ಓ ನನ್ನಮ್ಮಾ ನಾನಿಲ್ಲೆ
ಕಲಿತರೆ ಆಗದೆ ಮನೆಯಲ್ಲೆ?
ಶಾಲೆಗೆ ಹೋಗಲು ದೊಡ್ಡದು ಗಂಟು
ಪುಸ್ತಕ ಬೆನ್ನಲಿ ಹೊರಲಿಕೆ ಉಂಟು
ಬೆಳಗೂ ಬೈಗೂ ಆ ಹೊರೆ ಹೊತ್ತು
ನೋಯುವುದಮ್ಮಾ ಬೆನ್ನೂ ಕತ್ತೂ
ಶಾಲೆಗೆ ಹೋದರೆ ಕೋಣೆಯ ಒಳಗೆ
ಕೂಡಿಸಿ ಬಿಡುವರು ಸಂಜೆಯ ವರೆಗೆ
ಓದೂ ಬರೆಹವು ಗಣಿತವು ಮತ್ತು
ಪ್ರಶ್ನೆಯು – ಉತ್ತರ ಎರಡು ಹೊತ್ತು
ತಂಗಾಳಿಯ ಉಸಿರಾಡಲು ಇಲ್ಲ
ಬಣ್ಣದ ಹೂಗಳ ನೋಡಲು ಇಲ್ಲ
ಹಕ್ಕಿಯ ಹಾಡನು ಕೇಳಲು ಇಲ್ಲ
ಚಿಟ್ಟೆಯ ಜೊತೆ ನಲಿದಾಡಲು ಇಲ್ಲ
ಕಣ್ಣಲಿ ಕಾಣುತ ಕೈಯಲಿ ಮುಟ್ಟಿ
ಕೆಲಸದ ಅನುಭವ ಪಡೆದುದೆ ಗಟ್ಟಿ
ಅಂಥದು ಎಂದಿಗೆ ಬರುವುದೊ ಆಗ
ಶಾಲೆಗೆ ಖುಷಿಯಲೆ ಹೋಗುವೆ ಬೇಗ
* * *
Leave A Comment