ಕಾನೂನು ಕೋಟಲೆಗಳ ಸುಳಿಗೆ ಸಿಕ್ಕಿದ ಹವಾಯ್‌ಯ ಹಣ್ಣು ಕೃಷಿಕರನ್ನು ಉಳಿಸಿದ್ದು ಸ್ವದೇಶಿ ಮಂತ್ರ! ಈಗವರು ಹಣ್ಣು ಬೆಳೆಯುವ ಕೃಷಿಕರು ಮಾತ್ರವಲ್ಲ, ವ್ಯಾಪಾರಿಗಳು ಕೂಡಾ.

ಹಣ್ಣಿನ ಬೆಳೆಗಳಿಗೆ ಹವಾಯ್ ಪ್ರಸಿದ್ಧ. ಹಣ್ಣುಗಳಿಲ್ಲಿ ಆಮದಾಗುತ್ತಿವೆಯೇ ವಿನಾ ರಫ್ತಾಗುವುದು ಕಡಿಮೆ! ೧೯೦೮ರಲ್ಲಿ ಬೆಣ್ಣೆಹಣ್ಣು (ಅವಕಾಡೋ)ಗಳನ್ನು ಹವಾಯ್‌ಯಿಂದ ಕ್ಯಾಲಿಫೋರ್ನಿಯಾಕ್ಕೆ ಕಳುಹಿಸುವಾಗ ಹಣ್ಣೊಂದರಲ್ಲಿ ಹುಳ ಇತ್ತಂತೆ. ಅಂದಿನಿಂದ ಮುಕ್ತ ರಫ್ತು ಬಂದ್! ರಫ್ತಾಗುವ ಹಣ್ಣುಗಳಿಗೆ ಪ್ರತ್ಯೇಕ ನಿಗಾ. ಕಟ್ಟುನಿಟ್ಟಿನ ಸಂಸ್ಕರಣಾ ಪರೀಕ್ಷೆ. ಅದಕ್ಕೆಂದೇ ಪ್ರತ್ಯೇಕವಾದ ವಿಧಿ-ವಿಧಾನಗಳು! ಅವರದ್ದೇ ದೇಶವಾದ ಯು.ಎಸ್.ಎ.ಗೂ ಊಹೂಂ!

ಹುಳ ತಂದ ಅವಾಂತರ

ಸಂಸ್ಕರಣಾ ಕೇಂದ್ರಗಳು ಯಾವಾಗಲೂ ರೈತರಿಂದ ದೂರ. ದುಬಾರಿ ವೆಚ್ಚ. ಸಣ್ಣ ರೈತರಿಗಿದು ಕನಸು. ಆದರೆ ಕೇಂದ್ರದ ಸನಿಹದ ರೈತರು ಹೇಗೋ ನಿಭಾಯಿಸಿ, ಲಾಂಗಾನ್, ರಂಬುಟಾನ್, ಲಿಚ್ಚಿ ಹಣ್ಣುಗಳನ್ನು ಕಳುಹಿಸುತ್ತಾರೆ. ‘ಈ ವ್ಯವಸ್ಥೆಯೊಂದು ಶಾಪ. ನಿಂಬೆ, ಬೆಣ್ಣೆಹಣ್ಣುಗಳನ್ನು ಇಲ್ಲಿ ಬೆಳೆಯುತ್ತಿದ್ದರೂ ಹೊರಗಿನಿಂದ ತರಿಸಬೇಕಾದ ಸ್ಥಿತಿ! ಸರಿಸುಮಾರು ಒಂದೂವರೆ ಮಿಲಿಯ ಪೌಂಡ್ ಬೆಣ್ಣೆಹಣ್ಣು ಆಮದಾಗುತ್ತದೆ. ಇದರ ದುಪ್ಪಟ್ಟು ಹಣ್ಣು ಇಲ್ಲಿ ಹಾಳಾಗಿ ಮಣ್ಣು ಸೇರುತ್ತದೆ.’ ಹವಾಯ್‌ಯ ಹಣ್ಣುಕೃಷಿಕ ಕೆನ್ ಲವ್ ಪುತ್ತೂರಿಗೆ ಬಂದಿದ್ದಾಗ ತಮ್ಮೂರಿನ ಕತೆಯನ್ನು ವಿವರಿಸಿದರು.

ಬಿಗು ಕಾನೂನು ಹವಾಯ್‌ಯ ಹಣ್ಣುಬದುಕನ್ನು ‘ಹಣ್ಣುಗಾಯಿ’ ಮಾಡಿದೆ. ನಾಲ್ಕೈದು ದಶಕಗಳ ಹಿಂದೆ ಹಣ್ಣುಗಳನ್ನು ತಿನ್ನುವ ಪ್ರಮಾಣ ಎಷ್ಟಿತ್ತೋ, ಅದರ ಕಾಲಂಶಕ್ಕೆ ಇಳಿದಿದೆ. ನೂರಕ್ಕೂ ಮಿಕ್ಕಿ ಬಾಳೆ ತಳಿಗಳಿದ್ದುವು. ಈಗಿರುವುದು ಐವತ್ತರ ಹತ್ತಿರ. ಎಲ್ಲಾ ಹಣ್ಣುಗಳಿಗೂ ಇದೇ ಜಾತಕ. ಮಾರಾಟಾವಕಾಶಗಳು ಇಲ್ಲದಿರುವುದರಿಂದ ರೈತರಿಗೂ ಸಹಜ ಅನಾದರ.

ಹಣ್ಣುಗಳ ವೈವಿಧ್ಯ ನೋಡಿ. ಲಾಂಗಾನ್, ರಂಬುಟಾನ್, ಕುಮ್‌ಕಾಟ್, ಮೈಸೂರು ಬೆರಿ, ರಂಗ್‌ಪುರ್ ಲಿಂಬೆ, ದಾಲ್ಚಿನ್ನಿ, ದೀವಿಗುಜ್ಜೆ, ಜಂಬು, ಅಬಿಯು, ಮೊಂಬಿನ್, ೨೫ ಜಾತಿಯ ಬೆಣ್ಣೆಹಣ್ಣು, ಜಬೋಟಿಕಾಬಾ, ಫ್ಯಾಶನ್‌ಫ್ರುಟ್, ಸ್ಟಾರ್‌ಫ್ರುಟ್..ಹೀಗೆ ಎಷ್ಟೋ.

ಕೋನಾ – ಹವಾಯ್‌ಯ ಪಶ್ಚಿಮ ಭಾಗದಲ್ಲಿರುವ ಪ್ರದೇಶ. ಮುಖ್ಯ ಕೃಷಿ ಕಾಫಿ. ‘ಕೋನಾ ಕಾಫಿ’ ಅಂತಲೇ ಪ್ರಸಿದ್ಧ. ನಮ್ಮೂರಿನಲ್ಲಿದ್ದಂತೇ ಕೃಷಿ ಸಮಸ್ಯೆಗಳು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದ ಕೋನಾಕ್ಕೂ ಶನಿದೆಸೆ! ಪರಿಣಾಮ, ತಲ್ಲಣಗೊಂಡ ರೈತನ ಬದುಕು. ಆರ್ಥಿಕ ಏರುಪೇರು. ಉದ್ಯೋಗಾಕಾಂಕ್ಷಿ ತರುಣರು ದೂರದೂರು ಸೇರಿದರು. ಉಳಿದವರು ‘ಒದ್ದಾಡುತ್ತಾ’ ದಿನ ಕಳೆಯುತ್ತಿದ್ದರು. ಕಂಪೆನಿಗಳು ಮಹಡಿಯನ್ನೇರಿಸಿದುವು! ಹಣ್ಣು ಸಮಸ್ಯೆ, ಕಾಫಿ ಸಮಸ್ಯೆ ಜತೆಜತೆಗೆ ಬಂದುದಲ್ಲದಿದ್ದರೂ, ಒಟ್ಟಾರೆಯಾಗಿ ಕೃಷಿ ಬದುಕಿನಲ್ಲಿ ನಗುವಿಲ್ಲ.

‘ನಮ್ಮಲ್ಲಿ ಹೇರಳ ಸಂಪನ್ಮೂಲವಿದ್ದರೂ, ಕಂಪೆನಿಗಳು ಕೊಡುವ ಹಣ್ಣುಗಳಿಗೆ ಕೈಯೊಡ್ಡಬೇಕಾದ ದುರಂತ ನಮ್ಮದು – ಎನ್ನುತ್ತಾರೆ. ಹೆಚ್ಚೆಚ್ಚು ಹಣ್ಣುಗಳು ಆಮದಾದಷ್ಟು ರೈತರ ಬದುಕು ದುಸ್ತರವಾಗುತ್ತದೆ. ರಫ್ತಿಗಿರುವ ಮಾರಾಟ ಕಾನೂನಿನಿಂದಾಗಿ ಜನಸಾಮಾನ್ಯರೂ ವಂಚಿತರಾಗುತ್ತಿದ್ದಾರೆ. ಸ್ಥಳೀಯವಾಗಿ ಮಾರುಕಟ್ಟೆ ಸೃಷ್ಟಿಸುವುದು ಇದಕ್ಕಿರುವ ದಾರಿ.  ‘ಕಂಪೆನಿಗಳೊಂದಿಗೆ ಗುದ್ದಾಡುವುದು ಕಷ್ಟ. ಅಪರೂಪದ ಹಣ್ಣುಗಳನ್ನು ಬೆಳೆದು ನಾವೇ ಮಾರುಕಟ್ಟೆ ಮಾಡಿದರೆ?’ ಕೆನ್ ಲವ್ ಮನಸ್ಸಿನೊಳಗೆ ‘ಸ್ವದೇಶಿ ಆಂದೋಳನ’ದ ಮರಿ!

ನಿಜಾರ್ಥದ ಸ್ವದೇಶಿ ಚಿಂತ

‘ಚಿಕಿತ್ಸೆ ಆಗಬೇಕಾದುದು ಎಲ್ಲಿ’ ಕೆನ್ ಪಟ್ಟಿ ಮಾಡಿದರು. ಮೊದಲಿಗೆ ಕಳಕೊಂಡಿರುವ ತಳಿಗಳ ಪತ್ತೆ. ಅವುಗಳನ್ನು ಪುನಃ ಅಭಿವೃದ್ಧಿ ಪಡಿಸುವುದು. ವರ್ಷಪೂರ್ತಿ ಹಣ್ಣುಗಳನ್ನು ಪಡೆಯುವ ಬೆಳೆ ವೈವಿಧ್ಯದ ಯೋಜನೆ-ಯೋಚನೆ. ಸೋತು ಕಂಗಾಲಾದ ಕೃಷಿಕನ ಬೆನ್ನು ತಟ್ಟಿ ಪುನಃ ಕೃಷಿಗೆ ಇಳಿಸುವುದು, ಸ್ಥಳೀಯವಾಗಿ ಮಾರುಕಟ್ಟೆ, ಅದರಲ್ಲೂ ರೈತನೇ ವ್ಯಾಪಾರಿಯಾಗಬೇಕು ಎನ್ನುವತ್ತ ಒಲವು ಮತ್ತು ಕೃಷಿ ಪ್ರವಾಸೋದ್ಯಮ..ಕೆನ್ ತಲೆಯಲ್ಲಿ ಇಂತಹ ಹಲವು ವಿಚಾರಗಳ ಗಿರ್ಕಿ.

ವಿಶ್ವವಿದ್ಯಾಲಯದ ವರಿಷ್ಠರೊಂದಿಗೆ ಅಧ್ಯಯನ. ಹೋಟೆಲಿನ ಮುಖ್ಯ ಚೆಫ್ (ಮುಖ್ಯ ಬಾಣಸಿಗ)ಗಳೊಂದಿಗೆ ಮುಖಾಮುಖಿ. ಬೇರೆ ಬೇರೆ  ಋತುಗಳಲ್ಲಿ ಸಿಗುವ ಹಣ್ಣುಗಳ ದಾಖಲಾತಿ. ಮೊದಲೆಲ್ಲಾ ತಮಗೆ ಬೇಕಾದ ಹಣ್ಣುಗಳನ್ನು ಆರ್ಡರ್ ಕೊಟ್ಟು ತರಿಸಬೇಕಿತ್ತು.  ಸ್ಥಳೀಯವಾಗಿ ಸಿಗ್ತದೆ ಅಂತಾದಾಗ ಅವರೂ ಹೆಚ್ಚು ಸ್ಪಂದಿಸಿದರು. ಎಲ್ಲಾ ಋತುಗಳಲ್ಲಿ ಹಣ್ಣು ಕೊಡುವ ಹನ್ನೆರಡು ವಿವಿಧ ಹಣ್ಣಿನ ಮರಗಳನ್ನು ಬೆಳೆಯಲು ಕೃಷಿಕರಿಗೆ ಶಿಫಾರಸು ಮಾಡಿದರು. ಜತೆಗೆ ಮಾರುಕಟ್ಟೆಯ ಆಶ್ವಾಸನೆಯೂ. ‘ಇದರಿಂದ ಕೃಷಿಕರು ಮತ್ತು ಚೆಫ್‌ಗಳು, ಕೃಷಿಕರು ಮತ್ತು ವ್ಯಾಪಾರಿಗಳು – ಇವರೊಂದಿಗೆ ನೇರ ಸಂಪರ್ಕಕ್ಕೆ ಅನುಕೂಲ’ ಎನ್ನುತ್ತಾರೆ. ಇದು ಕೆನ್ ಅವರ ‘೧೨ ಟ್ರೀಸ್ ಪ್ರಾಜೆಕ್ಟ್’.

ಈ ಯೋಜನೆಯನ್ನು ಮನದಟ್ಟು ಮಾಡಿದಾಗ ರೈತರು ಸಂತೋಷದಿಂದ ಸ್ವೀಕರಿಸಿದರು. ಕೆನ್ ಸ್ವತಃ ತಾವು ಬೆಳೆದು ತೋರಿಸಿದರು. ಅದು ಇತರ ರೈತರಿಗೆ ಆತ್ಮವಿಶ್ವಾಸ ತುಂಬಿತು. ನಿಜಕ್ಕೂ ಇದೊಂದು ಮೌನ ಆಂದೋಳನ. ನಮ್ಮಲ್ಲಿ ಆಂದೋಳನ, ಚಳವಳಿ ಅಂದರೆ ‘ಬೀದಿಯಲ್ಲೇ ನಡೆದು ಒಂದಷ್ಟು ಗಲಾಟೆ-ಗುಲ್ಲು-ಸುದ್ದಿಯಾಗಬೇಕು’ ಎಂಬ ಭಾವನೆಯಿದೆ. ಇದಕ್ಕೆ ಅಪವಾದ ಹವಾಯ್.

ಮರಿಮಕ್ಕಳನ್ನು ಸಿಟಿ ಸೆಳೆಯಲು ನಾನು ಬಿಡುವುದಿಲ್ಲ’.

ಕೆನ್ ಲವ್ ಹುಟ್ಟಿದ್ದು ಚಿಕಾಗೋದಲ್ಲಿ. ಬಾಲ್ಯದಿಂದಲೇ ಹಣ್ಣುಪ್ರಿಯ. ಜಪಾನಿನ ವಿವಿಯಲ್ಲಿ ಪದವಿ. ಹವಾಯ್‌ಯ ಸೌಂದರ್ಯಕ್ಕೆ ಮಾರುಹೋಗಿ ಅಲ್ಲೇ ಠಿಕಾಣಿ. ಯು.ಎಸ್.ಎ.ಯಲ್ಲಿ ಮೂರು ದಶಕಗಳ ಕಾಲ ಫೋಟೋ ಜರ್ನಲಿಸ್ಟ್ ಆಗಿ ದುಡಿತ. ಮಡದಿ ಮ್ಯಾಗಿ. ೧೯೮೪ರಿಂಧ ಪೂರ್ಣಾವಧಿ ಕೃಷಿಕ. ಅವರ ಒಬ್ಬ ಮಗ ರಾಬ್ ಮುಖ್ಯ ಬಾಣಸಿಗ. ಅಡಿಕೆ ಪತ್ರಿಕೆ ಎರಡು ವರುಷ ಹಿಂದೆ ಕೆನ್ ಅವರ ನುಡಿಚಿತ್ರವನ್ನು ಬರೆಯಿತು. ಹೀಗೆ ಆರಂಭವಾದ ಕೊಂಡಿ ಅವರನ್ನು ಭಾರತಕ್ಕೆ, ಅದರಲ್ಲೂ ಕನ್ನಾಡಿಗೆ ಕರೆದುತಂದಿತು. ಸ್ಥಳೀಯ ಗಿಡಗೆಳೆತನ ಸಂಘ ‘ಸಮೃದ್ಧಿ’ ವಿಶೇಷ ಕಾರ್ಯಕ್ರಮ ಏರ್ಪಡಿಸಿತ್ತು. ಸೇಡಿಯಾಪು ಜನಾರ್ದನ ಭಟ್, ಡಾ.ಎಲ್.ಸಿ.ಸೋನ್ಸ್ ಅವರ ಹಣ್ಣಿನ ತೋಟಕ್ಕೆ ಕೆನ್ ಅವರು ಭೇಟಿಯಿತ್ತರು. ಕೇರಳದ ವಯನಾಡಿನ ‘ಉರವು’ ಏರ್ಪಡಿದ ಹಲಸು ಮೇಳದಲ್ಲಿ ಕೆನ್ ಅವರು ಹೇಳಿದ್ದೇನು ಗೊತ್ತೇ – ‘ನನ್ನ ಮರಿ ಮಕ್ಕಳನ್ನು ಸಿಟಿ (ನಗರ) ಸೆಳೆಯಲು ನಾನು ಬಿಡುವುದಿಲ್ಲ’.

ಸೈನ್‌ಬೋರ್ಡು

ಬಾಳೆಹಣ್ಣಿನ ಮಾರುಕಟ್ಟೆ ಕುದುರಿಸಲು ಏನಾದರೂ ತಂತ್ರ ಬೇಕಾಗಿತ್ತು. ಅಲ್ಲಿನ ಮಾಮೂಲಿ ಸಂತೆ ಮತ್ತು ರೈತ ಸಂತೆಯಲ್ಲಿ ‘ಸೈನ್‌ಬೋರ್ಡ್’ ಗಳನ್ನು ತಯಾರಿಸಿ ತೂಗುಹಾಕಿದರು. ಆಸಕ್ತರಿಗೆ ಮಾರಾಟಕ್ಕಿಟ್ಟರು. ಹವಾಯ್‌ಯಲ್ಲಿ ಬೆಳೆದ ಹಣ್ಣುಗಳ ಕುರಿತು ಚಿತ್ರವನ್ನು ಅಚ್ಚುಹಾಕಿಸಿ, ಅದು ಯಾವ ತಳಿ, ಯಾವ ಕಾಲದಲ್ಲಿ ಹಣ್ಣುಬಿಡುತ್ತದೆ ವಿವರಗಳನ್ನು ಪ್ರಿಂಟ್ ಮಾಡಿದರು. ‘ಖರೀದಿಸುವವನಿಗೆ ಇಳುವರಿಯ ಕಾಲ ತಿಳಿಸುವ ಕೈಮರ ಕೈಯಲ್ಲೇ ಇರುವುದರಿಂದ ಯಾವ ಗೊಂದಲವೂ ಇರುವುದಿಲ್ಲ’ ಎನ್ನುತ್ತಾರೆ ಕೆನ್.

ಈ ತಂತ್ರವನ್ನು ಇತರ ಹಣ್ಣುಗಳಿಗೂ ಬಳಸಿದ್ದಾರೆ. ಬೆಣ್ಣೆಹಣ್ಣು, ಅಂಜೂರ ಮತ್ತು ಇತರೆಲ್ಲಾ ಹಣ್ಣುಗಳ ಚಿತ್ರ ಕ್ಲಿಕ್ಕಿಸಿ, ಅದರೆಲ್ಲಾ ಚರಿತ್ರೆಯನ್ನು ಬರೆದು ಹಣ್ಣುಗಳೊಂದಿಗೆ ಅಂಗಡಿಯಲ್ಲಿಟ್ಟರೆ, ಗ್ರಾಹಕನನ್ನು ಆಕರ್ಷಿಸುತ್ತದೆ. ಪ್ರತೀಯೊಂದು ಹಣ್ಣುಗಳಿಗೂ ರೈತನದ್ದೇ ಆದ ಬ್ರಾಂಡ್ ಇರುವುದರಿಂದ ನ್ಯಾಯವಾದ ಬೆಲೆ ರೈತನಿಗೂ ಸಿಕ್ಕಂತಾಗುತ್ತದೆ. ಆಸಕ್ತರು ಸೈನ್‌ಬೋರ್ಡುಗಳನ್ನು ಖರೀದಿಸಲೂ ಅವಕಾಶವಿದೆ. ಇಂತಹ ಸೈನ್‌ಬೋರ್ಡ್‌ಗಳಿಂದ ಚೆಫ್‌ಗಳಿಗೆ ತುಂಬಾ ಸಹಾಯವಾಗಿದೆ. ಪ್ರವಾಸಿಗರಿಗೂ ಅನುಕೂಲ.

ಕೆನ್ ಅವರು ಯಾವುದೇ ‘ಅನುದಾನಿತ’ ಬಂಡವಾಳದಿಂದ ಈ ಕೆಲಸ ಮಾಡಿಲ್ಲ. ಸಮಾನಾಸಕ್ತರು ಒಂದಷ್ಟು ವೆಚ್ಚವನ್ನು ಭರಿಸಿದ್ದಾರೆ. ಎಲ್ಲಕ್ಕೂ ಮುಖ್ಯವಾಗಿ ತನ್ನೂರಿನ ‘ಅನಿವಾರ್ಯ ತುಡಿತ’. ಇಷ್ಟೆಲ್ಲಾ ಹಣ್ಣುಗಳನ್ನು ಕ್ಲಿಕ್ಲಿಸಲು ಕೆನ್ ಓಡಿದ ದೂರ ಕೇವಲ ಇಪ್ಪತ್ತು ಕಿಲೋಮೀಟರ್. ಸಮಯ ಮಾತ್ರ ನಾಲ್ಕೈದು ವರುಷ ತಗುಲಿದೆ. ಗಿಡ ಬೆಳೆದು, ಹೂವಾಗಿ, ಹಣ್ಣಾಗುವ ತನಕ!

ಮೌಲ್ಯವರ್ಧನೆ

ಇವಿಷ್ಟು ಒಂದು ಭಾಗವಾದರೆ ಮೌಲ್ಯವರ್ಧನೆ ಮತ್ತೊಂದು ಮುಖ. ಹವಾಯ್‌ಗೆ ಬರುವ ಪ್ರವಾಸಿಗರಿಗೆ ತನ್ನೂರಿನ ಹಣ್ಣುಗಳನ್ನು, ಸಾಂಪ್ರದಾಯಿಕ ತಿಂಡಿಗಳನ್ನು, ಮೌಲ್ಯವರ್ಧಿತ ಉತ್ಪನ್ನಗಳನ್ನು ‘ರುಚಿ ಹಿಡಿಸಿ’ದ್ದಾರೆ ಕೆನ್. ಪ್ರವಾಸಿ ತಾಣಗಳಲ್ಲಿ ಇಂತಹ ಉತ್ಪನ್ನಗಳನ್ನು ಸಿಗುವಂತೆ ಮತ್ತು ಹೋಂ ಸ್ಟೇ ಮೂಲಕ ಉಳಕೊಳ್ಳುವವರು ತಾವು ಬಯಸಿದ ಉತ್ಪನ್ನಗಳನ್ನು ರೈತರಿಂದಲೇ ಖರೀದಿಸುವಂತಾಗಲು ‘ಕೊಂಡಿ’ ವ್ಯವಸ್ಥೆ. ‘ಇದು ತುಂಬಾ ಕ್ಲಿಕ್ ಆಯಿತು’ ಎನ್ನುತ್ತಾರೆ ಕೆನ್.

ಸ್ವತಃ ಕೆನ್ ತಮ್ಮನೆಯಲ್ಲಿ ಎಪ್ಪತ್ತೈದಕ್ಕೂ ಮಿಕ್ಕಿ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುತ್ತಾರೆ. ಸ್ಥಳೀಯ ಅಂಗಡಿ, ವಾರದ ರೈತ ಸಂತೆಯಲ್ಲಿ ಮಾರಾಟ. ಒಣ ಅಂಜೂರ, ಜೇನಿನಲ್ಲಿ ಹಾಕಿದ ಒಣ ಹಲಸಿನ ಹಣ್ಣು, ಬಾಳೆಹಣ್ಣಿನ ಕೆಚಪ್ – ಇವರ ಫೇಮಸ್ ಉತ್ಪನ್ನಗಳು.

ಹವಾಯ್‌ಯಲ್ಲಿ ಭಾರತೀಯ ಹೋಟೆಲ್ ಇಲ್ಲ. ಪ್ರವಾಸಿ ಭಾರತೀಯರಿಗಾಗಿ ಕೆನ್ ಉಪ್ಪಿನಕಾಯಿ (ಅಚಾರ್) ತಯಾರಿಸುತ್ತಾರೆ. ಐಸ್‌ಕ್ರೀಂಗಳಿಗೆ ಸೇರಿಸಬಹುದಾದ ಸಿರಪ್, ಸುಕೇಳಿಗಳಿಗೆ ತಾವೇ ಒಡೆಯರು! ಒಣ ಬಾಳೆಹಣ್ಣು, ಹಲಸಿನ ವೆರಟ್ಟಿಗಳನ್ನು ಕೇಳಿ ಬರುವ ಗಿರಾಕಿಗಳಿದ್ದಾರೆ. ತಾಜಾ ಹಣ್ಣುಗಳನ್ನು ಆಹಾರದ ರೂಪದಲ್ಲಿ ಕೊಡುವ ಪ್ರಜ್ಞೆ ಹವಾಯ್‌ಯಲ್ಲಿ ಮೂಡುತ್ತಿದೆ.

‘ರೈತರಿಗೆ ತಾನು ಮಾಡಿ ನೋಡಿದ ಅನುಭವವನ್ನು ಹೇಳುವುದು, ಅವರಿಂದ ಮಾಡಿಸುವುದು – ಇದರಿಂದಾಗಿ ಹಣ್ಣುಗಳಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಯಿತು. ಬಹುತೇಕ ಬೆಳೆಗಾರರು ತೇವೇ ವ್ಯಾಪಾರಿಗಳಾಗಿದ್ದಾರೆ. ಹಣ್ಣಿಗಾಗಲೀ, ಉತ್ಪನ್ನಗಳಿಗಾಗಲೀ ತಂತಮ್ಮ ಬ್ರಾಂಡನ್ನಿಟ್ಟು ಮಾರುತ್ತಾರೆ. ಒಂದು ಕಾಲಘಟ್ಟದಲ್ಲಿ ಕೃಷಿಗೆ ಏನು ಅನಾದರ ಇತ್ತೋ, ಅದೀಗ ಮಾಯವಾಗಿ ಆತ್ಮವಿಶ್ವಾಸ ಬಂದಿದೆ’ ಎನ್ನುತ್ತಾರೆ ಕೆನ್.

ಸ್ವತಃ ಬೇರೆ ಕೃಷಿಕರ ತೋಟಗಳನ್ನು ಕೆನ್ ಸಂಪರ್ಕಿಸುತ್ತಲೇ ಇದ್ದಾರೆ. ಪತ್ರಕರ್ತನಾಗಿದ್ದಾಗ ತಿರುಗಿದ ಊರಲ್ಲಿನ ವಿಶೇಷ ಜಾತಿಯ ಹಣ್ಣುಗಳನ್ನು ಅರಸಿ ಹೋಗಿ ಕುಡಿಗಳನ್ನು ತಂದು ಅಭಿವೃದ್ಧಿ ಮಾಡುತ್ತಲಿದ್ದಾರೆ. ಇದರಿಂದಾಗಿ ಹವಾಯ್‌ಯಲ್ಲಿ ಕೆನ್ ಅವರ ಕೆಲಸಗಳು ಜನರಿಗೆ ವಿಶ್ವಾಸ ತಂದಿಟ್ಟಿತು.

ರೈತನನ್ನು ಕೃಷಿಯಲ್ಲುಳಿಯಲು ಕೆನ್ ಮಾಡಿದ ತಂತ್ರಗಳು ಅಲ್ಲಿನ ರೈತರಿಗೆ ವರವಾದುವು. ನಿಜಕ್ಕೂ ‘ಸ್ವದೇಶಿ ಆಂದೋಳನ’ವೆಂದರೆ ಇದೇ ತಾನೆ! ಈ ಆಂದೋಳಕ್ಕೆ ಅವಧಿಬಾಧಕಗಳಿಲ್ಲ. ನಿರಂತರ ನಡೆಯುತ್ತಲೇ ಇರುತ್ತದೆ. ನಿರಂತರತೆ ಇದ್ದಷ್ಟೂ ಬದುಕು ಹಸನು.