ಎಲ್ಲಿ ಇರುವೆ ಅಮ್ಮ ನೀನು
ಇಲ್ಲಿ ನಿನ್ನ ಕರೆವೆ ನಾನು
“ಬಂದೆ ಪುಟ್ಟ” ಎಂದು ಹೇಳು
“ಏನು ಪುಟ್ಟ?” ಎಂದು ಕೇಳು
ಪ್ರೀತಿಯಮ್ಮ ನಿನಗೆ ಇಂದು
ಉಂಟು ನನ್ನ ಪ್ರಶ್ನೆ ಒಂದು
ಕೋಪಗೊಳದೆ ನೀನು ಈಗ
ಉತ್ತರಿಸಲೆ ಬೇಕು ಬೇಗ
ದಿನವು ತಬ್ಬಿ ಹಿಡಿದು ನನ್ನ
ಮುದ್ದಿಸುತ್ತ, “ಚಿನ್ನ-ರನ್ನ”
ಎಂದು ಹೊಗಳುತ್ತಿದ್ದರೇನು?
ಮರೆವುದುಂಟು ನನ್ನ ನೀನು
ಅಂದು- ನಿನ್ನ ಮದುವೆಯಂದು
ಅಪ್ಪನೊಡನೆ ನಗುತ ನಿಂದು
ಫೋಟೋ ತೆಗೆಸಿಕೊಂಡೆಯಲ್ಲ?
ಏಕೆ ನನ್ನ ಕರೆಯಲಿಲ್ಲ?
* * *
Leave A Comment