ಅಂದು ಮುಂಜಾನೆಯೇ ತುಂತುರು ಮಳೆಹನಿ ಕಬ್ಬಿಗೆರೆಯನ್ನು ತೊಯ್ಯಿಸುತ್ತಿತ್ತು.  ಊರಿನ ಜನರೆಲ್ಲಾ ಸರಸರನೆ ಬೆಳಗಿನ ಕೆಲಸಗಳನ್ನು ಪೂರೈಸುತ್ತಿದ್ದರು.  ಅಲ್ಲಲ್ಲಿ ಕಟ್ಟಿದ್ದ ಹಸಿರುಹಬ್ಬದ ತೋರಣಗಳು ಸ್ವಾಗತ ಕೋರುತ್ತಿದ್ದವು.  ಹೊತ್ತೇರುತ್ತಿದ್ದಂತೆ ಚಿಕ್ಕಣ್ಣನಹಳ್ಳಿ, ಅಜ್ಜೇನಹಳ್ಳಿ, ಚಿಕ್ಕರಸನಹಳ್ಳಿಯ ಜನಗಳು ಕಬ್ಬಿಗೆರೆಗೆ ಕಳಶ ಹೊತ್ತು ವಾದ್ಯಮೇಳಗಳೊಂದಿಗೆ ಬರತೊಡಗಿದರು.

ಊರಿನ ಕೇಂದ್ರಸ್ಥಳ ಕಬ್ಬಿಗೆರೆಯಲ್ಲಿರುವ ಹಸಿರು ಶಕ್ತಿಭವನ, ಎಲ್ಲಾ ಊರಿನ ಜನರು ಸೇರುವ ಸ್ಥಳ ಅದು.  ಹಸಿರುಹಬ್ಬಕ್ಕೂ ಎಲ್ಲರೂ ಅಲ್ಲೇ ಸೇರಿದರು.  ದೇವಸ್ಥಾನಕ್ಕೆ ಮೆರವಣಿಗೆ.  ಹಸಿರುಕಂಕಣ ಒಬ್ಬರಿಗೊಬ್ಬರು ಕಟ್ಟಿದರು.  ಸಾವಿರಾರು ಸಸಿಗಳನ್ನು ನೆಟ್ಟರು.

ಈ ಊರಿನಲ್ಲಿ ಹಸಿರಿನಿಂದಲೇ ಬೆಳಕು ಪಡೆಯುತ್ತಾರೆ.  ಅದಕ್ಕಾಗಿ ಊರಲ್ಲಿ ಸುಮಾರು ೪೩೬ ಎಕರೆ ಜಾಗದಲ್ಲಿ ೩.೪ ಲಕ್ಷ ಸಸಿಗಳನ್ನು ನೆಟ್ಟಿದ್ದಾರೆ ಎಂದರು ಬೈಫ್‌ನ ಹಿರಿಯ ಕಾರ್ಯಕ್ರಮ ಸಂಯೋಜಕರಾದ ವಿ.ಬಿ. ದ್ಯಾಸ.

ಇಂಧನಗಳ ಅಭಾವ, ನೀರಿನ ಅಭಾವ, ಕಲ್ಲಿದ್ದಲಿನ ಅಭಾವ ಹೀಗೆ ಏನೆಲ್ಲಾ ಕಾರಣಗಳಿಂದ ಬದಲೀ ಇಂಧನಗಳನ್ನು ಹುಡುಕಲೇಬೇಕಾಗಿದೆ.  ಅವುಗಳ ಸುಧಾರಣೆ ಮಾಡಿಕೊಂಡು ಬಳಸಲೇಬೇಕಾಗಿದೆ.  ಹೀಗೆ ಕಬ್ಬಿಗೆರೆಯಲ್ಲಿ ಪ್ರಾರಂಭವಾಗುತ್ತಿರುವ ವಿದ್ಯುತ್ ಸ್ಥಾವರವೇ ಹಸಿರುಶಕ್ತಿಯಿಂದ ನಡೆಯುವಂತಹದ್ದು.

ಅಂದರೆ ಕಬ್ಬಿಗೆರೆಯಂತಹ ಬರಡು, ಬರ ಭೂಮಿಯನ್ನು ಮೊದಲು ಹಸಿರುಗೊಳಿಸುವುದು, ಅದಕ್ಕಾಗಿ ಲಕ್ಷೆಪಲಕ್ಷ ಗಿಡಗಳನ್ನು ನೆಡುವುದು, ಅದನ್ನು ಅನುಸರಿಸಿ ಇನ್ನೂ ಅನೇಕ ಯೋಜನೆಗಳನ್ನು ಅಳವಡಿಸುವುದು,  ಅದರಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಕೆ, ಸಮುದಾಯ ಆಧಾರಿತ ಗೋಬರ್‌ಗ್ಯಾಸ್ ಸ್ಥಾವರಗಳ ನಿರ್ಮಾಣ ಹಾಗೂ ಕಟ್ಟಿಗೆ ಬಳುಸುವ ವಿದ್ಯುತ್ ಸ್ಥಾವರಗಳು ಮುಖ್ಯವಾದವು.

ಸ್ವಸಹಾಯ ಸಂಘಗಳ ರಚನೆ

ಯಾವುದೇ ಯೋಜನೆಯನ್ನು ಕಾರ್ಯಗತಗೊಳಿಸಲು ಬೈಫ್ ತನ್ನದೇ ಆದ ವಿಶಿಷ್ಟ ಮಾರ್ಗಗಳನ್ನು ಅಳವಡಿಸಿಕೊಂಡಿದೆ.  ಅದರಲ್ಲಿ ಸ್ವಸಹಾಯ ಸಂಘಗಳ ರಚನೆಯೂ ಒಂದು.

ಎಲ್ಲಾ ಯೋಜನೆಗಳೂ ಪ್ರಮುಖವಾಗಿ ನಿರ್ದಿಷ್ಟ ಕೆಲಸಗಳನ್ನು ಒಳಗೊಂಡಿರುತ್ತವೆ.  ಅದರ ಸಮರ್ಥ ನಿರ್ವಹಣೆಯೇ ಸವಾಲಿನ ಕೆಲಸ.  ಆದರೆ ಅದಕ್ಕೊಂದು ಯೋಜನೆ ರೂಪಿಸಬೇಕು.  ಅದರ ಸಾಧ್ಯತೆ ಬಾಧ್ಯತೆಗಳನ್ನು ಚರ್ಚಿಸಬೇಕು.  ಆಮೇಲೆ ಕೆಲಸಗಳ ನಿರ್ವಹಣೆ.

ಕಬ್ಬಿಗೆರೆಯಲ್ಲಿ ೨೩ ಮಹಿಳಾ ಸ್ವಸಹಾಯ ಸಂಘಗಳು ರಚನೆಯಾದವು.  ಕಟ್ಟಿಗೆ ಬಳಸುವ ವಿದ್ಯುತ್ ಸ್ಥಾವರಕ್ಕೆ ಮೂಲ ಇಂಧನ ಕಟ್ಟಿಗೆ ಮತ್ತು ಕೃಷಿ ತ್ಯಾಜ್ಯ ವಸ್ತುಗಳು.  ಆದರೆ ಬರದ ಊರಲ್ಲಿ ಹಸಿರೆಲ್ಲಿಂದ ಬರಬೇಕು?  ಕಟ್ಟಿಗೆ ಎಲ್ಲಿ ಸಿಗಬೇಕು?

ಸ್ವಸಹಾಯ ಗುಂಪುಗಳಿಗೆ ಸಸಿ ಬೆಳೆಸುವ, ನರ್ಸರಿ ಮಾಡುವ ತರಬೇತಿಗಳನ್ನು ಸಿದ್ಧರಬೆಟ್ಟ ಹಾಗೂ ಲಕ್ಕಿಹಳ್ಳಿಗಳಲ್ಲಿ ಕೊಡಲಾಯಿತು.  ಆದರೂ ಮಹಿಳೆಯರಿಗೆ ಏನೋ ಹಿಂಜರಿತ.  ಗ್ರಾಮ ಅರಣ್ಯ ಸಮಿತಿ ಸಹಾಯ ಮಾಡುವುದಾಗಿ ಹೇಳಿತು.  ಸಸಿಗಳನ್ನು ಬೆಳೆಸಲು ಆಗುವ ಏನೆಲ್ಲಾ ಖರ್ಚುವೆಚ್ಚಗಳ ಬಾಬ್ತನ್ನು ಗ್ರಾಮ ಅರಣ್ಯ ಸಮಿತಿ ವಹಿಸಿಕೊಂಡಿತು.  ಸಸ್ಯಗಳಿಗೆ ಬೇಕಾಗುವ ಮರಳು, ಮಣ್ಣು, ಗೊಬ್ಬರದ ಸರಬರಾಜನ್ನು ಮಾಡಿತು.  ಇಷ್ಟೆಲ್ಲಾ ಅನುಕೂಲತೆಗಳು ಸಿಕ್ಕಾಗ ಮಹಿಳೆಯರಿಗೆ ಇನ್ನೂ ಹೆಚ್ಚು ಧೈರ್ಯ ಬಂತು.  ಎಲ್ಲಾ ಮಹಿಳೆಯರೂ ಭಾಗವಹಿಸತೊಡಗಿದರು.  ತಾವೇ ಮರಳು, ಮಣ್ಣು, ಗೊಬ್ಬರಗಳನ್ನು ಸಂಗ್ರಹಿಸಿದರು.  ಬೆಳಗ್ಗೆ ಒಂದು ಗಂಟೆ ಕೆಲಸ, ಸಂಜೆ ಒಂದು ಗಂಟೆ ಕೆಲಸ.  ಆರು ತಿಂಗಳಿಗೆ ಸರಾಸರಿ ಆದಾಯ ಮೂರು ಸಾವಿರ ರೂಪಾಯಿಗಳು ಸಿಕ್ಕಿತು.

ಮರುವರ್ಷ ಇನ್ನೂ ಒಂದು ಹೆಜ್ಜೆ ಮುಂದಿಟ್ಟರು.  ತಮ್ಮ ಸಂಘದ ಅತಿ ಬಡವ ಹಾಗೂ ಭೂರಹಿತ ಸದಸ್ಯರಿಬ್ಬರನ್ನು ಆಯ್ಕೆ ಮಾಡಿ ಸಂಪೂರ್ಣ ಜವಾಬ್ದಾರಿಯನ್ನು ಅವರಿಗೆ ವಹಿಸಿದರು.  ಇದರಿಂದ ಕಾರ್ಯಕ್ಷಮತೆ ಹೆಚ್ಚಿತು.  ಓರ್ವ ಮಹಿಳೆಯಂತೂ ೨೦ ಸಾವಿರ ರೂಪಾಯಿಗಳನ್ನು ಕೇವಲ ಸಸಿ ತಯಾರಿಕೆಯಲ್ಲಿ ಗಳಿಸಿದ್ದು ದಾಖಲೆಯಾಯಿತು.

ನರ್ಸರಿಯಲ್ಲಿ ಬೆಳೆಸಿದ ಸಸಿಗಳನ್ನು ಎರಡು ರೂಪಾಯಿಯಂತೆ ಕೊಳ್ಳುವ ಸಮಿತಿ, ರೈತರಿಗೆ ೪೦ ಪೈಸೆಯಂತೆ ಮಾರಾಟ ಮಾಡುತ್ತದೆ.  ರೈತರು ಒಂದು ಎಕರೆಯಲ್ಲಿ ಬದುಗಳ ಮೇಲೆ ೫೦೦ ಸಸಿಗಳನ್ನು ನೆಟ್ಟರೆ, ಟ್ರಂಚ್‌ಗಳ ಮೇಲೆ ೩೦೦ ಸಸಿಗಳನ್ನು ನೆಟ್ಟು ಹೊಲಗಳನ್ನ ಚಿಕ್ಕ ಚಿಕ್ಕ ಅರಣ್ಯಗಳನ್ನಾಗಿ ಮಾಡಿದ್ದಾರೆ.

ಹಾಗಂತ ಇದೂ ಸಹ ಸುಲಭದಲ್ಲಿ ಆದದ್ದಲ್ಲ.  ಮೊದ ಮೊದಲು ರೈತರು ಹೊಲಗಳಲ್ಲಿ ಗಿಡ ನೆಡಲು ಒಪ್ಪಿರಲೇ ಇಲ್ಲ.  ಸೀಮೆತಂಗಡಿ, ನೀಲಗಿರಿ ಇವೆಲ್ಲಾ ವೇಗವಾಗಿ ಬೆಳೆಯುವ ಗಿಡಗಳು.  ಅದರಿಂದ ಸಿಗುವ ಸೊಪ್ಪು, ಗೊಬ್ಬರ, ಉರುವಲು ಇವನ್ನೆಲ್ಲ ಅರಿತು ಗಿಡ ಹಚ್ಚುವ ಪೈಪೋಟಿ ಪ್ರಾರಂಭವಾಯಿತು.  ಅದೀಗ ಎಷ್ಟೆಂದರೆ ಎಕರೆಗೆ ಎಂಟುನೂರು ಗಿಡಗಳವರೆಗೂ ಹಚ್ಚಿದರು.

ಸಸಿಗಳನ್ನು ಅವರ ನೆಲದಲ್ಲೇ ಬೆಳೆಸಿದ್ದರಿಂದ ಕೊಂಡು ತರುವ ಖರ್ಚು ಉಳಿಯಿತು.  ಇನ್ಯಾರಿಗೋ ಸಂದಾಯವಾಗಬೇಕಾದ ಹಣ ಊರಿನವರಿಗೆ ಸಿಕ್ಕಿತು.  ಇದೊಂದು ಉಪಕಸುಬಾಗಿ ಪರೋಕ್ಷ ಸಹಾಯವಾಯಿತು.

ನೆದರ್‌ಲ್ಯಾಂಡಿನ ಪತ್ರಕರ್ತ ಜಾನ್ ಹೇಳುತ್ತಾರೆ; ದೇಶದ ಅಭಿವೃದ್ಧಿಯನ್ನು ಬರೀ ಹಣದೊಂದಿಗೆ ಅಳೆಯಬಾರದು.  ಅಲ್ಲಿನ ಸಮೃದ್ಧ ಪ್ರಕೃತಿ ಮತ್ತು ಹಣದಿಂದ ಹೊರತಾದ ಆರ್ಥಿಕತೆಯು ಸಹ ಒಟ್ಟಾರೆ ಅಭಿವೃದ್ಧಿಯನ್ನು ಸೂಚಿಸುತ್ತಿರುತ್ತದೆ.

ಕಬ್ಬಿಗೆರೆಯಲ್ಲೂ ಹಸಿರು, ಬಿಸಿಲನ್ನು ನಿಯಂತ್ರಿಸಿ ನೆಲ ಸುಟ್ಟು ಬರಡಾಗದಂತೆ ಹೊದಿಕೆಯಾಗಿ ರಕ್ಷಿಸುತ್ತಿದೆ.

ಪರಸ್ಪರ ಸಹಾಯ, ಒಗ್ಗೂಡಿ ಮಾಡುವ ಶ್ರಮ, ಹೊಸ ಬದಲಾವಣೆಗಳಿಗೆ ತೆರೆದುಕೊಳ್ಳುವ ರೀತಿ, ಮಾಡುವ ಕೆಲಸಗಳನ್ನು ನಿಯಮಬದ್ಧಗೊಳಿಸುವದು ಇವೆಲ್ಲಾ ಹಣಕ್ಕಿಂತಲೂ ಹೆಚ್ಚು ಪ್ರತಿಫಲ ನೀಡಿದೆ.

ಸಮುದಾಯದ ಸಹಭಾಗಿತ್ವವೇ ಮುಖ್ಯವಾಗಿ ಚಟುವಟಿಕೆಗಳನ್ನು ಸಕ್ರಿಯವಾಗಿಡಲು ಸಾಧ್ಯ.  ಅದಕ್ಕೋಸ್ಕರವೇ ಐದು ವಿವಿಧ ಸಮುದಾಯ ಸಂಘಗಳು ರಚನೆಗೊಂಡಿವೆ.

ಗ್ರಾಮ ಅರಣ್ಯ ಸಮಿತಿ, ನೀರು ಬಳಕೆದಾರರ ಸಂಘ, ಗೋಬರ್ ಗ್ಯಾಸ್ ಬಳಕೆದಾರರ ಸಂಘ ಹಾಗೂ ವಿದ್ಯುತ್ ಬಳಕೆದಾರ ಸಂಘ ಉಳಿದವುಗಳು.

ಗ್ರಾಮ ಅರಣ್ಯ ಸಮಿತಿ

ಜಂಟಿ ಅರಣ್ಯ ಯೋಜನೆಯಡಿ ಈ ಸಮಿತಿಗಳ ನಿರ್ಮಾಣವಾಯಿತು.  ಈ ಹಳ್ಳಿಗಳಲ್ಲಿ ಅರಣ್ಯ ಪ್ರದೇಶ ಹೆಸರಿಗೆ ಮಾತ್ರ ಇತ್ತು.  ಆದರೆ ಮರಗಳು ನಾಪತ್ತೆಯಾಗಿದ್ದವು.  ರಕ್ಷಣೆ ಕೆಲಸ ಬಿಡಿ, ಈ ಅರಣ್ಯ ನಮಗೆ ಸೇರಿದ್ದು, ಇವುಗಳಿಂದಲೇ ನಮ್ಮ ಬದುಕು ನಡೆಯುತ್ತಿರುವುದು ಎಂಬ ಯಾವುದೇ ಕಾಳಜಿ ಸಹ ಇರಲಿಲ್ಲ.

ಕ್ಷೇತ್ರಪ್ರವಾಸ ಮಾಡಿದಂತೆ ಹೊಲಗಳಲ್ಲಿ ಕೃಷಿಹೊಂಡ ನಿರ್ಮಾಣ, ಉದಿಬದು ಅವುಗಳ ಮೇಲೆಲ್ಲಾ ಗಿಡಗಳನ್ನು ಹಚ್ಚುವುದು, ಅರಿವಿಗೆ ಬಂದಂತೆ, ಊರಿನ ಅರಣ್ಯ ಬಳಸಿಕೊಳ್ಳಬೇಕು ಹಾಗೂ ಹೆಚ್ಚಿಸಬೇಕು ಎನ್ನುವ ವಿಚಾರವೂ ಮನಸ್ಸಿನಾಳಕ್ಕಿಳಿಯಿತು.

ಅರಣ್ಯ ಸಮಿತಿ ರಚನೆಯಾಗುತ್ತಿದ್ದಂತೆ ಮೊದಲು ಮಾಡಿದ ಕೆಲಸ ಕಾಡು ಕಡಿಯುವವರ ತಡೆಯೊಡ್ಡಿದ್ದು.  ಸಿಕ್ಕಿಬಿದ್ದವರಿಗೆ ದಂಡ ವಿಧಿಸಿದ್ದು ವಸೂಲಿ ಮಾಡಿ ಇನ್ನೊಮ್ಮೆ ಈ ಕೆಲಸ ಮಾಡುವುದಿಲ್ಲ ಎಂದು ಹೇಳಿಸಿದ್ದು.

ಗುಟ್ಟಿನ ವಿಚಾರ ಏನೆಂದರೆ; ಇದನ್ನೆಲ್ಲಾ ಮೊದಲು ಮಾಡಿದ್ದು ಸ್ವಸಹಾಯ ಸಂಘಗಳ ಮಹಿಳೆಯರು ಕಣ್ರೀ, ಆಮೇಲೆ ಗಂಡಸರಿಗೆ ಎಚ್ಚರವಾಯ್ತು.  ಈಗ ಇಡೀ ಊರೇ ಕಾಡಿಗೆ ಬೇಲಿಯಂತೆ ಎದೆಯುಬ್ಬಿಸಿ ಅಡ್ಡನಿಂತಿದೆ.

ಅರಣ್ಯ ಸಮಿತಿ ನಿರ್ವಹಿಸಬೇಕಾದ ಮುಖ್ಯ ಕೆಲಸ ಬೇರೆಯೇ ಇತ್ತು.  ಅದು ವಿದ್ಯುತ್ ಸ್ಥಾವರಕ್ಕೆ ಕಟ್ಟಿಗೆ ಪೂರೈಕೆ.  ಅದಕ್ಕಾಗಿಯೇ ಸಮರೋಪಾದಿಯಲ್ಲಿ ಸಸಿ ಹಾಕಿದ್ದು, ಬೆಳೆಸಿದ್ದು, ಹಸಿರುಹಬ್ಬ ಮಾಡಿದ್ದು, ನೆಟ್ಟಿದ್ದು, ನೀರು ಹಾಕಿದ್ದು ಏನೆಲ್ಲಾ ಚಟುವಟಿಕೆಗಳು ನಡೆದವು.

ರೈತರು ತಮ್ಮದೇ ಹೊಲಗಳಲ್ಲಿ ನೆಡುವಾಗ ಮರ ಆಧಾರಿತ ಕೃಷಿ ಯೋಜನೆಯಲ್ಲಿ, ತೋಟಗಾರಿಕೆಯೊಂದಿಗೆ ಅರಣ್ಯ ಬೇಸಾಯ, ಬೇಸಾಯದೊಂದಿಗೆ ಅರಣ್ಯ ಬೇಸಾಯ ಹಾಗೂ ಅರಣ್ಯ ಬೇಸಾಯ ಈ ಮೂರು ಪದ್ಧತಿಗಳನ್ನು ಅಳವಡಿಸಿಕೊಂಡರು. ಈಗ ೧೮ ಜಾತಿಯ ಕಾಡುಸಸಿಗಳನ್ನು ತಮ್ಮ ಜಮೀನುಗಳಲ್ಲಿ ಬೆಳೆಸುತ್ತಿದ್ದಾರೆ.

ಈ ಸಸಿಗಳು ಹೊಲಕ್ಕೆ ಸೊಪ್ಪು, ಉರುವಲಿಗೆ ಕಟ್ಟಿಗೆಯನ್ನು ಈಗಾಗಲೇ ನೀಡುತ್ತಿವೆ.  ಇದಕ್ಕೂ ಹೆಚ್ಚಾಗಿದ್ದು ವಿದ್ಯುತ್ ಉತ್ಪಾದನೆಗೆ ಹೋಗುವುದು ಸಹಜ.  ಅದು ನಿಯಮ ಸಹ.

ವಿದ್ಯುತ್  ಸ್ಥಾವರ

ಕಬ್ಬಿಗೆರೆ, ಚಿಕ್ಕಣ್ಣನಹಳ್ಳಿ, ಚಿಕ್ಕರಸನಹಳ್ಳಿ, ಅಜ್ಜೇನಹಳ್ಳಿ ಈ ಎಲ್ಲಾ ಹಳ್ಳಿಗಳಿಗೆ ಸೇರಿ ಹಸಿರು ಶಕ್ತಿ ಯೋಜನೆಯಲ್ಲಿ ವಿದ್ಯುತ್ ಸ್ಥಾವರ ತಲೆಯೆತ್ತಿ ನಿಂತಿದೆ.  ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ಯುಎನ್‌ಡಿಪಿ ಹಾಗೂ ಐಸಿಇಎಫ್ ಇದಕ್ಕೆ ಅನುದಾನ ನೀಡಿದೆ.  ೨೦೦೨ರಲ್ಲಿ ಯೋಜನೆ ಪ್ರಾರಂಭ.  ಆಗ ಇದ್ದ ಅಧಿಕಾರಿ ಸುಭಾಷ್ ಖುಂಟಿ ಆ ಇಡೀ ಯೋಜನೆಯ ಯಶಸ್ಸು ಗ್ರಾಮ ಸಮುದಾಯವನ್ನು ಅವಲಂಬಿಸಿದೆ ಎನ್ನುತ್ತಾರೆ.

ಕಬ್ಬಿಗೆರೆಯ ವಿದ್ಯುತ್ ಸ್ಥಾವರದ ಸಾಮರ್ಥ್ಯ ಗಂಟೆಗೆ ೫೦೦ ಕಿಲೋವ್ಯಾಟ್ ಉತ್ಪಾದನೆ.  ಅದರಲ್ಲಿ ೧೦೦ ಕಿಲೋವ್ಯಾಟ್ ಸಾಮರ್ಥ್ಯದ ಮೂರು ಸ್ಥಾವರಗಳು ಹಾಗೂ ೨೦೦ ಕಿಲೋವ್ಯಾಟ್ ಸಾಮರ್ಥ್ಯದ ಒಂದು ಸ್ಥಾವರಗಳನ್ನು ಒಳಗೊಂಡಿದೆ.  ಕಟ್ಟಿಗೆಯನ್ನು ಅವಲಂಬಿಸಿ ವಿದ್ಯುತ್ ಉತ್ಪಾದನೆ ಇದರ ಗುರಿ.  ಕಟ್ಟಿಗೆ ಹೆಚ್ಚಿದ್ದರೆ ನಾಲ್ಕು ಸ್ಥಾವರಗಳಿಗೂ ಕೆಲಸ.  ಕಡಿಮೆಯಿದ್ದರೆ ಅದಕ್ಕನುಗುಣವಾದ ಸ್ಥಾವರಕ್ಕೆ ಮಾತ್ರ ಕೆಲಸ.

೧೦೦ ವ್ಯಾಟ್‌ನ ಒಂದು ಬಲ್ಬ್ ಹತ್ತು ಗಂಟೆ ಉರಿಯಲು ಒಂದೂವರೆ ಕಿಲೋಗ್ರಾಂ ಕಟ್ಟಿಗೆ ಬೇಕು. ಮನೆಯಲ್ಲಿರುವ ನಾಲ್ಕು ಬಲ್ಬ್, ಒಂದು ಟೆಲಿವಿಷನ್ ಉರಿಯಲು ಆರೂವರೆ ಕಿಲೋ ಕಟ್ಟಿಗೆ ದಿನವೊಂದಕ್ಕೆ ಸಾಕು.

೧೦೦ ಟನ್ ಕಟ್ಟಿಗೆ ಸಿಕ್ಕಿದರೆ ಸ್ಥಾವರಕ್ಕೆ ದಿನವಿಡೀ ಕೆಲಸ.  ರೈತರಿಗೆ ಬೇಕೆಂಬಷ್ಟು ವಿದ್ಯುತ್, ಕೇವಲ ಮನೆಬಳಕೆಗಷ್ಟೇ ಅಲ್ಲ, ನೀರಾವರಿ ಪಂಪ್‌ಸೆಟ್‌ಗಳಿಗೆ, ಸಣ್ಣ ಉದ್ದಿಮೆಗಳಿಗೆ, ಹಿಟ್ಟಿನ ಗಿರಣಿಗಳಿಗೆ, ಬೀದಿ ದೀಪ ಹೀಗೆ ಊರಿನ ೪೫ ಮನೆಗಳ ಜೊತೆ ಯಾವುದಕ್ಕೆ ಬೇಕಾದರೂ ಆದೀತು.  ಹಾಗಂತ ಕಟ್ಟಿಗೆ ಮಾತ್ರ ಊರಿನದು, ಊರಿನ ಕಾಡಿನದು.  ಕೃಷಿ ತ್ಯಾಜ್ಯಗಳಾದ ತೆಂಗಿನಗರಿ, ಅಡಿಕೆ ಸೋಗೆ ಹೀಗೆ ಒಣತ್ಯಾಜ್ಯಗಳಾದರೂ ನಡೆಯುತ್ತದೆ.

ವಿದ್ಯುತ್ ಸ್ಥಾವರದ ನಿರ್ವಹಣೆ, ಕಟ್ಟಿಗೆ ಕೊಳ್ಳುವ ಲೆಕ್ಕಾಚಾರ, ವಿದ್ಯುತ್ ನೀಡುವ ಲೆಕ್ಕಾಚಾರ ಹೀಗೆ ಸ್ಥಾವರಕ್ಕೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ನೋಡಿಕೊಳ್ಳಲು ೬೦ ಜನರ ತಂಡವಿದೆ.

ಈ ಸಮಿತಿಯಲ್ಲಿ ಗ್ರಾಮದ ಪ್ರತಿಯೊಬ್ಬ ಸದಸ್ಯ ಹಾಗೂ ಗ್ರಾಮ ಪಂಚಾಯ್ತ ಸದಸ್ಯ ಸಮಿತಿಯಲ್ಲಿರುತ್ತಾನೆ.  ಮಹಿಳೆಯರಿಗೆ ಪ್ರಾಧಾನ್ಯತೆಯಿದೆ.  ತಿಂಗಳಿಗೊಮ್ಮೆ ಸಭೆ, ಸಮಸ್ಯೆಗಳ ಚರ್ಚೆ, ೧೫ ಜನರ ಕಾರ್ಯಕಾರಿ ಮಂಡಳಿ ರಚಿಸಲಾಗುತ್ತದೆ.   ಇದರಲ್ಲಿ ನಾಲ್ಕು ಗ್ರಾಮಗಳಿಗೂ ಆದ್ಯತೆ.  ಕಾರ್ಯಕಾರಿ ಮಂಡಳಿಯ ಅವಧಿ ಎರಡು ವರ್ಷ.

ಇಡೀ ವಿದ್ಯುತ್ ಸ್ಥಾವರದ ಆಡಳಿತ ಇರುವುದು ರೈತರ ಕೈಯಲ್ಲಿ.  ಶೇಕಡಾ ೬೦ರಿಂದ ೮೦ರಷ್ಟು ಕಟ್ಟಿಗೆ ಹಾಗೂ ತ್ಯಾಜ್ಯಗಳು ಬರುವುದು ರೈತರ ಸ್ವಂತ ಜಮೀನಿಂದ ಹಾಗೂ ಉತ್ಪಾದನೆಯಾಗುವ ವಿದ್ಯುತ್ತಿನ ಮಾಲೀಕರೂ ಸಹ ಸಮುದಾಯವೇ ಆಗಿದೆ.  ಇಡೀ ವ್ಯವಸ್ಥೆ ಯಾರದೋ ಒಬ್ಬರ ಕೈಯಲ್ಲಿರದೇ ಊರಿಗೇ ಹಂಚಲಾಗಿದೆ.  ವಿದ್ಯುತ್  ಸ್ಥಾವರದಿಂದ ಬರುವ ಇಂಗಾಲದ ಡೈ ಆಕ್ಸೈಡ್, ಇಂಗಾಲದ ಮಾನಾಕ್ಸೈಡ್‌ಗಳನ್ನು ಹೊಗೆ ಕೊಳವೆಯಲ್ಲಿ ಅಳವಡಿಸಿದ ನಿಯಂತ್ರಕ ಹೀರಿಕೊಳ್ಳುತ್ತದೆ.  ಗ್ರಾಮದ ಅರಣ್ಯ ನಿಯಂತ್ರಿಸುತ್ತದೆ, ಬೂದಿಯನ್ನು ಗೊಬ್ಬರವಾಗಿ ಅಥವಾ ಇಟ್ಟಿಗೆಯಾಗಿ ಮಾಡುವುದು ಮುಂದಿನ ಯೋಜನೆ.

ಹೀಗೆ ಇಡೀ ಸ್ಥಾವರವೇ ಸಮುದಾಯ ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸುತ್ತದೆ.

ಇದನ್ನು ಅವಲಂಬಿಸಿ ಹನಿ ನೀರಾವರಿ ವ್ಯವಸ್ಥೆಯೂ ಸುಲಭವಾಗುತ್ತದೆ.  ಕಬ್ಬಿಗೆರೆಯ ಹೊಲಗಳಲ್ಲಿ ಅಡ್ಡಾಡಿದರೆ ಹೊಲದ ಮಧ್ಯೆ ಅಲ್ಲಲ್ಲಿ ನೀರಿನ ಟ್ಯಾಂಕ್ ಕಾಣಿಸುತ್ತದೆ.  ಹಾಗಂತ ಪ್ರತಿ ಟ್ಯಾಂಕಿನ ಪಕ್ಕ ಬೊರ್‌ವೆಲ್ ಕಾಣಿಸುವುದಿಲ್ಲ.  ಬೋರ್‌ವೆಲ್ ಇನ್ಯಾರದೋ ಜಮೀನಿನಲ್ಲಿ ಇರುತ್ತದೆ.  ಯಾರದೋ ನೀರು ಯಾರಿಗೋ ಪಾಲು.  ಇದು ಹೇಗೆ ಸಾಧ್ಯ?  ಕಬ್ಬಿಗೆರೆಯ ರೈತರೆಲ್ಲಾ ಸಣ್ಣ ಹಿಡುವಳಿದಾರರು.  ಇರುವ ಅರ್ಧ ಎಕರೆ, ಒಂದು ಎಕರೆಗೆ ಜಮೀನಿಗೆ ಬೋರ್ ತಗೆಸಲು ಯಾರು ಹಣ ಕೊಡುತ್ತಾರೆ?  ಹಾಗಂತ ಎಲ್ಲಾ ಜಮೀನಿನಲ್ಲೂ ನೀರು ಸಿಗುವುದೂ ಇಲ್ಲ.  ಮಳೆಗಾಲದಲ್ಲಿ ರಾಗಿ, ಮೆಕ್ಕೆಜೋಳ ಹೀಗೆ ಒಣಬೆಳೆಗಳನ್ನು ಬೆಳೆಯುತ್ತಿದ್ದರು.

ಎಲ್ಲರಿಗೂ ನೀರು ಒದಗಿಸುವ ಯೋಜನೆ ರೂಪುಗೊಂಡಿತು.

ನೀರು ಬಳಕೆದಾರರ ಸಂಘ

ಮೊದಲು ನೀರು ಸಿಗುವ ಜಾಗ ಹುಡುಕುವುದು.  ಖಾಸಗಿ ಜಾಗದಲ್ಲಿ ಇದ್ದರೆ ಮಾಲೀಕನ ಒಪ್ಪಿಗೆ ಪಡೆಯುವುದು.  ಬೋರ್‌ವೆಲ್ ತೆಗೆಸುವುದು.  ನೀರು ಎಷ್ಟು ಸಿಗುತ್ತದೆ ಎನ್ನುವ ಆಧಾರದಿಂದ ೩೦೦ ಮೀಟರ್ ಅಂತರದಲ್ಲಿ ಬರುವ ರೈತರ ಗುಂಪು ರಚನೆ.

ಗ್ರಾಮ ವಿದ್ಯುತ್ ನಿರ್ವಹಣಾ ಸಮಿತಿಯ ಜೊತೆ ಕರಾರು.  ಏನೆಂದರೆ ಹನಿ ನೀರಾವರಿ ಕಡ್ಡಾಯ.  ಅರ್ಧ ಎಕರೆಗೆ ಮಾತ್ರ ಸೌಲಭ್ಯ.  ಭತ್ತ, ಕಬ್ಬಿನಂತಹ ಹೆಚ್ಚು ನೀರು ಬಯಸುವ ಬೆಳೆ ಬೆಳೆಯಬಾರದು.  ವಿದ್ಯುತ್ ಬಿಲ್ ಪ್ರತಿಯೊಬ್ಬರೂ ಪಾವತಿಸಬೇಕು.  ಇದರೊಂದಿಗೆ ಕೃಷಿಹೊಂಡ, ಉದಿಬದು ಮುಂತಾದ ಜಲ ಮರುಪೂರಣ ವ್ಯವಸ್ಥೆಗಳನ್ನು ಮಾಡಬೇಕು.

೩೯ ಜನರ ರೈತರು ಇದಕ್ಕೊಪ್ಪಿದರು.  ೫ರಿಂದ ೧೨ ಜನರಿರುವ ನೀರು ಬಳಕೆದಾರರ ಸಂಘ ಮಾಡಿಕೊಂಡರು.

ಪ್ರತಿಯೊಬ್ಬ ರೈತನು ತನ್ನ ಹೊಲದಲ್ಲಿಯೇ ಬೋರ್‌ವೆಲ್‌ನಿಂದ ಕಾಲುವೆ ತೋಡಿ ಪೈಪ್‌ಗಳನ್ನು ಹಾಕಿಕೊಂಡು ನಾಲ್ಕು ಸಾವಿರ ಲೀಟರ್ ಸಾಮರ್ಥ್ಯದ ತೊಟ್ಟಿಗಳನ್ನು ಕಟ್ಟಿಕೊಂಡರು.  ಹಸಿರು ಶಕ್ತಿ ಯೋಜನೆಯಲ್ಲಿ ಈ ಕೆಲಸಗಳಿಗೆ ಅರ್ಧಪಾಲು ಹಣ ಮಾತ್ರ ಸಿಗುತ್ತದೆ ಹಾಗೂ ರೈತರು ತಮ್ಮದೇ ಖರ್ಚಿನಲ್ಲಿ ಹನಿ ನೀರಾವರಿಯನ್ನು ಅಳವಡಿಸಿಕೊಂಡರು.

ಗೋವಿಂದರಾಜುರವರಿಗೆ ಮುಕ್ಕಾಲು ಎಕರೆ ಮಳೆ ಆಶ್ರಿತ ಜಮೀನಿದೆ.  ಕಾವೇರಿ ನೀರು ಬಳಕೆದಾರರ ಸಂಘದ ಸದಸ್ಯ.  ಹನಿ ನೀರಾವರಿ ಅಳವಡಿಸಿದ ಮೇಲೆ ಹಾಗಲಕಾಯಿ ಬೆಳೆದರು.  ಮಾರಿದ ಲಾಭಕ್ಕಿಂತ ಬೆಳೆದ ಖರ್ಚು ಹೆಚ್ಚಾಗಿತ್ತು.  ಟೊಮ್ಯಾಟೊ ಬೆಳೆದರು.  ಕೊಳ್ಳುವವರೇ ಸಿಗಲಿಲ್ಲ.  ಬೈಫ್ ಮಾರ್ಗದರ್ಶನದಲ್ಲಿ ಮಾರುಕಟ್ಟೆ ವಿವರ ಪಡೆದರು.  ಆಮೇಲೆ ಮಿಡಿಸೌತೆ, ನೆಲಗಡಲೆ ಬೆಳೆದು ಲಾಭ ಪಡೆದರು.  ೧೦೦ ಕಾಕಡಹೂವಿನ ಗಿಡ ಬೆಳೆದರು.  ಅಂತರ ಬೇಸಾಯದಲ್ಲಿ ಹುರುಳಿ, ಸಿಹಿಗೆಣಸು, ಮರಗೆಣಸು, ನುಗ್ಗೆ, ಪಪ್ಪಾಯ, ತೊಗರಿ ಎಷ್ಟೆಲ್ಲಾ ಬೆಳೆ ಬೆಳೆಯುತ್ತಿದ್ದಾರೆ.  ಹೀಗಿರುವಾಗ ಆದಾಯ ಏರಲೇಬೇಕಲ್ಲ.

ವಿದ್ಯುತ್ ಸ್ಥಾವರ ನಿರ್ಮಿಸಿದಾಗ ವಿದ್ಯುತ್ ಕೊಳ್ಳುವವರು ಬೇಕು.  ಅದಕ್ಕಾಗಿ ತಲಾ ಆದಾಯ ಹೆಚ್ಚಿಸಬೇಕು.  ಆದಾಯ ಹೆಚ್ಚಲು ಕೃಷಿ ಇಳುವರಿ ಹೆಚ್ಚಬೇಕು. ಅದಕ್ಕಾಗಿ ವರ್ಷವಿಡೀ ನೀರು ಪೂರೈಸಬೇಕು.  ನೀರಿಗಾಗಿ ಬೋರ್‌ವೆಲ್ ತೆಗೆಸಬೇಕು.  ನೀರೆತ್ತಲು ವಿದ್ಯುತ್ ಬೇಕು.  ವಿದ್ಯುತ್‌ಗೆ ಸ್ಥಾವರ ಬೇಕು.  ಇದೊಂದು ರೀತಿಯ ಸರಪಳಿ ಕ್ರಿಯೆ.

ಸದ್ಯ ನೀರನ್ನು ಬಳಸುವವರು ವಿದ್ಯುತ್ ಖರ್ಚನ್ನೂ ಸಮನಾಗಿ ಹಂಚಿಕೊಳ್ಳುತ್ತಿದ್ದಾರೆ.  ತರಕಾರಿಗಳು, ಹೂವು, ನುಗ್ಗೆ ಹೀಗೆ ಎಲ್ಲಾ ಬೆಳೆಗಳೂ ಊರಿನವರಿಗೆ ಹೊಸತು.  ಅವಕ್ಕೆಲ್ಲಾ ಎಷ್ಟು ನೀರು ಬೇಕೆಂದು ಗೊತ್ತಿಲ್ಲ.  ಹಾಗಾಗಿ ಸಮಪಾಲು.

ಊರಿನಲ್ಲಿ ಹನಿ ನೀರಾವರಿಯ ಮೇಲೆ ಯಾರಿಗೂ ನಂಬಿಕೆ ಇರಲಿಲ್ಲ.  ಚೂರೇ ನೀರಿಗೆ ಗಿಡ ಬೆಳಿತದಾ ಎನ್ನುವ ಪ್ರಶ್ನೆಯಿತ್ತು.  ಈಗ ಮನುಷ್ಯರಿಗೆ ಶಕ್ತಿಗಾಗಿ ಗ್ಲೂಕೋಸ್ ಕೊಟ್ಟಂಗೆ ಬೆಳೆಗಳಿಗೆ ಹನಿ ಹನಿಯಾಗಿ ನೀರು ಕೊಟ್ರೆ ಸಾಕು ಎಂದು ಊರಿನ ಹಿರಿಯ ಜವರೇಗೌಡ ಹೇಳುತ್ತಾರೆ.

ಈ ಸಮಯದಲ್ಲೇ ಕಬ್ಬಿಗೆರೆಯಲ್ಲಿ ಕೃಷಿ ಮೇಳ ನಡೆಯಿತು.  ಕೃಷಿಮೇಳಕ್ಕೆ ಬಂದ ರೈತರಿಗೆಲ್ಲಾ ಹನಿ ನೀರಾವರಿಯಲ್ಲಿ ಬೆಳೆದ ತರಕಾರಿಗಳನ್ನು ನೋಡುವ ಆತುರ.  ಚಿಕ್ಕಣ್ಣನ ಹಳ್ಳಿಯ ಕೆರೆರಂಗಪ್ಪ, ಕಾಮಣ್ಣ ಇವರುಗಳು ಸಮುದಾಯ ನೀರಾವರಿ ಯೋಜನೆಯಲ್ಲಿ ತರಕಾರಿ ಬೆಳೆದ ಸಾಹಸದ ಕತೆ ಹೇಳಿದ್ದೇ ಹೇಳಿದ್ದು.  ಮೂರೇ ತಿಂಗಳಲ್ಲಿ ಹನಿ ನೀರಾವರಿಗಾಗಿ ಮಾಡಿದ ಸಾಲವೆಲ್ಲಾ ವಾಪಸ್ ಮಾಡಿದೆ ಕಣ್ಲಾ.  ಸ್ವಲ್ಪ ಜಮೀನಿರೋ ನಮ್ಮಂತೋರಿಗೆ ಬೋರು, ನೀರು ಎಲ್ಲಾ ಕನಸಾಗಿತ್ತು.  ಈಗ ಇದೆಲ್ಲಾ ದಕ್ಕಿರೋದು ಸಹಾ ಒಂಥರಾ ಕನಸಿನಂಗಿದೆ ಎಂದು ಕೃಷಿಮೇಳದಲ್ಲಿ ಬಂದ ರೈತರೊಂದಿಗೆ ಅನುಭವ ಹಂಚಿಕೊಂಡರು.

ಇದೆಲ್ಲಕ್ಕಿಂತ ಹೆಚ್ಚು ಸ್ವಾರಸ್ವವಾಗಿರೋ ಮತ್ತೊಂದು ಕೆಲಸ ಸಹ ಈ ಹಳ್ಳಿಗಳಲ್ಲಿ ನಡೀತಾ ಇದೆ.

ಅಜ್ಜೇನಹಳ್ಳಿಯಲ್ಲಿ ದಿನಾ ಜಗಳ, ಜಾತಿ ವೈಮನಸ್ಯ.  ಯಾವುದಕ್ಕೂ ಒಟ್ಟಾಗಿ ಸೇರೋ ಬುದ್ಧೀನೇ ಇರಲಿಲ್ಲ.  ಈ ಊರಲ್ಲಿ ಒಂದೊಂದೇ ಯೋಜನೆ ಜಾರಿಯಾದಂತೆ ಗೋಬರ್‌ಗ್ಯಾಸ್ ಯೋಜನೆಯೂ ಚರ್ಚೆಗೆ ಬಂತು.  ಸಗಣಿ ಇದ್ರೆ ಜಾಗ ಇಲ್ಲ, ಜಾಗ ಇದ್ರೆ ಸಗಣಿ ಎಲ್ಲ ಅನ್ನೋ ಪರಿಸ್ಥ್ತಿತಿ.  ಹಾಗಂತ ಎಲ್ಲರಿಗೂ ಗೋಬರ್‌ಗ್ಯಾಸ್ ಬೇಕು.  ಕಟ್ಟಿಗೆ ತರೋದು, ಒಲೆ ಉರಿಸೋದು, ಹೊಗೆ ತಿನ್ನೋದು ಸಾಕಾಗಿಹೋಗಿತ್ತು.  ಗೋಬರ್‌ಗ್ಯಾಸ್ ಬಳಕೆದಾರರ ಸಂಘ ಹುಟ್ಟಿತು.  ಕುಟುಂಬದ ಜನರು, ಜಾನುವಾರುಗಳನ್ನು ಲೆಕ್ಕ ಹಾಕಲಾಯಿತು.  ಮೂರರಿಂದ ಐದು ಜನರ ಗುಂಪುಗಳ ರಚನೆ, ಜಾಗ ಗುರುತಿಸುವಿಕೆ, ಗುಂಪಿನ ಗಾತ್ರ, ಜಾನುವಾರುಗಳ ಸಂಖ್ಯೆಗಳಿಗನುಗುಣವಾಗಿ ಆರು ಘನಮೀಟರ್ ಸಾಮರ್ಥ್ಯದ ಘಟಕದಿಂದ ೨೦ ಘನಮೀಟರ್ ಸಾಮರ್ಥ್ಯದವರೆಗೆ ಗೋಬರ್‌ಗ್ಯಾಸ್ ಘಟಕಗಳನ್ನು ಕಟ್ಟಲಾಯಿತು.  ದೀನಬಂಧು, ಕೆವಿಐಸಿ ಯೋಜನೆಯಲ್ಲಿ ರೈತರೇ ಘಟಕಗಳನ್ನು ಕಟ್ಟಿದರು.  ನಿರ್ವಹಣೆಗೆ ನಿಯಮಗಳನ್ನು ರೂಪಿಸಿಕೊಂಡರು.

ಅಜ್ಜೇನಹಳ್ಳಿಯ ಕೃಷ್ಣಾ ಗೋಬರ್‌ಗ್ಯಾಸ್ ತಂಡದವರು ಬೆಳಗ್ಗೆ ಏಳರಿಂದ ಒಂಭತ್ತು ಹಾಗೂ ಸಂಜೆ ಏಳರಿಂದ ಎಂಟು ಗಂಟೆಯವರೆಗೆ ಗ್ಯಾಸ್ ಉರಿಸುತ್ತಾರೆ.  ಅಡುಗೆಯಾದ ಕೂಡಲೇ ಘಟಕಕ್ಕೆ ಬೀಗ ಹಾಕುತ್ತಾರೆ.  ಪ್ರತಿ ತಿಂಗಳೂ ಒಬ್ಬೊಬ್ಬರ ಕೈಯಲ್ಲಿ ಬೀಗದ ಕೀ ಇರುತ್ತದೆ.

ಪ್ರತಿದಿನ ೨೦ ಕಿಲೋಗ್ರಾಂ ಸಗಣಿ ಪ್ರತಿಮನೆಯವರೂ ಹಾಕುತ್ತಾರೆ.  ೧೫ ದಿನಗಳಿಗೊಮ್ಮೆ ಸ್ಲರಿ ಹಂಚಿಕೊಳ್ಳುತ್ತಾರೆ.  ಎಲ್ಲರೂ ಒಟ್ಟಾಗಿ ಐದು ಬಕೆಟ್‌ಗಳಲ್ಲಿ ಸ್ಲರಿ ತುಂಬಿಕೊಂಡು ಹೋಗಿ ಒಬ್ಬರದೇ ತಿಪ್ಪೆಯ ಮೇಲೆ ಸುರಿಯುತ್ತಾರೆ.  ಹೀಗೆ ಪ್ರತಿ ಮನೆಯ ಸರತಿ ಬಂದಾಗಲೂ ಐವರೂ ಸೇರಿ ಸ್ಲರಿಯನ್ನು ಚೆಲ್ಲುತ್ತಾರೆ.

ಸೂರ್ಯ ಗುಂಪಿನವರದು ದೊಡ್ಡ ಘಟಕ.  ಐದು ದಿನಗಳಿಗೊಮ್ಮೆ ಒಬ್ಬರು ೫೦ ಕಿಲೋಗ್ರಾಂ ಸಗಣಿ ಹಾಕುತ್ತಾರೆ.  ಬಳಕೆಯ ಅವಧಿಯೂ ಹೆಚ್ಚು.  ಹಬ್ಬ ಹರಿದಿನಗಳಲ್ಲಿ ಪರಸ್ಪರ ಹೊಂದಾಣಿಕೆಯಿಂದ ಹಿಂದಿನ ದಿನ ಬಳಸದೇ ಹೆಚ್ಚು ಗ್ಯಾಸ್ ಸಂಗ್ರಹಿಸಿ ಮರುದಿನ ಹಬ್ಬದ ಅಡುಗೆ ಮಾಡುತ್ತಾರೆ.

ಒಂದೇ ಹಸು ಇದ್ದವರಿಗೂ ಗ್ಯಾಸ್ ಸಿಗ್ತಾಯಿದೆ.  ಕಟ್ಟಿಗೆ ಬೇಡ, ಅಡುಗೆ ಮಾಡೋದು ಸುಲಭ ಹೀಗೆಲ್ಲ ಒಳಗಿನ ಅನುಕೂಲತೆಗಳೊಂದಿಗೆ ರಸ್ತೆ ಜಗಳ ನಿಂತೇಹೋಗಿದೆ.

ಒಂದೊಮ್ಮೆ ಘಟಕ ರಿಪೇರಿಗೆ ಬಂದರೆ ಹಣದ ಪರದಾಟ ಆಗಬಾರದು ಎಂದು ಪ್ರತಿ ತಿಂಗಳೂ ತಲಾ ೨೦ ರೂಪಾಯಿಗಳನ್ನು ಬ್ಯಾಂಕಿನಲ್ಲಿ ಠೇವಣಿ ಇಡುತ್ತಿದ್ದಾರೆ.

ಇದರೊಂದಿಗೆ ಎರೆಗೊಬ್ಬರ ತಯಾರಿಕೆ, ಜೇನುಸಾಕಣೆ, ಹೈನು ಅಭಿವೃದ್ಧಿ, ಕೃತಕ ಗರ್ಭಧಾರಣೆ ತರಬೇತಿ ಹೀಗೆ ಕೃಷಿಗೆ ಪೂರಕ ಉಪಕಸುಬುಗಳ ತರಬೇತಿಯೂ ನಡೆದಿದೆ.  ಹಸಿರು ಶಕ್ತಿ ಯೋಜನೆಯ ಕಟ್ಟಿಗೆ ವಿದ್ಯುತ್ ಸ್ಥಾವರ ನಿರ್ಮಾಣದಿಂದ ಊರಿಗೆ ಊರೇ ಹಸಿರಿನಿಂದ ಕಂಗೊಳಿಸುತ್ತಿದೆ.  ಈ ಹಸಿರೇ ಬೆಳಕಾಗಿದೆ, ಶಕ್ತಿಯಾಗಿದೆ, ಅನ್ನವಾಗಿದೆ.  ಎಷ್ಟೆಲ್ಲಾ ಹೊಸತು ಬರಲು ಕಾರಣವಾಗಿದೆ.  ಕಬ್ಬಿಗೆರೆ ಚಿಕ್ಕಣ್ಣನ ಹಳ್ಳಿ, ಚಿಕ್ಕರಸನಹಳ್ಳಿ, ಅಜ್ಜೇನಹಳ್ಳಿಗಳ ಬದುಕು ಬದಲಾಗಿದೆ.

ಕೆಲವು ವರ್ಷಗಳ ನಂತರ ಬೈಫ್ ಕಬ್ಬಿಗೆರೆಯಲ್ಲಿ ಹಸಿರು ಶಕ್ತಿ ಯೋಜನೆಯನ್ನು ಪೂರೈಸಿ ಹಿಂದಿರುಗಿತು. ಸೂಕ್ತ ಮೇಲ್ವಿಚಾರಕರು ಇಲ್ಲದ ಕಾರಣ ವಿದ್ಯುತ್ ತಯಾರಿಕೆ ಕ್ರಮಬದ್ದವಾಗಿ ನಡೆಯುತ್ತಿಲ್ಲ. ಹಸುರಿನ ಕೊರತೆ ಇಲ್ಲ. ನಾಯಕತ್ವದ ಕೊರತೆ ಕಾರಣ ಎನ್ನುವುದು ಊರವರ ಅನಿಸಿಕೆ.