ಉಡುಗೆತೊಡುಗೆ

ಮೂರು ಸುತ್ತು ಹಾಕಿ ಮೊಳಕಾಲವರೆಗೆ ಉಡುವ ಕಸ್ತ್ರಕಡ್ಡಿ ಸೀರೆ : ಲಂಡ ತೋಳಿನ ಖಣದ ಕುಪ್ಪಸ (ರವಿಕೆ) : ಲಲಾಟದ ತುಂಬ ಹಚ್ಚಿದ  ಹುಡಿಕುಂಕುಮ; ಕಪೋಲಗಳಿಗೆ ತೆಳು ಅರಿಶಿನದ ಲೇಪನ; ಕೈತುಂಬ ತರತರದ ಗಾಜಿನ ಬಳೆಗಳ ಓರಣ; ಕಿವಿಗೆ ಬಂಗಾರದ ಬೆಂಡವಾಲೆ, ಬುಗುಡಿ; ಕೊರಳಿಗೆ ಕರಿಮಣಿಸರ ; ಇವು ಹವ್ಯಕ ಮುತ್ತೈದೆಯ ನಿತ್ಯದ ಉಡುಗೆ ತೊಡುಗೆ. ಹಬ್ಬ, ಸಮಾರಂಭ, ಉತ್ಸವಗಳಲ್ಲಿ ಆಭರಣ ಬೂಷಿತೆಯಾಗಲು ಹವ್ಯಕ ಹೆಣ್ನು ಧರಿಸುವ ಆಭರಣಗಳು; ಏಕರಾಣಿ, ಗೆಜ್ಜೆ, ಟೀಕೆ, ಪುತ್ತಳಿಸರ, ಪವನಸರ, ಎಳೆ ಕಟ್ಟಗಿ ಬಂದಿ ಸರಿಗೆ, ಜಿಂಗವಾಣಿ ಸರ ಇತ್ಯಾದಿ. ಇದು ದಶಕದ ಹಿಂದೆ ಒಬ್ಬ ಮುತ್ತೈದೆ, ಸವಾನಭರಣ ಭೂಷಿತೆಯಾಗಿ, ಹೆತ್ತಮಕ್ಕಳನ್ನು ಸೊಂಟದಲ್ಲಿ ಹೊತ್ತು, ಕೈಯಿಂದ ಭುಜ ಸವಾರಿಸಿ ಎಳೆದುಕೊಂಡು, ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಅತಿಥಿ ದೇವೋಭವ ಇದು ಹವ್ಯಕರ ಜೀವನದಲ್ಲಿ ಅಕ್ಷರಶಃ ಹಾಸುಹೊಕ್ಕಾಗಿ ಬಂದಿದೆ. ಮನೆಗೆ ಯಾರೇ ಅತಿಥಿಗಳು ಬರಲಿ, ಅವರಿಗೆ ಆದರ, ಅಭಿಮಾನದಿಂದ ಆತಿಥ್ಯ ನೀಡುತ್ತಾರೆ. ಇದು ಕೇವಲ ಔಪಚಾರಿಕವಲ್ಲ. ಔದಾರ್ಯದ ಅಭಿವ್ಯಕ್ತಿ. ಆಗಮಿಸಿದ ಅತಿಥಿಗಳ ಎದುರು ಮನೆಯ ಮುತ್ತೈದೆಯರು ನೀರು ತುಂಬಿಗೆ ತಂದಿಟ್ಟು ಕೈಕಾಲು ಮುಖ ತೊಳೆದುಕೊಳ್ಳಿ ಎಂದು ನಮಸ್ಕರಿಸುತ್ತಾರೆ. ಕೈಕಾಲು ಮುಖ ತೊಳೆದುಕೊಳ್ಳುವುದು ಮೊದಲ ತ್ರಿಕರಣಶುದ್ಧಿ ಅನಂತರ ಮಜ್ಜಿಗೆಯನ್ನೋ ಪಾನಕವನ್ನೋ ಕೊಡುತ್ತಾರೆ. ಈಗ ಚಹಾ ಕಾಫಿ ಕಷಾಯ ನೀಡುತ್ತಾರೆ. ಹಿಂದೆ ಮಜ್ಜಿಗೆ, ಬೆಲ್ಲ, ನೀರು, ಎಳ್ಳು ಬೀಸಿ ಬೆಲ್ಲ ಹಾಕಿ ತಯಾರಿಸಿದ ಎಳ್ನೀರು ಅಥವಾ ಮೊಗೆ ಬೀಜ ಬೀಸಿ ಬೆಲ್ಲ ಹಾಕಿದ ಪೇಯ ಸದಾ ಸಿದ್ಧವಿರುತ್ತಿತ್ತು. ಇಷ್ಟಾದ ಮೇಲೆಯೇ ಉಭಯ ಕುಶಲೊಪರಿ ಉಪಕ್ರಮ. ಹವ್ಯಕರ ಮನೆಗೆ ಬಂದ ಅತಿಥಿ ಅಭ್ಯಾಗತರು ಅಲ್ಪೋಪಹಾರವಿಲ್ಲದೆ ತೆರಳುವಂತಿಲ್ಲ. ಊಟ ಮಾಡಿಯೇ ಹೋಗಬೇಕೆಂಬ ಆಗ್ರಹ ಆಶಯವನ್ನು ಹೊಂದಿರುತ್ತಾರೆ. ಊಟದ ಸಂಭ್ರಮ ಹವ್ಯಕರ ದೊಡ್ಡ ಹೆಮ್ಮೆ. ಹವ್ಯಕರ ಹೆಣ್ಣು ಮಕ್ಕಳಿಗಂತೂ ಊಟದ ಸಿದ್ಧತೆಯೊಂದು ದೊಡ್ಡ ಸಡಗರ. ಇದಕ್ಕಾಗಿ ಮನೆಯ ಹಿತ್ತಲಿನಲ್ಲಿ ಸೌತೆ, ಬೆಂಡೆ, ಬದನೆ, ಅಲ್ಲದೆ ಚವರೆ, ತೊಂಡೆ, ಹಾಗಲಕಾಯಿ ಬಳ್ಳಿ ಬೆಳೆಸಿಕೊಳ್ಳುತ್ತಾರೆ. ಇಷ್ಟೂ ಸಾಲದೆಂಬಂತೆ ಹಂಗಾಮಿನಲ್ಲಿಯೇ ಹಲಸಿನಕಾಯಿ ಹಪ್ಪಳ, ಹಲಸಿನ ಕಾಯಿ ಸೊಳೆಯನ್ನು ಉಪ್ಪು ನೀರಿನಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದು. ಮಾವಿನ ಕಾಯಿ ಬೇಯಿಸಿ ಉಪ್ಪು ನೀರಿನಲ್ಲಿ ನೆನೆಸಿಟ್ಟುಕೊಳ್ಳುವುದನ್ನು ಮರೆಯಲಾರರು. ಹಲಸಿನ ಸೊಳೆಯ ಹಸಿ, ಪಲ್ಯವನ್ನಲ್ಲದೆ ಬೆಲ್ಲ ಹಾಕಿ ಕುದಿಸಿ ಸರಿಯಾದ ಲೇಹ್ಯವನ್ನು ಮಾಡುತ್ತಾರೆ. ಮಾವಿನಕಾಯಿ ಗೊಜ್ಜು ಗುಳುಂಬ ಮಾಡುತ್ತಾರೆ. ಇವನ್ನು ಶುಚಿಯಾಗಿಡುವ ಶ್ರದ್ಧೆ ರುಚಿಯಾಗಿಸುವ ಶ್ರಮ ಹವ್ಯಕ ಹೆಂಗಸರ ಜಾಣ್ಮೆಯಾಗಿದೆ. ಇಂದಿನ ಫ್ರಿಜ್‌ನಲ್ಲಿ ಕೂಡಾ ಇಷ್ಟು ಸುರಕ್ಷಿತವಾಗಿ ಸಂರಕ್ಷಿಸಿಕೊಳ್ಳಲಾಗುವುದಿಲ್ಲ.

ಹಿಂದಿನ ಹವ್ಯಕರ ಅಡುಗೆ ತಿಂಡಿಗಳನ್ನು ಗಮನಿಸಿದಾಗ ಅಲ್ಲಿ ಸರಳತೆ, ಮಿತವ್ಯಯಗಳು ಮಾತ್ರವಲ್ಲದೆ ದೇಹಾರೋಗ್ಯಕ್ಕೆ ಹಿತವೆನಿಸುವ ಸೂತ್ರ ಕಮಡು ಬರುತ್ತದೆ. ಆಯಾಯ ಋತುಕಾಲಕ್ಕನುಗುಣವಾಗಿ ಆಹಾರ ಪದಾರ್ಥಗಳನ್ನು ಅನ್ವಯಿಸಿರುವುದು ಸ್ಪಷ್ಟವಾಗುತ್ತದೆ. ಶ್ರಾವಣ ಭಾದ್ರಪದ ಮಾಸಗಳಲ್ಲಿ ’ಚಕ್ಕುಲಿ ಕಂಬಳ’ಗಳನ್ನು ಮಾಡುತ್ತಿದ್ದರು. ಕೃಷ್ಣಾಷ್ಠಮಿ ಕಳೆದು ಚೌತಿಯೊಳಗೆ ಚಕ್ಕುಲಿ ಕಂಬಳವಾಗಬೇಕು. ನೆನೆ ಹಾಕಿದ ಅಕ್ಕಿಯನ್ನು ರುಬ್ಬಿ ಜೀರಿಗೆ ಮೆಂತೆ ಸೇರಿಸಿ ಹಿಟ್ಟು ಹದಮಾಡಿ ಗಂಸರೇ ಕಟ್ಟಿಗೆ ಮಣೆಗಳ ಮೇಲೆ ಕೈಯಿಂದಲೇ ಎಳೆ ಎಳೆಯಾಗಿ ಸುತ್ತುತ್ತಾರೆ. ಚಕ್ಕುಲಿ ಸುತ್ತಲು ಬರದಿದ್ದರೆ ಹೆಣ್ಣು ಕೊಡುವುದಿಲ್ಲವೆಂಬ ಕರಾರು ಬೇರೆ ಮಾಡುತ್ತಿದ್ದರು. ಇದರಿಂದಾಗಿ ಗಂಡುಮಕ್ಕಳು ಕೈಕೌಶಲದಿಂದ ಚಕ್ಕುಲಿ ಸುತ್ತುವ ಕಾಯಕ ಕೈಗೊಳ್ಳುತ್ತಿದ್ದರು. ಊರಿನವರೆಲ್ಲ ಸೇರಿ ಒಂದು ಸಂಜೆ ಶುರು ಮಾಡಿದರೆ ಮಧ್ಯರಾತ್ರಿ ಮುಗಿಯುವವರೆಗೂ ಚಕ್ಕುಲಿ ಸುತ್ತುತ್ತಿದ್ದರು. ಹೆಂಗಸರದು ಚಕ್ಕುಲಿ ಕರಿಯುವ ಕೆಲಸ. ’ಈ ವರ್ಷ ಎಮ್ಮನೆ ಚಕ್ಲಿ ಹದ ನೋಡ್ಲಕ್ಕೂ ಬಾ’ ಎಂದು ಬಂಧು ಬಾಂಧವರನ್ನು ಕರೆಯುವರು. ಈ ಚಕ್ಕುಲಿ ಸಂವಾದ ಸವಿಯೇ ಬೇರೆ. ಕೊನೆ ಡಬ್ಬಿಯ ಚಕ್ಕುಲಿ ಪಾಯಸ ಮಾಡುತ್ತಿದ್ದರು. ಅಲ್ಲಿಗೆ ಆ ವರ್ಷದ ಚಕ್ಕುಲಿ ಚರಿತ್ರೆ ಮುಗಿದ ಹಾಗೆ. ಎಲ್ಲ ಹವಾಮಾನದಲ್ಲೂ ಹಿತವಾಗುವಂಥ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತಿತ್ತು. ಬಾಯಿ ಚಪಲಕ್ಕೆ, ಬಯಕೆಗೆ ತಿಂಡಿಯನ್ನು ಮಾಡುತ್ತಿರಲಿಲ್ಲ. ಚಳಿಗಾಳಿ, ಮಳೆಗಾಲದಲ್ಲಿ ಮಾತ್ರ ಖಾದ್ಯ ಪದಾರ್ಥ.

ಹವ್ಯಕರು ಹೆಚ್ಚಾಗಿ ಕೃಷಿಯನ್ನೇ ಅವಲಂಬಿಸಿದ್ದರಿಂದ ತಮ್ಮ ಸುತ್ತಮುತ್ತಲು ಲಭ್ಯವಿರುವ ಸೊಪ್ಪು, ತರಕಾರಿ, ಹೂವುಹಣ್ಣು, ದಂಟು, ನಾರು ಬೇರು ಸಿಪ್ಪೆ ಬೀಜ ಇತ್ಯಾದಿಗಳಿಂದ ಅಡುಗೆ ತಯಾರಿಸುತ್ತಾರೆ.

ಅಡುಗೆ ತಿಂಡಿ ತಿನಿಸುಗಳನ್ನು ಶುಭ ಕಾರ್ಯಗಳಿಗೆ ಬೇರೆ ರೀತಿಯ ಹಾಗೂ ಅಶುಭ ಕಾರ್ಯಗಳಿಗೆ ಬೇರೆ ರೀತಿಯ ಅಡುಗೆಗಳನ್ನು ತಯಾರಿಸುವುದನ್ನು ಗಮನಿಸಬಹುದು. ಸೀಮಂತದಲ್ಲಿ ಪ್ರತ್ಯೇಕವಾದ ಅಡುಗೆಗಳನ್ನು ಮಾಡುತ್ತಿದ್ದುದು ಕೂಡಾ ಕಂಡು ಬರುತ್ತದೆ. ಸಣ್ಣ ಪುಟ್ಟ ಕಾಯಿಲೆಗಳಿಂದ ಹಿಡಿದು ಬಾಣಂತಿಯ ಪಥ್ಯದ ಅಡುಗೆಯನ್ನು ಕೂಡಾ ತಮ್ಮ ಸುತ್ತಮುತ್ತಲೂ ಲಭ್ಯವಿರುವ ಸಾಮಗ್ರಿಗಳಿಂದಲೇ ತಯಾರಿಸುತ್ತಿದ್ದುದು ವೈಶಿಷ್ಟ್ಯಪೂರ್ಣವಾಗಿದೆ.

ಬ್ರಾಹ್ಮೀ, ತಂಬಳಿಯನ್ನು ಹವ್ಯಕರು ನಿಯಮಿತವಾಗಿ ಉಪಯೋಗಿಸುತ್ತಿದ್ದು ಅವರ ಸ್ಮರಣಶಕ್ತಿ ಹೆಚ್ಚಲು ಸಹಾಯವಾಗುತ್ತಿತ್ತು. ಅಜೀರ್ಣವಾದಾಗ ಕಂಚುಸಟ್ಟು ತಂಬಳಿ, ನೆಲ್ಲಿಯ ತಂಬಳಿ, ಕೊಡಗಾಸನ ತಂಬಳಿ, ನೇರಳೆ ಕುಡಿ ತಂಬಳಿ, ಒಂದೇ ಎರಡೇ, ನೂರಾರು ಬಗೆಯ ತಂಬುಳಿಯನ್ನು ತಯಾರಿಸಿ ಕುಡಿಯುವುದು ಮತ್ತು ಊಟಕ್ಕೆ ಬಳಸುವುದು ಸರ್ವೇಸಾಮಾನ್ಯ. ಬಾಣಂತಿಯರಿಗೆ ತಮ್ಮ ತೋಟದ ಅಥವಾ ಗದ್ದೆಯಲ್ಲಿ ಬೆಳೆದಿರುವ ನಾಣಿಲ ಕೊಡಿ, ಪೇರಲೆ ಕೊಡಿ, ಬೇಮುಳ್ಳಿ ಕುಡಿ, ಸೀಗೆ ಸೊಪ್ಪಿನ ಕೊಡಿ, ಕುಂಟಾಲದ ಕೊಡಿ ಇತ್ಯಾದಿ ಕೊಡಿ (ಚಿಗುರು) ಹಾಕಿ ಓಂಮು, ಕಾಯಿತುರಿ, ಮಜ್ಜಿಗೆ, ಮಿಶ್ರ ಮಾಡಿದ ತಂಬುಳಿ ಕೊಟ್ಟರೆ ಬೇರೆ ಔಷಧವೇ ಬೇಕಿರಲಿಲ್ಲ. ಈ ತಂಬುಳಿ ಖಾರವಾಗಿರದೆ ಸ್ವಲ್ಪ ಸಿಹಿಯನ್ನು ಹೊಂದಿರುವುದು. ಬಾಣಂತಿಯ ಜೀರ್ಣಶಕ್ತಿಗೆ ಗರ್ಭಕೋಶದ ಸುಸ್ಥಿತಿಗೆ, ಮೊಲೆ ಹಾಲು ಹೆಚ್ಚಲು ಇದು ಪೋಷಕವಾಗಿರುತ್ತಿತ್ತು. ಇದರಿಂದಾಗಿ ’ಉಣ್ಣಲು ತಂಬುಳಿ, ಹೊದೆಯಲು ಕಂಬಳಿ’ ಎಂಬ ಹವ್ಯಕ ಗಾದೆಯೇ ಹುಟ್ಟಿಕೊಂಡದ್ದು.

ಹವ್ಯಕರ ಅಡುಗೆಯಲ್ಲಿ ಪಚ್ಚಡಿ ಅಥವಾ ಚಟ್ನಿ ಗಣ್ಯ ಸ್ಥಾನವನ್ನು ಪಡೆಯುತ್ತದೆ. ಶುಂಠಿ, ನೆಲ್ಲಿಕಾಯಿ, ಮಾವಿನಕಾಯಿ, ಬೋಳಕಾಳು, ಬಾಳೆಕುಂಡಿಗೆ, ಇತ್ಯಾದಿಗಳಿಂದಲೂ ಹೀರೇಕಾಯಿ, ಮುಳ್ಳುಸೌತೆ, ಸೀಮೆಸೌತೆ ಇತ್ಯಾದಿಗಳನ್ನು ಬಳಸಿ ಅವುಗಳು ಸಿಪ್ಪೆಯಿಂದಲೂ ಪಚ್ಚಡಿ ತಯಾರಿಸುವುದಿದೆ. ಅದೇ ರೀತಿ ಪಡುವಲ ಕಾಯಿ ಬೀಜ, ಗೋವೆಕಾಯಿ ಬೀಜ, ಬಾಳೇಕಾಯಿ ಸಿಪ್ಪೆ ಇತ್ಯಾದಿಗಳನ್ನು ಎಸೆಯದೆ ಇವುಗಳಿಂದಲೂ ರುಚಿಕಟ್ಟಾಗಿ ಪಚ್ಚಡಿ ತಯಾರಿಸಿ ಮಿತವ್ಯಯ ಮಾಡುವುದನ್ನು ಕಾಣಬಹುದು.

ಹವ್ಯಕ ಅಡುಗೆಯಲ್ಲಿ ಸರಳವಾದ ಸಾರು, ಇದಕ್ಕೆ ಸ್ಥಳೀಯವಾಗಿ ಸಿಗುವ ಕಾಯಿಪಲ್ಯೆ, ಮೊಗೆ ಮಿಡಿ, ಬಾಳೇಕಾಯಿ ಇತ್ಯಾದಿಗಳಿಮದ ತಯಾರಿಸುವರು. ಇಲ್ಲಿ ಮಿತವ್ಯಯದ ಜೊತೆಗೆ ಆರೋಗ್ಯ ದೃಷ್ಟಿಯೂ ಎದ್ದು ಕಾಣುತ್ತದೆ. ತರಕಾರಿ ಹೆಚ್ಚಿದ್ದರೆ ಬಾಳೆ ಎಲೆ ತುದಿಗೆ ಪಲ್ಯ ಕಾಣಿಸುತ್ತದೆ.

ಹವ್ಯಕರಲ್ಲಿ ವಿಶೇಷವಾಗಿ ಕಂಡು ಬರುವ ಅಡುಗೆ ’ಮೇಲಾರು’ ಅಥವಾ ಮಜ್ಜಿಗೆ ಹುಳಿ, ಹಸಿ ತೆಂಗಿನಕಾಯಿ, ಒಂದಷ್ಟು ಅಲಸಂದೆ, ಇದ್ದರೆ ಸಾಕು ರುಚಿ ಕಟ್ಟಾದ ಪದಾರ್ಥ ಮಾಡಿ ಬಿಡುತ್ತಾರೆ. ಮಸಾಲೆ ಸಾಮಾನುಗಳನ್ನು ಬಲಸಿ ಹಲವು ತರಕಾರಿಗಳಿಂದ ’ಕೊದಿಲು’ ಅಥವಾ ಹುಳಿ ತಯಾರಿಸುವುದು ಹವ್ಯಕರ ಸಂಪ್ರದಾಯ – ಮೊಗೆ ಕಾಯಿಯು ಮೆತ್ತಗಾಗಿ ಅಡುಗೆಗೆ ಅಷ್ಟೊಂದು ಅನುಕೂಲವಲ್ಲವಂಬ ಅನುಮಾನ ಬಂದಾಗ ಅಂತಹ ಮೊಗೆಕಾಯಿಯನ್ನು ಹಾಳು ಮಾಡದೆ ಹುಳಿ ಮೊಸರು ಕಡೆದು ಬೆಳ್ಳುಳ್ಳಿ ಒಗ್ಗರಣೆ ಹಾಕಿ ಪಳದ್ಯ ಮಾಡಿಬಿಡುತ್ತಾರೆ. ಕಾಡು ಮಾವಿನ ಹಣ್ಣಿನಿಂದ ಸಿಹಿಹುಳಿ ಗೊಜ್ಜು ಸರ್ವೇಸಾಮಾನ್ಯ.

ಹವ್ಯಕರ ತಿಂಡಿ ತಿನಿಸುಗಳಲ್ಲಿ ಆಡಂಬರಕ್ಕೆ ಆಸ್ಪದವಿಲ್ಲ. ಸರಳತೆಯೇ ಎದ್ದು ಕಾಣುತ್ತದೆ. ವಿಶೇಷ ಸಂದರ್ಭಗಳಲ್ಲಿ ನೆಂಟರಿಷ್ಟರು ಬಂದಾಗ, ಹಬ್ಬ ಹರಿದಿನಗಳಲ್ಲಿ ಅಕ್ಕಿ ಸೇಮಗೆ, ಉದ್ದು ಹಾಕಿದ ಇಡ್ಲಿ ಬಾಳೆಲೆಯಲ್ಲಿ ಮಡಚಿ ಉಗಿಯಲ್ಲಿ ಬೇಯಿಸುವ ಕೊಟ್ಟೆ ಕಡಬು, ಸೊಳೆ ಉಂಡ್ಲಕಾಳು, ಒಡೆ, ಗೋಧಿ ಹಿಟ್ಟಿನ ಶಿರಾ ಮಾಡುವುದಿತ್ತು. ಹಲಸಿನ ಹಣ್ಣಿನ ಶ್ರಾಯದಲ್ಲಿ ಹಲಸಿನ ಕಡುಬು, ಉದ್ದಿನ ದೋಸೆ, ತೆಳ್ಳವು, ದಡ್ಡ, ಕೆಸುವಿನ ಸೊಪ್ಪಿನ ಪತ್ರೊಡೆ ಮಾಡುತ್ತಿದ್ದರು. ಬಾಳೆ ಹಣ್ಣಿನ ರಸಾಯನ, ಮಾವಿನ ಶ್ರಾಯದಲ್ಲಿ ಮಾವಿನ ಹಣ್ಣಿನ ರಸಾಯನ, ಹಲಸಿನ ಹಪ್ಪಳ ಕರಿಯುವುದು ಹವ್ಯಕರ ವಿಶೇಷ. ವಿಶೇಷ ಸಂದರ್ಭದಲ್ಲಿ ಕಡಲೆ ಬೇಳೆ ಸುಕ್ಲುಂಡೆ, ತೆಂಗಿನಕಾಯಿ ವಿಶೇಷವಿದ್ದರೆ ಕರ್ಜಿಕಾಯಿ, ಸೂಳಗಡುಹು, ಅತಿರಸ, ಆಗಾಗ ಅವಲಕ್ಕಿ ಮನೋಹರವೆಂಬ ಕಜ್ಜಾಯವೂ ಇತ್ತು. ಆದರೆ ಹವ್ಯಕರಿಗೇ ಮೀಸಲಾದ ಮತ್ತು ಹೆಮ್ಮೆಯ ತಿನಿಸು ಕೇಸರಿಭಾತ್. ಪರಿಮಳದ ಸಣ್ಣಕ್ಕಿ, ತುಪ್ಪ ಉತ್ತರ ಭಾರತದ ಕಡೆ ಬೆಳೆಯುವ ಕೇಸರಿ ಕುಸುಮ ಹಾಕಿ ತಯಾರಿಸುವ ಪಕ್ವಾನ್ನ ರಾಜೋಪಚಾರದ್ದು. ಯಾವುದೇ ಶುಭ ಕಾರ್ಯದಲ್ಲೂ ಪಾಯಸ ಅಗತ್ಯವಾಗಿ ಆಗಲೇಬೇಕು. ಇದನ್ನು ಪರಮಾನ್ನವೆಂದೇ ಕರೆಯಲಾಗುತ್ತದೆ.

ಹವ್ಯಕರಲ್ಲಿ ಗೋಧಿಯ ಬಳಕೆ ಇತ್ತಿಚೆಗೆ ಬಂದದ್ದು ಅಶುಭ ಕಾರ್ಯಗಳಲ್ಲಿ ಸುಟ್ಟೇವು, ಸುಕ್ಲುಂಡೆ ಆಗಬೇಕು. ಅಕ್ಕಿಯ ಕಜ್ಜಾಯಕ್ಕೇ ಹವ್ಯಕರಲ್ಲಿ ಆದ್ಯತೆ. ಹವ್ಯಕರ ಮಾವಿನ ಮಿಡಿ ಉಪ್ಪಿನಕಾಯಿ ಜಗತ್ಪ್ರಸಿದ್ಧ. ಉಪ್ಪಿನಕಾಯಿ ತಯಾರಿಸುವುದು ಗೋಪ್ಯವಾಗಿರುತ್ತಿತ್ತಲ್ಲದೆ ಅದರ ಗೌರವವನ್ನು ಕಾಪಾಡಿಕೊಂಡ ಬರುತ್ತಿದ್ದರು.

ಊಟದಲ್ಲಿ ಹವ್ಯಕರದೇ ಒಂದು ವೈಶಿಷ್ಟ್ಯ. ಬಾಳೆ ಎಲೆ ತೊಳೆದಾದ ಮೇಲೆ ಹಾಲು ಮೊದಲು ಬಡಿಸುತ್ತಾರೆ. ಉಂಡವರು ಹಾಲಿನಂಥ ಹೃದಯದವರಾಗಲಿ ಎಂಬ ಹಾರೈಕೆ. ಅನಂತರ ಉಪ್ಪು ಉಪ್ಪಿನಕಾಯಿ ಇತ್ಯಾದಿ. ಅನ್ನದ ಪಾತ್ರೆಯನ್ನು ಊಟದ ಪಂಕ್ತಿಯ ಪ್ರಾರಂಭದಲ್ಲಿಟ್ಟು ವಂದಿಸಿ ಬಡಿಸತೊಡಗುತ್ತಾರೆ. ಊಟದ ಪದಾರ್ಥದ ಕ್ರಮದಲ್ಲಿಯೂ ಒಂದು ಪದ್ಧತಿ ಹವ್ಯಕರಲ್ಲಿದೆ. ಪಂಕ್ತಿಯ ಮೊದಲಿಗನಾಗಿ ಕುಳಿತ ಯಜಮಾನ (ಹಿರಿಯ) ನ ಹೇಳಿಕೆಯಿಂದಲೇ ಇದು ವೇದ್ಯವಾಗುತ್ತದೆ. ಗೆಡ್ಡೆ ಗೆಣಸು ಪದಾರ್ಥ ಬಡಿಸಿದಾಗ ಹಾಗಲಕಾಯಿಯದು ಏನು ಮಾಡಿದ್ದೀರಿ? ಎಂದು ಪ್ರಸ್ತಾಪವಾಗುತ್ತದೆ. ಅಂದರೆ ಗೆಡ್ಡೆಗೆಣಸು ತರಕಾರಿಯ ವಾಯು ವಿಕಾರವನ್ನು ಹಾಗಲಕಾಯಿ ವರ್ಜಿಸುತ್ತದೆಂಬ ಅರಿವು. ಹಾಗೇ ಗೋಧಿ ಕಡಲೆಯ ಕಜ್ಜಾಯ ಬಡಿಸಿದಾಗ ಸವತೆಕಾಯಿಯದನ್ನು ಏನು ತಯಾರಿಸಿದ್ದೀರಿ? ಎಂದರೆ ಕಡಲೆ ಗೋಧಿಯಿಂದ ಆಗುವ ದೋಷವನ್ನು ಸವತೆ ದಮನ ಮಾಡುತ್ತದೆಂಬ ಅರ್ಥ. ಹೀಗೆ ಹವ್ಯಕರ ಊಟ ಉಪಾಹಾರ ಉಪದ್ರವವಾಗದೆ ಆರೋಗ್ಯಕರವಾಗಿ ಅರ್ಥಪೂರ್ಣವಾಗಬೇಕೆಂಬ ಬಯಕೆಯನ್ನು ಹೊಂದಿದೆ. ಊಟದ ಕೊನೆಯಲ್ಲಿ ಬರುವ ಪದಾರ್ಥ ’ಅಪ್ಪೆಹುಳಿ’ ಎಂಬ ಮಸಾಲೆ ರಸಾಯನ ಮಾವಿನಕಾಯಿ ಶ್ರಾಯದಲ್ಲಿ ಜೀರಿಗೆ ವಾಸನೆಯ ಅಪ್ಪೆಮಿಡಿಯ ಅಪ್ಪೆಹುಳಿ ಪ್ರಸಿದ್ಧ ಪ್ರಚಲಿತ. ಅನಂತರದಲ್ಲಿ ಹುಳಿ, ಕಂಚಿ, ಹುಣಸೆ, ಅಮಟೆಕಾಯಿ ಇತ್ಯಾದಿಯ ಅಪ್ಪೆಹುಳಿ ಮಾಡುತ್ತಾರೆ. ’ಅಪ್ಪೆ’ ಎಂದರೆ ನಾನೆಲ್ಲದಕ್ಕೂ ಆಗುವೆ ಎಂಬರ್ಥದಲ್ಲಿ ಬಂದುದು.

ಹವ್ಯಕರ ಊಟದಲ್ಲಿ ದಾಕ್ಷಿಣ್ಯ, ಮುಜುಗರ, ಸಂಕೋಚಕ್ಕೆ ಸ್ಥಳವೇ ಇಲ್ಲ. ಧಾರಾಳವಾಗಿ ಬಡಿಸುತ್ತಾರೆ. ಧನ್ಯರಾಗಿ ಉಣ್ಣಬೇಕು. ಸಂತರ್ಪಣೆ ಸಮಾರಾಧನೆ ಹವ್ಯಕರ ಪ್ರಿಯವಾದ ನಡೆನುಸಿ. ಸಮಾರಂಭ, ಸಮಾವೇಶ ಸಂದರ್ಭದಲ್ಲಿ ಊಟದ್ದೇ ವಿಜೃಂಭಣೆ. ಹೋಳಿಗೆ ಬಡಿಸಿರೆ ಅದು ನೆನೆಯುವಷ್ಟು ತುಪ್ಪ ಸುರಿಯುತ್ತಾರೆ. ಮತ್ತೆ ಹೋಳಿಗೆ ಮತ್ತೆ ತುಪ್ಪ. ಅನ್ನದ ಕೇಸರಿಭಾತ್ ಹವ್ಯಕರಲ್ಲಿ ಊಟದ ದೊರೆ. ಕೇಸರಿಬಾತ್ ತಿನ್ನುವ ಕುರಿತು, ಹೋಳಿಗೆ ಹೊಡೆಯುವ ಕುರಿತು, ಕಡುಬು ಕತ್ತರಿಸುವ ಕುರಿತು ಅದೆಷ್ಟೊ ದಂತಕಥೆಗಳು ಪ್ರಚುರಗೊಂಡಿವೆ. ಮಕ್ಕಳಿಗೆ, ಮುದುಕರಿಗೆ, ಬಾಣಂತಿಯರಿಗೆ ಮೊದಲು ಊಟ ಹಾಕುತ್ತಾರೆ. ಪಂಕ್ತಿ ಊಟದಲ್ಲಿ ಅವರಿಗೆ ಅವರಿಂದ ಅವಾಂತರವಾಗಬಾರದೆಂದು. ’ಪಂಕ್ತಿ ಮರ್ಯಾದೆ’ ಎಂಬ ಲಕ್ಷಣವೇ ಹವ್ಯಕರಿಂದ ಬಂದದ್ದು.

ಹಿತವಾದ ಶಾಕಾಹಾರಿಗಳಾದ ಹವ್ಯಕರು, ಅಣಬೆಯಂಥವನ್ನು ತಿನ್ನುವುದಿಲ್ಲ. ಮಾದಕ ಗುಣದ, ತಾಮಸೀ ಸ್ವಭಾವದ ತರಕಾರಿಯನ್ನು ಮೆಚ್ಚುವುದಿಲ್ಲ. ಸ್ವಾದಿಷ್ಟವಾದ ಸವಿಯನ್ನು ಆಹಾರವನ್ನು ತೃಪ್ತಿಯಾಗುವಷ್ಟು ತಿನ್ನುತ್ತಾರೆ. ಅತಿಥಿಗಳಿಗೂ ಸಂತೃಪ್ತಿಯಾಗುವಷ್ಟು ನೀಡುತ್ತಾರೆ. ಹವ್ಯಕರು ಭೋಜನ ಪ್ರಿಯರು. ಬಹುಜನ ಪ್ರಿಯರು ಎರಡೂ ಹೌದು. ಊಟವಾದರೆ ಕೋಟಿ ಲಾಭವಲ್ಲದೆ ಇನ್ನೇನು?