ಅದು ಕ್ರಿ.ಶ. ಶ೧೯೯೬ನೇ ಇಸ್ವಿ, ತಿಪಟೂರಿನ ಎಸ್. ಲಕ್ಕಿಹಳ್ಳಿಯ ಬೈಫ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ತೋಟ ತಿರುಗುತ್ತಿದ್ದೆವು. ಫಾರ್ಮ ಮ್ಯಾನೇಜರ್ ಕಾಂತರಾಜು ಅಲ್ಲಿನ ನರ್ಸರಿ ನಡುವೆ ನಿಂತಿದ್ದ ಮರ ತೋರಿಸಿ ‘ ಗಿಡ ಹ್ಯಾಂಗುಂಟ್ರಿ !?’ ಎಂದರು. ಅಪ್ಪುಗೆಗೆ ಸಿಲುಕದ ಮರ ತೋರಿಸುತ್ತ  ಇವರು ಗಿಡ  ಎನ್ನುತ್ತಾರಲ್ಲ ಎಂದು ಪ್ರಶ್ನಿಸುವದರೊಳಗೆ ಸಸ್ಯ ಪರಿಚಯ ಮಾಡಿಸಿದರು. ‘ ಹೆಬ್ಬೇವು (ಮಿಲಿಯಾ ಡುಬಿಯಾ) ಗಿಡಕ್ಕೆ ಇನ್ನೂ ನಾಲ್ಕು ವರ್ಷ ಆಗಿಲ್ಲ, ಎಷ್ಟು ಚೆನ್ನಾಗಿ ಬೆಳೆಯುತ್ತಿದೆ!’ ಸಾಕ್ಷ್ಯ ಎದುರಿಟ್ಟು  ಗುಣಗಾನಕ್ಕೆ ನಿಂತರು. ಈಗ ಮರದ ದಾಖಲಾತಿಯ ಕುತೂಹಲ ಮೂಡಿತು. ವಿವರ ಕೆದಕಿ ಬರಹ ಬರೆಯುವ ಅವಸರಕ್ಕೆ ಇಳಿಯದೇ ಚಿತ್ರ, ಮಾಹಿತಿ ದಾಖಲಿಸುವ ಕೆಲಸ ಆರಂಭಿಸಿದೆ. ಯಾವುದೇ ಪ್ರದೇಶಕ್ಕೆ ಹೋಗಲಿ ಹೆಬ್ಬೇವು ವಿವರ ಸಂಗ್ರಹಿಸುವ ಹವ್ಯಾಸ ಬೆಳೆಯಿತು.

ರಾಜ್ಯದ ಪರಿಸರ ಕಾರ್ಯದರ್ಶಿಯಾಗಿದ್ದ ಎ.ಸಿ.ಲಕ್ಷ್ಮಣ್ ಬೆಂಗಳೂರಿನಲ್ಲಿ  ಬಿದಿರಿನ ತೋಟ ಮಾಡಿದ್ದರು. ಅಲ್ಲಿಗೆ ಹೋಗಿದ್ದಾಗ ಮತ್ತೆ ಸಸ್ಯ ಪ್ರತ್ಯಕ್ಷ.’ ಇದಕ್ಕೆ ಇನ್ನೂ ೩ ವರ್ಷ ಆಗಿಲ್ಲ ಕಣಪ್ಪ!’ ಎಂದು ಲಕ್ಷ್ಮಣ್ ಗಿಡ ಬಿಗಿದಪ್ಪಿದರು. ಒಂದು ಕಾಲದಲ್ಲಿ ಬರಗಾಲ ಪ್ರದೇಶವೆಂದು ಖ್ಯಾತವಾದ ಕಲ್ಲುಗುಡ್ಡದ ಜಮಖಂಡಿಯ ಕಲ್ಲಹಳ್ಳಿಯ  ದೊಡ್ಡಮರಗಳೆಂದರೆ ಹೆಬ್ಬೇವು. ಕೃಷಿಕ ಸಂಗಪ್ಪ ಉಪ್ಪಲದಿನ್ನಿ ‘ ಮರ ಭರ್ಜರಿ ಬೆಳೆಯುತ್ರಿ!’ ಎಂದು ನೆಲದ ಅನುಭವ ಹಂಚಿದರು. ಮಲೆನಾಡಿನಲ್ಲಿ ಕಹಿಬೇವು ಕಡಿಮೆ, ಔಷಧಕ್ಕೂ ಮರವಿಲ್ಲ. ಶಿವಮೊಗ್ಗಕ್ಕೆ ಹೋಗಿದ್ದ ಉತ್ತರ ಕನ್ನಡ ಸಿದ್ದಾಪುರದ ಕುಂಬಾರಕುಳಿಯ ರಾಮಚಂದ್ರ ಹೆಗಡೆ ಬೇವಿನ ಸಸಿಯೆಂದು ತಿಳಿದು ರಸ್ತೆಯಂಚಿನ ಗಿಡ ಕಿತ್ತು ತಂದರು. ಅಡಿಕೆ ತೋಟದಂಚಿಗೆ ೪೦ವರ್ಷದ ಹಿಂದೆ ನೆಟ್ಟರು. ಆದರೆ ಅದು ಹೆಬ್ಬೇವು, ಈಗ ಮೂರು ಜನರ ಅಪ್ಪುಗೆಗೆ ಸಿಲುಕುವಷ್ಟು ಮರ ಬೆಳೆದಿದೆ.

ಕ್ರಿ,ಶ೧೯೮೯ರಲ್ಲಿ ಸಾಗವಾನಿ ನರ್ಸರಿ ಬೆಳೆಸಲು ಮಡಿಮಾಡುವ ಕೆಲಸ ಯಲ್ಲಾಪುರದ ಚಿನ್ನಾಪುರ ನರ್ಸರಿಯಲ್ಲಿ ನಡೆಯುತ್ತಿತ್ತು. ಸಾಗವಾನಿ ಮರದ ಬೇರಿನ ತುಂಡುಗಳನ್ನು ಮಣ್ಣಿನಲ್ಲಿ ಹೂಳಿ ಸಸಿ ಬೆಳೆಸುವ ಕ್ರಮ, ಇದನ್ನು ಟೀಕ್‌ಬೆಡ್ ಎನ್ನುತ್ತಾರೆ. ಬಿಸಿಲು ತಾಗುವ ಜಾಗ ಬೇಕು, ಹಾಗಾಗಿ ಗಿಡ ಕಡಿಯುವದು ಅನಿವಾರ್ಯ. ಕೆಲಸ ನಿರ್ವಹಿಸುತ್ತಿದ್ದ ವಾಚಮನ್ ಅಲ್ಲಿ ನೇರಕ್ಕೆ ಬೆಳೆದ ಗಿಡವನ್ನು ಗಮನಿಸಿದರು. ರಟ್ಟೆಗಾತ್ರದ ಗಿಡ ಕಡಿಯುವ ಮನಸ್ಸಾಗಲಿಲ್ಲ. ಈಗ ಅದು ಸುಮಾರು ೧೪ಅಡಿ ಸುತ್ತಳತೆಯ ಹೆಮ್ಮರವಾಗಿ ಬೆಳೆದಿದೆ. ಧಾರವಾಡದ ಅರಣ್ಯ ಸಂಶೋಧನಾ ವಿಭಾಗ ಕ್ರಿ,ಶ. ೨೦೦೧ರಲ್ಲಿ ಬಾದಾಮಿಯ ಯರಗಲ್‌ನಲ್ಲಿ ನಾಟಿ ಮಾಡಿದ ಸಸ್ಯಗಳು ೪-೫ ಅಡಿ ಸುತ್ತಳತೆಯನ್ನು ಮೀರಿ ಬೆಳೆದಿವೆ. ಹಾಸನದ ಮಾರಶೆಟ್ಟಿಹಳ್ಳಿ ಗೇಟ್ ಸನಿಹದ ತೆಂಗಿನತೋಟದ ಮಾಲಿಕ ಚಲುವೆಗೌಡರು ೧೦ವರ್ಷದ ಹಿಂಂದೆ ನೆಟ್ಟ ನೂರಾರು ಗಿಡಗಳು ಹೆಮ್ಮರಗಳಾಗಿ ಸಸ್ಯಶಕ್ತಿ ಸಾರುತ್ತಿವೆ. ಮೈಸೂರಿನ ಹೆಗ್ಗಡದೇವನಕೋಟೆಯ ಹೊಸಹಳ್ಳಿ ವಿವೇಕ ಗಿರಿಜನ ಶಿಕ್ಷಣ ಕೇಂದ್ರದ ತೋಟದಲ್ಲಿ ಮರ ಶೀಘ್ರ ಬೆಳವಣಿಗೆ ತೋರಿಸಿದೆ. ಭಾಗಮಂಡಲ, ಮಡಿಕೇರಿ, ವಿರಾಜಪೇಟೆ, ನಂಜನಗೂಡು, ಮೈಸೂರು, ಯಳಂದೂರುಗಳಲ್ಲಿಯೂ  ಮರ ಬೆಳೆದಿದೆ.

ಒಮ್ಮೆ ಕಾಡಲ್ಲಿ ಮರ ಹುಡುಕುತ್ತ ಓಡಾಡುವಾಗ ಶಿರಸಿಯ ಕಬ್ಬಗುಳಿಯ ಶಂಕರ ನಾಯ್ಕರು ಜಿಂಕೆಕಾಯಿ  ಮರ ಎಂದು ಹೆಬ್ಬೇವು ಗುರುತಿಸಿದರು. ರಾತ್ರಿ ಜಿಂಕೆಗಳು ಕಾಯಿ ತಿನ್ನಲು ಮರದಡಿ ಜಮಾಯಿಸುತ್ತಿದ್ದುದನ್ನು ಗಮನಿಸಿ ಹೆಸರು ಬಳಕೆಗೆ ಬಂದಿತ್ತು. ಜಿಂಕೆ, ಕಡವೆ, ಕಾಡುಕುರಿ ಕಾಯಿ  ತಿನ್ನುತ್ತವೆ. ಪ್ರಾಣಿಗಳು ತಿಂದಾಗ ಬೀಜ ಮೊಳಕೆ ಬರುತ್ತವೆ. ಇದರ ಸಸಿ ಬೆಳೆಸುವಲ್ಲಿ ದೊಡ್ಡ ಸಮಸ್ಯೆಯಿದೆ, ಲಕ್ಷಾಂತರ ಬೀಜಗಳನ್ನು ಹಾಕಿದರೆ ಸಾವಿರವೂ ಸಸಿಯಾಗುವದಿಲ್ಲ, ಬೀಜದ ದಪ್ಪ ಕವಚ ಸೀಳಿಕೊಂಡು ಮೊಳಕೆ ಮೂಡಲು ವನ್ಯಜೀವಿಗಳ ಬೀಜೋಪಚಾರ ಬೇಕು. ಹೆಬ್ಬೇವು ಮೃದುಕಟ್ಟಿಗೆ, ಉರುವಲು, ಗೊಬ್ಬರಕ್ಕೆ ಉಪಯುಕ್ತವಾಗಿದೆ. ಕಟ್ಟಿಗೆ ಸಂಸ್ಕರಿಸಿ ಪಿಠೋಪಕರಣಗಳಿಗೆ ಬಳಸಲಾಗುತ್ತದೆ.

ಹೆಬ್ಬೇವಿನ ಸಸ್ಯ ನರ್ಸರಿ ವಿಚಾರದಲ್ಲಿ ತಿಪಟೂರಿನ ಲಕ್ಕಿಹಳ್ಳಿ ಫಾರ್ಮ ಮಹತ್ವದ ಪ್ರಯತ್ನ ಮಾಡಿದೆ. ರೈತರ ಮರವಾಗಿ ಇದನ್ನು ಪರಿಚಯಿಸಿ ಅಭಿವೃದ್ಧಿ ಪಡಿಸಲು ದಶಕದ ಹಿಂದೆಯೇ ಮಾಹಿತಿ ಪತ್ರ ಮುದ್ರಿಸಿದೆ. ಈ ಹಿಂದೆ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದ ಡಾ.ಜಿ.ವಿ. ಹೆಗಡೆ ವಿಶೇಷ ಮುತುವರ್ಜಿ ವಹಿಸಿ ಬೀಜೋಪಚಾರದ ವಿವಿಧ ಸಾಧ್ಯತೆಗಳ ಪ್ರಯೋಗ ಮಾಡಿದ್ದಾರೆ. ನರ್ಸರಿಯಲ್ಲಿ ಸಸಿ ಬೆಳೆಸಿ ಹಂಚಿದ್ದಾರೆ. ಈಗಂತೂ  ಚಿತ್ರದುರ್ಗದ ಆಸುಪಾಸಿನ ಪ್ರದೇಶಗಳಲ್ಲಿ ಕಳೆದ ೪ ವರ್ಷದ ಈಚೆಗೆ ನೂರಾರು ಎಕರೆ ನೆಡುತೋಪು ಮಾಡಲಾಗಿದೆ. ಒಂದು ಕಾಲಕ್ಕೆ ಪುಕ್ಕಟೆ ದೊರೆಯುತ್ತಿದ್ದ ಸಸ್ಯ  ಈಗ ೨೫-೪೦ರೂಪಾಯಿಗೆ ಮಾರಾಟವಾಗುತ್ತಿದೆ. ಅಚ್ಚರಿಯೆಂದರೆ ಖಾಸಗಿ ಜಮೀನುಗಳಲ್ಲಿ ಜಾಸ್ತಿ ಸಸಿ ನೆಡಲಾಗಿದೆ. ಅಕೇಸಿಯಾ, ಸಿಲ್ವರ್‌ಓಕ್, ಮ್ಯಾಂಜಿಯಂ ,ಕ್ಯಾಸುರಿನಾ, ನೀಲಗಿರಿ ಎಂದು ಶೀಘ್ರ ಬೆಳೆಯುವ ವಿದೇಶಿ ಸಸ್ಯಗಳ ಹಿಂದೆ ಓಡುವವರ ಮಧ್ಯೆ ನಮ್ಮ ನೆಲದ ಹೆಬ್ಬೇವು  ಈಗ ಹಲವರ ಪ್ರೀತಿ ಗಳಿಸಿದೆ.

ವಿಚಿತ್ರ ನೋಡಿ, ಇಂದಿಗೂ ಲಕ್ಕಿಹಳ್ಳಿಯ ಕಾಂತರಾಜ್ ಭೇಟಿಯಾದಾಗೆಲ್ಲ ಹೆಬ್ಬೇವಿನಿಂದಲೇ ನಮ್ಮ ಮಾತುಕತೆ  ಶುರುವಾಗುತ್ತದೆ. ಅವರು ೧೪ ವರ್ಷದ ಹಿಂದೆ ಮರದ ಗಮನ ಸೆಳೆದ ಕಾರಣಕ್ಕೆ ನಾನಂತೂ ಇವತ್ತಿಗೂ ಮರದ ಪೋಟೋ ತೆಗೆಯುತ್ತಿದ್ದೇನೆ, ಮಾಹಿತಿ ಸಂಗ್ರಹಿಸಿದ್ದೇನೆ. ಕೆಲವು ಸಸಿ ನೆಟ್ಟು ಬೆಳವಣಿಗೆ ಗಮನಿಸುತ್ತಿದ್ದೇನೆ. ಬಹುಶಃ ಎಲ್ಲರಿಗೂ  ಹುಚ್ಚು ಹತ್ತಿಸುವದು ಗಿಡದ ಗುಣವಿರಬೇಕು. ಕೊಪ್ಪಳದ  ಕಾಮನೂರಿನಲ್ಲಿ ಕೃಷಿ ಆರಂಭಿಸಿದ್ದ ಗೆಳೆಯ ಆನಂದತೀರ್ಥ ಪ್ಯಾಟಿ ೪ ವರ್ಷದ ಹಿಂದೆ ಮನೆಗೆ ಬಂದಿದ್ದರು, ಪ್ರೀತಿಯಿಂದ ಒಂದು ಸಸಿ ನೀಡಿದ್ದೆ. ಅತ್ಯಂತ ಚಿಕ್ಕ ಸಸಿ, ಮಲೆನಾಡಿನ ತಂಪು ನೆಲದಿಂದ ಹೊರಟ ಸಸಿ ನೂರಾರು ಕಿಲೋ ಮೀಟರ್ ಪಯಣಿಸಿ ಬದುಕಬಹುದೇ ? ಅನುಮಾನವಿತ್ತು.  ‘ಮರ ಈಗ ಸುಮಾರು ಎರಡೂವರೆ ಅಡಿ ಸುತ್ತಳತೆ, ೨೫ಅಡಿ ಎತ್ತರ ಬೆಳೆದಿದೆ. ಕಾಗೆಗೂಡು ಕಟ್ಟಿದೆ, ಅದರಲ್ಲಿ ಕೋಗಿಲೆ ಮರಿಯಾಗಿದೆ!’ ಕಾಮನೂರು ಕೃಷಿ ಭೂಮಿಯಿಂದ ಹೆಬ್ಬೇವಿನ ಪ್ರತಿನಿಧಿ ಚ.ರಾ.ನಾಗೇಂದ್ರ ಪ್ರಸಾದ್  ಮರದಡಿ ನಿಂತು ಈಗಷ್ಟೇ ಖುಷಿಯಲ್ಲಿ ಮಾತಾಡಿದ್ದಾರೆ. ಹಸಿರು ಭೀಮ ಹೆಬ್ಬೇವಿಗೆ ನಮಸ್ಕಾರ.