ಹೊಗೆ ರಹಿತ ಗ್ರಾಮಗಳಿಗೆ ಈಗ  ನಮ್ಮ  ಆದ್ಯತೆ. ಇದು ಆರೋಗ್ಯ , ಗ್ರಾಮೀಣ ಅಭಿವೃದ್ಧಿಯ ಸಂಕೇತ.  ಈಗೀಗ  ಸ್ನಾನದ ಮನೆಗೂ ಸೋಲಾರ್ ಶಕ್ತಿ ಬಳಕೆಗೆ ಬಂದರಂತೂ ಹೊಗೆಯಲ್ಲಿ ಕಣ್ಣೀರು ಸುರಿಸಿದ್ದೆಲ್ಲ ಬರೇ ನೆನಪು.  ಒಳಮನೆಯ ಅಡುಗೆ ಒಲೆಯಲ್ಲಿ ಅನ್ನ  ಬೇಯುತ್ತಿದ್ದರೆ ಜಗುಲಿಯಲ್ಲಿ ಕೂತು ತಾಂಬೂಲ ಜಗಿಯುತ್ತಿದ್ದ  ಯಜಮಾನರ ಕಣ್ಣಲ್ಲೂ ನೀರು ಬರಿಸುವಷ್ಟೂ  ಹೊಗೆಯ ತಾಕತ್ತು. ಬೆಂಕಿ ಇದ್ದಲ್ಲಿ ಹೊಗೆ ಎನ್ನುವಂತೆ ಬೇಯಿಸಿ ತಿನ್ನುವ ಬದುಕಿಗೆ ಹೊಗೆ ಸೂಸುವದೂ ಸಹಜ ಕ್ರಿಯೆ. ಕಾಡಲ್ಲಿ ದಾರಿ ತಪ್ಪಿದರೆ ದೂರದ ಕಣಿವೆ ಮೂಲೆಯಲ್ಲಿ  ಏಳುವ ಹೊಗೆ  ಗಮನಿಸಿಯೇ  ಅಲ್ಲಿ ಜನವಸತಿ ಇದೆ ಎಂದು  ಸುಲಭದಲ್ಲಿ ಪತ್ತೆ ಹಚ್ಚಬಹುದಿತ್ತು . ಕಟ್ಟಿಗೆ ಎಲ್ಲರ ಉರುವಲು ,   ಇದರಲ್ಲಿ  ಅಡುಗೆ ಮಾಡುವ ಮಹಿಳೆ ದಿನಕ್ಕೆ  ೧೦ ಸಿಗರೇಟು ಸೇದಿದಂತಾಗುತ್ತಿತ್ತು!  ಹೊಗೆ ಸೇವನೆ ಪರಿಣಾಮ ಮಹಿಳೆ, ಮಕ್ಕಳ ಆರೋಗ್ಯ ಹದಗೆಡುತ್ತಿದೆ ಎಂದು  ನಮಗೆ ತೀರ ಈಚೆಗೆ ಅರಿವಾಗಿದೆ.  ಬೆಂಗಳೂರಿನ  ಭಾರತೀಯ ವಿಜ್ಞಾನ ಮಂದಿರದ ವಿಜ್ಞಾನಿಗಳು ಅಸ್ತ್ರ ಒಲೆಗಳನ್ನು ಜನಪ್ರಿಯಗೊಳಿಸುವ ಸಂದರ್ಭದಲ್ಲಿ ಹೊಗೆ ಪರಿಣಾಮದ ಮಾಹಿತಿ ಬಿತ್ತರಿಸಿದ್ದರು. ಕಾಡು ಉಳಿಸುವ ಅಸ್ತ್ರ ಒಲೆ ಮನೆಯನ್ನು ಹೊಗೆರಹಿತ ಮಾಡುವ ಮುಖೇನ ಆರೋಗ್ಯ ಸೂತ್ರ ಹಿಡಿಯುವ  ಉದ್ದೇಶ ಹೊಂದಿತ್ತು.  ಗೋಬರ್ ಅನಿಲ ಸ್ಥಾವರ, ಅಡುಗೆ ಅನಿಲಗಳು ಕೈಗೆಟಕುವ ಹಂತ ತಲುಪಿದಾಗ  ನಿಧಾನಕ್ಕೆ ಹಳ್ಳಿ ಮನೆಗಳ  ಖದರು ಬದಲಾಯಿತು.

ಒಂದೊಂದು ಮನೆಯ ಬಚ್ಚಲಿನಲ್ಲೂ  ಹೆಣ ಸುಡುವಷ್ಟು ಕಟ್ಟಿಗೆ ನಿತ್ಯ ಉರಿದು ಬೂದಿಯಾಗುತ್ತಿದೆ ಎಂದು   ೧೯೮೫ರಲ್ಲಿ ಸಾಹಿತಿ ಡಾ. ಶಿವರಾಮ ಕಾರಂತ ಮಲೆನಾಡು ಸ್ಥಿತಿಗೆ ಕನ್ನಡಿ ಹಿಡಿದಿದ್ದರು. ಸ್ನಾನದ ಒಲೆ, ಅಡುಗೆ ಒಲೆ, ಮಳೆಗಾಲದಲ್ಲಿ ಕಂಬಳಿ ಒಣಗಿಸುವ ಹೊಡತಲು, ಅಡಿಕೆ ಬೇಯಿಸುವ ಒಲೆಗಳು ಉರಿಯಬೇಕು. ಅಷ್ಟೇಕೆ ಜಾನುವಾರುಗಳಿಗೆ  ಸಿದ್ದ ಪಶು ಆಹಾರ ಮಾರುಕಟ್ಟೆಯಿಂದ ಖರೀದಿಸದ ಆ ಕಾಲದಲ್ಲಿ ಪ್ರತಿ ಮನೆಯಲ್ಲಿ ಕಾಡು ಸೊಪ್ಪುಗಳನ್ನು  ಬಳಸಿ ಇಂತಹ ಆಹಾರ ತಯಾರಿಸಲಾಗುತ್ತಿತ್ತು.  ಇದಕ್ಕಾಗಿ ಮುರ ಬೇಯಿಸುವ ಒಲೆ ಉರಿಯುತ್ತಿತ್ತು. ಮನೆ ಜಗುಲಿಯ ಮೂಲೆಯಲ್ಲಿ  ವರ್ಷವಿಡೀ ಹೊಗೆ ಕಕ್ಕುತ್ತ , ಬೂದಿ ಬೀರುತ್ತ  ಮರದ ದಿಮ್ಮಿಗಳು ಉರಿಯುತ್ತಿದ್ದವು.  ಅಗ್ನಿ  ಆರಾಧನೆಯ ಪಣ ಹೊತ್ತಂತೆ ಹೊಡತಲಲ್ಲಿ ದಿನವಿಡೀ  ಬೆಂಕಿ ಉರಿಯುತ್ತಿತ್ತು. ಅವಿಭಕ್ತ ಕುಟುಂಬಗಳೇ ಹೆಚ್ಚಿದ್ದ ಕಾಲದಲ್ಲಿ ಪ್ರತಿ ಮನೆಯಲ್ಲಿ ಒಂದಿಬ್ಬರಾದರೂ ಮುದುಕರು ಇರುತ್ತಿದ್ದರು. ಹೊಡತಲ ಸನಿಹದಲ್ಲಿ  ಹಾಸಿಗೆ ಹಾಸಿಕೊಂಡು ಬೆನ್ನು ಕಾಯಿಸುತ್ತ, ಬೀಡಿ ಸೇದುತ್ತ  ಅವರು ಕಾಲ ಕಳೆಯುತ್ತಿದ್ದರು. ವಿಚಿತ್ರವೆಂದರೆ ಸುಡು ಸುಡು ಬೇಸಿಗೆಯಲ್ಲೂ  ಯಾಕೆ ಕಟ್ಟಿಗೆ ಉರಿಸಬೇಕು   ಎಂದು ಯಾರೂ ಚಿಂತಿಸುತ್ತಿರಲಿಲ್ಲ. ಆಗ ಬೇಸಿಗೆಯಲ್ಲೂ ಬೆಂಕಿ ಕಾಯಿಸುವ ಜರೂರತ್ತು ಏಕಿತ್ತು ಎಂಬುದು ಅರ್ಥವಾಗುತ್ತಿಲ್ಲ. ಸಣ್ಣಪುಟ್ಟ ಜ್ವರ ಬಂದವರು ಬೆಂಕಿ ಕಾಯಿಸಿ ಬೆವರಿಳಿಸಿಯೇ ಗುಣಪಡಿಸಿಕೊಳ್ಳುತ್ತಿದ್ದರು !. 

ಚಿಮಣಿ ದೀಪ ಹೊತ್ತಿಸಲು  ಬೆಂಕಿ ಕಡ್ಡಿ ಉರಿಸಿದರೆ ಹಿರಿಯರು ಕೆಂಡಾಮಂಡಲವಾಗುತ್ತಿದ್ದರು. ಮನೆಯ ಯಾವುದೋ ಒಲೆಯಲ್ಲಿ ಬೆಂಕಿ ಉರಿಯುತ್ತಿರುವಾಗ  ಅನವಶ್ಯವಾಗಿ ಬೆಂಕಿ ಕಡ್ಡಿ ಉರಿಸಿ ಹಾಳು ಮಾಡುತ್ತೀರಿ ಎಂಬುದು ಅವರ ಟೀಕೆ. ಉರಿಯುವ ಇಂಗಾಳಕ್ಕೆ ಗಾಳಿ ಹಾಕಿ ಪುನಃ ಬೆಂಕಿ ಹೊತ್ತಿಕೊಳ್ಳುವಂತೆ ಮಾಡುವ ಉಸಾಪರಿಗಿಂತ ಸುಲಭದಲ್ಲಿ  ಕಡ್ಡಿಗೀರಬಹುದು ಎಂಬುದು  ಎಳೆ ಮಕ್ಕಳ ನಿಲುವು . ಬೆಂಕಿಕಡ್ಡಿ ಪೇಟೆಯಿಂದ ದುಡ್ಡುಕೊಟ್ಟು ತಂದಿದ್ದು, ಸಿಕ್ಕಾಪಟ್ಟೆ ಖರ್ಚು ಮಾಡಬೇಡಿ ಎಂದು ಯಜಮಾನರು  ಮಹಿಳೆಯರನ್ನು ಬೈಯ್ಯುತ್ತಿದ್ದುದು   ಪ್ರತಿ ಮನೆಯ ಮಾಮೂಲಿ ದ್ರಶ್ಯಗಳು !. ಕಾಡಿನ ಮಹಾ ಮಹಾ ಮರಗಳು ಉರಿದರೂ ಚಿಂತಿಸದವರು ಪುಟ್ಟ ಬೆಂಕಿ ಕಡ್ಡಿಗಾಗಿ  ಭರ್ಜರಿ  ಜಗಳ ಕಾಯುತ್ತಿದ್ದರು.

ಬಣ್ಣದ ಮೆರಗಿಲ್ಲ, ವಿದ್ಯುತ್ ದೀಪದ ಬೆಳಕಿಲ್ಲ. ಬಹುತೇಕ ಸೋಗೆ, ಹುಲ್ಲಿನ ಮನೆಗಳು ಜಾಸ್ತಿ. ಮಣ್ಣಿನ ಗೋಡೆಗೆ ಕೆಮ್ಮಣ್ಣು, ಶೇಡಿ ಬಳಿಯುವದೇ ದೊಡ್ಡ ಅಲಂಕಾರ !. ಜಗುಲಿ, ಅಡುಗೆ ಒಳ, ಬಚ್ಚಲು ಎಲ್ಲಡೆ ಹೊಗೆ ಒಲೆಗಳು ತುಂಬಿದ್ದರಿಂದ ಇಡೀ ಮನೆ ಹೊಗೆಮಯ.  ಇಂತಹ ಮನೆಗಳಿಗೆ ಹೊಗೆ ಕೊಳವೆಗಳಿಲ್ಲ, ಹೀಗಾಗಿ ಮಳೆಗಾಲದಲ್ಲಿ ದಟ್ಟ ಹೊಗೆ  ಆಡುವ ಮಕ್ಕಳಂತೆ ಮನೆಯೆಲ್ಲಾ ವ್ಯಾಪಿಸಿ ಸೋಗೆ ಮೇಲ್ಚಾವಣಿಯಿಂದ ನಿಧಾನಕ್ಕೆ  ಮೇಲೇರುವದನ್ನು  ನೋಡುವದರಲ್ಲಿ  ಅದೇನೋ ಖುಷಿ!  ಬಿದಿರು ಗಳಕ್ಕೆ  ಹೊಗೆ ತಾಗಿದರೆ ಬಾಳಿಕೆ ಜಾಸ್ತಿ. ಮನೆ ನಿರ್ಮಾಣಕ್ಕೆ  ಬಳಸಿದ ಕಾಡು ಮರಗಳು ಹೊಗೆ ಸಂಸ್ಕರಣೆಗೆ ಸಿಕ್ಕಿ  ಹುಳುಬಾಧೆಯಿಂದ ಬಚಾವಾಗುತ್ತಿದ್ದವು. ಹೊಗೆ ತಾಗುವಲ್ಲಿ ಯಾವ ಯಾವ ಸಲಕರಣೆ ಶೇಖರಿಸಿಡಬೇಕು ಎಂಬ ತಿಳುವಳಿಕೆ ಆಗ ಮುಖ್ಯವಾಗಿತ್ತು. ಮಡಿಕೆ, ಬಿದಿರುಗಳು, ಬಾಟಲಿ, ಸೋರೆಕಾಯಿಗಳ ಒಳಗಡೆ  ವಿವಿಧ ತರಕಾರಿ ಬೀಜ ಇಟ್ಟು, ಅಡುಗೆ ಒಲೆಯ ಮೇಲ್ಬಾಗದಲ್ಲಿ ಇಡುವ ಪರಿಪಾಠ”ತ್ತು. ಹಾಗಲ ಬೀಜವನ್ನು ಆಕಳ ಸಗಣಿಯಲ್ಲಿ  ಬೆರಸಿ ಒಲೆಯಂಚಿನ  ಗೋಡೆಗೆ  ಮುದ್ದೆಯಾಗಿ ಹೊಡೆಯುತ್ತಿದ್ದರು. ವರ್ಷವಾದರೂ ಬೀಜ ಹಾಳಾಗುತ್ತಿರಲಿಲ್ಲ.  ಹುಲ್ಲಿನ ಹಿಡಿ, ಬೆತ್ತದ ಬುಟ್ಟಿ, ಬಿದಿರಿನ ಕಣಜಗಳನ್ನು ಬಚ್ಚಲ ಮನೆಯ ಅಟ್ಟದಲ್ಲಿಡುವದರಿಂದ ಹೆಚ್ಚು ವರ್ಷ ಬಾಳಿಕೆ ಬರುತ್ತದೆಂಬ ತಿಳಿವಳಿಕೆಯಿತ್ತು.  ಮನೆ ತುಂಬ ಹೊಗೆ ಕವಿದ ಆ ಕಾಲಕ್ಕೆ  ಮನೆಯೊಳಗೆ ಸೊಳ್ಳೆಗಳಿಗೆ ನಿಷೇಧಾಜ್ಞೆ.

ಕಾಡಿನ ಕಟ್ಟಿಗೆ ಉರುವಲಾದಾಗ ಒಮ್ಮೊಮ್ಮೆ  ತಮಾಷೆ ಪ್ರಸಂಗಗಳು ಎದುರಾಗುತ್ತಿದ್ದವು. ಕಾಡು ಸೌದೆ ಜತೆಗೆ ಒಮ್ಮೊಮ್ಮೆ  ಹೇತಾರಿ ಮರದ ದಿಮ್ಮಿಗಳೂ ಅಚಾನಕ್ ಸೇರುತ್ತಿದ್ದವು. ಅದು ಸ್ವಲ್ಪ ಹೊಗೆ ಸೂಸುತ್ತಿರುವಂತೆ  ಅಸಾಧ್ಯ ದುರ್ನಾತ ಇಡೀ ಪ್ರದೇಶಕ್ಕೆ ವ್ಯಾಪಿಸುತ್ತಿತ್ತು. ಕಾಡು ಮರಗಳನ್ನು ಗುರುತಿಸಲು ಬಾರದವರು ಇಂತಹ ಉರುವಲು ತರುತ್ತಾರೆಂದು ಹಿರಿಯರು ಗದರಿಸುತ್ತಿದ್ದರು. ಬೀಟೆ ಮರದ ಚಿಕ್ಕ ಟಿಸಿಲು ಉರಿದರೂ ಆರೋಗ್ಯವಂತರಿಗೂ ಅಸ್ತಮಾದ ಬಂದಂತೆ  ಉಸಿರು ಕಟ್ಟಿಸುತ್ತಿತ್ತು. ಜಂಬೆ ಕಟ್ಟಿಗೆ ಉರಿಯುವದಕ್ಕಿಂತ  ಒಲೆಯಿಂದ ಮೂರು ನಾಲಕ್ಕು ಅಡಿ ದೂರದವರೆಗೆ ಪಟಾಕಿಯಂತೆ ಕಿಡಿ ಸಿಡಿಸುತ್ತಿತ್ತು. ಕಾಸರಕ ಮರದ ಕಟ್ಟಿಗೆ ಸುಡುವದಕ್ಕೆ ನಿಷೇಧವಿತ್ತು. ಬೆಂಕಿಯ ಉರಿ ಮಾತ್ರ  ಕಾಯಿುಸುವ ಕಾರ್ಯಕ್ಕೆ ನೆರವಾದಂತೆ ಕಂಡರೂ ಕಕ್ಕುವ ಹೊಗೆಯನ್ನು  ಬಳಸುವ ವಿದ್ಯೆ ಕಾಲದ ಅರಿವಾಗಿತ್ತು. ಬೀಜ ಬಚ್ಚಿಡುವ, ಕೃಷಿ ಸಲಕರಣೆ ಸಂರಕ್ಷಿಸುವ ಸೂತ್ರವಾಗಿತ್ತು.

ಕಾಲ ಬದಲಾಗಿ ಈಗ ಅಡುಗೆ ಮನೆಯ ಗೋಡೆಗೂ ಬಿಳಿ ಬಣ್ಣ ಬಳಿಯುವ ತಾಕತ್ತು ಬಂದಿದೆ. ತರಕಾರಿ ಬೀಜ ಇಡುವ  ಅಟ್ಟಣಿಗೆ ಮಾಯವಾಗಿದೆ. ಹೊಡತಲ ಬಳಿ ಬೆಂಕಿ ಕಾಯಿಸುತ್ತ ಕತೆ ಹೇಳುವ ಹಿರಿಯರು  ಟಿವಿ ಎದುರು ಧಾರವಾಹಿ ಕತೆಗಳಲ್ಲಿ  ಕಳೆದು ಹೋಗಿದ್ದಾರೆ.

ಹೊಗೆ ರಹಿತ ಮನೆಗಳು ಬಂದ ಬಳಿಕ ಮಹಿಳೆಯರಿಗೆ ಎಷ್ಟು ಆರೋಗ್ಯ ಬಂತು ?  ಉತ್ತರ ಹೇಳೋದು ತೀರ ಕಷ್ಟ . ಬಹುತೇಕ ಎಲ್ಲರ ಮನೆಯಲ್ಲಿ  ವಿವಿಧ ಮಾತ್ರೆ, ಜೌಷಧ ನಿತ್ಯ ಸೇವಿಸುವವರು ಸಿಗುತ್ತಾರೆ.