ಸಾವಯವ ತೋಟಕ್ಕೆ  ಜೀವವೈವಿಧ್ಯದ ಮೆರುಗು…!

ಫಲ್ಗುಣಿಯ ಗೋಪಾಲ್ ಮೂರು ವರ್ಷದ ಹಿಂದೆ ಆರಂಭಿಸಿದ್ದು ಸಾವಯವ ಕೃಷಿಯನ್ನು. ಇವತ್ತು ಅವರ ತೋಟದಲ್ಲಿ ಜೀವ ವೈವಿಧ್ಯವೇ ಮೇಳೈಸಿದೆ. ಈ ನಡುವಿನ ಪಯಣದಲ್ಲಿ ಅವರು ಕಲಿತಿದ್ದು ಅಪಾರ. ಆ ಅನುಭವವನ್ನು ಈಗ ತಮ್ಮ ತೋಟಕ್ಕೆ ಬರುವ ಪ್ರವಾಸಿಗರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ತೋಟ ಪ್ರವೇಶಿಸಿದರೆ ಕಾನನ ಹೊಕ್ಕಿದ ಅನುಭವ. ಒಂದೆಡೆ ಅಡಕೆ, ಕಾಫಿ, ಮೆಣಸು ಮಿಶ್ರ ಬೆಳೆಗಳ ಮೇಳ. ಇನ್ನೊಂದೆಡೆ ಎರೆಗೊಬ್ಬರ, ಸಾವಯವ ಯೂರಿಯಾ ಘಟಕಗಳು, ಜೀವಾಮೃತ ತಯಾರಿಕೆ, ಅಜೊಲ ತೊಟ್ಟಿಯ ಸಾಲು. ಎಡಗಡೆ ಗೋಡೆಯ ಮಗ್ಗುಲಲ್ಲೇ ತರಕಾರಿ ತೋಟ. ತೋಟದ ಬೇಲಿಗಳಲ್ಲಿ ವೈವಿಧ್ಯಮಯ ಬಿದಿರು, ಹೊನ್ನೆ, ಮತ್ತಿ, ಸಾಗುವಾನಿ, ಹೆಬ್ಬೇವಿನಂತಹ ಕಾಡು ಮರಗಳು….

ಇದು ಮೂಡಿಗೆರೆ ತಾಲ್ಲೂಕಿನ ಫಲ್ಗುಣಿಯ ಕೃಷಿಕ ಗೋಪಾಲ್ ಅವರ ತೋಟ. ಒಟ್ಟು ಏಳು ಎಕರೆ ಮೂವತ್ತು ಗುಂಟೆ ವಿಸ್ತೀರ್ಣ. ಅದರಲ್ಲಿ ಒಂದೂಕಾಲು ಎಕರೆಯಲ್ಲಿ ಭತ್ತ, ಒಂದು ಎಕರೆ ಹತ್ತು ಗುಂಟೆಯಲ್ಲಿ ಅಡಿಕೆ, ಬಾಳೆ ಮಿಶ್ರ ಕೃಷಿ, ಆರು ಎಕರೆಯಲ್ಲಿ ಕಾಫಿ ಮತ್ತು ಕಾಳು ಮೆಣಸು ಮಿಶ್ರ ಕೃಷಿ. ತೋಟದ ಸುತ್ತಾ ಕಾಡು ಮರಗಳು, ನಡು ನಡುವೆ ಜಾಯಿ­ಕಾಯಿ, ಕಾಳುಮೆಣಸು, ಲವಂಗ, ದಾಲ್ಚಿನಿ, ಏಲಕ್ಕಿ.ನಾಟಿ ಶುಂಠಿ, ಅರಿಶಿನದಂಥ ಸಂಬಾರ ಬೆಳೆಗಳು. ಲೆಕ್ಕಕ್ಕೆ ಸಿಗದ ಹಣ್ಣಿನ ಮರಗಳು, ಹೆಸರೇ ಗೊತ್ತಿಲ್ಲದ ಔಷಧ ಸಸ್ಯಗಳು. ಹನ್ನೆರಡು ವರ್ಷಗಳಿಂದ ರಾಸಾಯನಿಕ ಕೃಷಿ ಅನುಸರಣೆ. ಕಳೆದ ಮೂರು ವರ್ಷಗಳಿಂದ ಹಂತ ಹಂತವಾಗಿ ತೋಟವನ್ನು ಸಾವಯವ ಕೃಷಿಗೆ ಅಳವಡಿಸುತ್ತಿದ್ದಾರೆ.

ಸಾವಯವ ಗೊಬ್ಬರವೇ ತೋಟದ ಶಕ್ತಿ :

2007ರಲ್ಲಿ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ ಫಲ್ಗುಣಿ ಗ್ರಾಮವನ್ನು ಸಾವಯವ ಗ್ರಾಮ ಯೋಜನೆಗೆ ಆಯ್ಕೆ ಮಾಡಿತು. ಗೋಪಾಲ್ ಈ ಯೋಜನೆಯ ಫಲಾನುಭವಿಯಾದರು. ಹಸಿರೆಲೆಗೊಬ್ಬರ ತಯಾರಿಕೆ, ಬಳಕೆ, ಜೀವಾಮೃತದಂಥ ಸಸ್ಯಜನ್ಯ ಕೀಟನಾಶದ ಬಳಕೆ, ಅಜೋಸ್ಪಿರಿಲಂ, ಟ್ರೈಕೋಡರ್ಮಾದಂಥ ಜೈವಿಕ ಗೊಬ್ಬರಗಳ ಬಳಕೆ ಕುರಿತು ತರಬೇತಿ ಪಡೆದರು. ಪ್ರಗತಿಪರ ಕೃಷಿಕರ ತೋಟಗಳ ಪ್ರವಾಸ ಮಾಡಿದರು. ತರಬೇತಿ ಮತ್ತು ಪ್ರವಾಸ ಗೋಪಾಲ್‌ಗೆ ಹೊಸ ದಿಕ್ಕು ಪರಿಚಯಿಸಿತು. ನಂತರದಲ್ಲೇ ತಮ್ಮ ಜಮೀನನ್ನು ಹಂತ ಹಂತವಾಗಿ ಸಾವಯವ ಕೃಷಿಗೆ ಪರಿವರ್ತಿಸಲು ಸಂಕಲ್ಪ ಮಾಡಿದರು.

ಆರಂಭದಲ್ಲಿ ಸಾವಯವ ಕೃಷಿಗೆ ಬೇಕಾದ ಹಸಿರೆಲೆ ಗೊಬ್ಬರ, ಎರೆಗೊಬ್ಬರ, ಚಿಗುರುವ ಕಡ್ಡಿಯ ಕಾಂಪೋಸ್ಟ್ ಗೊಬ್ಬರದ ಘಟಕಗಳು ಸಿದ್ಧವಾದವು. ತೋಟದ ತರಗೆಲೆ, ಆಕಳಿನ ಸಗಣಿ, ಇತರೆ ಜೈವಿಕ ತ್ಯಾಜ್ಯಗಳೇ ಗೊಬ್ಬರಕ್ಕೆ ಒಳಸುರಿಗಳಾಯ್ತು. ನಯಾಪೈಸೆ ಖರ್ಚಿಲ್ಲದೇ ಮೂರು ಮೂರು ತಿಂಗಳಿಗೆ ಎರಡು-ಮೂರು ಟ್ರಾಕ್ಟರ್ ಗೊಬ್ಬರ ಲಭ್ಯವಾಯಿತು. ಮೊದಲ ವರ್ಷದಲ್ಲೇ ಒಂದು ಎಕರೆ ಕಾಫಿ, ಒಂದು ಎಕರೆ ಗದ್ದೆ, ಒಂದೂವರೆ ಎಕರೆ ಕಾಳು ಮೆಣಸನ್ನು ಸಾವಯವ ಕೃಷಿ ಪದ್ಧತಿಗೆ ಅಳವಡಿಸಿದರು. ಒಂದೂವರೆ ಟನ್ ಸಾವಯವ ಕಾಫಿ (ರೋಬಾಸ್ಟಾ) ಉತ್ಪಾದನೆ ಯಾಯಿತು. 200 ಕೆ.ಜಿ ಅರೇಬಿಕಾ, ಒಂದೂವರೆ ಎಕರೆಯಲ್ಲಿ 600 ಕೆ.ಜಿ ಮೆಣಸು ಇಳುವರಿ ಪಡೆದಿದ್ದಾರೆ.

ಮೊದಲ ವರ್ಷದ ಗೆಲುವು ಎರಡನೇ ವರ್ಷದಿಂದ ಸಾವಯವ ಕೃಷಿ ವಿಸ್ತರಣೆಗೆ ದಾರಿ ತೋರಿತು. ಪರಿಣಾಮ ಉಳಿದ ಬೆಳೆಗಳಿಗೂ ರಸಗೊಬ್ಬರದ ಜೊತೆ ಸಾವಯವ ಗೊಬ್ಬರ ಮಿಶ್ರ ಮಾಡಿ ಕೊಟ್ಟರು. ನಿರೀಕ್ಷೆಗೂ ಮೀರಿದ ಫಲಿತಾಂಶ ಬಂತು. ಗೋಪಾಲ್ ಖುಷಿಯಾದರು ಭವಿಷ್ಯದಲ್ಲಿ ರಸಗೊಬ್ಬರಕ್ಕೆ ಫುಲ್‌ಸ್ಟಾಪ್ ಹಾಕಲು ನಿರ್ಧರಿಸಿದರು.

ಮೂರು ವರ್ಷಗಳ  ನಂತರ :

ಸಾವಯವ ಕೃಷಿ ಪದ್ಧತಿ ಅನುಷ್ಠಾನಗೊಂಡು ಮೂರು ವರ್ಷಗಳು ಕಳೆದಿವೆ. ಈಗ ಗೋಪಾಲ್ ಅವರು ವರ್ಷದಲ್ಲಿ ಸರಾಸರಿ ಎರಡೂವರೆ ಟನ್ ಹಸಿರೆಲೆಗೊಬ್ಬರ, 2000 ಲೀಟರ್ ಜೀವಾಮೃತ ಉತ್ಪಾದಿಸುತ್ತಿದ್ದಾರೆ. (ಎರಡೂವರೆ ವರ್ಷದಿಂದ 5 ಟನ್ ಗೊಬ್ಬರ ತಯಾರಿಸಿದ್ದಾರೆ). ಮೊದಲು ವಾರ್ಷಿಕ ಸರಾಸರಿ 80 ಚೀಲ (50 ಕೆ.ಜಿ ಪ್ರಮಾಣ) ರಸಗೊಬ್ಬರ, ಇದಕ್ಕೆ ಮಿಶ್ರ ಮಾಡಲು 2 ಟನ್ ಸಾವಯವ ಗೊಬ್ಬರ ಖರೀದಿಸುತ್ತಿದ್ದರು. ಸಾವಯವ ಗೊಬ್ಬರ ಉತ್ಪಾದನೆಯ ನಂತರ ರಸಗೊಬ್ಬರ ಪ್ರಮಾಣ 55 ಚೀಲಕ್ಕೆ ಇಳಿದಿದೆ. ಸಾವಯವ ಗೊಬ್ಬರ ಕೊಳ್ಳುವುದಿಲ್ಲ. ಶೇ.60ರಷ್ಟು ಹಣ ಉಳಿತಾಯವಾಗಿದೆ.

ಗೊಬ್ಬರದ ಜೊತಗೆ ಹೆಚ್ಚುವರಿ ಪೋಷಕಾಂಶವಾಗಿ ಬೇವಿನ ಹಿಂಡಿ, ವಿಎಎಂ, ಅಜೋಲಾ, ಸುಣ್ಣ, ಸಾವಯವ ಯೂರಿಯಾ.. ಹೀಗೆ ಮಣ್ಣಿನ ಸಾವಯವ ಶಕ್ತಿ ಹೆಚ್ಚಿಸಲು ಸಾಧ್ಯತೆ ಇರುವ ಎಲ್ಲ ಜೈವಿಕ ಪೋಷಕಾಂಶಗಳನ್ನು ನೀಡಿದ್ದಾರೆ.

ಮುಂಗಾರಿಗೆ ಮುನ್ನ ಹಾಗೂ ಮೆಣಸಿನ ಬೆಳೆ ಕಟಾವು ಮಾಡಿದ ನಂತರ ಪ್ರತಿ ಕಾಳು ಮೆಣಸಿನ ಬಳ್ಳಿಗೆ ಸಾವಯವ ಗೊಬ್ಬರ ಕೊಡುತ್ತೇವೆ. ಅದೇ ಸಮಯದಲ್ಲಿ ಎರಡು ಲೀಟರ್ ಜೀವಾಮೃತ ನೀಡುತ್ತೇವೆ. ಇದರಿಂದ ಬಳ್ಳಿಗಳ ಬೆಳವಣಿಗೆ ಉತ್ತಮವಾಗಿದ್ದು, ಸೊರಗು ರೋಗ ಕಡಿಮೆಯಾಗಿದೆ ಎನ್ನುತ್ತಾರೆ ಗೋಪಾಲ್.

ಗೋಪಾಲ್ ಅವರು ಆರಂಭದಲ್ಲಿ ಕೇವಲ ಸಾವಯವ ಗೊಬ್ಬರ ಕೊಡುತ್ತಿದ್ದರು. ಗೊಬ್ಬರದ ಜೊತೆ ಟ್ರೈಕೋ­ಡರ್ಮಾ, ಜೀವಾಮೃತ ಕೊಡುವುದಕ್ಕೆ ಸಲಹೆ ನೀಡಿದೆವು. ಅವೆಲ್ಲ ಕೊಟ್ಟ ನಂತರ ತೋಟದ ಮಣ್ಣಿನಲ್ಲಿ ಸಾವಯವ ಅಂಶ ವೃದ್ಧಿಯಾಗಿದೆ. ಮಣ್ಣು ಹುಳಿ ಅಂಶ ಕಳೆದುಕೊಂಡು  ಪೋಷಕಾಂಶ ಭರಿತವಾಗಿದೆ ಎನ್ನುತ್ತಾರೆ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆಯ ಯೋಜನಾ ನಿರ್ದೇಶಕ ಕೆ.ರವಿ.

ಜೀವ ವೈವಿಧ್ಯ ತೋಟ:

ಗೋಪಾಲ್ ಜೊತೆಯಲ್ಲಿ ತೋಟ ಸುತ್ತು ಹಾಕಲು ಹೊರಟರೆ 50ಕ್ಕೂ ಹೆಚ್ಚು ಕಾಡುಗಿಡಗಳನ್ನು ಪರಿಚಯಿಸುತ್ತಾರೆ. ಇಪ್ಪತ್ತೈದರಿಂದ ಮೂವತ್ತು ವಿಧದ ಹಣ್ಣಿನ ಗಿಡಗಳನ್ನು ತೋರಿಸುತ್ತಾರೆ. ಇವೆಲ್ಲ ಕಾಫಿ ಜೊತೆಗೆ ಹೆಚ್ಚುವರಿ ಆದಾಯ ನೀಡುವ ಬೆಳೆಗಳು. ಅಷ್ಟೇ ಅಲ್ಲ. ಈ ವೈವಿಧ್ಯವಿರುವುದರಿಂದಲೇ ನಮ್ಮ ತೋಟಕ್ಕೆ ಕೀಟ ಬಾಧೆ ಕಡಿಮೆ ಎನ್ನುತ್ತಾರೆ ಗೋಪಾಲ್.

ಸಾವಯವ ಕೃಷಿ ಮತ್ತು ಸಮಗ್ರ ಕೃಷಿ ಪದ್ಧತಿ ಬಗ್ಗೆ ತಿಳಿದ ಮೇಲೆಯೇ ನಮ್ಮ ತೋಟದ ಮರಗಳನ್ನು ಗುರುತಿಸಲು ಆರಂಭಿಸಿದೆ. ಅಲ್ಲಿಯವರೆವಿಗೂ ಕೃಷಿ ಮತ್ತು ಮರಗಳ ನಡುವಿನ ಸಂಬಂಧ ಅಷ್ಟಾಗಿ ತಿಳಿದಿರಲಿಲ್ಲ ಎನ್ನುವ ಗೋಪಾಲ್, ಹವ್ಯಾಸದ ನೆಪದಲ್ಲಿ ಶಿರಾ ಬಿದಿರು, ಬಣ್ಣದ ಬಿದಿರು, ಬರ್ಮಾ ಬಿದಿರು, ಎಚ್- ಬಿದಿರು, ಕರಿ ಬಿದಿರಿನಂತಹ ಐದು ತರಹದ ಬಿದಿರಿನ ತಳಿಗಳನ್ನು ಬೆಳೆಸಿದ್ದಾರೆ.

ಸಮೃದ್ಧ ಕೈತೋಟ, ಪೌಷ್ಟಿಕ ತರಕಾರಿ:

ತೋಟದ ನಡುವೆಯೇ ವಾಸವಿರುವ ಗೋಪಾಲ್ ಪುಟ್ಟ ಜಾಗದಲ್ಲಿ ಕೈತೋಟ ಮಾಡಿಕೊಂಡಿದ್ದಾರೆ. ಪತ್ನಿ ಶೀಲ, ಪುತ್ರ ಸಚಿನ್ ಈ ತೋಟದ ಉಸ್ತುವಾರಿ ನೋಡಿಕೊಳ್ಳುತ್ತಾರೆ.

ಮೂರು ವರ್ಷದ ಹಿಂದೆ ವಾರಕ್ಕೆ ಕನಿಷ್ಠ 200 ರೂಪಾಯಿ ತರಕಾರಿ ಕೊಳ್ಳುತ್ತಿದ್ದರು. ಸಾವಯವ ಗ್ರಾಮ ಯೋಜನೆ ಅನುಷ್ಠಾನಗೊಂಡ ಮೇಲೆ ಗೋಪಾಲ್ ಮನೆಯಲ್ಲಿ ಸಮೃದ್ಧ ಕೈತೋಟ ರೂಪುಗೊಂಡಿದೆ. ಕಂಪೌಂಡ್ ಪಕ್ಕದಲ್ಲಿ ಹತ್ತು ಅಡಿ ಉದ್ದ ಎರಡು ಅಡಿ ವಿಸ್ತೀರ್ಣದಲ್ಲಿ ಅಲಸಂದೆ, ಬದನೆ, ಹಸಿಮೆಣಸು, ಬೀನ್ಸ್… ಹೀಗೆ ಹದಿಮೂರು ವಿಧದ ತರಕಾರಿ ಬೆಳೆಯುತ್ತಿದ್ದಾರೆ. ಅಜೋಲಾ ಘಟಕಕ್ಕೆ ನೆರಳು ಮಾಡಿರುವ ಚಪ್ಪರದಲ್ಲಿ ಬಸಳೆ, ಚಪ್ಪರದ ಅವರೆಯಿದೆ. ಈ ಭಾಗದ ವಿಶೇಷ ಬದನೆ ತಳಿ ಮೊಳ ಬದನೆಯಿದೆ.

ತರಕಾರಿ ಬೆಳೆಗೆ ಎರೆಗೊಬ್ಬರ, ಹಸಿರೆಲೆ ಗೊಬ್ಬರ ಕೊಡುವುದರಿಂದ ರುಚಿ ಹೆಚ್ಚು. ಪೌಷ್ಠಿಕಾಂಶಯುಕ್ತವಾಗಿರುತ್ತವೆ. ಗಿಡಗಳ ಆರೋಗ್ಯ ವೃದ್ಧಿಗಾಗಿ ಜೀವಾಮೃತ ಕೊಡುತ್ತೇವೆ. ಮಣ್ಣು, ಗಿಡ ಎರಡೂ ಆರೋಗ್ಯಪೂರ್ಣವಾಗಿರುವುದರಿಂದ ಸಮೃದ್ಧ ತರಕಾರಿ ಲಭ್ಯವಾಗುತ್ತಿವೆ. ಪೇಟೆ ತರಕಾರಿ ತಿನ್ನುತ್ತಿದ್ದಾಗ ಗ್ಯಾಸ್ಟ್ರಿಕ್‌ನಂಥ ರೋಗಗಳು ಬಾಧಿಸುತ್ತಿತ್ತು. ಈಗ ಅಂಥ ತೊಂದರೆಗಳಾವುವೂ ಕಾಣಿಸಿಕೊಂಡಿಲ್ಲ ಎನ್ನುತ್ತಾರೆ ಕೈ ತೋಟದ ಉಸ್ತುವಾರಿ ನೋಡಿಕೊಳ್ಳುವ ಗೋಪಾಲ್ ಪತ್ನಿ ಶೀಲಾ.

ಅಪ್ಪಟ ಸಾವಯವ ಕೃಷಿಯಲ್ಲೇ ಕೈತೋಟ ಬೆಳೆಸಿರುವ ಗೋಪಾಲ್ ಅವರಿಗೆ ತರಕಾರಿ ಕೃಷಿಗಾಗಿ ನಯಾಪೈಸೆ ಖರ್ಚು ಮಾಡಿಲ್ಲ. ಬದಲಾಗಿ ತಮ್ಮಲ್ಲಿ ದೊರೆಯುವ ತರಕಾರಿ ಬೀಜಗಳನ್ನು ಮಾರಾಟ ಮಾಡಿ ಸಲ್ಪ ಹಣ ಸಂಪಾದಿಸಿದ್ದಾರೆ. ಮಂಗಳೂರು ಸೌತೆಯಂಥ ದಂಡಿಯಾಗಿ ಬೆಳೆಯುವ ತರಕಾರಿಗಳನ್ನು ನೆಂಟರಿಷ್ಟರಿಗೆ, ಅಕ್ಕಪಕ್ಕದವರಿಗೆ ಉಚಿತವಾಗಿ ಹಂಚಿ ಖುಷಿಪಟ್ಟಿದ್ದಾರೆ. ಕೈತೊಟ ಮಾಡಿಕೊಂಡ ಮೇಲೆ ಪೇಟೆ ಕಡೆ ತರಕಾರಿ ಕೊಳ್ಳಲು ತಲೆ ಹಾಕಿಲ್ಲ. ಕಳೆದ ಎರಡು ವರ್ಷಗಳಿಂದ ನಮ್ ತರಕಾರಿ ಬಿಲ್ ಶೂನ್ಯ ಎಂದು ಹೇಳುವಾಗ ಗೋಪಾಲ್ ಮುಖದಲ್ಲಿ ಹೆಮ್ಮೆಯ ಕಳೆ ಮೂಡುತ್ತವೆ.

ಸಮಾಧಾನದ ಆದಾಯ:

ಸಾವಯವ ಕೃಷಿ ಉತ್ಪಾದನೆ ಬಗ್ಗೆ ಗೋಪಾಲ್ ಅವರೆಂದೂ ಉತ್ಪ್ರೇಕ್ಷೆಯಿಂದ ಮಾತನಾಡುವುದಿಲ್ಲ. ಅಂಥದ್ದೇನು ಬದಲಾವಣೆ ಕಂಡಿಲ್ಲ. ಆದರೆ ದುಬಾರಿ ಒಳಸುರಿಗೆ ಕಡಿವಾಣ ಬಿದ್ದಿದೆ ಎಂದು ಹೇಳುವುದನ್ನು ಮರೆಯುವುದಿಲ್ಲ.  ಏಕೆಂದರೆ ಸಾವಯವ ಕೃಷಿ ಪರಿವರ್ತನಾ ಅವಧಿಯಲ್ಲಿ ಒಂದೂವರೆ ಎಕರೆಯಿಂದ ಒಂದೂವರೆ ಟನ್ ಸಾವಯವ ಕಾಫಿ (ರೋಬಾಸ್ಟಾ ತಳಿ) ಉತ್ಪಾದಿಸಿದ್ದಾರೆ. 200 ಕೆ.ಜಿ ಅರೇಬಿಕಾ, ಒಂದೂವರೆ ಎಕರೆಯಲ್ಲಿ 600 ಕೆ.ಜಿ ಮೆಣಸು ಇಳುವರಿ ಪಡೆದಿದ್ದಾರೆ. ಇದಕ್ಕಿಂತ ಸಾಧನೆ ಇನ್ನೇನು ಬೇಕು ಹೇಳಿ.

ಸಾವಯವ ಕೃಷಿಯಲ್ಲಿ  ಆರಂಭದಲ್ಲಿ ಕೆಲಸ ಹೆಚ್ಚು. ಇಳುವರಿ ಕಡಿಮೆ. ಪರಿವರ್ತನಾ ಸಮಯದಲ್ಲಿ ಸ್ವಲ್ಪ ಶ್ರಮ ಎನಿಸುತ್ತದೆ. ಒಂದು ಸಾರಿ ಭೂಮಿ ಹದಗೊಂಡು, ಸಾವಯವಕ್ಕೆ ಒಗ್ಗಿಕೊಂಡರೆ ಕೆಲಸ ಕಡಿಮೆಯಾಗುತ್ತದೆ. ಇಳುವರಿ ಹೆಚುತ್ತದೆ. ಇಷ್ಟೆಲ್ಲಾ ಅರಿವಾಗಲು ನನಗೆ ಮೂರು ವರ್ಷಗಳು ಬೇಕಾಯಿತು– ಇದು ಗೋಪಾಲ್ ಅವರ ಪ್ರಾಮಾಣಿಕ ಅಭಿಪ್ರಾಯ.

ಹೆಚ್ಚು ಇಳುವರಿಗೆ ರಾಸಾಯನಿಕ ಗೊಬ್ಬರಗಳು ಅನಿವಾರ್ಯ ಎನ್ನುವ ಮಾತು ಸುಳ್ಳು. ಮಣ್ಣು- ನೀರು ಸಮರ್ಪಕವಾಗಿದ್ದರೆ ಉತ್ತಮ ಇಳುವರಿ ಸಾಧ್ಯ. ಹಾಗೆಯೇ ತೋಟದಲ್ಲಿ ಮಿಶ್ರಬೆಳೆ ಇದ್ದರೆ ಕೀಟ- ರೋಗ ಬಾಧೆ ಕಡಿಮೆಯಾಗುತ್ತದೆ. ಅದಕ್ಕೆ ನನ್ನ ತೋಟವೇ ಸಾಕ್ಷಿ ಎನ್ನುತ್ತಾರೆ ಅವರು.

ಗೋಪಾಲ್ ತೋಟ ಈಗ ಸಮೃದ್ಧವಾಗಿದೆ. ತೋಟ ನೋಡಲು ರೈತರು ಪ್ರವಾಸ ಬರುತ್ತಿದ್ದಾರೆ. ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯುತ್ತಾರೆ. ಚರ್ಚೆ ಮಾಡುತ್ತಾರೆ. ಮೊದಲು ಸರ್ಕಾರಿ ಇಲಾಖೆಗಳು ಫಲ್ಗುಣಿಯಿಂದ ದೂರ ಉಳಿದಿದ್ದವು. ಕಳೆದ ಮೂರು ವರ್ಷದ ಪ್ರಗತಿ, ನಮ್ಮೂರಿನ ಬೆಳವಣಿಗೆ ಹಲವು ಇಲಾಖೆಗಳ ಕಣ್ಣು ತೆರೆಸಿದೆ. ಇಲಾಖೆಯವರು ನಮ್ಮನ್ನು ಹುಡುಕಿ ಬರುತ್ತಾರೆ. ಹಲವು ತರಬೇತಿಗಳಿಗಾಗಿ ಆಹ್ವಾನಿಸಿದ್ದಾರೆ. ನಾನು ನನ್ನ ಮಗ ತರಬೇತಿ ಪಡೆದಿದ್ದೇವೆ ಎಂದು ಹೇಳುತ್ತಾ ಜಗತ್ತನ್ನೇ ಗೆದ್ದಷ್ಟು ಖುಷಿ ಪಡುತ್ತಾರೆ ಗೋಪಾಲ್.

ಕಾಡು ಮರಗಳ ವೈವಿಧ್ಯ

ಹೊನ್ನೆ, ಅತ್ತಿ, ನೆಲ್ಲಿ, ಮಾಕಳಿ, ಗಂಡುಗುಳಿ, ಹೆಣ್ಣು ಚೊಟ್ಟೆ, ಗೋಣಿಮರ, ಗಂಗೆ ಮರ, ಮದ್ರಾಸ್ ಮರ, ಮೇ ಫ್ಲವರ್, ಏವಿನ ಮರ, ಹುಲ್ಲಂತಿ ಮರ, ನಂದಿ, ಬೀಟೆ, ಸಾಗುವಾಣಿ, ನೇರಳೆ, ಸಿಲ್ವರ್ ಓಕ್, ಹುಣಸೆ, ಹಿಪ್ಪೆ, ಮಹಾಗನಿ, ಅಕೇಶಿಯಾ, ಹೆಬ್ಬಲಸು, ಹಾಲುವಾಣ, ಗಂಧದ ಮರ, ಮ್ಯಾಂಜಿಯಂ, ಜುಮ್ಮನ ಮರ, ಮಡ್ಲೆ ಮರ, ಬೂರಗದ ಮರ, ಗುಗ್ಗಳ ಮರ, ಅಂಟುವಾಳ ಕಾಯಿ, ಕಕ್ಕೆ ಮರ, ಕಳ್ಳುವಾಣಿ ಮರ, ಕಹಿಕಲ್ ಮರ(ಅವಾಂತಿ ಮರ), ಚುಂಗಿನ ಮರ, ಕೋಳಿ ಜುಟ್ಟಿನ ಮರ, ಹೂವಿನ ಮರ.

ಪುಟ್ಟ ಕೈತೋಟದಲ್ಲಿ ತರಕಾರಿ ಮೇಳ

ಹುರುಳಿ ಕಾಯಿ, ನವಿಲು ಕೋಸು, ಬದನೆ – ಮೂರು ತಳಿ (ಮೊಳ ಬದನೆ ವಿಶೇಷ), ಮೂಲಂಗಿ, ಸೊಪ್ಪು (ನಾಲ್ಕು ತರಹದ್ದು) ಹಾಗಲ, ಸೌತೆ, ಮಂಗಳೂರು ಸೌತೆ, ತೊಂಡೆಕಾಯಿ, ಬಳ್ಳಿ ಬೀನ್ಸ್, ಬಸಳೆ, ಅಲಸಂದೆ, ದೊಡ್ಡ ಮೆಣಸಿನ ಕಾಯಿ. ಬಜ್ಜಿ ಮೆಣಸು, ಜಾಯಿಕಾಯಿ, ಟೊಮೆಟೊ, ಜವಳಿಕಾಯಿ., ಕಬ್ಬು, ಕೆಸುವಿನ ಗೆಡ್ಡೆ, ಗೆಣಸು, ಮರಗೆಣಸು.

ದೇಸಿ ಮಳೆ ಮಾಪನ,

ಹತ್ತಾರು ವರ್ಷದ ದಾಖಲೆ

ಕಾನೂನು ಪದವಿಧರ ಗೋಪಾಲ್ ಅವರಿಗೆ ಪ್ರತಿ ವರ್ಷ ಮಲೆನಾಡಿನಲ್ಲಿ ಸುರಿಯುವ ಮಳೆ ನೀರು ಪ್ರಮಾಣವನ್ನು ದಾಖಲಿಸುವ ಖಯಾಲಿ. ಇದಕ್ಕಾಗಿ ದೇಸಿ ಮಳೆ ಮಾಪನವನ್ನು ಸಿದ್ಧಮಾಡಿಕೊಂಡಿದ್ದಾರೆ. ಒಂದು ಬಿಸ್ಲೆರಿ ಶೀಶೆ, ಅದಕ್ಕೊಂದು ಆಲಿಕೆ(ಫೆನಲ್) ಜೋಡಿಸಿ ಮನೆ ಮುಂದಿನ ಕಣದ ಬದಿಯಲ್ಲಿಡುತ್ತಾರೆ. ಶೀಶೆಯಲ್ಲಿ ಸಂಗ್ರಹ ವಾಗುವ ನೀರನ್ನು ಅಳತೆ ಮಾಡಿ ಈ ವರ್ಷ ಇಷ್ಟೇ ಮಳೆ ಬಂದಿದೆ ಎಂದು ದಾಖಲಿಸುತ್ತಾರೆ. ಕೃಷಿ ಚಟುವಟಿಕೆಗಳಿಗೆ ಈ ಮಳೆ ಪ್ರಮಾಣ ಸಹಾಯವಾಗುತ್ತದೆ ಎನ್ನುವ ಗೋಪಾಲ್ ಅವರ ಕಿಸೆಯಲ್ಲಿ ಪುಟ್ಟದೊಂದು ನೋಟ್ ಪುಸ್ತಕವಿದೆ. ಆ ಪುಸ್ತಕದಲ್ಲಿ ಹತ್ತಾರು ವರ್ಷದ ಮಳೆ ಪ್ರಮಾಣವನ್ನು ದಾಖಲಿಸಿಟ್ಟಿದ್ದಾರೆ. ಪುಸ್ತಕ ತೆರೆದರೆ ಅತಿ ಹೆಚ್ಚು ಮಳೆ ಬಿದ್ದ ವರ್ಷ, ಕಡಿಮೆ ಮಳೆ ಬಿದ್ದ ವರ್ಷಗಳ ಮಾಹಿತಿ ದೊರೆಯುತ್ತದೆ!

ಸಂಪಾದಕರು : ಗಾಣಧಾಳು ಶ್ರೀಕಂಠ