ಹಲಸನ್ನು, ಹಲಸಿನ ಪದಾರ್ಥಗಳನ್ನು ಜನಪ್ರಿಯಗೊಳಿಸಲು ಕೆಲವು ಕಡೆ ಹಲಸಿನ ಮೇಳಗಳು ನಡೆದಿವೆ.  ಹೆಚ್ಚು ಬಗೆಯ ಹಲಸಿನ ಅಡುಗೆ ವಿಧಾನಗಳು, ಹೆಚ್ಚು ಮರಗಳನ್ನು ಹೊಂದಿದವರು, ಉತ್ತಮ ತಳಿಗಳನ್ನು ಹೊಂದಿದವರು ಹೀಗೆ ಅಲ್ಲಿ ಏನೆಲ್ಲಾ ದಾಖಲೆ ಮಾಡಲಾಯಿತು.  ಎಲ್ಲೂ ಕಾಯಿ, ಹಣ್ಣುಗಳ ರಕ್ಷಿಸಿಡುವ ಕುರಿತು ಚರ್ಚೆ ನಡೆಯಲಿಲ್ಲ.  ಅಡಿಕೆ ಒಣಗಿಸುವ ಡ್ರೈಯರ್‌ನೊಳಗೆ ಹಲಸಿನ ತೊಳೆಗಳನ್ನು ಇಟ್ಟು ಒಣಗಿಸಿದ್ದರು.  ಬಾಳೆಹಣ್ಣಿನ ಸುರುಳಿಯಷ್ಟೇ ರುಚಿಯಾಗಿತ್ತು.  ಮಲೆನಾಡಿನ ತೇವಾಂಶಕ್ಕೆ ಅದನ್ನು ಹೆಚ್ಚು ದಿನ ಕಾದಿಡಲಾಗಲಿಲ್ಲ.  ಸುಗ್ಗಿ ಬಿಟ್ಟು ಬೇರೆ ಕಾಲದಲ್ಲಿ ಹಲಸನ್ನು ಬಳಸುವಿಕೆಯ ಪ್ರಯತ್ನ ನಿಂತಿತು.

ಸಾಗರ ತಾಲ್ಲೂಕಿನ ಖಂಡಿಕಾದ ಶೇಷಭಟ್ಟರ ಮನೆಯಲ್ಲಿ ಈ ಬಾರಿಯೂ ಸಾವಿರಾರು ಹಲಸಿನ ಕಾಯಿಗಳು ಬಿಟ್ಟಿವೆ.  ಫಲಗುತ್ತಿಗೆ ಹಿಡಿದವರು ಹಲಸನ್ನು ಕೊಯ್ಯಲು ಹೇಳಿದರು.  ಲಾರಿಗೆ ತುಂಬಿದ್ದೂ ಆಯಿತು.  ಆದರೆ ಗುತ್ತಿಗೆ ಹಿಡಿದವರು ಪತ್ತೆಯೇ ಇಲ್ಲ.  ಲಾರಿಯೇ ಕೊಳೆತು ವಾಸನೆ ಬಂದಂತೆ ಸುತ್ತಲೂ ವಾಸನೆ ತುಂಬಿತು.  ಎರಡು ದಿನಗಳ ನಂತರ ಹಲಸೆಲ್ಲಾ ಗೊಬ್ಬರ ಗುಂಡಿ ಸೇರಿತು.

ಚಿಕ್ಕಮಗಳೂರು, ಮಡಿಕೇರಿಯ ಪ್ಲಾಂಟೇಶನ್‌ಗಳಲ್ಲಿ ಹಲಸಿನ ಹಣ್ಣುಗಳನ್ನು ಕೇಳುವವರೇ ಇಲ್ಲದೆ ವ್ಯರ್ಥವಾಗಿ ಕೊಳೆಯುತ್ತಿವೆ.  ಈ ಅಪ್ಪಟ ದೇಸೀ ಹಣ್ಣನ್ನು ತಿನ್ನುವವರಿಲ್ಲವೇ?  ಬೆಂಗಳೂರಿನ ಬಡಾವಣೆಗಳಲ್ಲಿ ತಳ್ಳುಗಾಡಿಗಳಲ್ಲಿ ಹಲಸಿನ ತೊಳೆಗಳು ಬಿಕರಿಯಾಗುತ್ತಿವೆ.  ಒಂದು ತೊಳೆಗೆ ಎರಡು ರೂಪಾಯಿಗಳು!! ಹತ್ತು ತೊಳೆಗಳನ್ನು ಕೊಂಡರೆ ೧೫ ರೂಪಾಯಿಗಳು.  ನಮ್ಮೂರಲ್ಲಿ ಇಡೀ ಹಣ್ಣಿಗೆ ೧೫ ರೂಪಾಯಿ ಕೊಡುವವರಿಲ್ಲ.  ಗುಲ್ಬರ್ಗಾ ಜಿಲ್ಲೆಯ ಸೇಡಂನ ಲಾಯರ್ ಬಸವರಾಜ್‌ಗೆ ಹಲಸಿನ ಹಣ್ಣೆಂದರೆ ಪಂಚಪ್ರಾಣ.  ಹಲಸಿನ ಹಣ್ಣು ಮಾರ್ಕೆಟ್‌ಗೆ ಬಂದ ಸುದ್ದಿ ಕೇಳಿ, ನಾವು ಹೋಗುವುದರೊಳಗೆ ಎಲ್ಲಾ ಖಾಲಿ.  ನಿಮ್ಮೂರಲ್ಲಿ ವ್ಯರ್ಥವಾಗುತ್ತಿದೆ ಅಂದರೆ ನಮಗೊಂದು ಲೋಡ್ ಕಳೂಹಿಸುವಿರಾ? ಎಂಬ ಹಕ್ಕೊತ್ತಾಯ ಅವರದು.

ಹಲಸಿನ ಹಣ್ಣಿಗೆ ಬೆಲೆಯಿದೆ, ಕೊಳ್ಳುವವರಿದ್ದಾರೆ.  ವ್ಯವಸ್ಥಿತ ಮಾರುಕಟ್ಟೆ ಇಲ್ಲ, ಪ್ರಪಂಚದ ಅತಿ ದೊಡ್ಡಹಣ್ಣಿನ ಹೀನ ಸ್ಥಿತಿ.

ಮೂಡಬಿದ್ರೆಯ ಎಲ್.ಸಿ. ಸೋನ್ಸ್ ಅವರು ಇದನ್ನು ಒಪ್ಪುವುದಿಲ್ಲ.  ಈಗ್ಗೆ ಹತ್ತು ವರ್ಷಗಳ ಹಿಂದೆ ಅವರಲ್ಲಿದ್ದ ಡೋರಿಯನ್ ಹಲಸಿನ ಹಣ್ಣುಗಳನ್ನು ಒಯ್ಯಲು ಬೆಂಗಳೂರಿನ ವರ್ತಕರು ಹುಡುಕಿಕೊಂಡು ಬಂದಿದ್ದರಂತೆ!  ಅವರಿಗೆ ದೇಸಿ ಹಲಸಿನ ಹಣ್ಣುಗಳನ್ನು ಪರಿಚಯಿಸಿದರು.  ಅವರು ಮುಂದೆ ಖಾಯಂ ಗಿರಾಕಿಗಳಾದರು.  ಬೆಳೆದವರಿಗೆ ಮಾರುವ ರೀತಿಯೂ ಗೊತ್ತಿರಬೇಕು ಎನ್ನುವ ಸಲಹೆ ಅವರದು.   ನಾವು ಬೆಳೆವ ಬೆಳೆಗೆ ಮಾರುಕಟ್ಟೆ ರೂಪಿಸುವುದು ಹಾಗೂ ಮೌಲ್ಯವರ್ಧನೆ ಮಾಡುವುದು ಸಾವಯವ ಕೃಷಿಯ ಭಾಗವೇ ಆಗಿದೆ ಎನ್ನುವ ಎ.ಪಿ. ಚಂದ್ರಶೇಖರ್ ಅವರು ಅದನ್ನು ಪ್ರಾಯೋಗಿಕವಾಗಿ ಮಾಡುತ್ತಲೂ ಇದ್ದಾರೆ.

ಹಲಸು ಸರ್ವಋತು ಹಣ್ಣಲ್ಲ.  ಹಣ್ಣಾದ ಮೇಲೆ ಹೆಚ್ಚು ದಿನ ಕಾಪಿಡಲು ಸಾಧ್ಯವಾಗುವುದಿಲ್ಲ.  ಮಳೆಗಾಲದಲ್ಲಿ ಹಣ್ಣಾಗುವ ಕಾರಣ ಕೊಳ್ಳುವವರಿಲ್ಲ.  ಹೆಚ್ಚು ತಿಂದರೆ ಆರೋಗ್ಯಕ್ಕೆ ಒಳ್ಳೆಯದಲ್ಲ.  ಏನೆಲ್ಲಾ ಸಬೂಬು ಕೃಷಿಕರದು.

ಸಾಗರ ತಾಲ್ಲೂಕಿನ ಗೋಳಗೋಡು ಗೀತಾಭಟ್, ಹಲಸಿನಲ್ಲಿ ಮುನ್ನೂರಕ್ಕೂ ಹೆಚ್ಚು ಅಡುಗೆ ಮಾಡುತ್ತಾರೆ.  ನಮಗೆ ಗುಜ್ಜೆಯಿಂದ (ಎಳೆಯ ಕಾಯಿ) ಹಣ್ಣಿನವರೆಗೆ ಎಷ್ಟಿದ್ದರೂ ಬೇಕು.  ದಿನಾಲೂ ಅದನ್ನೇ ತಿನ್ನುತ್ತೇವೆ ಎನ್ನುತ್ತಾರೆ.

ಸಾಗರ, ಶಿರಸಿ, ಯಲ್ಲಾಪುರಗಳಲ್ಲಿ ಹಲಸಿನ ಸುಗ್ಗಿಯಲ್ಲಿ ದಿನಕ್ಕೊಂದು ಪದಾರ್ಥ.  ದಿನಕ್ಕೊಂದು ರುಚಿ.  ಹಲಸಿನ ಕಾಯಿ ತೊಳೆಗಳನ್ನು ಬಿಡಿಸಿ ಉಪ್ಪಿನೊಂದಿಗೆ ಬೆರೆಸಿ ಗಾಳಿಯಾಡದಂತೆ ಭರಣಿ ಅಥವಾ ಪ್ಲಾಸ್ಟಿಕ್ ಕ್ಯಾನ್‌ಗಳಲ್ಲಿ ಇಟುಕೊಳ್ಳುತ್ತಾರೆ.  ವರ್ಷವಿಡೀ ಬೇಕಾದಾಗಲೆಲ್ಲ ಅಡುಗೆಗೆ ಬಳಸುತ್ತಾರೆ.  ಹಣ್ಣಿನ ತೊಳೆಗಳನ್ನು ಬಿಸಿಲಿನಲ್ಲಿ ಒಣಗಿಸಿ, ಕಾವಲಿಯಲ್ಲಿ ಬೇಯಿಸಿ ಗಾಳಿಯಾಡದಂತೆ ಡಬ್ಬಿಯಲ್ಲಿ ತುಂಬಿಡುತ್ತಾರೆ.  ಆಗಾಗ ಕುರುಕಲು ತಿಂಡಿಯಾಗಿ ಬಳಸುತ್ತಾರೆ.  ಮನೆಯಲ್ಲಿ ಒಂದೆರಡು ಹಲಸಿನ ಮರಗಳಿದ್ದರೆ ಕಾಯಿ, ಹಣ್ಣೆಲ್ಲಾ ಬಳಕೆಯಾಗುತ್ತದೆ.  ಹೆಚ್ಚು ಮರವಿದ್ದು ಕಾಯಿ ಹೆಚ್ಚಾದರೆ ವ್ಯರ್ಥವಾಗುವ ಸಾಧ್ಯತೆ.

ಹಲಸನ್ನು, ಹಲಸಿನ ಪದಾರ್ಥಗಳನ್ನು ಜನಪ್ರಿಯಗೊಳಿಸಲು ಕೆಲವು ಕಡೆ ಹಲಸಿನ ಮೇಳಗಳು ನಡೆದಿವೆ.  ಹೆಚ್ಚು ಬಗೆಯ ಹಲಸಿನ ಅಡುಗೆ ವಿಧಾನಗಳು.  ಹೆಚ್ಚು ಮರಗಳನ್ನು ಹೊಂದಿದವರು, ಉತ್ತಮ ತಳಿಗಳನ್ನು ಹೊಂದಿದವರು ಹೀಗೆ ಅಲ್ಲಿ ಏನೆಲ್ಲಾ ದಾಖಲೆ ಮಾಡಲಾಯಿತು.

ಎಲ್ಲೂ ಕಾಯಿ, ಹಣ್ಣುಗಳ ರಕ್ಷಿಸಿಡುವ ಕುರಿತು ಚರ್ಚೆ ನಡೆಯಲಿಲ್ಲ.  ಅಡಿಕೆ ಒಣಗಿಸುವ ಡ್ರೈಯರ್‌ನೊಳಗೆ ಹಲಸಿನ ತೊಳೆಗಳನ್ನು ಇಟ್ಟು ಒಣಗಿಸಿದ್ದರು.  ಬಾಳೆಹಣ್ಣಿನ ಸುರುಳಿಯಷ್ಟೇ ರುಚಿಯಾಗಿತ್ತು.  ಮಲೆನಾಡಿನ ತೇವಾಂಶಕ್ಕೆ ಅದನ್ನು ಹೆಚ್ಚು ದಿನ ಕಾದಿಡಲಾಗಲಿಲ್ಲ. ಸುಗ್ಗಿ ಬಿಟ್ಟು ಬೇರೆ ಕಾಲದಲ್ಲಿ ಹಲಸನ್ನು ಬಳಸುವಿಕೆಯ ಪ್ರಯತ್ನ ನಿಂತಿತು.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ, ಸುಸ್ಥಿರ ತಂತ್ರಜ್ಞಾನ ಕೇಂದ್ರದವರು ಇದಕ್ಕೊಂದು ಪರಿಹಾರವಾಗಿ ಬಯೋಮಾಸ್ ಡ್ರೈಯರನ್ನು ರೂಪಿಸಿದ್ದಾರೆ.  ಅದರಲ್ಲಿ ಹಲಸಿನ ತೊಳೆಗಳನ್ನು ಒಣಗಿಸಿ, ಪುಡಿ ಮಾಡಿ ಸೆಲ್ಲೋಪೆನ್ ಕವರ್‌ನಲ್ಲಿ ಇಟ್ಟರೆ ವರ್ಷವಾದರೂ ಹಾಳಾಗದು ಎನ್ನುತ್ತಾರೆ ಪ್ರೊ|| ಲೋಪ್ರಸ್.  ಹಲಸಿನ ತೊಳೆಗಳಲ್ಲಿಯ ತೇವಾಂಶದ ಪ್ರಮಾಣವನ್ನು ಅನುಸರಿಸಿ ನಿಶ್ಚಿತ ತಾಪಮಾನದಲ್ಲಿ ಒಣಗಿಸುತ್ತಾರೆ.  ಆಗ ತೊಳೆಗಳನ್ನು ಪುಡಿ ಮಾಡುವಷ್ಟು ಗಟ್ಟಿಯಾಗುತ್ತವೆ.  ಅದನ್ನು ಹಾಗೇ ಅಥವಾ ಪುಡಿ ಮಾಡಿದರೆ ಅದರಲ್ಲಿರುವ ಪೌಷ್ಟಿಕಾಂಶ ಹಾಳಾಗದು.  ವಾಸನೆ ಮತ್ತು ರುಚಿಯೂ ಹಾಳಾಗದು.  ಪುಡಿಯನ್ನು ಹಾಲಿಗೆ ಅಥವಾ ನೀರಿಗೆ ಸೇರಿಸಿ ಜ್ಯೂಸ್ ಮಾಡಿಕೊಳ್ಳಬಹುದು.  ಹಲಸಿನ ಹಿಟ್ಟಿನಿಂದ ಮಾಡುವ ಪದಾರ್ಥಗಳನ್ನು ಈ ಪುಡಿಯಿಂದಲೂ ಮಾಡಬಹುದು.

ಈ ಡ್ರೈಯರ್‌ಗಳು ಕೇವಲ ಹಲಸಿನ ತೊಳೆಗಳೊಂದೇ ಅಲ್ಲದೇ ಇತರ ಹಣ್ಣು ತರಕಾರಿಗಳನ್ನು ಒಣಗಿಸಲು ಉಪಯುಕ್ತ.  ೧೫ ಕಿಲೋಗ್ರಾಂಗಳಷ್ಟು ಹಿಡಿಸುವ ಡ್ರೈಯರ್‌ಗೆ ೧೫ ಸಾವಿರ ರೂಪಾಯಿಗಳು.  ೨೦೦ ಕಿಲೋ ಗ್ರಾಂ ಇದ್ದರೆ ೮೩ ಸಾವಿರ ರೂಪಾಯಿಗಳು.  ಈ ಡ್ರೈಯರ್‌ಗಳಿಗೆ ಖಾದಿ ಹಾಗೂ ಗ್ರಾಮೋದ್ಯೋಗ ಕೈಗಾರಿಕಾ ಕೇಂದ್ರದಿಂದ ಸಾಲ ಸೌಲಭ್ಯವಿದೆ.  ಟೈಡ್ (ಟೆಕ್ನಾಲಜಿ ಇನ್ನೋವೇಶನ್ ಡೆವಲಪ್‌ಮೆಂಟ್ ಎಂಡೋವರ್‍ಸ್) ಸಂಸ್ಥೆಯು ಸಣ್ಣರೈತರನ್ನು ಸ್ವಾವಲಂಬಿಗಳನ್ನಾಗಿಸಲು ಅನೇಕ ರೀತಿಯ ಸಾಲ ಯೋಜನೆಗಳನ್ನು ರೂಪಿಸಿದೆ.  ಆಸಕ್ತ ರೈತರು ಜಿಲ್ಲಾ ಕೇಂದ್ರಗಳಲ್ಲಿ ವಿಚಾರಿಸಬಹುದು.

ಸಿಎಸ್‌ಟಿಯೂ ಸಹ ಕರ್ನಾಟಕದಲ್ಲಿ ಸಣ್ಣ ರೈತರಿಗೋಸ್ಕರ ಬಯೋಮಾಸ್ ಡ್ರೈಯರ್ ಉಪಯೋಗಿಸಿ ಹಣ್ಣು ಮತ್ತು ತರಕಾರಿಗಳನ್ನು ಸಂರಕ್ಷಿಸುವ ಕುರಿತ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಿದೆ.  ಉಪಬೆಳೆಗಳನ್ನು ಮಾರುಕಟ್ಟೆಗೆ ಅಣಿಗೊಳಿಸುವ ಸಲಹೆ ಹಾಗೂ ತಂತ್ರಗಳನ್ನು ಅವರಿಗೆ ನೀಡುವ ಉದ್ದೇಶ ಎನ್ನುತ್ತಾರೆ ಸಿಎಸ್‌ಟಿಯ ಹಿರಿಯ ವಿಜ್ಞಾನಿ ಎಚ್.ಐ. ಸೋಮಶೇಖರ್.

ಹಲಸಿನ ಕೃಷಿ ಹೇಗೆ?

ಹಲಸು ಪಶ್ಚಿಮಘಟ್ಟದ ಪ್ರಜೆ.  ಕೆಂಪುಮಣ್ಣು, ಮರಳು ಮಿಶ್ರಿತ ಕೆಂಪುಮಣ್ಣು, ಗೋಡುಮಣ್ಣು ಇಷ್ಟ.  ಯಾವುದೇ ಮಣ್ಣು ಆದೀತು.  ಸಸಿಯ ಬುಡದಲ್ಲಿ ನೀರು ನಿಲ್ಲಬಾರದು ಅಷ್ಟೆ.

ಬೀಜದಿಂದ ಸುಲಭವಾಗಿ ಸಸಿ ಮಾಡಬಹುದು.  ನೀರು ನಿಲ್ಲುವ, ಅತಿ ಹೆಚ್ಚು ಮಳೆ ಪ್ರದೇಶವದರೆ ಉಬ್ಬು ಪಾತಿ ಮಾಡಬೇಕು.  ಅನ್ಯಥಾ ತಗ್ಗು ಪಾತಿ ಆಗಬಹುದು.  ನೆಲವನ್ನು ಅರ್ಧಮೀಟರ್‌ನಷ್ಟು ಅಗೆದು ಮಣ್ಣಿನಲ್ಲಿರುವ ಬೇರು, ಕಳೆಗಳನ್ನು ತೆಗೆದುಹಾಕಿ ಪಾತಿ ಮಾಡಬೇಕು.  ಕೊಟ್ಟಿಗೆ ಗೊಬ್ಬರ, ಮರಳು, ಕೆಂಪುಮಣ್ಣನ್ನು ೧:೧:೧ ಪ್ರಮಾಣದಲ್ಲಿ ಮಿಶ್ರ ಮಾಡಿ ಹಾಕಬೇಕು.

ಬೀಜಗಳನ್ನು ೨೦ ಸೆಂಟಿಮೀಟರ್ ಅಂತರದಲ್ಲಿ ನೆಡಬೇಕು.  ಎಲ್ಲಾ ಬೀಜಗಳು ೧೫ ದಿನಗಳಲ್ಲಿ ಸಸಿಗಳಾಗುತ್ತವೆ.  ಮಳೆಗಾಲವಲ್ಲದಿದ್ದರೆ ದಿನಾಲೂ ನೀರು ಹಾಕಬೇಕು.  ಪಾತಿಗಳಲ್ಲಿ ಕಳೆಯಾಗದಂತೆ ನೋಡಿಕೊಳ್ಳಬೇಕು.

ನಾಲ್ಕು ಎಲೆಗಳಾಗುತ್ತಿದ್ದಂತೆ ಕಿತ್ತು ನೆಡಬೇಕು.  ತಾಯಿಬೇರು ರೀತಿಯಾದ್ದರಿಂದ ಸಸಿ ಕೀಳುವಾಗ ಬೇರಿಗೆ ಪೆಟ್ಟಾದರೆ ಸಸಿ ಬದುಕುವುದಿಲ್ಲ.  ನೆಟ್ಟ ಮೇಲೆ ಮೂರು-ನಾಲ್ಕು ವರ್ಷಗಳವರೆಗೆ ಬೇಸಿಗೆಯಲ್ಲಿ ನೀರು ಕೊಡಬೇಕು.

ಪಾಲಿಥೀನ್ ಚೀಲಗಳಲ್ಲೂ ಸಸಿಗಳನ್ನು ಬೆಳೆಸಬಹುದು.  ಬೇರು ನೆಲಕ್ಕಿಳಿಯದ ಹಾಗೆ ಅಡಿಯಲ್ಲಿ ಚಪ್ಪಡಿ ಕಲ್ಲು ಹಾಕಿದರೆ ಒಳ್ಳೆಯದು ಅಥವಾ ಹದಿನೈದು ದಿನಗಳಿಗೊಮ್ಮೆ ಜಾಗ ಬದಲಿಸುತ್ತಾ ಇರಬೇಕು.

ಸಸಿಗಳನ್ನು ಮಣ್ಣುಸಹಿತ ಕಿತ್ತು ಗುಣಿಗಳಲ್ಲಿ ಅದರಳತೆಯ ರಂಧ್ರ ಮಾಡಿ, ಸಸಿ ನೆಟ್ಟು ಮಣ್ಣು ತುಂಬಿ ಬಿಗಿ ಮಾಡಬೇಕು.  ಮಳೆಗಾಲ ಮುಗಿದಾಗ ಸುತ್ತಲೂ ಮಣ್ಣು ಅಗೆದು ಹದ ಮಾಡಬೇಕು.  ಆಗ ಬೇಸಿಗೆಯವರೆಗೆ ನೀರು ಕೊಡುವುದು ಬೇಡ.  ಪ್ರಾಣಿಗಳು ಸಸಿಗಳ ಎಲೆಗಳನ್ನು ತಿನ್ನದ ಹಾಗೆ ಸುತ್ತಲೂ ಬೇಲಿ ಕಟ್ಟಬೇಕು.  ಸಸಿಗಳ ಅಂತರ ನಾಲ್ಕು ಮೀಟರ್ ಇರಲಿ.

ನಾಲ್ಕು ವರ್ಷಗಳವರೆಗೆ ಗೊಬ್ಬರ, ನೀರು ಚೆನ್ನಾಗಿ ನೀಡಿದರೆ ಗಿಡ ಉತ್ತಮವಾಗಿ ಬೆಳೆಯುತ್ತದೆ. ಹತ್ತು ವರ್ಷಗಳ ನಂತರ ಫಸಲು ಪ್ರಾರಂಭ.  ಸಸಿಗಳ ತ್ರಿಕೋನಾಕಾರದಲ್ಲಿ ಬೆಳೆಯುತ್ತವೆ.  ಮುಖ್ಯ ಕಾಂಡಕ್ಕೆ ಪೆಟ್ಟಾದರೆ ಮಾತ್ರ ಅಕ್ಕಪಕ್ಕ ಟೊಂಗೆ ಒಡೆಯುತ್ತದೆ.

ಸಾಗರ ತಾಲ್ಲೂಕು ಬೇಳೂರಿನ ದೇವರು ಭಟ್ಟರು ಸುಮಾರು ೩೫ ವರ್ಷಗಳ ಹಿಂದೆ ಕಸಿ ಮಾಡಿ ಯಶಸ್ವಿಯಾಗಿದ್ದಾರೆ.  ಕೆಳದಿ ಬಕ್ಕೆ ಎಂಬ ಶ್ರೇಷ್ಠ ಮಾದರಿಯ ಹಲಸನ್ನು ಕಸಿ ವಿಧಾನದಲ್ಲಿ ಅಭಿವೃದ್ಧಿಪಡಿಸಿದ್ದಾರೆ.  ಬೇಳೂರಿನ ಪ್ರಗತಿಪರ ಕೃಷಿಕ ಹೆಗಡೆ ಸುಬ್ರಾವ್ ಪ್ರಕಾರ ಬೇರೆಲ್ಲಾ ಕಸಿವಿಧಾನಗಳಿಗಿಂತಲೂ ಹಲಸಿಗೆ ಲೇಯರ್ ಕಸಿ ವಿಧಾನ ಹೆಚ್ಚು ಪರಿಣಾಮಕಾರಿ.  ಆದರೆ ಸೇರುವಿಕೆ ನಿಧಾನ.  ಕಾಂಡದ ಲೇಯರ್ ತೆಗೆದು ಒಸರುವ ಹಾಲು ಮತ್ತು ಮೇಣವನ್ನು ಚೆನ್ನಾಗಿ ಒರೆಸಿ ತೆಗೆದು ಲೇಯರಿಂಗ್ ಕಸಿ ಮಾಡಬೇಕು.  ಹೀಗೆ ಒರೆಸುವಾಗ ಕಾಂಡದ ಭಾಗ ಹಾನಿಗೀಡಾದರೆ ಕಸಿ ಸೇರುವುದಿಲ್ಲ ಎನ್ನುವ ಕಿವಿಮಾತನ್ನು ಹೇಳುತ್ತಾರೆ.

ಕಸಿಗಿಡಗಳು ಬೇಗ ಫಸಲನ್ನು ನೀಡುತ್ತವೆ. ಆದರೆ ಕಸಿ ಸಫಲತೆಯ ಪ್ರಮಾಣ ಶೇಕಡಾ ೨೦ನ್ನೂ ದಾಟುವುದಿಲ್ಲ.  ಕಾರಣ ಕಾಂಡದಲ್ಲಿರುವ ಫಿನೋಲಿಕ್ ಅಂಶವು ಅಡ್ಡಿಪಡಿಸುತ್ತದೆ ಎನ್ನುತ್ತಾರೆ ಹಲಸಿನ ಅಧ್ಯಯನ ಮಾಡಿ ಪಿಎಚ್‌ಡಿ ಪದವಿ ಪಡೆದಿರುವ ಡಾ. ರುಕ್ಮಿಣಿ ಅರವಿಂದ್.

ಹಲಸು ಉತ್ಕೃಷ್ಟ ಆಹಾರ.  ವಿಟಮಿನ್ ಎ, ಸ್ಟಾರ್ಚ್ ಅಧಿಕ ಪ್ರಮಾಣ ಹೊಂದಿದೆ.  ಮಕ್ಕಳಿಂದ ಮುದುಕರವರೆಗೆ ತಿನ್ನಲು ಯೋಗ್ಯವಾದ ಹಣ್ಣು.  ತೊಳೆಗಳನ್ನು ತೆಗೆದ ಮೇಲೆ ಉಳಿದ ಭಾಗಗಳನ್ನು ಸಣ್ಣನೆ ಚೂರು ಮಾಡಿ ಹಸು, ಎಮ್ಮೆಗಳಿಗೆ ನೀಡಬಹುದು.  ಹಾಲು ಹೆಚ್ಚುತ್ತದೆ.  ಹಲಸಿನ ಎಲೆಗಳನ್ನು ಅರೆಬೇಯಿಸಿ ಕೊಡಬಹುದು ಇತ್ಯಾದಿ ಪ್ರಯೋಗಗಳನ್ನು ಹೇಳುತ್ತಾರೆ.

ಹಲಸನ್ನು ಆಯುಷ್ಯ, ಆರೋಗ್ಯ, ಆಹಾರ ಹಾಗೂ ಆರ್ಥಿಕ ಕಾರಣಗಳಿಗಾಗಿ ಬೆಳೆಯಬಹುದು ಎಂದು ವೃಕ್ಷಾಯುರ್ವೇದದಲ್ಲಿ ಹೇಳಿದೆ.  ಪಶ್ಚಿಮಘಟ್ಟಗಳಲ್ಲಿ ಬಕ್ಕೆ ಹಲಸು, ಅಂಬಲಿ ಹಲಸು, ಬೇರು ಹಲಸು, ನೀರು ಹಲಸು, ಹೆಬ್ಬಲಸು ಹೀಗೆ ಐದು ಬಗೆಗಳಿವೆ.  ಪಶ್ಚಿಮ ಆಫ್ರಿಕಾ, ಬ್ರೆಜಿಲ್, ಸುರಿನಾಮ್ ಇತ್ಯಾದಿ ದೇಶಗಳಲ್ಲಿ ಹಲಸಿನ ಬೇರೆ ಬೇರೆ ಪ್ರಕಾರಗಳಿವೆ.  ಡೋರಿಯನ್, ಸಿಂಗಾಪುರ ಹಲಸು, ರುದ್ರಾಕ್ಷಿ ಹಲಸು ಇವೆಲ್ಲಾ ಹೆಚ್ಚು ರುಚಿ.  ಮಾರುಕಟ್ಟೆಯಲ್ಲಿ ಬೇಗ ಬಿಕರಿಯಾಗುತ್ತವೆ.  ನಮ್ಮ ರಾಜ್ಯದ ಸಕ್ಕರೆಪಟ್ಟಣ ಹಾಗೂ ಪಿರಿಯಾಪಟ್ಟಣದ ಹಲಸಿನ ಹಣ್ಣುಗಳು ರುಚಿ ಜಾಸ್ತಿ (ಹಲಸು ಮಣ್ಣಿನ ಗುಣವನ್ನವಲಂಬಿಸಿದೆ).

ಮನೆಯ ಸುತ್ತ, ಸಾಲುಮರವಾಗಿ, ರಸ್ತೆಯ ಅಂಚುಗಳಲ್ಲಿ, ತೋಟ ಗದ್ದೆಗಳ ಬದುಗಳಲ್ಲಿ, ಬೆಟ್ಟಗಳಲ್ಲಿ, ಉದ್ಯಾನವನಗಳಲ್ಲಿ, ತೋಪು, ಸಾಮೂಹಿಕ ಕಾಡುಗಳಲ್ಲಿ ಹೀಗೆ ಎಲ್ಲಾ ಕಡೆಯೂ ಸಲ್ಲುವ ನಿತ್ಯಹಸುರಿನ ಚಂದದ ಮರವಿದು.

ವಗ್ಗರಣೆ : ಹಲಸಿನ ಬಣ್ಣ ಹಳದಿ.  ಹಿಂದೆ ಬೌದ್ಧ ಭಿಕ್ಷುಗಳು ತಮ್ಮ ತಮ್ಮ ಬಟ್ಟೆ ಹಳದಿ ಬಣ್ಣದಿಂದ ಹೊಳೆಯುವಂತೆ ಮಾಡಲು ಹಲಸಿನ ಕಾಂಡಗಳ ಪುಡಿಯನ್ನೇ ಬಳಸುತ್ತಿದ್ದರಂತೆ.  ಈಗಲೂ ಬಟ್ಟೆಗೆ, ನೈಸರ್ಗಿಕ ಬಣ್ಣ ಹಾಕುವವರು ಇದನ್ನು ಉಪಯೋಗಿಸಬಹುದು.