ದಣಪೆ ದಾಟಿ ಒಳಬರುತ್ತಿದ್ದಂತೆಯೇ ನಮಗೆ ಹಲಸಿನ ಮರಗಳು ತುಂಬು ಮಕ್ಕಳೊಂದಿಗೆ ಸ್ವಾಗತ ಕೋರಿದವು.  ತಮ್ಮೊಂದಿಗೆ ಪಾಲಿಗೆ ಬಂದ ಇವರು ಯಾರಪ್ಪ?  ಕಿಚ ಕಿಚ ಕೀಚಾ ಕೀಚಾ ಎನ್ನುತ್ತಾ ಮಂಗಗಳು ಮತ್ತೊಂದು ಹಲಸಿನಮರಕ್ಕೆ ಹಾರಿದವು.  ಬೀಸಿದ ಗಾಳಿ ಸಹ ಯಾವುದೋ ಹಣ್ಣಾಗಿ ಬಿದ್ದ ಹಲಸಿನ ವಾಸನೆಯನ್ನೇ ಹೊತ್ತು ತಂದಿತ್ತು.  ಅಂಗಳಕ್ಕೆ ಬರುವಾಗ ಏಳೆಂಟು ಹಲಸಿನ ಕಾಯಿಗಳು, ಹಂದಿಮರಿಗಳು ಮುಖ ಮುಚ್ಚಿ ಕುಳಿತಂತೆ ಕುಳಿತಿದ್ದವು.  ಜಗಲಿಯಲ್ಲಿ ನಾಲ್ಕಾರು ಭಾಗ ಮಾಡಿದ ಹಲಸಿನ ಕಡಿಗಳು, ಬಾಯಲ್ಲೊಂದು-ಕೈಯಲ್ಲೊಂದು ಹಿಡಿದುಕೊಂಡೇ ಸ್ವಾಗತ ಕೋರುವ ಕುಟುಂಬದವರು.  ಅರೆ…ವರ್ಷವೂ ತುಂಬದ ಪುಟ್ಟನ ಕೈಯಲ್ಲೂ ಹಲಸಿನಹಣ್ಣಿನ ಸೊಳೆ (ತೊಳೆ), ಯಾರೋ ನೆಂಟರು ಬಂದರೆಂದು ಕರಿಯುತ್ತಿದ್ದ ಹಲಸಿನ ಚಿಪ್ಸನ್ನೇ ಕೈಯಲ್ಲಿ ಹಿಡಿದುಬಂದ ಸೊಸೆ… ಎಲ್ಲೆಲ್ಲೂ ಹಲಸೋ ಹಲಸು.

ಸಾಗರದಿಂದ ಸುಮಾರು ೧೦ ಕಿಲೋಮೀಟರ್ ದೂರದ ಕುಂದಗೋಡಿನ ಶೇಷಭಟ್ಟರು ಸುಮಾರು ೨೫ ವರ್ಷಗಳ ಹಿಂದೆ ಹಲಸಿನಮರಗಳನ್ನು ನೆಡಲು ಪ್ರಾರಂಭಿಸಿದರು.  ನಮಗೆಲ್ಲಾ ಹಲಸಿನಹಣ್ಣು ತುಂಬಾ ಇಷ್ಟ.  ಮನೆಯಲ್ಲಿ ಇರಲಿಲ್ಲ.  ಅಕ್ಕಪಕ್ಕದಿಂದ ಎಷ್ಟು ತರಲು ಸಾಧ್ಯ.  ಹೀಗಾಗಿ ಕಂಡ ಕಂಡ (ತಿಂದ-ತಿಂದ) ಒಳ್ಳೆಯ ಹಲಸನ್ನೆಲ್ಲಾ ತಂದು ಬೀಜ ಊರಿದೆ.  ಗಿಡ ನೆಟ್ಟೆ, ಒಂದಿಷ್ಟು ಕಸಿ ಮಾಡಿದೆ.  ಜೊತೆಗೆ ಮಾವು, ಚಿಕ್ಕು, ಪೇರಲ ಹೀಗೆ ಹಣ್ಣಿನ ಗಿಡವನ್ನೆಲ್ಲಾ ನೆಡುತ್ತಾ ಬಂದೆ ಎನ್ನುವ ಪೀಠಿಕೆಯೊಂದಿಗೆ ಗಿಡಗಳನ್ನು ತೋರಿಸತೊಡಗಿದರು.

ಇದು ಬೆಣ್ಣೆ ಬಕ್ಕೆ.  ಬಿಳಿಯ ಬೆಣ್ಣೆಯಂತಹ ತೊಳೆ.  ತುಂಬಾ ಸಿಹಿ.  ಜಾಮ್ ಮಾಡಿದ್ರೆ ಹಿಟ್ಟಾಗಿ ಬೆಣ್ಣೆಮುದ್ದೆಯಂತೆಯೇ ಕಾಣುತ್ತದೆ.  ಈ ವರ್ಷ ಹೆಚ್ಚಿಗೆ ಕಾಯಿ ಬಂದಿಲ್ಲ.  ಮನೆಯ ಹಿಂಭಾಗದಲ್ಲಿ ಆ ದೊಡ್ಡ ಮರ ಇದೆಯಲ್ಲಾ…ಓ… ಅದು, ಅದೇ ಚಂದ್ರಬಕ್ಕೆ.  ಬನ್ನಿ ಅಲ್ಲೇ ಹೋಗೋಣ.  ಆಚೆಮನೆ ಶಿವಣ್ಣ ಚಕಚಕನೆ ಮರ ಹತ್ತಿ ಇಳಿಸುತ್ತಾನೆ.  ಬಣ್ಣ ನೋಡಿ, ಎಷ್ಟೊಂದು ಕೇಸರಿ.  ತೊಳೆ, ಸ್ವಾಡ (ಸೂಲೆ).  ಪ್ರತಿಯೊಂದೂ ಕೇಸರಿ.  ಇಡೀ ಹಣ್ಣಿಗೆ ಬಾಯಿ ಹಾಕೋಣ ಅನ್ನಿಸುತ್ತದೆಯೇ?  ನಿಮಗೆ ಸರಿಯಾಗಿ ಹತ್ತು ತೊಳೆಗಳನ್ನು ತಿನ್ನಲಿಕ್ಕಾಗದು.  ತೋಟದ ಧರೆಯ ಅಂಚಿಗೆ ಇದೆಯಲ್ಲಾ ಅದೇ ಜೇನುಬಕ್ಕೆ.  ಇದರ ತೊಳೆಗಳ ಬಣ್ಣ, ರುಚಿ, ಸುವಾಸನೆ ಎಲ್ಲಾ ಥೇಟ್ ಜೇನುತುಪ್ಪದಂತೇ ಇದೆ.  ಇದು ಹಣ್ಣಾಗಿ ಬಿರಿದರೆ ರಸ ಒಸರುತ್ತದೆ.  ಅದಂತೂ ವಿಪರೀತ ಸಿಹಿ.  ಜೇನುತುಪ್ಪದ್ದೇ ಸವಿ.  ಹೀಗಾಗಿ ಮರದಲ್ಲೇ ಹಣ್ಣಾಗುವವರೆಗೆ ಕಾಯುತ್ತೇವೆ.  ಆದರೆ ಈ ವರ್ಷ ಒಂದಿಷ್ಟು ಕಾಯಿಗಳು ಹಣ್ಣಾಗುವ ಮೊದಲೇ ಕೊಳೆತುಬೀಳುತ್ತಿದೆ.  ಯಾವ ರೋಗ ಬಂದಿದೆಯೋ ಗೊತ್ತಿಲ್ಲ.  ಹೀಗೆ ಹೇಳುತ್ತಾ ೭೦ ವರ್ಷದ ಶೇಷಭಟ್ಟರು ಹಾಗೂ ಅವರ ಮಗ ಭಾಸ್ಕರ ತಮ್ಮ ಇಪ್ಪತ್ತು ಎಕರೆ ಜಮೀನನ್ನೆಲ್ಲಾ ಸುತ್ತಿಸಿಬಿಟ್ಟರು.  ೩೦೦ಕ್ಕೂ ಹೆಚ್ಚು ಹಲಸಿನ ಮರಗಳು.  ೭೦ಕ್ಕೂ ಹೆಚ್ಚು ವಿಧದ ಜಾತಿ.  ಕಾಯಿ ಬಿಡುತ್ತಿರುವ ಮರಗಳ ಸಂಖ್ಯೆ ೮೦.  ಅದರಲ್ಲಿ ೬೦ ಮರ/ಜಾತಿಗಳಿಗೆ ಹೆಸರೇ ಗೊತ್ತಿಲ್ಲ.  ನಮಗೆ ತಿರುಗಿ-ತಿರುಗಿ, ವಿವರ ಬರೆದು ಬರೆದು ಕೈಕಾಲು ಎರಡೂ ನೋವು ಬಂದಿತ್ತು.  ಗೆಳೆಯ ಮಾರುತಿ-ಸಿದ್ದಪ್ಪನವರಿಗೆ ಹೊಟ್ಟೆನೋವು ಬಂದಿತ್ತು.

ಇಷ್ಟೆಲ್ಲಾ ನೋಡಿ ಹಿಂತಿರುಗುತ್ತಿದ್ದಂತೆ ಕಿತ್ತಳೆ, ಗುಲಾಬಿ, ಅರಿಶಿನ, ಬಿಳಿ ತಿಳಿ ಅರಿಶಿನ ಮುಂತಾದ ಬಣ್ಣದ ತೊಳೆಗಳು ತಯಾರಾಗಿದ್ದವು.  ಅಷ್ಟೊತ್ತಿಗಾಗಲೇ ಹಲಸಿನ ಹಣ್ಣಿನಂತೆ ಆಗಿದ್ದ ನಮ್ಮ ಹೊಟ್ಟೆಗೆ ಇನ್ನೇನೂ ಹಿಡಿಸದಂತಾಗಿತ್ತು.  ಹೀಗಾಗಿ ಅವುಗಳ ಬಣ್ಣವೈವಿಧ್ಯವನ್ನು ನೋಡಿಯೇ ಖುಷಿಪಟ್ಟೆವು.

ಶೇಷಭಟ್ಟರ ಮನೆಯಲ್ಲಿ ಬಕ್ಕೆ ಹಾಗೂ ಅಂಬಲಿಯ ಜಾತಿಯ ಹಲಸುಗಳು ಹೇರಳ.  ವರ್ಷದಲ್ಲಿ ೫೦೦ಕ್ಕೂ ಹೆಚ್ಚು ಕಾಯಿಗಳು ಸಿಗುತ್ತವೆ.

ಕಳೆದ ವರ್ಷ ಐದು ರೂಪಾಯಿಗೆ ಒಂದು ಕಾಯಿಯಂತೆ ಕೇಳಿದರು.  ಸುಮಾರು ೩೦೦ ಕಾಯಿಗಳನ್ನು ಕೊಯ್ಸಿಟ್ಟೆ.  ಮರುದಿನ ಆ ವ್ಯಾಪಾರಿ ಬರಲೇ ಇಲ್ಲ.  ಎಲ್ಲಾ ವ್ಯರ್ಥವಾಯಿತು.  ಸೂಕ್ತ ಬೆಲೆಯಿಲ್ಲ.  ಕೊಳ್ಳುವವರಿಲ್ಲ ಎನ್ನುತ್ತಾರೆ ಭಾಸ್ಕರಣ್ಣ. ಹಲಸಿನ ಮರ ಇವರ ಮನೆಯಲ್ಲಿ ಬಹೂಪಯೋಗಿ.

ಎಲೆಗಳು, ಹಣ್ಣು, ಸ್ವಾಡಗಳು ಪಶು ಆಹಾರವಾಗಿವೆ.  ಸೊಪ್ಪು (ಒಣಗಿದ ಎಲೆ) ದರಕುಗಳು ಕಾಂಪೋಸ್ಟ್ ಆಗುತ್ತವೆ.  ರೆಂಬೆ-ಕೊಂಬೆಗಳು ಉರುವಲಾಗುತ್ತದೆ.  ಹಲಸಿನ ಗುಜ್ಜೆ, ಕಾಯಿಗಳು ಪಲ್ಯ ಸಾಂಬಾರಾಗುತ್ತವೆ.  ಹಣ್ಣಿನ ಜಾಮ್, ಒಣಸುಕೇಳಿ ಮಾಡಬಹುದು.  ಕಾಯಿಯ ಚಿಪ್ಸ್, ಹಪ್ಪಳಗಳು ಮಲೆನಾಡಿನಲ್ಲಿ ಸರ್ವೇಸಾಮಾನ್ಯ.  ಮರವು ಪೀಠೋಪಕರಣಗಳಿಗೆ, ತೊಲೆ, ಬಾಗಿಲುಗಳಿಗೆ ಶ್ರೇಷ್ಠ. ಉಳಿಯುವ ಹಣ್ಣು ಕಾಯಿಗಳನ್ನು ಯಾರಿಗೆ ಬೇಕಾದರೂ ಕೊಡುತ್ತಾರೆ ಹಾಗೂ ಉಳಿದಿದ್ದು ಹಕ್ಕಿಗಳು, ನಾಯಿ, ಮಂಗ, ಅಳಿಲು… ಕೊನೆಗೆ ಗೊಬ್ಬರ.

ಇಷ್ಟೆಲ್ಲಾ ಜಾತಿಗಳ ಹಲಸು ಬೆಳೆದ ಶೇಷಭಟ್ಟರು, ಕೃಷಿ ಪ್ರಯೋಗ ಪರಿವಾರದವರು ನಡೆಸಿದ ಹಲಸಿನ ಮೇಳ ೨೦೦೨ರಲ್ಲಿ ಪ್ರಶಸ್ತಿ ಪಡೆದಿದ್ದಾರೆ.

ಇಷ್ಟೆಲ್ಲಾ ತೋರಿಸಿ ವಿವರಿಸಿದ ಶೇಷಭಟ್ಟರ ಕುಟುಂಬಕ್ಕೆ ವಿದಾಯ ಹೇಳಿ ಹಲಸಿನಿಂದಲೇ ೩೦ಕ್ಕೂ ಹೆಚ್ಚು ಬಗೆಯ ಅಡುಗೆ ಮಾಡಿಕೊಂಡು ಕಾಯುತ್ತಿದ್ದ ಗೋಳಗೋಡಿನ ನರಸಿಂಹಭಟ್ಟರು-ಗೀತಕ್ಕರ ಮನೆಗೆ ಊಟಕ್ಕೆ ಹೊರಟೆವು.

ಶೇಷಭಟ್ಟರು ಬೆಳೆಸಿದ ವಿಶೇಷ ತಳಿಗಳು

೧.ಖಂಡಿಕಾದ ಬಕ್ಕೆ : ದೊಡ್ಡ ವಯಸ್ಸಾದ ಮರ.  ವರ್ಷಕ್ಕೆ ೩೦೦ಕ್ಕೂ ಹೆಚ್ಚು ಕಾಯಿಗಳು ಬಿಡುತ್ತವೆ.  ಅರಿಶಿನ ಬಣ್ಣದ ತೊಳೆಗಳು.  ದಪ್ಪ, ಉದ್ದ, ತುಂಬಾ ಸಿಹಿ ಇದೆ, ನಾರಿಲ್ಲ.

೨.ಗುಲಾಬಿ ಬಕ್ಕೆ : ದೊಡ್ಡಗಾತ್ರದ ಕಾಯಿಗಳು, ಅರೆಹಣ್ಣು ತಿನ್ನಲು ಚೆನ್ನ.  ಉದ್ದವಾದ ಗುಲಾಬಿ ಬಣ್ಣದ ತೊಳೆಗಳು, ಸಾಧಾರಣ ಸಿಹಿ.

೩.ಮುಳ್ಳುಚಂದ್ರ ಬಕ್ಕೆ : ಬಿಂದಿಗೆ ಆಕಾರದ ಕಾಯಿಗಳು. ಕಲಾತ್ಮಕವಾದ ಮುಳ್ಳುಗಳು, ದೊಡ್ಡ ಉದ್ದ ಕಿತ್ತಳೆಬಣ್ಣದ ತೊಳೆಗಳು, ಸಿಹಿ ಸಾಧಾರಣ.

೪.ರುದ್ರಾಕ್ಷಿ ಬಕ್ಕೆ : ಗುಜ್ಜೆಯಾಗಿ ಬಿಡುವ ಚಿಕ್ಕ ಗಾತ್ರದ ಹಲಸು, ತುಂಬಾ ಸಿಹಿ.

೫.ಸಂಕಣ್ಣನ ಬಕ್ಕೆ : ತುಂಬಾ ಫಸಲು ಬರುವ ಜಾತಿ.  ತಿಳಿ ಅರಿಶಿನ ಬಣ್ಣದ ಮಧ್ಯಮ ಗಾತ್ರದ ತೊಳೆಗಳು.  ಸಿಹಿ ಸಾಧಾರಣ.

೬.ಗಮ್‌ಲೆಸ್ ಬಕ್ಕೆ : ಮಧ್ಯಮ ಗಾತ್ರದ ಕಾಯಿಗಳು, ಉದ್ದ, ದಪ್ಪ, ಅರಿಶಿನಬಣ್ಣದ ತೊಳೆಗಳು.  ಸಾಧಾರಣ ಸಿಹಿ.  ಹಾಲು ಅಥವಾ ಮೇಣ ಸ್ವಲ್ಪವೂ ಇಲ್ಲ.

೭.ಅಂಬಲಿ ಅರಿಶಿನ : ದೊಡ್ಡಗಾತ್ರದ ಕಾಯಿಗಳು.  ಅರಿಶಿನ ಬಣ್ಣ, ಕೊಬ್ಬರಿಯ ರುಚಿ.  ಮೇ ತಿಂಗಳಿನಿಂದ ಕಾಯಿಗಳು ಪ್ರಾರಂಭ.  ಮಹಾಲಯದವರೆಗೂ ಕಾಯಿಗಳಿರುತ್ತವೆ.  ಎಂತಹ ಮಳೆಯಲ್ಲೂ ನೀರು ಕುಡಿಯುವುದಿಲ್ಲ.

೮.ಹೊಳ್ಳ ಬಕ್ಕೆ : ಮರದಲ್ಲಿ ತುಂಬಾ ಕಾಯಿಗಳಿವೆ.  ಕಾಯಿಯೊಳಗೆ ತೊಳೆಗಳು ಮಾತ್ರ ೩-೪ ಇರಬಹುದು.  ಉಳಿದದ್ದೆಲ್ಲಾ ಸ್ವಾಡ (ಸೂಲೆ).