ಗಾಳಿಯಂತೆ ಬೆಳಕಿನಂತೆ
ನೀರು ಮುಖ್ಯ ಬಾಳಿಗೆ
ನೀರು ಇಲ್ಲದೆಡೆಯೊಳಿಲ್ಲ
ಜೀವಿಗಳಿಗೆ ಏಳಿಗೆ
ಗಾಳಿಯಂತೆ ಕೆಡುವ ಚಿಂತೆ
ಕುಡಿವ ನಮ್ಮ ನೀರಿಗು
ನೀರು ಕೆಡಲು ನಾವು ಬಿಡಲು
ಸುಖವು ಇರದು ಯಾರಿಗೂ
ಊರ ಎಲ್ಲ ಕೊಳಕು ಮೆಲ್ಲ
ಬಂದು ನೀರಿಗಿಳಿವುದು
ವಿಷವು ಹಲವು, ಮೂತ್ರ-ಮಲವು
ಅದನು ಸೇರಿ ಕೊಳುವುದು
ನೀರ ಕೊಳಕು ನುಸಿಗು ಸೊಣಕು
ಜನುಮ ತಾಣ ತಿಳಿವುದು
ಅದುವೆ ಕಠಿಣ ರೋಗ ರುಜಿನ
ಹರಡಿ ನಮ್ಮ ಕೊಲುವುದು
ನೀರು ಹೀಗೆ ಕೆಡದ ಹಾಗೆ
ನೋಡಬೇಕು ನಿತ್ಯವು
“ರೋಗ ರಹಿತ ಬದುಕಿಗೆ ಹಿತ
ಶುದ್ಧ ನೀರು”- ಸತ್ಯವು
* * *
Leave A Comment