ಹಳ್ಳಿಯದು ಮಣ್ಣಿನ ಒಡನಾಟದಲ್ಲಿ ಬದುಕು ನೇಯ್ದ ನೆಲ. ಇಲ್ಲಿನ ಹಸಿರು ಬದುಕು ಅನ್ನದ ಅರಿವು ಬಿತ್ತುವ ಪಾಠ ಶಾಲೆ. ಕಲ್ಲು, ಹುತ್ತು, ನೀರು, ಮರ, ಕೃಷಿ ಫಲಗಳೆಂದರೆ ಕೇವಲ ವಸ್ತು,ಉತ್ಪಾದನೆ, ಉತ್ಪನ್ನ, ಲಾಭ  ಎಂದಷ್ಟೇ ಗಮನಿಸದೇ  ಭಾವನಾತ್ಮಕವಾಗಿ ಬೆಸೆದ ಪೂಜ್ಯ ಸಂಸ್ಕೃತಿ. ಮನೆ ಎಂದರೆ ಚದರ ಅಡಿಯ ವಿಸ್ತೀರ್ಣವಲ್ಲ, ಹೊಲವೆಂದರೆ ಬೆಳೆ ತೆಗೆಯುವ ಕಾರ್ಖಾನೆಯಲ್ಲ, ಬೆಳೆ ರಕ್ಷಣೆಯೆಂದರೆ ಸೆಕ್ಯರಿಟಿ ಗಾರ್ಡ್‌ನ ಪ್ರಮೇಯವಲ್ಲ! ಲಾಗಾಯ್ತಿನಿಂದ ಊರಲ್ಲಿ  ಬೇರು ಬಿಟ್ಟ ಹಿರಿಯರು ಹಳ್ಳಿ ಕಟ್ಟುವ ಮನಸ್ಸು ಜೋಡಿಸಿದ ಜಾಣರು.  ಉತ್ಸವ,ಜಾನಪದ ಚಟುವಟಿಕೆಗಳ ಮುಖೇನ ಪರಸ್ಪರ ಹೃದಯ ಹೃದಯ ಜೋಡಿಸುವ ಕೆಲಸ ನಡೆಸಿದವರು. ಕೃಷಿ, ನಿಸರ್ಗ ಜ್ಞಾನಗಳನ್ನು  ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸುತ್ತ  ಸಲಹಿದ ರೀತಿಯಲ್ಲಿ  ನಮ್ಮ ಅನನ್ಯತೆ.‘ಇಂಗ್ಲೀಷ್ ಎಂದರೆ ಮೋಸವೆಂದವರು, ಪ್ಯಾಂಟು ಹಾಕಿದವರನ್ನು ನಂಬಬೇಡಿ’  ಎಂದು  ಸ್ವಾತಂತ್ರ್ಯ ಹೋರಾಟದ ಹೊತ್ತಿಗೆ ಪರಕೀಯತೆಯ ಬಗೆಗೆ ಎಚ್ಚರಿಸಿ ನಿಂತವರು ಇಲ್ಲಿ ಸಿಗಬಹುದು. ಹೊಸ ಸಂಗತಿಗಳ ಆಗಮನಕ್ಕೆ ಇಲ್ಲಿ ಸದಾ ಅನುಮಾನಗಳನ್ನು ಎತ್ತುತ್ತ ದೇಸೀ ಉಸಿರನ್ನು ಜೀವಂತವಾಗಿರಿಸಿದ ಜೀವಗಳಿವೆ. ತತ್‌ಕಾಲದ ಅರಿವಿನ ನೆಲೆಯಲ್ಲಿ  ವಿಮರ್ಶಿಸುವ ‘ಹಳ್ಳಿ’ ಪ್ರಜ್ಞೆಗೆ ಪರಂಪರೆಯ  ಅಪ್ಪಟ ಪ್ರೀತಿ.  ಭೂಮಿ ಉಳುಮೆ, ಬೀಜ ಬಿತ್ತನೆ, ಕಳೆ ನಿಯಂತ್ರಣ, ನೀರಾವರಿ, ರಕ್ಷಣೆ, ಕೊಯ್ಲು, ಸಂಸ್ಕರಣೆ, ಸುಗ್ಗಿ ಕೇವಲ ಕೆಲಸವಲ್ಲ, ಹಳ್ಳಿ ಮಕ್ಕಳು ಜತೆ ಸೇರಿ ನಿರ್ವಹಿಸುವ ಇಲ್ಲಿನ ಪ್ರತಿ ಹಂತವೂ  ಕೆಲಸದ ಶ್ರಮಮರೆಸಿ ಮನಸ್ಸು  ಬೆಳಗುವ ಚೇತನ.

‘ನಮ್ಮೂರಿಗೊಂದು ರಸ್ತೆ ಬೇಕು, ಸೇತುವೆ ಸರಿಯಾಗಬೇಕು’ ಸಂಪರ್ಕಕ್ಕೆ ಸಣ್ಣ ಬೇಡಿಕೆ ಇಡುವಾಗ  ಹೊಸ ಪ್ರಪಂಚ ಪ್ರಜ್ಞೆಯಿಲ್ಲ, ಆಚೆ ಸರಾಗ ಹೋಗಿ ಮರಳಿ ಬರಬೇಕೆಂಬ ಚಿಕ್ಕ ಕನಸು ! ಒಂದು ರಸ್ತೆ, ಸೇತುವೆ ಹೊಸ ಹೊಸ ಸಂಗತಿಗಳನ್ನು ತೋರಿಸಿತು. ಊರ ಜನಗಳು ಸೇರಿ  ರಿಪೇರಿ ಮಾಡುತ್ತಿದ್ದ ಮಾರ್ಗ ಸರಕಾರಿ  ರಸ್ತೆಯಾಯ್ತು. ಊರಿಗೆ ಹೊಸ ಬೆಳಕು ಬಂದ ಪ್ರಾಯದಲ್ಲಿ ಹಳ್ಳಿ-ನಗರಗಳನ್ನು  ಪ್ರತ್ಯೇಕವಾಗಿ ನೋಡಬೇಕಾದ ಕಲ್ಪನೆ ಕಳೆದು ಅಲ್ಲಿಯಂತೆ ಇಲ್ಲೂ ಬೆಳೆಯುವ ಕನಸು. ತಿರುಗುವ ಚಕ್ರ ವೇಗ ಪಡೆದು ದಾಸ್ಯ ಬೆಳೆಯಿ.  ಶಿಕ್ಷಣ, ಆರೋಗ್ಯ, ಉದ್ಯೋಗ ಕ್ಷೇತ್ರಗಳೂ  ಹಳ್ಳಿ ಮಾದರಿ ಹುಡುಕದೇ ಸಾರಸಗಟಾಗಿ  ಸಿದ್ಧಮಾದರಿಗಳನ್ನು ಖರೀದಿಸಿತು. ಟೈ ಕಟ್ಟಿಕೊಂಡು, ಶೂ ಧರಿಸಿಕೊಂಡು ಕಾಡು ಮೂಲೆಯ ಮಕ್ಕಳು ಕಾಲು ದಾರಿಯಲ್ಲಿ ನಡೆದು ಹೆದ್ದಾರಿಗೆ ಬಂದರು.  ರಸ್ತೆ ಸೇತುವೆಗೆ ಟೆಂಡರ್ ಕರೆದು ಕಾಮಗಾರಿ ನಡೆದದ್ದು ಸರಾಗ,  ಮೇಷ್ಟ್ರ ಪಾಠಕ್ಕೂ,  ಹೆತ್ತವರ ಬದುಕಿಗೂ ಸೇತುವೆ ಕಟ್ಟುವ  ಶಾಲೆಯ ಕೆಲಸ  ಯಾರೂ ಗಮನಿಸಲಿಲ್ಲ ಪ್ರತಿ ತರಗತಿಯೂ ಹಳ್ಳಿ, ಕೃಷಿ ವಿಶ್ವಾಸ ಭಂಗದ  ರಂಗಸ್ಥಳವಾಯಿತು. ರಾಜಕೀಯ ನೇತಾರರ ಜೀವನ ಓದಿ ಉತ್ತರಿಸುವದು ಕೃಷಿ ನಂಬಿದ ನೆಲದ ಮಕ್ಕಳ ಪರೀಕ್ಷೆಯಾಯಿತು! ಇಲ್ಲಿ ಶಿಕ್ಷಣ ಪ್ರತಿ ಹಂತದಲ್ಲೂ ಪ್ಯಾಂಟು ಹಾಕಲು, ಊರು ಬಿಡಲು ಕಲಿಸುವ ಪ್ರಹಸನವಾಯಿತು! ನಗರದ ಕಚೇರಿ ಕೆಲಸಕ್ಕೆ ಮಗನನ್ನು  ಓಡಿಸುವ ಆಯ್ಕೆಯಲ್ಲಿ  ಅರಿಯದ ಪ್ರಪಂಚದ ಬಗೆಗೆ ಅಗಾಧ ವಿಶ್ವಾಸ, ಕನಸುಗಳು ಬೆಳೆದವು. ಪೋಷಕರು  ಇನ್ನಷ್ಟು ಹೈಟೆಕ್ ಆಗುತ್ತ  ಎಳೆ ಮಕ್ಕಳ ಬೇರು ಕಿತ್ತು ಹಾಸ್ಟೆಲ್‌ಗಳಲ್ಲಿ ಮರುನಾಟಿ ಮಾಡಿದರು.

ಊರ ಮಂದಿ ಸೇರಿ ಕೂಡಿ ಮಾಡುವ ಕೆಲಸಗಳನ್ನು ಯಂತ್ರಗಳು ನುಂಗಿದವು. ಮನೆ ಮನೆಗಳ ನಡುವೆ ಗೋಡೆಗಳು ಹುಟ್ಟಿದವು. ಸದಾ ಬೇಕು ಬೇಕೆಂಬ ಕೊಳ್ಳುಬಾಕನ  ನೆರಳು ಹೊಲ, ಅಡುಗೆ, ಜಗುಲಿಗೆಲ್ಲ  ಬಂದು ಹಿತ್ತಲಿನ ಮಣ್ಣ ಬದುಕು ಕಲಿಸಿದ ವಿಶ್ವಾಸಗಳೆಲ್ಲ  ಕ್ಷೀಣಿಸಿದವು. ವರ್ಷದ ಪರಿಶ್ರಮದಲ್ಲಿ ಎಕರೆ ಹೊಲದಲ್ಲಿ  ೨೦ ಚೀಲ ಭತ್ತ, ಎರಡು ಎಕರೆ ತೋಟದಲ್ಲಿ ೨೫ ಕ್ವಿಂಟಾಲ್ ಅಡಿಕೆ ಉತ್ಪಾದನೆಯಾಗಬಹುದು. ಐ.ಟಿ ಕೆಲಸಕ್ಕೆ ಸೇರಿದ ಮಗ  ಇದು ತನ್ನ ತಿಂಗಳ ಸಂಬಳದ ಉತ್ಪಾದನೆಯೆಂದಾಗ ಬೆವರಿಳಿಸಿದ ಅಪ್ಪನಿಗೆ ಭೂಮಿಯ  ಬದುಕು  ಅಣಕಿಸಿತು. ಮೀನು ಬುಟ್ಟಿಯ ಹಾಗೇ ಭೂಮಿ ಮಾರುವ, ಊರು  ಹರಾಜು ಹಾಕುವ ಘಟನೆಗಳು ಹೆಚ್ಚಿದವು.

ವಿದ್ಯೆ ಗೆದ್ದು, ಹಣ ಗೆದ್ದು  ‘ಮಣ್ಣು ಮಾರಿ’ಗಳೆಲ್ಲ  ಈಗಲೂ ಉಣ್ಣುವದು ಅನ್ನವನ್ನು ! ಹಣ ಖರೀದಿ ತಾಕತ್ತು ನೀಡಿದ ಮಾತ್ರಕ್ಕೆ  ಆಹಾರ, ಆರೋಗ್ಯಗಳು ಊಟದ ತಟ್ಟೆಗೆ ಬರಲಿಲ್ಲ!  ಟ್ರಾಫಿಕ್ ಗದ್ದಲ, ನಂಜಾದ ನೀರು, ನಕ್ಷತ್ರಗಳಿಲ್ಲದ ನಗರಗಳಲ್ಲಿ  ಅಕ್ಕರೆಯ ಅಪ್ಪ, ಅಮ್ಮನೂ ಇಲ್ಲ! ಊರು ನುಂಗಿ, ನೀರು ನುಂಗಿ ನಗರ ಬೆಳೆಸುವ ನಾವು ಇಂದಿಗೂ ಅನ್ನ ಕೊಡುವ ಹಳ್ಳಿ ನೋಡುತ್ತಿಲ್ಲ ಏಕೆ? ಬಳಸುವ ಕಾರು, ಕನ್ನಡಕ, ಪೆನ್ನು, ಕೆಮರಾಕ್ಕೆಲ್ಲ ಚೆಂದದ ಕಂಪನಿಗಳಿವೆ, ಬ್ರ್ಯಾಂಡ್‌ಗಳಿವೆ!  ಮಣ್ಣಿನ ಮನಸ್ಸು ಅರಿತು ಕೃಷಿ ಹಸಿರು ಬರೆದವರ  ಕಾಯಕಕ್ಕೆ ಬೆಲೆ ಏಲ್ಲಿದೆ? ನಮ್ಮ ಊಟದ ತಾಟಿನಲ್ಲಿ ಪ್ರಶ್ನೆಗಳಿವೆ.

ಹೆದ್ದಾರಿಯ ಹೈಬ್ರಿಡ್ ಕಂಪನಿಗಳಿಂದ ತುಸು ಒಳಕ್ಕೆ ಬರಬೇಕು. ಮೂಡೆಯಲ್ಲಿ ಬೀಜ ಬಚ್ಚಿಟ್ಟುಕೊಂಡು, ಹಿತ್ತಲಲ್ಲಿ ಆರೋಗ್ಯದ ತರತರಹದ ತರಕಾರಿಯ ಆರೋಗ್ಯದ ಮಾತ್ರೆ ಉಳಿಸಿಕೊಂಡು, ನೀರು-ನೆಲ ಉಳಿಸಿದ ಸಾವಯವ ಮನಸ್ಸುಗಳು  ಸದ್ದಿಲ್ಲದೇ ಹಳ್ಳಿಗೊಂದು ಹೊಸ ದಾರಿ ತೋರಿಸುತ್ತಿವೆ.  ಒತ್ತಡಗಳಲ್ಲಿ ಮಣ್ಣು ಮರೆತವರಿಗೆ ಬದುಕುವ ಪಾಠ ಹೇಳುತ್ತಿವೆ. ಹಳ್ಳಿ ಹರಾಜು ಕಟ್ಟೆ ಕಲ್ಲು ಕಿತ್ತೆಸೆದು ಮತ್ತೆ ಉಳುಮೆಯ ಉತ್ಸಾಹ. ಈಗ ರೈತ ಬದುಕಿನ ಮಧ್ಯೆ, ಹದ ಮಣ್ಣಲ್ಲಿ ಬೀಜ ಬಿತ್ತಿ ಕಾಳು ಮಾರುವ ಗಮಾರನಲ್ಲ, ಊರಿನ ಫಲಕ್ಕೆ ಮೌಲ್ಯವರ್ಧನೆ ತೋರಿಸಿ ಮಾರುಕಟ್ಟೆ ಅರಿತು ಜಗದ ಜತೆ ಜಿದ್ದಿಗೆ ನಿಂತವನು. ನಗರದ ಒತ್ತಡದ ಈಚೆಗೆ ಬಂದ ಇನ್ನಷ್ಟು ಜನ ಮಣ್ಣ ಬದುಕಿನ ತರಗತಿ ಸೇರಿ ಆತ್ಮವಿಶ್ವಾಸದ ಹೊಸ ಬೆಳಕು ಅರಸುವವರು.