ನಾನೂ ಸೇನೆಗೆ ಸೇರುವೆನು
ಧೈರ್ಯವ ಶೌರ್ಯವ ತೋರುವೆನು

ಹುಡುಗನು ಇಂದಿಗೆ ನಾನಾಗಿದ್ದರು
ನಾಳೆಗೆ ದೊಡ್ಡವನಾಗುವೆನು
ಜಟ್ಟಿಯ ಹಾಗೆಯೆ ಗಟ್ಟಿಗನಾಗುತ
ವಿದ್ಯಾ ವಿನಯದಿ ಬಾಗುವೆನು

ಜನುಮವ ನೀಡಿದ ನಾಡಿನ ಪುಣ್ಯದ
ನೆಲದಲಿ ಭಕ್ತಿಯ ನಿಲಿಸುವೆನು
ಮನದಲಿ ಅನುದಿನ ಜನಗಳ ಬಗೆಗಿನ
ಪ್ರೀತಿಯ ಭಾವನೆ ಬೆಳೆಸುವೆನು

ದೇಹದ ಯೌವನ ಚಿಮ್ಮುವ ಚೇತನ
ದೇಶಕೆ ಅರ್ಪಣೆ ಮಾಡುವೆನು
ನಾಡಿನ ಗಡಿಯನು ಹೆಮ್ಮೆಯ ಗುಡಿಯನು
ಕಾಯಲು ಜೀವವ ನೀಡುವೆನು

* * *