ಗುಂಡಿ ಕಿತ್ತು ಹೋದಾಗಲೋ, ಕಛೇರಿಗೆ ಇಂಥದ್ದೇ ಉಡುಪು ಧರಿಸಿ ಹೋಗಬೇಕು ಎಂದು ಮಡದಿ ಹಠ ಹಿಡಿದಾಗಲೋ, ಯಾರಾದರೂ ಈ ಬಟ್ಟೆ ಅನ್ನುವ ಫ್ಯಾಶನ್ ಕಂಡು ಹಿಡಿದರಪ್ಪಾ ಎಂದು ಎನಿಸದೇ ಇರದು. ಆದರೂ ಈ ಬಟ್ಟೆ ಎನ್ನುವ ವಸ್ತುವಿನ ಆವಿಷ್ಕಾರವಾಗದಿದ್ದರೆ ಬಹುಶಃ ಮಾನವ ನಾಗರೀಕ ಎನ್ನಿಸುತ್ತಿರಲಿಲ್ಲವೇನೋ! ಇಂದಿನ ಬದುಕಿನಲ್ಲಿ ಬಟ್ಟೆಗೆ ಅಷ್ಟೊಂದು ಮಹತ್ವವಿದೆ. ದಿರಿಸನ್ನು ಉಪೇಕ್ಷಿಸಿ ಹುಟ್ಟಾಬಟ್ಟೆಯೋ, ಪುಟ್ಟ ಬಟ್ಟೆಯೋ ಧರಿಸುವವರನ್ನು ಸನ್ಯಾಸಿ ಎಂದೋ, ಫ್ಯಾಶನ್ ಪ್ರವರ್ತಕರೆಂದೋ ಗೌರವಿಸುವುದು ಅದಕ್ಕೇ ಇರಬೇಕು.

ಏನೇ ಇರಲಿ. ಮಾನವನ ಮೂರು ಮೂಲಭೂತ ಅವಶ್ಯಕತೆಗಳಾದ ಕರೋಟಿ, ಕಪಡ ಔರ್ ಮಕಾನ್ಕಿನಲ್ಲಿ ಕಪಡಾದ ತಯಾರಿಕೆಯೇ ಅತ್ಯಂತ ಸಂಕೀರ್ಣ ಶೋಧ ಎನ್ನುವುದರಲ್ಲಿ ಎರಡು ಮಾತಿಲ್ಲ. ನಾಲ್ಕು ಕಂಬಗಳಿಗೆ ಒಂದಿಷ್ಟು ಕಡ್ಡಿ ಕಟ್ಟಿ, ಸೊಪ್ಪು ಹೊದಿಸಿ ಗುಡಿಸಲು ಕಟ್ಟಿಕೊಳ್ಳಬಹುದು. ಗೆಡ್ಡೆ-ಗೆಣಸು, ಮಾಂಸವನ್ನು ಬೇಯಿಸದೆಯೇ ತಿಂದು ಹೊಟ್ಟೆ ಹೊರೆಯಬಹುದು. ಆದರೆ ಹೊಲಿಯದೆ, ನೇಯದೆ ಬಟ್ಟೆ ತಯಾರಿಕೆ ಸಾಧ್ಯವೇ? ಇಷ್ಟು ಸಂಕೀರ್ಣವಾದ ತಂತ್ರಜ್ಞಾನವನ್ನು ಮಾನವನೆಂಬ ಪ್ರಾಣಿ ಎಂದು ಕರಗತ ಮಾಡಿಕೊಂಡನೆನ್ನುವುದು ಕೌತುಕದ ವಿಷಯ. ಈ ಪ್ರಶ್ನೆಗೆ ಒಂದು ಉತ್ತರವನ್ನು ಸೈನ್ಸ್ ಪತ್ರಿಕೆ ಪ್ರಕಟಿಸಿದೆ.  ಮಾನವರು ಸುಮಾರು 30,000 ವರ್ಷಗಳ ಹಿಂದೆಯೇ ನಾರು ಕೃಷಿ ಮಾಡಿ, ನಾರು ತೆಗೆಯುವ ಕಲೆಯನ್ನು ಕರಗತ ಮಾಡಿಕೊಂಡಿರಬೇಕು ಎಂದು ಸೈನ್ಸ್ನಲ್ಲಿ ಪ್ರಕಟವಾಗಿರುವ ಸಂಶೋಧನೆ ತಿಳಿಸಿದೆ. ಅಮೆರಿಕೆಯ ಜಾರ್ಜಿಯಾ ರಾಜ್ಯದ ಜುಜುಯಾನದಲ್ಲಿರುವ ಗುಹೆಯೊಂದರಲ್ಲಿ ದೊರೆತ ಪುರಾತನ ಅವಶೇಷಗಳಲ್ಲಿ ನಾರಿನ ತುಣುಕುಗಳೂ ದೊರೆತಿವೆ. ಈ ತುಣುಕುಗಳು ಸುಮಾರು 32000ರಿಂದ 36000 ವರ್ಷಗಳಷ್ಟು ಪುರಾತನ ಇರಬೇಕು ಎಂದು ಅವುಗಳನ್ನು ವಿವಿಧ ಪರೀಕ್ಷೆಗಳಿಗೊಡ್ಡಿ ಪರಿಶೀಲಿಸಿದ ಜಾರ್ಜಿಯಾದ ಇನ್ಸ್ಟಿಟ್ಯೂಟ್ ಆಫ್ ಪೇಲಿಯೊಬಯಾಲಜಿ (ಪಳೆಯುಳಿಕೆ ಜೀವವಿಜ್ಞಾನ)ಯ ವಿಜ್ಞಾನಿ ತೆಂಗಿಜ್ ಮೆಶ್ವೆಲಿಯಾನಿ ಮತ್ತು ಸಂಗಡಿಗರು ವಾದಿಸಿದ್ದಾರೆ. ಮೆಶ್ವೆಲಿಯಾನಿಯವರ ವಾದವೇ ನಿಜವಾದರೆ, ಕೃಷಿಗೆ ತೊಡಗುವ ಮೊದಲೇ ಮಾನವ ನೇಕಾರನಾಗಿದ್ದ ಎನ್ನಬಹುದು.

ನಾಗರೀಕ ಮಾನವನ ವಿಕಾಸದಲ್ಲಿ ಕೃಷಿಗೆ ಇರುವಷ್ಟೆ ಮಹತ್ವ ನಾರಿನ ಉತ್ಪನ್ನಗಳಿಗೂ ಇವೆ. ಏಕೆಂದರೆ, ಇವೆಲ್ಲದೆ ನಾಜೂಕಾದ ದಿರಿಸುಗಳನ್ನು ತಯಾರಿಸುವುದು ಅಸಾಧ್ಯ.  ಮಾನವ ಕೃಷಿಗಾರಿಕೆಗೆ ತೊಡಗಿದ್ದರು ಸುಮಾರು 10000 ವರ್ಷಗಳ ಹಿಂದೆಯಷ್ಟೆ. ಅದಕ್ಕೂ ಮೊದಲು ಆತ ಬೇಟೆಗಾರನಾಗಿದ್ದ. ಪ್ರಾಣಿಗಳನ್ನು ಬೇಟೆಯಾಡಿ, ಅದರ ಮಾಂಸವನ್ನು ಸೇವಿಸುತ್ತಿದ್ದ. ಅವನ ಮೊದಲ ದಿರಿಸು ಮಾಂಸ ಬಳಿದು ತೆಗೆದ ಮೇಲೆ ಉಳಿದ ತೊಗಲಾಗಿರಬೇಕು ಎನ್ನುವುದು ವಿಜ್ಞಾನಿಗಳ ಊಹೆ. ಇಂದು ತೊಗಲಿನಿಂದ ಸಿದ್ಧಪಡಿಸಿದ ಉಡುಪುಗಳು ಹೈ ಫ್ಯಾಶನ್ ಇರಬಹುದು. ಆದರೆ ಶಿಲಾಯುಗದಲ್ಲಿ ಅವು ಬೇಟೆಗಾರಿಕೆಯ ಉಪೋತ್ಪನ್ನಗಳಾಗಿದ್ದುವಷ್ಟೆ. ಹೀಗಾಗಿ ನಾರುಮಡಿಯ ತಯಾರಿಕೆ ಮಾನವನ ಇತಿಹಾಸದಲ್ಲಿ ವಿಕಾಸವಾದ ಒಂದು ಪ್ರಮುಖ ತಂತ್ರಜ್ಞಾನ ಎನ್ನಬಹುದು. ನಾರು ಒದಗಿಸುವ ಸಸ್ಯಗಳನ್ನು ಗುರುತಿಸುವುದರ ಜೊತೆಗೆ ಅದರಿಂದ ನಾರು ತೆಗೆಯುವುದೂ ಒಂದು ಮಹತ್ತರ ಹೆಜ್ಜೆ. ನಾರಿನಿಂದ ನೇರವಾಗಿ ಬಟ್ಟೆಗಳು ದೊರೆಯುವುದಿಲ್ಲವಷ್ಟೆ. ಕುರಿಯ ಉಣ್ಣೆಯನ್ನೋ, ಹತ್ತಿಯ ನಾರನ್ನೋ ಮೊದಲಿಗೆ ಹೆಣೆದು ನೂಲಾಗಿಸಿ, ನೂಲಿನಿಂದ ನೇಯ್ದರಷ್ಟೆ ಬಟ್ಟೆ ದೊರೆಯುತ್ತದೆ. ಇವಿಷ್ಟು ಪ್ರಾಥಮಿಕ ಸಂಸ್ಕರಣೆಯ ಕ್ರಮಗಳ ಆವಿಷ್ಕಾರವಾಗದೆ ಬಟ್ಟೆಗಳ ತಯಾರಿ ಸಾಧ್ಯವಾಗಿರಲಿಕ್ಕಿಲ್ಲ.  ಅದಕ್ಕೆ ರೋಟಿ, ಮಕಾನ್ಗಿಂತಲೂ ಕಪಡಾ ತಯಾರಿಕೆಯೇ ಅತಿ ಸಂಕೀರ್ಣ. ಇಂದಿನಂತೆ ಫ್ಯಾಶನ್ ದಿರಿಸುಗಳು ಇಲ್ಲದೆ, ಬರಿಯ ನಾರುಮಡಿಯನ್ನು ಸುತ್ತಿಕೊಳ್ಳುತ್ತಿದ್ದ ದಿನಗಳಲ್ಲಿಯೂ, ನೂಲಿಗೆ ಬಣ್ಣ ಹಚ್ಚುವುದು, ನೇಯುವುದು ಕುಶಲ ಕೆಲಸಗಳಾಗಿಯೇ ಇದ್ದವು.

ಇಷ್ಟು ಸಂಕೀರ್ಣ ಕ್ರಿಯೆ ಆರಂಭ ಆದದ್ದು ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಸುಲಭವಲ್ಲ. ಐದು ಸಾವಿರ ವರ್ಷಗಳ ಹಿಂದೆ ಸಿಂಧೂ ಕಣಿವೆಯ ನಾಗರೀಕತೆಯ ಸಂದರ್ಭದಲ್ಲಿ ನಾಜೂಕಾದ ಹತ್ತಿಯ ಬಟ್ಟೆಗಳು ಲಭ್ಯವಿದ್ದುವು ಎಂದು ಚರಿತ್ರೆ ಹೇಳುತ್ತದೆ. ಅಂದು ಭಾರತದಿಂದ ಬಟ್ಟೆಗಳು ಮಧ್ಯಪ್ರಾಚ್ಯ ಹಾಗೂ ಯುರೋಪಿಗೆ ರಫ್ತಾಗುತ್ತಿದ್ದುವು. ಅನಂತರವಷ್ಟೆ ಯುರೋಪಿನಲ್ಲಿ ಬಟ್ಟೆಯ ತಯಾರಿಕೆಯ ಕುರುಹುಗಳು ದೊರೆಯುತ್ತವೆ. ಅದಕ್ಕೂ ಹಿಂದೆ ನಾರಿನ ಉಪಯೋಗ ಇತ್ತೇ? ಇದ್ದಿದ್ದರೆ ಅದನ್ನು ಹೇಗೆ ಪಡೆಯುತ್ತಿದ್ದರು? ನಾರಿನ ಗಿಡಗಳನ್ನು ಕೃಷಿ ಮಾಡಲಾಗುತ್ತಿತ್ತೇ? ನೇಕಾರಿಕೆ ತೊಡಗಿದ್ದು ಹೇಗೆ? ಇವೆಲ್ಲ ಪ್ರಶ್ನೆಗಳಿಗೂ ಊಹೆಗಳಷ್ಟೆ ಸದ್ಯಕ್ಕೆ ಉತ್ತರಗಳಾಗಿವೆ. ಇಂತಹ ಸಂದರ್ಭದಲ್ಲಿ ಮೆಶ್ವೆಲಿಯಾನಿ ತಂಡದ ಸಂಶೋಧನೆ ಮಹತ್ವ ಪಡೆಯುತ್ತದೆ.

 

ನಾರಿನ ಬಳಕೆಯ ಅತಿ ಪುರಾತನ ಉದಾಹರಣೆಗಳು ಜೆಕೊಸ್ಲೊವಾಕಿಯಾದಲ್ಲೂ, ಇಸ್ರೇಲಿನಲ್ಲೂ ದೊರಕಿವೆ. ಆದರೆ ಇವು ಸುಮಾರು 21ರಿಂದ 30 ಸಾವಿರ ವರ್ಷಗಳಷ್ಟು ಪುರಾತನವಷ್ಟೆ.  ಜೆಕೊಸ್ಲೊವಾಕಿಯಾದಲ್ಲಿ ಯುರೋಪಿನಲ್ಲಿ ದೊರೆಯುವ ನೆಟಲ್ ಎನ್ನುವ ಜೊಂಡಿನ ನಾರುಗಳು ದೊರೆತಿವೆ. ಇಸ್ರೇಲಿನಲ್ಲಿ ದೊರೆತ ನಾರಿನ ಮೂಲವನ್ನು ಪತ್ತೆ ಹಚ್ಚಲಾಗಿಲ್ಲ. ಹೀಗಿರುವಾಗ, ಇವುಗಳಿಗಿಂತಲೂ ಸುಮಾರು ಹತ್ತು ಸಾವಿರ ವರ್ಷಗಳಷ್ಟು ಹಳೆಯ ಅವಶೇಷಗಳಲ್ಲಿ ನಾರಿನ ಕುರುಹು ದೊರಕಿರುವುದು ಅಚ್ಚರಿಯ ವಿಷಯ.  ಯುರೋಪು ಹಾಗೂ ಉತ್ತರ ಅಮೆರಿಕೆಯಲ್ಲಿ ಸದ್ಯ ವ್ಯಾಪಕವಾಗಿ ಬಳಕೆಯಲ್ಲಿರುವ ಲಿನ್ಸೀಡ್ ಗಿಡದ ನಾರನ್ನು ಇದು ಹೋಲುತ್ತದೆಯಂತೆ. ಲಿನ್ಸೀಡ್ ಎನ್ನುವುದು ನಮ್ಮೂರ ಅಗಸೆಯ ಗಿಡದ ಸಂಬಂಧಿ. ನಾರಗಸೆ ಎಂದೂ ಇದನ್ನು ಕರೆಯುವುದುಂಟು. ಬಹಳ ಹಿಂದೆ ಭಾರತದಲ್ಲಿಯೂ ನಾರಗಸೆಯಿಂದ ನಾರುಮಡಿ ತಯಾರಿಸುತ್ತಿದ್ದರು.

ಹಾಗಂತ ಮೆಶ್ವೆಲಿಯಾನಿ ತಂಡಕ್ಕೆ ನಾರಿನ ಮೂಟೆ ಸಿಕ್ಕಿದೆ ಎಂದುಕೊಳ್ಳಬೇಡಿ. ಅವರಿಗೆ ದೊರೆತದ್ದು ಕಣ್ಣಿಗೆ ಕಾಣದಷ್ಟು ಸೂಕ್ಷ್ಮವಾದ ನಾರಿನ ಎಳೆಗಳು. ಗುಹೆಯೊಳಗೆ ಮಣ್ಣನ್ನು ಬೆದಕಿದಾಗ ಅವರಿಗೆ ಪ್ರಾಣಿಗಳ ರೋಮ, ಗಿಡಗಳ ಪರಾಗಗಳು, ಬೂಸು ಮತ್ತು ಪಾಚಿಯ ಎಳೆಗಳು ದೊರೆತವು. ಇವುಗಳ ನಡುವೆ ಕೆಲವು ನಾರಿನ ಎಳೆಗಳೂ ಇದ್ದುವು. ಇಪ್ಪತ್ತೇಳು ಮಣ್ಣಿನ ಮಾದರಿಗಳಲ್ಲಿ ಸುಮಾರು 800 ಎಳೆಗಳನ್ನು ಇವರು ಬೆದಕಿದ್ದಾರೆ. ಅವುಗಳಲ್ಲಿ 38 ನಾರುಗಳಿಗೆ ಬಣ್ಣವನ್ನೂ ಹಚ್ಚಲಾಗಿತ್ತು. ಬೂದು, ಕಪ್ಪು ಹಾಗೂ ಗುಲಾಬಿ ಬಣ್ಣದ ನಾರುಗಳಿದ್ದುವು ಎಂದು ಮೆಶ್ವೆಲಿಯಾನಿ ವರದಿ ಮಾಡಿದ್ದಾರೆ. ಒಂದು ನೂಲು ಸುಮಾರು 2 ಅಡಿಗಳಷ್ಟು ಉದ್ದವಿತ್ತಂತೆ. ಈ ನೂಲನ್ನು ಪುಟ್ಟ, ಪುಟ್ಟ ಎಳೆಗಳನ್ನು ಸುತ್ತಿ ಮಾಡಿದ್ದುದು ಕಂಡು ಬಂತು. ಅಂದರೆ ನಾರನ್ನು ಹೆಣೆದು ನೂಲು ನೇಯುವ ಕಲೆಯನ್ನು ಈ ಗುಹಾವಾಸಿಗಳು ಕಲಿತಿದ್ದರು ಎಂದರ್ಥವಷ್ಟೆ.  ರೇಡಿಯೊಕಾರ್ಬನ್ ಡೇಟಿಂಗ್ ತಂತ್ರದಿಂದ ಈ ನಾರುಗಳ ಕಾಲವನ್ನು ನಿರ್ಧರಿಸಿದ್ದಾರೆ. ವಸ್ತುಗಳಲ್ಲಿರುವ ಕಾರ್ಬನ್ ಅಣುಗಳಲ್ಲಿ ಕೆಲವು ನಷ್ಟವಾಗುವ ದರವನ್ನು ರೇಡಿಯೊಕಾರ್ಬನ್ ಡೇಟಿಂಗ್ ತಂತ್ರ ಬಳಸುತ್ತದೆ. ಮೆಶ್ವೆಲಿಯಾನಿಗೆ ದೊರೆತಿರುವ ನೂಲುಗಳು ಕನಿಷ್ಟ 31ರಿಂದ 36 ಸಾವಿರ ವರ್ಷಗಳಷ್ಟು ಹಳೆಯದಿರಬೇಕು ಎಂದು ಈ ತಂತ್ರ ಸೂಚಿಸಿದೆ.

ಹಾಗಿದ್ದರೆ ಈ ಗುಹಾವಾಸಿಗಳು ನಾರುಮಡಿ ಧರಿಸುತ್ತಿದ್ದರೇ? ಬಹುಶಃ ಇರಲಿಕ್ಕಿಲ್ಲ. ಮರದ ತುಂಡುಗಳಿಗೆ ತಮ್ಮ ಶಿಲಾಯುಧವನ್ನು ಭದ್ರವಾಗಿ ಕಟ್ಟಲು ಹಗ್ಗವನ್ನು ತಯಾರಿಸಲೆಂದು ಈ ನೂಲನ್ನು ಮೊದಲಿಗೆ ಬಳಸಿದ್ದಿರಬೇಕು ಎಂದು ಮೆಶ್ವೆಲಿಯಾನಿ ತರ್ಕಿಸಿದ್ದಾರೆ. ಅನಂತರವಷ್ಟೆ ನಾರಿನಿಂದ ಬಟ್ಟೆಯನ್ನು ನೇಯುವ ಹಾಗೂ ಹೊಲಿಯುವ ತಂತ್ರಗಳು ಸಿದ್ಧಿಸಿರಬೇಕು ಎನ್ನುವುದು ಅವರ ಅಭಿಪ್ರಾಯ.