ಮುದ್ದು ಕಂದನ ಹಾಲ್ದುಟಿಯನ್ನು ಹವಳದ ತುಟಿ ಅಂತೇವೆ; ಮಾಂಗಲ್ಯದ ಸರದಲ್ಲಿ ಕೂಡ ಕರಿಮಣಿಯೊಂದಿಗೆ ಹವಳಕ್ಕೆ ಶ್ರೇಷ್ಠ ಸ್ಥಾನ. ಹವಳದಿಂದ ಮಾಡಲಾದ ಚೆಂದದ ಆಭರಣಗಳನ್ನು ತೊಟ್ಟು ನಲಿಯುವ ಹೆಣ್ಣುಮಕ್ಕಳು ಭಾರತವಷ್ಟೇ ಅಲ್ಲದೆ ವಿಶ್ವದಾದ್ಯಂತ ಕಂಡುಬರುತ್ತಾರೆ. ಆದರೆ ಈ ಹವಳವು ಎಲ್ಲಿ ಸಿಗುತ್ತೆ ಗೊತ್ತೇ? ಅದು ಕಾರ್ಖಾನೆಗಳಲ್ಲಿ ತಯಾರಾಗೋ ವಸ್ತುವಲ್ಲ; ಅದೊಂದು ಜೀವಿಯ ಹೊರಕವಚ ಎಂದರೆ ನಂಬುತ್ತೀರಾ? ಸಮುದ್ರಗಳ ಒಳಗೆ೧೫೦ರಿಂದ ೪೫೦ ಮೀಟರ್ ಆಳದಲ್ಲಿ ಬಂಡೆಗಳ ಮೇಲೆ ತಮ್ಮ ವಸಾಹತು ಸ್ಥಾಪಿಸಿ ಬದುಕುತ್ತವೆ ಈ ಹವಳಗಳು. ಈ ಪುಟ್ಟ ಜೀವಿಗಳಲ್ಲಿ ನೂರಾರು ಪ್ರಭೇದಗಳಿದ್ದು, ಕೆಂಪು, ಗುಲಾಬಿ, ಕೇಸರಿ, ಹಳದಿ, ನೇರಳೆ, ನೀಲಿಯಂತಹಾ ಹಲವಾರು ಬಣ್ಣಗಳ ಹವಳಗಳು ವಿಶ್ವದಾದ್ಯಂತ ಸಮುದ್ರತಳದಲ್ಲಿ ಕಂಡುಬರುತ್ತವೆ. ಕೆಲವು ಉದ್ದುದ್ದ, ಕೆಲವು ಪುಟ್ಟ ಚೆಂಡಿನಂತೆ ಗುಂಡಾಗಿ, ಮತ್ತೂ ಕೆಲವು ಕೊಳವೆಯಂತೆ, ಹೀಗೆ ಬಗೆಬಗೆಯ ಆಕಾರ, ಗಾತ್ರಗಳಲ್ಲಿ ಇವು ಬೆಳೆಯುತ್ತವೆ; ಸಾಮಾನ್ಯವಾಗಿ ಇವು ಒಂದಕ್ಕೊಂದು ಬೆಸೆದುಕೊಂಡು, ಮರಗಳ ರೆಂಬೆ ಕೊಂಬೆಗಳನ್ನು ಹೋಲುವ ಉದ್ದುದ್ದ ರಚನೆಗಳ ರೂಪದಲ್ಲಿ ಬದುಕುತ್ತವೆ.ಗಂಡು, ಹೆಣ್ಣು ಎಂಬ ವೈವಿಧ್ಯವನ್ನೂ ಹೊಂದಿರುವ ಈ ಜೀವಿಯು, ತಮ್ಮೊಳಗಿನ ವರ್ಣದ್ರವ್ಯಗಳ ಕಾರಣದಿಂದ, ಜೊತೆಗೇ, ತಮ್ಮ ದೇಹ ಹೀರಿಕೊಳ್ಳುವ ಬೆಳಕಿನ ಬಣ್ಣ ಮತ್ತು ಪ್ರತಿಫಲಿಸುವ ಬೆಳಕಿನ ಬಣ್ಣದ ಆಧಾರದ ಮೇಲೆ ಅಚ್ಚರಿ ಹುಟ್ಟಿಸುವಂತಹಾ ಸುಂದರ ರಚನೆಗಳಾಗಿ ಕಣ್ಸೆಳೆಯುತ್ತವೆ. ಹವಳ ಎಂಬುದು ಈ ಜೀವಿಯ ಹೆಸರಾದರೂ, ನಾವು ಬಳಸುವ ಅದರ ಹೊರಕವಚಕ್ಕೂ ಹವಳವೆಂದೇ ಕರೆಯುತ್ತೇವೆ. ಕೇವಲ ಆಭರಣಗಳ ತಯಾರಿಯಲ್ಲಷ್ಟೇ ಅಲ್ಲದೆ, ಔಷಧಿ ತಯಾರಿ, ಕಟ್ಟಡ ಕಾಮಗಾರಿ, ಹವಾಮಾನ ಅಧ್ಯಯನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ‘ಕ್ಯಾಲ್ಸಿಯಂ ಕಾರ್ಬೋನೇಟ್’ ಅಥವಾ ಸುಣ್ಣದಿಂದ ತಯಾರಾದ ಈ ಜೀವಿಯ ‘ಹೊರಕವಚ’ವಾದ ಹವಳಗಳನ್ನು ಬಳಸಲಾಗುತ್ತದೆ; ಇಷ್ಟೊಂದು ಉಪಯುಕ್ತತೆಯಿರುವ ಕಾರಣದಿಂದ ಇವುಗಳ ಮೇಲೆ ಅತಿಯಾದ ಒತ್ತಡವಿದ್ದು, ಹಣದ ದುರಾಸೆಯಿಂದ ಬೃಹತ್ ಪ್ರಮಾಣದಲ್ಲಿ ಇವುಗಳನ್ನು ಸಮುದ್ರದಿಂದ ಹೊರತೆಗೆಯುವ ಪ್ರಕ್ರಿಯೆ ಕಂಡೂ ಕಾಣದಂತೆ ನಡೆಯುತ್ತಿದೆ. ಜಾಗತಿಕ ಮಟ್ಟದಲ್ಲಿ ಈ ಪ್ರಕ್ರಿಯೆಯ ಮೇಲೆ ನಿಯಂತ್ರಣ ಕಾಯ್ದೆಗಳಿದ್ದು, ಹವಳಗಳಿಗೆ ಸ್ವಲ್ಪಮಟ್ಟಿನ ರಕ್ಷಣೆ ಸಿಗುತ್ತಿದೆ; ಆದರೆ, ಈಗ ಇದಕ್ಕಿಂತಲೂ ದೊಡ್ಡ ಅಪಾಯವೊಂದು ಹವಳಗಳ ಮೇಲೆ ಎರಗಿದೆ.
ಜಾಗತಿಕ ತಾಪಮಾನ ಏರಿಕೆಯಿಂದ ಈಗಾಗಲೇ ಹವಳಗಳು ಬಿಳುಚಿಕೊಳ್ಳುತ್ತಿರುವುದು ವರದಿಯಾಗಿದೆ; ಜಾಗತಿಕವಾಗಿ ಮಾನವನ ವಿವೇಕರಹಿತ ನಡೆಯಿಂದ ತಾಪಮಾನದಲ್ಲಿ ತೀವ್ರತರ ಬದಲಾವಣೆಗಳಾಗುತ್ತಿದ್ದು, ಇದರ ಹಲವಾರು ಫಲಿತಾಂಶಗಳಲ್ಲಿ ಸಮುದ್ರದ ನೀರಿನ ತಾಪಮಾನದಲ್ಲಿ ಹೆಚ್ಚಳವಾಗುವುದು ಕೂಡ ಒಂದು. ಹೀಗೆ ಬಿಸಿಯಾಗುತ್ತಿರುವ ಸಮುದ್ರದ ನೀರಿನಲ್ಲಿ ಹವಳದೊಂದಿಗೆ ಸಹಜೀವನ ನಡೆಸುತ್ತಿದ್ದ ಪುಟ್ಟ ಸಸ್ಯಗಳಾದ ‘ಆಲ್ಗೆ’ ಕೊನೆಯುಸಿರೆಳೆಯುತ್ತಿವೆ ಮತ್ತು ಹವಳದಿಂದ ಬೇರ್ಪಡುತ್ತಿವೆ. ಈ ಪ್ರಕ್ರಿಯೆಯಿಂದಾಗಿ ಮತ್ತು ಬಿಸಿಯಾಗುತ್ತಿರುವ ನೀರಿನಿಂದ ತಮ್ಮ ಮೇಲಾಗುವ ರಾಸಾಯನಿಕ ಪ್ರಕ್ರಿಯೆಗಳಿಂದಾಗಿ ಹವಳಗಳು ಬಿಳುಚಿಕೊಳ್ಳುತ್ತಿವೆ ಮತ್ತು ಅಸುನೀಗುತ್ತಿವೆ; ಇದರ ಜೊತೆಗೆ, ಹೊಸ ಸಂಶೋಧನೆಯೊಂದು ಬಹಿರಂಗಪಡಿಸಿರುವಂತೆ, ಮಾನವನ ಬುದ್ಧಿಗೇಡಿತನದಿಂದ ಎಲ್ಲೆಲ್ಲೂ ಹೆಚ್ಚಿರುವ ಪ್ಲಾಸ್ಟಿಕ್ ತ್ಯಾಜ್ಯದಿಂದ ಕೂಡ ಹವಳಗಳಿಗೆ ಅಪಾಯವಾಗುತ್ತಿದೆ. ಪ್ಲಾಸ್ಟಿಕ್, ಹವಳಗಳಿಗೆ ಏನು ಮಾಡುತ್ತೆ ಅಂತೀರಾ? ಪ್ಲಾಸ್ಟಿಕ್ ಚೀಲ, ಶೀಶೆಗಳನ್ನು ಸಾವಿರಾರು ಜನ ತಮ್ಮ ಅವಶ್ಯಕತೆಗೆ ಬೇಕಾದಂತೆ ಬಳಸಿ ಬಿಸಾಡಿರುತ್ತಾರೆ; ಅದರಲ್ಲಿ ಅವರೆಲ್ಲರ ಕೊಡುಗೆಯಾಗಿ ಹಲವಾರು ಬಗೆಯ ಬ್ಯಾಕ್ಟೀರಿಯಾದಂತಹ ಸೂಕ್ಷ್ಮಾಣುಜೀವಿಗಳಿರುತ್ತವೆಯಷ್ಟೇ; ಅವು ಪ್ಲಾಸ್ಟಿಕ್ ತ್ಯಾಜ್ಯದ ಮೇಲೆ ತೇಲುತ್ತಾ ಮುಳುಗುತ್ತಾ ನಿಧಾನವಾಗಿ ಹವಳಗಳನ್ನು ತಲುಪುತ್ತವೆ ಮತ್ತು ಹವಳಗಳ ಮೇಲೆ ದಾಳಿ ಮಾಡುತ್ತವೆ. ಇದರ ಫಲವಾಗಿ ಹವಳಗಳಲ್ಲಿ ಹೊಸ ಬಗೆಯ ರೋಗಗಳು ಕಂಡುಬರುತ್ತಿದ್ದು, ಹವಳಗಳ ಸಂಖ್ಯೆ ಮತ್ತು ಗುಣಮಟ್ಟದಲ್ಲಿ ಇಳಿಕೆ ಕಂಡುಬರುತ್ತಿದೆ. ನ್ಯೂಯಾರ್ಕ್ನಲ್ಲಿರುವ ಕಾರ್ನೆಲ್ ವಿಶ್ವವಿದ್ಯಾಲಯದ ಸಂಶೋಧಕರು ಆಸ್ಟ್ರೇಲಿಯಾ, ಮ್ಯಾನ್ಮಾರ್, ಥಾಯ್ಲಂಡ್, ಇಂಡೋನೇಷಿಯಾ ಸೇರಿದಂತೆ ಹಲವಾರು ದೇಶಗಳನ್ನು ಸುತ್ತುವರೆದಿರುವ ಸಮುದ್ರಗಳಲ್ಲಿ ತಮ್ಮ ಸಂಶೋಧನೆಯನ್ನು ನಡೆಸಿದ್ದು, ಈ ಆತಂಕಕಾರಿ ಬೆಳವಣಿಗೆಯ ಬಗ್ಗೆ ಮಾಹಿತಿ ಹೊರಹಾಕಿದ್ದಾರೆ. ಅವರ ಅಧ್ಯಯನದ ಪ್ರಕಾರ, ಈಗ ನಡೆಯುತ್ತಿರುವ ರೀತಿಯಲ್ಲೇ ಪ್ಲಾಸ್ಟಿಕ್ ಬಳಕೆ ಮತ್ತು ತ್ಯಾಜ್ಯದ ಅಸಮರ್ಪಕ ನಿರ್ವಹಣೆ ಮುಂದುವರಿದರೆ, ೨೦೨೫ನೇ ಇಸವಿಯ ಹೊತ್ತಿಗೆ ೧೫.೭ ಶತಕೋಟಿ ಪ್ಲಾಸ್ಟಿಕ್ ವಸ್ತುಗಳು ಹವಳದಂಡೆಗಳ ಬಳಿ ಕಂಡುಬರುತ್ತವೆಯಂತೆ. ಇದರ ಅರ್ಥ, ಹಲವಾರು ಸಮಸ್ಯೆಗಳನ್ನು ಜಗತ್ತಿಗೆ ಉಣಬಡಿಸುತ್ತಿರೋ ಪ್ಲಾಸ್ಟಿಕ್ ತ್ಯಾಜ್ಯದ ಸವಾಲನ್ನು ಉಪಾಯವಾಗಿ ನಿಭಾಯಿಸದಿದ್ದರೆ, ನಿವಾರಿಸಿಕೊಳ್ಳದಿದ್ದರೆ ಹವಳಗಳ ಸಂಪೂರ್ಣ ನಿರ್ನಾಮ ಖಚಿತ; ಇದೇ ಕಾರಣದಿಂದಾಗಿ ಹವಳಗಳಂತೆಯೇ ಇನ್ನಿತರ ಹಲವಾರು ಜೀವಪ್ರಭೇದಗಳು ಕೂಡ ಭೂಮಿಯಿಂದ ಕಾಲ್ಕೀಳುತ್ತವೆ. ಇದರ ಪರಿಣಾಮ ಇದಕ್ಕೆಲ್ಲಾ ಕಾರಣರಾದ ಮನುಷ್ಯರ ಮೇಲೆ ಆಗದೆ ಇರಲಿಕ್ಕಿಲ್ಲ; ಕನಿಷ್ಟ ಪಕ್ಷ, ತಮ್ಮ ಅಸ್ತಿತ್ವಕ್ಕೆ ಚ್ಯುತಿ ಬರದೇ ಇರಲಿ ಎಂಬ ಉದ್ದೇಶದಿಂದಾದರೂ ಮನುಷ್ಯ ಪ್ರಾಣಿ ಎಚ್ಚೆತ್ತುಕೊಂಡರೆ, ಅದೇ ಇಂತಹ ಸಂಶೋಧನೆಗಳ ಸಾರ್ಥಕ್ಯ ಎಂದು ಭಾವಿಸಬಹುದು.

– ಕ್ಷಮಾ.ವಿ.ಭಾನುಪ್ರಕಾಶ್