ಹಲ್ಲೆ ರಂಗಪ್ಪ ಕೆಲ್ಸ ಬಿಡೊ ಸುದ್ದಿ ಸಾಗರದಲ್ಲಿ ಸುನಾಮಿ ಹಾಗೆ ವ್ಯಾಪಿಸಿಬಿಟ್ಟಿತು. ಕಳೆದ ೫೦ ವರ್ಷಗಳಿಂದ ಮಾಡಿಕೊಂಡು ಬಂದ ಕೆಲಸ.ಇಡೀ ಸಾಗರದ ಹಳ್ಳಿ ಹಳ್ಳಿಯ ರೈತರಿಗೆ ರಂಗಪ್ಪ ವರ್ಷಕ್ಕೆ ಮೂರು ಬಾರಿ ಬೇಕೇ ಬೇಕು.ಗಾಡಿ ಎತ್ತೇ ಆಗ್ಲಿ, ಹೂಡೋ ಎತ್ತೇ ಆಗ್ಲಿ ಪಾದಕ್ಕೆ ಶೂ ಹಾಕದಿದ್ದರೆ ಅವು ನಡೆಯೊದು ಹೇಗೆ ಹೇಳಿ?

ಮೊನ್ನೆ ಮನೆಘಟ್ಟದ ಮಾಬ್ಲನ ಎತ್ತು ಹಿಂದಿನ ಕಾಲು ಕುಂಟಾಕುತ್ತಿತ್ತು. ಆದ್ರು ಗಾಡಿ ಕಟ್ಟಿದ್ರಂತೆ.ಸಾಗರಕ್ಕೆ ಬರೋ ದಾರಿಯುದ್ದಕ್ಕೂ ರಕ್ತದ ಹೊಳೆ. ಟಾರ್ ರಸ್ತೆ, ಕೊರಕಲು,ಹಲ್ಲೆ ಇಲ್ಲದ ಕಾಲು, ಚಳಿಗಾಲದ ಒಡೆತ ಎಲ್ಲಾ ಸೇರಿ ಹೆಜ್ಜೆ ಇಡಲಾರದೆ ಬಂದ ಎತ್ತು ಪಟ್ಟಣಕ್ಕೆ ಬರುತ್ತಿದ್ದಂತೆ ಕುಸಿದು ಬಿತ್ತು. ವಾಸುದೇವ ರೈಸ್ ಮಿಲ್ ಎದುರಿಗೆ ಅತ್ತಿಮರದ ಪಕ್ಕ ಒಂಟೆತ್ತಿನ ಗಾಡಿಗಳು ನಿಂತಿದ್ದವು. ಹಮಾಲಿ ಜಾಕಿರ್ ಜೊತೆ ಬೀಡಿ ಸೇದುತ್ತಾ ನಿಂತಿದ್ದ ರಂಗಪ್ಪ. ಬೀಡಿಯ ಕೊನೇ ದಮ್ ಸೇದಿ ಎಸೆದು ಗಾಡಿಯ ಹತ್ತಿರ ಬಂದ. ಅಷ್ಟೊತ್ತಿಗಾಗಲೇ ಜನ ಸೇರಿದ್ದರು. ಯಾರೋ ಗಾಡಿಯ ನೊಗ ಬಿಚ್ಚಿ ಎತ್ತಿನ ನೆತ್ತಿಗೆ ನೀರು ತಟ್ಟುತ್ತಿದ್ದರು. ಸೇರಿದ ಜನ ತಲೆಗೊಂದರಂತೆ ಮಾತಾಡ್ತಾ ಇದ್ರು. ಅಲ್ಲಾ ಹಲ್ಲೆ ಈ ಪಾಟಿ ಸವೆಯುವವರೆಗೆ ಏನು ಮಾಡಿದ್ರಿ? ಈಗ ನೋಡಿ ಎತ್ತಿನ ಪಾದ ಕಿತ್ತೋಗಿದೆ ಎನ್ನುವ ಕನಿಕರ. ರಂಗಪ್ಪ ಮಾತ್ರ ಎತ್ತಿನ ಕಿತ್ತೋದ ಕಾಲನ್ನು ನೋಡುತ್ತಾ ಇದ್ದರು.

ಮನೆಘಟ್ಟದ ಮಾಬ್ಲ ಬೈಕ್ ತಂದು ಎತ್ತಿನ ಗಾಡಿ ಹತ್ತಿರ ನಿಲ್ಲಿಸಿದ ರಂಗಪ್ಪ ಅಲ್ಲಿರುವುದನ್ನು ನೋಡಿ ಗಾಬರಿ ಕಡಿಮೆಯಾಯಿತು.ಎತ್ತು ಬಿದ್ಕಂಬುಟ್ಟೈತೆ, ತ್ರಾಣವೇ ಇರಾಂಗಿಲ್ಲ, ನಾಳೆ ಬೆಳಗಾಮುಂಚೆ ಹಲ್ಲೆ ಕಟ್ತೇನೆ, ಇವತ್ತು ಇಲ್ಲೆ ಇರ್‍ಲಿ ಬಿಡಿ ಎನ್ನುತ್ತಾ ರಂಗಪ್ಪ ಕಾಮತ್‌ರ ಹೋಟೆಲ್ ಒಳಗೆ ಹೋಗಿ ಬೈಟು ಕಾಫಿಗೆ ಹೇಳಿದ.

ಟಾರ್ ರಸ್ತೆ ಅಂದ್ರೆ ಬೆಂಕಿ ಇದ್ದಂಗೆ,ಹಲ್ಲೆ ಬೇಗ ಸವೆದು ಹೋಗ್ತದೆ, ಈ ಜನಕ್ಕೆ ಎತ್ತಿನ ಕಾಲಿಗಿಂತ ಹೋಲದ ಕೆಲಸ ಮುಖ್ಯಾನ? ಮೂಕಪ್ರಾಣಿಗೆ ಹಲ್ಲೆ ಸವೆದಿದೆ ಅಂತಾ ಹೇಳಕ್ಕೆ ಬರ್‍ತದಾ.. ಎಂದು ಗೊಣಗುತ್ತಾ ರಂಗಪ್ಪ ಕಾಫಿ ಮುಗಿಸಿದ.

ಮುಂಜಾವಿನ ಬಿಸಿಲು ಸಾಗರ ಸೇರುವುದರೊಳಗೆ ರಂಗಪ್ಪ ಅತ್ತಿ ಮರದ ಹತ್ತಿರ ಬಂದಿದ್ದ. ಮಾಬ್ಲನ ಎತ್ತು ಮೆಲಕು ಹಾಕುತ್ತಾ ಮಲಗಿತ್ತು. ಮಡಚಿಕೊಂಡ ಕಾಲನ್ನು ಪರಾಂಬರಿಸಿ ನೋಡಿದ ರಂಗಪ್ಪನಿಗೆ ಸಮಾಧಾನವಾಯಿತು. ಎತ್ತಿನ ಪಾದದ ಅಟ್ಟೆಯು ಬೆಳೆದು ಹೋಗಿತ್ತು. ಹಲ್ಲೆ ಬಿದ್ದು ಹೋಗಿ ಎಷ್ತು ದಿನ ಆಗಿತ್ತೋ ಏನೋ. ಅಟ್ಟೆ ಸಿಗಿದು ರಕ್ತ ಬಂದಿತ್ತು. ಆದ್ರೆ ಈಗ ರಕ್ತ ಬರೋದು ನಿಂತಿತ್ತು. ಕಾಲಿನ ಅಟ್ಟೆನ ಕ್ಲೀನಾಗಿ ಕೆತ್ತಿದರೆ ಎಲ್ಲಾ ಸರಿಹೋಗತ್ತೆ ಎಂದು ರಂಗಪ್ಪ ಎಣಿಸಿದ. ಬೆಳಗಿನ ಕೆಲಸಕ್ಕೆ  ಹೊಳೆಗೆ ಹೋಗಿದ್ದ ಗಾಡಿ ಆಳು ಬರುವುದನ್ನೆ ಕಾಯತೊಡಗಿದ.

ಬೀಡಿ ಬಾಯಲ್ಲಿ ಇಟ್ಟುಕೊಂಡು ಹತಾರದ ಚೀಲದಿಂದ ಒಂದೊಂದೇ ಹತಾರಗಳನ್ನು  ತೆಗೆಯ ತೊಡಗಿದ.ಮೊದಲಿಗೆ ದೊಡ್ಡ ಉಳಿ ಹೊರಗೆ ಬಂತು. ದೊಡ್ಡ ಸುತ್ತಿಗೆ ಹೋರಗೆ ಬಂತು. ಆಮೇಲೆ ಸಣ್ಣ ಸುತ್ತಿಗೆ, ಚಾಣಗಳು, ಇಕ್ಕಳ, ಪಂಚು, ಇವೆಲ್ಲಾ ಒಂದು ಗೋಣಿ ಚೀಲದ ಮೇಲೆ ಹರಡಿಕೊಂಡ. ಕಾಗದದ ಪೊಟ್ಟಣದಿಂದ ತೆಳುವಾದ ಚೂಪು ಮೊಳೆಗಳನ್ನು ಬಿಚ್ಚಿದ. ಪುಟ್ಟ ಪೆಟ್ಟಿಗೆಯಿಂದ ಹಲ್ಲೆಗಳನ್ನು ಹೊರತೆಗೆದ. ಒಂದು ಉದ್ದನೆಯ ಮರದ ಕೊರಡು, ಬತ್ತದ ಹೊಟ್ಟಿನ ಚೀಲ, ಮತ್ತು ಬಾವಿಗೆ ಬಳಸೋ ಉದ್ದನೆಯ ಹಗ್ಗ ತಯಾರಿ ಮಾಡಿಕೊಂಡ.ಇದನ್ನೆಲ್ಲಾ ನೋಡುತ್ತಿದ್ದ ಎತ್ತಿಗೆ ಏನೋ ಅನುಮಾನ ಬಂದು ಇದ್ದಕ್ಕಿದ್ದಂತೆ ಧಡಕ್ಕನೆ ಎದ್ದು ನಿಂತಿತು. ಬುಸುಗುಡುತ್ತಾ ನೋಡತೊಡಗಿತು.

ಅತ್ತಿಮರದ ಬಳಿ ಜನ ಸೇರೋ ಹೊತ್ತಿಗೆ ಕೆಲಸ ಮುಗಿಸೊ ತರಾತುರಿ ರಂಗಪ್ಪನದು. ಇಂತಹ ಕೆಲಸಗಳನ್ನು ಮಾಡುತ್ತಿರುವಾಗ ಜನ ಸುತ್ತಾಕಿ ನಿಂತರೆ, ಮಾತನಾಡತೊಡಗಿದರೆ ತಪ್ಪು ಹೊಡೆತ ಬೀಳಬಹುದು ಎಂಬ ಆಲೋಚನೆ. ಹೀಗಾಗಿ ಸುತ್ತ ಸೇರಿದ ಜನರನ್ನು ಬೈದು ಓಡಿಸೋದೂ ಇದೆ.  ಪಾದದ ಅಟ್ಟೆ ಕೆತ್ತಿ, ಹಲ್ಲೆ ಇಟ್ಟು, ಮೊಳೆ ಹೊಡೆಯೋದು ಅಂದ್ರೆ ಸುಲಭದ ಕೆಲಸಾನ ಸ್ವಾಮಿ, ಒಮ್ಮೊಮ್ಮೆ ಎತ್ತು ಸತ್ಹೋಗ್ತೈತಿ ಎಂದು ಹೇಳೋದು ಕೇಳಿದ್ರೆ ಹಲ್ಲೆ ಹೊಡೆಯೋಕೆ ಭಾರಿ ಎಕ್ಸ್‌ಪರ್ಟ್ ಆಗಿರ್‍ಲೇಬೇಕು.  ಇಂತಹ ರಂಗಪ್ಪನ ಹತ್ರ ಈ ೫೦ ವರ್ಷಗಳಲ್ಲಿ  ೫೦೦ ದೃಷ್ಟಾಂತಗಳಿವೆ.

೧೦ ವರ್ಷದ ಹಿಂದೆ  ಅದರಂತೆ ನಾರಾಯಣಪ್ಪ ಹಲ್ಲೆ ಕಟ್ಟಿಸಲು ಊರಿಗೆ ಬರಲು ಹೇಳಿದ್ದ.  ರಂಗಪ್ಪ ಅದರಂತೆ ಊರಿಗೆ ಹೋಗೋ ಹೊತ್ತಿಗೆ ಮಧ್ಯಾಹ್ನ ೧೧ ಗಂಟೆ ಆಗಿತ್ತು.  ನಾರಾಯಣಪ್ಪ ಎತ್ತು ತೋರಿಸಿದ.  ೨೦ ಸಾವಿರ ರೂಪಾಯಿ ಕೊಟ್ಟ ಎತ್ತು ಇದು.  ಹೆಂಗೈತಿ ರಂಗಪ್ಪ ಎಂದು ಹೆಮ್ಮೆಯಿಂದ ನಾರಾಯಣಪ್ಪ ಮುಖ ಅಗಲಿಸಿ ಕೇಳಿದ.   ಎತ್ತಿಗೆ ಎಷ್ಟು ರೇಟಾದ್ರೆ ಏನ್ ಸ್ವಾಮಿ?  ನಂಗೆ ಅದರ ಕಾಲು ಮುಖ್ಯ.  ದೊಡ್ಡ ಹೊಟ್ಟೆ, ಗಿಡ್ಡ ಕಾಲು ಇದ್ದರೆ ಹಲ್ಲೆ ಕಟ್ಟೋದು ಭಾರಿ ಕಷ್ಟ ಅಂದ ರಂಗಪ್ಪ.  ಯಾವುದೇ ಎತ್ತು ಸಪೂರವಾಗಿ, ಗಟ್ಟಿಮುಟ್ಟಾಗಿ, ಚುರುಕಾಗಿ ಇರಬೇಕು.  ಹಲ್ಲೆ ಕಟ್ಟುವ ಮೊದಲು ಕಾಲಿಗೆ ನೀರು ಮುಟ್ಟಿರಬಾರದು.  ಹೊಟ್ಟೆಗೆ ಹುಲ್ಲು, ಹಿಂಡಿ, ನೀರು ಕೊಟ್ಟಿರಬಾರದು.  ಇಂತಹ ಸಲಹೆಗಳನ್ನು ರಂಗಪ್ಪ ಮೊದಲೇ ರೈತರಿಗೆ ಹೇಳಿಬಿಡುತ್ತಿದ್ದ.  ಇಲ್ಲೂ ನಾರಾಯಣಪ್ಪನ ಬಳಿ ಅದನ್ನೇ ಕೇಳಿದ.  ಆದರೆ ನಾರಾಯಣಪ್ಪ ಸರಿಯುತ್ತರ ಹೇಳಲಿಲ್ಲ.  ಬೆಳಗ್ಗೆ ಹುಲ್ಲು, ಹಿಂಡಿ, ನೀರು ಕೊಟ್ಟಿದ್ದನ್ನೆಲ್ಲಾ ರಂಗಪ್ಪನಿಗೆ ಹೇಳಿದರೆ ಇವನು ಖಂಡಿತಾ ಹಲ್ಲೆ ಕಟ್ಟುವುದಿಲ್ಲ ಎನ್ನುವುದು ನಾರಾಯಣಪ್ಪನಿಗೆ ಗೊತ್ತಿತ್ತು.  ಇನ್ನೊಂದು ಸಲ ರಂಗಪ್ಪನನ್ನು ಕರೆಸೋದು ದುಬಾರಿ ಅನ್ನೋ ಜುಗ್ಗತನ.  ಒಟ್ಟಾರೆ ಇವೆಲ್ಲಾ ಮುಂದಿನ ಅನಾಹುತಕ್ಕೆ ಕಾರಣವಾಯಿತು.  ಭಾರಿ ಎತ್ತರದ ದೊಡ್ಡ ಎತ್ತನ್ನು ಹಗ್ಗ ಹಾಕಿ ಕೆಳಗೆ ಕೆಡವಲು ನಾಲ್ಕು ಆಳುಗಳು ಬೇಕಾದವು.  ರಂಗಪ್ಪ ತಂದಿರೋ ಒಂದು ಹಗ್ಗ ಸಾಲದೆ ಇನ್ನೂ ಎರಡು ಹಗ್ಗ ಬೇಕಾಯಿತು.  ಕೆಳಗೆ ಬಿದ್ದ ಎತ್ತಿನ ಮುಖ ವಾರೆ ಮಾಡಲು ಹೇಳಿದ ರಂಗಪ್ಪ.  ನಾಲ್ಕು ಕಾಲನ್ನೂ ಸೇರಿಸಿ ಕಟ್ಟಿದ.  ಎತ್ತಿನ ಮುಖದ ಪಕ್ಕ ಒಬ್ಬರಿಗೆ ಕೂರಲು ಹೇಳಿದ.  ಹಲ್ಲೆ ಕಟ್ತಾ ಇರೋದು ಎತ್ತಿಗೆ ಕಾಣಿಸೋದು ಬೇಡ ಅನ್ನೋ ಉದ್ದೇಶ.  ಜೊತೆಗೆ ಎತ್ತಿಗೆ ಸುಸ್ತಾದರೆ, ಅಪಾಯವಾದರೆ ಕಣ್ಣುಗುಡ್ಡೆ ಮೇಲೆ ಹೋಗಿ ತಕ್ಷಣ ಎತ್ತಿನ ಬುಡದಲ್ಲಿ ಕುಳಿತವನಿಗೆ ಅಪಾಯದ ಅರಿವಾಗುತ್ತದೆ ಎನ್ನುವುದು ಇನ್ನೊಂದು ಕಾರಣ.  ಮುಖದ ಹತ್ತಿರ ಕುಳಿತವನು ಎತ್ತನ್ನು ಸರಿಯಾಗಿ ಗಮನಿಸುತ್ತಾ ಇರಬೇಕು.  ಕೆಲಸ ಮುಗಿಯುವವರೆಗೂ ರಂಗಪ್ಪ ಆಗಾಗ ಎತ್ತಿನ ಬಗ್ಗೆ ಕೇಳಿದಾಗ ಸರಿಯಾದ ಉತ್ತರ ನೀಡಬೇಕು.  ಸ್ವಲ್ಪ ತಪ್ಪು ಹೇಳಿದರೂ ರಂಗಪ್ಪ ಮುಲಾಜಿಲ್ಲದೇ ಬುರುಡೆಗೆ ತಟ್ಟಿ ಬಿಡುವ ಆಸಾಮಿ.  ಎತ್ತಿನ ಜೀವದ ಬಗ್ಗೆ ಕಳಕಳಿ.  ಕೆಲಸದ ಮೇಲಿನ ಕಾಳಜಿ.  ಕೆಲವೊಮ್ಮೆ ಯಜಮಾನರೇ ರಂಗಪ್ಪನಿಂದ ತಟ್ಟಿಸಿಕೊಂಡಿದ್ದೂ ಇದೆ.  ಆದರೆ ರಂಗಪ್ಪನಿಗೆ ಯಾರೂ ಎದುರು ಉತ್ತರ ಹೇಳುವ ಧೈರ್ಯ ತೋರಿಸುವುದಿಲ್ಲ.  ಜನರಿಗೆ ರಂಗಪ್ಪನ ಮೇಲೆ ಅಷ್ಟು ವಿಶ್ವಾಸ.  ಕೆಲಸ ಮುಗಿದ ಮೇಲೆ ರಂಗಪ್ಪ ಮತ್ತೆ ಮಾಮೂಲಿ ಮನುಷ್ಯ.

ಹಗ್ಗದಿಂದ ಕಟ್ಟಿದ ಕಾಲಿನ ಕೆಳಗೆ ಭತ್ತದ ಹೊಟ್ಟಿನ ಚೀಲ ಇರಿಸಿದ.  ಪಾದಗಳಲ್ಲಿದ್ದ ಹಳೆಯ ಹಲ್ಲೆಗಳನ್ನು ಇಕ್ಕಳದಿಂದ ಬಿಡಿಸಿ ತೆಗೆದ.  ಹಲ್ಲೆಯ ಹಿಂಭಾಗ ಸವೆದು ತುಂಡಾಗಿತ್ತು.  ಬಿಟ್ಟುಹೋದ ಜಾಗದಲ್ಲಿ ಪಾದದ ಅಟ್ಟೆ ಬೆಳೆದಿತ್ತು.  ಅಟ್ಟೆಯನ್ನು ಉಳಿಯಿಂದ ಕೆತ್ತತೊಡಗಿದ.  ಉಳಿಯ ಪೆಟ್ಟು ಬೇರೆ ಕಡೆ ತಾಗದಿರಲು ಮರದ ಕೊರಡನ್ನು ಅಡ್ಡ ಇಡುತ್ತಿದ್ದ.  ಪಾದವನ್ನು ನೇರಗೊಳಿಸಿಕೊಂಡು ಸರಿ ಅಳತೆಯ ಹಲ್ಲೆಯನ್ನು ತೆಗೆದುಕೊಂಡ.  ಹಲ್ಲೆಯ ಹಿಂಭಾಗ ಸ್ವಲ್ಪ ಬಗ್ಗಿಸಿಕೊಂಡು ಪಾದದ ಒಂದು ಭಾಗಕ್ಕೆ ಒತ್ತಿ ಹಿಡಿದ.  ಚೂಪಾದ ಸಪೂರ ಮೊಳೆಗಳನ್ನು ಹಲ್ಲೆಯ ಕಂಡಿಗಳಲ್ಲಿಟ್ಟು ಸುತ್ತಿಗೆಯಿಂದ ಬಡಿಯತೊಡಗಿದ.  ಒಂದು ಇಂಚಿನ ಮೊಳೆ ಅಟ್ಟೆಯ ಒಳಗೆ ಓರೆಯಾಗಿ ಹೊಕ್ಕು ಪಕ್ಕದಿಂದ ಹೊರಬಂತು.  ಪಂಚ್‌ನಿಂದ ಅದನ್ನು ಹಿಡಿದುಕೊಂಡು ಇಕ್ಕಳ ಬಳಸಿ ಹೊರಬಂದ ಮೊಳೆಯನ್ನು ಚಕಚಕನೇ ಸುತ್ತಿದ.  ಸುತ್ತಿಗೆಯಿಂದ ಚಪ್ಪಟೆ ಮಾಡಿದ.  ಒಂದೇ ಒಂದು ಪೆಟ್ಟು ಅತ್ತಿತ್ತಾಗದಂತೆ, ನೇರವಾಗಿ, ಸರಿಯಾಗಿ ಬೀಳುತ್ತಿತ್ತು.  ಪ್ರತಿ ಹಲ್ಲೆಗೂ ನಾಲ್ಕು ನಾಲ್ಕು ಮೊಳೆಗಳನ್ನು ಹೊಡೆದು ಸುತ್ತಿದ.  ಒಂದು ಕಾಲಿಗೆ ಎರಡು ಹಲ್ಲೆಗಳು.  ಮಧ್ಯೆ ಮಧ್ಯೆ ಎತ್ತನ್ನು ಗಮನಿಸುತ್ತಿದ್ದ.

ಹೀಗಿರುವಾಗಲೇ ಎತ್ತು ಪೊತಪೊತನೆ ಸಗಣಿಯನ್ನು ಉಚ್ಚಿಕೊಂಡಿತು.  ಎರಡನೆಯ ಪಾದಕ್ಕೆ ಹಲ್ಲೆ ಕಟ್ಟುತ್ತಿರುವಾಗಲೇ ಎತ್ತು ಏದುಸಿರು ಬಿಡತೊಡಗಿತು.  ಇದ್ದಕ್ಕಿದ್ದಂತೆ ಮುಕಳಿಯಲ್ಲಿ [ಕುಂಡೆಯಲ್ಲಿ] ಚಂಡು ಒತ್ತಿಕೊಂಡು ಬಂತು.  ಆಗಷ್ಟೇ ಮೂರನೇ ಕಾಲನ್ನು ಎತ್ತಿಕೊಂಡಿದ್ದ ರಂಗಪ್ಪನಿಗೆ ಬೆವರು ಒತ್ತಿಕೊಂಡು ಬಂತು.  ಇಡೀ ಮೈಯೇ ಬೆವರಿನಿಂದ ತೊಯ್ದುಹೋಯಿತು.  ಎತ್ತು ಕಣ್ಣು ಮುಚ್ಚಿಕೊಂಡಿತ್ತು.  ಏದುಸಿರು ನಿಂತಿತ್ತು.

ಉಳಿ, ಸುತ್ತಿಗೆಯನ್ನು ದೂರ ಎಸೆದು ನಿಂತ ರಂಗಪ್ಪ ತಕ್ಷಣ ಒಂದು ಕೊಡ ನೀರು ತರಲು ಹೇಳಿದ.  ಕಾಲಿನ ಕಟ್ಟುಗಳನ್ನು ಬಿಚ್ಚಿ, ಆಧಾರಕ್ಕಿಟ್ಟ ಹೊಟ್ಟಿನ ಚೀಲವನ್ನು ದೂರ ತಳ್ಳಿದ.  ಕಾಲನ್ನು ಗಸಗಸನೆ ತಿಕ್ಕಿ, ಬೆನ್ನನ್ನು ತಿಕ್ಕುತ್ತಾ, ನೀರನ್ನು ಪಟ್ ಪಟ್ ಎಂದು ಮುಖಕ್ಕೆ ಹೊಡೆಯತೊಡಗಿದ.  ಕುಂಡೆಯಲ್ಲಿ ಬಂದ ಚಂಡನ್ನು ಕೈಯಿಂದ ಒತ್ತಿ ಒಳ ತುರುಕಿದ.  ಮುಂಭಾಗದ ಕುತ್ತಿಗೆ ಹಿಡಿದೆತ್ತಲು ಹೇಳಿ ತಾನೇ ಬಾಲಕ್ಕೆ ಕೈ ಹಚ್ಚಿದ.  ಅಷ್ಟೊತ್ತಿಗೆ ಅಲ್ಲಿ ಸೇರಿದ್ದ ನಾಲ್ಕಾರು ಜನ ಎತ್ತನ್ನು ಎಬ್ಬಿಸಿ ನಿಲ್ಲಿಸಿದರು.  ಆದರೂ ಎತ್ತು ನಿಲ್ಲಲಾಗದೆ ತೂರಾಡಿತ್ತು.  ಕಣ್ಣನ್ನು ಬಿಟ್ಟಿರಲಿಲ್ಲ.  ರಂಗಪ್ಪ ಒಂದೇ ಸಮನೆ ಬೆನ್ನು, ಹೊಟ್ಟೆ, ಕಾಲಗಳನ್ನು ಉಜ್ಜುವುದನ್ನು ಹೆಚ್ಚಿಸಿದ.  ರಕ್ತ ಚಲನೆ ಹೆಚ್ಚುತ್ತಿದ್ದಂತೆ ಎತ್ತಿನ ಕಾಲುಗಳಿಗೆ ಶಕ್ತಿ ಬಂತು.  ಮೈ ಬಿಸಿ ಹೆಚ್ಚಿತು.  ನಿಧಾನ ಕಣ್ಣು ಬಿಟ್ಟಿತು.  ಬಾಲ ಅಲ್ಲಾಡಿಸಿತು.

ರಂಗಪ್ಪನಿಗೆ ಏದುಸಿರು ಹೆಚ್ಚಾಗಿತ್ತು.  ಪಕ್ಕದ ಕಟ್ಟೆಯ ಮೇಲೆ ದೊಪ್ಪೆಂದು ಕುಳಿತ.  ಯಾರೋ ಚೊಂಬಲ್ಲಿ ನೀರು ಕೊಟ್ಟರು.  ಗಟಗಟನೆ ಕುಡಿದು ದೊಡ್ಡ ನಿಟ್ಟುಸಿರುಬಿಟ್ಟ.  ಕಣ್ಣು ಕೆಂಪೇರತೊಡಗಿತು.  ಅಲ್ಲಿಯವರೆಗೆ ಅವಿತಿದ್ದ ಸಿಟ್ಟು ಭಗ್ಗನೆ ಹೊತ್ತಿ ಉರಿಯಿತು.  ನಗಾರಿ ಕಂಠದಿಂದ ಒಂದೇ ಸಮನೆ ಅಲ್ಲಿದ್ದವರ ಜನ್ಮ ಜಾಲಾಡತೊಡಿಗಿದ.

ಇದೆಲ್ಲಾ ಕೇವಲ ಹದಿನೈದು ನಿಮಿಷಗಳಲ್ಲಿ ನಡೆದುಹೋಯಿತು.  ನೂರಾರು ಎತ್ತುಗಳಿಗೆ ಹಲ್ಲೆ ಕಟ್ಟಿ ರೈತರ ಮನೆ ಮನೆಯಲ್ಲೂ ಹೆಸರುವಾಸಿಯಾದ ರಂಗಪ್ಪನ ಮರ್ಯಾದೆ ಆ ದಿನ ನುಚ್ಚುನೂರಾಗುತ್ತಿತ್ತು.  ಕೇವಲ ೪೫ ನಿಮಿಷಗಳಲ್ಲಿ ನಾಲ್ಕು ಕಾಲುಗಳಿಗೆ [ಒಂದು ಎತ್ತಿಗೆ] ಹಲ್ಲೆ ಕಟ್ಟಬಲ್ಲ ಸಮರ್ಥ!  ದಿನವೊಂದಕ್ಕೆ ೧೪ ಜೊತೆ ಅಂದರೆ ೨೮ ಎತ್ತುಗಳಿಗೆ ಹಲ್ಲೆ ಕಟ್ಟಿ ದಾಖಲೆ ಮಾಡಿದ ಹಲ್ಲೆವೀರ!.  ಎತ್ತಿನ ನಡಿಗೆಯಿಂದಲೇ ಹಲ್ಲೆಯ ಸ್ಥಿತಿ-ಗತಿ ಹೇಳಬಲ್ಲ ಹಲ್ಲೆತಜ್ಞ!  ಕಣ್ಣ ನೋಟ, ಕೈಯ ಚುರುಕಿನಿಂದಲೇ ತನ್ನ ಶೈಲಿ ರೂಪಿಸಿಕೊಂಡವ.  ೮ನೇ ವರ್ಷದಿಂದಲೇ ಕಸುಬಿಗೆ ಇಳಿದವ.  ಹಣಕ್ಕಾಗಿ, ಹೆಸರಿಗಾಗಿ ಒಮ್ಮೆಯೂ ಹಂಬಲಿಸದೆ ಕೆಲಸವನ್ನೇ ಕೈಲಾಸ ಎಂದವ.  ಎತ್ತನ್ನೇ ದೇವರೆಂದು ತಿಳಿದವ.  ಹೀಗೆ ಏನೆಲ್ಲಾ ಕಾರಣಕ್ಕಾಗಿ ಮನೆಮಾತಾದ ಹಲ್ಲೆ ರಂಗಪ್ಪ ಕೆಂಡಾಮಂಡಲವಾಗಿ ಕೂಗುತ್ತಿದ್ದರೆ ಯಾರೊಬ್ಬರೂ ಫಿಟ್‌ಲೊಟ್ ಅನ್ನದೇ ಸುಮ್ಮನೆ ನಿಂತಿದ್ದರು.  ಕಟ್ಟೆಯ ಹತ್ತಿರ ಹೋಗುವ ಧೈರ್ಯ ಸಹ ಯಾರಿಗೂ ಇರಲಿಲ್ಲ.  ಸುಧಾರಿಸಿಕೊಂಡ ಎತ್ತು ಬಿಳಿಹುಲ್ಲನ್ನು ಮೆಲುಕತೊಡಗಿತು.

ಮನೆಘಟ್ಟದ ಮಾಬ್ಲನ ಎತ್ತಿಗೆ ಹಲ್ಲೆ ಕಟ್ಟೋಕೆ ಒಂದು ತಾಸು ಆಯ್ತು, ಗಾಯವಾದ ಕಾಲಿಗೆ ನಾಜೂಕಾಗಿ ಹಲ್ಲೆ ಕಟ್ಟೋದಕ್ಕೆ ರಂಗಪ್ಪನಲ್ಲದೇ ಬೇರೆ ಯಾರಿಂದ ಸಾಧ್ಯ ಹೇಳಿ? ರಂಗಪ್ಪ ಒಂದು ಜೊತೆ ಎತ್ತಿಗೆ ಹಲ್ಲೆ ಕಟ್ಟೋಕೆ ೧೫೦ ರೂಪಾಯಿಗಳನ್ನು ತಗೋತಾನೆ.  ಆದರೆ ಹಲ್ಲೆ ಕಟ್ಟಿಸಿಕೊಳ್ಳೋವರೆಗೆ ತಗ್ಗಿರೋ ರೈತರು ಕೆಲಸವಾದ ಮೇಲೆ ಪೂರ್ತಿ ದುಡ್ಡು ಕೊಟ್ಟ ದಾಖಲೇನೇ ಇಲ್ಲ.  ಇದೇ ಮನೆಘಟ್ಟದ ಮಾಬ್ಲ ಈಗಾಗ್ಲೇ ಸಾವಿರಾರು ರೂಪಾಯಿ ಬಾಕಿ ಇಟ್ಕೊಂಡು ರಂಗಪ್ಪನ್ನೇ ಸತಾಯಿಸೋನು, ಇಷ್ಟೆಲ್ಲಾ ಆದ್ರೂ ಈ ಸಾರಿ ಕೊಟ್ಟೇಬಿಡ್ತಾನೆ ಅಂತಲ್ಲ.  ಮಾಬ್ಲಂಗೆ ದುಡ್ಡಿಗೇನೂ ಕೊರತೆಯಿಲ್ಲ.  ಕೊಡೋ ಬುದ್ಧಿಯ ಕೊರತೆ ಅಷ್ಟೆ.  ಹಿಂಗೆ ರಂಗಪ್ಪಂಗೆ ಬರೋ ದುಡ್ಡನ್ನೆಲ್ಲಾ ಲೆಕ್ಕಾ ಹಾಕಿದ್ರೆ ೫೦ ವರ್ಷಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ದುಡ್ಡು ಬರೋದಿದೆ.  ಆದರೆ ದುಡ್ಡು ಕೊಡಲಿಲ್ಲ ಅಂತ ಅವರ ಎತ್ತಿಗೆ ಹಲ್ಲೆ ಕಟ್ಟೋದು ನಿಲ್ಲಿಸಿಲ್ಲ.  ಒಮ್ಮೆಯೂ ಕೆಲಸದಲ್ಲಿ ಮೋಸ ಮಾಡಿಲ್ಲ.  ಎಷ್ಟೋಸಾರಿ ದುಡ್ಡು ಕೇಳೋದೇ ಮರೆತಿದ್ದೂ ಇದೆ.  ಇದನ್ನೆಲ್ಲಾ ಕೇಳಿದ್ರೆ ಅದೇನ್ ಬಿಡಿ ಸೋಮಿ.  ಮಡಸೂರು ಹೆಗಡೇರ ಮನೆ ಎತ್ತು ಒದ್ದಂಗೆ ಒದೆಯೋಕೆ ಆಗುತ್ತಾ ಅನ್ನೋದೆ.  ಅದೊಂದು ಸ್ವಾರಸ್ಯದ ಘಟನೆ.

ಸಾಗರದ ಸುತ್ತಮುತ್ತಲಿನ ದೊಡ್ಡ ಹೆಗಡೇರ ಮನೆಗಳಿಗೆ ರಂಗಪ್ಪ ಒಕ್ಕಲು.  ಬರೀ ಹಲ್ಲೆ ಕಟ್ಟೋದೊಂದೇ ಅಲ್ಲ, ಎತ್ತುಗಳಿಗೆ ಹುಷಾರಿಲ್ಲದಿದ್ದರೂ ಔಷಧಿ ಮಾಡಕ್ಕೆ ರಂಗಪ್ಪನೇ ಬೇಕು.  ಹೀಗಾಗಿ ಅನೇಕ ಊರುಗಳಿಗೆ ರಂಗಪ್ಪ ಆಗಾಗ ಭೇಟಿ ನೀಡ್ತಾನೇ ಇರ್‍ತಾನೆ.  ಅದರಲ್ಲಿ ಮಡಸೂರು ಹೆಗಡೇರ ಮನೆಯೂ ಸೇರಿದೆ.  ಮಡಸೂರ ಹೆಗಡೇರು ಇಡೀ ಸೀಮೆಗೆ ದುಬಾರಿಯಾದ ಎತ್ತು ತಂದಿದ್ರು.  ಭಾರಿ ಎತ್ತು.  ಎತ್ತು ಹೇಗೇ ಇದ್ರೂ ಹಲ್ಲೆ ಕಟ್ಟೋನು ಒಬ್ನೆ-ರಂಗಪ್ಪ.  ೧೦ ಜನ ಸೇರಿ ಎತ್ತು ಕೆಡವಿದ್ರು.  ರಂಗಪ್ಪನೂ ಸರ ಸರ ಹಲ್ಲೆ ಕಟ್ಟಿದ.  ಎತ್ತು ಯಾವುದೇ ತಂಟೆ ಮಾಡದೇ ಸುಮ್ಮನೆ ಇತ್ತು.  ಹಲ್ಲೆ ಕಟ್ಟಿಯಾದ ಮೇಲೆ ಕಾಲಿಗೆ ಕಟ್ಟಿದ ಹಗ್ಗ ಬಿಚ್ಚಬೇಕಲ್ಲ.  ಎತ್ತು ಸುಮ್ಮನಿದೆಯಲ್ಲಾ ಅಂತ ಎಲ್ಲಾ ಸರಿದು ನಿಂತಿದ್ರು.  ರಂಗಪ್ಪ ಕಾಲಿನ ಹಗ್ಗ ಬಿಚ್ಚಿದ್ದೇ ತಡ, ಎತ್ತಿಗೆ ಅದೆಲ್ಲಿತ್ತೋ ಶಕ್ತಿ.  ರಂಗಪ್ಪನ ತೊಡೆಗೆ ಝಾಡಿಸಿ ರಪ್ಪನೆ ಒದ್ದೇಬಿಟ್ಟಿತು.  ರಂಗಪ್ಪ ಹತ್ತು ಮಾರು ದೂರ ಗಾಳೀಲಿ ಹಾರಿ ಧಡ್ ಅಂತ ಬಿದ್ದ.  ಬಿದ್ದವನಿಗೆ ಏಳಲಿಕ್ಕೇ ಆಗದು.  ಜೀವಮಾನದಲ್ಲಿ ಹಿಂಗೆ ಆಗಿದ್ದು ಇಲ್ಲ.  ಒಂದು ಕಾಲು ದೇಹದಿಂದ ಕಿತ್ತು ಹಾರಿಹೋಗಿದೆಯೇನೋ ಅಂತ ಮುಟ್ಟಿ ಮುಟ್ಟಿ ನೋಡಿಕೊಂಡ.  ಒಂದು ತಿಂಗಳು ಓಡಾಡಲಿಕ್ಕೆ ಬರದೆ ಹಾಸಿಗೆ ಮೇಲೇ ಇರೋ ಹಂಗಾಯ್ತು.  ಅದರ ನೋವು ಇವತ್ತಿಗೂ ರಂಗಪ್ಪನ್ನ ಕಾಡ್ತಾನೇ ಇರ್‍ತದೆ.

ರಂಗಪ್ಪನ ಅಣ್ಣ ಹನುಮಂತಪ್ಪ ಸಹ ಒಳ್ಳೇ ಕಸುಬುದಾರ.  ಬಾಬಣ್ಣ-ಹನುಮಂತಪ್ಪ ಸೇರಿ ರಂಗಪ್ಪಂಗೆ ಕೆಲಸ ಕಲಿಸಿದ್ದಂತೆ.  ಆದ್ರೆ ರಂಗಪ್ಪ ತನ್ನ ಮೂರು ಜನ ಗಂಡುಮಕ್ಕಳಿಗೂ ಕೆಲಸ ಕಲಿಸಿಲ್ಲ.  ಮಗಳನ್ನು ಡಿಗ್ರಿ ಓದಿಸುತ್ತಿದ್ದಾನೆ.  ಮನೇಲಿ ರಂಗಪ್ಪನ ಕಸುಬಿಗೆ ಅಂತಹ ಮನ್ನಣೆ ಇಲ್ಲ.  ಹೊರಗೂ ಸಹ ರಂಗಪ್ಪ ಕೆಲಸಕ್ಕೆ ಬೇಕೇ ಹೊರತು ಆಮೇಲೆ ಕ್ಯಾರೆ ಅನ್ನೋರಿಲ್ಲ.  ೬೮ ವರ್ಷದ ರಂಗಪ್ಪ ಒಳ್ಳೆ ಕರಿ ಕಲ್ಲುಗುಂಡಿನಂಗೆ ಇದ್ದಾನೆ.  ಕಣ್ಣಿಗೆ ಕನ್ನಡಕ ಬಂದಿಲ್ಲ.  ಕೈಕಾಲಿನ ಚುರುಕು ಒಂದು ಚೂರೂ ಕಂದಿಲ್ಲ.  ಕೆಲಸದ ಮೇಲಿನ ಗೌರವ ಕಮ್ಮಿ ಆಗಿಲ್ಲ.  ಭಾರಿ ದುಡ್ಡು ಮಾಡೋಕಾಗ್ಲಿಲ್ಲ ಅನ್ನೋ ಕೊರಗೇನಿಲ್ಲ.  ಇಲ್ಲೀವರೆಗೆ ಬಾಳಿದ ಬದುಕಿನ ರೀತಿ ಬಗ್ಗೆ, ನಿಯತ್ತಿನ ಜೀವನದ ಬಗ್ಗೆ ಸಂತೃಪ್ತಿಯಿದೆ.  ಹಾಗಿದ್ರೆ ಕೆಲಸ ಬಿಡೋ ಸುದ್ದಿ ಹಬ್ಬಿದ್ದು ಹೇಗೆ ಅಂತಾನಾ?

ರಂಗಪ್ಪಂಗೆ ವರ್ಷದಾಗೆ ೫ ತಿಂಗಳು ಮಾತ್ರ ಹಲ್ಲೆ ಕಟ್ಟೋ ಕೆಲಸ.  ಉಳಿದ ದಿನಗಳಲ್ಲಿ ಅದೂ-ಇದೂ ಕೆಲಸದ ಹುಡುಕಾಟ.  ಆರು ವರ್ಷಗಳ ಹಿಂದೆ ಅದೇನಾತೋ ಏನೊ ಇದ್ದಕ್ಕಿಂದ್ದಂಗೆ ಜಾಂಡೀಸ್ ಬಂದುಬಿಡ್ತು.  ಮೊದಲು ಗೊತ್ತಾಗಲೇ ಇಲ್ಲ.  ಇಷ್ಟು ವರ್ಷ ಯಾವ ಕಾಯಿಲೆಯೂ ಇಲ್ದೆ ಈಗ ಇದು ಅಟಕಾಯಿಸಿದ್ದು, ನಿಃಶಕ್ತಿ, ಸುಸ್ತು ಹೀಗೆ ಏನೆಲ್ಲಾ ಆಗೋಯ್ತು.  ಎತ್ತುಗಳಿಗೆ ಹಲ್ಲೆ ಕಟ್ತಾಯಿದ್ದಂಗೆ ತಲೆ ತಿರುಗೋದು, ಕಣ್ಣು ಮಂಜಾಗೋದು ಹೀಗೆ ಎಷ್ಟೆಲ್ಲಾ ತೊಂದರೆಗಳು.  ಹಳ್ಳಿ ಔಷಧ ತಗೊಂಡು ಜಾಂಡೀಸ್ ಪೂರ್ಣ ಹೋಯ್ತು.  ೨೫ ದಿನ ಆರಾಮು ಮಾಡಾಯ್ತು.  ಆದ್ರೆ ಏಕೋ ಹಿಂದಿನಷ್ಟು ಚುರುಕಿಲ್ಲೇನೋ ಅನ್ನೋ ಅನುಮಾನ.  ತನ್ನ ಬಲಹೀನತೆಯಿಂದ ಒಂದು ಎತ್ತಿಗೆ ಅಪಾಯ ಆದ್ರೂ ಅದೊಂದು ದೊಡ್ಡ ಅಪರಾಧ ಅನ್ನೋ ನಂಬಿಕೆ.  ಇಷ್ಟು ವರ್ಷದ ಜೀವನದಲ್ಲಿ ಇಲ್ದೇ ಇರೋ ಅಪವಾದ ಬಂದ್ರೆ ಅನ್ನೋ ಚಿಂತೆ.  ಹೀಗೆ ಪ್ರತಿ ದಿನ, ಪ್ರತಿ ಸಾರಿ ಎಷ್ಟೆಲ್ಲಾ ಯೋಚನೆ ಬಂದೂ ಬಂದೂ ಕೆಲಸ ಬಿಡೋ ಬಗ್ಗೆ ಒಂದೆರಡು ಸಾರಿ ಹೇಳಿದ.  ಊರು ತುಂಬಾ ಅದೇ ಸುದ್ದಿ ಹಬ್ಬಿತು.

ಮೊನ್ನೆ ಸೋಮವಾರ ಅಕ್ಕಿಮಿಲ್ಲಿನ ಎದುರು ಬಹಳ ಗಾಡಿಗಳು ನಿಂತಿದ್ದವು.  ಹಲ್ಲೆ ಕಟ್ಟೋ ಶಬ್ದ ಕೇಳುತ್ತಿತ್ತು.  ಸುತ್ತಲೂ ನಿಂತಿದ್ದ ಜನಗಳನ್ನು ಸರಿಸಿ ಹಣಿಕಿ ಹಾಕಿದ್ರೆ ಮೊದಲು ಖಾಕಿ ಚಡ್ಡಿ ಕಾಣಿಸ್ತು.  ಕಾಲಿನ ಸಂದಿಯೊಳಗಿಂದ ಕರೇ ಗುಂಡುಕಲ್ಲಿನಂತಹ ಮಂಡೆ ಕಾಣಿಸ್ತು.  ಬಗ್ಗಿನಿಂತ ದೇಹ ಕೆಲಸ ಮುಗಿಯೋ ತನಕ ಹಂಗೇ ಇತ್ತು.

ರಂಗಪ್ಪ ಕಸುಬನ್ನು ಬಿಟ್ರೂ, ಕಸುಬು ಮಾತ್ರ ರಂಗಪ್ಪನ್ನ ಬಿಡೋ ಥರ ಕಾಣ್ಲಿಲ್ಲ.