‘ಹಳೇ ಪೇಪರ್ ಖಾಲಿ ಶೀಶೆ
ಹಳೇ ಪೇಪರ್ ಖಾಲಿ ಶೀಶೆ’-
ಕೂಗೊ ಮರಿ ಆತನ
ಎಷ್ಟೊಂದಿವೆ ಈ ಮನೆಯಲಿ
ಇಂಥ ವಸ್ತು ಪುರಾತನ
ಹಾಗೆಯೆ ಇತ್ತೀಚಿನ !

[‘ಹಳೇ ಪೇಪರ್ ಖಾಲಿ ಶೀಶೆ’-
ಸದ್ಯ, ಇವನು ತೊಲಗಲಿಲ್ಲ
ನಡು ಹಗಲಲಿ ಹಾಳು ಶನಿ.
ನಮ್ಮ ಮಾನ ಮರ್ಯಾದೆಯ
ಇವನು ಹೀಗೆ ತೆರೆಯಬಹುದೆ
ಸುರಿವ ಹಾಳು ಹಗಲಲಿ !]

‘ಹಳೇ ಪೇಪರ್ ಖಾಲಿ ಶೀಶೆ’-
ಕೂಗೊ ಮರೀ ಆತನ
ಎಷ್ಟೊಂದಿವೆ ಮನೆಯ ತುಂಬ
ಇಂಥ ವಸ್ತು ಪುರಾತನ
ಹಾಗೆಯೇ ಇತ್ತೀಚಿನ !

ಕಾಲಿಟ್ಟೆಡೆ ಖಾಲಿ ಶೀಶೆ
ಮೂಲೆ ತುಂಬ ಹಳೆ ಪೇಪರು,
ಇದನು ಗುಡಿಸಿ ಇದನು ಬಳಿದು
ಕೊಟ್ಟಾದರು ತೊಳೆಯಬೇಕು
ಹಳೆಯ ಹೊಲಸು ಕಸವನು.
ಆಗ ಮಾತ್ರ ಒಪ್ಪವಾಗಿ
ಇಡಬಹುದೋ ಏನೋ ಕಾಣೆ
ನಮ್ಮದಾದ ಮನೆಯನು.

[‘ಹಳೇ ಪೇಪರ್ ಖಾಲಿ ಶೀಶೆ’-
ಇವನಪ್ಪನ ಮನೆಯ ಗಂಟು,
ಅವಕು ಇವಗು ಏನು ನಂಟು?
ಇವನಾವನೊ ಸದಾ ಬಂದು
ಹೀಗೆ ಅರಚಿ ನಿಲ್ಲುವವನು !
ಯುಗಯುಗವೂ ಬರುವೆನೆಂದು
ಬಾಂಡು ಬರೆದು ಕೊಟ್ಟ ಹಾಗೆ,
ನಮ್ಮ ಹಳೇ ಪೇಪರ್ ಶೀಶೆ
ಗುತ್ತಿಗೆಯನು ಹಿಡಿದ ಹಾಗೆ,
ಇವನಿಗೇಕೊ ಇಂಥ ಕರ್ಮ
ಇವನೊಬ್ಬನು ಕಳ್ಳಕೊರಮ
ಕತ್ತು ಹಿಡಿದು ದಬ್ಬಬೇಕು
ಶಿಲುಬೆಗಿಟ್ಟು ಬಡಿಯಬೇಕು
ಸಿಡಿಗುಂಡಿಗೆ ಒಡ್ಡಬೇಕು
ಇವನ ಒಡಕು ಬಾಯನು.
ನಮ್ಮೊಳಗಿನ ಕಸದ ಚಿಂತೆ
ಇವನಿಗೇಕೊ ಕಾಣೆನು !]

‘ಹಳೇ ಪೇಪರ್ ಖಾಲಿ ಶೀಶೆ’-
ಕೂಗೊ ಮರೀ ಆತನ.
‘ಅವನು ಬರದೆ ಹೋದನಮ್ಮ
ಆಚೆ ಕಡೆಯ ಬೀದಿಗೆ,
‘ಛೆ ಛೆ ಛೆ ಬರಲಿಲ್ಲವೆ
ಕಾಯಬೇಕೆ ಹೀಗೆಯೇ ?’

[ಸದ್ಯ, ತೊಲಗಿಹೋದನಲ್ಲ
ಆಚೆ ಕಡೆಯ ಬೀದಿಗೆ,
ಇವತ್ತಲ್ಲ ನಾಳೆ ದಿನ
ಮತ್ತೆ ಬಂದರೇನು ಗತಿ
ಈಚೆ ಕಡೆಯ ಬೀದಿಗೆ.]