ಹಳ್ಳಿ ಉಳಿಸೋಣ, ಕೃಷಿ ಬೆಳೆಸೋಣ ಎಂಬ ಘೋಷಣೆಯಲ್ಲಿ ಫೆಬ್ರುವರಿ ೧೩, ೧೪ರಂದು ಕತಗಾಲ್ ಅಕ್ಷರ ಕಲಾ ಯುವಕ ಸಂಘದ ಆಶ್ರಯದಲ್ಲಿ ನಡೆದ ಕುಮಟಾ ತಾಲೂಕಾ ಕೃಷಿ ಮೇಳ-೨೦೧೦ರ ಘೋಷಣೆಗಳು

  • ಕೃಷಿ ರಂಗಕ್ಕೆ  ತರಕಾರಿ, ಭತ್ತ, ತೆಂಗು ತಳಿ ವೈವಿಧ್ಯಗಳನ್ನು ನೀಡಿದ ಕುಮಟಾ ನೆಲದ ವಿಶೇಷಗಳು ಯಾವತ್ತೂ ನಶಿಸದಂತೆ ಸಂರಕ್ಷಿಸುವದು  ಇಲ್ಲಿನ ಕೃಷಿ ಬಂಧುಗಳ ಆದ್ಯ ಕರ್ತವ್ಯ. ಈ ದಿಸೆಯಲ್ಲಿ ಪ್ರದೇಶದ ಜನಮನದಲ್ಲಿ ಕೃಷಿ ಪರಂಪರೆಯ ಪ್ರೀತಿ ಮೂಡಿಸುವ ಜಾಗೃತಿ ಪ್ರಯತ್ನಗಳನ್ನು  ರೈತ ಕೇಂದ್ರೀಕೃಷಿತವಾಗಿ ನಾವು ಮುಂದುವರಿಸಬೇಕು.
  • ಆಹಾರ ಧಾನ್ಯಗಳ ಅತ್ಯಂತ ಪುರಾತನ ನೆಲವೆಂದು ಗುರುತಿಸಲ್ಪಡುವ ಗಜನಿ ಭೂಮಿ ಕರಾವಳಿ ವಿಶೇಷವಾಗಿದೆ. ಲಾಗಾಯ್ತಿನಿಂದ ಮೀನು-ಅನ್ನವನ್ನು ನೀಡುವ ಈ ನೆಲದ ಬೇಸಾಯ ಪದ್ದತಿ ಇಂದು ತೀವ್ರ ನಿರ್ಲಕ್ಷ್ಯದಲ್ಲಿದೆ. ಕ್ರಿ. ಶ. ೧೯೭೦ರ ದಶಕದಲ್ಲಿ ಆರಂಭಿಸಿದ್ದ ಉಪ್ಪು ನೀರು ತಡೆ ರಚನೆಗಳು ಇಂದು ಶಿಥಿಲವಾಗಿವೆ. ಗಜನಿಯಲ್ಲಿ ಮಣ್ಣು, ಕಲ್ಲಿನ ತಡೆ ಗೋಡೆಗಳನ್ನು ನಿಮಿಸಿ ಅಲ್ಲಿ ಕೃಷಿ ಅಭಿವೃದ್ಧಿ ಸಾಧ್ಯತೆ ಬಗೆಗೆ ಕ್ರಿ.ಶ. ೧೯೮೫ರಲ್ಲಿ ಸಿಪಿಸಿಆರ್‌ಐನ ವಿಜ್ಞಾನಿ ಡಾ. ಎ. ಕೆ. ಸದಾನಂದರ ವರದಿಯ ಆಧಾರದಲ್ಲಿ ಬಡವರ ಈ ಕೃಷಿ ಭೂಮಿ ಸಂರಕ್ಷಣೆಗೆ ಸರಕಾರ ವಿಶೇಷ ಯೋಜನೆ ರೂಪಿಸಬೇಕು. ಉಪ್ಪಿನೀರಿನಲ್ಲಿ ಬೆಳೆಯಬಹುದಾದ ಕಗ್ಗ ಭತ್ತ ಸಂರಕ್ಷಣೆಗೆ ಪ್ರತ್ಯೇಕ ಯೋಜನೆ ಅನುಷ್ಠಾನಗೊಳ್ಳಬೇಕು.
  • ಅತ್ಯಂತ ಚಿಕ್ಕ ಭೂಮಿಯಲ್ಲಿ  ಅಡಿಕೆ, ತೆಂಗು, ವೀಳ್ಯದೆಲೆ, ಬೇರುಹಲಸು, ಅರಿಶಿನ, ಜಾಯಿಕಾಯಿ, ನುಗ್ಗೆ, ಲಿಂಬು, ಅಮಟೆ, ಬಿಂಬಳೆ, ಕರಮಾದಲ ಮುಂತಾದ ಬೆಳೆಗಳನ್ನು ಬೆಳೆಯುವ ಮುಖೇನ ಆದಾಯ, ಆರೋಗ್ಯ ಸುಸ್ಥಿರತೆಯ ಅನನ್ಯತೆ ತೋರಿದ ಕೃಷಿ ವಿಧಾನ ಇಲ್ಲಿನದು. ಇಲ್ಲಿನ ಮಹಿಳೆಯರಲ್ಲಿ ಮಹತ್ವದ ದೇಸೀ ಅಡುಗೆ ಜ್ಞಾನವಿದೆ, ಕೃಷಿ ಕುಟುಂಬ ನಿರ್ವಹಣೆಯಲ್ಲೂ ವಿಶೇಷ ಮಾದರಿಯಿದೆ. ಇಂತಹ ಸ್ವಾವಲಂಬಿ ಕೃಷಿ ವಿಧಾನಗಳನ್ನು  ರಾಜ್ಯದ ಜನ ಈ ಮಣ್ಣಿನಲ್ಲಿ ಕುತೂಹಲದಿಂದ ನೋಡುತ್ತಿದ್ದಾರೆ. ಇದನ್ನು ಮುನ್ನೆಡೆಸಿಕೊಂಡು ಹೋಗಲು ಹೊಸ ತಲೆಮಾರಿಗೆ ಅಗತ್ಯ ತಿಳುವಳಿಕೆ ನೀಡಬೇಕುಕೃಷಿ ಕಾಳಜಿ ಮೂಡಿಸುವ ಯತ್ನಗಳು ನಿರಂತರವಾಗಿ ನಡೆಸಬೇಕು.
  • ತರಕಾರಿ ಬೆಳೆಗೆ ಗೋಕರ್ಣ ಸೇರಿದಂತೆ ಇಲ್ಲಿನ ಪ್ರದೇಶಗಳು ಹೆಸರಾಗಿವೆ. ರುಚಿ ಮಾತ್ರದಿಂದ ಮಾರುಕಟ್ಟೆ ಗೆಲ್ಲುವ ತಾಕತ್ತು ಇಲ್ಲಿನ ಉತ್ಪನ್ನಗಳಿಗೆ ಇವೆ. ಇದು ಬಡ ಕುಟುಂಬಗಳ ಜೀವನ ಆಧಾರವಾಗಿದೆ. ತರಕಾರಿ ಉತ್ಪಾದನೆಗೆ ಸರಕಾರ ಈ ಪ್ರದೇಶಗಳಲ್ಲಿ ವಿಶೇಷ ಯೋಜನೆ ರೂಪಿಸಬೇಕು.
  • ಕರಾವಳಿಯ ಈ ಪ್ರದೇಶದ ಕೃಷಿಗೂ ಅರಣ್ಯಕ್ಕೂ ಅನ್ಯೋನ್ಯ ಸಂಬಂಧವಿದೆ. ಇಂದು ಇಲ್ಲಿನ ಕಾಡಿನಲ್ಲಿ ಸಸ್ಯ ವೈವಿಧ್ಯ ಕ್ಷೀಣಿಸಿದೆ. ಪ್ರತಿ ಹಳ್ಳಿಗರು ಸ್ವತಃ ಜಾಗೃತರಾಗಿ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಸಸ್ಯ ವೈವಿಧ್ಯ ರಕ್ಷಣೆಗೆ ಮುಂದಾಗಬೇಕು.
  • ಮೀನುಗಾರಿಕೆ ಹತ್ತು ಹಲವು ಸಮಸ್ಯೆ ಎದುರಿಸುತ್ತಿದೆ. ಕೃಷಿ ಭೂಮಿಗಳಲ್ಲಿ ವರ್ಷದ ಹಲವು ತಿಂಗಳು ನೀರು ನಿಂತಿರುತ್ತದೆ. ಇಲ್ಲಿ ಮಿನುಗಾರಿಕೆ ಕೃಷಿಯಲ್ಲಿ ಲಾಭದಾಯಕವಾಗಿಸಲು ಯೋಜನೆ ರೂಪಿಸಬೇಕು.