ಡಾಕ್ಟರ್ ಮಾಮಾ
ಡಾಕ್ಟರ್ ಮಾಮಾ
ನಮ್ಮಯ ಹತ್ತಿರ ಬರಬೇಡಿ
ಹೇಳುವೆ ಈಗ
ಬಂದರು ಬೇಗ
ಚುಚ್ಚುವ ಸೂಜಿಯ ತರಬೇಡಿ

ಮಕ್ಕಳಿಗೆಂದು
ಬೇರೆಯೆ ಒಂದು
ಮದ್ದೇ ನಿಮ್ಮಲಿ ಇರಬೇಕು
ಅದರಲಿ ಎಲ್ಲ
ಸಕ್ಕರೆ ಬೆಲ್ಲ
ತುಂಬಿಸಿ ಮೆಲ್ಲನೆ ಇಡಬೇಕು

ಹಾಗೆಯೆ ನೀವು
ಮಾಡಲು ನಾವು
ನಿಮ್ಮಲಿ ಪ್ರೀತಿಯ ಇಟ್ಟೇವು
“ಮಾಮಾ” ಎಂದು
ನಗುತಲಿ ಬಂದು
ನಿಮಗೂ ಮುದ್ದನು ಕೊಟ್ಟೇವು

* * *