ಉತ್ತರ ಕನ್ನಡದ ಸರ್ಕುಳಿಯ ಮಾದೇ ಗೌಡರ ಮನೆ ಪ್ರಧಾನ ಬಾಗಿಲ ಪಟ್ಟಿ ಹಲಸಿನ ಮರದಿಂದ ತಯಾರಿಸಿದ್ದು. ಮಲೆನಾಡಿನಲ್ಲಿ  ಮನೆ ನಿರ್ಮಾಣ ಸಂದರ್ಭದಲ್ಲಿ  ಬಾಗಿಲಿಗೆ ಪ್ರಾಶಸ್ತ್ಯವಾದ ಕಟ್ಟಿಗೆ ಹಲಸು. ಇಲ್ಲಿ ಗೌಡರು ಹಲಸನ್ನೇ ಬಳಸಿದ್ದರಲ್ಲಿ  ಮೇಲ್ನೋಟಕ್ಕೆ ವಿಶೇಷ ಕಾಣುವದಿಲ್ಲ. ಕೆದಕಿದರೆ ಕುತೂಹಲಕರ ಮಾಹಿತಿ ಈಚೆ ಬರುತ್ತದೆ. ಕೆಲವು ವರ್ಷಗಳ ಹಿಂದೆ ಗೌಡರ ಕುಟುಂಬಕ್ಕೆ ಹೊತ್ತಿನ ತುತ್ತಿಗೂ ತತ್ವಾರ, ತೀರ ಬಡತನ. ಬದುಕಿಗೆ  ಆಧಾರ ಮನೆ ಸನಿಹದ ಹಲಸಿನ ಮರ. ಏಪ್ರಿಲ್-ಜುಲೈ ಕಾಲಕ್ಕೆ ವಿಪರೀತ ಫಲ, ಮಾಗಿದ ಹಣ್ಣು/ಕಾಯಿ ತಿಂದು ಇವರ ಜೀವನ! ಮಳೆಗಾಲದಲ್ಲಿ ಬೆಳಗಿನ ಚಹ ಸೇವನೆ ಕಾಲಕ್ಕೆ ಹಲಸಿನ ಬೇಳೆ(ಬೀಜ) ಸುಟ್ಟು ತಿನ್ನುವದು ಉಪಹಾರ. ಒಟ್ಟಿನಲ್ಲಿ ಸಂಕಷ್ಟದಲ್ಲಿ  ನಾಲ್ಕಾರು ಜನರನ್ನು ಸಾಕಿ ಸಲ”ದ ಮರ ದೈವ ಅದು.  ಕೆಲ ವರ್ಷಗಳ ಹಿಂದೆ ಅದು ಸಾವನ್ನಪ್ಪಿತು, ಆಹಾರದ ಆಧಾರವಾದ ಮರ ನೆನೆದು ಕುಟುಂಬ ಮರುಗಿತು. ಈಗ ಕುಟುಂಬಕ್ಕೆ ಅಂತಹ ಬಡತನವಿಲ್ಲ, ಆದರೆ ತಾವು ಬದುಕು ಸಾಗಿಸಿದ ಮಾರ್ಗ ಹಿರಿಯರಿಗೆ ಹಸಿ ಹಸಿ ನೆನಪು. ಹಲಸಿನ ಹಸುರು ಬದುಕಿನ ಬೆಂಬಲದ  ಸವಿ ನೆನಪಿನ ಸಾಕ್ಷಿಗೆಂದು ಸತ್ತ ಮರದ ನಾಟಾ ಬಳಸಿ ಮಾದೇ ಗೌಡರು  ಪ್ರಧಾನ ಬಾಗಿಲು ಮಾಡಿಸಿದ್ದಾರೆ. ನಿತ್ಯ ಹೂವು ಹಾಕಿ ಪೂಜೆ ಸಲ್ಲಿಸುವಾಗ ಬಡತನದಲ್ಲಿ ಬಳಲಿದ ದಾರಿ ಹಾಗೂ  ಹಲಸು ಬದುಕಿಸಿದ ರೀತಿ  ಕಾಣುತ್ತದೆ.

ಈಗ ೨೦ ವರ್ಷದ ಹಿಂದಿನ ಚಿತ್ರಗಳು ನೆನಪಾಗುತ್ತಿವೆ. ಶಾಲೆಗೆ ಹೋಗುವ ಕಾಲಕ್ಕೆ ಹಲಸಿನ ಹಣ್ಣು ತಿಂದು ಊಟ ಮರೆತ ದಿನಗಳು ಹಲವು. ಮಳೆಗಾಲ ಆರಂಭಕ್ಕೆ ಮಲೆನಾಡಿನಲ್ಲಿ ವಿಪರೀತ ಹಸಿವು. ಕೃಷಿ ಕೆಲಸಕ್ಕೆ ಹೋದವರು ಬೆಳಿಗ್ಗೆ  ಒಬ್ಬೊಬ್ಬರು ಒಂದೊಂದು ಹಲಸಿನ ಹಣ್ಣು ತಿನ್ನುತ್ತಿದ್ದರು! ಅಷ್ಟೇಕೆ ಊಟ ಮುಗಿಸಿದ ತಕ್ಷಣ ಹಲಸಿನ ಹಣ್ಣು ತಿನ್ನುವ ತಾಕತ್ತಿದ್ದವರೂ ನಮ್ಮ ಸುತ್ತ ಇದ್ದರು. ಸರಿ ಸುಮಾರು ೮೦ರ ದಶಕದಲ್ಲಿ ಮಾಲ್ಕಿ ಮರಕಟಾವು ಮಾಡಿ ಮಾರಿದರೆ ಹಣ ಸಿಗುತ್ತದೆಂಬ ಆಸೆ ಚಿಗುರಿತು. ಹಣ್ಣು ಕೊಟ್ಟ ಮರ ಮರೆತು ಜನ ಹಣದ ಹಿಂದೆ ಹೊರಟರು. ಒಂದು ಹಲಸಿನ ಮರ ಇಲ್ಲದಾಗ ತಾವು ಹೇಗೆ ಬಡವರಾದೆವು ಎಂಬುದು ನಂತರದ ವರ್ಷಗಳಲ್ಲಿ ಅರ್ಥವಾಯಿತು.ಕಾಳಿ ಕಣಿವೆಯ  ಕೊಡಸಳ್ಳಿ ಆಣೆಕಟ್ಟೆಯಲ್ಲಿ ಮುಳುಗಡೆಯಾದವರಿಗೆ  ಯಲ್ಲಾಪುರದ ಬೇಡ್ತಿ ಕಣಿವೆಯಲ್ಲಿ  ಪುನರ್ವಸತಿ ಕಲ್ಪಿಸಲಾಗಿದೆ. ತೋಟ, ಮನೆ ಮುಳುಗಡೆಯಾಗಿ ಲಕ್ಷ ಕೋಟಿ ಹಣ ಹಿಡಿದು ಹೊಸ ನೆಲೆಗೆ ಬಂದವರಿಗೆ  ಬದುಕಿಗೆ ಅವಕಾಶಗಳು ತೆರೆದುಕೊಂಡವು. ಆದರೆ ಅಲ್ಲಿ ಹಲಸಿನ ಮರಗಳಿರಲಿಲ್ಲ! ಹೀಗಾಗಿ  ಆರಂಭದ ೮-೧೦ ವರ್ಷ ಈ ಪ್ರದೇಶಕ್ಕೆ ಯಾರಾದರೂ ಹಲಸಿನ ಕಾಯಿ ಹಿಡಿದು ತಂದರೆ ಪುಟ್ಟ ಮಕ್ಕಳ ಹಾಗೇ ಜನ ಹಣ್ಣು ಕೇಳುತ್ತಿದ್ದರು. ಹಣ್ಣು ಸವಿದ ಸಿಹಿ ಸಿಹಿ ನೆನಪು  ಆಸೆ ಹುಟ್ಟಿಸುತ್ತಿತ್ತು. ಒಂದು ಪುಟ್ಟ ಕಾಯಿ ಮನೆಗೆ ತಂದರೆ ಒಂದು ಚೂರು ಜಾನುವಾರಿಗೆ ಸಹ ನೀಡದೇ ಬಳಸುತ್ತಿದ್ದರು! ಹಲಸನ್ನು ಬಳಸಿ ಬಲ್ಲ ಮಲೆನಾಡಿಗರ  ಪ್ರೀತಿ ಅದು.

ಹಲಸಿನ ಹಪ್ಪಳ, ಕಡುಬು, ಚಿಪ್ಸ್, ಹಲ್ವಾ, ಡ್ರೈಪ್ರುಟ್ ಹೀಗೆ ಬಳಕೆ ಬಹುವಿಧ. ಎಳೆಕಾಯಿ ಇದ್ದಾಗ ಸಾಂಬಾರು, ಪಲ್ಯ ಎಂದು ತರಕಾರಿಯಾಗಿ ಬಳಸಲು ಆರಂಭ, ಮಳೆಗಾಲದ ಬಳಕೆಗೆ ಉಪ್ಪಿನಲ್ಲಿ  ಹಲಸಿನ ಸೊಳೆ ಹಾಕಿಡುವ ಪರಿಪಾಟ. ಪ್ರತಿ ಮನೆಯೂ ನೂರಾರು ವಿಧದಲ್ಲಿ  ಇದನ್ನು  ಬಳಸುವ ರೀತಿ ಆಧ್ಯಯನ ಯೋಗ್ಯ. ಮಲೆನಾಡಿನ ಆಹಾರ ಪರಂಪರೆಯಲ್ಲಿ  ಬೇಸಿಗೆಯಲ್ಲಿ  ಸುಲಭ ಮರ ಆಧರಿತ ತರಕಾರಿಯಾಗಿ ಕಾಣಿಸಿಕೊಳ್ಳುವ ವೈಖರಿಯಂತೂ   ಅದ್ಬುತ. ಹಲಸಿನ ಕಾಯಿ ಪೇಪರ್ ದೋಸೆಯನ್ನು  ತೆಂಗಿನ ಕಾಯಿ ಚಟ್ನಿ, ತುಡವಿ ಜೇನುತುಪ್ಪ ಹಾಗೂ ಎಮ್ಮೆ ತುಪ್ಪದ ಜತೆ ಬೆರೆಸಿ ತಿನ್ನುವ ರುಚಿ ವಿಶೇಷ ಸವಿಯ ಬೇಕು! ನಮ್ಮ ಹಿರಿಯಜ್ಜಿಯರು  ಹಲಸನ್ನು ಅಡುಗೆ ಮನೆಗೆ ಅಕ್ಕರೆಯಲ್ಲಿ  ತಂದು ಬಳಸಿದ ರೀತಿ  ಹತ್ತು ಪ್ರೌಢ ಪ್ರಬಂಧಗಳಿಗೂ ಮುಗಿಯದ ಸರಕು!

ಶಿರಸಿ ಸನಿಹದ ಮೆಣಸಿನಕೇರಿಯ ಒಂದು ಮಧ್ಯಮ ವರ್ಗದ ಕುಟುಂಬ, ಹೆಂಡತಿಗೆ ಹೆರಿಗೆ ಸಂದರ್ಭದಲ್ಲಿ ವಿಪರೀತ ರಕ್ತಸ್ರಾವ, ಬದುಕಿ ಉಳಿಯುವದು ಕಷ್ಟ. ಆಸ್ಪತ್ರೆಯಿಂದ ಆಸ್ಪತ್ರೆ ದಾಟುತ್ತ ೫ ಲಕ್ಷ ರೂಪಾಯಿ ನೀರಾಯಿತು. ಕೊನೆಗೆ ಆಕೆ ಬದುಕಿದಳು. ಅರ್ಧ ಎಕರೆ ಅಡಿಕೆ ತೋಟ, ಮೈತುಂಬ ಸಾಲ,  ತೀರಿಸುವದು ಹೇಗೆ ?. ಹಪ್ಪಳ, ಸಂಡಿಗೆ ಮಾಡುವದು ಸುಲಭ ಕೆಲಸ, ಗುಡಿ ಕೈಗಾರಿಕೆಯ ಕನಸು. ಇವರು  ಹಲಸು ನಂಬಿದರು, ಈಗ ಹಲಸಿನ ವಿವಿಧ ಉತ್ಪನ್ನಗಳು ಮನೆಯಂಗಳದಲ್ಲಿ ಜೀವ ಪಡೆಯುತ್ತವೆ. ಹಳ್ಳಿ ಮೂಲೆಗಳಿಂದ ಹಲಸು ಖರೀದಿಸಿ ಸ್ವತಃ ಉತ್ಪನ್ನ ತಯಾರಿಸಿ  ಎರಡು ಮೂರು ತಾಲೂಕುಗಳಿಗೆ ಉತ್ಪನ್ನ ಮಾರುತ್ತಾರೆ. ಕೃಷಿ ಮೇಳ, ಉತ್ಸವಗಳಲ್ಲಿ ಅಂಗಡಿ ಹಾಕಿ ಮಾರುತ್ತಾರೆ. ಕಾಯಿಲೆಯಿಂದ  ಸಾಲಕ್ಕೆ ಮುಳುಗಿದವರು ಹಲಸು ಹಿಡಿದು ಗೆದ್ದಿದ್ದಾರೆ !

ನಮ್ಮ  ಪ್ರತಿ ಹಳ್ಳಿಗಳಲ್ಲಿ  ಹತ್ತಾರು ಹಲಸು ತಳಿಗಳಿವೆ. ಹಪ್ಪಳ, ಕಡುಬು, ಸಂಡಿಗೆ, ಸಾಂಬಾರು ಹೀಗೆ ವಿವಿಧ ಬಳಕೆ ಗುರುತಿಸಿ ಜನ ಹೆಸರಿಟ್ಟಿದ್ದಾರೆ. ಅಂಬಲಿ( ಇಂಬ,ಚಕ್ಕೆ), ಬಕ್ಕೆ ಎಂಬ ಪ್ರಮುಖ ಎರಡು ಶಾಖೆಗಳಲ್ಲಿ  ಸಾವಿರ ಸಾವಿರ ತಳಿಗಳಿವೆ. ಚಂದ್ರಬಕ್ಕೆ, ಖಾನಾಪುರ ಬಕ್ಕೆ, ಮೇಣ ರಹಿತ ಹಲಸು, ರುದ್ರಾಕ್ಷಿ ಬಕ್ಕೆ  ಹೀಗೆ ಹಳ್ಳಿಗರೇ  ನಾಮಕರಣ ಮಾಡಿದ್ದಾರೆ.  ಬೀಜ/ ಕಸಿ ಗಿಡಗಳ ಮುಖೇನ ತಳಿ  ಅಭಿವೃದ್ಧಿ ಯತ್ನಗಳು ನಡೆದಿವೆ.  ಆದರೆ ವಾಣಿಜ್ಯ ಮಟ್ಟದಲ್ಲಿ ಹಲಸಿನ ತೋಟ ಬೆಳೆಸುವ ಪ್ರಯತ್ನಕ್ಕೆ ಇನ್ನೂ ಸರಿಯಾಗಿ ಚಾಲನೆ ದೊರಕಿಲ್ಲ. ಮಾರುಕಟ್ಟೆಯಲ್ಲಿ ಗೆಲ್ಲಬಲ್ಲ, ಪ್ರತಿ ವರ್ಷ ಫಲ ನೀಡಬಲ್ಲ ತಳಿಗಳು ಕೃಷಿಯನ್ನು ಲಾಭದಾಯಕವಾಗಿಸಬಹುದು. 

ಹಲಸಿನ ಮೌಲ್ಯವರ್ದನೆಯ ಕೆಲಸಗಳೂ ನಡೆಯಬೇಕಾಗಿವೆ. ಮಾರುಕಟ್ಟೆಯಲ್ಲಿ ಗಮನಿಸಿದರೆ ಹಲಸಿನ ಉತ್ಪನ್ನಗಳಿಗೆ ಸದಾ ಬೇಡಿಕೆಯಿದೆ. ಹಳ್ಳಿಗಳಲ್ಲಿ ಮಳೆಗಾಲ ಬಂದರೆ ಹಣ್ಣು ಹಾಳಾಗಿ ಕೊಳೆಯುತ್ತಿದೆ ! ಹಲಸಿನ ಪುಟ್ಟ ಎಕನಾಮಿಕ್ಸ್  ಹೀಗಿದೆ, ಒಂದು ಹಲಸಿನ ಕಾಯಿ ಮಾರಿದರೆ ನಮಗೆ ಅಬ್ಬಬ್ಬಾ ಎಂದರೆ ಮಲೆನಾಡಿನಲ್ಲಿ ೫-೧೦ರೂಪಾಯಿ ಸಿಗುತ್ತದೆ. ಇದನ್ನು ಹಪ್ಪಳ ತಯಾರಿಸಿ ಮಾರಿದರೆ ಒಂದು ಹಪ್ಪಳ ೮೦ ಪೈಸೆಗೆ ಸಲೀಸಾಗಿ ಬಿಕ್ರಿಯಾಗುತ್ತದೆ. ಒಂದು ಕಾಯಿಯಿಂದ ೧೨೫-೧೫೦ ಹಪ್ಪಳ ಸಿದ್ದವಾಗಬಹುದು. ಮನೆಯಲ್ಲಿ ಬಿಡುವಿನ ವೇಳೆಯಲ್ಲಿ ಮ”ಳೆಯರು, ಮಕ್ಕಳು ಈ ಕೆಲಸ ಮಾಡಬಹುದು. ಎರಡು ಜನ ದಿನಕ್ಕೆ ೫೦೦ ಹಪ್ಪಳ ತಯಾರಿಸಿದರೂ ೪೦೦ ರೂಪಾಯಿ ಆದಾಯ ! ಇದರಲ್ಲಿ  ಹೆಚ್ಚೆಂದರೆ ೫೦ ರೂಪಾಯಿ ಖರ್ಚು ಬರಬಹುದು.  ಮನೆ ನೆರಳಲ್ಲಿ  ಸುಲಭ  ಉದ್ಯೋಗ  ದೊರೆಯುತ್ತದೆ.

“ಹಸಿದು ಹಲಸು ತಿನ್ನ ಬೇಕು” ಎಂದು ನುಡಿಗಟ್ಟು ಹೇಳುತ್ತ ಇಷ್ಟು ಕಾಲ ಕಳೆದಿದ್ದೇವೆ.  ಉದ್ಯೋಗದ ಹಸಿವು ಎಂದು ಈಗ ಹಳ್ಳಿ ಬಿಡುತ್ತಿದ್ದೇವೆ. ಹಲಸು ನಮ್ಮ ಗ್ರಾಮೀಣ ಬದುಕಿಗೆ  ಭರವಸೆಯ ವೃಕ್ಷ. ನಮ್ಮ ನೆಲದ ಮರವನ್ನು  ಬೆಳೆಸಿ ಗೆಲ್ಲುವಲ್ಲಿ  ನಮ್ಮ ಆಹಾರ ಪರಂಪರೆಯ ನಿಜವಾದ  ಗೆಲುವಿದೆ.