ಅಮ್ಮ ನಂಗೆ ಹೇಳು ನಿಂಗೆ

ಪುಟ್ಟು ಎಲ್ಲಿ ಸಿಕ್ಕಿತು?
ಸದ್ದು ಇಲ್ಲದಂತೆ ಮೆಲ್ಲ
ಹೇಗೆ ಕೋಣೆ ಹೊಕ್ಕಿತು?

ಆಟ ಇಲ್ಲ ಓಟ ಇಲ್ಲ
ಮಲಗಿದಲ್ಲೆ ಮಲಗಿದೆ
ಹಾಗೆ ಇದ್ದು ಚಿಕಣಿ ಮುದ್ದು
ಎಲ್ಲ ಕಣ್ಣ ಸೆಳೆದಿದೆ

ಬೆರಳು ಮುಷ್ಟಿ ಮಾಡಿ ಗಟ್ಟಿ
ಏನು ತಾನೆ ಹಿಡಿದಿದೆ?
ಕಾಲು ಕೈಯ ಥಕ್ಕ ಥೈಯ
ಕುಣಿವ ಕುಸ್ತಿ ನಡೆದಿದೆ

ಒಮ್ಮೆ ಅಳುವು ಮತ್ತೆ ಗೆಲುವು
ನಿಮಿಷದಲ್ಲೆ ನಿದ್ದೆಯು
ಉಚ್ಚೆ ಫಕ್ಕ ಜೊಲತೆಯೆ ‘ಕಕ್ಕ’
ಹಾಸು ಹೊದಿಕೆ ಒದ್ದೆಯು

“ನಿನಗೆ ತಮ್ಮ ಬರುವ ನಮ್ಮ”
ಎಂದೆ ನೀನು ಆ ದಿನ
ಹೇಳೆ ಅಮ್ಮ ನನ್ನ ತಮ್ಮ
ಬಂದನೇನು ಈ ದಿನ?

* * *