ಕಣದ ಕಳೆ ತೆಗೆದ ವೆಲ್‌ವೆಟ್ ಬೀನ್ಸ್ ಬಳ್ಳಿ

ವೆಲ್‌ವೆಟ್ ಬೀನ್ಸ್ – ಕಳೆ ತೆಗೆಯುವ, ನೆಲಕ್ಕೆ ಜೀವ ತುಂಬುವ ಬಳ್ಳಿ. ಗೊಬ್ಬರ, ಕಳೆ ನಿಯಂತ್ರಕವಾಗಿ ಬಳಕೆಯಾಗುವ ಈ ಬಳ್ಳಿಯನ್ನು ಫಲ್ಗುಣಿಯ ರೈತ ನಾಗರಾಜು ಧಾನ್ಯ ಒಕ್ಕುವ ಕಣದಲ್ಲಿ ಬೆಳೆಸಿ, ಕಳೆ ತೆಗೆದಿದ್ದಾರೆ, ಆಳಿನ ಕೂಲಿ ಉಳಿಸಿದ್ದಾರೆ!

ಕನಕಪುರ ತಾಲ್ಲೂಕಿನ ವೀರಯ್ಯನ ದೊಡ್ಡಿ ರೈತ ರಮೇಶ ಬಾಳೆ ಗಿಡಗಳ ನಡುವೆ ವೆಲ್‌ವೆಟ್ ಬೀನ್ಸ್ ಬಳ್ಳಿ ಬೆಳೆದು ಹೆಚ್ಚು ಇಳವರಿ ಪಡೆದಿದ್ದಾರೆ. ತಿಪಟೂರು ಬಿಳಿಗೆರೆ ಕೃಷ್ಣಮೂರ್ತಿ ತೆಂಗಿನ ಮರಕ್ಕೆ ಬಳ್ಳಿ ಹಬ್ಬಿಸಿ, ಮರಕ್ಕೆ ನೆರಳು ಮಾಡಿದ್ದಾರೆ. ಕುಣಿಗಲ್ ಗುಳ್ಳಳ್ಳಿಪುರದ ಶಂಕರ್ ತೋಟದ ತುಂಬಾ ಮುಚ್ಚಿಗೆ ಮಾಡಿ, ಕಳೆ ನಿಯಂತ್ರಿಸಿ, ತೇವಾಂಶ ಕಾಪಾಡಿಕೊಂಡರೆ, ಮೂಡಿಗೆರೆ ಹರೀಶ ಕೆ.ಜಿ.ಗಟ್ಟಲೆ ಬೀಜ ಮಾಡಿ ಮಾರಾಟ ಮಾಡಿದ್ದಾರೆ. ಸದ್ಯಕ್ಕೆ ಇವೆಲ್ಲ ಹಳೆಯ ಸುದ್ದಿ. ಇಲ್ಲೊಂದು ಹೊಸ ಸುದ್ದಿ ಇದೆ. ಮೂಡಿಗೆರೆ ತಾಲ್ಲೂಕಿನ ಫಲ್ಗುಣಿ ರೈತ ನಾಗರಾಜ ವೆಲ್‌ವೆಟ್ ಬೀನ್ಸ್ ಬಳ್ಳಿಯನ್ನು ಧಾನ್ಯ ಒಕ್ಕುವ ಕಣದಲ್ಲಿ ಬೆಳೆಸಿ, ಕಳೆ ನಿಯಂತ್ರಿಸಿ, ಕಣ ಮಾಡುವ ಖರ್ಚಿನಲ್ಲಿ ಅರ್ಧಕ್ಕರ್ಧ ಉಳಿಸಿದ್ದಾರೆ !

ಪ್ರಯತ್ನದ ಮೊದಲ ಮೆಟ್ಟಿಲು..

ಫಲ್ಗುಣಿ ರೈತ ನಾಗರಾಜ್ ಮನೆ ಅಂಗಳದಲ್ಲಿ ಎರಡು ಗುಂಟೆಯಷ್ಟು ವಿಸ್ತಾರವಾದ ಕಣ ಇದೆ. ಪ್ರತಿ ವರ್ಷ ಸುಗ್ಗಿಗೆ ಮುನ್ನ ಕಣವನ್ನು ಸ್ವಚ್ಛಮಾಡುತ್ತಾರೆ. ಕಳೆ ತೆಗೆಸಿ, ಉಕ್ಕೆ ಹೊಡೆಸಿ, ದಮ್ಮಸ್ ಮಾಡಿಸುವುದಕ್ಕೆ ಕನಿಷ್ಠ ಮೂರ್ನಾಲ್ಕು ದಿನ ಹಿಡಿಯುತ್ತದೆ. ಮೂರು ಆಳಿನ ಕೆಲಸ, ಮೂರ್ನಾಲ್ಕು ಸಾವಿರ ರೂಪಾಯಿ ಖರ್ಚು.

ಕಳೆದ ಆರೇಳು ತಿಂಗಳುಗಳ ಹಿಂದೆ ಈ ಊರಿನಲ್ಲಿ ಸಾವಯವ ಗ್ರಾಮ ಯೋಜನೆ ಅನುಷ್ಠಾನ ಮಾಡುತ್ತಿರುವ ಭೂಮಿ ಸಂಸ್ಥೆ ಇಲ್ಲಿನ ರೈತರಿಗೆ ವೆಲ್‌ವೆಟ್ ಬೀನ್ಸ್ ಬಳ್ಳಿಯ ಬೀಜ­ಗಳನ್ನು ವಿತರಿಸಿದ್ದರು. ಬೀಜ ಕೊಡುವಾಗ ಇದು ಕಳೆ ನಿಯಂತ್ರಕ ಸಸ್ಯ. ಉತ್ತಮ ಹಸಿರೆಲೆ ಗೊಬ್ಬರವಾಗುತ್ತದೆ ಅಂತ ರೈತರಿಗೆ ಕಿವಿ ಮಾತು ಉಸುರಿದ್ದರು.

ಈ ಮಾತು, ನಾಗರಾಜ್ ತಲೆಯಲ್ಲಿ ಕಣದಲ್ಲಿ ಬಳ್ಳಿ ಬೆಳೆಸುವಂತಹ ಹೊಸ ಪ್ರಯತ್ನಕ್ಕೆ ನಾಂದಿ ಹಾಡಿತು. ಕಳೆ ನಿಯಂತ್ರಿಸುವುದಾದರೆ ಕಣದಲ್ಲಿರುವ ಕಳೆಯನ್ನು ತೆಗೆಯಲಿ ಎಂದು ಅರ್ಧ ­ಕೆಜಿ ಬೀಜವನ್ನು ಮಳೆಗಾಲದಲ್ಲಿ ಕಣದಲ್ಲಿ ಚೆಲ್ಲಿದರು. ನಾಲ್ಕೇ ತಿಂಗಳು, ಕಣದ ತುಂಬಾ ವೆಲ್‌ವೆಟ್ ಬಳ್ಳಿಯ ರಾಶಿ ಹರಡಿಕೊಂಡಿತು. ಈ ಬಳ್ಳಿ ಸುತ್ತ ಒಂದೇ ಒಂದು ಕಳೆ ಬೆಳೆಯಲಿಲ್ಲ. ಕೆಲವು ಬಳ್ಳಿಗಳಲ್ಲಿ ಪೀಚು, ಕಾಯಿ, ಹೂವು ಟಿಸಿಲೊಡೆದವು !

ಕಣ ಮಾಡುವಾಗ ಕಳೆ ತೆಗೆಯುವುದು ರಗಳೆ ಕೆಲಸ. ಅದೊಂದು ನಿವಾರಣೆಯಾದರೆ ಒಂದೆರಡು ಆಳಿನ ಕೂಲಿ ಉಳಿದಂತೆ. ಈಗ ವೆಲ್‌ವೆಟ್ ಬೀನ್ಸ್ ಬೆಳೆದ ಮೇಲೆ ನಮ್ಮ ಕಣದಲ್ಲಿ ಒಂದೇ ಒಂದು ಕಳೆ ಬೆಳೆಯಲಿಲ್ಲ- ನಾಗರಾಜ್ ಇವತ್ತು ವಿಶ್ವಾಸದಿಂದ ಹೇಳುತ್ತಾರೆ.

ವೆಲ್‌ವೆಟ್ ಬಳ್ಳಿ ಬೆಳೆಸಿದ್ದರಿಂದ ಕಳೆ ನಿಯಂತ್ರಣವಾಗಿದೆ ಸರಿ. ಆದರೆ ಕಳೆಯಷ್ಟೇ ಪ್ರಮಾಣದಲ್ಲಿ ವೆಲ್‌ವೆಟ್ ಬಳ್ಳಿ ಹರಡಿಕೊಂಡಿದೆ. ಅದನ್ನು ತೆಗೆಸಲು ಹಣ ಖರ್ಚಾಗುವುದಿಲ್ಲವೇ ಎಂಬ ಪ್ರಶ್ನೆಗೆ, ನಿಜ, ಅದಕ್ಕೆ ಕೂಲಿ ಕೊಡಬೇಕು. ಅದನ್ನೇನು ನಮ್ಮ ಜೇಬಿನಿಂದ ಕೊಡೋದಿಲ್ಲ. ಈ ಬಳ್ಳಿಯ ಎಲೆಗಳು ಗೊಬ್ಬರದ ರೂಪದಲ್ಲಿ ಕೊಡುತ್ತವೆ. ಗೊಬ್ಬರದಲ್ಲಿ ಉಳಿದ ಹಣವನ್ನು ಇಲ್ಲಿ ಕೊಡುತ್ತೇವೆ. ಈ ಗೊಬ್ಬರ, ನಾವು ಕೊಡುವ ಕೂಲಿಗಿಂತ ದೊಡ್ಡದು. ಜೊತೆಗೆ ಈ ವೆಲ್‌ವೆಟ್ ಬಳ್ಳಿಯ ಬೀಜಗಳನ್ನು ಮಾರಾಟ ಮಾಡಿದ್ರೆ ಬರುವುದೆಲ್ಲ ಒಂಥರಾ ಲಾಭನೇ ಅಲ್ವಾ? ಅಂತ ನಾಗರಾಜ್ ಲೆಕ್ಕಾಚಾರದ ಉತ್ತರ ಕೊಡುತ್ತಾರೆ. ಬಳ್ಳಿ ಕಿತ್ತ ಜಾಗದಲ್ಲಿ ದೊಗರಾಗುತ್ತದೆ. ಇದರಿಂದ ಸ್ವಲ್ಪ ಉಕ್ಕೆ ಹೊಡೆಸುವ ಖರ್ಚು ಉಳಿಯುತ್ತದೆ. ಅಲ್ಲಿಗೆ ನಷ್ಟ ಎನ್ನೋದು ಈ ವಿಚಾರದಲ್ಲಿ ತೃಣ ಅಲ್ವಾ ಎಂದು ಮಾತು ಜೋಡಿಸುತ್ತಾರೆ.

ಬಳ್ಳಿ ಬೆಳೆಸುವ ಜೊತೆ ತಾಂತ್ರಿಕವಾಗಿಯೂ ನಾಗರಾಜ್ ಸಾಕ್ಷರರಾಗಿದ್ದಾರೆ. ಒಂದು ಬೆಳೆಯಿಂದ ಪ್ರತ್ಯಕ್ಷ ಪರೋಕ್ಷ ಲಾಭ, ಅನುಕೂಲಗಳನ್ನು ಗಮನಿಸಲು ಆರಂಭಿಸಿದ್ದಾರೆ. ಅವರ ಪ್ರಕಾರ ಈ ಬಾರಿ ಕಣ ನಿರ್ಮಾಣದಲ್ಲಿ ಒಂದೂವರೆ ಸಾವಿರ ರೂಪಾಯಿ ಉಳಿದಿದೆ. ಪರೋಕ್ಷವಾಗಿ ಉತ್ತಮ ಸಾರಜನಕ ಸರಬಾರಜು ಮಾಡುವ ಹಸಿರೆಲೆ ಗೊಬ್ಬರ, ಐದಾರು ಚೀಲದಷ್ಟು ಹಸಿ ಬೀನ್ಸ್ ಸಿಕ್ಕಿದೆ. ಮುಂದಿನ ವರ್ಷಕ್ಕೆ ಇದೇ ಬೀಜವನ್ನು ಬಿತ್ತಬಹುದೆಂದು ಅವರು ಲೆಕ್ಕಾಚಾರ ಮಾಡಿದ್ದಾರೆ.

ಸಮಸ್ಯೆಯಾದರೂ ಲಾಭ

ವೆಲ್‌ವೆಟ್ ಬಳ್ಳಿ ಬೆಳೆಸಿದ ನೆಲ ಮೃದುವಾಗುತ್ತದೆ. ಬಳ್ಳಿ ಕಿತ್ತ ಜಾಗದಲ್ಲಿ ದೊಡ್ಡ ದೊಡ್ಡ ಗುಂಡಿ­ಗಳಾಗುತ್ತವೆ. ಹೀಗಾದಾಗ ನೆಲ ಸಡಿಲವಾಗುತ್ತದೆ. ಕಣ ಮಾಡಲು ನೆಲ ಗಟ್ಟಿಯಾಗದಿದ್ದರೆ ಧಾನ್ಯ ಒಕ್ಕುವುದು ತುಸು ಕಷ್ಟ ಎನ್ನುವುದು ಹಿರಿಯ ರೈತರ ಅಭಿಪ್ರಾಯ.

ಈ ಮಾತು ನಿಜ. ಆದರೆ ವೆಲ್‌ವೆಟ್ ಬಳ್ಳಿ ಬೆಳೆಸಿದ ಮೇಲೆ ಆ ನೆಲದಲ್ಲಿ ಕಾಣುವ ಅದ್ಭುತ ಬದಲಾವಣೆ ಮುಂದೆ ಈ ಕಷ್ಟವನ್ನು ಸಹಿಸಿಕೊಳ್ಳಬಹುದಲ್ಲವೇ ಎನ್ನುತ್ತಾರೆ ರವಿ ಮೂಡಿಗೆರೆ. ಮತ್ತೊಂದು ಗಮನಿಸಬೇಕಾದ ವಿಷಯ ಏನೆಂದರೆ, ಮಲೆನಾಡಿನಲ್ಲಿ ಕಣದ ಸ್ಥಳವನ್ನು ಬೇರೆ ಬೇರೆ ಕೆಲಸಕ್ಕೆ ಬಳಸುತ್ತಾರೆ. ಕೆಲವರು ತರಕಾರಿ ಬೆಳೆದರೆ, ಇನ್ನು ಕೆಲವರು ಮಳೆ ನೀರು ಇಂಗಿಸುತ್ತಾರೆ. ನರ್ಸರಿ ಮಾಡುತ್ತಾರೆ. ಇಂಥ ಕೆಲಸಗಳಿಗೆ ವೆಲ್‌ವೆಟ್ ಬಳ್ಳಿ ಬೆಳೆಸಿದ ಫಲವತ್ತಾದ ನೆಲ ತುಂಬಾ ಅನುಕೂಲಕಾರಿ. ಒಂದು ಪಕ್ಷ ಬಳ್ಳಿ ಬೆಳೆಸಿದ ಸ್ಥಳದಲ್ಲಿ ಕಣ ಮಾಡಲು ಸಾಧ್ಯವಾಗದಿದ್ದರೆ ಕೈತೋಟ ಮಾಡಬಹುದು. ನರ್ಸರಿ ಮಾಡಬಹುದು. ಸಾರಜನಕ ತುಂಬಿ ತುಳುಕುವ ಈ ಮಣ್ಣಲ್ಲಿ ಸೊಂಪಾಗಿ ಗಿಡಗಳು ಬೆಳೆಯುತ್ತವೆ ಎನ್ನುವುದು ಭೂಮಿ ಸಂಸ್ಥೆಯ ಜಯಪ್ರಸಾದ್ ಬಳ್ಳೇಕೆರೆ ಅವರ ಅಭಿಪ್ರಾಯ.

ಅದೇನೆ ಇರಲಿ, ನಾಗರಾಜ್ ಅವರ ಈ ಪ್ರಯತ್ನ ಕೇವಲ ಮಲೆನಾಡಿಗರಿಗೆ ಮಾತ್ರವಲ್ಲ, ಕಣದಲ್ಲಿ ಕಳೆ ತೆಗೆಯಲು ಮಾತ್ರವಲ್ಲ. ಗೊಬ್ಬರ ಮಾಡುವ, ಕಳೆ ನಿಯಂತ್ರಿಸುವ ಯಾವ ಕೆಲಸಕ್ಕಾದರೂ ಅನುಸರಿಸಬಹುದು ಎಂಬುದನ್ನು ಒಪ್ಪಿಕೊಳ್ಳಬೇಕು ಇಂಥ ಹೊಸ ಹೊಸ ಪ್ರಯತ್ನಗಳೇ ಸುಸ್ಥಿರ ಕೃಷಿ ಮೊದಲ ಮೆಟ್ಟಿಲುಗಳೆಂಬುದನ್ನು ಅರಿಯಬೇಕು.

ಬೀನ್ಸ್ ಬೆಳೆದ ಕಥೆ

ಆರಂಭದಲ್ಲಿ ವೆಲ್‌ವೆಟ್ ಬೀನ್ಸ್ ಬೀಜಗಳನ್ನು ಬೆಳೆಸಿ ಎಂದು ಫಲ್ಗುಣಿ ರೈತರಿಗೆ ಸಲಹೆ ಕೊಟ್ಟಾಗ ತುಂಬಾ ವಿರೋಧ ವ್ಯಕ್ತವಾಯಿತು ಎನ್ನುತ್ತಾರೆ ರವಿ ಮೂಡಿಗರೆ. ಅದೆಷ್ಟೋ ರೈತರು ನಾವು ಕೊಟ್ಟ ಬೀಜಗಳನ್ನೆಲ್ಲಾ ಮನೆಯಲ್ಲಿ ಬಚ್ಚಿಟ್ಟುಕೊಂಡರು. ಕೊನೆಗೆ ಸಹಜ ಸಮೃದ್ಧ ಪ್ರಕಾಶನ ಹೊರತಂದ ವೆಲ್‌ವೆಟ್ ಬೀನ್ಸ್ – ನೆಲಕ್ಕೆ ಜೀವ ತುಂಬುವ ಮ್ಯಾಜಿಕ್ ಬಳ್ಳಿ ಪುಸ್ತಕದಲ್ಲಿನ ಮಾಹಿತಿಗಳನ್ನು ರೈತರ ಸಭೆಯಲ್ಲಿ ಹಂಚಿಕೊಂಡು, ಕೆಲವು ರೈತರ ಯಶೋಗಾಥೆಗಳನ್ನು ತಿಳಿಸಿದ ಮೇಲೆಯೇ ಬಳ್ಳಿ ಬೀಜವನ್ನು ಬೇಲಿಗೆ ಹಾಕಲು ಮನಸ್ಸು ಮಾಡಿದರು. ಈಗ ಫಲ್ಗುಣಿಯ ಬೇಲಿಯಲ್ಲೆಲ್ಲಾ ವೆಲ್‌ವೆಟ್ ಬಳ್ಳಿಗಳನ್ನು ನೋಡಬಹುದು ಎನ್ನುತ್ತಾರೆ ಅವರು.

ಇದೇ ರೀತಿ ಬೇಲಿ ಮೇಲಿದ್ದ ಬಳ್ಳಿಯ ಬೀಜಗಳು ಕಣದ ಅಂಗಳಕ್ಕೆ ಬಿದ್ದಿದ್ದೂ ಕೂಡ ವಿಚಿತ್ರ ಸನ್ನಿವೇಶದಲ್ಲಿ. ವೆಲ್‌ವೆಟ್ ಬಳ್ಳಿ ಬೀಜಕೊಟ್ಟು, ಎಲ್ಲಾದರೂ ಒಂದು ಕಡೆ ಹಾಕ್ರಿ ಅಂತ ಒತ್ತಾಯ ಹೇರಿದಾಗ, ನಾಗರಾಜ್ ನೋಡೋಣ ಅಂತ ಕಣದ ಅಂಗಳಕ್ಕೆ ಬೀಜಗಳನ್ನು ಎಸೆದಿದ್ದಾರೆ. ಕಳೆದ ತಿಂಗಳು ಫಲ್ಗುಣಿಯಲ್ಲಿ ಸಾವಯವ ಕೃಷಿ ಕ್ಷೇತ್ರೋತ್ಸವಕ್ಕೆ ಭೇಟಿ ನೀಡಿದ ರೈತರ ಎದುರು ನಾಗರಾಜ್ ಈ ಮಾಹಿತಿ ಹಂಚಿಕೊಂಡಾಗಲೇ ಇಂಥ ಅದ್ಭುತ ಪ್ರಯತ್ನದ ಆರಂಭ ಬೆಳಕಿಗೆ ಬಂದಿತು.

ಸಂಪಾದಕರು : ಗಾಣಧಾಳು ಶ್ರೀಕಂಠ