‘ನನ್ನ ತಾಯಿ ತುಂಬಾ ಟ್ರೆಡಿಶನಲ್ ಸರ್, ಪ್ರತಿದಿನ ದೇವಸ್ಥಾನಕ್ಕೆ ಹೋಗಬೇಕು. ಬೆಳಿಗ್ಗೆ ಬಲಮಗ್ಗುಲಿನಲ್ಲೇ ಏಳಬೇಕು. ಸ್ನಾನವಾಗದ ಹೊರತು ನೀರನ್ನೂ ಕುಡಿಯಬಾರದು. ಯಾವುದೇ ಕೆಲಸವನ್ನು ಮಂಗಳವಾರ ಪ್ರಾರಂಭಮಾಡಬಾರದು. ಹಣೆಯಲ್ಲಿ ದೊಡ್ಡ ಕುಂಕುಮದ ಬೊಟ್ಟು, ಉದ್ದನೆಯ ಜಡೆ, ಹೂ ಮುಡಿಯಬೇಕು. ಗಂಡಸರ ಎದುರು ನಿಂತು ಮುಖಕ್ಕೆ ಮುಖ ಕೊಟ್ಟು ಮಾತಾಡಬಾರದು. ಸೋಮವಾರ, ಶುಕ್ರವಾರ ಮನೆಯ ಹೊರಗಡೆಯಿಂದ ಅಥವಾ ಹೋಟೆಲ್, ತಿಂಡಿ ಅಂಗಡಿಯಿಂದ ತಂದ ಆಹಾರ ಪದಾರ್ಥಗಳನ್ನು ತಿನ್ನಬಾರದು. ಋತುಸ್ರಾವದ ಅವಧಿಯಲ್ಲಿ ಕನಿಷ್ಟ ಮೂರು ದಿನಗಳ ಕಾಲ ‘ಹೊರಗೇ ಕೂತಿರಬೇಕು. ಈಗಿನ ಕಾಲದಲ್ಲಿ ಇವನ್ನೆಲ್ಲಾ ಮಾಡಲು ಸಾಧ್ಯವೇ ನೀವೇ ಹೇಳಿ. ನಿತ್ಯ, ನನ್ನೊಂದಿಗೆ, ನನ್ನ ತಂಗಿಯೊಂದಿಗೆ ಜಗಳ ಮಾಡುತ್ತಾರೆ. ಅಮ್ಮನನ್ನು ಏಕೆ ನೋಯಿಸಬೇಕೆಂದು ನಾನು ಎಷ್ಟು ಸಾಧ್ಯವೋ ಅಷ್ಟು ಅವರು ಹೇಳಿದಂತೆ ನಡೆದುಕೊಂಡು ಬಿಡುತ್ತೇನೆ. ಆದರೆ ನನ್ನ ತಂಗಿ, ನನಗಿಂತ ಒಂದೂವರೆ ವರ್ಷ ಚಿಕ್ಕವಳು, ಮಹಾ ಹಠಮಾರಿ ಹಾಗೂ ಆಧುನಿಕ ಬೆಡಗಿ, ಪ್ರತಿದಿನ ನಮ್ಮಮ್ಮನ ಕೈಯಲ್ಲಿ ಬೈಸಿಕೊಳ್ಳುತ್ತಾಳೆ. ನನ್ನನ್ನು ಬೈಯ್ಯುತ್ತಾಳೆ. ಅವಳನ್ನು ನೋಡಿದರೆ ಸ್ವತಂತ್ರವಾಗಿ ಸಂತೋಷವಾಗಿರೋ ಹಾಗೇ ಕಾಣ್ತಾಳೆ. ನಾನೋ ಎಣ್ಣೆಯಲ್ಲಿ ಬಿದ್ದ ನೊಣವಾಗಿದ್ದೇನೆ. ಯಾವುದು ಸರಿ ಸರ್? ಸಂಪ್ರದಾಯಸ್ಥರಾಗಿರುವುದಾ ಅಥವಾ ಮುಕ್ತ ಆಧುನಿಕವಾಗಿರುವುದಾ?- ಸಂಗೀತಾಳ ಪ್ರಶ್ನೆ.

‘ಬೆಳೆದ ಹುಡುಗಿ, ನೋಡೋದಿಕ್ಕೆ ಅಂದವಾಗಿ, ಆಕಷಕವಾಗಿ ಇದ್ದೀಯಾ, ಹದಿನೈದು ವರ್ಷ ಅಂದ್ರೆ ಯಾರೂ ನಂಬೋಲ್ಲ. ೧೮ ಅಥವಾ ೧೯ ವರ್ಷವಾಗಿದೆ ಅಂತಾರೆ. ಕತ್ತಲಾಗೋದರ ಒಳಗೆ ಮನೆಗೆ ಬಂದು ಬಿಡು. ಕಾಲಕೆಟ್ಟು ಹೋಗಿದೆ. ಅನಾಚಾರ, ಅತ್ಯಾಚಾರ ಮಾಡೋದಿಕ್ಕೆ ಜನ ಈಗ ನಾಚಿಕೊಳ್ಳೋಲ್ಲ, ಭಯ ಪಡೋಲ್ಲ ಅಂದ್ರೆ ಕೇಳೋಲ್ಲ. ಎಂಟು ಗಂಟೆ, ಒಂಭತ್ತು ಗಂಟೆಗೆ ಬರ‍್ತಾಳೆ. ನನ್ನನ್ನು ರಕ್ಷಿಸಿಕೊಳ್ಳೋದು ನನಗೆ ಗೊತ್ತು. ಯಾರೋ ಯಾವೋಳ ಮೇಲೆ ಅತ್ಯಾಚಾರ ಮಾಡಿದ ಅಂದ್ರೆ, ಎಲ್ಲರೂ ಭಯದಿಂದ ನಡುಗುತ್ತಾ ಅಡುಗೆ ಮನೆಯಲ್ಲಿ ಅವಿತು ಕುಳಿತುಕೊಳ್ಳಬೇಕಾ ಅಂತ ಹೇಳಿ ನನ್ನ ಬಾಯಿ ಮುಚ್ಚಿಸ್ತಾಳೆ. ನೀವಾದರೂ ಸ್ವಲ್ಪ ಬುದ್ಧಿ ಹೇಳಿ, ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು ಅಲ್ಲವೇ ಎಂದರು ಗಿರಿಜಮ್ಮ.

‘ಹುಡುಗರು ಜುಟ್ಟು ಬಿಡೋದು, ಕಿವಿಗೆ ಓಲೆ ಹಾಕ್ಕೊಳ್ಳೋದು ಈಗ ಫ್ಯಾಶನ್ ಸಾರ್, ನಮ್ಮಪ್ಪನಿಗೆ ಇದರ ಅರಿವೇ ಇಲ್ಲ. ಎಲ್ಲರ ಮುಂದೆ ನನ್ನ ಜುಟ್ಟು, ನನ್ನ ಓಲೆ, ನನ್ನ ಡ್ರೆಸ್ ಬಗ್ಗೆ ಟೀಕೆ ಮಾಡ್ತಿರ‍್ತಾರೆ. ಬಹಳ ಬೇಸರ ಆಗುತ್ತೆ. ನಮ್ಮ ತಾತನ ಕಾಲದಲ್ಲಿ ಗಂಡಸರೂ ಉದ್ದನೆಯ ಕೂದಲು ಬಿಟ್ಟು, ಜಡೆ ಹಾಕ್ಕೊಂಡು, ಹೂವು ಮುಡಿದುಕೊಳ್ಳುತ್ತಿದ್ದರಂತೆ. ಕಿವಿಗೆ ಬಂಗಾರದ ಕಡಕು ಹಾಕಿರುತ್ತಿದ್ದರಂತೆ. ನಮ್ಮಪ್ಪ ಕ್ರಾಪ್‌ಕಟ್ ಮಾಡಿಸಿ, ಅವರಪ್ಪನಿಂದ ಬೈಸಿಕೊಂಡಿದ್ದರು. ಈಗ ನಾನು ಉದ್ದನೆಯ ಕೂದಲು ಬಿಟ್ಟು ಬೈಸಿಕೊಳ್ತಾ ಇದ್ದೀನಿ ಎಂದು ನಕ್ಕ ಪುನೀತ್.

‘ನಮ್ಮನೇಲಿ ಇರೋದು ಒಂದು ಟೀವಿ, ನನ್ನಮ್ಮನಿಗೆ ಕನ್ನಡ ಸೀರಿಯಲ್‌ಗಳು ಬೇಕು. ನನಗೆ ಶಾಸ್ತ್ರೀಯ ಸಂಗೀತ, ನೃತ್ಯ ಬೇಕು. ನನ್ನ ಹೆಂಡತಿಗೆ ಸಿನೇಮಾ ಬೇಕು. ನನ್ನ ಮಕ್ಕಳಿಗೆ ಹಿಂದಿ ಹಾಡುಗಳು, ಪಾಶ್ಚಿಮಾತ್ಯ ಸಂಗೀತ, ದೆವ್ವ ಬಂದೋರ ಹಾಗೆ ಕುಣಿಯುವ ಡ್ಯಾನ್ಸ್ ಬೇಕು. ನಮಗೆ ಅವರ ಅಭಿರುಚಿ ವಿಚಿತ್ರ ಅನ್ನಿಸತ್ತೆ. ಅವರಿಗೆ ನಮ್ಮ ಅಭಿರುಚಿ ವಿಚಿತ್ರ ಅನ್ನಿಸತ್ತೆ. ಏನು ಮಾಡೋದೋ ಗೊತ್ತಾಗ್ತಿಲ್ಲ ಎಂದರು ರಾಮಾನುಜಂ.

‘ಯಾಕ್ರೀ, ನಿಮ್ಮ ಮಗಳು ಅಳ್ತಾ ಇದ್ದಾಳೆ?

‘ನೀವೇ ಅವಳನ್ನು ಕೇಳಿ ವಸಂತಮ್ಮ. ಕೊನೆಯ ಮನೆ ವಸುಂಧರಾಬಾಯಿ ಅಷ್ಟಲಕ್ಷ್ಮೀ ವ್ರತದ ಕೊನೆಯ ಪೂಜೆಗೆ ನಮ್ಮನ್ನೆಲ್ಲ ಕರೆದಿದ್ದಾರೆ. ಶ್ರೀಮಂತರು, ಸಂಪ್ರದಾಯಸ್ಥರು, ಹೋಗಿಬರೋಣ ನಡಿಯೇ ಅಂದ್ರೆ ಮೊದಲು ಬರೋಲ್ಲ ನೀನೇ ಹೋಗು ಎಂದಳು. ನನಗೆ ಸಿಟ್ಟು ಬಂತು. ಹೊರಡ್ತೀಯೋ, ಇಲ್ಲವೋ ಎಂದು ಗದರಿದೆ., ಲಕ್ಷಣವಾಗಿ ರೇಷ್ಮೆ ಲಂಗ, ಜಾಕೀಟು ಹಾಕಿಕೊಂಡು, ಜಡೆ ಹೆಣೆದು ಹೂವು ಮುಡಿದುಕೋ ಎಂದು ಹೆಳಿ ನಾನು ರೆಡಿಯಾಗಲು ರೂಮಿಗೆ ಹೋದೆ. ರೆಡಿಯಾಗಿ ಹೊರಗಡೆ ಬಂದು ನೋಡ್ತೀನಿ. ಟೀ ಶರ್ಟ್, ಪ್ಯಾಂಟ್ ಹಾಕಿಕೊಂಡು, ಕೂದಲನ್ನು ಪೋನಿಟೈಲ್ ಮಾಡಿ, ರಿಂಗ್ ಹಾಕಿಕೊಂಡು ನಿಂತಿದ್ದಾಳೆ. ಹಣೆ ಬರಿದು, ಕೈಗಳೂ ಬರಿದು. ಅವಳಿಗಾಗಿ ಇಟ್ಟಿದ್ದ ಮಲ್ಲಿಗೆ ಹೂ ಟೇಬಲ್ ಮೇಲೇ ಕೂತಿದೆ. ಏಕೋ ಬಹಳ ಸಿಟ್ಟು ಬಂತು. ನಾಲ್ಕು ಬಾರಿಸಿದೆ ನೋಡಿ, ಅಳ್ತಾ ಕೂತಿದ್ದಾಳೆ. ಹದಿನಾರು ವರ್ಷವಾಯ್ತು. ಸ್ವಲ್ಪವಾದರೂ ಸಂಪ್ರದಾಯ, ಸಂಸ್ಕಾರದ ಬಗ್ಗೆ ಕಾಳಜಿ ಬೇಡವೇನ್ರೀ ಎಂದಾಗ, ಲಕ್ಷ್ಮಮ್ಮನವರ ಕಂಠ ಗದ್ಗದಿತವಾಗಿತ್ತು. ಪ್ಯಾಂಟ್, ಶರ್ಟ್ ಹಾಕಿಕೊಂಡು ಪೂಜೆಗೆ ಹೋಗಬಾರದು ಅಂತ ಎಲ್ಲಿ ಬರೆದಿದೆಯೋ ಎಂದು ಕನಕ ಗೊಣಗಿದ್ದು, ಇಬ್ಬರು ಹಿರಿಯ ಮುತ್ತೈದೆಯರಿಗೂ ಕೇಳಿಸಿತು.

‘ನಾಲ್ಕು ದಿನಗಳಿಂದ, ಮನೆಯಲ್ಲಿ ಯಾರೊಂದಿಗೂ ಮಾತಾಡ್ತಿಲ್ಲ. ಮುಖವನ್ನು ಗಡಿಗೆ ಮಾಡಿಕೊಂಡು ಓಡಾಡುತ್ತಿದ್ದಾನೆ. ಬ್ರಹ್ಮೋಪದೇಶ-ಮುಂಜಿಮಾಡಬೇಕು ಎಂದು ಅವನ ಅಜ್ಜಿ, ಅಜ್ಜ ಇಷ್ಟಪಟ್ಟಿದ್ದಾರೆ. ಆದರೆ ಇವನಿಗೆ ಸ್ವಲ್ಪವೂ ಇಷ್ಟವಿಲ್ಲ. ಜನಿವಾರ ಹಾಕಿಕೊಂಡು ಓಡಾಡಲಾರೆ. ದಿನಾ ಸಂಧ್ಯಾವಂದನೆ ಮಾಡಲಾರೆ, ಅದಕ್ಕೆಲ್ಲಾ ಟೈಮೂ ಇಲ್ಲ, ಜೊತೆಗೆ ಅದನ್ನು ಕಂಡರೆ ನನ್ನ ಸ್ನೇಹಿತರೆಲ್ಲ ನನ್ನನ್ನು ರೇಗಿಸದೇ ಬಿಡುವುದಿಲ್ಲ. ಇದೆಲ್ಲ ಏಕಮ್ಮಾ? ಇದಕ್ಕೆ ಯಾವ ಅರ್ಥವೂ ಇಲ್ಲ. ನಾನೀ ಹಳೇ ಸಂಪ್ರದಾಯಗಳನ್ನು ಅನುಸರಿಸೋದಿಕ್ಕೆ ಇಷ್ಟಪಡೋಲ್ಲ ಎಂದು ಕಡ್ಡಿ ಮುರಿದ ಹಾಗೆ ಹೇಳಿದ್ದಾನೆ. ಪಾಪ ಅಜ್ಜ, ಅಜ್ಜಿಯರಿಗೆ ವಯಸ್ಸಾಯಿತು. ಅವರ ಕಾಲದ ನಂಬಿಕೆ ಅವರದು. ನಿನಗೆ ಮುಂಜಿ ಮಾಡಬೇಕು. ಅದನ್ನು ನೋಡಿ ಸಂತೋಡಪಡಬೇಕು. ನೀನು ದೊಡ್ಡವನಾಗಿ, ಮದುವೆಯಾಗುವ ಹೊತ್ತಿಗೆ ಅವರು ಇಲ್ಲದಿರಬಹುದು. ಅವರ ಮನಸ್ಸನ್ನು ಯಾಕೋ ನೋಯಿಸ್ತೀಯಾ, ಸುಮ್ಮನೆ ಹೂಂ ಅನ್ನು, ಆಮೇಲೆ ನಿತ್ಯ ಸಂಧ್ಯಾವಂದನೆ ಮಾಡು ಅಂತ ನಾವಾರೂ ಒತ್ತಾಯ ಹಾಕೋಲ್ಲ ಎಂದೆ. ಎಲ್ಲ ನಿಮ್ಮಿಷ್ಟದ ಹಾಗೆ ಆಗಬೇಕು. ನನ್ನ ಇಷ್ಟಾನಿಷ್ಟಗಳನ್ನು ಯಾರೂ ಗಮನಿಸೋಲ್ಲ ಎಂದು ಅವನು ಕೋಪ ಮಾಡಿಕೊಂಡಿದ್ದಾನೆ ಏನು ಮಾಡಬೇಕು ಅಂತ ತೋಚುತ್ತಿಲ್ಲ ಎಂದಳು ನಾಗೇಶನ ತಾಯಿ ಅಂಬುಜಮ್ಮ.

ಹೀಗೆ ಸಾಕಷ್ಟು ಹರೆಯದವರು ತಾವೂ ತೊಂದರೆ-ಗೊಂದಲವನ್ನು ಅನುಭವಿಸಿ ಮನೆಯವರಿಗೂ ಆತಂಕ ಮುಜುಗರವನ್ನು ಅನುಭವಿಸುವಂತೆ ಮಾಡುತ್ತಾರೆ. ಹಿರಿಯರು ಸಹನೆ ಕಳೆದುಕೊಳ್ಳದೇ ಹಳೆಯದೆಲ್ಲ ತ್ಯಾಜ್ಯವಲ್ಲ. ಹೊಸತೆಲ್ಲ ಸ್ವಾಗತಾರ್ಹವಲ್ಲ. ಹಾಗೇ ಹಳೆಯದೆಲ್ಲ ಹೊನ್ನಲ್ಲ, ಹೊಸತೆಲ್ಲ ಹೊಲಸಲ್ಲ ಎಂದು ತಿಳಿಯಹೇಳಬೇಕು. ಈ ಕುರಿತು, ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಬೇಕು. ಹಳೆಯದು-ಹೊಸದರ ಬಗ್ಗೆ, ಸಂಪ್ರದಾಯ-ಆಧುನಿಕತೆಯ ಬಗ್ಗೆ ಪೂರ್ವಾಗ್ರಹ ಪೀಡಿತರಾಗದೇ ಮಾತಾಡಬೇಕು. ಎರಡರಲ್ಲೂ ಇರುವ ಒಳಿತನ್ನು, ಅನುಕೂಲತೆಯನ್ನು ಗುರುತಿಸಿ, ಒಪ್ಪಿಕೊಳ್ಳಬೇಕು. ಯಾವುದು ನಮಗೆ ಸರಿಹೊಂದುವುದಿಲ್ಲವೋ ಅದನ್ನು ಸ್ವೀಕರಿಸಬಾರದು ಎಂದು ಮನ ಒಲಿಸಬೇಕು.