ಬಾಳು ಗೋಳು

ಹವ್ಯಕರು ಅತ್ಯಂತ ಸುಸಂಸ್ಕೃತ ನೆಲೆ ಮತ್ತು ಹಿನ್ನೆಲೆ ಇದ್ದವರು. ಆದರೆ ಹವ್ಯಕ ಮಹಿಳೆ ಭಾರತದ ಇತರ ಮಹಿಳೆಯರಂತೆ ದ್ವಿತೀಯ ದರ್ಜೆ ನಾಗರಿಕಳೇ ಆಗಿರುವಳು. ಭಾರತೀಯ ಇತರ ಮಹಿಳೆಯರಂತೆಯೇ ಆರ್ಥಿಕ ಅವಲಂಬನೆ, ಸಮಾನ ಶಿಕ್ಷಣ ವಂಚಿತೆ, ಸಮಾನ ಅಧಿಕಾರವಿಲ್ಲದಿರುವುದ ಇತ್ಯಾದಿ. ಹಿಂದೆ ಹವ್ಯಕ ಮಹಿಳೆಯ ಸಮಸ್ಯೆಯು ಅವಳ ಹುಟ್ಟಿನಿಂದಲೇ ಇತ್ತು. ಹೆಣ್ಣು ಮಗು ಹುಟ್ಟಿತೆಂದರೆ ಜಿಗುಪ್ಸೆ ಪಡುತ್ತಿದ್ದರು. ತಂದೆ ತಾಯಿಗಳು ಅನಾದರಕ್ಕೊಳಗಾಗುತ್ತಿದ್ದರು. ಮನೆಯಲ್ಲಿ ಅಜ್ಜಿಯಿದ್ದರೆ ಈ ಅನುಭವ ಇನ್ನೂ ಹೆಚ್ಚು.

ಮಾಣಿ ಹುಟ್ಟಿ ಮಹರಾಯ ಹುಟ್ಟಿದ
ಭತ್ತದ ಕಣಜ ಕಟ್ಟೋಕೆ ಹುಟ್ಟಿದ
ಕೂಸು ಹುಟ್ಟಿತು, ಕುನಾರಿ ಹುಟ್ಟಿತು
ನುಚ್ಚಿನ ಗಡಿಗೆ ಮುಚ್ಚೋಕೆ ಹುಟ್ಟಿತು

ಎಂದು ಮನೆಯ ಇಲಿಗಳು ಹಾಡುತ್ತವೆ, ಎಂದು ಅಜ್ಜಿ ಹಾಡುತ್ತಾಳೆ. ಹಾಗೆಯೇ ಗಂಡು ಮಗು ಹುಟ್ಟಿದಾಗ ಬಂಧುಗಳಿಗೆಲ್ಲಾ ಕಲ್ಲು ಸಕ್ಕರೆ ಹಂಚುತ್ತಿದ್ದರು. ಕೊಟ್ಟಿಗೆಯಲ್ಲಿ ಹೆಣ್ಣುಕರು ಆಗಬೇಕು. ಮನೆಯಲ್ಲಿ ಗಂಡು ಮಗುವಾಗಬೇಕು. ಜೀವನವನ್ನು ಲಾಭನಷ್ಟದಿಂದ ಅಳೆದು ಜೀವನವನ್ನು ಒಂದು ವ್ಯವಹಾರ ಮಾಡಿ, ಹವ್ಯಕ ಹೆಣ್ಣಿಗೆ ಹುಟ್ಟಿನಿಂದಲೇ ಹಿಂಸೆ ಮಾಡಿದ್ದರು. ಒಂದು ಹೆಣ್ಣು ಮಗುವಾದರೆ ಪ್ರಾರಂಭವಾಗುವ ಈ ಗೋಳು ಎರಡಾದಾಗ ತೀವ್ರವಾಗುತ್ತದೆ. ಹೆರಿಗೆಯಾದ ಹೆಣ್ಣು ದೈಹಿಕ ಮಾನಸಿಕವಾಗಿ ದುರ್ಬಲವೂ ಸೂಕ್ಷ್ಮ ಆಗಿರುತ್ತಾಳೆಂಬ ಪರಿಜ್ಞಾನವಿಲ್ಲದೆ ಅವಳಿಗೆ ಸನ್ನಿಯೋ ಹಿಸ್ಟಿರಿಯಾವೋ ಆಗಿದ್ದುದು ಉಂಟು. ಹೇಗಾದರೂ ಗಂಡು ಮಗುವನ್ನು ಪಡೆಯಲೇಬೇಕೆಂದು ಮೂರು ಹೆಣ್ಣಿನ ಮೇಲೆ ಒಂದು ಗಂಡು ಮಗುವಾದರೆ ಅದು ಮುತ್ತಿನ ಕಳಸದಂತೆ. ’ಮಣ್ಣು ಗುಡ್ಡೆಯ ಮೇಲೆ ಹೆಣ್‌ಈನ ಗಿಡ ನೆಟ್ಟಂತೆ’ ಎಂದು ಹಾಡಿ ಹೊಗಳುವರು. ಅದೇ ಮೂರೂ ಗಂಡಾದ ಮೇಲೆ ಒಂದು ಹೆಣ್ಣಾದರೆ ಅವಳು ಶೂರ್ಪನಖಿಯಂತೆ! ಹುಟ್ಟಿದ ಮನೆಗೆ ಕೇಡಂತೆ. ವಿದ್ಯಾಭ್ಯಾಸ ಮಾಡಿಸುವಾಗ ಇನ್ನಿತರ ಸೌಲಭ್ಯ ಒದಗಿಸುವಾಗ ಗಂಡು ಮಗ, ಹೆಣ್ಣು ಮಗಳು ಎಂಬ ತಾರತಮ್ಯ ಮಾಡದ ತಂದೆ ತಾಯಿಗಳೇ ವಿರಳ, ಕಲಿತರೂ ಹೆಣ್ಣೇ. ಅವಳೊಂದು ದಂಡ ಎಂಬ ಮನೋಭಾವ ಹಿಮದೆ ಸರ್ವತ್ರವಿತ್ತು.

“ಪುಕಸಟ್ಟೆ ಹೆಣ್‌ ಸಿಕ್ರೆ ಯಂಗೊಂದು, ಯಮ್ಮಪ್ಪನಿಗೊಂದು; ತೆರೆ ಕೊಡದಾದ್ರೆ ಆನು ಇನ್ನೂ ಹುಡುಗಯಮ್ಮ ಅಪ್ಪಯ್ಯ ಮುದುಕ” ಎಂಬುದು ಹವ್ಯಕರಲ್ಲಿರುವ ಒಂದು ಗಾದೆ. ಈ ಗಾದೆ ಹವ್ಯಕ ಇತಿಹಾಸದ ಪರಿಚಯವನ್ನೊದಗಿಸುತ್ತದೆ. ಹವ್ಯಕರಲ್ಲಿ ಒಂದು ಕಾಲದಲ್ಲಿ ಹೆಣ್ಣು ಸಿಕ್ಕುವುದೇ ಕಷ್ಟವಾಗಿ ಈಗ ಗಂಡುಗಳಿಗೆ ವರದಕ್ಷಿಣಿ ಕೊಡುವಂತೆ ಹೆಣ್ಣುಗಳಿಗೆ ’ತೆರ’ ಕೊಟ್ಟು ಮದುವೆಯಾಗಬೇಕಾದ ಕಾಲವೂ ಆಗಿ ಹೋಗಿದೆ. ಒಬ್ಬ ಗಂಡಸುನಾನಾ ಕಾರಣಗಳಿಂದ ಎರಡು ಅಥವಾ ಮೂರು ಮದುವೆಯಾಗುತ್ತಿದ್ದುದು ಉಂಟು. ಮಕ್ಕಳಿಲ್ಲವೆಂದೋ, ಮೊದಲನೆಯವಳು ತೀರಿಕೊಂಡಳೆಂದೋ ಇತ್ಯಾದಿ. ವೈದ್ಯಕೀಯ ಸೌಲಭ್ಯಗಳಿಲ್ಲದ ಆ ಕಾಲದಲ್ಲಿ ಹೆರಿಗೆಯ ಸಮಯದಲ್ಲಿ ಅಥವಾ ನಂತರ ಹತ್ತು ಹಲವು ಕಾರಣಗಳಿಂದ ಹೆಣ್ಣು ಸಾಯುವುದು ಸಾಮಾನ್ಯವಾಗಿತ್ತು. ಹೀಗಾಗಿ ಒಬ್ಬ ಗಂಡಸು ಹಲವಾರು ಮದುವೆಗಳಾದಾಗ ಹೆಣ್ಣುಗಳ ಸಂಖ್ಯೆ ಕಡಿಮೆ ಬೀಳುವುದು ಸಹಜ. ಆದರೆ ಬೇರೆ ಜಾತಿ ಜನಾಂಗಗಳಿಗೆ ಹೋಲಿಸಿದಾಗ ಹವ್ಯಕರಲ್ಲಿ ವರದಕ್ಷಿಣಿ ಪಿಡುಗು ವಿರಳ.

ಮದುವೆಯಾದ ಹವ್ಯಕ ಹೆಣ್ಣಿನ ಸಮಸ್ಯೆ ಹಲವಾರು. ಹಳ್ಳಿಯಲ್ಲಾದರೆ ಮಡಿ ಮೈಲಿಗೆ, ದೊಡ್ಡ ಕುಟುಂಬದ ಜವಾಬ್ದಾರಿ ಇತ್ಯಾದಿಯಾದರೆ ಪೇಟೆಯ ಹವ್ಯಕ ಹೆಣ್ಣಿನ ಸಮಸ್ಯೆ ಬೇರೆ ರೀತಿಯದು. ಹಳ್ಳಿಯಲ್ಲಿರುವ ಅವಳ ಹಿರಿಯರು ಕುಟುಂಬದವರು ಕೆಲವು ಸುಧಾರಣೆಗಳನ್ನು ಒಪ್ಪಲಾರರು. ಪೇಟೆಯಲ್ಲಿ ಸಂಸಾರ ಹೂಡಿರುವ ಸೊಸೆಗೆ ಹಳ್ಳಿಯ ಯಾವ ಕಷ್ಟವೂ ಇಲ. ಮಡಿ ಮೈಲಿಗೆ ಗೊತ್ತಿಲ್ಲ. ಹಬ್ಬ ಹುಣ್ಣಿಮೆ ಆಚಾರ ವಿಚಾರವಿಲ್ಲವೆಂಬ ಭಾವನೆ ಅತ್ತೆಗೆ ಹಾಗೂ ಹಿರಿಯರಿಗೆ. ಇವೆಲ್ಲಕ್ಕಿಂತ ವ್ಯಸನವಶನಾದ ಗಂಡ ಹಳ್ಳಿಯಲ್ಲೇ ಆಗಲಿ ಪೇಟೆಯಲ್ಲೇ ಆಗಲಿ ಹವ್ಯಕ ಹೆಣ್ಣಿನ ದುಸ್ವಪ್ನ, ಕುಡಿತ, ಇಸ್ಪೀಟು, ಜುರ್ದಾಕವಳ, ಬೀಡಿ ಸಿಗರೇಟು ಹೋಟೆಲ್ಲು ಸಂಗ ಇತ್ಯಾದಿ ಮುಗಿಯದ ಗೋಳು.

ವಿಧವೆಯರ ಸ್ಥಿತಿ
ವಿಧವೆಯರು

ಈಗ ೧೨೦ ವರ್ಷಕ್ಕಿಂತಲೂ ಹಿಂದೆಯೇ ಮೂಂಬಯಿಯಲ್ಲಿದ್ದ ಕರ್ಕಿ ವೆಂಕಟರಮಣ ಸೂರಿ ಶಾಸ್ತ್ರಿಗಳು ಹವ್ಯಕ ಹಿತೇಚ್ಛು, ಎಂಬ ಪತ್ರಿಕರ ಹೊರಡಿಸಿ, ಸಮಾಜದ ಅನಿಷ್ಟ ಪದ್ಧತಿಗಳನ್ನು ಕಟುವಾಗಿ ವಿಮರ್ಶಿಸಿ, ನಿವಾರಣೆಯ ಉಪಾಯಗಳನ್ನು ತೋರಿಸಿ ಕೊಟ್ಟಿದ್ದರು. ಬಾಲ್ಯವಿವಾಹ ಮತ್ತು ವಿಷಮ ವಿವಾಹದ ಅನಾಹುತಗಳನ್ನು ವಿಡಂಬಿಸಿದ್ದರು. ಅವರ ಒಂದು ನಾಟಕ ಬಡ ಹವ್ಯಕ ತರುಣಿಯರಿಗು ಕನ್ಯಾ ಪಿತೃಗಳಿಗೂ ಕೊಡಲಾದ ಒಂದು ಸಾಮಾಜಿಕ ಸೂಚನೆಯಾಗಿತ್ತು. ಆಗಿನಿಂದ ಅಂತಹ ವಿವಾಹಗಳು ಗಣನ್ಯವಾಗಿ ನಿಂತವು.

ಹವ್ಯಕ ಕೂಡು ಕುಟುಂಬದಲ್ಲಿ ಒಬ್ಬಿಬ್ಬರಾದರೂ ವಿಧವೆಯರು ಪರಾವಲಂಬಿಯಾಗಿ ಅಣ್ಣನನ್ನೋ ತಮ್ಮನನ್ನೋ ಮಕ್ಕಳನ್ನೋ ಆಶ್ರಯಿಸಿ ಇರುತ್ತಿರುದು ಸಾಮಾನ್ಯ. ಕೆಲವರು ನಾಲ್ಕಾರು ವರ್ಷಕ್ಕೇ ಪರಿ ವಿಯೋಗದಿಂದಾಗಿ ನಿಪುತ್ರಕರಾಗಿ ತವರು ಮನೆ ಸೇರಿರುವುದುಂಟು. ಕೆಲವರು ನಿರಕ್ಷರಿಗಳು; ಆದರೆ ನಿರರ್ಥಕರಲ್ಲ. ಕುಟುಂಬದಲ್ಲಿ ಅವರಿಗೆ ನಿರ್ಲಕ್ಷ್ಯವೇನೂ ಇರದು. ಹಿಟ್ಟು-ಅವಲಕ್ಕಿಯ ಮೂಲಕ್ಕೆ ಹುಟ್ಟಿದಳೋ ಹೂಬತ್ತಿ ಹೊಸೆಯಲಿಕ್ಕೆ ಮೈ ತಳೆದಳೋ – ಎನ್ನುವಂತಹ, ಕೈಬಳೆ ಗಳಿಲ್ಲದ ರಿಕ್ತ ಬದುಕನ್ನವರು ವೈರಾಗ್ಯ ಮನೋಧರ್ಮ ಅಳವಡಿಸಿಕೊಂಡವರು. ಕೆಲವರು ಕಂದಾಚಾರಿಗಳು. ಆದರೆ ಅಪಾಯಕಾರಿ ಕ್ರೀಯಾಶೀಲರಲ್ಲ. ಸಾತ್ವಿಕತೆ ಮೈಗೂಡಿಸಿ ಕೊಂಡವರು. ಸಾಂಪ್ರದಾಯಿಕ  ರೀತಿ-ನೀತಿಗಳನ್ನು ಮಕ್ಕಳಿಗೆ ಕಲಿಸುತ್ತ, ಆಚರಣೆಗಳಿಗೆ ನೆರವಾಗುತ್ತ ಮಾನಸಿಕ ಸಮಾಧಾನ ಪಡುವ ವಿಧವೆಯರಿಗೆ ದೇವರು ಮಠ-ಗುರುಗಳ ಬಗ್ಗೆ ಭಯ-ಭಕ್ತಿಯ ಭಾವನೆ. ಹವ್ಯಕ ಮಠ ಮಮದಿರಗಳಲ್ಲಿ ಅವರಿಗೆ ಸ್ವಾಗತವಿದೆ. ಆಚರಣೆಗಳಿಗೆ ಅವಕಾಶವಿದೆ. ವಿಧವೆ ಅತ್ತೆ, ತಾಯಿ, ಅಜ್ಜಿಯರನ್ನು ಹೊಸ ಪೀಳಿಗೆಯ ಯುವಕ – ಯುವತಿಯರು ಕಡೆಗಣಿಸಿಲ್ಲ. ಶಿವರಾಮ ಕಾರಂತ ಮತ್ತು ಎಂ. ಕೆ. ಇಂದಿರಾ ಅವರ ಕಾದಂಬರಿಗಳಲ್ಲಿ ಚಿತ್ರಿತಳಾದ ಕನ್ನಡ ಜಿಲ್ಲೆಗಳ ಅಮ್ಮ, ಅಜ್ಜಿ, ಅಕ್ಕ, ಅತ್ತೆಯರು ಕೌಟುಂಬಿಕ ಉತ್ಪಾದನಾ ಶಕ್ತಿ ಉಳ್ಳವರು. ಅಂತಹ ಪಾತ್ರಗಳಿಂದ ಪ್ರಭಾವಿತರಾದ ಪೀಳಿಗೆಗೆ, ವಿಧವೆಯರು ’ಹಿರಿಯ ಚೇತನ’ರಾಗಿ, ಉಪಯುಕ್ತ ಜೀವಿಯಾಗಿ ಕಾಣುತ್ತಿರುವುದು ಸಮಾಧಾನದ ಸಂಗತಿ. ಇಂದಿರಾ ಚಿತ್ರಿಸಿದ ’ಫಣಿಯಮ್ಮ’ ನಂತಹ ವಿಧವೆ, ತನ್ನ ಪ್ರಸ್ತುತತೆಯನ್ನು ಸಾಧಿಸಿ ತೋರಿಸಿದ್ದು ಅನೇಕರಿಗೆ ಪಾಠವಾಗಿದೆ. ಹವ್ಯಕ ಕುಟುಂಬಕ್ಕೆ ಹೊರೆಯಲ್ಲದ ರೀತಿಯಲ್ಲಿ ಅವಳ ಬಾಳುವೆ ಸಾಗಿದೆ. ಇವರು ಆರೋಗ್ಯವಂತರೂ ದೀರ್ಘಾಯುಗಳೂ ಆಗಿರುವುದು ಸಮಾಧಾನಕರವಾಗಿರುವ ಮತ್ತೊಂದು ಅಂಶ.

ವಿಧವಾ ವಿವಾಹ ಚಳುವಳಿ ಹವ್ಯಕ ವಿಚಾರವಂತರಲ್ಲಿ ಸ್ವಾತಂತ್ರ‍್ಯ ಪೂರ್ವದಲ್ಲೇ ಘಟಿಸಿದ್ದು. ಇದರಿಂದ ಕ್ರಾಂತಿಕಾರಕ ಬದಲಾವಣೆ ಆಗಿದ್ದರೂ ಇಂದಿಗೂ ಹವ್ಯಕ ವಿಧುರನಿಗಿರುವ ಗೌರವ ಸ್ಥಾನಮಾನ ಹವ್ಯಕ ವಿಧವೆ ಹೆಣ್ಣಿಗೆ ಇಲ್ಲ. ಹೆಂಡತಿ ಸತ್ತ ಗಂಡು ಎಂದಿಗೂ ಗಂಡ, ಗಂಡ ಸತ್ತ ಹೆಣ್ಣು ಮಾತ್ರ ಪಿಸುದನಿಯಲ್ಲಿ ಕರೆಸಿಕೊಳ್ಳುವುದು ಅನಿಷ್ಟವೆಂದೇ.

ಇತ್ತೀಚಿನ ದಶಕಗಳಲ್ಲಿ ಹವ್ಯಕ ಮಹಿಳೆಯರಲ್ಲಿ ಬಹಳ ಸುಧಾರಣೆಗಳಾಗಿವೆ. ಅವರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳು ಗಣನೀಯವಾಗಿ ಸುಧಾರಿಸಿವೆ. ಸುಮಾರು ೬೦-೭೦ ವರ್ಷಗಳ ಹಿಂದೆ ಇದ್ದ ಸ್ಥಿತಿ ಈಗಿಲ್ಲ. ಈ ವಿದ್ಯೆ, ಉದ್ಯೋಗ, ವೇಷ ಭುಷಣ, ನಡುವಳಿಕೆ ಆರ್ಥಿಕ ಸಾಹಿತ್ಯ ಪಿತ್ರಾರ್ಜಿತ ಆಸ್ತಿಯಲ್ಲಿ ಮಗಳಿಗೂ ಸಮಪಾಲು, ಸ್ವಾವಲಂಬಿ ಬದುಕು ಹೀಗೆ ವಿ‌ಸ್ತೃತ ಸುಧಾರಣೆಗಳು ಹವ್ಯಕ ಮಹಿಳೆಯರು ಅಭ್ಯುದಯಕ್ಕೆ ಮಾರ್ಗದರ್ಶಿಯಾಗಿವೆ. ಹಳೆ ಸಂಪ್ರದಾಯ, ಆಚಾರ ವಿಚಾರಗಳಲ್ಲಿ ಹೊಸತನ್ನು ನಿರೀಕ್ಷಿಸುವ ಮಹಿಳೆಯರು ಸ್ವಂತ ಧ್ವನಿ ಪಡೆದಿರುವುದು ಪ್ರಚಲಿತ. ಶಿಕ್ಷಣಕ್ಕೆ ಪ್ರಾಶಸ್ತ್ಯವಿಲ್ಲದ ಕಾಲದಲ್ಲಿ ಹವ್ಯಕ ಹಣ್ಣುಮಕ್ಕಳು ಗೃಹಕೃತ್ಯಕ್ಕೆ ಸಂಬಂಧಿಸಿದ ಹಾಡು, ಹಸೆ, ಪೂಜೆ ಪುನಸ್ಕಾರಗಳ ಜೊತೆಗೆ ಒಂದಷ್ಟು ಅಕ್ಷರಾಭ್ಯಾಸವನ್ನು ಹಿರಿಯರಿಂದ ಕಲಿಯುತ್ತಿದ್ದರು. ಶೀಲ, ನಡುವಳಿಕೆ ವೇಷಭೂಷಣದ ಬಗ್ಗೆ ವಿಶೇಷ ಕಾಳಜಿಯಿತ್ತು. ಪುರುಷರೊಡನೆ, ಸ್ಪರ್ಧೆ, ಪ್ರತಿಭಟನೆ ಇಲ್ಲದೆ ಸಮಷ್ಠಿ ಕುಟುಂಬಗಳಲ್ಲಿ ಸಹನೆ ಶಾಂತಿಯಿಂದ ಬಾಳುತ್ತಿದ್ದರು. ಇದೇ ಸಂಸ್ಕೃತಿ ಸಂಸ್ಕಾರಗಳಿಂದ ಇಂದಿನ ಆಧುನಿಕ ಹವ್ಯಕ ಮಹಿಳೆಯರು ತಮ್ಮ ಗೌರವಾನ್ವಿತ ವ್ಯಕ್ತಿತ್ವದಿಂದ ಪ್ರತ್ಯೇಕವಾಗಿ ಎದ್ದು ಕಾಣುತ್ತಿದ್ದಾರೆ. ಇದೇ ಇವರ ವೈಶಿಷ್ಟ್ಯ. ಶಿಕ್ಷಣ ಕ್ರಾಂತಿಯಿಂದಾಗಿ ಹವ್ಯಕ ಮಹಿಳೆಯರ ಬದುಕಿನಲ್ಲಿಯೂ ಹೊಸಗಾಳಿ ಬೀಸಿರುವುದು. ಹೊಸ ಹೆಜ್ಜೆಗಳನ್ನಿಟ್ಟಿರುವುದು ಸ್ಪಷ್ಟ. ಪ್ರತಿಯೋರ್ವ ಬಡಶ್ರೀಮಂತ ವರ್ಗದ ಮಹಿಳೆಯೂ ಪುರುಷನಿಗೆ ಲಭ್ಯವಾಗುವ ಎಲ್ಲ ವಿದ್ಯೆ ಪಡೆದು ಪದವೀಧರರಾಗುತ್ತಿರುವುದು ಶ್ಲಾಘನೀಯ ಅಷ್ಟೇ ಅಲ್ಲ ಉನ್ನತ ಉದ್ಯೋಗಾವಕಾಶಗಳಲ್ಲಿ ತಮ್ಮ ಪ್ರತಿಭೆ ಸಾಧನೆಯಿಂದ ಹೆಸರು ಹಿರಿಮೆ ಹೊಂದುತ್ತಿದ್ದಾರೆ. ಹವ್ಯಕ ಹೆಣ್ಣು ಮಕ್ಕಳಲ್ಲೀಗ ಅನೇಕರು ವೈದ್ಯರು, ಇಂಜನೀಯರು, ರಾಜಕಾರಣಿಗಳು, ಡಾಕ್ಟರೇಟುಗಳು, ಉದ್ಯಮಪತಿಗಳು ಸಾಹಿತಿಗಳು ಎಲ್ಲಾ ಕ್ಷೇತ್ರದಲ್ಲೂ ಪರಿಣಿತರು.

ಹವ್ಯಕ ಹೆಣ್ಣು ಮಗಳಿಗೆ ಉದ್ಯೋಗ ಅನಿವಾರ್ಯವಲ್ಲ. ಆದರೆ ದುಬಾರಿಯಾಗುತ್ತಿರುವ ಜೀವನಾವಶ್ಯಕಗಳು ದುಡಿಯುವಂತೆ ಪ್ರೇರೇಪಿಸುತ್ತಿವೆ. ಸ್ವಂತ ಮನೆ, ಧನ ಕನಕ ಔಅಹನಾದಿಗಳನ್ನು ಕೊಳ್ಳಲು, ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ದಿಡಯುವ ಪತಿಯೊಂದಿಗೆ ಹೆಗಲು ಹಚ್ಚುವುದು ಅನಿವಾಯð. ಪತಿ ಪತ್ನಿ ಇಬ್ಬರೂ ದುಡಿದು ಗಳಿಸಿದರೆ ಆರ್ಥಿಕ ಹೊರೆ ಎಷ್ಟೋ ಕಡಿಮೆ. ಜೀವನ ನಿರ್ವಹಣೆಯೂ ಸುಲಭ. ಮೊದಲೆಲ್ಲಾ ಹವ್ಯಕ ಮಹಿಳೆಯರು ಉದ್ಯೋಗಕ್ಕೆ ಸೇರುವುದು, ಮನೆಯಲ್ಲೇ ಕುಳಿತು ವಿವಿಧ ಗೃಹ ಉದ್ಯಮಗಳ ಮುಖಾಂತರ ಆರ್ಥಿಕ ಆದಾಯ ಮಾಡುವುದು ಅವಮಾನ ಎನ್ನಲಾಗುತ್ತಿತ್ತು. ಆದರೀಗ ಸುಸಂಸ್ಕೃತ ಕುಟುಂಬದವರೂ ತಮ್ಮ ಮಗನಿಗೆ ಹೆಣ್ಣು ನೋಡುವಾಗ ಹುಡುಗಿಯ ಆರ್ಥಿಕ ದುಡಿಮೆಯ ಕಾರ್ಯಕುಶಲತೆಯ ಬಗ್ಗೆ ವಿಶೇಷ ಪ್ರಾಶಸ್ತ್ಯ ಕೊಡುವ ಕ್ರಮ ಬಂದಿದೆ.

ಹವ್ಯಕ ಹೆಣ್ಣು ಮಕ್ಕಳಿಗೀಗ ಗೃಹಕೃತ್ಯಕ್ಕಿಂತ ವಿದ್ಯೆ ಉದ್ಯೋಗ ಹವ್ಯಾಸ ಅಭಿರುಚಿ ಬೆಳೆಸಿಕೊಳ್ಳಲು ಪ್ರೋತ್ಸಾಹವಿದೆ. ಹುಡುಗನಷ್ಟೇ ಸ್ವಾತಂತ್ರ‍್ಯವಿದೆ. ತಾಯಿತಂದೆ ನೋಡಿದ ಗಂಡನ್ನು ಆಯ್ಕೆ ಮಾಡಿ ಕೊನೆಯ ನಿರ್ಣಯ ಅವಳದೇ ಆಗಿದೆ. ಪಟ್ಟಣದ ಜೀವನ ಆಶಿಸುವವರು ಕೃಷಿ ಕುಟುಂಬದ ಹುಡುಗನನ್ನು ನಿರಾಕರಿಸುವುದೂ ಉಂಟು. ತಮ್ಮ ಅರ್ಹತೆಗೆ ತಕ್ಕ ಗಂಡು ಸಿಗದಿದ್ದಕ್ಕೆ ಪರಿತಪಿಸುವ ಪ್ರಮೇಯ ಈಗಿಲ್ಲ.

ಇಂದು ಶಿಕ್ಷಣದ ಮಹಾ ಅವಕಾಶಗಳನ್ನು ಯಥೇಚ್ಛವಾಗಿ ಬಳಸಿಕೊಳ್ಳುವ ಸಂದರ್ಭ ಹವ್ಯಕ ಹೆಣ್ಣು ಮಕ್ಕಳಿಗೆ ಒದಗಿದೆ. ಹೆಣ್ಣಿನ ವಿದ್ಯೆಗೆ ಹಾಕುವ ಹಣ ಅಪವ್ಯಯವಲ್ಲ ಎಂಬ ವ್ಯಾವಹಾರಿಕ ಜಾಣತವನ್ನು ಹವ್ಯಕರು ಪ್ರದರ್ಶಿಸುವುದಿಲ್ಲವಾದ ಕಾರಣ ಹೆಣ್ಣು ಮಕ್ಕಳೆಲ್ಲ ಸುಶಿಕ್ಷಿತರಾಗುತ್ತ ಹೆಚ್ಚು ಹೆಚ್ಚು ಸಾಮರ್ಥ್ಯವನ್ನು ಹಾಗೂ ಸಾರ್ಥ್ಯಕ್ಯವನ್ನು ಪಡೆಯುತ್ತಿದ್ದಾರೆ. ಈ ಸಾಧ್ಯತೆಗೆ ಹೆಣ್ಣು ನಡೆದು ಬಂದ ಹಾದಿಯು ಹಿನ್ನೆಲೆಯಾಗಿದೆ. ಎಂಬುದನ್ನು ಮನಗಾಣಬೇಕು. ಹವ್ಯಕ ಮಹಿಳೆ ಹಿಂದಿನಿಂದಲೂ ಮನೆಕೆಲಸಗಳು ಪಶು ಸಂಗೋಪನೆ, ಕೃಷಿ, ಕಾರ್ಯ, ಮಡಿ ಮೈಲಿಗೆ, ಪೂಜೆ ಪುನಸ್ಕಾರಗಳು ವೃತಾದಿಗಳಲ್ಲಿ ಹತ್ತು ಹಲವು ಹೊಣೆಗಳನ್ನು ಹೊತ್ತು ಹಣ್ಣಾಗಿದ್ದಳು. ತನ್ನ ಎಡಬಿಡದ ಬಸಿರು ಬಾಣಂತನ ಮಕ್ಕಳ ಲಾಲನೆ ಪೋಷಣೆಯಲ್ಲಿ ಬೆಂದು ಹೋಗಿದ್ದಾಳೆ. ಹೀಗಿದ್ದೂ ಹಾಡು, ರಂಗವಲ್ಲಿ ಸೇಡಿ, ಕಸೂತಿ ಕಲೆಗಳಲ್ಲಿ ಕ್ರಿಯಾಶೀಲಳಾಗುತ್ತಾ ಹೋಳಿಗೆ, ಕಡುಬುದು, ಚಕ್ಕುಲಿ, ಪಾಯಸ, ಪಕ್ವಾನ್ನಗಳಲ್ಲಿ ಪರಿಶ್ರಮಿಸುತ್ತಾ ಪ್ರತಿಕ್ಷಣವೂ ಸಿದ್ಧಿಯ ಶ್ರಮದಲ್ಲೇ ನಡೆಯುತ್ತಾ ಬಂದಿದ್ದಾಳೆ.

ಆದರೆ ಪುರುಷನಿಗೆ ಈ ಪ್ರವೃತ್ತಿಯ ಪರಿಶ್ರಮ ಅಷ್ಟಾಗಿ ಇದ್ದುದಿಲ್ಲ. ಸಾಂಪ್ರದಾಯಿಕ ಕೃಷಿ ಕೆಲಸದಲ್ಲಿ ಮಾಮೂಲಾಗಿ ಹೋದರಾಯಿತು. ಅದು ಕೃಷಿಯಲ್ಲಿ ಸ್ವತಃ ಸಕ್ರಿಯರಾಗಿರುವುದು ಕಡಿಮೆ. ಕೂಲಿಯಾಳುಗಳೊಂದಿಗೆ ಕೆಲಸ ಮಾಡುತ್ತಿದ್ದವರೇ ಹೆಚ್ಚು. ಪುರುಷನಿಗೆ ಅನಾಯಾಸ ಪಿತ್ರಾರ್ಜಿತ ಅನುಕೂಲಗಳಿದ್ದವು. ಮಹಿಳೆಗೆ ಮಾತ್ರಾರ್ಜಿತವಾದ ಸಹನೆಯ ಸಶ್ರಮ ಸಾಧನೆಯಿತ್ತು. ಪುರುಷ, ಅಪ್ಪನೆಟ್ಟ ಅಡಿಕೆ ಮರಕ್ಕೆ ಜೋತು ಬಿದ್ದ. ಆದರೆ ಹೆಣ್ಣು ಮಕ್ಕಳು ನೂಲಿನಂತೆ ಸೀರೆ ತಾಯಿಯಂತೆ ಮಗಳಾಗಿ ಜೀವನದ ಮಹತ್ಸಾಧನೆಯ ಫಲವನ್ನು ಪಡೆಯುತ್ತಿದ್ದಾರೆ. ಇಂದು ಹವ್ಯಕ ಮಹಿಳೆಯರು ಸಂಘ ಸಂಸ್ಥೆ, ಮಂಡಳಗಳನ್ನು ಕಟ್ಟಿಕೊಂಡು ರಂಗೋಲಿ, ಸ್ಪರ್ಧೆ, ಹಳ್ಳಿಹಾಡಿನ ಸ್ಪರ್ಧೆ, ಕಸೂತಿ ಕಲಾತ್ಮಕ ಸ್ಪರ್ಧೆ, ಪಾಕಶಾಸ್ತ್ರ ಸ್ಪರ್ಧೆ ಇತ್ಯಾದಿ ಕಾರ್ಯಕ್ರಮಗಳು ಹಳ್ಳಿಗಾಡಿನಲ್ಲಿ ಹುಲುಸಾಗಿ ಜರುಗುತ್ತಿವೆ. ಆದರೆ ಗಂಡು ಮಕ್ಕಳ ಕಾರ್ಯಚಟುವಟಿಕೆಗಳು ತಿರಾ ಸೀಮಿತಗೊಂಡಿವೆ. ಹವ್ಯಕ ಯುವಕರು ಮನೆ ಯಜಮಾನಿಕೆ ಜಮೀನ್ದಾರಿಕೆ ಅಥವಾ ನೌಕರಿ ಮಾಡುವುದನ್ನು ಬಿಟ್ಟರೆ ಬೇರೇನೂ ಮಾಡಲಾರದಂಥ ಸೀಮಿತರಾಗಿದ್ದಾರೆ. ಹವ್ಯಕ ಪರಂಪರೆಯ ಯಾವುದೇ ಒಳ್ಳೆಯ ಅಂಶಗಳ ವಾರಸುದಾರಿಕೆಯನ್ನು ವಿಕಾಸಗೊಳಿಸಿ ಕೊಂಡಿರುವುದಿಲ್ಲ. ಅದೇ ಹೆಣ್ಣು ಮಕ್ಕಳು ತಮ್ಮ ಪರಂಪರೆಯ ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳುತ್ತಲೇ ಹೊಸ ಶಿಕ್ಷಣ ನೀಡುವ ಜ್ಞಾನ ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳುತ್ತ ಸಿಗುವ ಅವಕಾಶ -ಅರ್ಹತೆಗಳಿಗೆ ಪಾತ್ರರಾಗುತ್ತಿದ್ದಾರೆ. ಅಡಿಕೆ ತೋಟದ ಕೃಷಿ ಪರಂಪರೆಯಾಗಿ ಬಂದಷ್ಟೇ. ರೇಷ್ಮೆ ವ್ಯವಸಾಯ, ವೆನಿಲ್ಲಾ ಬೆಳೆ, ಪಚೋಲಿ ಇತ್ಯಾದಿಗಳೆಲ್ಲ ಕೇವಲ ಪ್ರಾಯೋಗಿಕವಾಗಿ ಕಂಡವಷ್ಟೆ. ಹವ್ಯಕ ಯುವಕರಿಗೆ ಬೇರೆ ದಾರಿಗಳೆಲ್ಲ ದಿವ್ಯವಾಗಲೇ ಇಲ್ಲ. ಮೀಸಲಾತಿಯ ಕಾರಣದಿಂದಾಗಿ ಸರ್ಕಾರಿ ಕೆಲಸಗಳಲ್ಲಿ ಅವಕಾಶವಿಲ್ಲ. ಬ್ಯಾಂಕ್, ಎಲ್. ಆಯ್‌. ಸಿ. ಕಾಲೇಜು ನೇಮಕಾತಿಗಳು ನಿಂತು ಹೋಗಿವೆ. ಸ್ಪರ್ಧಾತ್ಮಕ ಪರೀಕ್ಷೆಗೆ ಕೂಡ್ರುವವರು ಹೆಚ್ಚು ಕಡಿಮೆ, ವ್ಯಾಪಾರೋಧ್ಯಮ ವಹಿವಾಟುಗಳಲ್ಲಿ ಹವ್ಯಕ ಹುಡುಗರ ಪಾಲೂ ಕಡಿಮೆ. ಇದು ಈಗ ಹವ್ಯಕ ಹುಡುಗರನ್ನು ನಿಸ್ತೇಜಗೊಳಿಸುತ್ತಿದೆ. ಇದರಿಂದಾಗಿ ಹವ್ಯಕ ಹೆಣ್ಣು ಮಕ್ಕಳು ತಮ್ಮ ಅರ್ಹತೆಗೆ ತಕ್ಕಷ್ಟೂ ಇಲ್ಲದ ಹುಡುಗನನ್ನು ಮದುವೆಯಾಗುವುದಕ್ಕೆ ಮುಜುಗರ ಪಟ್ಟುಕೊಳ್ಳುವಂತಾಗಿದೆ. ಹವ್ಯಕ ಗಂಡುಗಳಿಗೆ ಹೆಣ್ಣು ಸಿಗುವುದು ಇತ್ತೀಚಿನ ದಿನಗಳಲ್ಲಿ ಕಷ್ಟಕರವಾಗಿದೆ.

ಆತ್ಮಾವಲೋಕನ

ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಹವ್ಯಕ ಹೆಣ್ಣು ಮಕ್ಕಳು ವ್ಯಕ್ತಿ ವೈಶಿಷ್ಟ್ಯವನ್ನು ಉಳಿಸಿಕೊಳ್ಳುವುದು ಉಭಯ ಸಂಕಟಕ್ಕೀಡಾಗಿದೆ. ಹವ್ಯಕ ಹೆಣ್ಣುಮಕ್ಕಳು ಎಂದು ಗುರುತಿಸಲಾರದಷ್ಟು ನಮ್ಮವರಲ್ಲಿ ಬದಲಾವನೆಯಾಗಿರುವುದು ಸ್ಪಷ್ಟ. ಹವ್ಯಕ ಹೆಣ್ಣು ಮಕ್ಕಳು ಮೊದಲಿಗೆ ಹದಿಹರಯಕ್ಕೆ ಬರುವವರೆಗೆ ಪಲಿಕಾರ (ಲಂಗ, ದಾವಣೆ) ಪಲ್ಕ ಧರಿಸುವುದು ಸಾಮಾನ್ಯವಾಗಿತ್ತ. ಅನಂತರ ಸೀರೆ ಪಲ್ಕ ಧರಿಸುವುದು ವಾಡಿಕೆಯದಾಗಿತ್ತು. ಆದರೆ ಈಗ ಉಡುಗೆ ತೊಡುಗೆ ಭಾಷೆ ಆಚಾರ ವಿಚಾರಗಳಲ್ಲಿ ಆಧುನಿಕತೆ, ನಮ್ಮ ಮೂಲ ಸಂಸ್ಕೃತಿ ಬೇರುಗಳನ್ನೇ ಅಲ್ಲಾಡಿಸುತ್ತಿರುವಂತಿದೆ. ಹವ್ಯಕ ಸ್ತ್ರೀ ಸಮಾಜವೆಂಬ ಸಣ್ಣ ತೊರೆ ವಿಶ್ವ ಮಹಿಳಾ ಸಮುದಾಯವೆಂಬ ಮಹಾಸಾಗರದಲ್ಲಿ ಒಂದಾಗಲು ಧಾವಿಸುತ್ತಿರುವಾಗ ಪ್ರತ್ಯೇಕತೆ ಅನಿವಾರ್ಯವಲ್ಲವೆಂಬುದು ಒಂದು ವಾದವಾದರೂ ಹವ್ಯಕರ ಉತ್ತಮ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಿಕೊಂಡಲ್ಲಿ ಅದು ಪ್ರತ್ಯೇಕತಾ ವಾದವಾಗಲಾರದು. ಅಲ್ಲದೆ ಅದು ನಾಡಿನ ನಾಗರಿಕತೆಗೆ ತನ್ನ ವಿಶಿಷ್ಟ ವ್ಯಕ್ತಿತ್ವನ್ನು ನೀಡಬಲ್ಲದು. ಹಿಂದೆಯೂ ವಿಶ್ವಪ್ರಜ್ಞೆಯಿತ್ತು. ವಿಶ್ವಮಾನವರೂ ಇದ್ದರು. ಮಾವನ ಕುಲವೊಂದೇ ಎಂಬ ಉದಾತ್ತ ಧ್ಯೇಯವಿತ್ತು. ಆದರೆ ಈಗ ವ್ಯಾವಹಾರಿಕ ಬೌದ್ಧಿಕತೆಯಲ್ಲಿ ವಿಶ್ವ ಒಂದೇ ಎಂಬ ಹೇತುವಿದೆ. ಇದು ಮನುಷ್ಯನನ್ನೇ ಒಂದು ಸರಕನ್ನಾಗಿಸಿ ಮಾರುಕಟ್ಟೆಯನ್ನಾಗಿಸುವ ಹುನ್ನಾರ. ಈ ವಾಣಿಜ್ಯೀಕರಣದಲ್ಲಿ ಜೀವಚೈತನ್ಯದ ಯಾವ ವಿಕಾಸವೂ ವಿಶಾಲತೆಯೂ ಇರುವುದಿಲ್ಲ.

ಹವ್ಯಕರ ಮನೆಯ ಕೊಟ್ಟಿಗೆಯಲ್ಲಿ ಎಮ್ಮೆಯೋ ದನವೋ ಒಂದು ಕರು ಹಾಕಿದರೆ ಇಡೀ ಊರಿಗೆ ಅದೊಂದು ಸಂಭ್ರಮವಾಗಿರುತ್ತಿತ್ತು. ಆದರೆ ಈಗ ಹೆಣ್ಣು ಹೆರಿಗೆಯಾದರೆ ಅದೊಂದು ಸಂಗತಿಯೇ ಅಲ್ಲ. ಹವ್ಯಕ ಹಿರಿಯರು ಅದೆಷ್ಟೋ ಮಾವು, ಹಲಸು, ಪೇರಲ, ಕಂಚಿ ಮೊದಲಾದ ಮಧುರ ಫಲವೃಕ್ಷಗಳನ್ನು ನೆಟ್ಟು ಬೆಳೆಸುತ್ತಿದ್ದರು. ತಮ್ಮ ಮಕ್ಕಳು ಮರಿಮಕ್ಕಳು ಸವಿದು ಸಂತೋಷಪಡಲೆಂದು. ಪ್ರತಿಯೊಂದು ಜಾತಿಯ ಹೆಣ್ಣು ಒಂದಲ್ಲ ಒಂದು ಔಷಧೀಯ ಗುಣ ಹೊಂದಿದ್ದೇ ಆಗಿರುತ್ತದೆ. ಕೇವಲ ಹತ್ತು ವರ್ಷಗಳ ಹಿಂದೆಯಿದ್ದ ಅದೆಷ್ಟೋ ಜಾತಿಯ ಹಣ್ಣು ಹಂಪಲಗಳು ಈಗ ಮಾಯವಾಗಿದೆ. ’ಕವಳಿ’ ಎಂಬ ಜಾತಿಹಣ್ಣು ಹವ್ಯಕ ಹೆಣ್ಣು ಮಕ್ಕಳಿಗೆ ಪ್ರಿಯವಾದ ಫಲವಾಗಿತ್ತು. ಇದು ರಕ್ತದೋಷ ನಿವಾರಿಸಿ ಬಾಯಾರಿಕೆ ಹೋಗಲಾಡಿಸುತ್ತದೆ. ’ಬಳವಲ’ ಹಣ್ಣು (ಬಿಲ್ವಪತ್ರಿಯ ವರ್ಗದ್ದು) ಬಿಕ್ಕಳಿಕೆ ನಿಲ್ಲಿಸುವುದು. ನೆಲ್ಲಿ ಮುರಿದ ಎಲುಬು ಜೋಡಿಸುವ ಗುಣ. ನೇರಲ ಹಣ್ಣು- ಅತಿಸಾರ ನಿಯಂತ್ರಣ, ಮಾದಲ ಹಣ್ಣು -ಕಂಠಶುದ್ಧಿ ವಾಂತಿಯನ್ನು ತಡೆಯುವುದು. ಇಳ್ಳಿ-ಚಿತ್ತಶುದ್ಧಿ ಹೀಗೆ ನೂರಾರು ಫಲವೃಕ್ಷಗಳು ಇದ್ದವು. ಈಗ ಯಾವ ಬೆಳೆ ಬೆಳೆದರೆ ಮಾರುಕಟ್ಟೆಯಲ್ಲಿ ಎಷ್ಟು ರೇಟು ಸಿಗುತ್ತದೆ. ಎಷ್ಟು ಲಾಭವಾಗುತ್ತದೆಂಬ ಲೆಕ್ಕಾಚಾರ! ಈ ವಾಣಿಜ್ಯೀಕರಣ ಮನೋಭಾವ ಎಲ್ಲದರಲ್ಲೂ ಬರುತ್ತಿದೆ.

ಎಷ್ಟೋ ಹವ್ಯಕರಿಗೆ ಎಲ್ಲರೆದುರು ಹವ್ಯಕಭಾಷೆ ಮಾತನಾಡಲು ಏನೋ ಕೀಳರಿಮೆ. ಇಷ್ಟೊಂದು ಮುಂದುವರಿಯುವಾಗ ಈ ಗ್ರಾಮ್ಯ ಭಾಷೆ ಮಾತನಾಡುವುದೇ ಎಂಬ ಸಂಕೋಚ. ಮಾತಾಡಲು ಕಲಿತಾಗಿನಿಂದಲೂ ಆಡುತ್ತಾ ಬಂದಿರುವ ಭಾಷೆಯಲ್ಲಿ ನಿಸ್ಸಂಕೋಚವಾಗಿ ಸಂಭಾಷಿಸಿದಾಗ ಉಂಟಾಗು ಆತ್ಮೀಯತೆ, ಆಪ್ತತೆ ಅದೆಷ್ಟು? ನಾವು ಒಂದೇ ಮೂಲದವರೆಂಬ ಅನನ್ಯತೆ ಅನ್ಯೋನ್ಯತೆ ಸಣ್ಣದೇ? ಹವ್ಯಕರೇ ಸೇರಿದಾಗಲಾದರೂ ಈ ಭಾಷೆಯನ್ನು ಆಡುವುದು ಒಳ್ಳೆಯದು.

ಹವ್ಯಕರ ವೈಶಿಷ್ಟ್ಯವಿರುವುದೇ ಘಮಘಮಿಸುವ ಭಕ್ಷ್ಯಭೋಜ್ಯಗಳ ತಯಾರಿಕೆಯಲ್ಲಿ. ಬಾಯಲ್ಲಿ ನೀರೂರಿಸುವ ಮಿಡಿ ಉಪ್ಪಿನಕಾಯಿ, ಹಲಸಿನ ಹಪ್ಪಳ, ಬಾಳೇಕಾಯಿ, ಕಡುಬು, ಸುಕ್ಲುಂಡೆ, ಕರ್ಜಿಕಾಯಿ, ಹಲಸಿನ ಹಣ್ಣಿನ ಕಡುಬು, ಮುಳಕ ಇತ್ಯಾದಿಗಳಲ್ಲದೆ ಹವ್ಯಕರಾಗಿರುವುದು ಹೇಗೆ? ಐಸ್‌ಕ್ರೀಮ್, ಜಾಮೂನ್, ಬಾಲೂಷಾ, ಚಿರೋಟಿ, ಸಾಠೆಯಂತಹ ತಿಂಡಿಗಳಿಗೆ ಮಾರು ಹೋಗಿರುವುದು ಸರಿಯೇ… ಸುಗ್ರಾಸ ಭೋಜನದ ಕಾಲದಲ್ಲಿ ಹೇಳುವ ’ಗ್ರಂಥಗಳು’ ಇಡೀ ಸಮಾರಂಭಕ್ಕೇ ಕಳೆಕಟ್ಟುತ್ತಿದ್ದವು. ಉಣ್ಣುವವರಿಗೂ ಬಡಿಸುವವರಿಗೂ ಉತ್ಸಾಹ ಉಕ್ಕೇರಿಸುವ ಈ ಪದ್ಧತಿ ಬಹುಶಃ ಹವ್ಯಕರಲ್ಲಲ್ಲದೆ ಬೇರೆಲ್ಲೂ ಇಲ್ಲ.

ಸಮಾಜವನ್ನು ಸುಸ್ತಿತಿಯಲ್ಲಿಡುವವಳು ಮಹಿಳೆ. ಅದನ್ನು ದುಸ್ಥಿತಿಗೆ ಒಯ್ಯುವವಳೂ ಮಹಿಳೆ. ಮಹಿಳೆ ಮಗಳಾಗಿ, ಯುವತಿಯಾಗಿ, ಪತ್ನಿಯಾಗಿ, ತಾಯಿಯಾಗಿ, ಅಜ್ಜಿಯಾಗಿ ಇಡೀ ಮನುಕುಲದಲ್ಲಿ ತನ್ನ ರಕ್ತವನ್ನು ಹಂಚಿಕೊಂಡವಳು. ನಮ್ಮ ಪರಂಪರೆಯಲ್ಲಿ ಸಂಸ್ಕೃತಿಯಲ್ಲಿ ಶ್ರೇಷ್ಠ ಸ್ಥಾನವನ್ನು ಪಡೆದ ನಮ್ಮ ಮಹಿಳೆಯರು ಇಂದು ವಿಶ್ವಸುಂದರಿ ಸ್ಪರ್ಧೆಯಲ್ಲಿ ತನ್ನ ಸ್ಥಾನವನ್ನು ಕಳೆದುಕೊಳ್ಳಬಾರದಲ್ಲ. ಹಿಂದಿನಂತೆ ರಾಷ್ಟ್ರಕಟ್ಟುವ, ನೈತಿಕತೆ ಬೆಳೆಸುವ, ಪುರುಷರಂತೆ ಸಾಧನೆ ಮಾಡಬೇಕಲ್ಲವೇ… ಮಹಿಳೆಯರ ಸ್ವತಂತ್ರ ಬದುಕು ಅದಕ್ಕಾಗಿ ಉದ್ಯೋಗಸ್ಥರಾಗಿ ತನ್ನ ಕಾಲಿನ ಮೇಲೆ ತಾನು ನಿಲ್ಲುವಂತೆ ಆಗುವುದು ಎಷ್ಟು ಅಗತ್ಯವೋ ಅಷ್ಟೇ ಸಾಂಸ್ಕೃತಿಕ ಗೌರವಾನ್ವಿತರಾಗುವುದು ಅಗತ್ಯವಿದೆ.

ಹವ್ಯಕ ಪರಂಪರೆಯಲ್ಲಿ ಮಹತ್ವಪೂರ್ಣ ಸಾಮಾಜಿಕ ಸಂಸ್ಥೆಯೆನಿಸಿರುವ ’ವಿವಾಹ’ಕ್ಕೆ ಈಗ ಗಂಡಾಂತರ ಬಂದಿದೆ. ಭಾವನಾತ್ಮಕವಾಗಿ ಧಾರ್ಮಿಕವಾಗಿ ತನುಮನದಿಂದ ಒಂದಾಗಿ ಬಾಳಿನುದ್ದಕ್ಕೂ ಪ್ರೀತಿ ವಿಶ್ವಾಸದಿಂದ ಬದುಕುವ ಗಂಡು ಹೆಣ್ಣಿನ ಸಂಬಂಧವೇ ದಾಂಪತ್ಯ. ಇದಕ್ಕೆ ನೈತಿಕ ಚೌಕಟ್ಟನ್ನು ಕಲ್ಪಿಸಿ, ಪವಿತ್ರ ಬಂಧನದ ಪ್ರತೀಕವಾಗಿ ಸಮಾಜ ನೀಡುವ ಸ್ವೀಕೃತಿಯೇ ವಿವಾಹ. ಆದರೆ ಇಂದು ಆಧುನೀಕತೆಯ ಹೆಸರಿನಲ್ಲಿ ದಾಂಪತ್ಯ ಜೀವನ ನೀರಸ ಸ್ವರೂಪ ತಾಳಿದೆ. ಕನಸಿನಲ್ಲಿ ಕಂಡದ್ದನ್ನು ವಾಸ್ತವ ಜಗತ್ತಿನಲ್ಲಿ ಕಾಣದಾದಾಗ ಬದುಕು ನೀರಸವಾಗುವುದು. ನಿರಾಶೆ ಕೆಲವರನ್ನು ಹಾಳು ಮಾಡಿದರ ಅತ್ಯಾಶೆ ಅನೇಕರನ್ನು ಹಾಳು ಮಾಡುತ್ತದೆ. ಪರಸ್ಪರ ವೈಚಾರಿಕ ವ್ಯತಿರಿಕ್ತತೆಯ ಉದ್ಭವಿಸಿ ಸಿಹಿ ಬದುಕಿನ ಸಾಮರಸ್ಯ ಕಳೆದುಕೊಂಡು ಎಲ್ಲವೂ ವ್ಯಾವಹಾರಿಕವಾಗಿಯೇ ನಡೆಯುತ್ವೆ. ವಿವಾಹ ವಿಚ್ಛೇದನೆಯ ಅರ್ಜಿಗಳು ದಿನದಿನಕ್ಕೆ ಹೆಚ್ಚಾಗುತ್ತಿವೆ. ಇದುವರೆಗೆ ಮಹಿಳೆ ತನ್ನ ಆರ್ಥಿಕ ಹಕ್ಕುಗಳ ಕುರಿತಾಗಿ ಜಾಗೃತಳಾಗಿದ್ದರೆ ಈಗ ತಮ್ಮ ಭಾವನಾತ್ಮಕ ಹಾಗೂ ಲೈಂಗಿಕ ಅವಶ್ಯಕತೆಗಳ ಬಗ್ಗೆ ಕೂಡಾ ಜಾಗೃತಳಾಗಿದ್ದಾಳೆ. ಹೀಗಾಗಿ ಮದುವೆ ವ್ಯವಸ್ಥೆ ನಶಿಸತೊಡಗಿದೆ.

ಹವ್ಯಕ ಮಹಿಳೆಯರು ಇಂದು ತಾವು ವೈಯಕ್ತಿಕ ಜೀವಿಗಳು, ತಮ್ಮ ಜೀವನವನ್ನು ತಮಗೆ ಬೇಕಾದಂತೆ ರೂಢಿಸಿಕೊಳ್ಳುವ ಹಕ್ಕು ತಮಗಿದೆ ಎನ್ನುವ ನಿಲುವನ್ನು ತಳೆದಿದ್ದಾರೆ. ಆದರೆ ಅವರಲ್ಲಿ ಜೀವನದ ನಿಜ ಮೌಲ್ಯಗಳ ಅರಿವು ಸಾಲದು. ಸೌಜನ್ಯಪೂರ್ಣವಾದ ಸರಳವಾದ ನಡೆನುಡಿಗಳು ವ್ಯಕ್ತಿಯ ನಿಜಮೌಲ್ಯಗಳು, ಹೆಣ್ಣು ಸೂಕ್ಷ್ಮ ಸೌಂದರ್ಯದ ಪ್ರತೀಕವಾದುದರಿಂದ ಈ ನೈಜ ಮೌಲ್ಯಗಳು ಅವಳಲ್ಲಿದ್ದರೆ ಅವಳ ವ್ಯಕ್ತಿತ್ವಕ್ಕೆ ಅಪೂರ್ವ ಶೋಭೆ ತಂದುಕೊಡುತ್ತದೆ.

ಈಗಿನ ಬದಲಾದ ಮುಕ್ತ ವಾತಾವರಣದಲ್ಲಿ ಯುವತಿಯರು ಯುವಕರೊಡನೆ ಬೆರೆಯುವ ಸಂದರ್ಭಗಳು ಹೆಚ್ಚುತ್ತಿದೆ. ಹವ್ಯಕರಲ್ಲಿ ಹಿರಿಯರ ಹಿಂದಿನ ನಂಬಿಕೆಗಳು ಇಂದು ಬದಲಾಗುತ್ತಿರುವುದನ್ನು ಗಮನಿಸಬಹುದು. ವಿದೇಶದಲ್ಲಿ ತಾಯಿಯ ವಾತ್ಸಲ್ಯಕ್ಕಾಗಿ ಪೇಚಾಡುತ್ತಿರುವ ಅಸಂಖ್ಯ ಮಕ್ಕಳ ಅಡಿಪಾಯವಿಲ್ಲದ ಬಾಳನ್ನು ತುಲನೆ ಮಾಡಿ ನೋಡಿದರೆ ನಮ್ಮ ಕೌಟುಂಬಿಕ ಜೀವನದ ಭದ್ರತೆಯ ಅರಿವಾಗದಿರದು. ಸ್ವತಂತ್ರ ಬದುಕಿನ ವಿಕೃತ ಕಲ್ಪನೆಗಳು ವಿವಾಹದ ಜವಾಬ್ದಾರಿಯಾಗಲಿ, ಮಕ್ಕಳ ಹೊಣೆಯಾಗಲಿ ಬೇಡವೆಂದು ಸ್ತ್ರೀಪುರುಷರು ತಮ್ಮ ಸುಖಕ್ಕಾಗಿ ಒಟ್ಟಿಗೆ ಜೀವಿಸುವ ಪದ್ಧತಿಯನ್ನು ತೊರೆಯುವಷ್ಟು ಮುಂದುವರೆದು ದಾರಿ ತಪ್ಪಿದ್ದಾರೆ.

ಜೀವನವು ಮಧುರವಾಗಲು ಕುಟುಂಬ ಒದಗಿಸುವಷ್ಟು ಭಾವನಾತ್ಮಕವಾದ  ವಾತಾವಣರವನ್ನು ಬೇರೆ ಯಾವುದೇ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ ಒದಗಿಸಲಾರದು. ಸ್ವಂತ ಹಿತ ಲಾಭವನ್ನು ಕಡೆಗಣಿಸಿ ಸೋದರ, ಸೋದರಿಯರ ವಿದ್ಯಾಭ್ಯಾಸ ಮತ್ತು ನೌಕರಿಗಳಿಗಾಗಿ ಉದಾರವಾಗಿ ದುಡಿಯುವ ಅಣ್ಣಂದಿರು ಇನ್ನೂ ಹವ್ಯಕ ಕುಟುಂಬಗಳಲ್ಲಿವೆ. ಆದ್ದರಿಂದಲೇ ಅತ್ತಿಗೆಯನ್ನು ತಾಯಿಗೆ ಸಮವೆಂಬ ಸ್ಥಾನ ಕೊಡಲಾಗಿದೆ. ಕುಟುಂಬ ಜೀವನದಲ್ಲಿ ತಂದೆ-ತಾಯಿ ಗುರುಹಿರಿಯರು ಅಣ್ಣ, ಅಕ್ಕ, ತಮ್ಮ, ತಂಗಿ, ಅತಿಥಿ ನೆಂಟರಿಷ್ಟರು ಪಶುಪಾಲನೆ ಮಾಡಬೇಕಾದ ಕರ್ತವ್ಯಗಳಿವೆ. ಕುಟುಂಬದ ಜೀವನವೇ ಒಂದು ಯಜ್ಞವಿಶ್ವವಿದ್ಯಾಲಯ.

ಹವ್ಯಕರದು ಮೂಲತಃ ಗ್ರಾಮೀಣ ಬದುಕು. ಇಲ್ಲಿ ಸಂಸ್ಕಾರಗೊಂಡ ನಡೆಯಿದೆ, ನುಡಿಯಿದೆ. ಹಳ್ಳಿಹೈದನ ನಾಲಿಗೆಯಲ್ಲಿ ಪದಗಳ ಅಕ್ಷಯ ಕೋಶವಿದೆ. ಇಲ್ಲಿ ಸೋಗಲಾಡಿತನವಿಲ್ಲ, ಬೂಟಾಟಿಕೆಯಿಲ್ಲ, ಗೋಸುಂಬೆ ವ್ಯಕ್ತಿತ್ವಗಳಿಲ್ಲ. ಎಲ್ಲವೂ ಸಹಜ ಅಲಿಖಿತ ದಾಖಲೆ, ಸಹಬಾಳ್ವೆಗೆ ಒತ್ತುಕೊಟ್ಟವರು ಹವ್ಯಕರು. ಸಹಜೀವನ ಚಿಂತನ ಇವರ ಗಾಯನ ವಿಧಾನ. ’ಸೋ’ಗುಟ್ಟಿ ಸಾಮೂಹಿಕ ಹಾಡುಗಾರಿಕೆಗೆ ಬೆಲೆಕೊಟ್ಟ ಮಹಿಳಾ ಸಂಸ್ಕೃತಿ ಹವ್ಯಕರದು. ಇಲ್ಲಿ ಎಲ್ಲರೂ ನಿಸ್ಸಂಕೋಚವಾಗಿ ಪಾಲ್ಗೊಳ್ಳುತ್ತಾರೆ. ಉಚ್ಛ-ನೀಚ ಕಲ್ಪನೆಗಳೂ ಇಲ್ಲಿಲ್ಲ. ಇಲ್ಲೆಲ್ಲಾ ಸೌಹಾರ್ದತೆಯ ಮಹಾಪೂರ. ಕೊಡಗಿನ ಗೌರಮ್ಮ ಪ್ರತಿಭಾವಂತ ಲೇಖಕಿ. ತಮ್ಮ ಕಥೆಗಳಲ್ಲಿ ಹವ್ಯಕ ಮಹಿಳೆಯರ ಮನೋಭಾವವನ್ನು ಚೆನ್ನಾಗಿ ಚಿತ್ರಿಸಿದ್ದಾರೆ. ಹಳ್ಳಿಗರು ಅನಕ್ಷರಸ್ಥರಿರಬಹುದು. ಅವರ ಅನುಭವ ವೈಶಾಲ್ಯ ದೊಡ್ಡದು. ಅದೇ ಅವರ ಹಾಡಿನ ಮೂಲಾಧಾರ.

ಅವ್ರು ಅಂಥೊರೊಂದು ಇವ್ರು ಅಂಥೋರೆಂದು
ಅವರಿವರ ದೂರಬ್ಯಾಡ್ವೋ ಮಗನೆ ಬೆಳ್ಳಿಬೆಳ್ಳ
ಅವರಿವರು ಇದ್ರೇನೆ ಈ ಪ್ರಪಂಚ ||

ಇಂದು ಸಮಾಜದಲ್ಲಿ ವಿಷಮತೆಯು ಪಾಪಾಸ್‌ಕಳ್ಳಿಯಂತೆ ಹಬ್ಬಿದೆ. ಒಡಕು ಯಥೇಚ್ಛವಾಗಿ ಕಾಣುತ್ತಿದೆ. ಎಲ್ಲೆಡೆ ವಿರಸ, ವೈಷಮ್ಯ, ವಿಲಾಪ, ವ್ಯಾಜ್ಯಗಳದೇ ವಿಕಟ ಅಟ್ಟಹಾಸ! ನೂರಾರು ಮಂದಿ ಅವಿಭಕ್ತರಾಗಿದ್ದು ಕುಟುಂಬಗಳು ಈಗ ಅಪರೂಪ. ಮೂರು ಕೋರ್ಟು ಮೆಟ್ಲು ಹತ್ತಿಸದೇ ಬಿಡೋದಿಲ್ಲ ಎಂಬ ಬಡಾಯಿಗಳೇ ಬಹಳ.

ಮೇಲು ಕೀಳು ಸಮಾಜ ವ್ಯವಸ್ಥೆಯಲ್ಲಿದ್ದರು ಹವ್ಯಕರಲ್ಲಿ ಭಾವನಾತ್ಮಕ ಬಾಂಧವ್ಯ ಜಾತ್ಯತೀತವಾಗಿತ್ತು.

ಆ ಜಾತಿ ಈ ಜಾತಿ ಎನಬ್ಯಾಡ್ವೋ ಐನಾತಿ|
ಎಲ್ಲರು ಒಂದೇನೆ ಮನು ಜಾತಿ ಕಾಣೈತಿ |
ಪಿರೀತಿ ಗೆಲ್ಲೈತೋ ಜಾತಿ ಮತಿ ರೀತಿ ||

ಹಿಂದಿನ ಕಾಲದಲ್ಲಿಯೂ ಜಗಳ ಜಂಜಾಟ ಇದ್ದಿರಬಹುದು. ಊರಿದ್ದಲ್ಲಿ ಹೊಲಗೇರಿ ಅಂಥ ಸಂದರ್ಭದಲ್ಲಿ ಹಿರಿಯರು ಬುದ್ಧಿ ಹೇಳಿದ್ದಾರೆ. ಈಗಲೂ ಗ್ರಾಮೀಣ ಗಂಧಗಾಳಿಯಲ್ಲಿ ಪ್ರಚಲಿತವಿದೆ.

ನಮ್ಮೂರೇ ನಿಮ್ಮೂರು, ನಿಮ್ಮೂರೇ ನಮ್ಮೂತಿಳ್ಕೋ ತಮ್ಮಾ
ಎಲ್ಲರು ಸೇರಿದ್ರೇನೆ ಅಲ್ವೋ ಮಾರಿಜಾತ್ರೆ |

ಈ ಹಾಡುಗಳೇ ಪ್ರತಿ ಜನಾಂಗದಲ್ಲೂ ಸಾಮರಸ್ಯವಿರಬೇಕೆಂಬ ಮಾನವೀಯ ಮಿಡಿತವನ್ನು ಸಾರುತ್ತದೆ. ಪೂರ್ವಿಕರು ಇದನ್ನು ಆಚರಿಸಿಕೊಂಡು ಬರಲು ಹೀಗೆ ಅನ್ಯೋನ್ಯ ಸ್ನೇಹದಿಂದ ಹಬ್ಬ ಉತ್ಸವ ಆಚರಣೆಗಳೇನೇ ಇದ್ದರೂ ಭಾವೈಕ್ಯವಿರಲೆಂಬುದು. ಅದು ಚೆನ್ನಾಗಿದ್ದರೆ ತಾನೇ ಉರು ಕೇರಿ ಎಲ್ಲದರಲ್ಲೂ ಸಾಮರಸ್ಯ ಸಂತೋಷ! ಆದರೆ ಈಗ ನಗರವಾಸಿಗಳಾಗುತ್ತ ಹೊರಟ ಹವ್ಯಕ ಹೆಣ್ಣುಮಕ್ಕಳು ’ಅಯ್ಯೋ, ಊರಲ್ಲಿ ಹಿರಿಯರಿದ್ದಾರೆ ಅವರು ಮಾಡುತ್ತಾರೆ. ಮಡಿಹುಡಿ ಸರಿಯಾಗುವುದಿಲ್ಲ’ ಎಂದು ಉದಾಸೀನರಾಗಿದ್ದಾರೆ. ನಗರಗಳು ನಮ್ಮ ಸಂಸ್ಕೃತಿಯಿಂದ ದೂರ ಉಳಿಯುತ್ತಾ ನಮ್ಮ ನಡೆನುಡಿ ಆಚಾರ-ವಿಚಾರ ಎಲ್ಲರಿಂದಲೂ ಸರಿಯುತ್ತಾ ಈಗ ಹವ್ಯಕರ ಮೂಲ ಆಶಯಗಳಿಗೇ ವಿರುದ್ಧವಾಗಿದ್ದೇವೆ. ವಿಮುಖರಾಗುತ್ತಿದ್ದೇವೆ.

ಒಮ್ಮತದಿಂದ ಉದ್ಧಾರ. ವಿರೋಧಗಳಿಂದ ಅಪಚಾರ. ಕಿತ್ತಾಟದಿಂದ ಕಟ್ಟನಡೆ, ಕಟ್ಟನುಡಿ, ಸಮಾಜಕ್ಕೆ ಕೆಡುಕು, ಜಗತ್ತಿನಲ್ಲಿ ಮೈಮನಸ್ಸು ಎಲ್ಲೂ ಅಮೃತಫಲಗಳನ್ನೇನೂ ಕೊಟ್ಟಿಲ್ಲ ! ವಿರಸದಿಂದ ಸಮುದಾಯಕ್ಕೆ ವಿಷಾದ. ಅಲ್ಲಿ ಸೌಖ್ಯ ಸೌಜನ್ಯವಿಲ್ಲ. ನಂಜಿನ ಸೊನೆಯಿದೆ. ಎಂಥೆಂಥ ಜಟಾಪಟಿ ಮಾಡಿದವರೆಲ್ಲ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ.

ಕೆಳಗೇರಿಯೋರ‍್ನೆಲ್ಲಾ ಕೀಳೆಂದು ತಿಳಿಬ್ಯಾಡ್ವೋ
ಮೇಲ್ಕೇರಿಯೋರೆಲ್ಲಾ ಮೇಲಲ್ಲೂ | ಯಜಮಾನ
ಇಲ್ಲಿ ಹುಟ್ಟಿದ್ಮ್ಯಾಗೆ ಎಲ್ಲರೊಂದೇ ||

ಹಳ್ಳಿಗರಲ್ಲಿ ದಿಲ್ಲಿಯವರೆಗೂ ಬುದ್ದಿ ಹೇಳುವ್ಟು ಸಮರ್ಥ ಅನುಭವಾಮೃತದ ನಲ್ನುಡಿಗಳಿವೆ, ನಲ್ಗತೆಗಳಿವೆ. ಇವುಗಳ ಒಳಹೊಕ್ಕು ನೋಡಿದರೆ ಇಲ್ಲಿ ಬೋಧೆಯಿದೆ, ಬೆಳಕಿದೆ. ವ್ಯಕ್ತಿತ್ವ ವಿಕಾಸಕ್ಕೆ ಬೇಕಾದ ಚೇತೋಹಾರಿ ಚಿಂತನೆಗಳಿವೆ. ಹಣಕ್ಕಿಂತಲೂ ಗುಣಶ್ರೇಷ್ಠವಾದುದು. ಹಣ ಬದುಕಿಗೆ ಬೇಕು ನಿಜ. ಆದರೆ ಅದೇ ಸರ್ವಸ್ವವಲ್ಲ.

ದುಡ್ಡಿಲ್ದೋರು ದಡ್ರಲ್ಲ | ದುಡ್ಡಲ್ದೋರು ಹೆಡ್ರಲ್ಲ
ದುಡ್ಡೊಂದೇ ಲೋಕ್ದಾಗೆ ಎಲ್ಲೂ ಅಲ್ಲ | ಅಣ್ಣಯ್ಯ
ದುಡ್ಡೀಗೂ ದೊಡ್ಡಾದು ಗುಣಕಾಣೋ ||

ಮನೆಯಿಂದಾಚೆಈಚೆ

’ಗೃಹಿಣೀಂ ಗೃಹಂಉಚ್ಯತೇ’ ಎಂಬುದನ್ನು ಹವ್ಯಕ ಮಹಿಳೆ ಅನೂಚಾನ ಅನುಸರಿಸಿ ಬಂದವಳು. ಪ್ರಶ್ನಿಸಿ, ಶೋಧಿಸಿ ಪರಿವರ್ತನೆಗೆ ಆಶಿಸಿದವಳಲ್ಲ. ಪತಿಗೆ ಸಹಾಯಕಳಾಗಿ ಈಕೆ ಮೊದಲೆಲ್ಲ ಮಾಡುತ್ತಿದ್ದುದು ಹವ್ಯ-ಕವ್ಯಗಳಿಗೆ ಪರಿಕರಗಳನ್ನು ಸಂವರಿಸುವುದು, ಮನೆಯ ಅದರಲ್ಲೂ ಅಡುಗೆ ಮನೆಯ ಮಡಿಯನ್ನು ಕಾಪಾಡುವುದು, ಕೃಷಿಕ ಕುಟುಂಬದಲ್ಲಿದ್ದರೆ ಗಂಡ, ಮೈದುನ, ಮಕ್ಕಳಿಗೆ ಹೊತ್ತೊತ್ತಿಗೆ ಊಟ-ಉಪಾಹಾರ ಒದಗಿಸುವುದಲ್ಲದೆ, ಕೃಷಿ ಕಾಯಗಳಿಗೆ ಕೈ ಹಚ್ಚುವುದು. ಗೃಹಿಣಿಯಾಗಿ ಅಡಿಗೆ ಮಾಡುವ; ಅತಿಥಿಗಳಿಗೆ ಆದರೋಪಚಾರ ನಡೆಸುವ ಮನೆಯಲ್ಲಿ ಹಿರಿಯರಿದ್ದರೆ ಅವರ ಯೋಗಕ್ಷೇಮ ನೋಡಿಕೊಳ್ಳುವ ; ಮಕ್ಕಳು ಮರಿಗಳ ಪೋಷಣೆ : ಕೃಷಿ ಕುಟುಂಬದಲ್ಲಿ ಸಹಜೀವಿಗಳಾಗಿರುವ ದನ-ಕರುಗಳ ಪಾಲನೆ, ಹೈನುಗಾರಿಕೆಯ ಹೊರೆ ಮತ್ತು ಹಬ್ಬ ಉತ್ಸವಗಳ ದಿನಗಳಲ್ಲಿ ಮನೆಯನ್ನು ಸಂತಸ ಸಂಭ್ರಮದಲ್ಲಿಡಲು ವಿಶೇಷ ಕಾಳಜಿ ವಹಿಸುವುದು ಈಕೆಯ ಸಾಮಾನ್ಯ ಕೆಲಸ. ಈಕೆಗೆ ಸಾಮಾಜಿಕ ಆಗು ಹೋಗುಗಳ ಬಗ್ಗೆ ಒಲವು ಕಡಿಮೆ. ಅದು ಗಂಡಸರ ಜಗತ್ತು : ತನ್ನ ಪಾತ್ರ ತೀರ ಗೌಣ ಅಥವಾ ಅಪ್ರಸ್ತುತ ಎಂಬ ಭಾವನೆ. ಆದರೆ ವಿದ್ಯಾವಂತ ಹವ್ಯಕ ಮಹಿಳೆಗೆ ಆಸಕ್ತಿ ಇದೆ; ಕೆಲವೊಮ್ಮೆಗೆ ಚಟುವಟಿಕೆಯಲ್ಲು ತತ್ಪರಳು. ಈಗ ೭೦-೮೦ ವರ್ಷದ ಹಿಂದೆ, ಸ್ವಾತಂತ್ರ‍್ಯ ಚಳುವಳಿಯ ಕಾಲದಲ್ಲಿ ಹವ್ಯಕ ಮಹಿಳೆಯರಲ್ಲಿ ಕೆಲವರು ಅಂತಹ ವಿದ್ಯಾವಂತರಲ್ಲದಿದ್ದರೂ ಗಾಂಧೀಜಿಯ ಮಹಾತ್ಮೆ ಕೇಳಿಯೇ, ತಮ್ಮ ಪರಿಸರದಲ್ಲಿಯ ಕೆಲ ಹಿರಿಹರ ಪ್ರಭಾವದಿಂದಲೋ ಚಳುವಳಿಗೆ ಧುಮುಕಿದವರುಂಟು. ಮಹಿಳೆಗೆ ಸಂಪೂರ್ಣ ಸ್ವಾತಂತ್ರ‍್ಯ ದೊರಕುವುದು ಬಲುದೂರದ ಹಾದಿ, ದೀರ್ಘದ ಪಯಣ. ಆದರೆ ದೇಶದಕ್ಕೆ ಸ್ವಾತಂತ್ರ‍್ಯ ಮೊದಲು ಸಿಗಬೇಕು. ಅದರ ನಂತರ ಉಳಿದ ಸ್ವಾತಂತ್ರ‍್ಯಗಳು ಎಂಬ ಭಾವ. ಗಾಂಧಿ ಕೊಟ್ಟ ಹೋರಾಟದ ಕರೆಗಳು ಉತ್ತರ ಕನ್ನಡ ಜಿಲ್ಲೆಯ ತುಂಬ ಸಂಚಲನಗೊಳಿಸಿದ ಸಂದರ್ಭಗಳು ಅನೇಕ. ೧೯೩೧ರ ಉಪ್ಪಿನ ಸತ್ಯಾಗ್ರಹ, ವಿದೇಶೀ ವಸ್ತ್ರದಹನ, ಕರನಿರಾಕರಣೆಯ ಚಳುವಳಿಗಳು ಜಿಲ್ಲೆಯಲ್ಲಿ ವ್ಯಾಪಿಸಿದಾಗ, ಪ್ರತಿಕ್ರಿಯೆ ಕೊಡಲು ಸಿದ್ಧರದ ಪುರುಷರ ಬೆನ್ನಿಗೆ ನಿಂತ ಮಹಿಳೆಯರು ಕೆಲವರೇ. ಅವರಲ್ಲಿ ಸಿರಸಿ ಹತ್ತಿರದ ಎಕ್ಕುಂಬಿ ಶ್ಯಾಮಭಟ್ಟರ ಹೆಂಡತಿ, ಬ್ರಿಟೀಷರ ಜಂಗಲ್ ಕಾಯ್ದೆಯನ್ನು ಭಂಗಿಸಿ, ಮರಕಡಿಯುವ ತನ್ನ ಹಕ್ಕನ್ನು ಸಥಾಪಿಸಿದ ಘಟನೆ ಮೊದಲನೆಯ ಉದಾರಣೆ. ಈಕೆ ಪೊಲೀಸರೆದುರೇ, ಗಿಡಕಡಿದು ಬಂಧಿಸಿದರೆಂದು ಹಟ ತೊಟ್ಟಳು. ಇತರ ಹೆಂಗಸರನ್ನೂ ಪ್ರಚೋದಿಸಿದಳು.

ಆಗಿನ ಸ್ವಾತಂತ್ರ‍್ಯ ಧುರೀಣರಲ್ಲಿ ಒಬ್ಬರಾದ ಸರ್ದಾರ‍್ ವೆಂಕಟರಮಣಯ್ಯ ಸಪತ್ನಿಕರಾಗಿ ಜಿಲ್ಲೆಗೆ ಬಂದು ಅಸಹಕಾರ ಚಳುವಳಿಗೆ ಪ್ರಚೋದಿಸಿದಾಗ, ಶ್ರೀಮತಿ ಗೌರಮ್ಮನವರ ನೇತೃತ್ವವನ್ನು ಬೆಂಬಲಿಸಿ ಚಳುವಳಿ ಪ್ರಾರಂಭಿಸಿದ ಕೆಲ ಮಹಿಳೆಯರ ಮಂಚೂಣಿಯಲ್ಲಿದ್ದವರು ಹವ್ಯಕರೇ. ಅಹಿಂಸಾವ್ರತ ತೊಟ್ಟು ಈ ಮಹಿಳೆಯರು ನಡೆಸಿದ ಹೋರಟ, ಅವರನ್ನು ಸೆರೆಮನೆಗೆ ತಳ್ಳಲಿಲ್ಲ. ಆದರೆ ೧೯೩೧ ರಲ್ಲಿ ಉಪ್ಪಿನ ಸತ್ಯಾಗ್ರಹದ ಕಾವು ಉತ್ತರ ಕನ್ನಡ ಜಿಲ್ಲೆಗೆ ತಟ್ಟಿ, ದೊಡ್ಮನೆ ಮಹಾದೇವಮ್ಮ ಅಥವಾ ಮಹಾದೇವಿ ತಾಯಿ ಹೆಗಡೆ ಮನೆಯಿಂದೀಚೆ ಬಂದು, ಚಳುವಳಿಗೆ ಧುಮುಕಿದರು. ಇತರ ಜತೆಗೂಡಿಸಿದ ಮಹಾಕಾಳಮ್ಮ ಅಕದಾನ ಅವರು ಈ ಮೊದಲೇ ವಿಧವಾ ವಿವಾಹ ಮಾಡಿಕೊಂಡು ಸಾಮಾಜಿಕ ಸಂಚಲನ ಆರಂಭಿಸಿದ್ದರು. ಕರನಿರಾಕರಿಸಿದ ರೈತರ ಮನೆಗಳಿಗೆ ಪೊಲೀಸರು ಜಪ್ತಿಗೆ ಬಂದಾಗ, ಇವರು ಧರಣಿ ಕೂತರು. ಪೊಲೀಸರ ಲಾಠೀ ಏಟು ತಿಂದು, ಸೋಲದೆ ಹಿಂಜರಿಯದೇ ಛಲಮಾರಿಯಾಗಿ ಸತ್ಯಾಗ್ರಹ ಮುಂದುವರೆಸಿದರು. ಜಂಗಲ್ ಸತ್ಯಾಗ್ರಹದಲ್ಲಿ ಬಂಧನಕ್ಕೆ ಒಳಗಾದ ರಾಮಕೃಷ್ಣ ತಿಪ್ಪಾ ಶಾಸ್ತ್ರಿಗಳ ಪತ್ನಿ, ಪತಿಗೆ ವಿರೋಚಿತ ಆರತಿ ಎತ್ತಿ ಸೆರೆಮನೆಗೆ ಕಳಿಸಿದರಲ್ಲದೆ, ತಾವೂ ಪತಿಯನ್ನು ಬೆನ್ನು ಹತ್ತಿದರು. ಹವ್ಯಕ ಮಹಿಳೆಯರ ಧೈರ್ಯ, ನಿಸ್ಪೃಹತೆಳನ್ನು ನೋಡಿದ ಇತರ ಜಾತಿ ಜನಾಂಗದ ಮಹಿಳೆಯರು ಬ್ರೀಟಿಷ್ ಸರಕಾರದ ನಿಯಮ – ಕಾನೂನುಗಳನ್ನು ಉಲ್ಲಂಘಿಸಿ ತೋರಿಸಿದ ಪ್ರತಿಭಟನೆಗಳು ದಾಖಲಾಗಿವೆ. ನಯಗಾರ ಗ್ರಾಮದ ಲಕ್ಷ್ಮಮ್ಮ, ಹೆಚ್ಚೆ ಗ್ರಾಮದ ಗೌರಮ್ಮ, ಕಲ್ಲಾಳರ ಕಾವೇರಮ್ಮ ಶೀರಳಗಿಯ ಭಾಗೀರತಮ್ಮ  ಮುಖ್ಯ ಸ್ತ್ರೀಯರು. ೧೯೨೩ ರಲ್ಲಿ ಸಿದ್ಧಾಪುರದ ಮಾವಿನಗುಂಡಿಯಲ್ಲಿ ಪೊಲಿಸ್ ಠಾಣೆ ಎದುರು ಅನ್ನ ಸತ್ಯಾಗ್ರಹ ಮಾಡಿದ ಮಹಿಳೆಯರೆಂದರೆ ಗಣಪಮ್ಮ, ಭಾಗೀರತಮ್ಮ, ಬಿಳಿಬೀಡು ; ಸೀತಮ್ಮ ಹೊಸಕೊಪ್ಪ ; ದೇವಮ್ಮ ಹೆಮ್ಗೂರು. ಕೆಲವರು ಜೈಲಿಗೂ ಹೋದರು. ನಾಗವೆಣಿ ಭಟ್ಟ (ತಿಗಣಿ ಗ್ರಾಮ), ಮಹಾಲಕ್ಷ್ಮಿದೇವಿ ಸುಬ್ರಾಯ ಹೆಗಡೆ ಬೆಳ್ಳೀಕೇರಿ, ಮುಂತಾದ ಮಹಿಳೆಯರು ಸರಕಾರವನ್ನು ಎದುರಿಸಿ ನಿಂತ ಧೀರ ಮಹಿಳೆಯರು. ಇವರಿಗೆ ಸ್ವಾಭಿಮಾನ ಮುಖ್ಯವಾಗಿತ್ತು. ತನ್ನ ನೆಲದಲ್ಲಿ ತಾನು ದುಡಿದು ಉಣ್ಣುವ ಹಕ್ಕನ್ನು ಇನ್ನಾರದೋ ಪ್ರಭುತ್ವ ಕಸಿಯಲಾರದು ಎಂದು ಜಾಗೃತಿ ಇವರದಾಗಿತ್ತು. ಇದನ್ನವರು ನಿಶ್ಯಸ್ತ್ರರಾಗಿ, ಅಹಿಂಸೆಯಿಂದ ಸಾಧಿಸಿ ತೋರಿಸಿದರು.

ನಾಗರಿಕತೆಗೆ ಸುಲಭ ಗಮನ

ಹವ್ಯಕ ಮಹಿಳೆ, ಕೌಟುಂಬಿಕ ಸಂಸ್ಕೃತಿಯನ್ನು ಕಟ್ಟಿಕೊಡುವಲ್ಲಿ ವಹಿಸುವ ಪಾತ್ರ ಪ್ರಮುಖವಾದದ್ದು. ಗಂಡಸರು ಹೆಣ್ಣನ್ನು ’ದ್ವಿತೀಯ ವ್ಯಕ್ತಿ’

ಎಂದೇ ಪರಿಗಣಿಸುವುದು ಸಾಮಾಹಿಜವಾಗಿ ರೂಢಿಗತ. ಕೆಲವು ಗಂಡಸರ ಹೀನ ಪ್ರವೃತ್ತಿಯಿಂದ ಸಂಸಾರದಲ್ಲಿ ಆಕೆಗೆ ಹಿಂಸೆ ಆಗಿರುವುದೂ ಉಂಟು. ಹೆಂಡತಿಯಾಗಿ, ತಾಯಿಯಾಗಿ, ಅವಳು ವಹಿಸುವ ಪಾತ್ರಕ್ಕೆ ಮನ್ನಣೆ ಆಂತರಿಕವಾಗಿ ಇದ್ದೇ ಇದೆ. ಇದನ್ನು ನಿಭಾಯಿಸುವುದಕ್ಕೆ ಅವಳು ತಾಳಬೇಕಾದ್ದು ಸಹನೆ, ತ್ಯಾಗ, ಪ್ರೀತಿಪೂರ್ವಕ ಸೇವಾ ಮನೋಭಾವನೆ. ಇದನ್ನು ಗ್ರಾಮೀಣ ಸ್ತ್ರೀ ಸಂಸ್ಕೃತಿಯ ಲಕ್ಷಣವೆನ್ನಬಹುದು. ಹವ್ಯಕ ಮಹಿಳೆಗೆ ಸಾಮಾಜಿಕ ಶೋಷಣೆಯ ಕಾವು ತಟ್ಟಿಲ್ಲ. ನಾಗರಿಕತೆಗೆ ಅವಳು ಸುಲಭವಾಗಿ ಗಮಿಸುವುದಕ್ಕೆ ಅವಕಾಶಗಳಿದ್ದೇ ಇವೆ. ಅಂತೆಯೇ ಈ ಜಿಲ್ಲೆಯ ಇತರ ಜಾತಿ, ಕುಲ, ಬುಡಕಟ್ಟು ಜನಾಂಗಗಳ ಮಹಿಳೆಯ ಸ್ಥಿತಿ-ಗತಿಗೆ ಹೋಲಿಸಿದರೆ, ಹವ್ಯಕ ಮಹಿಳೆ ಸಾಮಾಜಿಕವಾಗಿ ಪ್ರಗತಿಶೀಲೆಯಾಗಿದ್ದಾಳೆ. ಶಿಕ್ಷಣದ ಸುಲಭ ಲಭ್ಯತೆಯಿಂದ ಇದು ಸಾಧ್ಯವಾಗಿದೆ. ವಿವಾಹಿತ ಮಹಿಳೆ ಎದುರಿಸುವ ವರದಕ್ಷಿಣೆ ಕಿರುಕುಳ, ಅತ್ತೆ-ಮಾವ ಮನೆಯಲ್ಲಿಯ ದಾಸ್ಯಸ್ಥಿತಿ – ಅವಳನ್ನು ಬಾಧಿಸಿಲ್ಲ. ನಾಗರಿಕ ಸ್ಥಿತಿ-ಗತಿಗಳಿಗೆ ಸುಲಭವಾದ ಪ್ರವೇಶ ಸಿಕ್ಕಿದುದರ ಪರಿಣಾಮವಾಗಿ ಹವ್ಯಕ ಮಹಿಳೆ ತನ್ನ ವೈಯಕ್ತಿಕ ಪ್ರತಿಭೆ – ಪರಿಶ್ರಮಗಳಿಂದ ಸಾಹಿತ್ಯ, ಸಂಗೀತ, ಕಲೆ, ಶಿಕ್ಷಣ, ರಾಜಕೀಯ ರಂಗಗಳಲ್ಲಿ ಸ್ವತಂತ್ರಳಾಗಿ ಮಿಂಚಬಲ್ಲ ಅವಕಾಶ ಗಳಿಸಿದ್ದಾಳೆ.

ಮಿಂಚಿದ, ಮಿನುಗುವ ಮಹಿಳೆಯರು

ಕೊಡಗಿನ ಗೌರಮ್ಮ : (೧೯೧೨-೧೯೩೯) ಕನ್ನಡದ ಆದಿ ಮಹಿಳಾ ಕತೆಗಾರ್ತಿಯರಲ್ಲಿ ಗಣ್ಯರು, ಕಲಿತದಲ್ಲಿ ಎಸ್ಸೆಲ್ಸಿವರೆಗೆ. ಯಶಸ್ವೀ ಪತ್ನಿ ಮತ್ತು ತಾಯಿಯಾಗಿ ಜೀವನ ನಿರ್ವಹಿಸುತ್ತಿಲೇ ಮನೋಜ್ಞ ಕತೆ ಬರೆದ ಗೌರಮ್ಮ, ವರಕವಿ ಬೇಂದ್ರೆಯವರ ವಾತ್ಸಲ್ಯಕ್ಕೆ ಪಾತ್ರಳಾಗಿದ್ದ ಮಹಿಳೆ. ದೇವಾಂಗನಾಶಾಸ್ತ್ರಿ, ಗೋಕರ್ಣ (೧೯೨೫-೧೯೫೧) ಏಳನೇ ತರಗತಿ ಪೂರೈಸಿ, ಸಾಹಿತ್ಯದ ಓದಿನ ಅಭಿರುಚಿ ಬೆಳೆಸಿಕೊಂಡ ಗೋಕರ್ಣದ ಈ ಪ್ರತಿಭಾವಂತೆ ಕಥೆಗಳನ್ನು ಬರೆದು ತನ್ನ ಸಾಮಾಜಿಕ ಸಂವೇದನೆ ಬಯಲಿಗಿಟ್ಟರು. ವೇಣಿ ಸಂಹಾರ ಕಥಾ ಸಂಕಲನ ಮೂರು ವರ್ಷದ ಹಿಂದೆ ಹೊರಬಂದಿದೆ. ಅಲ್ಪಾಯುಷ್ಯದಲ್ಲಿ ದೇವಾಂಗನಾ ಸಾಧಿಸಿದ್ದು ಮನನೀಯ.

ಮಹಾದೇವಿ ತಾಯಿ, ದೊಡ್ಮನೆ (೧೯೦೬-೨೦೦೬) : ಕಲಿತದ್ದು ನಾಲ್ಕು ವರ್ಷ ಮಾತ್ರ, ಬಾಲ ವಿಧವೆ ಹಾಗೆಂದು ಮುದುಡಿ ಮೂಲೆ ಗುಂಢಾಗದೆ ಶತಾಯುಷ್ಯದುದ್ದಕ್ಕೂ ಸರ್ವೋದಯ ಚಳುವಳಿಯಲ್ಲಿ ತೊಡಗಿಕೊಂಡವರು. ವರ್ಧಾನದಲ್ಲಿ ವಾಸಿಯಾಗಿದ್ದ ಈಕೆ ಬರೆದ ’ದೇವತಾತ್ಮಾ’ ಪ್ರವಾಸಕಥನ ಹಿಂದಿಯಲ್ಲಿದೆ. ಗೌರೀಶ್ ಕೈಕಿಣಿ ಕನ್ನಡಕ್ಕೆ ತಂದಿದ್ದಾರೆ.

ಲೇಖಕಿಯರಾಗಿ ಬಂದ ಬಹಳಷ್ಟು ಹವ್ಯಕ ಮಹಿಳೆಯರು ದೇಸೀ ಔಷಧಿ, ಮನೆವೈದ್ಯಕೀಯ, ನಳಪಾಕ, ಸಾಂಪ್ರದಾಯಕ ಹಾಡು – ಕತೆ ಬರೆದಿದ್ದಾರೆ. ಆಧುನಿಕ ಸಾಹಿತ್ಯ ಪ್ರಕಾರಗಳಲ್ಲಿ ಬರೆದವರು ಅಸಂಖ್ಯ. ಅವರಲ್ಲಿ ಎ.ಪಿ. ಮಾಲತಿ, ಗಂಗಾಪಾದೇಕಲ್ಲು, ಭಾಗೀರಥಿ ಹೆಗಡೆ, ಭುವನೇಶ್ವರಿ ಹೆಗಡೆ, ಲೀಲಾ ಮಣ್ಣಾಲ, ಶಾಲಿನಿ ರಘುನಾಥಭಟ್ಟ, ಶಾಲಿನಿ ಕೆ. ಎಚ್.ಶ್ರೀನಿವಾಸ, ಸವಿತಾ ಮರಕ್ಕಿಣಿ (ಹವ್ಯಕನ್ನಡದಲ್ಲಿ ಕಾದಂಬರಿ ರಚನೆ); ಮಣಿಮಾಲಿನಿ ವಿ.ಕೆ. : ವಿಜಯಾ ನಳಿನೀ ರಮೇಶ ಭಟ್ಟ, ಸುಧಾ ಶರ್ಮ ಚವತ್ತಿ, ಮನೋರಮಾಭಟ್ಟ, ಜಯಾಯಾಜಿ, ಕಿಬ್ಬಚ್ಚಲು ಮಂಜಮ್ಮ (ಪ್ರಥಮ ಮಹಿಳಾ ಲೇಖಕಿ) ; ಕನಕ ಹಾ.ಮ. ; ಉಮಾ ರಾಜಾರಾಮ ಹೆಗಡೆ ; ಕನ್ನಿಕಾ ಹೆಗಡೆ ; ಇವರೆಲ್ಲಾ ಉಲ್ಲೇಖಿಸಬೇಕಾದ ಹವ್ಯಕ ಲೋಕದ ಸ್ಥರದಲ್ಲಿರುವ ಮಹಿಳೆಯರು.

ಹವ್ಯಕ ಹೆಣ್ಣು ಮಕ್ಕಳಿಗಾಗಿ ಶುಕ್ರದೆಸೆ ಬಂದಿದೆ. ಆದ್ದರಿಂದ ಸಂಸ್ಕೃತಿಯ ಸತ್ವ ಸಾರ್ಥಕತೆಯನ್ನು ಅರಿತು ನಡೆಯಬೇಕಿದೆ. ವಸುದೈವ ಕುಟುಂಬಕಂ ಅವರ ನಂಬಿಕೆ. ತಮ್ಮ ತಮ್ಮ ಕುಟುಂಬಗಳ ಕರಿಯಾಶೀಲತೆಯೇನೆಂಬುದನ್ನು ಕಂಡುಕೊಳ್ಳಬೇಕಾಗಿದೆ. ಮಹಾದೇವಿ ತಾಯಿ ದೊಡ್ಮನೆ ಅವರು ಸ್ವಾತಂತ್ರ‍್ಯ ಹೋರಾಟದಲ್ಲಿ ಧುಮುಕಿದರೂ ತಮ್ಮ ಕುಟುಂಬ ಜೀವನದ ದಿವ್ಯತೆಯನ್ನು ನಿರ್ಲಕ್ಷಿಸಲಿಲ್ಲ. ನಾವೆಲ್ಲಿದ್ದರೂ ನಾವು ಹೇಗಿದ್ದರೂ ನಮ್ಮ ಸಂಸ್ಕೃತಿಯ ಜೀವಚೈತನ್ಯದಲ್ಲಿಯೇ ಉಜ್ವಲವಾಗಬೇಕು.