ಹಿಂದೆ ಒಬ್ಬನು ಅರಸನಿದ್ದನು
ಬುದ್ದಿಯಲಿ ಬಲು ಮೂಢನು
ಯಾರ ಮಾತನು ಕೇಳನಾತನು
ಒಳಿತನೇನನು ಮಾಡನು

ಒಮ್ಮೆ ರಾಜನು ಊರ ನದಿಯನು
ನೋಡಿ ಕೇಳಿದ ಮಂತ್ರಿಗೆ-
“ಭಾರಿ ನೀರಿದು ಭರದಿ ಹರಿವುದು
ಹೋಗಿ ಸೇರುವುದೆಲ್ಲಿಗೆ?”

“ದೂರ ಪೂರ್ವಕೆ ಇರುವ ರಾಜ್ಯಕೆ
ನೀರು ಹರಿವುದು ನಿತ್ಯವು
ಅಲ್ಲಿ ಜನರಿಗೆ ದಿನದ ಬದುಕಿಗೆ
ಇದುವೆ ಆಸರೆ ಸತ್ಯವು”

ಮಂತ್ರಿ ಹೇಳಿದ ಮಾತು ಕೇಳಿದ
ಒಡೆಯ ನುಡಿದನು, “ನೀರಿದು
ನಮ್ಮ ನದಿಯದು ನಮಗೆ ಸಲುವುದು
ಅಲ್ಲ ಪರರದು ಯಾರದೂ”

“ಕಲ್ಲು ಒಟ್ಟಿರಿ, ಕಟ್ಟೆ ಕಟ್ಟಿರಿ
ನೀರು ಇಲ್ಲೇ ನಿಲ್ಲಲಿ
ಇನ್ನು ಮುಂದಕೆ ಊರ ಮಂದಿಗೆ
ಮಾತ್ರ ನೀರಿದು ಸಲ್ಲಲಿ”

ಅರಸ ಅಪ್ಪಣೆ ಕೊಡಲು ಥಟ್ಟನೆ
ಮಂತ್ರಿ ಕೆಲಸ ತೊಡಗಿದ
ಅಣೆಯ ಕಟ್ಟನು ನಿಲಿಸಿ ಬಿಟ್ಟನು
ಮತ್ತೆ ಯೋಚಿಸಿ ನಡುಗಿದ

ನೀರು ಸೇರಿತು ಮೇಲ ಕೇರಿತು
ಎಲ್ಲ ಕಡೆ ನೆರೆ ತುಂಬಿಯು-
ಹಟ್ಟಿ ಕೊಟ್ಟಿಗೆ ಮನೆಯನೊಟ್ಟಿಗೆ
ಬಿಟ್ಟು ಓಡಿತು ಮಂದಿಯು

‘ರಾಜ ಮೂರ್ಖನು, ಮಾತು ಕೇಳನು’
ಮಂತ್ರಿ ಯೋಚನೆ ಮಾಡಿದ
ಜನರ ಕಷ್ಟವ ದೂರ ಮಾಡುವ
ತಂತ್ರವೊಂದನು ಹೂಡಿದ

ಇರುಳು ನಡುವಿನ ಘಂಟೆ ಘಣ ಘಣ
ಆರು ಸಾರಿಯೆ ಮೊಳಗಲು
“ಸೂರ್ಯ ಮೂಡಲೆ ಇಲ್ಲ ಏನೆಲೆ?”
ಎಂದು ಅರಸನು ಕೇಳಲು-

“ಮೂಡಣೂರಿಗೆ ಕೊರತೆ ನೀರಿಗೆ
ಬಂದು ಬಿಟ್ಟಿದೆ ಈ ದಿನ
ಅಲ್ಲಿ ಸೂರ್ಯನ ತಡೆದು ಹಗೆತನ
ತೀರಿಸುತಲಿದೆ ಆ ಜನ”

ಮಂತ್ರಿ ಎಂದುದ ರಾಜ ನಂಬಿದ
ನುಡಿದ, “ಕಟ್ಟವ ಕಡಿಸಿರಿ
ಕೊಟ್ಟು ನೀರನು, ಪಡೆದು ಬೆಳಕನು
ಸೂರ್ಯನನು ಸೆರೆ ಬಿಡಿಸಿರಿ”

ಜನರು ನಡೆದರು ಒಡ್ಡನೊಡೆದರು
ನೀರು ಹರಿಯಿತು ಬಳ ಬಳ
ಇರುಳು ಕಳೆಯಿತು ಬಾನು ಬೆಳಗಿತು
ಸೂರ್ಯ ಹೊಳೆದನು ಥಳ ಥಳ

* * *