ಪ್ರಿಯರಾದ ಶ್ರೀ ಪಳಕಳ ಸೀತಾರಾಮ ಭಟ್ಟ ಅವರನ್ನು ಪರೋಕ್ಷವಾಗಿ ನಾನು ಅನೇಕ ವರ್ಷಗಳಿಂದ ಬಲ್ಲೆ; ಪ್ರತ್ಯಕ್ಷವಾಗಿ ಕಂಡದ್ದು ಬಹುಶಃ ಆರೇಳು ವರ್ಷಗಳ ಹಿಂದಿರಬೇಕು. ಆ ನಮ್ಮ ಭೇಟಿಯಲ್ಲಿಯೇ ಅವರು ತಮ್ಮೊಂದು ಮಕ್ಕಳ ಗೀತೆಗಳ ಸಂಕಲನಕ್ಕೆ ನಾನು ನಾಲ್ಕು ಮಾತುಗಳನ್ನು ಬರೆದುಕೊಡಬೇಕೆಂದು ಕೇಳಿದರು; ನಾನು ಒಪ್ಪಿದೆ. ಅವರಂಥ ಸ್ನೇಹಶೀಲರ ಕೋರಿಕೆಗೆ ಯಾರೂ ಇಲ್ಲವೆನ್ನರು. ನಾನು ಮಕ್ಕಳ ಸಾಹಿತ್ಯವನ್ನು ರಚಿಸಿದವನಲ್ಲ. ಆದರೂ ಅದು ಹೇಗಿರಬೇಕು ಎಂದು ಯೋಚಿಸಿದವನು. ಆದ್ದರಿಂದ ಭಟ್ಟರ ಪುಸ್ತಕಕ್ಕೆ ನಾಲ್ಕು ಮಾತು ಬರೆಯುವುದು ತಪ್ಪಾಗಲಾರದೆಂದು ಭಾವಿಸಿದೆ. ಜೊತೆಗೆ ಭಟ್ಟರು ಆ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಿದ ಹಿರಿಯರು. ಅವರು ಈಗಾಗಲೇ ಎಂಬತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವೆಲ್ಲವೂ ಎಳೆಯರನ್ನೇ ಉದ್ದೇಶಿಸಿದವು. ಅವುಗಳಲ್ಲಿ ಸುಮರು ಇಪ್ಪತ್ತೆಂಟರಷ್ಟು ಮಕ್ಕಳ ಕವನ ಸಂಕಲನಗಳೇ ಆಗಿವೆ! ಇಂಥ ಲೇಖಕರ ಒಂದು ಪುಸ್ತಿಕೆಗೆ ನಾಲ್ಕು ಮಾತು ಬರೆಯುವುದು ಗೌರವದ ಕೆಲಸವೂ ಹೌದು. ನನ್ನಲ್ಲಿ ಇಂಥ ಗೌರವ ತೋರಿದ ಭಟ್ಟರಿಗೆ ಕೃತಜ್ಞನಾಗಿದ್ದೇನೆ. ಪ್ರೀತಿಯಿಂದ ಈ ನಾಲ್ಕು ಮಾತು ಬರೆಯುತ್ತಿದ್ದೇನೆ.

ಪ್ರಸ್ತುತ ‘ಹಸಿರು ಹಾಡು’ ಸಂಕಲನದಲ್ಲಿ ಮೂವತ್ತು ಕವನಗಳಿವೆ. ‘ಹಸಿರು’ ಇಂದಿನ ಅಗತ್ಯಗಳನ್ನು ಕುರಿತ ಒಂದು ಮಾತು. ಮನುಕುಲ ಅದರ ಮಹತ್ವವನ್ನು ನಿಧಾನವಾಗಿ ಅರ್ಥ ಮಾಡಿಕೊಳ್ಳುತ್ತಿದೆ. ಹಸಿರಿಲ್ಲದೆ ತನ್ನ ಉಸಿರಾಡದು ಎಂಬುದನ್ನು ಮನುಷ್ಯ ತಿಳಿದುಕೊಳ್ಳುತ್ತಿದ್ದಾನೆ. ಹಸರು ಹಾಡನ್ನು ಹಾಡೋಣ, ನೆಲವನ್ನು ಹಸಿರು ಮಾಡೋಣ ಎಂದು ಮಕ್ಕಳಿಗೆ ಕರೆ ಕೊಡುವ ಈ ಪದ್ಯ, ಹಸಿರಿನ ಮಹತ್ವದ ಬಗೆಗೆ ಮಾತಾಡಿದರೆ ಸಾಲದು, ಹಾಡು ಕಟ್ಟಿ ಹಾಡಿದರೆ ಸಾಲದು, ಮರಗಿಡಬಳ್ಳಿಗಳನ್ನು ನೆಟ್ಟು ಪೋಷಿಸಬೇಕು; ಭೂಮಿಯನ್ನು ಹಸಿರುಗೊಳಿಸಬೇಕು ಎಂದು ಹೇಳುತ್ತದೆ. ಸಸ್ಯ ಸಂಪತ್ತು ನಮ್ಮನ್ನಷ್ಟೇ ಅಲ್ಲ, ನಮ್ಮ ಮುಂದಿನ ತಲೆಮಾರುಗಳನ್ನು ಕಾಯುತ್ತದೆ ಎಂಬ ಚಿರಂತನ ಸತ್ಯವನ್ನು ಧ್ವನಿಸುತ್ತದೆ. ಈ ಧ್ವನಿ ಮಕ್ಕಳ ಹೃದಯವನ್ನು ಮುಟ್ಟಬೇಕು.

ಒಂದು ಪದ್ಯದಲ್ಲಿ ‘ಮಗುವಿನ ಮಾತು’ ತಂದೆ ತಾಯಿಗಳಿಗೊಂದು ಪಾಠವಿದೆ. ಚಿಕ್ಕಮಕ್ಕಳ ಕುತೂಹಲಗಳಿಗೆ ಕೊನೆಯಿಲ್ಲ. ಆದರೆ ಆ ಕುತೂಹಲಗಳ ತಣಿಸುವವರೇ ಇಲ್ಲ! ಹೊಸ ಹೊಸ ವಿಷಯಗಳನ್ನು ತಿಳಿಯುವ ಆಸಕ್ತಿಯಿಂದ ತಾಯಿ ಬಳಿಗೆ ಬಂದು ಪ್ರಶ್ನೆ ಕೇಳಿದರೆ ಅವಳು ಕೋಪಿಸಿಕೊಳ್ಳುತ್ತಾಳೆ; ಗದರುತ್ತಾ ಮಗುವಿಗೆ ಮತ್ತೊಂದು ಪ್ರಶ್ನೆ ಕೇಳಲು ಮನಸ್ಸಾಗುವುದೇ ಇಲ್ಲ. ಅಂಥ ಒಂದು ತಾಯಿಗೆ ಇಲ್ಲಿನ ಮಗು ಕೇಳುತ್ತದೆ;

ಹೊಸತು ವಿಷಯ ತಿಳಿಯಲೆಂದು
ಓಡಿ ನಿನ ಬಳಿಗೆ ಬಂದು
ನೂರು ಪ್ರಶ್ನೆ ಕೇಳಿದಾಗ
ಕೋಪವೇಕೆ ಹೇಳು ಬೇಗ.

ಯಾರು, ಏನು, ಏಕೆ, ಹೇಗೆ-ಎಂದು ಕೇಳಿದಾಗ ಜೋರು ಮಾಡಬೇಡ ಎಂದೂ ಆ ಮಗು ತಾಯಿಯನ್ನು ಬೇಡುತ್ತದೆ. ಅಷ್ಟೇ ಅಲ್ಲ, ನಾನು ಕೇಳುವ ಪ್ರಶ್ನೆಗಳಿಗೆಲ್ಲ ನೀನು ತಾಳ್ಮೆಯಿಂದ ಉತ್ತರ ಕೊಟ್ಟರೆ ಮಾತ್ರ ನಿನ್ನ ಚಿಣ್ಣ ಬೆಳೆಯುತ್ತಾನೆ, ಬೆಳಗುತ್ತಾನೆ ಎಂಬ ಸತ್ಯವನ್ನು ತಿಳಿಸುತ್ತದೆ!

ಆ ಬಗೆಯದೇ ಮತ್ತೊಂದು ಪದ್ಯ ‘ಅಮ್ಮನೊಡನೆ’, ‘ಪುಟ್ಟನ ಪ್ರಶ್ನೆ’ ಎನ್ನುವ ಇಂಥದೇ ಇನ್ನೊಂದು ಪದ್ಯದಲ್ಲಿ ನವುರಾದ ಹಾಸ್ಯವಿದೆ. ತನ್ನನ್ನು ಬಿಟ್ಟು ಫೋಟೋ ತೆಗೆಸಿಕೊಂಡ ತಂದೆ ತಾಯಿಗಳನ್ನು ತರಾಟೆಗೆ ತೆಗೆದುಕೊಳ್ಳುವ ನಮ್ಮ ಪ್ರೀತಿಯನ್ನು ಸುಲಭವಾಗಿ ಸಂಪಾದಿಸಿಕೊಳ್ಳುತ್ತದೆ! ‘ಕಲಿತರೆ ಆಗದೆ ಮನೆಯಲ್ಲೆ? ಎಂಬ ಪದ್ಯ ನಮ್ಮ ಶಿಕ್ಷಣ ವ್ಯವಸ್ಥೆಯ ದುರವಸ್ಥೆಯನ್ನು ಒಂದು ಮಗುವಿನ ಬಾಯಿಂದ ಹೇಳಿಸುತ್ತದೆ. ಎಳೆಯರಿಗೆ ಇಂದಿನ ಶಿಕ್ಷಣ ಹೇಗೆ ಶಿಕ್ಷೆಯಾಗಿದೆ ಎಂಬುದನ್ನು ಈ ಪದ್ಯದಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ.

ಮಕ್ಕಳಲ್ಲಿ ದೇಶಪ್ರೇಮ ಉಕ್ಕಿಸಲೂ ಇಲ್ಲಿನ ಪದ್ಯಗಳು ಪ್ರಯತ್ನಿಸಿವೆ; ಸಮಕಾಲೀನ ಸಮಸ್ಯೆಗಳ ಕಡೆಗೂ ಗಮನ ಹರಿಸಿವೆ. “ಪ್ರೀತಿಯೊಳೆಲ್ಲರ ತಬ್ಬಿಯೆ ಹಿಡಿವ; ನೆಲದಲೆ ಸ್ವರ್ಗವ ಸೃಷ್ಟಿಸಿ ಬಿಡುವ” ಎಂಬ ಸಂದೇಶವನ್ನು ನೀಡುವ ಇಲ್ಲಿನ ಪದ್ಯಗಳು ಹಲವು, ಮಕ್ಕಳಿಗೆ ಪ್ರಿಯವೆನ್ನಿಸುತ್ತವೆ ಎಂದುಕೊಂಡಿದ್ದೇನೆ. “ನಾವು ಭಾರತೀಯರು; ದೇಶ ನಮ್ಮ ದೇವರು” ಮೊದಲಾದ ಮಾತುಗಳು ಮಕ್ಕಳ ಮನಸ್ಸಿನಲ್ಲಿ ಚಿರಗೊಳ್ಳಬೇಕಾದಂಥವು; ಚಿರಗೊಳ್ಳುವಂಥವು, ಈ ಸಾಲುಗಳಿಗಿಂತ ದೊಡ್ಡ ಬೋಧನೆ ಏನಿದೆ?

ಒಂದೆ ಮನೆಯ ಮಂದಿ ನಾವು
ಬಂಧು ಬಳಗ ಎಲ್ಲವು;
ಪ್ರೀತಿ-ಕರುನೆ ಮೀರಿದಂಥ
ಧರ್ಮ ಬೇರೆ ಇಲ್ಲವು.

ಈ ಪದ್ಯದಲ್ಲಿ ಒಂದು ಮಗುವಿನ ಮೂಲಕ ಸೀತಾರಾಮಭಟ್ಟರೇ ಮಾತನಾಡುತ್ತಾರೆ! ಆದರೂ ಅವು ಭಾರ ಎನ್ನಿಸುವುದಿಲ್ಲ. ಮಕ್ಕಳಿಗಾಗಿ ಪದ್ಯ ಬರೆಯುವ ಅನೇಕರಿಗೆ, ತಾವು ಯಾರನ್ನು ಉದ್ದೇಶಿಸಿ ತಮ್ಮ ಪದ್ಯಗಳನ್ನು ಬರೆಯುತ್ತಿದ್ದೇವೆ ಎಂಬುದೇ ತಿಳಿದಿರುವುದಿಲ್ಲ. ಏನು ಬರೆದರೂ, ದೊಡ್ಡಕ್ಷರಗಳಲ್ಲಿ ಅಚ್ಚಾಗಿ ಬಿಟ್ಟರೆ ಮಕ್ಕಳ ಸಾಹಿತ್ಯವಾಗುತ್ತದೆಂದು ಅವರು ಭ್ರಮಿಸುತ್ತಾರೆ . ವ್ಯಾವಹಾರಿಕವಾಗಿಯೂ ಅಂಥವರನ್ನೇ ಪ್ರೋತ್ಸಾಹಿಸುವವರೂ ಇದ್ದಾರೆ. ಸೀತಾರಾಮ ಭಟ್ಟರಿಗೆ ಅವರ ಉದ್ದೇಶ ಸ್ಪಷ್ಟವಾಗಿದೆ. ಖಚಿತವಾಗಿದೆ; ದೀರ್ಘಕಾಲದ ಅನುಭವವಿದೆ. ಅಧ್ಯಾಪಕರಾಗಿ ಬಹಳ ಕಾಲ ಕೆಲಸ ಮಾಡಿರುವುದರಿಂದ, ಮಕ್ಕಳ ಮನಸ್ಸಿನ ಪರಿಚಯವಿದೆ. ಆದ್ದರಿಂದ ಬೋಧನೆಯ ನೆರಳಿನಲ್ಲಿಯೂ ಅವರು ಎಳೆಯರಿಗೆ ಪ್ರಿಯವಾಗುವಂತೆ ಬರೆಯಬಲ್ಲರು ಎಂಬುದಕ್ಕೆ ಈ ಸಂಕಲನ ಸಾಕ್ಷಿಯಾಗಿದೆ. ಇಲ್ಲಿನ ಪದ್ಯಗಳು ನಮ್ಮ ಮಕ್ಕಳನ್ನು ಆಕರ್ಷಿಸಲಿ, ತಮ್ಮ ಮಕ್ಕಳ ಮಾತು ಕೇಳದ ಪೋಷಕರಿಗೆ, ಈ ಪದ್ಯಗಳ ಮೂಲವಾಗಿದೆಯಾದರೂ ಆ ಮಾತುಗಳು ಕೇಳಿಸುವಂತಾಗಲಿ ಎಂದು ಹಾರೈಸುತ್ತೇನೆ.

ಶ್ರೀ ಪಳಕಳ ಸೀತಾರಾಮ ಭಟ್ಟರಿಗೆ ಎಲ್ಲ ಯಶಸ್ಸುಗಳೂ ಇರಲಿ; ಅವರ ಸಾಹಿತ್ಯ ಸೇವೆ ಸತತವಾಗಿ ನಡೆಯಲಿ; ಅದರಿಂದ ಕನ್ನಡ ಮಕ್ಕಳಿಗೆ ಲಾಭವಾಗಲಿ.

ಹಾ. ಮಾ. ನಾಯಕ
‘ಗೋಧೂಳಿ’, ಜಯಲಕ್ಷ್ಮೀಪುರಂ
ಮೈಸೂರು – ೫೭೦೦೧೨