ಅಮ್ಮ ನಿನ್ನ ಬೇಡುತೇನೆ
ಒಂದು ಮಾತು ಆಡುತೇನೆ
ಮನಸು ಕೊಟ್ಟು ಕೇಳು ಬಾ
ಉತ್ತರವನು ಹೇಳು ಬಾ
ಬಿಳಿಯ ಹಾಳೆಯಲ್ಲಿ ಅಣ್ಣ
ಬಳಸಿಕೊಂಡು ಹಲವು ಬಣ್ಣ
ಏನೊ ಏನೊ ಚಿತ್ರ ಮಾಡಿ
ಹಿಗ್ಗುತಿರಲು ನೋಡಿ ನೋಡಿ
ಬಂದು ಅವನ ಕಂಡರೇನು?
ಜೋರು ಮಾಡಲಿಲ್ಲ ನೀನು
“ಎಂಥ ಚಂದ ಚಿತ್ರ!” ಎಂದೆ
ಮೆಚ್ಚಿ ಹೊಗಳಿ ನಗುತ ನಿಂದೆ
ನಾನು ಮಸಿಯ ತುಂಡು ತಂದು
ಗೋಡೆ ಚಿತ್ರ ಬಿಡಿಸಿ ದಂದು
ಅಮ್ಮ ನೀನು ಬಂದು ಬಿಟ್ಟೆ
ಸಿಟ್ಟುಗೊಂಡು ಪೆಟ್ಟು ಕೊಟ್ಟೆ
ಅಣ್ಣ ಕೆಲಸ ಮಾಡಿದಾಗ
ಹೊಗಳಿದವಳು ನೀನು ಈಗ
ಕೋಪಿಸಿದ್ದು ಸರಿಯೆ, ನಾನು
ನಿನ್ನ ಮಗುವೆ ಅಲ್ಲವೇನು?
* * *
Leave A Comment