ಹಸಿದು ತಿನ್ನಿ ಈ ಹಣ್ಣು

ಈಚೆಗೆ ಮಂಗಳೂರಿನ ಸೆಂಟ್ರಲ್ ಮಾರ್ಕೆಟಿನ ತರಕಾರಿ ವ್ಯಾಪಾರಿ ಡೇವಿಡ್ ಅವರನ್ನು ಮಾತನಾಡಿಸಿದಾಗ, ‘ಕಳೆದ ವರುಷಕ್ಕಿಂತಲೂ ಈ ವರುಷ ಹಲಸಿನ ಎಳೆ ಕಾಯಿ, ಹಣ್ಣನ್ನು ಕೇಳಿಕೊಂಡು ಬರುವವರ ಸಂಖ್ಯೆ ಜಾಸ್ತಿ’ ಎಂದರು. ಮನೆ ಮಟ್ಟದಲ್ಲಿ ಹಲಸು ತರಕಾರಿಯೊಂದಿಗೆ ಅಡುಗೆ ಮನೆ ಸೇರಿದೆ. ನರ್ಸರಿಗಳಲ್ಲಿ ಹಲಸಿನ ಗಿಡಕ್ಕೂ ಡಿಮಾಂಡ್ ಬಂದಿದೆಯಂತೆ.

‘ನಮ್ಮೂರಲ್ಲೂ ಹಲಸಿನ ತೋಟ ಎಬ್ಬಿಸಬೇಕು’ ಎಂದಿರುವ ಹಲಸುಪ್ರಿಯ ಕೃಷಿಕರ ಸಂಖ್ಯೆ ಬೆಳೆಯುತ್ತಿದೆ. ಎಳೆ ಗುಜ್ಜೆಯಿಂದ ಹಣ್ಣಿನ ತನಕ ಮಾರಾಟದ ಅವಕಾಶ ಇದಕ್ಕೆ ಕಾರಣ. ಮಾರುಕಟ್ಟೆಯಲ್ಲೂ ಕೂಡಾ ಬೇಡಿಕೆ ಕುದುರಿದೆ..

ತುತ್ತಿಗೂ ತತ್ವಾರವಾದ ಕಾಲಟ್ಟದಲ್ಲಿ ಹಲಸು ಬಡವರ ಕಲ್ಪವೃಕ್ಷ. ಹಲಸಿನ ಕಾಯಿ ತೊಳೆಯ ಖಾದ್ಯ ಬೆಳಗ್ಗಿನ ಉಪಾಹಾರಕ್ಕಾಗುತ್ತದೆ, ಮಧ್ಯಾಹ್ನದ ಭೋಜನಕ್ಕೂ ಸೈ. ಇದನ್ನೇ ತಿಂದು ಹೊಟ್ಟೆ ಗಟ್ಟಿ ಮಾಡಿಕೊಂಡು ದುಡಿದ ಜೀವಗಳು ನಮ್ಮ ಮಧ್ಯೆ ಇದ್ದಾರೆ. ಹಲಸು ನಿರ್ಲಕ್ಷಿತ ಹಣ್ಣು. ಹಿತ್ತಿಲಲ್ಲಿ ಕೊಳೆತು ನಾರಿ ಮಣ್ಣಾಗಿ ಹೋದೀತೇ ವಿನಾ, ಅದು ಅಂಗಳಕ್ಕೆ ಬರುವುದಿಲ್ಲ! ಅದರಲ್ಲೂ ತುಳುವ (ಅಂಬಲಿ) ಹಲಸಿನ ಹಣ್ಣು ಮರದಲ್ಲಿ ‘ಪಿಶಾಚಿ’ಯಂತೆ ತೂಗುತ್ತಿರುವಾಗಲೂ ಕೊಯ್ಯುವುದು ಬಿಡಿ, ಅದರತ್ತ ನೋಡಲೂ ಹೇಸಿಗೆ!

ಹಣ್ಣುಗಳ ರಾಜ ‘ಮಾವು’ ಎಂಬುದು ಸಾರ್ವತ್ರಿಕ. ಗಾತ್ರ, ವಿನ್ಯಾಸ, ಮರ, ರುಚಿ, ಅಡುಗೆ.. ಹೀಗೆ ಒಂದಲ್ಲ ಒಂದು ಬಳಕೆಗೆ ಸಿಗುವ ಹಲಸೀಗ ‘ರಾಜ’! ಕನ್ನಾಡು- ಕೇರಳಗಳಲ್ಲಿ ಹಲವು ಮೇಳಗಳನ್ನು ಕಂಡ ಭಾಗ್ಯ!
ಮೊತ್ತಮೊದಲು ಹಲಸು ಮೇಳ ಮಾಡಿದ್ದು ‘ಉರವು- 2007’ರಲ್ಲಿ. ಕರ್ನಾಟಕದಲ್ಲಿ ಬೈಫ್ ಮತ್ತು ಕದಂಬ 2008ರಲ್ಲಿ ಮಾಡಿದ ಹಲಸು ಮೇಳಗಳು ಭಾರೀ ಜನಪ್ರಿಯ ಆದುವು. ಎರಡು ವರುಷಗಳ ಹಿಂದೆ ಶಿರಸಿ, ತೀರ್ಥಹಳ್ಳಿ, ನಿಟ್ಟೂರು, ಲಾಲ್ಭಾಗ್- ಬೆಂಗಳೂರು, ಮಂಗಳೂರು ಅಲ್ಲದೆ ಕೇರಳದಲ್ಲೂ ಐದಾರು ಹಲಸು ಮೇಳಗಳು ನಡೆದವು.

ಹಲಸಿಗೊಂದು ಹಬ್ಬದಂಥ ಮೇಳ

ಹಲಸು ಕಣ್ಣ ಮುಂದೆಯೇ ಹಾಳಾಗುವುದನ್ನು ಬಹುತೇಕರು ಇಷ್ಟಪಡುವುದಿಲ್ಲ. ಆದರೆ ದಾರಿಯಿಲ್ಲ! ಮೇಳಗಳು ‘ಕೈಮರ’ದಂತೆ ಕೆಲಸ ಮಾಡಿರುವುದರಿಂದ ಹಲಸಿನ ಸಾಧ್ಯತೆಗಳ ಹರವಿಂದು ವಿಸ್ತಾರವಾಗಿದೆ.

ಹಪ್ಪಳ, ಚಿಪ್ಸ್, ಬೆರಟ್ಟಿ, ಉಂಡ್ಲುಕ, ಬೀಜದ ಸಾಂತಾಣಿ (ಬೇಯಿಸಿ, ಬಿಸಿಲಿನಲ್ಲಿ ಒಣಗಿಸಿದ).. ಇವುಗಳ ಜತೆಯಲ್ಲಿ ಹಲಸು ವಿವಿಧ ಅವತಾರಗಳನ್ನು ತಾಳಿದೆ. ಜ್ಯಾಂ, ಹಂಬಳ, ಜ್ಯೂಸ್, ಮುಳುಕ, ರೊಟ್ಟಿ, ವಡೆ, ಹೋಳಿಗೆ, ಸುಕ್ರುಂಡೆ, ಚಕ್ಕುಲಿ.. ಇನ್ನೂ ಅನೇಕ. ಹಲಸಿನ ಋತುವಿನಲ್ಲಿ ನಮ್ಮ ಅಡುಗೆಮನೆ ನಿಜಕ್ಕೂ ‘ಸಂಶೋಧನಾಲಯ’ವಾಗುತ್ತದೆ. ಗೃಹಿಣಿಯರು ‘ವಿಜ್ಞಾನಿ’ಗಳಾಗುತ್ತಾರೆ! ಸಾಗರದ ಗೀತಕ್ಕ, ಶಿರಸಿಯ ಮಮತಾ, ಪಾತನಡ್ಕದ ಸುಶೀಲಕ್ಕ.. ಹೀಗೆ ‘ಪಾಕ ವಿಜ್ಞಾನಿ’ಗಳ ಮೌನ ಮಾತಾಗುತ್ತದೆ!

ಎರಡು ವರುಷಗಳ ಹಿಂದೆ ತೀರ್ಥಹಳ್ಳಿಯಲ್ಲಿ ಜರುಗಿದ ಹಲಸು ಮೇಳದಲ್ಲಿ ‘ಗೋಬಿ ಮಂಚೂರಿಯನ್’ ಬದಲಿಗೆ ‘ಜ್ಯಾಕ್ ಮಂಚೂರಿಯನ್’, ‘ಜ್ಯಾಕ್ ಕಬಾಬ್! ಡೆಮೋ ಮಾತ್ರವಲ್ಲ, ಭೋಜನಕ್ಕೂ ಕೂಡ. ವಿಷದಲ್ಲಿ ಮಿಂದೆದ್ದು ಅಡುಗೆ ಮನೆ ಸೇರುವ ಹೂಕೋಸಿನ ಸ್ಥಾನವನ್ನು ನಮ್ಮ ಎಳೆ ಹಲಸು (ಗುಜ್ಜೆ) ಆಕ್ರಮಿಸಲು ಶುರು ಮಾಡಿದೆ. ಮಂಗಳೂರಿನ ಹೋಟೆಲ್ ಒಂದರಲ್ಲಿ ಜ್ಯಾಕ್ ಮಂಚೂರಿಗೆ ಈಗಲೂ ಬೇಡಿಕೆ.
ಕೇವಲ ಹಪ್ಪಳ, ಚಿಪ್ಸ್ ಗೆ ಸೀಮಿತವಾಗದೆ, ಹಲಸು ಮೌಲ್ಯವರ್ಧನೆಯಾಗುವುದರೊಂದಿಗೆ ತನ್ನ ಮಾನವರ್ಧನೆಯನ್ನೂ ಮಾಡಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಉಮೇದಿನಿಂದ ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಹಲಸು ಬೆಳೆಗಾರರ ಸಂಘ ಅಸ್ತಿತ್ವಕ್ಕೆ ಬಂದಿದೆ. ಕೇರಳದಲ್ಲೂ ಸಂಘಗಳು ಆರಂಭಗೊಂಡಿವೆ.

ಹಲಸಿನ ಹಲವು ರೂಪ
ಕೇರಳದ ಸ್ವದೇಶಿ ಸಂಸ್ಥೆಯು ಸಿರಪ್, ವೈನ್, ಸ್ಕ್ವಾಷ್, ಜೆಲ್ಲಿ, ಹಲ್ವ, ಟಾಫಿ, ಫ್ರುಟ್ ಬಾರ್, ಕ್ಯಾಂಡಿ, ಉಪ್ಪಿನಕಾಯಿಯನ್ನು ತಯಾರಿಸಿದರೆ; ಹಲಸಿನ ಬೀಜದಿಂದ ವರ್ಷಪೂರ್ತಿ ಶೇಖರಿಸಿಡಬಹುದಾದ ತೋರನ್, ಮಸಾಲಾ ಡ್ರೈ, ಪುಟ್ಟು ಪೊಡಿ, ಸುಗಿಯಾನ್, ಪಕ್ಕವಡ, ಅವಲೋಸ್ ಪುಡಿ.. ಹೀಗೆ ಇನ್ನೇನೋ ತಯಾರಿಸಲಾಗುತ್ತಿದೆ! ಜೊತೆಗೆ ತರಬೇತಿಯನ್ನೂ ನೀಡುತ್ತಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಹಲಸಿನ ಹಣ್ಣಿನಿಂದ ಹಲವಾರು ಉತ್ಪನ್ನಗಳನ್ನು ಸಿದ್ಧಪಡಿಸುತ್ತಿದೆ. ಮಹಾರಾಷ್ಟ್ರೀಯರಿಗೆ ಪ್ರಿಯವಾದ ಕುಲ್ಫಿ, ಗುಜರಾತಿಗರ ಶ್ರೀಖಂಡ ಇವರ ಮಾಸ್ಟರ್ ಪೀಸ್. ಜತೆಗೆ ಜ್ಯೂಸ್, ಬಾರ್, ಬೀಜದ ಪುಡಿಯಿಂದ ಬಿಸ್ಕತ್, ಕಪ್ ಕೇಕ್. ಕಡಲಾಚೆಯ ಕ್ಯಾಲಿಫೋರ್ನಿಯಾದಲ್ಲಿ ಹಲಸಿನ ಹಣ್ಣಿನ ಐಸ್ಕ್ರೀಂ ಚಪ್ಪರಿಸುವ ವರ್ಗವೇ ಇದೆಯಂತೆ. ನಂಬ್ತೀರಾ? ಸ್ಮಿತಾ ವಸಂತ್ ಭಾರತೀಯ ಮೂಲದವರು. ತಮ್ಮ ‘ರೆಸ್ಟಾರೆಂಟಿನಲ್ಲಿ ಮಾಡಿಟ್ಟ ಐಸ್ಕ್ರೀಂ ಸಂಜೆಯೊಳಗೆ ಖಾಲಿ’ಯಂತೆ! ಸಮಾರಂಭಗಳಿಗೂ ವಿತರಿಸುತ್ತಾರೆ.

ತುಮಕೂರಿನ ಪಾವನ್ ಸ್ಟೋರಿನ ಸೀತಾರಾಂ ತಯಾರಿಸಿದ ಹಲಸಿನ ಒಣ ಹಣ್ಣುಗಳ ಬರ್ಫಿಗೆ ‘ಕೇಳಿ ಪಡೆಯುವ’ ಗಾಹಕ ವರ್ಗ ಸೃಷ್ಟಿಯಾಗಿದೆ! ಅಮಾಸೆಬೈಲಿನ ಕೊಡ್ಗಿ ಸಹೋದರರ ಹಲಸಿನ ಹಣ್ಣಿನ ಒಣ ಚಿಪ್ಸ್ ವಿದೇಶಕ್ಕೂ ಹಾರಿದೆ. ನಮ್ಮ ಮಕ್ಕಳು ಚೀಪುವ ಲಾಲಿಪಪ್ ಇದೆಯಲ್ಲಾ, ಅಂತಹುದೇ ಹಲಸಿನ ಹಣ್ಣಿನಿಂದ ತಯಾರಿಸಿದ ಸಿಪ್- ಅಪ್ ಅನ್ನು ಕೇರಳದಲ್ಲಿ ಮಕ್ಕಳು ಮಾತ್ರವಲ್ಲ, ದೊಡ್ಡವರೂ ಚೀಪುತ್ತಾರೆ.

ನೆರೆಯ ಶಿರಸಿಯ ರೇಖಾ ಹೆಗಡೆ, ಅನ್ನಪೂರ್ಣ ಹೆಗಡೆಯವರ ಮನೆಗೆ ವರ್ಷದ ಯಾವ ಸಮಯದಲ್ಲಾದರೂ ಹೋಗಿ, ಹಲಸಿನ ಹಪ್ಪಳ- ಚಿಪ್ಸ್ ರೆಡಿಯಾಗಿರುತ್ತದೆ. ಮೇಳ, ಉತ್ಸವಗಳಲ್ಲಿ ಸ್ವತಃ ಮಳಿಗೆ ತೆರೆದು ಹಳ್ಳಿ ರುಚಿ ಉಣಿಸುತ್ತಾರೆ. ವರ್ಷವಿಡೀ ಕಾಪಿಡುವ ಅವರ ಹಳ್ಳಿಜ್ಞಾನ ನಮ್ಮ ಸರ್ಕಾರಿ ಮೆಟ್ಟಿಲನ್ನು ಹತ್ತಬೇಕು.

ಪಾಂಡಿಚೇರಿ ಸನಿಹದ ಪನ್ರುತ್ತಿಯಲ್ಲಿ ಹಲಸಿನ ತೋಟವೇ ಇದೆ. ಮೊದಲಿಗೆ ಅಡಿಕೆ ಪತ್ರಿಕೆ ಪನ್ರುತ್ತಿಯ ಹಲಸನ್ನು ಪರಿಚಯಿಸಿತ್ತು. ಅಲ್ಲಿಂದೀಚೆಗೆ ಪನ್ರುತ್ತಿಗೆ ಕನ್ನಾಡಿನ ಹಲಸು ಪ್ರಿಯರು ಲಗ್ಗೆಯಿಡುತ್ತಿದ್ದಾರೆ! ಕುಡಿಗಳನ್ನು ತಂದು ಕಸಿ ಕಟ್ಟಿ ಅಭಿವೃದ್ಧಿಪಡಿಸುವ ಕೆಲಸ ಅಜ್ಞಾತವಾಗಿ ಆಗುತ್ತಿದೆ. ‘ಹಿತ್ತಿಲಲ್ಲಿ ಒಂದೆರಡಾದರೂ ಹಲಸಿನ ಗಿಡ ಇರಲಿ’ ಎನ್ನುತ್ತಾ ಉತ್ತಮ ಹಲಸಿನ ತಳಿಗಳನ್ನು ಅರಸುವ ಕೃಷಿಕರು ಧಾರಾಳ.

ಬಾಯಲ್ಲಿ ನೀರೂರಿಸುವ ತೊಳೆ

ದೇಶಮಟ್ಟಕ್ಕೆ ಜಿಗಿದ ಹಲಸು
ಈಚೆಗೆ ತಿರುವನಂತಪುರದಲ್ಲಿ ಜರುಗಿದ ರಾಷ್ಟ್ರೀಯ ಮಟ್ಟದ ಹಲಸು ಮೇಳದಲ್ಲಿ ಹಲಸಿನ ಅಡುಗೆ ಪ್ರಾತ್ಯಕ್ಷಿಕೆಯಿತ್ತು. ರಸ-ರುಚಿಗಳ ಸ್ಪರ್ಧೆಯಿತ್ತು. ಅಬ್ಬಾ.. ಎಷ್ಟೊಂದು ವೈವಿಧ್ಯಗಳು. ಬೇಳೆ, ತೊಳೆಯಿಂದ ಮಾಡಿದ ಖಾದ್ಯಗಳು. ಇಡ್ಲಿ, ಕೇಕ್, ಚಾಕೋಲೇಟ್, ಹಲ್ವಾ, ಪುಲಾವ್.. ಒಂದೇ ಎರಡೇ. ಒಂದೆಡೆ ವೈನ್ ಕೂಡಾ ಸ್ಪರ್ಧೆಗೆ ಕುಳಿತಿತ್ತು. ಸ್ಪರ್ಧೆಯಲ್ವಾ.. ಅವಕ್ಕೆಲ್ಲಾ ಅಲಂಕಾರದ ಭಾಗ್ಯ. ಒಬ್ಬರಂತೂ ತಮ್ಮ ಉತ್ಪನ್ನಕ್ಕೆ ಪ್ರಾಣಿಯ ಆಕಾರವನ್ನು ನೀಡಿದ್ದರು. ಮೂವರು ತೀರ್ಪುಗಾರರು ತಿಂದು ನೋಡಿ ಅಂಕವನ್ನು ಕೂಡಿಸಿ, ಕಳೆದು ತೀರ್ಪು ತೀಡಲು ಒದ್ದಾಡುತ್ತಿದ್ದರು. ಕಾರಣ, ಎಲ್ಲಾ ತಿಂಡಿಗಳಲ್ಲೂ ರುಚಿಯಲ್ಲಿ ಪೈಪೋಟಿ!

‘ಹಲಸು: ಆಹಾರ ಸುರಕ್ಷತೆಗೆ ಕೀಲಿಕೈ’ – ಇದು ಸಮ್ಮೇಳನದ ಸ್ಲೋಗನ್. ‘ಹಲಸಿನಿಂದ ಆಹಾರ ಸುರಕ್ಷೆ ಮಾತ್ರವಲ್ಲ, ಸಣ್ಣ ಕೃಷಿಕರ ಸುರಕ್ಷೆಯ ಕೀಲಿಕೈಯೂ ಆಗಬೇಕು. ಗುಣಮಟ್ಟದ ಹಲಸಿನ ಬೀಜದ ಪುಡಿ, ತೊಳೆ ಪುಡಿಗಳಿಗೆ ರಪ್ತು ಸಾಧ್ಯತೆಯಿದೆ’ ಎನ್ನುವ ಅಭಿಪ್ರಾಯ ಕೆನ್ ಅವರದು.

ಸಾಧ್ಯತೆಗಳನ್ನು ಮೀರಿ ಬೆಳೆವ ಸಾಮರ್ಥ್ಯ ಹಲಸಿಗಿದೆ. ಒಂದೆಡೆ ಹಲಸೆಂದರೆ ಹೊಲಸೆನ್ನುವ ವರ್ಗ, ಮತ್ತೊಂದೆಡೆ ಅದರ ತೊಟ್ಟನ್ನು ಮಾತ್ರ ಬಿಟ್ಟು ಉಳಿದೆಲ್ಲಾ ಭಾಗಗಳನ್ನು ಮೌಲ್ಯವರ್ಧಿಸುವ ಹಲಸು ಪ್ರಿಯರು. ಹಲಸಿನ ಸುತ್ತಮುತ್ತ ಸಮಸ್ಯೆಗಳಿವೆ. ಅವುಗಳ ನಿತ್ಯಜಪವೇ ಪರಿಹಾರವಲ್ಲ. ಜರುಗಿದ ಮೇಳಗಳ ವರಿಷ್ಠರ ಮಧ್ಯೆ ಪರಸ್ಪರ ಕೊಂಡಿ ಏರ್ಪಟ್ಟರೆ ಮುಂದಿನ ದಿನಗಳಲ್ಲಿ ‘ಹಲಸಿನ ಕೃಷಿ’ಯೂ ಪಟ್ಟಿಯಲ್ಲಿ ಯಾಕೆ ಸೇರಬಾರದು? ಈ ಕುರಿತು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಯತ್ನ ಸಾಗಿದೆ.

ಮಾರುಕಟ್ಟೆಗಾಗಿ ತರಕಾರಿ, ಸೊಪ್ಪು ತರಕಾರಿ, ಹಣ್ಣುಗಳನ್ನು ವಿಷ ಸಿಂಪಡಿಸದೆ ಬೆಳೆಯಲು ಸಾಧ್ಯವಿಲ್ಲ ಎಂಬ ಪಾಠವನ್ನು ನಮ್ಮ ಕಂಪೆನಿಗಳು ರೈತರಿಗೆ ಬೋಧಿಸಿವೆ. ಈ ಪಾಠದ ಪರಿಣಾಮ, ಇಂದು ಹಳ್ಳಿ ಮೂಲೆಯಲ್ಲೂ ಸಿಗುವ ತರಕಾರಿ, ಹಣ್ಣುಗಳ ಮೂಲಕ ವಿಷವು ಹೊಟ್ಟೆ ಸೇರುತ್ತಿದೆ. ಆರೋಗ್ಯ ದೃಷ್ಟಿಯಿಂದಲಾದರೂ ದೇಸಿ ತರಕಾರಿಗಳ ಬಳಕೆ ಕಾಲದ ಅನಿವಾರ್ಯ.

“ನಮಗೆ ಹಲಸಿನ ಬಗ್ಗೆ ಪೂರ್ವಾಗ್ರಹವಿದೆ. ಕೀಳರಿಮೆಯಿದೆ. ಹಲಸಿನ ಹೀನಾಯ ಸ್ಥಿತಿಯ ಮೂಲಕಾರಣ ಇರುವುದು ನಮ್ಮೆಲ್ಲರ ಮನದಲ್ಲಿ! ಮನೆಯಲ್ಲಿ, ಊರಲ್ಲಿ, ಸಮಾರಂಭಗಳಲ್ಲಿ ಬೆಳೆದವರೇ ಮಾನ ಕೊಡಲು ಆರಂಭಿಸಿದರೆ ಹಲಸಿನ ಶಾಪ ವಿಮೋಚನೆಯ ಇಳಿಲೆಕ್ಕ ಶುರುವಾದೀತು. ಇಲ್ಲವಾದರೆ ಮೋಪುಮೌಲ್ಯದ ಮಾತಷ್ಟೇ ಮೇಲಾದೀತು” ಹಲಸು ಆಂದೋಲನದ ರೂವಾರಿ ‘ಶ್ರೀ’ ಪಡ್ರೆಯವರ ಮಾತು ಪ್ರಸ್ತುತ ಹಲಸಿನ ಕುರಿತಾದ ಸ್ಥಿತಿ-ಗತಿಗೆ ಕನ್ನಡಿ.