾಡಿದವನ ಉಪಗಾರ ಮರಿಬ್ಯಾಡ ಮಾಯಿ ನೀನ ||
ಕಳಿ ಕರ್ಮವನಾ || ||

ಹೆಂಗಸರ ಜಾತಿಗೆ ಮಳಕಾಲ ತೆಳಗ ಬುದ್ದಿ ಇದಕ ಇರುದಿಲ್ಲಾ ವಿಚ್ಚಾರಾ |
ತಿಳಿಲಾರ್ದೆ ಮಾಡತಾವ ಹಾದರಾ |
ಗಾದಿಮಾತ ಹೇಳತಾರ ಹಿರಿಯರಾ |
ಕುತ್ತಾಡುವ ಗಂಡಸನ ನೋಡಿ ನಿಲಗಿ ವದುವತಾರು ನಾಚಿಕಿಲ್ಲಾ ಮನಸಿಗೆ ಪೂರಾ |
ಕೇಳರಿ ಜರಾ || ||

ಪರಗಂಡಸನ ಕಾಲಾಗ ಮಕ್ಕಳನಕೊಂದು ಕೆಡಸಿ ಕುಂತಾವ ತಮ್ಮ ಮನಿಮಾಗಾ |
ನರ್ಕದ ಸಂಗ ಇವರು ವಂಶ ಪರಂಪರಾ |
ಹಾರಿಕಾಸಿ ಜಡುವತಾರ ಯಾಮಕಿಂಕರಾ |
ಪರ ಪುರುಷನ ಕೂಡ ಭೊಗ ಮಾಡಿಕೊಂಡು ನಾಶ ಆಗುವದು ಶರೀರಾ |
ಹೊಲಸ ನೇದ್ವಾರಾ || ||

ಚ್ಯಾಲ: ಮುಂದ ಪಾಪ ಚೇಕಸಿ ಮಾಡುವ ದೇವರಾ |
ನರ್ಕಕುಂಡ ಬೀಳತಾವ ಹೆಂಗಸರಾ || ||
ತಿಳಿದಷ್ಟು ಹೇಳತಿನಿ ಕೇಳಿs ಹಿರಿಯರಾ |
ಮುತ್ತಕಳಕೊಂಡು ಹುಡಕ್ಯಾರ ಸಮದುರಾ || ||

ಏರು: ಗಂಡದೇವರಾ ಗಂಡ ಬಂಗಾರಾ ಗಂಡನ ಹೊರ್ತದೇವರೇ ಇಲ್ಲಾ ಪುನಾ |
ಅವನದಿಂದೆ ಆಗುವೈನ ಕಾಲ ಹರಣಾ |
ತ್ರೀಲೋಕದಲ್ಲಿ ನಿನಗ ಮೋಕ್ಷವನ್ನಾ ||

೧ನೇ ಚೌಕ

ಸ್ವರ್ಗದಿಂದ ಸಿವಾ ಇಳದ ಬಂದನು ಜಂಗಮ ರೂಪ ತೊಟ್ಟ ಗುರು ಗಾಥಾ |
ಸಿಂಧುಬಲ್ಲಾಳನ ಮನಿಗಿ ಬಂದಾ ಬೇಕಂತಾ |
ಅವರ ಭಕ್ತಿ ನೋಡ ಬೇಕಂತಾನ ನೆತಾ |
ಸಿಂಧು ಬಲ್ಲಾಳಗ ಗುರ್ತು ಹತ್ತಾತು ಕರಕೊಂಡು ವೈವಾಕ ಉಡಿಸು ತಾ |
ಸಿವ ಹೋದನಗ ತಾ || ||

ಸಿಂಧುಬಲ್ಲಾಳರಿಗೆ ಮಕ್ಕಳಿದ್ದಿದ್ದಿಲ್ಲಾ ಬೆಳ್ಳಿ ಬಂಗಾರ ದಾನಿ ವಿಪರೀತಾ |
ದಿನಂಪ್ರತಿ ಮಾಡತಿದ್ದಾ ಮೂರು ಹೊತ್ತಾ
ಮನಸ ನೋಡಲಿಕ್ಕೆ ಸಿವ ಬಂದನು ಜಂಗಮಾಗಿ ಕಾವಿಯ ಹೊತ್ತ
ನಮ್ಮ ಜಗನ್ನಾಥ || ||

ಭಿಕ್ಷ ನೀಡಂತ ಸ್ವಾಮಿ ಕೇಳತಾನು ಮನಸಿನಲ್ಲಿ ಇದ್ದಂತ ವಸ್ತಾ |
ಏನ ಬೇಡತಿ ಬೇಡ್ರಿಸ್ವಾಮಿ ಇವತ್ತಾ |
ಬೇಡಿದ್ದು ಕೊಡತೀನಿ ಕಡಮಿಲ್ಲ ಮಾತಾ |
ಪಟ್ಟದ ರಾಣಿನ ಭಿಕ್ಷಾ ನೀಡಿ ನೀನು ಮಂಚದಮ್ಯಾಲೆ ಮಲಗುವೆ ತುರ್ತಾ
ಕೇಳ್ಯಾಕೊ ಮಾತಾ | |

ಚಾಲ: ಸಿಂಧುಬಲ್ಲಾಳನ್ನಾ ಕರದ ವೈಯ್ದ ಕೂಡಶ್ಯಾನ ಸಿಂಹಾಸನ ಮ್ಯಾಲ |
ವಚನಕೊಟ್ಟ ಬಿದ್ದಾನ ಪಾದ ಮ್ಯಾಲ || ||

ಪಟ್ಟದ ರಾಣಿಗ್ಹೇಳ್ಯಾನ ಭೂಪಾಲಾ |
ಸ್ವಾಮಿಗಿ ಕರಕೋರ ಮಂಚಕ ಖುಸಿಯಾಲಾ || ||

ಪತಿಯಾಜ್ಞಾ ಮೀರಿ ಸತಿ ನಡಿಯಲಿಲ್ಲಾ ಶ್ರಿಂಗಾರಾಗಿದಾಳೆ ದಿನಾ
ಮಾದಿಗದ ಮೋಹನಾ |
ಅವರ ಮನಸ ನೋಡತಾನ ಭಗವಾನಾ ||

೨ನೇ ಚೌಕ

ಸಿಂಧುಬಲ್ಲಾಳ ಭಕ್ತಿ ಭಾವ ನೋಡಿ ಹರುಷವಾಯಿತು ಸ್ವಾಮಿ ಮನದಾಗ |
ಸತಿಪತಿ ಮನಾ ನೋಡಿದ ಆಗ |
ಯಳ್ಳಷ್ಟು ಕುಂದ ಇಲ್ಲ ಆತ್ಮದಾಗ |
ನಾಲ್ಕು ಮೂಲಿಗೆ ನಾಲ್ಕು ಸಮಯ ಹಚ್ಚಿದಾರು ಕೈಹಿಡಿದು ಕರದಾಳೆ, ಆಗ |
ಮಂಚದಮ್ಯಾಗ || ||

ಕಂದನಾಗಿ ಮಲಿ ಉಂಬುತ ಮಲಗ್ಯಾನು ಹನ್ನೆರಡ ರಾತ್ರಿ ಬೈಗು ಬೆಳಗ |
ಗಾಬ್ರ್ಯಾಗಿ ನಿಂತಾಳೊ ರಾಣಿ ಆಗಾ |
ಜಲ್ಮಪವಿತ್ರ ಮಾಡಿದನು ಸ್ವಾಮಿ ನಮ್ಮಗ |
ಹೊತ್ತುಹೊಂಟ ಮೂರ ತಾಸ ಆಯಿತು ಸಿಂಧುಬಲ್ಲಾಳ ಬಂದಾನ ಒಳಗ ನೋಡ್ಯಾನ
ಆಗ ||

ಸೋಜಿಗಾಗಿ ತನ್ನ ಮಡದಿನ ಕೇಳತಾನ ಜಂಗಮೆಲ್ಲಿ ಹೋದ ಹೇಳಬೇಗ |
ಅವನ ಮುಖಾ ತೋರಿಸ ನಮ್ಮಗ |
ಬಾಳ ಚಿಂತಿಯಾಗಿ ಕುಂತೇನ ಈಗ |
ಜಂಗಮ್ಮಲ್ಲ ಸ್ವಾಮಿ ಸಿವಾ ಇಳದು ಬಂದಾನು ರಾತ್ರಿ ತೋರಿದಾ ನನಗೀಗ |
ಕಂದನಾದ ಮಗ್ಗಲದಾಗ || ||

ಚ್ಯಾಲ: ಸ್ವಾಮಿ ಹಿಗ್ಗಿ ಮಲಗಿದಾನ ಠೀಕಾ |
ಮಲಿ ಕುಡಿಯ ತಾನ ಬೇಶಾಕ || ||

ರಾಜ ಹರುಷವಾದನ ಮನಕಾ |
ಸಿವ ಬಂದ ಮೋಕ್ಷ ಕೊಟ್ಟ ಬೇಶಾಕ || ||

ಏರ: ಗುರು ಭೀಮನಿಲ್ಲ ನೀ ಭೀಮಾನಿದ್ದಿ ಗುರುವಿನ ಹಿಡಿದ ನಡಿಕಡಿ ತಾನಾ |
ಜಲ್ಮ ಸಾರ್ಥಕ ಮಾಡಿಕೊರೊ ಮೋಕ್ಷವನ್ನಾ |
ತಿಳವಳಿಕಿ ಹೇಳತಾನ ರಾಮಚಂದ್ರ ಆಜ್ಞನಾ ||

ಹಲಸಂಗಿ ಭಾಗದಲ್ಲಿ ಸುಮಾರು ೨೦ ಜನ ಲಾವಣಿ ಕವಿಗಳು ಹಾಡುಗಾರರು ನನ್ನ ಮಾಹಿತಿಗೆ ಸಿಕ್ಕಿದ್ದು ೮ ಜನರ ಸವಿವರ ಲಭ್ಯವಾಗಿದೆ.

ಮಾಹಿತಿ ಲಭ್ಯವಾಗದ ಲಾವಣಿಕವಿ ಹಾಡುಗಾರರ ವಿವರವನ್ನು ಕೆಳಗೆ ಕೊಡಲಾಗಿದೆ.

ಹೆಸರು ಊರು ಬದುಕಿದ ಅವಧಿ (ಅಂದಾಜು)
ಮೌಲಾ ಪಿಂಜಾರ ಹಿಂಗಣಿ ೧೮೮೦-೧೯೬೫
ಕಲೀಪಲಕ್ಷಣ ಖ್ಯಾಡಗಿ ೧೮೮೮-೧೯೬೦
ಮರಗೂರ ಕಮಾಲ ಮರಗೂರ ೧೮೯೫-೧೯೪೦
ಅಣ್ಣಾರಾವ್ ಪಾಟೀಲ ಅಗರಖೇಡ ೧೮೯೭-೧೯೬೭
ಸಂಖದ ಬಸಯ್ಯ ಹೋಳಿಸಂಖ ೧೯೦೦-೧೯೭೦
ಮೌಲಾ ರಾಮಚಂದ್ರ ಹಲಸಂಗಿ ೧೯೦೨-೧೯೭೪
ಮೈಲಾರಿ ಗುಡ್ಡ (ಗುಡ್ಲೆ) ಸಾತಪೂರ ೧೯೦೫-೧೯೯೧
ಹಣಮಂತ ಸಿಂಧೆ ಚಡಚಣ ೧೯೦೮-೧೯೭೦
ಓಲೇಕಾರ ಮಾದಣ್ಣ ಹಲಸಂಗಿ ೧೯೧೨-೧೯೭೨
ಬಸಯ್ಯ ಮಠಪತಿ ಸಾಲೋಟಗಿ ೧೯೨೨-೧೯೯೩

ಕ್ಷೇತ್ರಕಾರ್ಯಕ್ಕೆ ಹೋದಾಗ ಇವರ ಬಗ್ಗೆ ಬಹಳಷ್ಟು ಹೇಳಿದರು. ಅಲ್ಲಿ ಸೇರಿದ ಹಿರಿಯರ ಬಾಯಿಂದ ಬಂದ ಮಾಹಿತಿಯ ಮೇರೆಗೆ ಅವರು ಬದುಕಿದ ಅವಧಿಯನ್ನು ಅಂದಾಜು ಮಾಡಲಾಗಿದೆ. ವಿವರ ಬರೆದ ಲಾವಣಿಕಾರರ ಸಂಪರ್ಕ ಈ ಲಾವಣಿಕಾರರಿಗೆ ಇರುವುದರಿಂದ ಹಾಗೂ ಅವರವರ ಮೊಮ್ಮಕ್ಕಳು ಬಂಧುಗಳ ಸಹಾಯದಿಂದ ಗುರ್ತಿಸಿಲಾಗಿದೆ.

[1] ಸ್ವಾತಂತ್ರ ಹೋರಾಟ ಮತ್ತು ಲಾವಣಿ ಸಾಹಿತ್ಯ, ಬಸವರಾಜ ಮಲಶೆಟ್ಟಿ.

[2] ಹಂಗಿನ್ಯಾಗ ಇರಬ್ಯಾಡ್ರಿ ಇಂಗ್ಲೀಷರ್ನ್ ಓಡಸ್ರಿ, ಶಂಕರ ಬೈಚವಾಳ (ಲೇಖನ)

[3] ರಾಮಚಂದ್ರ ಬರೆದ ಅಪ್ರಕಟಿತ ಹಾಡು ನನ್ನ ಸಂಗ್ರಹದಲ್ಲಿದೆ.