ಹವ್ಯಕ ಹಿನ್ನೆಲೆ

ಕನ್ನಡ ಜನಕೋಟಿಯ ಮಧ್ಯದಲ್ಲಿ ಹವ್ಯಕರು ಅತ್ಯಂತ ಚಿಕ್ಕ ಸಂಖ್ಯೆಯ ಸಮುದಾಯದವರು. ಸುಮಾರು ಸಾವಿರದೇಳುನೂರು ವರ್ಷಗಳ ಸುದೀರ್ಘ ಪ್ರಾಚೀನ ಪರಂಪರೆಯನ್ನು ಹೊಂದಿದವರು. ಅಚ್ಚ ಕನ್ನಡಿಗರಾದ ಹವ್ಯಕರು ಇಂದು ಕರ್ನಾಟಕದಲ್ಲಷ್ಟೇ ಅಲ್ಲದೆ ದೇಶದ ನಾನಾ ಭಾಗಗಳಲ್ಲಿಯೂ ಹೊರದೇಶಗಳಲ್ಲಿಯೂ ನೆಲೆಸಿದ್ದಾರೆ. ಕರ್ನಾಟಕದಲ್ಲಿರುವ ಈ ಜನಾಂಗ ಕ್ರಿ. ಶ. ಮೂರನೇ ಶತಮಾನದಿಂದಲೂ ಈ ಕಾಡಿನಲ್ಲಿ ಗೌರವಾನ್ವಿತರಾಗಿ ಬಾಳಿ ಬದುಕುತ್ತಿರುವರು. ಉತ್ತರ ಭಾರತದಿಂದ ಶತಮಾನಗಳ ಹಿಂದೆ ಇಲ್ಲಿಗೆ ವಲಸೆ ಬಂದ ಹವ್ಯಕರ ಮೂಲಸ್ಥಾನದ ಬಗೆಗೆ ಖಚಿತವಾದ ನೆಲೆ ದೊರಕಿರುವುದಿಲ್ಲ. ಹವ್ಯಕರ ಮೂಲಸ್ಥಾನವನ್ನು ಕುರಿತು ಇದುವರೆಗೆ ಮೂಡಿಬಂದ ವಿಚಾರಗಳನ್ನು ಹೀಗೆ ಕ್ರೋಢೀಕರಿಸಬಹುದು.

೧. ಉತ್ತರ ಪ್ರದೇಶದ ಅಹಿಚ್ಛತ್ರ

೨. ಆಂಧ್ರದ ಗೋದಾವರಿ ತೀರದ ಅಹಿಚ್ಛತ್ರ

೩. ಅಸ್ಸಾಮ

೪. ಗುಜರಾತ್

೫. ಕೇರಳ

೬. ತಮಿಳುನಾಡು

೭. ಗೋರಾಷ್ಟ್ರ ಗೋಕರ್ಣ ಮಂಡಲ

ಇವುಗಳಲ್ಲಿ ಮೊದಲನೆಯದನ್ನು ಬಿಟ್ಟರೆ ಉಳಿದವುಗಳಿಗೆ ಹಲಕೆಲವು ಹೋಲಿಕೆಗಳ ಊಹೆಯೇ ಆಧಾರ. ಅಡಿಗೆ ಬೇಸಾಯವೇ ಹವ್ಯಕರಲ್ಲಿ ಪ್ರಧಾನವಾದ್ದರಿಂದ ಅದರಂತೆ ಇರುವ ಆಸ್ಸಾಂನಿಂದ ಹವ್ಯಕರು ಆಗಮಿಸಿರಬೇಕು. ಕೇರಳ, ತಮಿಳುನಾಡು, ಗುಜರಾತ್ ಭಾಗದ ಬ್ರಾಹ್ಮಣರಲ್ಲಿಯ ರೀತಿ ರಿವಾಜುಗಳ ಸಾಮ್ಯದಿಂದ ಇದೇ ಮೂಲಸ್ಥಾನವಿರಬೇಕು ಎಂದೆಲ್ಲಾ ಊಹಿಸಲಾಗಿದೆ. ಇನ್ನು ಆಂಧ್ರದ ಗೋದಾವರಿ ತೀರದ ಅಹಿಚ್ಛತ್ರ ಮೂಲಸ್ಥಾನವೆನ್ನುವುದಕ್ಕೆ ಆಧಾರವೇ ಇಲ್ಲ. ಆಂಧ್ರದಲ್ಲಿ ಅಹಿಚ್ಛತ್ರವೆಂಬ ಗ್ರಾಮವೋ ಪ್ರದೇಶವೋ ಇದ್ದುದಕ್ಕೆ ಯಾವ ಉಲ್ಲೇಖವೂ ಇರುವುದಿಲ್ಲ. ಚಂದ್ರಗುತ್ತಿಯಿಂದ ಚಂದ್ರಗಿರಿ, ಗೋಕರ್ಣದಿಂದ ಬ್ರಹ್ಮಾವರ ಇವುಗಳ ಮಧ್ಯಭಾಗವು ಹೈಗನಾಡು, ಹವ್ಯದೇಶ ಎಂದು ಹಳೆಯದಾದ ಉಲ್ಲೇಖಗಳಿವೆ.

 

ಕ್ರಿ.ಶ. ಮೂರನೆ ಶತಮಾನದ ಕೊನೆಯ ಭಾಗದಲ್ಲಿ ಬನವಾಸಿ (ವೈಜಯಂತಿ ಪುರ) ವನ್ನಾಳಿದ ಕದಂಬ ಕುಲತಿಲಕ ಮಯೂರವರ್ಮನು (ಕಾಲ ೨೮೦-೩೩೦) ಉತ್ತರದ ಅಹಿಚ್ಛತ್ರದಿಂದ (ಬಾಲಿ ಸಮೀಪದಲ್ಲಿರುವ ಈಗಿನ ರೋಹಿಲ್ ಖಂಡದ ರಾಮನಗರ) ವೈದಿಕ ಬ್ರಾಹ್ಮಣರನ್ನು ಕರ್ನಾಟಕಕ್ಕೆ ಕರೆದುಕೊಂಡು ಬಂದು ತನ್ನ ರಾಜ್ಯದಲ್ಲಿ ಇವರಿಂದ ಯಜ್ಞಯಾಗಾದಿಗಳನ್ನು ಮಾಡಿಸಿದನಲ್ಲದೆ ಇವರಿಗೆ ಅಗ್ರಹಾರಗಳನ್ನು, ಅನೇಕ ಕೃಷಿಯೋಗ್ಯ ಭೂಮಿಗಳನ್ನು ಉಂಬಳಿಯಾಗಿ ಕೊಟ್ಟು ಇಲ್ಲಿಯೇ ಇರಿಸಿಕೊಂಡನು. ತನ್ನ ರಾಜ್ಯದ ಶ್ರೇಯೋಭಿವೃದ್ಧಿಯನ್ನು ಚಿಂತಿಸಿದ ಮಯೂವರ್ಮ ಕಶ್ಯಪನ ಸಲಹೆಯಂತೆ ಅಹಿಚ್ಛತ್ರದಿಂದ ಬ್ರಾಹ್ಮಣರನ್ನು ಕರೆತಂದನು. ಮೊದಲಿಗೆ ಹೀಗೆ ಕರೆತಂದ ಮೂವತ್ತೆರಡು ಸ್ಮಾರ್ತ ಬ್ರಾಹ್ಮಣ ಕುಟುಂಬದವರೇ ಹವ್ಯಕರೆಂದು ಪ್ರಸಿದ್ಧಿಯಾಗಿದ್ದಾರೆ.

ಮಯೂರವರ್ಮನು ಅಹಿಚ್ಛತ್ರದಿಂದ ಕರೆದುಕೊಂಡು ಬಂದ ಬ್ರಾಹ್ಮಣರೆಂಬುದಕ್ಕೆ ಉತ್ತರ ಸಹ್ಯಾದ್ರಿ ಖಂಡದಲ್ಲಿ-

“ತತ್ರಾವೇ ದ್ರಾವಿಡರಾನ್ ಅಹಿಚ್ಛತ್ರ ಸಮಾಗತಾನ್ |
ಸಪ್ತಗೋತ್ರ ಮುತಾಂಶ್ಚೈವ ಯಾಜುಹಾನ್ ಬಹುಶೋದ್ಧಿಜಾನ್ ||
ಋಕ್ ಸಾಮ ನಿರತಾನ ದಾಂತಾನ್ ಕ್ವಚಿದ್ರಬ್ರಾಹ್ಮಣಪುಂಗವಾನ್ ||
(ಅಧ್ಯಾಯ ೩೩ ಶ್ಲೋಕ ೭)

ಮಯೂರವರ್ಮನು ಸಪ್ತಗೋತ್ರಗಳಿಂದ ಕೂಡಿದ ಯಜುರ್ವೇದಿಗಳನ್ನು ಅಧಿಕ ಸಂಖ್ಯೆಯಲ್ಲಿಯೂ ಋಗ್ವೇದಿಗಳನ್ನು, ಸಾಮವೇದಿಗಳನ್ನು ಅಲ್ಪ ಸಂಖ್ಯೆಯಲ್ಲಿಯೂ ಕರೆದುಕೊಂಡು ಬರುತ್ತಾನೆ. ರಾಜನು ಅಹಿಚ್ಛತ್ರದಿಂದ ಕರೆತರುವಾಗ ಈ ಬ್ರಾಹ್ಮಣರಿಗೆ ಹವ್ಯಕರೆಂಬ ಹೆಸರಿರಲಿಲ್ಲ. ಅನಂತರದಲ್ಲಿ ಬಂದ ಹೆಸರು ಇದು. ಇವರಿಗೆ ಹವ್ಯಕ, ಹವೀಕ, ಹವಿಗ, ಹೈಗ ಮುಂತಾದ ನಾಮ ಪ್ರಭೇದಗಳಿರುವುದು ಕಂಡು ಬರುತ್ತದೆ. ಹವ್ಯಕವೆಂಬುದು ಇವರಿಗೆ ದೇಶವಾಚಕವಾಗಿ, ವೃತ್ತಿಸೂಚಕವಾಗಿ ಗೌರವಾರ್ಥಕವಾಗಿ ಬಂದಿದ್ದೆಂಬುದಕ್ಕೆ ಆಧಾರಗಳಿದ್ದರೂ ವೃತ್ತಿಸೂಚಕವೇ ಹೆಚ್ಚು ಸಮಂಜಸವೆಂದು ಹೇಳಬಹುದು.

ಹವ್ಯನಿಯತ್ರದೀಯಂತೆ ದೇವತಾಭ್ಯೋ ವಿಶೇಷತಃ |
ತತೋಹವ್ಯ ಇತಿಖ್ಯಾತಃ ದೇಶೋಗೋರಾಷ್ಟ್ರನಾಮಕಃ ||

ಹವ್ಯಕಾರ್ಯದಲ್ಲಿ ಸದಾನಿರತರಾದ್ದರಿಂದ ಅಂದರೆ ಯಜ್ಞಯಾಗಾದಿಗಳನ್ನು ಮಾಡುತ್ತಾ ಹವಿರ್ಭಾಗಗಳನ್ನು ದೇವತೆಗಳಿಗೆ ನೀಡಿ ಅವರನ್ನು ಸಂತೃಪ್ತಿಪಡಿಸುತ್ತಿದ್ದರಿಂದ ಯಜ್ಞಯಾಗಾದಿಗಳೇ ಆ ಕಾಲದಲ್ಲಿ ಮುಖ್ಯವೃತ್ತಿಯಾದ ಕಾರಣ ಇವರಿಗೆ ಹವ್ಯಕ ಹೆಸರು ಬರಲು ಕಾರಣವಾಯಿತು. ಹವ್ಯಾದಿಗಳು ಆ ಕಾಲದಲ್ಲಿ ನಿರಂತರವಾಗಿ ನಡೆಯುತ್ತಿದ್ದರಿಂದಲೇ ಗೋರಾಷ್ಟ್ರಪ್ರದೇಶಕ್ಕೆ ’ಹವು’ ದೇಶವೆಂಬುದು ಬಂದಿರುತ್ತದೆ. ಶ್ರೀ ಎಂ. ಗೋವಿಂದ ಪೈಗಳು ಪರಶುರಾಮ ಸೃಷ್ಟಿಯ ಸಪ್ತಕೊಂಕಣದೇಶವನ್ನು ಹೆಸರಿಸುವಾಗ ಪಶುದೇಶವೆಂದು ಹೆಸರಿಸಿದ್ದಾರೆ.

ಸಹ್ಯಪಾದೇ ಪರಶುರಾಮ ಭೂಮಿಃ ಸಾಸಪ್ತಕೊಂಕಣಾಖ್ಯಃ |
ಕೂಪಕೇರಲ ಮೂಷಿಕ ಅಲೂಪ ಪಶು ಕೊಂಕಣ ಪರಕೊಂಕಣ ||
ಭೇದೇನ ದಕ್ಷಿಣೋತ್ತರಾಯಾ ಮೇನಚವ್ಯವಸ್ಥಿತಾ ||

ಪಶುದೇಶ ಹವ್ಯದೇಶ ಅಥವಾ ಹೈನಾಡೇ ಆಗಿರುತ್ತದೆ. ಪಶುದೇಶವೆಂದರೆ ಹಸು (ಗೋವು)ಗಳಿಂದ ತುಂಬಿದ ದೇಶ. ಹವಿಸ್ಸಿಗೆ ಬೇಕಾದ ಹಾಲು, ಮೊಸರು, ತುಪ್ಪ, ಸಮೃದ್ಧಿಯಾಗಿ ಸಿಗುವ ದೇಶ ಎಂದರ್ಥ. ಪಶು ಶಬ್ದ ಮೇಲೆ ಸ್ವ ಅರ್ಥದಲ್ಲಿ ಕ ಪ್ರತ್ಯಯ ಸೇರಿಸಿ ಪಶುಕ ಎಂದಾಯಿತೆಂದೂ ಈ ಪಶುಕ ಶಬ್ದದಿಂದಲೇ ಹೈಗ ಶಬ್ದವುಂಟಾಯಿತೆಂಬ ಅಭಿಪ್ರಾಯವೂ ಇದೆ. ಹೈಗ ಶಬ್ದದ ಉತ್ಪತ್ತಿ ಹೀಗೆ ಪಶುಕ- ಪಯಕ-ಪೈಕ-ಪೈಗ ಹೈಗ (ಹವ್ಯದೇಶವೆಂದರೆ ಬನವಾಸಿ ಚಂದ್ರಗುತ್ತಿಯಿಂದ ಪ್ರಾರಂಭವಾಗಿ ಶಿರಸಿ, ಸಿದ್ದಾಪುರ, ಯಲ್ಲಾಪುರ, ಕುಮಟಾ, ಹೊನ್ನಾವರ ಮೊದಲಾದ ಭಾಗಗಳು ಬರುತ್ತವೆ.)

ಕನ್ನಡದ ’ಹೈನು’ (ಹಾಲು) ಪದವು ಹವಿಸು ಪದಕ್ಕೆ ಶಬ್ದಾರ್ಥವೆರಡರಲ್ಲೂ ಸಂವಾದಿಯಾಗಿದೆ. ಹಸುವಿನ ಹಾಲು, ತುಪ್ಪ, ಮೊಸರು, ಗೋಮಯ, ಗೋಮೂತ್ರ ಇವೆಲ್ಲ ಧಾರ್ಮಿಕ ಯಜ್ಞಾದಿ ಕರ್ಮಗಳಿಗೆ ಮುಖ್ಯ ದ್ರವ್ಯಗಳಾಗಿವೆ. ಈ ಹವಿರ್ದಾನ ಭಕ್ಷಣಗಳ ಪ್ರಾಧಾನ್ಯವಿರುವ ಬ್ರಾಹ್ಮಣರು ವಾಸ ಮಾಡುವ ಭೂಭಾಗವೇ ಈ ಹೈಗನಾಡು. ಗೋರಾಷ್ಟ್ರದೇಶ. ಇಲ್ಲಿ ವಾಸಿಸುವ ಜನ ಹೈಗರು, ಹವೀಕರು, ಹವ್ಯಕರು.

ಪ್ರಾಚೀನ ಕದಂಬರ ತಾಳಗುಂದ ಶಾಸನದಲ್ಲಿ ಬ್ರಾಹ್ಮಣರು ದೂರದ ಅಹಿಚ್ಛತ್ರದಿಂದ ಬಂದರು, ಎನ್ನುವ ದಾಖಲೆ ಇದೆ. ಅಲ್ಲದೆ ಪ್ರಕ್ಷಿಪ್ತವೇ ಆದರೂ ಸ್ಕಂದ ಪುರಾಣದ ಉತ್ತರ ಸಹ್ಯಾದ್ರಿ ಖಂಡವು ಬಹಳ ಹಳೆಯ ದಾಖಲೆಯಾಗಿದೆ. ಇದರಲ್ಲಿ ಕದಂಬರ ಮೂಲಪುರುಷ ಮಯೂರವರ್ಮನು ಅಹಿಚ್ಛತ್ರದಿಂದ ಬ್ರಾಹ್ಮಣರನ್ನು ಕರೆತಂದು ನೆಲೆಗೊಳಿಸಿದನು. ವೈಜಯಂತಿಪುರ ಬನವಾಸಿಯ ನಾಲ್ಕು ದಿಕ್ಕಿಗೆ ನೆಲೆಯೂರಿದವರು ಹವ್ಯಕರೇ. ಆದ್ದರಿಂದ ಮಯೂರವರ್ಮನು ಕರೆತಂದ ಬ್ರಾಹ್ಮಣರು ಇವರೇ ಎಂಬುದು ಸ್ಪಷ್ಟ. ಇದಕ್ಕೆ ೩-೪ ನೇ ಶತಮಾನದ ತಾಳಗುಂದ ಶಾಸನ ನಿರ್ದಿಷ್ಟ ಪ್ರಮಾಣವಾಗಿದೆ.

ಸಾಕಷ್ಟು ದೂರದ ಅಹಿಚ್ಛತ್ರದಿಂದ ಇವರು ಬಂದವರು ಇರಬೇಕು. ಅಕ್ಕಪಕ್ಕದ ರಾಜ್ಯಗಳಿಂದ ಬಂದಿದ್ದರೆ ಮೂಲಸ್ಥಾನದ ಸಂಪರ್ಕ ಉಳಿದು ಭಾಷೆ, ಆಚಾರ, ವಿಚಾರ ರೀತಿ ರಿವಾಜುಗಳು ಉಳಿದು ಬರುತ್ತಿದ್ದವು. ಉದಾಹರಣೆಗೆ ಆಂಧ್ರದಿಂದ ಕರ್ನಾಟಕಕ್ಕೆ ಬಂದ ನಂದವಲಿ, ಉಲುಚಿಕಮೈ ಮುಂತಾದವರ ಮನೆಮಾತು ಈಗಲೂ ತೆಲುಗು ಭಾಷೆಯೇ ಆಗಿದೆ. ಈ ಎಲ್ಲ ಕಾರಣಗಳಿಂದ ದೂರದ ಉತ್ತರ ಪ್ರದೇಶದ ಅಹಿಚ್ಛತ್ರದಿಂದ ಬಂದವರೇ ಇರಬೇಕೆಂದು ನಿರ್ಣಯಿಸಬಹುದು.

ಮಯೂರವರ್ಮನು ಮರಣಾನಂತರದಲ್ಲಿ ಅವನ ಪುತ್ರನಾದ ತ್ರಿಣೇತ ಕದಂಬನು ತನ್ನ ತಾಯಿ ತಂಗಿಯರಿಂದೊಡಗೂಡಿ ಶ್ರೀ ಕ್ಷೇತ್ರ ಗೋಕರ್ಣಕ್ಕೆ ಬಂದನು. ಈ ವಿಷಯವನ್ನು ತಿಳಿದು ಗೋರಾಷ್ಟ್ರಪ್ರದೇಶದ ಅಧಿಪತಿಯಾದ ಚಂಡಸೇನನು ಬರಮಾಡಿಕೊಂಡು ಗೌರವಿಸಿ ’ಬ್ರಾಹ್ಮಣ ಹೀನವಾದ ನನ್ನ ದೇಶವನ್ನು ಬ್ರಾಹ್ಮಣರಿಂದ ಪೂರ್ಣಮಾಡಿಕೊಂಡು’ ಎಂದು ಬಿನ್ನವಿಸಿದನು. ತ್ರಿಣೇತ್ರ ಕದಂಬನು ಅವನ ಬಿನ್ನಹಕ್ಕೆ ಸಮ್ಮತಿಸಿ ತನ್ನ ದೇಶದಲ್ಲಿದ್ದ ಬಹುಮಂದಿ ಬ್ರಾಹ್ಮಣರನ್ನು ಚಂಡಸೇನನ ರಾಜ್ಯಕ್ಕೆ ಸ್ಥಳಾಂತರಿಸಿದನು. ಹೀಗೆ ಸ್ಥಾಪಿತವಾದ ಬ್ರಾಹ್ಮಣರು ಸಮಯಾನಂತರದಲ್ಲಿ ಹುಬ್ಬಾಸಿಕನೆಂಬ ಅವನ ಸಹಚರರ ಕಿರುಕುಳವನ್ನು ಸಹಿಸಲಾರದೆ ಸ್ವದೇಶಕ್ಕೆ ತೆರಳಿದನು. ಚಂಡಸೇನನ ಮಗನಾದ ಲೋಕಾಧಿತ್ಯನು ಪರಾಶರ ಋಷಿಯಿಂದ ಪ್ರೇರಿತನಾಗಿ ಬ್ರಾಹ್ಮಣೋತ್ತಮರಾದ ಭಟ್ಟಾಚಾರ್ಯರ ಮೊರೆ ಹೊಕ್ಕನು. ಲೋಕಾದಿತ್ಯನ ಮನವಿಗೆ ಭಟ್ಟಾಚಾರ್ಯರು ಅನೇಕ ಬ್ರಾಹ್ಮಣರಿಂದೊಡಗೂಡಿ ಲೋಕಾದಿತ್ಯನ ದೇಶದಲ್ಲಿ ಬಂದು ಸ್ಥಾಪಿತರಾದರು. ಲೋಕಾದಿತ್ಯನು ಹುಬ್ಬಾಸಿಕ ಮತ್ತು ಅವನ ಸಹಚರರನ್ನು ಸಂಹರಿಸಿ ಬ್ರಾಹ್ಮಣರಿಗೋಸ್ಕರ ಸಹ್ಯ ಪರ್ವತದ ಪಶ್ಚಿಮಕ್ಕೂ, ಪಶ್ಚಿಮ ಸಮುದ್ರದ ಪೂರ್ವಕ್ಕೂ ಗೋಕರ್ಣ ಸಮೀಪ ಗಂಗಾವಳಿಯ ದಕ್ಷಿಣಕ್ಕೂ, ಕುಂದಾಪುರದ ಬಳಿ  ಇರುವ ಗಂಗಾವಳಿಯ ಉತ್ತರಕ್ಕೂ ಮಧ್ಯೆ ಹದಿನಾರು ಗ್ರಾಮಗಳನ್ನು ಕಲ್ಪಿಸಿ ಅಲ್ಲಲ್ಲಿ ಕುಟುಂಬ ಸಮೇತವಾಗಿ ಈ ಬ್ರಾಹ್ಮಣರನ್ನು ಸ್ಥಾಪನೆ ಮಾಡಿದನು. ಮತ್ತು ಆ ಕುಟುಂಬದವರಿಗೆ ಭೂಮಿಯನ್ನು ದಾನವಾಗಿ ಕೊಟ್ಟನು. ಸಂತುಷ್ಟರಾದ ಬ್ರಾಹ್ಮಣರು ಯಜ್ಞಯಾಗಾದಿಗಳನ್ನು ಯಥೇಚ್ಛವಾಗಿ ಮಾಡಿದರು. ಅನಂತರ ಸಭಾ ಮಧ್ಯದಲ್ಲಿ ಭಟ್ಟಾಚಾರ್ಯರಿಂದ ಬೋಧಿಸಲ್ಪಟ್ಟ ರಾಜ ಲೋಕಾಧಿತ್ಯನು ಬ್ರಾಹ್ಮಣರಿಗೋಸ್ಕರ ಏಳು ಸಂಕೇತನಾಮಗಳನ್ನು ಕೊಟ್ಟನು.

ಸಭಾಹಿತ ಸಭಾಮಧ್ಯೆ ಪ್ರೋಕ್ತೋಧರ್ಮ ಪರೀಕ್ಷಕಃ |
ಮಧ್ಯಸ್ಥ ಸಂಸದಿ ತಥಾ ಮದ್ಯಸಂಸ್ಥ ಸಮಾಹಿತಃ ||
ಯಜ್ಞೇಷು ದೀಕ್ಷಿತೋಯಾಜೀ ಯಜ್ಞಾಂತೇವಬೃತಃಸ್ಮೃತಃ |
ವೇದಶಾಸ್ತ್ರೇಷು ನಿಪುಣಃ ತಥಾ ಭಟ್ಟ ಇತೀರಿತಃ |
ವೈದಿಕಾಗಮ ತಂತ್ರಜ್ಞಸ್ತಾಂತ್ರಿಕಶ್ಯ ತಥಾಸ್ಮ್ರತಃ |
ಗ್ರಾಮಾಣಾಂಮಧಿಪತ್ಯಂ ಚ ಕುರ್ವನ್ ಪ್ರಭುರಿತೀರಿತಃ ||

ಶಿಸ್ತು ಸಂಯಮದ ಸಂವಿಧಾನ ಜೀವನ ಇವರದಾಗಿತ್ತು. ಯಾರೂ ಯಾರು ಯಾವ ಕೆಲಸಗಳನ್ನು ಕಾರ್ಯಗಳನ್ನು ಮಾಡಬೇಕಾಗಿತ್ತೋ ಅದನ್ನವರೇ ಮಾಡಬೇಕಾಗಿತ್ತು. ಅವರವರ ಕೆಲಸಕಾರ್ಯಗಳಿಗಾಗಿಯೇ ರಾಜನೇ ಆ ಕಾಲದಲ್ಲಿ ಇವರನ್ನು ನಿಯುಕ್ತಿಗೊಳಿಸಿದ್ದನು. ಸಭಾಹಿತ, ಮಧ್ಯಸ್ಥ, ಯಾಜಿ (ದೀಕ್ಷಿತ), ಅವಭೃತ (ಅಪ್ಸರ್ತ) ಭಟ್ಟತಾಂತ್ರಿಕ (ತಂತ್ರಿ) ಪ್ರಭು (ಹೆಗಡೆ) ಇವರೆಲ್ಲರೂ ತಮ್ಮ ತಮ್ಮ ಕಾರ್ಯಗಳಿಗನುಗುಣವಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದರು. ಪ್ರಭು (ಹೆಗಡೆ) ಎನ್ನಿಸಿಕೊಂಡವನು ಉಳಿದೆಲ್ಲರಿಗೂ ಮೇಲ್ವಿಚಾರಕನಾಗಿರುತ್ತಿದ್ದನು. ಆತನ ಆದೇಶವನ್ನು ಉಳಿದವರೆಲ್ಲರೂ ಪಾಲಿಸಬೇಕಾಗಿತ್ತು.

ಹವ್ಯಕರ ಯಾವುದೇ ಸಮಸ್ಯೆಯಾಗಲಿ, ವಾದವಿವಾದಗಳಾಗಲಿ, ಶಾಸ್ತ್ರಾರ್ಥ ನಿರ್ಣಯವಾಗಲಿ, ಧಾರ್ಮಿಕಕ್ಕೆ ಸಂಬಂಧಿಸಿದ ಚರ್ಚೆಯಾಗಲಿ ಏನೇ ಇದ್ದರೂ ಅದನ್ನು ಸಭೆಯಲ್ಲಿ ಮಂಡಿಸುವ ಕೆಲಸವು ಮಧ್ಯಸ್ಥನದು. ಪೂರ್ವಾಪರ ವಿಚಾರ ವಿಷಯಗಳನ್ನರಿತು ಮನನ ಮಾಡಿ ತೀರ್ಮಾನಿಸುವವನು ಅಥವಾ ನಿರ್ಣಯ ಕೊಡುವವನು ಸಭಾಹಿತನಾಗಿದ್ದನು. ಏನಿದ್ದರೂ ಅದು ಪ್ರಭುವಿನ (ಹೆಗಡೆ) ಸಮ್ಮುಖದಲ್ಲಿಯೇ ನಡೆಯಬೇಕಾಗಿತ್ತು. ಯಾಗ ಯಜ್ಞಗಳಲ್ಲಿ ದೀಕ್ಷಿತನಾಗಿರುವವನು. ಯಾಜಿಯು ಯಜ್ಞಾಂತ್ಯದಲ್ಲಿ, ಅವಭೃತಸ್ನಾನಕರ್ತನೇ ಅವಭೃತನು, ವೇದಶಾಸ್ತ್ರಗಳಲ್ಲಿ ನಿಪುಣನಾದವನೇ ಭಟ್ಟನು. ವೈದಿಕಾಗಮ ತಂತ್ರಗಳನ್ನು ತಿಳಿದವನೇ ತಂತ್ರಿಯು, ಈಗಲೂ ಈ ಹೆಸರುಗಳೇ ಹವ್ಯಕರಿಗೆ (ನಾಮಧೇಯವಾಗಿ) ಅಡ್ಡ ಹೆಸರು (surname) ಬಂದಿದೆ. ಕರ್ತವ್ಯಗು ಕಡ್ಡಾಯವಾಗಿಲ್ಲ. ಹವ್ಯಕರಲ್ಲದೆ ಇನ್ನುಳಿದ ಜನಾಂಗದವರ ಯಾವುದೇ ಸಮಸ್ಯೆಯಾಗಲಿ, ಜಗಳವಾಗಲಿ ಇದ್ದರೆ ಅದು ಧಾರ್ಮಿಕಕ್ಕೆ ಸಂಬಂಧಿಸಿದ್ದಾಗಲಿ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ್ದಾಗಲಿ ಅದನ್ನು ಧಾರ್ಮಿಕಕ್ಕೆ ಸಂಬಂಧಿಸಿದ್ದಾಗಲಿ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ್ದಾಗಲಿ ಅದನ್ನು ತೀರ್ಮಾನ ಮಾಡುವವರು ಹವ್ಯಕರೇ ಆಗಿದ್ದರು. ಈ ಕೆಳಗಿನ ಶ್ಲೋಕವು ಇದನ್ನು ಸ್ಪಷ್ಟಪಡಿಸುತ್ತದೆ.

ಲೌಕಿಕೇ ವೈದಿಕೇಕೃತ್ಯೆ ಸಂಶಯ ಗ್ರಂಥಿಭೇದಿನಃ |
ಜ್ಞಾನಯೋಗ ವಿನಿರ್ಧೂತ ಕಲ್ಮಶ ವಿಜತಾರಯಃ |

ಹವ್ಯಕರಿಗೆ ರಾಜಾಶ್ರಯ ತಪ್ಪಿದ ಮೇಲೆ ಜೀವನ ನಿರ್ವಹಣೆ ಸುಗಮವಾಗಲಿಲ್ಲ. ಜೀವನೋಪಾಯಕ್ಕಾಗಿ ಬೇರೆ ವೃತ್ತಿಯನ್ನವಲಂಬಿಸದೆ ಅನ್ಯ ಮಾರ್ಗವೇ ಇರಲಿಲ್ಲ. ವೈದಿಕ ವೃತ್ತಿಯೊಂದಿಗೆ ಅಡಿಕೆ, ಬಾಳೆ, ಮೆಣಸು, ಯಾಲಕ್ಕಿ, ವೀಳ್ಯದೆಲೆ, ತೆಂಗಿನ ಬೇಸಾಯವನ್ನು ಕೈಗೊಂಡರು. ಸ್ವತಂತ್ರ ಪ್ರವೃತ್ತಿಯ ಹವ್ಯಕರು ಮತ್ತೊಬ್ಬರ ಅಧೀನದಲ್ಲಿ ಎಂದೂ ಬಾಳಿದವರಲ್ಲ. ರಾಜಾದಾಯ ತಪ್ಪಿದ ಮೇಲೂ ಬೇರೆ ಬೇರೆ ರಾಜರ ಬಳಿಯಲ್ಲಾಗಲೀ ಅಥವಾ ಇನ್ನುಳಿದ ಯಾರ ಬಳಿಯಾಲ್ಲಾಗಲೀ ಉದ್ಯೋಗ ವೃತ್ತಿಗೆ ಸೇರಿಕೊಂಡವರಲ್ಲ. ಏಕೆಂದರೆ ರಾಷ್ಟ್ರಕೂಟರ ಹಾಗೂ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಹವ್ಯಕರನ್ನುಳಿದು ಇನ್ನಿತರ ಬ್ರಾಹ್ಮಣರಲ್ಲಿ ಅನೇಕರು ಮಂತ್ರಿಗಳೂ, ದಂಡನಾಯಕರು ಆಗಿದ್ದರಲ್ಲದೆ ಬೇರೆ ಬೇರೆ ವೃತ್ತಿಗಳನ್ನು ಕೈಗೊಂಡಿದ್ದರು. ಆದರೆ ಹವ್ಯಕರು ಮಾತ್ರ ಇಂತಹ ಸೇವಾವೃತ್ತಿಯನ್ನವಲಂಬಿಸದೆ ವ್ಯವಸಾಯವನ್ನೇ ಕೈಗೊಂರು. ಈ ವೃತ್ತಿಯಿಂದ ಇವರ ನಿತ್ಯನೈಮಿತ್ತಿಕಾದಿ ಧಾರ್ಮಿಕ ಕಾರ್ಯಗಳಿಗೆ ಎಂದೂ ಯಾವ ಅಡಚಣೆಯೂ ಆಗಲಿಲ್ಲ. ಆಗಿನ ಕಾಲದಲ್ಲಿ ಈಗಿನಂತೆ ಜನಸಂಖ್ಯಾ ಹೆಚ್ಚಳವಾಗಲಿ, ವ್ಯವಸಾಯ ಯೋಗ್ಯ ಭೂಮಿಯ ಅಭಾವವಾಗಲೀ ಇರಲಿಲ್ಲ. ರಾಜನು ಉಂಬಳಿಯಾಗಿ ತಮಗೆ ಕೊಟ್ಟ ಭೂಮಿಯೊಂದಿಗೆ ಫಲವತ್ತಾದ ಭೂಭಾಗವನ್ನರಿಸಿ ಅಡಿಕೆ, ಬಾಳೆ, ತೆಂಗು, ನೆಟ್ಟರು. ಅಲ್ಲಿಯೇ ತಮ್ಮ ವಾಸ್ತವ್ಯವನ್ನು ಮಾಡಿಕೊಂಡರು. ಹೀಗಾಗಿ ಗ್ರಾಮೀಣ ಪ್ರದೇಶವೇ ಇವರ ಜೀವನ ಕ್ಷೇತ್ರವಾಯಿತು. ಕ್ರಿ. ಶ. ಪೂರ್ವದಿಂದಲೂ ಕರ್ನಾಟಕದಲ್ಲಿ ಅಡಿಕೆ, ಬಾಳೆ, ತೆಂಗು, ಮೆಣಸು ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದರೆಂದು ಕ್ರಿ. ಶ. ಒಂದನೇ ಶತಮಾನದಲ್ಲಿ ಕರ್ನಾಟಕಕ್ಕೆ ಬಂದ ಪೆರಿಪ್ಲಸ್ ಎಂಬ ಗ್ರೀಕ್ ಪ್ರವಾಸಿ ತನ್ನ ಪ್ರವಾಸ ಕಥನದಲ್ಲಿ ಬರೆದಿದ್ದಾನೆ. ಅನಾದಿಕಾಲದಿಂದಲೂ ಅಡಿಕೆ, ಬಾಳೆ, ತೆಂಗು ಕರ್ನಾಟಕದಲ್ಲಿ ಬೆಳೆಯುತ್ತಿದ್ದರೂ ಅದಕ್ಕೊಂದು ವ್ಯವಸ್ಥಿತವಾದ ರೂಪವನ್ನು ಕೊಟ್ಟವರು ಹವ್ಯಕರು. ರಾಜಾದಾಯ ಸಂಪೂರ್ಣ ತಪ್ಪಿದ ಮೇಲೆ ವೈದಿಕ ವೃತ್ತಿಯಿಂದ ಇವರ ಜೀವನ ಸಾಗದಿದ್ದಾಗ ಅಡಿಕೆ, ಬಾಳೆ, ತೆಂಗು, ಬೆಳೆಯೊಂದೇ ಇವರ ಸ್ವಾವಲಂಬಿ ಜೀವನದ ಉಸಿರಾಯಿತು. ಇದನ್ನೇ-

ಅಡಿಕೆ ತೆಂಗಿನ ಕುಡಿ ಆಕಾಶಕ್ಕೋದ್ಯಾವೋ
ಸಿಂಗಾರ ಕೊಟ್ಟು ಅಲ್ಲಿಂದ ದೇವತೆಗಳ
ಬಂಗಾರಿನೊಡವೆ ತಂದಾವೋ ||

ಎಂಬ ಜಾನಪದ ಹಾಡು ಸಾರುತ್ತದೆ. ಅಡಿಕೆಯ ಬಗ್ಗೆ ಹವ್ಯಕರಿಗಿರುವ ಅನನ್ಯ ಅನ್ಯೋನ್ಯತೆಯಿಂದಾಗಿ ’ಹಕೋ ಹಳ್ಳಿವಾಸಃ, ಕಕೋ-ಕತ್ತಿ ಕಂಬಳಿ, ವ್ಯಕೋ ವೀಳ್ಯಭಕ್ಷಕ, ಎಂಬ ಹವ್ಯಕ ನುಡಿಗಟ್ಟಿಗೆ ಮಾತೊಂದಿದೆ.

ರಾಜಾದಾಯವಿಲ್ಲದೆ, ವೈದಿಕ ವೃತ್ತಿಯಿಂದ ಜೀವನ ಸಾಗಿಸಲಾಗದೆ ಅಡಿಗೆ ತೆಂಗು ಬೆಳೆಯೂ ಬೇಗ ಕೈಗೆ ಸಿಕ್ಕದೆ ಹವ್ಯಕರ ಜೀವನ ಕಷ್ಟಕಾರ್ಪಣ್ಯದಲ್ಲಿ ಬೇಯಬೇಕಾಯಿತು. ಅನ್ನ ವಸ್ತ್ರಕ್ಕೆ ತತ್ವಾರವಾಯಿತು. ಬೇರೆ ಬೇರೆ ಭಾಗಕ್ಕೆ ಹೋಗಿ ನೆಲೆನಿಂತು ನೋವನ್ನು ಅನುಭವಿಸಿದರು. ತುಳುನಾಡಿಗೂ ಹಲವರು ವಲಸೆ ಹೋದರು. ತುಳುನಾಡು ಎಂದರೆ ಈಗಿನ ದಕ್ಷಿಣ ಕನ್ನಡ ಜಿಲ್ಲೆ. ಇದು ಸುಮಾರು ನಾಲ್ಕನೇ ಶತಮಾನದ ಕಾಲ. ಶ್ರೀಪದಾರು ಮಹಾಬಲೇಶ್ವರ ಭಟ್ಟರು ಸಂಗ್ರಹಿಸಿದ ಹವ್ಯಕರ ಹಾಡೊಂದು ಅಂದಿನ ಹೈನಾಡಿನ ಹವ್ಯಕರ ಸ್ಥಿತಿಗತಿಗಳನ್ನು ಹೈನಾಡಿನಿಂದ ತುಳುನಾಡಿಗೆ ವಲಸೆ ಹೋಗಲು ಕಾರಣವನ್ನು ಎತ್ತಿ ತೋರಿಸುತ್ತದೆ.

’ತುಂಬು ತುಳುನಾಡಿನಲ್ಲಿ ಇಂಬಲಿ ಇರಲಿಕ್ಕು
ಎಂಬಾಲೆ ಬರವಿಲ್ಲೆ ಕೋಳುರ |
ಶಂಬು ಮಾಬಲರ | ಒಲವಿಂದ ತುಪ್ಪಶನ ಎಂಬೋಲೆ ತುಳುನಾಡಿಗೊಯಕ್ಕು
ಅಕ್ಕಿಯ ಮೇಲೆ ಬರೆಯಿಲ್ಲೆ | ತುಳುನಾಡ ಮಕ್ಕಳ ಮೈಲಿ ಕಲೆಯಿಲ್ಲೆ

ಈ ಮಾತುಗಳು ಹವ್ಯಕರಿಗಂದು ಊಟತಿಂಡಿಗೂ ಅನುಕೂಲವಿಲ್ಲದ ಬಡತನ-ಬರ ಬಂದಿತ್ತೆಂಬುದನ್ನು ಸೂಚಿಸುತ್ತದೆ.

ಹವ್ಯಕರು ಎಲ್ಲಿಯೇ ಇರಲಿ ಹೇಗೆಯೇ ಇರಲಿ ತಮ್ಮ ನಿತ್ಯ ಕರ್ಮಾನುಷ್ಠಾನವನ್ನು ಧಾರ್ಮಿಕ ಕರ್ಮಾಚರಣೆಯನ್ನು ಬಿಟ್ಟವರಲ್ಲ. ತಮ್ಮ ಮಕ್ಕಳು ತಮ್ಮಂತೆಯೇ ವೇದಾಧ್ಯಯನ ಪರಂಪರೆ ಪ್ರವೃತ್ತಿಯವರಾಗಬೇಕೆಂಬುದೇ ಅವರ ಬಯಕೆ. ಈ ಹವ್ಯಕರ ಹಾಡು ಇದನ್ನೇ ಹೇಳುತ್ತದೆ.

ಆಡಿಯೆ ಬಾಯಂದು ಹೂಡಿದಳೆ ತುಪ್ಪವ |
ಹೋಗು ವೇದ ಕಲಿಯೆಂದು ತಾಯಮ್ಮ |
ಕಂದಂಗೂಡಿದೆ ನೊರೆ ಹಾಲು |

ಅನಂತರ ಶ್ರೀ ಶಂಕರ ಭಗವತ್ಪಾದರಿಂದ ಧರ್ಮಸ್ಥಾಪನೆಗಾಗಿ ಶ್ರೀ ಮಠಗಳು ಸ್ಥಾಪಿಸಲ್ಪಟ್ಟು ಬಳಿಕ ಹವ್ಯಕರಿಗೆ ಗೋಕರ್ಣದ ಶ್ರೀ ರಘೋತ್ತಮ ಮಠವೇ (ಶ್ರೀರಾಮಚಂದ್ರಾಪುರ ಮಠ) ಗುರುಮಠವಾಯಿತು. ಅನಂತರ ಸಹಸ್ರಲಿಂಗದ ಸನಿಹ ಹೊನ್ನಳ್ಳಿಮಠ (ಈಗಿನ ಸ್ವರ್ಣವಲ್ಲಿಮಠ) ಹೀಗೆ ಎರಡು ಮಠಗಳೇ ಹವ್ಯಕರ ಧಾರ್ಮಿಕ ಕೇಂದ್ರವಾಯಿತು. ಹಲವಾರು ಸೀಮೆಗಳು, ಊರಿಗೊಬ್ಬ ಮುಖಂಡರಿರುತ್ತಿದ್ದರು. ಊರಿನ ಮುಖಂಡನಿಗೆ ’ಗ್ರಾಮಣಿ’ ಎಂದು ಕರೆಯುತ್ತಿದ್ದುದುಂಟು. ಯಾವುದೇ ವಾದವಿವಾದ ವ್ಯಾಜ್ಯಗಳಾದರೆ ಅದನ್ನು ಬಗೆಹರಿಸುವ ಕೆಲಸ ಊರಿನ ಅಥವಾ ಸೀಮೆಯ ಮುಖಂಡನದು. ಕೊನೆಗೆ ಗುರುಪೀಠದ್ದೇ ಅಂತಿಮ ತೀರ್ಮಾನವಿರುತ್ತಿತ್ತು.

ಕಾಲ ಕಳೆದಂತೆ ಗುರುಕಲ ಪದ್ಧತಿಯ ವಿದ್ಯಾಭ್ಯಾಸವು ಕಡಿಮೆಯಾಗಿ ಮಠ ದೇವಾಲಯಗಳಲ್ಲಿ ವೇದ ಸಂಸ್ಕೃತ ಪಾಠಶಾಲೆಗಳು ಹುಟ್ಟಿಕೊಂಡವು. ಗಂಡುಮಕ್ಕಳು ಮಾತ್ರ ವೇದ ಸಂಸ್ಕೃತ ವಿದ್ಯಾರ್ಜನೆಗಾಗಿ ಪಾಠಶಾಲೆಗಳಿಗ ಬರುತ್ತಿದ್ದರು. ಅಂದರೆ ಹವ್ಯಕ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅವಕಾಶವಿರಲಿಲ್ಲ. ಆದರೆ ಬನವಾಸಿಯ ಕದಂಬರ ಕಾಲದಲ್ಲಿ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದುದಾಗಿ ಶಾಸನವು ಹೇಳುತ್ತದೆ.

ಪರಕೀಯರ ಆಕ್ರಮಣ, ಆಂಗ್ಲರ ಆಳ್ವಿಕೆಯಿಂದಾಗಿ ಹವ್ಯಕರ ಜೀವನ ವಿಧಾನಗಳು ಬದಲಾಗತೊಡಗಿದವು. ಸ್ವಾತಂತ್ರ‍್ಯಪೂರ್ವ ಆಂಗ್ಲರ ಆಡಳಿತ ಕಾಲದಲ್ಲಿ ವೇದ ಸಂಸ್ಕೃತ ವಿದ್ಯೆಯೊಂದಿಗೆ ಅಲ್ಲಲ್ಲಿ ಲೌಕಿಕ ವಿದ್ಯೆಯನ್ನು ಕಲಿಯತೊಡಗಿದರು. ಆದರೂ ಇವರು ತಮ್ಮ ಆಚಾರ ವಿಚಾರದಲ್ಲಿ ಸಂಪ್ರದಾಯದಲ್ಲಿ ಹೆಚ್ಚಿನ ಯಾವ ಬದಲಾವಣೆಯನ್ನೂ ಮಾಡಿಕೊಳ್ಳಲಿಲ್ಲ. ಆಂಗ್ಲರ ಆಳ್ವಿಕೆಯ ಕಾಲದಲ್ಲಿ ಆಧುನಿಕ ವಿದ್ಯಾಭ್ಯಾಸಕ್ಕಾಗಿ ಅಲಲ್ಲಿ ಪ್ರಾಥಮಿಕ ಶಾಲೆಗಳು ಪ್ರಾರಂಭವಾಗಿದ್ದರೂ ಪ್ರೌಢಶಾಲೆ ಕಾಲೇಜುಗಳು ಪಟ್ಟಣ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿತ್ತು. ಅದೂ ಬೆರಳೆಣಿಕೆಯಷ್ಟು ಮಾತ್ರ. ಗ್ರಾಮಾಂತರ ಪ್ರದೇಶಗಳಲ್ಲಿ ಕೃಷಿಕರಾಗಿ ಜೀವನ ಸಾಗಿಸುತ್ತಿದ್ದ ಹವ್ಯಕರಿಗೆ ಉನ್ನತ ವಿದ್ಯಾಬ್ಯಾಸ ಅಲಭ್ಯವಾಗಿತ್ತು. ಪ್ರಾಥಮಿಕ ಶಾಲೆ, ಸಂಸ್ಕೃತ ಪಾಠಶಾಲೆಗಳಲ್ಲಿ ಕಲಿತು ಮನೆಗೆ ಮರಳುತ್ತಿದ್ದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹವ್ಯಕರ ಪಾತ್ರ ಗಣನೀಯ. ಸ್ವಾತಂತ್ರ್ಯ ಚಳುವಳಿಯಲ್ಲಿ ನಿರತರಾಗಿ ಕಾರಾಗೃಹ ಶಿಕ್ಷೆಯನ್ನು ಅನುಭವಿಸಿದರು ಅದೆಷ್ಟೋ ಮಂದಿ. ತಮ್ಮ ಆಸ್ತಿಪಾಸ್ತಿಗಳನ್ನು ಕಳೆದುಕೊಂಡವರೆಷ್ಟೋ ಜನರು. ಶಿರಸಿ, ಸಿದ್ಧಾಪುರ, ಯಲ್ಲಾಪುರ ಮುಂತಾದ ಉತ್ತರ ಕನ್ನಡದ ಹವ್ಯಕರೇ ಹೆಚ್ಚಾಗಿದ್ದರು. ಅದರಲ್ಲೂ ಮಹಿಳೆಯರು ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯರಾಗಿದ್ದರು.

ಹವ್ಯಕ ಸ್ತ್ರೀಯರು ಎಂದೂ ಜ್ಞಾನಾರ್ಜನೆಯಲ್ಲಿ ಹಿಂದುಳಿದವರಲ್ಲ. ಪೂರ್ವದಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶವಿಲ್ಲದೆ ಅವಿದ್ಯಾವಂತರಾಗಿದ್ದರೂ ಸದಾ ಪುರುಷಾನುವರ್ತಿಗಳಾಗಿ ಅವರ ಕೆಲಸ ಕಾರ್ಯಗಳಲ್ಲಿ ಸಹಭಾಗಿಗಳಾಗಿದ್ದರು. ಗೃಹಕೃತ್ಯದಲ್ಲಿ ಅತ್ಯಂತ ಕುಶಲಮತಿಗಳಾಗಿದ್ದರು. ಆದರಾತಿಥ್ಯದಲ್ಲಿ, ಸಂಸಾರದ ಅಚ್ಚುಕಟ್ಟುತನದಲ್ಲಿ ಮೇಲೆನಿಸದವರಾಗಿದ್ದರು. ವಿದ್ಯಾವಂತರಲ್ಲಿದಿದ್ದರೂ ಸ್ವತಃ ಹಾಕುಕಟ್ಟಿ ಹೇಳುತ್ತಿದ್ದರು. ಸ್ವಾತಂತ್ರ್ಯ ನಂತರ ಹೆಣ್ಣು ಮಕ್ಕಳು ಶಾಲಾ ಕಾಲೇಜಿಗೆ ಹೋಗತೊಡಗಿದರು. ಸ್ವಾತಂತ್ರ್ಯ ನಂತರ ವೇದವಿದ್ಯೆಗಿಂತಲೂ ಹೆಚ್ಚಾಗಿ ಹವ್ಯಕರು ಇಂಗ್ಲೀಷ ವಿದ್ಯೆಯನ್ನೇ ಕಲಿಯತೊಡಗಿದರು. ಕ್ರಮೇಣ ವೈದಿಕ ವಿದ್ಯೆ ಪುರೋಹಿತರಿಗೆ ಮಾತ್ರ ಮೀಸಲೆಂಬಂತಾಯಿತು. ಹವ್ಯಕರ ಆಚಾರ ವಿಚಾರದಲ್ಲಿ ಉಡುಗೆ ತೊಡುಗೆಗಳಲ್ಲಿ ಸಂಪ್ರದಾಯದಲ್ಲಿ ಹೀಗೆ ಎಲ್ಲದರಲ್ಲಿಯೂ ಕಾಲ ಗತಿಸಿದಂತೆ ಬದಲಾವಣೆಯಾಗತೊಡಗಿತು.

ಭಾಷಾ ಬಾಂಧವ್ಯ

ಸಾವಿರಾರು ವರ್ಷಗಳಿಂದ ಒಂದು ಕಡೆ ವಾಸ ಮಾಡಿದಾಗ ಮೂಲ ಭಾಷೆಯ ಸಂಪರ್ಕವಿಲ್ಲದೆ ನೆಲೆನಿಂತ ನಾಡಿನ ಭಾಷೆಯೇ ಮಾತೃಭಾಷೆಯಾಗುವುದು ಆಶ್ಚರ್ಯವಲ್ಲ. ಹವ್ಯಕರ ವಿಷಯದಲ್ಲಂತೂ ಇದು ಶತಃ ಸಿದ್ಧವಾಗಿದೆ. ಹವ್ಯಕರಿಗೆ ಭಾಷೆ ಬೇರೆಯಲ್ಲ, ಬಾಳು ಬೇರೆಯಲ್ಲ. ಇವತ್ತಿಗೂ ಅಚ್ಚ ಕನ್ನಡಿಗರಾಗಿಯೇ ಹವ್ಯಕರು ಅನನ್ಯರಾಗಿದ್ದಾರೆ. ೧೯೩೧ ರಲ್ಲಿ ಕಾರವಾರದಲ್ಲಿ ಜರುಗಿದ ಕರ್ನಾಟಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಾ ದಿವಂಗತರಾದ ಮುಳಿಯ ತಿಮ್ಮಪ್ಪಯ್ಯನವರು ’ಕನ್ನಡದ ಮೂಲ ಸತ್ವವನ್ನು ಇನ್ನೂ ಉಳಿಸಿಕೊಂಡು ಬಂದವರು ಹವ್ಯಕರು’ ಎಂದು ವಿವರಿಸಿದ್ದಾರೆ. ಶ್ರೀ ಸೇಡಿಯಾಪು ಕೃಷ್ಣ ಭಟ್ಟರು ಪ್ರಬುದ್ಧ ಕರ್ನಾಟಕದ ೧೯೪೪ರ ದೀಪಾವಳಿ ಸಂಚಿಕೆಯಲ್ಲಿ ಪ್ರಕಟವಾದ ತಮ್ಮ ಲೇಖನದಲ್ಲಿ ’ಕನ್ನಡದ ಹಳೆಯ ದೇಸಿಯನ್ನು ತಿಳಿಯುವುದಕ್ಕೆ ಹವೀಕರ ಕನ್ನಡ ಅತ್ಯಂತ ಸಹಕಾರಿಯಾಗಿದೆ’ ಎಂದಿದ್ದಾರೆ. ಹವ್ಯಕರ ಶಬ್ದ ನುಡಿಗಟ್ಟುಗಳು ೧೭-೧೮ ನೇ ಶತಮಾನಗಳಿಗೆ ಸೇರಿದ ಹವ್ಯಕರಿಂದ ರಚಿತವಾದ ಬತ್ತಲೇಶ್ವರ ಕವಿಯ ರಾಮಾಯಣ ಅಥವಾ ಕೌಶಿಕ ರಾಮಾಯಣ ಹಾಗೂ ಪರಮದೇವ ಕವಿಯ ’ಶ್ರೀ ತುರಂಗಭಾರತ’ದಂಥ ನಡುಗನ್ನಡ ಕಾವ್ಯಗಳಲ್ಲಿ ಯಥೇಚ್ಛವಾಗಿ ಎಡೆಪಡೆದಿದ್ದವು. ಒಂದು ಭಾಷೆಯ ಕಟ್ಟು ಕೊಡುಗೆಗಳನ್ನು ಅರಿಯಲು ಸಹಾಯಕವಾಗುವ ವ್ಯಾಕರಣ, ನಿಘಂಟು, ಪ್ರಯೋಗ, ಕೃತಿ ರಚನೆಗಳೆಲ್ಲವನ್ನು ಹವ್ಯಕರು ಕಳೆದ ಅರ್ಧ ಶತಮಾನದ ಕಾಲದಲ್ಲಿ ಪಡೆದು ಜಾಗತಿಕ ಖ್ಯಾತಿಗೆ ಪಾತ್ರವಾಗಿದೆ. ದಿ. ತೆಕ್ಕುಂಜೆ ಗೋಪಾಲಕೃಷ್ಣ ಭಟ್ಟರು ಪ್ರಬುದ್ಧ ಕರ್ನಾಟಕ (ಸಂಪುಟ ೪೭-೧) ೧೭೬೫ ರಲ್ಲಿ ಪ್ರಕಟವಾದ ತಮ್ಮ “ಮಂಗಳೂರು ಹವೀಕರ ಆಡುನುಡಿ” ಯ ದೀರ್ಘಲೇಖನದಲ್ಲಿ ಹವ್ಯಕರ ವ್ಯಾಕರಣಕ್ಕೆ ಸಂಬಂಧ ಪಟ್ಟ ಅನೇಕ ವೈಶಿಷ್ಟ್ಯಗಳನ್ನು ಸೋದಾಹರಣವಾಗಿ ವಿವರಿಸಿದ್ದಾರೆ. ದಿ. ಮರಿಯಪ್ಪ ಭಟ್ಟ ಅವರು ಬರದ “ದಕ್ಷಿಣ ಕನ್ನಡ ಹವ್ಯಕ ಭಾಷೆ” ಲೇಖನದಲ್ಲಿ ಹವೀಕರ ಭಾಷೆಯ ವ್ಯಾಕರಣಾಂಶಗಳನ್ನು ಮಾತ್ರವಲ್ಲದೆ ಭಾಷಾ ಶಾಸ್ತ್ರಕ್ಕೆ ಕೊಡುಗೆಯನ್ನಬಹುದಾದ ಕೆಲವು ವಿಶೇಷ ಉಲ್ಲೇಖ ವ್ರ‍್ಯತ್ಪತ್ತಿಗಳನ್ನು ಕೊಟ್ಟು ಉಪಕರಿಸಿದ್ದಾರೆ. ಶ್ರೀ. ಪ. ಕೇಶವ ಭಟ್ಟರು “ಹವೀಕರ ಕನ್ನಡ” (೧೯೬೯) ಎಂಬ ಗ್ರಂಥವನ್ನು ಬರೆದಿದ್ದು ಇದಕ್ಕೆ ಮುನ್ನುಡಿ ಬರೆದ ಡಾ. ಡಿ. ಎಲ್. ನರರಸಿಂಹಾಚಾರ‍್ ’ಕನ್ನಡದ ಮೂಲಸತ್ವ ಸ್ವರೂಪವನ್ನು ಬಳಸಿಕೊಂಡು ಬಂದ ಬಗೆ ಹೆಮ್ಮೆ ಪಡುವಂತಿದೆ’ ಎಂದಿದ್ದಾರೆ.

ಹವ್ಯಕರು ವಿಶಿಷ್ಟ ಜನಾಂಗವಾಗಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗಾ, ಚಿಕ್ಕಮಂಗಳೂರು, ಕೊಡಗು ಜಿಲ್ಲೆ, ಕೇರಳದ ಕಾಸರಗೋಡು ತಾಲೂಕಿನಲ್ಲಿ ವಿಶೇಷವಾಗಿ ವಾಸವಾಗಿರುವುದರಿಂದ ಅವರ ನುಡಿಯಲ್ಲಿಯೂ ಉತ್ತರ, ದಕ್ಷಿಣ, ಪೂವ್ ಪ್ರಾದೇಶಿಕ ವೈವಿಧ್ಯಗಳನ್ನು ವೈಶಿಷ್ಟ್ಯಗಳನ್ನು ಕಾಣಬಹುದಾಗಿದೆ. ಇವುಗಳಿಗೆ ಸಂಬಂಧಪಟ್ಟಂತೆ ಪ್ರತ್ಯೇಕ ಗ್ರಂಥಗಳು ಬಂದಿವೆ. ಹವ್ಯಕರ ಹಳೆಯ ಮಾತಿನ ಶಬ್ದ ಭಂಡಾರ ಪ್ರಯೋಗಗಳಲ್ಲಿ ಅತ್ಯಮೂಲ್ಯ ಸಂಪತ್ತು ಹುದುಗಿಕೊಂಡಿದೆ.

ಹವ್ಯಕರ ಕನ್ನಡ ಕರ್ನಾಟಕದಲ್ಲಿಯ ಇತರ ಪ್ರದೇಶ ಅಥವಾ ಸಮಾಜಗಳಲ್ಲಿ ಬಳಕೆಯಲ್ಲಿರುವ ಕನ್ನಡದ ಪ್ರಭೇದಗಳಿಗಿಂತ ತುಂಬಾ ಬೇರೆಯಾಗಿದೆ. ಹಳಗನ್ನಡದ ಲಕ್ಷಣಗಳನ್ನು ಹವ್ಯಕರು ತಮ್ಮ ಭಾಷೆಯಲ್ಲಿ ಉಳಿಸಿಕೊಂಡು ಬಂದಿದ್ದಾರೆ. ಇದರಿಂದಾಗಿ ಹವ್ಯಕರದು ಬೇರೆಯೇ ಆದ ಒಂದು ಭಾಷೆಯೆಂತಲೋ ಅಥವಾ ಹಳಗನ್ನಡವೆಂತಲೋ ಭಾವಿಸಿದರೆ ಅದು ನಿಜವಲ್ಲ. ಹವ್ಯಕರ ಎಲ್ಲ ಪ್ರದೇಶಗಳಲ್ಲಿಯ ಕನ್ನಡ ಒಂದೇ ರೀತಿಯಾಗಿಲ್ಲ ಎಂಬ ಸಂಗತಿ ಹವ್ಯಕರಿಗೆ ಗೊತ್ತಿದ್ದದ್ದೇ, ಪ್ರಾದೇಶಿಕ ದೂರ, ವ್ಯಾಪಾರ ವಹಿವಾಟು ಕೇಂದ್ರ ಬೇರೆಯಾದಂತೆ ಅಥವಾ ಅಕ್ಕಪಕ್ಕದ ಇತರ ಭಾಷೆಗಳು ಬೇರೆಯಾದಂತೆ ಭಾಷೆಯಲ್ಲಿ ವ್ಯತ್ಯಾಸಗಳು ಉಂಟಾಗುತ್ತವೆ. ಈ ಕಾರಣದಿಂದ ಹವ್ಯಕ ಕನ್ನಡದಲ್ಲಿಯೂ ಅನೇಕ ಪ್ರಭೇದಗಳಿವೆ. ದಕ್ಷಿಣ ಕನ್ನಡದ ಹವ್ಯಕ ಮತ್ತು ಸುಳ್ಯದ ಪ್ರದೇಶ, ಪುತ್ತೂರು ಪ್ರದೇಶ ಹಾಗೂ ಕುಂಬಳೆ ಸೀಮೆಯ ಹವ್ಯಕಗಳಲ್ಲಿ ಹಲಕೆಲವು ವ್ಯತ್ಯಾಸಗಳಿವೆ. ತುಳು, ಮಲೆಯಾಳ ಶಬ್ದಗಳ ಪ್ರಭಾವ ದಕ್ಷಿಣ ಕನ್ನಡದ ಹವ್ಯಕರ ಮೇಲೆ ಸಾಕಷ್ಟಾಗಿದೆ. ಉತ್ತರ ಕನ್ನಡದ ಹವ್ಯಕರಲ್ಲಿಯೂ ಶಿರಸಿ, ಸಿದ್ಧಾಪುರ, ಯಲ್ಲಾಪುರ ತಾಲೂಕುಗಳಲ್ಲಿ ಭಾಷೆ ಸುಮಾರಾಗಿ ಒಂದೇ ರೀತಿಯದಾಗಿದ್ದು, ಇದು ಸಾಗರದ ಸುತ್ತಲಿನ ಹವ್ಯಕರ ಪ್ರಭೇದಕ್ಕಿಂತ ಭಿನ್ನವಾಗಿದೆ. ಪುನಃ ಇವೆರಡು ಪ್ರಭೇದಗಳು ಘಟ್ಟದ ಕೆಳಗಿನ ಕುಮಟಾ, ಹೊನ್ನಾವರ ತಾಲೂಕುಗಳಲ್ಲಿಯ ಹವ್ಯಕ ಪ್ರಭೇದಕ್ಕಿಂತ ಬೇರೆಯಾಗಿದೆ.  ಈ ಬೇರೆ ಬೇರೆ ಹವ್ಯಕ ಪ್ರಭೇದಗಳ ನಡುವಿನ ವ್ಯತ್ಯಾಸಗಳು ವ್ಯಾಕರಣ  ನಿಯಮಗಳಲ್ಲಿಯೂ ಶಬ್ದಗಳಲ್ಲಿಯೂ ಕಂಡು ಬರುತ್ತವೆ.

ದ್ರಾವಿಡ ಭಾಷಾ ಶಬ್ದಗಳಲ್ಲಿಯ ಎ ಹಾಗೂ ಒ ಸ್ವರಗಳು ಕನ್ನಡ, ತಮಿಳು, ತೆಲುಗು, ಮಲೆಯಾಳಂ ಭಾಷೆಗಳಲ್ಲಿ ಇ, ಉ. ಗಳಾಗಿ ಬದಲಾಗಿಬಿಟ್ಟಿವೆ. ಇದು ಸುಮಾರು ಎರಡು ಸಾವಿರ ವರ್ಷಗಳಿಗೂ ಹಿಂದೆ ನಡೆದ ವ್ಯತ್ಯಾಸ. ಇದರಿಂದಾಗಿ ಕಿಮಿ, ತೊಡಿ, ಬೆಳೆ, ಎಲಿ, ಸುಲಿ ಇತ್ಯಾದಿ ಶಬ್ದಗಳು ಕರ್ನಾಟಕದ ಹೆಚ್ಚಿನ ಪ್ರದೇಶಗಳಲ್ಲಿ ಕಿವಿ, ತುಟಿ, ಉಳಿ, ಬಳಿ, ಇಲಿ, ನುಲಿ, ಎಂದಾಗಿ ಬದಲಾದವು. ಆದರೆ ಹವ್ಯಕರಲ್ಲಿ ಆನು, ಯಾನು ಎಂಬ ರೂಪವಿದೆಯಷ್ಟೇ. ಕನ್ನಡ ಸಾಹಿತ್ಯದಲ್ಲಿ ಆನ್ ಎಂಬುದೇ ಹಳೆಯ ರೂಪ. ಅನಾದಿಯಿಂದಲೂ ತಮಿಳಿನಲ್ಲಿ ನಾನ್ ಎಂದೇ ಬಳಕೆಯಾಗಿದೆ. ಈ ಪ್ರಾಚೀನ ಪ್ರವೃತ್ತಿ ಹವ್ಯಕರಲ್ಲಿ ಈಗಲೂ ಚಾಲ್ತಿಯಲ್ಲಿದೆ. ಕನ್ನಡದ ಇತರ ಪ್ರದೇಶಗಳ/ಸಮಾಜಗಳ ಮಾತುಗಳಲ್ಲಿ ’ನಾವು’ ಎಂಬ ರೂಪ ಬಳಕೆಯಾಗುವ ಸಂದರ್ಭದಲ್ಲಿ ಹವ್ಯಕರಲ್ಲಿ ನಾವು/ಎಂಗೊ ಎಂಬ ಎರಡು ಬೇರೆ ಬೇರೆ ಸಂದರ್ಭಗಳಲ್ಲಿ ಬಳಕೆಯಾಗುತ್ತವೆ. ಹೀಗಿದೆ ಉದಾಹರಣೆ:

ಎಂಗೊ ಈಗ ಆಟಕ್ಕೆ ಹೋಗ್ತೊ | (ನಾವು ಈಗ ಆಟಕ್ಕೆ ಹೋಗ್ತೇವೆ)
ಎಂಗವು ಬರ‍್ತೋ (ನಾವು ಬರುತ್ತೇವೆ)
ಹಾಂಗಾರೆ ನಾವೆಲ್ಲರೂ ಹೋಪ | (ಹಾಗಾದರೆ ನಾವೆಲ್ಲರೂ ಹೋಗೋಣ)

ಈ ಮಾದರಿ ಹಳಗನ್ನಡದಲ್ಲಿ ಸಾಕಷ್ಟಿದೆ. ತೆಲುಗು ಕೊಡಗು ಭಾಷೆಗಳಲ್ಲಿಯೂ ಈ ಮಾದರಿಗಳಿವೆ. ಆದರೆ ಹವ್ಯಕರಲ್ಲಿ ಈಗಲೂ ಇರುವುದು ವಿಶೇಷವಾಗಿದೆ. ಹವ್ಯಕರ ಸರ್ವನಾಮ ಪದಗಳಲ್ಲಿ ಅವ-ಅದು ಪುಲ್ಲಿಂಗ ಮತ್ತು ಪುಲ್ಲಿಂಗೇತರ ಪ್ರಶ್ನಾರ್ಥಕ ಉದ್ಘಾರ ಸಂದರ್ಭಗಳಲ್ಲಿ ಹವ್ಯಕ ಮತ್ತು ಕನ್ನಡಕ್ಕೂ ಇರುವ ವ್ಯತ್ಯಾಸ ಇನ್ನೂ ಸ್ಪಷ್ಟ.

ನೀನು ಹೋಗುತ್ತಿಯೇನೋ – ನೀನು ಹೋಗ್ತ್ಯೇನೋ?
ನೀನು ಹೋಗುವಿಯೇನೇ – ನೀನ ಹೋಗ್ತ್ಯೇನೆ?
ನೀವು ಹೋಗುತ್ತೀರಾ? – ನಿಂಗ ಹೋಗ್ತ್ರಾ?

ಶಬ್ದಗಳ ಬಳಕೆಯ ವಿಷಯದಲ್ಲಿ ಹವ್ಯಕ ಕನ್ನಡವು ವಿಶಿಷ್ಟವಾಗಿ ನಿಲ್ಲುತ್ತದೆ. ಹಳಗನ್ನಡ ಕೆಲವು ಶಬ್ದರೂಪಗಳು ಹವ್ಯಕದಲ್ಲಿ ಉಳಿದುಕೊಂಡು ಬಂದಿವೆ. ಕೆಲವು ಸುತ್ತಲಿನ ಇತರ ಭಾಷೆಗಳಿಮದ ಬಂದಿದೆ. ಕನ್ನಡದ ಹಲವಾರು ಹಳೆಯ ಲಕ್ಷಣಗಳನ್ನು ಉಳಿಸಿಕೊಂಡು ಬಂದ ಹೆಮ್ಮೆ ಹವ್ಯಕರದು. ತಮಿಳರು ಇಂಥಾ ಭಾಷಾಭಿಮಾನ ಪ್ರವೃತ್ತಿಯವರು. ತಮ್ಮ ಭಾಷೆ, ಜೀವನದ ರೀತಿನೀತಿಗಳನ್ನು ಕಾಲಕ್ಕೆ ಸಂದರ್ಭಕ್ಕೆ ತಕ್ಕಂತೆ ಬದಲಿಸಲು ಹವ್ಯಕರು ಸಮ್ಮತಿಸಿರುವುದಿಲ್ಲ.

ಹವ್ಯಕ ನುಡಿ ಹಳೆಯ ಜನಪದ ಬಳಕೆಗೂ ಮೀರಿ ಆಧುನಿಕ ಸಾಹಿತ್ಯ ರಚನೆಗೂ ವಾಹಕವಾಗಬಲ್ಲ ಸಾಮರ್ಥ್ಯವನ್ನು ಸಾದರಪಡಿಸಿದೆ. ಈ ದಿಸೆಯಲ್ಲಿ ಮೊದಲನೆಯದಾಗಿ ಮತ್ತು ಮಹತ್ವಪೂರ್ಣದ್ದಾಗಿ ನೆನೆಯಬೇಕಾದದ್ದು ೧೮೮೭ ರಷ್ಟು ಹಿಂದೆಯೇ ಪ್ರಕಟಿತವಾದ ಕರ್ಕಿಯ ವೆಂಕಟ್ರಮಣ ಶಾಸ್ತ್ರಿಗಳ ’ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ’ ಕನ್ನಡದ ಮೊದಲು ಸ್ವತಂತ್ರ ಸಾಮಾಜಿಕ ನಾಟಕ.

ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನವು ಪರಿಣಾಮಕಾರಿಯಾಗಿ ಪ್ರದರ್ಶಿಸಲ್ಪಟ್ಟಿದ್ದು ಅನೇಕರಿಗೆ ತಾವೂ ಹಾಗೆ ಆಡುನುಡಿಯಲ್ಲಿ ಸಾಮಾಜಿಕ ವಸ್ತುಗಳುಳ್ಳ ನಾಟಕಗಳನ್ನು ರಚಿಸುವುದಕ್ಕೆ ಪ್ರೇರಕವಾಯಿತು.

ಹೆಲೆನ್ ಈ ಎಲ್ರಿಟ್ ಒಬ್ಬ ಅಮೇರಿಕನ್ ಮಹಿಳೆ. ಇವಳು ಕರ್ನಾಟಕಕ್ಕೆ ಬಂದು ’ಹವ್ಯಕ’ ಭಾಷೆಯ ವಿಶಿಷ್ಟತೆಯನ್ನು ಅಧ್ಯಯನ ಮಾಡಿದಳು. ಸಾಗರ ತಾಲೂಕಿನ ಬೇಳೂರು ಅಂಗಡಿ ಸುಬ್ಬಣ್ಣನವರ ಮನೆಯಲ್ಲಿ ವಾಸ್ತವ್ಯ ಮಾಡಿ ಹವ್ಯಕ ಭಾಷೆಯನ್ನು ಕಲಿತಳು. ಭಾಷೆ ಮತ್ತು ಸಂಸ್ಕೃತಿ ವಿಷಯದಲ್ಲಿ ವ್ಯಾಸಂಗ ಮಾಡಿ ಪಿ.ಎಚ್.ಡಿ. ಪಡೆದಳು. ಹವ್ಯಕ ಹೆಣ್ಣು ಮಕ್ಕಳ ವರ್ತನೆ ವಿವೇಕ ಜಾಗೃತಿ ಕಂಡು ತುಂಬ ಸಂತಸ ಪಟ್ಟಳು.

ಜನಪದ ಜೀವನ

ಹವ್ಯಕರು ಸ್ವಾವಲಂಬಿ ಜೀವನಕ್ಕೆ ತೊಡಗಿದಾಗ ಕೃಷಿಕರಾಗಿ ತೋಟಿಗರಾಗಿ ಅನಂತರ ವಿದ್ಯೆ ಕಲಿತು ನೌಕರಿ ಮಾಡುವುದನ್ನು ಮಾಡಿದರು. ಕೃಷಿ ಕೆಲಸದಲ್ಲಿ ಮೈ ಮುರಿದು ದುಡಿಯುತ್ತಿದ್ದ ಹಿಂದಣ ಹವ್ಯಕ ಸ್ತ್ರೀ ಪುರುಷರಿಗೂ ಇಲ್ಲಿಯ ಇತರ ರೈತ ಸ್ತ್ರೀ ಪುರುಷರಿಗೂ ಹೆಚ್ಚಿನ ಹೋಲಿಕೆ ಕಂಡು ಬರುತ್ತದೆ. ಆರಂಭದಲ್ಲಿ ಮಠಗಳಲ್ಲಿ ದೇವಾಲಯಗಳಲ್ಲಿ ಶಾಲೆಗಳಿರುತ್ತಿದ್ದವು. ಜೈಮಿನಿ ಭಾರತ ಪಠಣವು. ಸಂಸ್ಕೃತ ಪಾಠಶಾಲೆಗಳಲ್ಲಿ ಕಾಳಿದಾಸನ ಕಾವ್ಯ ನಾಟಕಗಳ ಪಠಣವು ಜರುಗುತ್ತಿತ್ತು. ಸಾಮಾನ್ಯವಾಗಿ ಸಂಸ್ಕೃತ ಸುಭಾಷಿತಗಳನ್ನು ಬಾಯಿಪಾಠ ಮಾಡಿಸುತ್ತಿದ್ದರು. ಹೆಂಗಸರು ಈ ಶಾಲೆಗಳಲ್ಲಿ ಸೇರುವುದು ತೀರ ಕಡಿಮೆಯಾಗಿತ್ತು. ಅವರಿಗೆ ಮನೆಯೇ ಮೊದಲ ಪಾಠಶಾಲೆಯೂ ಕೊನೆಯ ಪಾಠಶಾಲೆಯೂ ಆಗಿರುತ್ತಿದ್ದಿತು. ಕನ್ನಡ ಅಕ್ಷರ ಬಾರದಿದ್ದರೂ ಸಂಸ್ಕೃತದಲ್ಲಿ ಶ್ಲೋಕಗಳನ್ನು ಕಟ್ಟುವ ಸಾಮರ್ಥ್ಯವುಳ್ಳ ಹೆಂಗಸರು ಗೋಕರ್ಣದಲ್ಲಿದ್ದರು. ಕನ್ನಡದಲ್ಲಿ ಹಾಡುಗಳನ್ನು ಕಟ್ಟಿ ಹಾಡುತ್ತಿದ್ದ ಹೆಂಗಸರು ಅನೇಕರು. ಹೆಂಗಸರಿಗಾಗಿ ಕಲಿತ ಗಂಡಸರು ಹಾಡುಗಳನ್ನು ಬರೆದುಕೊಟ್ಟವರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಅವುಗಳ ಭಾಷೆ, ಧಾಟಿ ಮತ್ತು ವಸ್ತುಗಳ ದೃಷ್ಟಿಯಿಂದ ಶುದ್ಧ ಜನಪದ ಗೀತೆಗಳೇ ಆಗಿವೆ.

ಹವ್ಯಕರ ಸಂಸ್ಕೃತಿಯ ಉತ್ತಮ ಅಂಶಗಳನ್ನು ಹೆಂಗಸರು ಹೇಳುವ ಹಾಡುಗಳಲ್ಲಿ ಧಾರಾಳವಾಗಿ ಕಾಣಬಹುದು. ಹವ್ಯಕೇತರರ ನಾಗಪೂಜೆ ಕ್ರಮ, ಮಾರಿಯಮ್ಮ, ಹುಲಿದೇವರು, ಜಟ್ಟಿಗ, ಚೌಡಿ ಮೊದಲಾದ ದೇವತೆಗಳ ಪೂಜೆಯನ್ನು ಹವ್ಯಕರು ತಮ್ಮ ಆಚಾರ ಧರ್ಮದಲ್ಲಿ ಅಳವಡಿಸಿಕೊಂಡಿದ್ದಾರೆ. ಹವ್ಯಕರದಲ್ಲಿ ದೇವತಾ ತತ್ವಗಳ ವಿಷಯದಲ್ಲಿ ತಳಮಳವಿಲ್ಲ. ಹರಿ ಮತ್ತು ಹರ ಎರಡೂ ಸಮನ್ವಯ ದೃಷ್ಟಿ.

ಹರಿಯೆ ನಾರಾಯಣ ಗುರುವೆ ಸದಾಶಿವ
ಹರಿಭಕ್ತರ‍್ ಯೆನ್ನ ಒಡಹುಟ್ಟು | ಕಾಶಿಯ
ಪುರದಲ್ಲಿ ಯೆನ್ನ ತವರ್ಮನೆ ||

ಸೂರ್ಯನಿಗೆ ಉರಿಯಲು ಎಣ್ಣೆಯಾಗಲಿ ಬತ್ತಿಯಾಗಲಿ ಬೇಕಿಲ್ಲ. ಸತ್ಯದಿಂದ ಸದಾ ಚಲಿಸುವ ಜಗಜ್ಯೋತಿ ಸೂರ್ಯ ಎಂಬ ಅರಿವು ಹವ್ಯಕರದು.

ತಂದೆ ತಾಯಿಗೊ ತಂಪು ಚಂದ್ರಲೋಕಕೆ ತಂಪು ಎಂದು ತಂದೆ – ತಾಯಿಗಳನ್ನು ಹೊಗಳುವ ಹೆಣ್ಮಗಳು ’ಮನೆಗೆಲ್ಲ ತಂಪು ಹೆರಿಮಗ’ ಎಂದು ಮನೆತನವನ್ನು ನಡೆಸಿಕೊಂಡು ಹೋಗುವ ಸಹೋದರನನ್ನು ಹೊಗಳುತ್ತಾಳೆ.

ಅಕ್ಕನನ್ನು ಬಯ್ದವನು ಬೆಕ್ಕನು ಕೊಂದವನು ವಿರಳ. ಹಾಗೆಯೇ ಅತ್ತೆಮ್ಮ ಬಯ್ದರೆ ಹೆತ್ತಮ್ಮ ಬಯ್ದಂತೆ ಎಂದು ಭಾವಿಸು ಒತು ಸೋತು ನಡೆವ ಸೊಸೆಯಂದಿರು ಇರುತ್ತಾರೆ. ಅತ್ತೆ ಸತ್ತರೆ ಅತ್ತೆ ಉಡುವ ಪಚ್ಚೆ ತನಗಾಯ್ತು ಎಂದೆಣಿಸುವ ಸೊಸೆಯಂಥವರೂ ಇರುತ್ತಾರೆ.

ಹವ್ಯಕ ಸ್ತ್ರೀಯರ ಹಾಡುಗಳಲ್ಲಿ ಬರುವ ಛಂದಸ್ಸಿನ ವೈವಿಧ್ಯ ಹಾಗೂ ಹಾಡುಗಳ ಧಾಟಿಗಳ ಸೊಗಸು ಅತಿಶಯವಾಗಿದೆ. ಸ್ರೀ ಮತ್ತಿಘಟ್ಟ ಕೃಷ್ಟಮೂರ್ತಿಯವರು ಶ್ರೀ ಕೇಶವ ಭಟ್ಟರು ಅನೇಕ ಸಂಗ್ರಹಗಳನ್ನು ತಂದಿದ್ದಾರೆ. ಶ್ರೀ ಕೇಶವ ಭಟ್ಟರ ’ಶೋಭಾನೆಗಳು’ ಗ್ರಂಥದಲ್ಲಿ ಹೇಳುವಂತೆ ’ಪುರಾತನವಾದ ಧವಳಾರ (ಡವಳಾರ) ಛಂದಸ್ಸು ರನ್ನನು ಹೆಸರಿಸಿದ ಧವಳ ಮಂಗಳಗೇಯವಾದ ರೂಪವೆಂಬುದನ್ನು ಮತ್ತು ಅಧಿಗಣ, ವರಣ ಮೊದಲಾದವುಗಳನ್ನು ವಿವರಿಸಿದುದು ಮಹತ್ವಪೂರ್ಣವಾಗಿದೆ. ಧವಳ (ಬೆಳಗುವುದು) ಆರತಿ ಮಾಡುವ ಹಾಡುಗಳೆಂದು ಹೇಳಿರುತ್ತಾರೆ. ಬಹುಶಃ ಯಾರೂ ಸಂಗ್ರಹ ಮಾಡದಷ್ಟು ಶಿವಮೊಗ್ಗಾ, ದಕ್ಷಿಣ ಕನ್ನಡ, ಉತ್ತರ ಕನ್ನಡ ಈ ಮೂರು ಜಿಲ್ಲೆಗಳ ಹವ್ಯಕರ ಹಾಡುಗಳು ಪ್ರಚಲಿತದಲ್ಲಿವೆ.

’ಶೋಭನ’ ಎಂಬುದು ಶುಭ, ಸುಂದರ, ರಮಣೀಯ, ಶಿವ ಎಂಬರ್ಥಗಳುಳ್ಳ ಸಂಸ್ಕೃತ ಶಬ್ದ. ಶೋಭನ ಗೀತವನ್ನು ಶುಭಗೀತ ಮಂಗಳ ಗೀತ ಎಂದಿರುವ ಕಾವ್ಯೋಲ್ಲೇಖಗಳಿವೆ. ಇದನ್ನೇ ಶೋಭಾನೆ ಜಾನಪದವಾಗಿ ಸೋಬಾನ, ಸೋಬಾನೆ ಎನ್ನುವರು. ಕನ್ನಡದ ಪದ್ಯಸಾಹಿತ್ಯ ಪ್ರಭೇದಗಳ ಗಣನೆಯಲ್ಲಿ ’ಶೋಭನಗೀತೆ’ ಪ್ರಕಾರವು ಇದುವರೆಗೆ ಸ್ಥಾನ ಪಡೆದಿಲ್ಲ. ಶೋಭಾನೆ ಯಾವಾಗ ಹುಟ್ಟಿತು? ಇದನ್ನು ಶೋಭಾನೆ ಹಾಡೇ ಹೇಳುತ್ತದೆ.

ಸೋಬಾನ ಹೇಳೋದ ಯಾರಮ್ಮ ಮಾಡಿದೋರು
ನಾರಾಯಣ ಬಲ್ಲ ಶಿವಬಲ್ಲ- ಸೋಬಾನ
ಸ್ವಾಮಿ ಈಶ್ವರನ ಮದುವೇಲಿ – ಸೋಬಾನ
ಆಗುಟ್ಟಿ ಆಗ – ಬೆಳೆದವೆ.

ಇಲ್ಲಿ ತ್ರಿಪದಿ ವಿಸ್ತಾರಗೊಂಡಿವೆ. ಇದರಲ್ಲಿ ಹೇಳುವ ಪ್ರಕಾರ ಪ್ರಪಂಚದ ಮಾತಾ ಪಿತೃಗಳಾದ ಶಿವ ಪಾರ್ವತಿಯರ ಮದುವೆಯಿಂದಲೇ ಆರಂಭವಾಗಿದೆ. ಕನ್ನಡದ ಆದಿಕವಿ ಪಂಪದನ ಆದಿಪುರಾಣದಲ್ಲಿ ಮಂಗಲಗೀತವನ್ನು ದೇವಾಂಗನೆಯರು ಹಾಡಿದ ಉಲ್ಲೇಖವಿದೆ. ಅನಂತರ ನಾಗಚಂದ್ರ (ಕಾಲ ೧೦೩೦) ರಾಘವಾಂಕ (೧೨೩೫) ರತ್ನಾಕರವರ್ಣಿ (೧೫೫೦) ಮುಂತಾದವರು ಧವಳ ಶೋಭಾನೆಗಳನ್ನು ಮುತ್ತೈದೆಯರು ಹಾಡಿದುದನ್ನು ತಮ್ಮ ಕಾವ್ಯಗಳಲ್ಲಿ ವರ್ಣಿಸಿದ್ದಾರೆ.

ಹವ್ಯಕರಲ್ಲಿ ಶುಭ ಕಾರ್ಯಗಳೆಲ್ಲವೂ ವಿಘ್ನನಾಶಕ ಸಿದ್ಧಿನಾಯಕ ಗಣಪತಿ ಪೂಜೆಯಿಂದ ಮೊದಲಾಗುತ್ತದೆ.

ಸಿದ್ಧಿವಿನಾಯಕ ಸಿದ್ಧಿಯ ಮಾಡಯ್ಯ
ಸಿಬ್ಬಲುಂಡಲಿಗೆ ನಿನಗೀವೆ, ಗಣನಾಥ
ಶೀಘ್ರದಿ ಮತಿಯ, ಕರುಣಿಸು
ಕಾರ್ಯ ವಿನಾಯಕ ಕಾರ್ಯವ ಮಾಡಯ್ಯ
ಕಾರೆಳ್ಳು ಕಡಲೆ ನಿಗೀವೆ, ಗಣನಾಥ
ಕಾರ್ಯದಲಿ ಜಯ – ಕರುಣಿಸು

ಚೆನ್ನಾಗಿ ಎಳೆದು ಹಾಡುವ ಧಾಟಿ.

ಮದುವೆಯ ಹಾಡುಗಳು ಅಸಂಖ್ಯ. ಹೆಣ್ಣು ಕೇಳುವಲ್ಲಿಂದ ಮದುವೆಯ ಕಾರ್ಯರೂಪ ಆರಂಭ, ಇಲ್ಲಿ ಹೆಣ್ಣಿಗೆ ಗಂಡಿಗಿಂತ ಗೌರವ ಘನತೆ. ಹೆಣ್ಣನ್ನು ಗಂಡಿನ ಕಡೆಯವರು ಕೇಳುವ ಹಾಡು ಬಹಳವಿದೆ. ಆದರೆ ಹೆಣ್ಣಿಗೆ ಗಂಡನ್ನು ಕೇಳುವ ಹಾಡು ಒಂದೂ ಇಲ್ಲ. ಶಿವನಿಗೆ ಪಾರ್ವತಿಯನ್ನು, ರಾಮನಿಗೆ ಸೀತೆಯನ್ನು, ನಳನಿಗೆ ದಮಯಂತಿಯನ್ನು ಕೊಡುವಿರೋ ಎಂದು ಕೇಳುವ ಹಾಡುಗಳೇ, ಇದು ಗಮನಾರ್ಹ ಸಂಗತಿ.

ಮದುವೆ ದಿನ ನಿಶ್ಚಯವಾದ ಮೇಲೆ ಕರೆಕೊಡುವ ಕಾರ್ಯ. ಶ್ರೀ ಕೃಷ್ಣನ ಮದುವೆಗೆ ದೇವಕಿ ಕೇರಿ ಕರೆಯುವ ಹಾಡು=

ಕರೆದಳೇ ದೇವಕಿ ಕೇರಿಯನು (ಪಲ್ಲವಿ)

ವರನ ದಿಬ್ಬಣ ಬಂದಿದೆ. ಆಗ ಹೆಣ್ಣಿನ ಮನೆಕಡೆಯಿಂದ ಉಪಚಾರ ಹೇಳುವ ಹಾಡು ಸತ್ಕರಿಸುವುದು, ಸ್ವಾಗತಿಸುವುದು, ಸಭೆಗೆ ಕರೆಯುವುದುದು, ತಾಂಬೂಲ ಕೊಡುವುದು, ಸಭಾಲಂಕಾರ, ಸಭಾ ಪೂಜೆ, ಹೂ ಹಚ್ಚುವುದು, ಮಧು ಪರ್ಕ, ಉಂಗುರ ತೊಡಿಸುವುದು, ವಧು ಅಲಂಕಾರ ಮಾಡುವುದು ಇತ್ಯಾದಿ ನಂತರ ವಧುಧಾರೆ ಮಂಟಪಕ್ಕೆ ಬರುತ್ತಾಳೆ.

ಬಂದಳು ರತಿಯು ಚಂದದಿ ನಲಿಯುತ
ಮನ್ಮಥನಿರುವಾ ಮಂಟಪಕೆ (ಪಲ್ಲವಿ)

ಮುಂದೆ ತೆರೆವಲ್ಲಿ ಮಂಗಲಾಷ್ಟಕ, ಮಾಲಾರ್ಪಣೆ ಇದರಲ್ಲಿ ಲಕ್ಷ್ಮೀದೇವಿಯು ಮಹಾವಿಷ್ಣುವಿಗೆ ಮಾಲೆ ತೊಡಿಸುತ್ತಾಳೆ.

ಶ್ರೀ ಗುರು ಗಣಪರ ಶೀಘ್ರದಿ ನೆನೆಯುತ್ತ
ಯೋಗ ಮಹೇಶ್ವರಿಯೊಳು ಮತಿ ಬೇಡುತ್ತ
ಈಗ ನಾನು ಸುರುವೆನು ಇಂದಿರೆ ಕೈಯೊಳ
ಹೂಗಿನ ಮಾಲೆಯನು ಪಿಡಿದು ನಸು
ಬಾಗಿ ಲಜ್ಜಿಸುತ ತಾನು ದೇವಾಸುರರನು |

ಬ್ರಹ್ಮನು ಮುದುಕನು, ಇಂದ್ರನು, ಗವಿ, ಕುಬೇರನು ಹೆಮ್ಮಯುಳ್ಳವನು, ಚಂದ್ರನಿಗೆ ವೃದ್ಧಿಕ್ಷಯಗಳಿವೆ. ಅಗ್ನಿ ಸುಡುವವನು, ವಾಯು ಚಂಚಲನು, ಈಶ್ವರನು ವಿಷಕಂಠ ಆದುದರಿಂದ ಇವರಲ್ಲಿ ಮನಸ್ಸಾಗದೆ ವಿಷ್ಣುವಿನ ಬಳಿಗೆ ಬಂದಳೆಂದು ಹೇಳುವ ಪರಿಯಿದೆ.

ಮದುವೆಯ ಕರ್ಮಾಂಗಗಳ ಅನುಕ್ರಮಣಿಕೆಯಂತೆ ಹಾಡುಗಳು ಸಾಗುತ್ತವೆ. ಧಾರೆ ಎರೆದದ್ದು, ಸಪ್ತಪದಿ, ದಾನದಕ್ಷಿಣೆ, ಕಂಠ ಸೂತ್ರ ಕಟ್ಟುವುದು, ಕನ್ಯಾದಾನ, ಹೀಗೆ ಪ್ರತಿಯೊಂದು ಪ್ರವೃತ್ತಿಯೂ ಪಲ್ಲವಿಸುತ್ತ ಹೋಗುತ್ತದೆ. ಶುಭಶೋಭನ ಹಾಡುಗಳು ದೇಸಿಯೆನಿಸುವ ಛಂದಸ್ಸಿನ ನಿಧಿಯಂತಿದೆ. ಇದರ ಪ್ರಕಾರಗಳಲ್ಲಿ ತ್ರಿಪದಿ, ತ್ರಿಪದಿ ವಿಸ್ತರಣ ರೂಪಗಳು, ತ್ರಿಪದಿ ಮುಕುಟವಿರುವ ವಿವಿಧ ಪ್ರಭೇದಗಳು ಬರುತ್ತವೆ.

ಜೀವನದ ಅನುಭವವನ್ನು ಹವ್ಯಕ ಸ್ತ್ರೀಯರು ಹೇಳುವ ರೀತಿ ಮನೋಜ್ಞವಾಗಿದೆ.

ಆಡಿ ಉಂಡವ ಕೆಟ್ಟ ಕೇಡ ನೆನೆದವ ಕೆಟ್ಟ
ನೋದೇ ಕೆಟ್ಟ ಬೆಳಭೂಮಿ | ಪರರ‍್ಹೆಂಡಿರ
ಮೊಕ ನೋಡಿ ಕೆಟ್ಟ ಕುಲಕೇಡಿ ||

ಆಲಸ್ಯದಿಂದ ಸಮಯ ಹಾಳು ಮಾಡಿ ’ಕೂತಲ್ಲಿ ಉಂಡರೆ ಕುಡಿಕೆಯ ಹೊನ್ನು ಸಾಲ’ ಎಂಬ ಅರ್ಥವನ್ನು ಸಾರುವ ಹಾಡಿದು.

ಹಲವು ಹಬ್ಬಹರಿದಿನಗಳ ಸೊಗಸನ್ನು ಬಿತ್ತರಿಸುವ ಎಷ್ಟೋ ಹಾಡುಗಳು ಲಭ್ಯವಾಗುತ್ತವೆ. ದೀಪಾವಳಿಯಲ್ಲಿ ಬರುವ ಬಲೀಂದ್ರನು ಧ್ಯಾನದ ದೇವತೆಯಾಗಿ ಪೂಜೆಗೊಳ್ಳುತ್ತಾನೆ. ಬಲೀಂದ್ರನನ್ನು ಬರಮಾಡಿಕೊಳ್ಳುವವರು. ಹೆಣ್ನು ಮಕ್ಕಳೇ ಇಲ್ಲಿ ಪುರೋಹಿತರು ಆಚಾರ್ಯರು ಬಂದು ಮಂತ್ರ ಹೇಳುವುದಿಲ್ಲ.

ಈ ತನ್ನ ರಾಜ್ಯದ ಶುಭವೆಂದೆನುತಾ
ಯೆರಗಿ ನೋಡಿದನೇ ಬಲಿಯಂದ್ರ

ಎಂದು ಶುರುವಾಗುವ ಹಾಡು ಬಲಿರಾಜ್ಯದ ಕಥೆಯನ್ನೆಲ್ಲ ಸಾರುತ್ತದೆ.

ಧಾನ್ಯವು ಲಕ್ಷ್ಮಿಯು ಹಣವು ಎಂದು ಪೂಜೆ ಮಾಡುತ್ತಾರೆ. ಧಾನ್ಯವು ಬರೀಭತ್ತವಲ್ಲ ಧಾನ್ಯಮಾತೆ ಚೇತನಾ ಚೇತನಳೇ ಹೇ ಧಾನ್ಯಮಾತೆ ಛೇದಿವೆ ಕತ್ತೀಯ ಹಿಡಿತವ ಕ್ಷಮಿಸೆಂದು ಸತೋತ್ರೀನ ಧಾನ್ಯ ತರಲಾಗುತ್ತದೆ.

ಮದುವೆಯ ಶೋಭನದ ಹಾಡುಗಳು ಹಬ್ಬ  ಹರಿದಿನಗಳ ಹಾಡುಗಳು ವೃತ ಪುರಾಣ ಕಥೆಗಳ ಹಾಡುಗಳು ಹವ್ಯಕ ಸಂಸ್ಕೃತಿಯ ಹಿರಿಮೆಯನ್ನು ಚೆನ್ನಾಗಿ ಪ್ರಕಟಿಸುತ್ತವೆ.

ತಾಳಮದ್ದಲೆ ಮತ್ತು ಯಕ್ಷಗಾನ ಕಲೆಗಳಲ್ಲಿ ಹವ್ಯಕರು ಬಹಳ ಮೇಲ್ಮೆಯನ್ನು ಪಡೆದಿದ್ದಾರೆ. ಈ ಕಲೆಗಳನ್ನು ಜನಪದ ಕಲೆಗಳೆಂದೇ ಗುರುತಿಸಬೇಕಾಗುತ್ತದೆ. ಬಾಲಕರ ಯಕ್ಷಗಾನ, ಮಹಿಳಾ ಯಕ್ಷಗಾನ ಹಾಗೂ ಇತ್ತೀಚೆಗೆ ಕುರುಡು ಬಾಲಕರ ಯಕ್ಷಗಾನಗಳು ನಡೆಯುತ್ತಿವೆ. ಹೊಸ್ತೊಟ ಶ್ರೀ ಮಂಜುನಾಥ ಭಟ್ಟರು ಕುರುಡು ಬಾಲಕರ ಯಕ್ಷಗಾನ ಪ್ರದರ್ಶನವನ್ನು ಯಶಸ್ವಿಗೊಳಿಸಿದ್ದಲ್ಲದೆ ಸಾಲ್ಕಣಿ ತರಬೇತಿ ಕೇಂದ್ರದಿಂದ ಮಹಿಳಾ ಕಲಾ ಪ್ರತಿಭಾವಂತರನ್ನು ಸಿದ್ಧಗೊಳಿಸಿ ಸಫಲರಾಗಿದ್ದಾರೆ. ಸಮಯ ಸಮೂಯ ಮಕ್ಕಳ ತರಬೇತಿ ಸಿದ್ಧಳಾದ ಶಿರಸಿಯ ಪ್ರಜ್ಞಾ ಮತ್ತೀಹಳ್ಳಿ ಶ್ರೇಷ್ಠ ಅಭಿನೇತ್ರಿಯಾಗಿ ಅನೇಕ ಪ್ರಯೋಗಗಳನ್ನು ನೀಡಿದ ಪ್ರಬುದ್ಧ ಕಲಾವಿದೆ. ವಿಜಯ ನಳಿನಿ ರಮೇಶ ಯಕ್ಷಗಾನ ಅರ್ಥಧಾರಿಕ ಮೇಲೆ ಪ್ರಬಂಧ ಬರೆದು ಪಿಎಚ್‌.ಡಿ. ಪಡೆದಿದ್ದಾರೆ. ಪ್ರತಿಭೆ ಎಂಬುದು ವೈಯಕ್ತಿಕವಾದದ್ದು ನಿಜ. ಯಾವುದೇ ಪ್ರತಿಭೆಯಾದರೂ ತಕ್ಕ ಪ್ರೇರಣೆ, ಪರಿಸರ ಹಾಗೂ ಅಗತ್ಯ ಅವಕಾಶ ಸಿಗದಿದ್ದರೆ ಬೆಳಕಿಗೆ ಬರಲಾರದು. ಈ ದೃಷ್ಟಿಯಿಂದ ಹವ್ಯಕ ಸಮಾಜದ ಹೆಣ್ಣು ಮಕ್ಕಳು ಸಂಗೀತ ಕಲೆಯಲ್ಲೂ ತಮ್ಮ ಪ್ರತಿಭೆಯನ್ನು ಮೆರೆಸಲು ಹಿಂದೆ ಬಿದ್ದಿಲ್ಲ. ವೈಜಯಂತಿ ಕಾಶಿ ಭರತನಾಟ್ಯದಲ್ಲೂ ನಾಟಕರಂಗದಲ್ಲೂ; ಹಾಗೇ ಸಿನೇಮಾ, ಕಿರುತೆರೆಯಲ್ಲೂ ಹವ್ಯಕ ಹೆಣ್ಣು ಮಕ್ಕಳು ಮುಂದಡಿಯಿಡುತ್ತಿದ್ದಾರೆ. ಪತ್ರಿಕಾಕ್ಷೇತ್ರ, ಕಥೆ, ಕಾದಂಬರಿ ಸೃಜನಶೀಲ ಸಾರಸ್ವತ ಲೋಕದಲ್ಲಿ ಹವ್ಯಕ ಹೆಣ್ಣು ಮಕ್ಕಳು ಗಣನೀಯವಾಗಿ ಸಕ್ರಿಯರಾಗಿ ಸಾರ್ಥಕ ಸೇವೆ ಮಾಡುತ್ತಿದ್ದಾರೆ.