ಮಾನವನ ಜೀವನಶೈಲಿ ಮತ್ತು ಆವಾಸಗಳನ್ನು ನಿರ್ಧರಿಸುವಲ್ಲಿ ಹವಾಮಾನದ ಪಾತ್ರ ದೊಡ್ಡದು. ಹಾಗೆಯೇ ಪ್ರತಿಯೊಂದು ವಾಯುಗುಣಕ್ಕೆ ಅನುಗುಣವಾಗಿ ವಿಕಾಸಗೊಂಡ ಜೀವಿಯು ವಾಯುಗುಣಕ್ಕೆ ಅತ್ಯಂತ ಸಮರ್ಪಕವಾಗಿ ಹೊಂದಿಕೊಳ್ಳುತ್ತದೆ. ಮರುತು, ಇಂದ್ರ ವರುಣರೇ ಮೊದಲಾದ ದೇವತೆಗಳು ವಾಯುಗುಣ ನಿಯಂತ್ರಕರೆಂಬ ಭಾವನೆ ಪ್ರಾಚೀನ ಭಾರತದ ಪರಂಪರೆಯಲ್ಲಿತ್ತು. ಆಕಾಶದ ಸ್ವರೂಪ, ಪಶು-ಪಕ್ಷಿಗಳ ವರ್ತನೆಗಳನ್ನು ಆಧರಿಸಿ ಹವಾಮಾನವನ್ನು ಮುನ್ಸೂಚಿಸುವ ಪ್ರಯತ್ನ ಭಾರತೀಯ ಜನಪದದಲ್ಲಿದೆ.  ಹವಾಮಾನವೆನ್ನುವುದು ನಿಸರ್ಗಾತೀತದ ಅಭಿವ್ಯಕ್ತಿಯಲ್ಲ; ಭೌತಿಕ ವಿದ್ಯಮಾನಗಳ ಫಲ ಎಂಬುದು ಈಗ ತಿಳಿದಿದೆ.

1) ಸಮಭಾಜಕ ವೃತ್ತದ ಬಳಿ ಸೆಕೆಂಡಿಗೆ 465 ಮೀಟರ್ ವೇಗದಲ್ಲಿ ಭೂಮಿಯು ಪೂರ್ವಾಭಿಮುಖವಾಗಿ ತನ್ನ ಅಕ್ಷದ ಸುತ್ತಲೂ ತಿರುಗುತ್ತದೆ. ಒಂದು ಸುತ್ತು ತಿರುಗಲು 23 ಗಂಟೆ 56 ಮಿನಿಟು ಮತ್ತು 4.09 ಸೆಕೆಂಡುಗಳು ಬೇಕು. ಹೀಗೆ ಭೂಮಿಯು ತಿರುಗುತ್ತಲೇ ಸೂರ್ಯನ ಸುತ್ತಲೂ ಪ್ರದಕ್ಷಿಣೆ ಹಾಕಲು 365 ದಿನ 5 ಗಂಟೆ 48 ಮಿನಿಟು 45.51 ಸೆಕೆಂಡುಗಳು ಬೇಕು. ಇದರಿಂದ ವರ್ಷಾವಧಿಯನ್ನು ಋತುಗಳ ಅವಧಿಗೆ ಮೇಳೈಸಲು 4 ವರ್ಷಗಳಿಗೊಮ್ಮ ಫೆಬ್ರವರಿಯಲ್ಲಿ 29 ದಿನ ಎಂದು ಲೆಕ್ಕ ಮಾಡುತ್ತಾರೆ. ಆ ವರ್ಷವನ್ನು ಏನೆಂದು ಕರೆಯುತ್ತಾರೆ?

2) ದಿನಕ್ಕೆ ಸುಮಾರು ಎಷ್ಟು ಡಿಗ್ರಿಯಂತೆ ಸೂರ್ಯನು ತನ್ನ ವಾರ್ಷಿಕ ಚಲನೆಯಲ್ಲಿ ಪೂರ್ವದ ಕಡೆಗೆ ಚಲಿಸುವಂತೆ ಭೂಮಿಯ ಮೇಲಿರುವ ನಮಗೆ ಭಾಸವಾಗುತ್ತದೆ?

3) ವಾಯುಮಂಡಲದ ಭೌತಿಕ ಸ್ಥಿತಿಗತಿಗಳನ್ನು ತತ್ಕಾಲದಲ್ಲಿ ಸೂಚಿಸುವುದೇ ಹವಾಮಾನ.  ಇದನ್ನು ಆ ಕ್ಷಣದ ವಾಯುಮಂಡಲದ ಪ್ರಾಚರ (ಪ್ಯಾರಮೀಟರ್) ಗಳಾದ ಉಷ್ಣತೆ, ಒತ್ತಡ, ಮಾರುತ, ತೇವಾಂಶ ಮತ್ತು ಆಕಾಶದ ಸ್ಥಿತಿಗತಿಗಳನ್ನು ಆಧರಿಸಿ ವಿವರಿಸಲಾಗುವುದು. ‘ಹವಾಮಾನದ ಅಧ್ಯಯನ’ವನ್ನು ‘……. ವಿಜ್ಞಾನ’ ಎಂದು ಕರೆಯುತ್ತಾರೆ? ಈ ಹೆಸರನ್ನು ತಿಳಿಸಿ.

4) ವಾಯುಗುಣ ಅಂದರೇನು?

5) ವಾಯುಮಂಡಲದಲ್ಲಿ ಹವಾಗೋಲ (10-16 ಕಿ.ಮೀ. ಎತ್ತರ ತನಕ) ಮತ್ತು ಸ್ಥಿರಗೋಲ (80 ಕಿ.ಮೀ. ಎತ್ತರದ ತನಕ) ಗಳಿಗಿಂತ ಮೇಲೆ (80 ಕಿ.ಮೀ. – 1000 ಕಿ.ಮೀ. ಎತ್ತರ) ಇರುವ ವಿಶಿಷ್ಟ ಭಾಗವನ್ನು ಏನೆಂದು ಕರೆಯುತ್ತಾರೆ? ಏಕೆ?

6) ದ್ವಿತೀಯಕ ಕಾಮನಬಿಲ್ಲು ಹೇಗೆ ಉಂಟಾಗುತ್ತದೆ?

7) ಸರಾಸರಿ ತಾಪಮಾನ 15 ಡಿಗ್ರಿ ಸೆಲ್‌ಸಿಯಸ್ ಇರುವಾಗ ದೀರ್ಘ ತರಂಗ ದೂರದ ಅಲೆಗಳ ರೂಪದಲ್ಲಿ ಭೂಮಿಯು ಶಕ್ತಿಯನ್ನು ಹೊರಸೂಸುತ್ತದೆ. ಹೀಗೆ ಹೊರಸೂಸಲ್ಪಡುವ ಶಕ್ತಿಯ ಗರಿಷ್ಠ ಮಟ್ಟದ ತರಂಗ ದೂರ 10 ಮೈಕ್ರೊ ಮೀಟರ್. ವಾಯುಮಂಡಲದಲ್ಲಿರುವ ನೀರು, ಕಾರ್ಬನ್ ಡೈಆಕ್ಸೈಡ್ ಹಾಗೂ ಮಿಥೇನ್ ಅನಿಲಗಳು ದೀರ್ಘ ತರಂಗ ದೂರದ ಅಲೆಗಳನ್ನು ಹೀರಿ ಉಷ್ಣವು ಅಂತರಿಕ್ಷಕ್ಕೆ ಹೋಗುವುದನ್ನು ತಪ್ಪಿಸುತ್ತವೆ. ಮೋಡಕವಿದ ವಾತಾವರಣದಲ್ಲಿ ಅಗಾಧ ಪ್ರಮಾಣದಲ್ಲಿ ಉಷ್ಣವು ನೀರಾವಿಯಿಂದ ಹೀರಲ್ಪಡುತ್ತದೆ. ಆಗ ಮೋಡಗಳು ದಪ್ಪ ಹೊದಿಕೆಯಂತೆ ವರ್ತಿಸಿ ವಾಯುಮಂಡಲದ ಬಿಸಿ ಏರುತ್ತದೆ. ಈ ವಿದಮಾನಕ್ಕೆ ಏನೆಂದು ಕರೆಯುತ್ತಾರೆ ?

 

ಉತ್ತರಗಳು

1) ಅಧಿಕ ವರ್ಷ (ಲೀಪ್ ಇಯರ್)

2) ದಿನಕ್ಕೆ ಸುಮಾರು ಒಂದು ಡಿಗ್ರಿಯಂತೆ

3) ಪವನ ವಿಜ್ಞಾನ (ಮಿಟಿಯರಾಲಜಿ)

4) ಹವಾಮಾನದ ದೀರ್ಘಾವದಿ ಸರಾಸರಿಯನ್ನೇ ‘ವಾಯುಗುಣ’ವೆನ್ನುವರು. ನೀರಿನ ಆಕರ, ನೈಸರ್ಗಿಕ ಸಂಪನ್ಮೂಲ, ಬೆಳೆ ವಿಧಾನ , ಭೂಬಳಕೆ, ಕೈಗಾರಿಕಾ ಸ್ಥಾವರಗಳು, ಕಟ್ಟಡಗಳ ರಚನೆ, ಜನಾಂಗೀಯ ವೈಶಿಷ್ಟ್ಯಗಳು ವಾಯುಗುಣಕ್ಕೆ ಅನುಗುಣವಾಗಿರುತ್ತವೆ. ವಿಭಿನ್ನ ಪ್ರದೇಶಗಳಲ್ಲಿ, ವಿಭಿನ್ನ ಅವಧಿಯಲ್ಲಿರುವ ವಾಯುಮಂಡಲದ ಅಂಶಗಳಾದ ಉಷ್ಣತೆ, ಮಾರುತ, ಮಳೆಗಳು ಒಂದು ಪ್ರದೇಶದ ವಾಯುಗುಣದ ಮೇಲೆ ಪ್ರಭಾವ ಬೀರುತ್ತವೆ.

5) ‘ಅಯಾನುಗೋಲ’, ಯಾಕೆಂದರೆ ಕಣಗಳು ಬಹುತೇಕ ಅಯಾನೀಕರಣಗೊಂಡಿರುತ್ತದೆ.

6) ಮಳೆ ಹನಿಗಳು ಪುಟ್ಟ ಅಶ್ರಗಗಳಂತೆ (ಪ್ರಿಸಮ್‌ಗಳಂತೆ) – ವರ್ತಿಸುತ್ತವೆ. ಸೂರ್ಯ ಪ್ರಕಾಶ ಅವುಗಳ ಮೇಲೆ ಬಿದ್ದು ಒಳಗೆ ಸಾಗುವಾಗ ಕಿರಣಗಳು ಬೇರೆ ಬೇರೆ ಬಣ್ಣದವುಗಳಾಗಿ ಒಡೆಯುತ್ತವೆ. ಇವು ಒಳಬದಿಯಿಂದ ಪ್ರತಿಫಲಿಸಿ ನೀರ ಹನಿಗಳಿಂದ ಹೊರ ಬಂದು ಸೂರ್ಯನಿಗೆ ಅಭಿಮುಖವಾಗಿ ಸಾಗುತ್ತವೆ. ಹೀಗೆ ಸಾಗುವ ಒಂದೇ ಬಣ್ಣದ ಕಿರಣಗಳು ಬೇರೆ ಬೇರೆ ಮಳೆಹನಿಗಳಿಂದ ವೀಕ್ಷಕನನ್ನು ತಲುಪುವಾಗ – ಮೊದಲ ಅಥವಾ ಪ್ರಾಥಮಿಕ – ಕಾಮನ ಬಿಲ್ಲು ಕಾಣಿಸುತ್ತದೆ. ಸೂರ್ಯಕಿರಣ ಮತ್ತು ವೀಕ್ಷಕನನ್ನು ಹಾದುಹೋಗುವ ರೇಖೆಯೊಂದಿಗೆ ಈ ಬಿಲ್ಲು ಮಾಡುವ ಕೋನ ಸುಮಾರು 42 ಡಿಗ್ರಿ. ನೀರ ಹನಿಗಳೊಳಗೆ ಎರಡು ಬಾರಿ ಪ್ರತಿಫಲಿಸಿ ಹೊರಬರುವ ವಿವಿಧ ಬಣ್ಣಗಳ ಕಿರಣಗಳು ಎರಡನೇ – ಅಥವಾ ದ್ವಿತೀಯ – ಕಾಮನಬಿಲ್ಲನ್ನು ಉಂಟು ಮಾಡುತ್ತವೆ. ಸೂರ್ಯ ಕಿರಣ ಮತ್ತು ವೀಕ್ಷಕನನ್ನು ಹಾದು ಹೋಗುವ ರೇಖೆಯೊಂದಿಗೆ ಈ ಬಿಲ್ಲು ಮಾಡುವ ಕೋನ ಸುಮಾರು 50 ಡಿಗ್ರಿ.

7) ‘ಹಸಿರು ಮನೆ’ ಪರಿಣಾಮ.