ಊಟದ ಅಕ್ಕಿಗಾಗಿ ಬೀಜ ಬ್ಯಾಂಕ್ ಕಟ್ಟಿದವರು…

 ನಾಲಿಗೆಗೆ ರುಚಿಸುವ, ಮನಸ್ಸಿಗೆ ಹಿತ ನೀಡುವ ಊಟದ ಅಕ್ಕಿಗಾಗಿ ಹುಡುಕಾಟ ಆರಂಭಿಸಿದ ಯೆಡೇಹಳ್ಳಿ ರೈತರಿಗೆ ಕಳೆದು ಹೋಗಿದ್ದ ಅನೇಕ ದೇಸಿ ಭತ್ತದ ತಳಿಗಳು ಲಭ್ಯವಾದವು. ಆ ಬೀಜಗಳನ್ನು ಸಂಗ್ರಹಿಸಿಡುವುದಕ್ಕಾಗಿ ಸಮುದಾಯ ಬೀಜ ಬ್ಯಾಂಕ್ ಆರಂಭಿಸಿದರು.

ನಮಗೆ ಊಟಕ್ಕೊಂದು ಒಳ್ಳೆಯ ಅಕ್ಕಿ ಕೊಡಿ! – ದೇಸಿ ಭತ್ತದ ತಳಿ ಹುಡುಕಾಟದ ಸಭೆಯಲ್ಲಿ ಕುಳಿತಿದ್ದ ಬೇಸಾಯ ತಜ್ಞರು, ಚಳುವಳಿಕಾರರು, ಬಿತ್ತನೆ ಬೀಜ ಪರಿಣಿತರ ಮುಂದೆ ಮಲೆನಾಡಿನ ಭತ್ತ ಬೆಳೆಗಾರರ ಪ್ರತಿನಿಧಿಯಾಗಿ ಯೆಡೇಹಳ್ಳಿಯ ವೈ.ಸಿ.ರುದ್ರಪ್ಪನವರು ಹೀಗೊಂದು ಮನವಿ ಮಾಡಿದರು !

ಅರೆ, ಎಕರೆಗಟ್ಟಲೆ ಭತ್ತದ ಗದ್ದೆಗಳಿವೆ. ಟನ್‌ಗಟ್ಟಲೆ ಅಕ್ಕಿ ಬೆಳೆಯುತ್ತಾರೆ ನಾಡಿಗೇ ಅನ್ನ ಉಣ್ಣಿಸುವ ಸಕಲೇಶಪುರದಲ್ಲಿ ಊಟದ ಅಕ್ಕಿಗೆ ಬರವೇ ? ಸಭೆಯಲ್ಲಿದ್ದವರು ಮರು ಪ್ರಶ್ನೆ ಹಾಕಿದರು.

ಅದು ಹಾಗಲ್ಲ ಸರ್ ರುದ್ರಪ್ಪನವರು ಮಾತು ಮುಂದುವರಿಸಿದರು. ನಾವು ಟನ್‌ಗಟ್ಟಲೆ ಭತ್ತ ಬೆಳೆಯುತ್ತೇವೆ. ಅವೆಲ್ಲ ಮಾರಾಟಕ್ಕಾಯಿತು. ನಮಗೆ ಆಲೂರು ಸಣ್ಣ, ನೆಟ್ಟಿ ಬೆಳ್ಳಕ್ಕಿಯಂತಹ ರುಚಿಕಟ್ಟಾದ ಊಟದ ಅಕ್ಕಿ ಬೇಕು ಅಂತ ತಮ್ಮ ಮನವಿಯ ಅರ್ಥವನ್ನು ವಿವರಿಸಿದರು.

ನಿಜ, ಸಕಲೇಶಪುರ ತಾಲ್ಲೂಕಿನಲ್ಲಿ ನೂರಾರು ಎಕರೆ ಭತ್ತದ ಗದ್ದೆಗಳಿವೆ. ಸಾವಿರಾರು ಟನ್ ಭತ್ತ ಬೆಳೆಯುತ್ತಾರೆ. ಹೇರಳವಾದ ಅಕ್ಕಿಯೂ ಉತ್ಪಾದನೆಯಾಗುತ್ತದೆ. ಆದರೂ ಈ ಭಾಗದ ರೈತರಿಗೆ ಊಟಕ್ಕೊಂದು ಒಳ್ಳೆ ಅಕ್ಕಿ ಇಲ್ವಲ್ಲಾ ಎಂಬ ಕೊರಗು ಇದೆ.

ಒಂದು ಕಾಲದಲ್ಲಿ ಸಕಲೇಶಪುರದ ಸುತ್ತ ಆಲೂರು ಸಣ್ಣ, ಗೌರಿಸಣ್ಣ, ಹೊಳೆಸಾಲು ಚಿಪ್ಪಿಗ, ಘಂಸಾಲೆ, ದಪ್ಪಭತ್ತ, ನೆಟ್ಟಿ ಬೆಳ್ಳಕ್ಕಿ, ಕ್ಯಾಸರಿ(ಕಿರುವಾಣ), ರಾಮಮುಡಿ ಯಂತಹ ಹತ್ತಾರು ದೇಸಿ ಭತ್ತದ ತಳಿಗಳಿದ್ದವು ಎಂದು ಹಿರಿಯ ರೈತರು ನೆನಪಿಸಿಕೊಳ್ಳುತ್ತಾರೆ. ಆಗ ಊಟಕ್ಕೊಂದು, ದನಕರುಗಳಿಗೊಂದು, ಹಬ್ಬಹಬ್ಬಕ್ಕೂ ಒಂದು, ಮಾರಾಟಕ್ಕೊಂದು ಹೀಗೆ ಎಲ್ಲದಕ್ಕೂ ಒಂದೊಂದು ತಳಿಗಳಿದ್ದವು. ಹಸಿರು ಕ್ರಾಂತಿ ನಂತರ ಹೈಬ್ರಿಡ್ ತಳಿಗಳು ಕಾಲಿಟ್ಟಿದ್ದೇ ಇಟ್ಟಿದ್ದು, ಎಲ್ಲ ದೇಸಿ ತಳಿಗಳೆಲ್ಲ ಒಂದೊಂದಾಗಿ ನಾಪತ್ತೆಯಾ­ದವು. ಅವುಗಳ ಜಾಗದಲ್ಲಿ ಈಗ ಅಧಿಕ ಇಳುವರಿ ಹೆಸರಿನ ಇಂಟಾನ್ ಮತ್ತು ಕ್ರಾಸ್ ಇಂಟಾನ್ ಎರಡು ಹೈಬ್ರಿಡ್ ತಳಿಗಳಷ್ಟೇ ಉಳಿದಿವೆ.

ಪತ್ತೆಯಾದ ದೇಸಿ ತಳಿ ಮಾಹಿತಿ

ಮೂರು ವರ್ಷಗಳ ಹಿಂದೆ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ ಈ ವಿಚಾರವನ್ನು ಪತ್ತೆ ಹಚ್ಚಿತು. ಸಕಲೇಶಪುರ ತಾಲ್ಲೂಕು ಯೆಡೇಹಳ್ಳಿಯಲ್ಲಿ ಸಾವಯವ ಗ್ರಾಮ ಅನುಷ್ಠಾನದ ವೇಳೆ ತಳಿ ಸಮೀಕ್ಷೆ ಮಾಡಿದಾಗ, ಸಂಸ್ಥೆಗೆ ದೇಸಿ ತಳಿಗಳ ಮಾಹಿತಿ ಲಭ್ಯವಾಯಿತು. ಅನೇಕ ರೈತರಿಗೆ ಈಗಲೂ ದೇಸಿ ತಳಿಗಳ ಮೇಲಿನ ಆಸಕ್ತಿಯಿರುವುದು, ಅವುಗಳನ್ನು ಸಂರಕ್ಷಿಸಬೇಕು, ಮತ್ತೆ ನಮ್ಮ ನೆಲದಲ್ಲಿ ನಾಟಿ ಮಾಡಬೇಕೆಂಬ ಹಂಬಲವಿರುವುದನ್ನು ಸಂಸ್ಥೆ ಗುರುತಿಸಿತು.

ಇದೇ ಸಮಯದಲ್ಲಿ ರಾಜ್ಯದಲ್ಲಿ ಆರಂಭವಾಗಿದ್ದ ಭತ್ತ ಉಳಿಸಿ ಆಂದೋಲನ ಯೆಡೇಹಳ್ಳಿಯಲ್ಲಿ ದೇಸಿ ತಳಿಗಳ ಪ್ರಾಮುಖ್ಯ ಕುರಿತು ಆಂದೋಲನ ನಡೆಸಿತು. ಇದರಿಂದ ಉತ್ತೇಜಿತಗೊಂಡ ಯೋಜನೆಯ ಫಲಾನುಭವಿಗಳೆಲ್ಲ ಸಂಸ್ಥೆಯ ಮಾರ್ಗ­ದರ್ಶನದಲ್ಲಿ ದೇಸಿ ತಳಿ ಉಳಿಸಲು ಸಂಕಲ್ಪ ಮಾಡಿದರು. ಊರಿನಿಂದ ನಾಪತ್ತೆಯಾದ ಭತ್ತದ ತಳಿಗಳ ಹುಡುಕಾಟ ಆರಂಭಿಸಿದರು.

ದೇಸಿ ತಳಿ ಹುಡುಕಾಟದ ಹಾದಿಯಲ್ಲಿ

ನಾಪತ್ತೆಯಾಗಿರುವ ತಳಿಗಳನ್ನು ಪತ್ತೆ ಹಚ್ಚುವುದಾದರೂ ಹೇಗೆ ? – ಇದಕ್ಕಾಗಿ ನಾಡಿನ ಭತ್ತ ಸಂರಕ್ಷಕರ ಸಹಕಾರ ಪಡೆಯುವುದಕ್ಕೆ ರೈತರು ತೀಮಾನಿಸಿದರು. ಸಿಕ್ಕಿ ಸಿಕ್ಕಿದ ಗೆಳೆಯರಿಗೆ ನಿಮ್ಮೂರಿನಲ್ಲಿ ಈ ಭತ್ತ ತಳಿ ಇದೆಯಾ ? ಇದ್ದರೆ ನಮಗೆ ತಿಳಿಸಿ. ಹಿಡಿಯಷ್ಟಾದರೂ ಸಾಕು ಮಾರಾಯ್ರೆ ಎಂದು ದುಂಬಾಲು ಬಿದ್ದರು. ಹೀಗೆ ತಳಿಗಳ ಹುಡುಕಾಟ ನಡೆಸಿದಾಗ ಸಕಲೇಶಪುರದ ಸುತ್ತ ನಾಲ್ಕೈದು ದೇಸಿ ಭತ್ತದ ತಳಿಗಳು ಹಿಡಿಯಷ್ಟು ಪ್ರಮಾಣದಲ್ಲಿ ಲಭ್ಯವಾದವು. ಆ ತಳಿಗಳನ್ನು ನಿಸರ್ಗ ಸಾವಯವ ಕೃಷಿ ಸಂಘ ಜೋಪಾನ ಮಾಡಿತು.

ತಳಿ ಸಂಗ್ರಹಿಸಿದ ನಂತರ ಅದನ್ನು ಆಸಕ್ತ ರೈತರಿಗೆ ತಮ್ಮ ಗದ್ದೆಗಳಲ್ಲಿ ಪ್ರತ್ಯೇಕ ಪಟ್ಟೆಗಳಲ್ಲಿ ಸಾವಯವ ವಿಧಾನದಲ್ಲಿ ಬೆಳೆಸಲು ಸಲಹೆ ನೀಡಲಾಯಿತು. ಕಟಾವಿನ ಹಂತದಲ್ಲಿ ನಾಡಿನ ತಳಿ ಪರಿಣತ ರೈತರನ್ನು ಆಹ್ವಾನಿಸಿ ತೆನೆ ಆಯ್ಕೆ ಮಾಡಿಸಿ, ತಳಿಗಳನ್ನು ಶುದ್ಧಗೊಳಿಸಲಾಯಿತು. ಈ ಪ್ರಕ್ರಿಯೆ ಹೀಗೇ ಮುಂದುವರೆದು ಒಟ್ಟು 18 ದೇಸಿ ತಳಿಗಳನ್ನು ಸಂಗ್ರಹಿಸಿ, ಬೆಳೆಸಲಾಯಿತು ಎಂದು  ಸಂಸ್ಥೆಯ ನಿರ್ದೇಶಕ ಜಯಪ್ರಸಾದ್ ಬಳ್ಳೇಕೆರೆ ತಳಿ ಆಯ್ಕೆ ವಿಧಾನ ವಿವರಿಸುತ್ತಾರೆ.

ರೈತರ ಗದ್ದೆಯಲ್ಲೇ ತಳಿ ಪ್ರಾತ್ಯಕ್ಷಿಕೆ

ತಳಿ ಹುಡುಕ್ಕಿದ್ದಾಯಿತು. ಬೆಳೆಸಿದ್ದೂ ಆಯಿತು. ಅವುಗಳನ್ನು ದ್ವಿಗುಣ ಗೊಳಿಸಬೇಕು. ದಾರಿ ಯಾವುದಯ್ಯ? ಎಂದು ಚಿಂತಿಸುತ್ತಿದ್ದ ವೇಳೆಯಲ್ಲಿ ನಿಸರ್ಗ ಸಾವಯವ ಕೃಷಿ ಸಂಘದ ಸದಸ್ಯರಲ್ಲೊಬ್ಬರಾದ ಕಾಡುಗದ್ದೆಯ ಚಿದಂಬರ ತಾನು 10 ಗುಂಟೆ ಸ್ಥಳದಲ್ಲಿ ಈ ಹದಿನೆಂಟು ತಳಿಗಳನ್ನು ಬೆಳೆಸಲು ಒಪ್ಪಿದರು. ಧೋ ಎಂಬ ಮಳೆಯ ನಡುವೆಯೇ ಹದಿನೆಂಟು ತಳಿಗಳನ್ನು ಪ್ರತ್ಯೇಕವಾಗಿ ಬಿತ್ತನೆ ಮಾಡಿದರು. ಅದಕ್ಕೂ ಮುಂದೆ ಪ್ರತಿಯೊಂದು ತಳಿಯ ಬೀಜಗಳನ್ನು ಉಪಚರಿಸಿದರು.

ತಿಂಗಳು ಕಳೆದು ಭತ್ತದ ತೆನೆಗಳು ತೊನೆದಾಡುವಾಗ ಅದರ ಅಂದವನ್ನು ಕಣ್ತುಂಬಿಕೊಂಡ ರೈತರ ಮೊಗದಲ್ಲಿ ಗೆಲುವಿನ ನಗೆ. ಈ ಸಂತೋಷವನ್ನು ಹಂಚಿಕೊಳ್ಳ ಬೇಕೆಂದು ದೇಸಿ ತಳಿ ಭತ್ತದ ಕ್ಷೇತ್ರೋತ್ಸವ ಮಾಡಬೇಕೆಂದು ತೀರ್ಮಾನಿಸಿದರು.

ಕ್ಷೇತ್ರೋತ್ಸವನ್ನು ಅರ್ಥಪೂರ್ಣವಾಗಿಸಬೇಕೆಂದು ನಿರ್ಧರಿಸಿದರು. ಅದಕ್ಕಾಗಿ ಪರಿಣತ ರೈತ ಮಿತ್ರರನ್ನು ಆಹ್ವಾನಿಸಿದರು. ಅವರನ್ನು ತೆನೆ ತುಂಬಿದ್ದ ದೇಸಿ ತಳಿಗಳ ಅಂಗಳಕ್ಕಿಳಿಸಿ ಕೈಗೊಂದೊಂದು ಬಣ್ಣದ ಪಟ್ಟಿಗಳನ್ನು ಕೊಟ್ಟು ಉತ್ತಮ ತಳಿ ಆಯ್ಕೆ ಹಾಗೂ ತಳಿ ಶುದ್ಧತೆ ಮಾಡುವಂತೆ ಮನವಿ ಮಾಡಿದರು. ಗೆಳೆಯರ ಮನವಿಗೆ ಒಪ್ಪಿದವರೆಲ್ಲರೂ ಪ್ರಾಮಾಣಿಕವಾಗಿ ಉತ್ತಮ ತಳಿಗಳನ್ನು ಆಯ್ಕೆ ಮಾಡಿದರು. ಮಾತ್ರ ವಲ್ಲ, ಅವುಗಳ ಬೀಜ ಪಡೆದು ಅಭಿವೃದ್ದಿಪಡಿಸುವುದಾಗಿ ಸಂಕಲ್ಪ ಮಾಡಿದರು.

ದೇಸಿ ಭತ್ತದ ತಳಿಗಳ ಬಿತ್ತನೆ, ಕೊಯ್ಲು, ಬೀಜ ಸಂಗ್ರಹ ವಿಸ್ತರಣೆಗೊಳ್ಳುತ್ತಿದ್ದಂತೆ ಅವುಗಳನ್ನು ಒಂದು ಕಡೆ ಒಪ್ಪ ಮಾಡಬೇಕಾಯಿತು. ಈ ಪ್ರಕ್ರಿಯೆಗಾಗಿ ಆರಂಭ ವಾಗಿದ್ದೇ ಸಮುದಾಯ ದೇಸಿ ಭತ್ತ ತಳಿ ಬೀಜ ಬ್ಯಾಂಕ್.

ಹಿಡಿ ಭತ್ತ ಕೊಟ್ಟು, ದುಪ್ಪಟ್ಟು ಸಂಗ್ರಹ

ವಿಶ್ವ ಭೂಮಿ ದಿನಾಚರಣೆಯಂದು ಸಾಂಕೇತಿಕವಾಗಿ ಆರಂಭವಾದ ಸಮುದಾಯ ಬೀಜ ಬ್ಯಾಂಕ್ ನಂತರ ಚಿದಂಬರ ಅವರಂತೆ ಅನೇಕ ರೈತರು ದೇಸಿ ತಳಿಗಳನ್ನು ಸಂರಕ್ಷಿಸಲು ಆರಂಭಿಸಿದರು. ರೈತ ಲೋಹಿತಾಕ್ಷ ಅವರು ಬೀಜ ಬ್ಯಾಂಕ್‌ನಿಂದ ಒಂದು ಹಿಡಿ ಘಂಸಾಲೆ ಭತ್ತದ ತಳಿ ಪಡೆದರು. 3 ವರ್ಷಗಳ ಕಾಲ ಈ ತಳಿಯನ್ನು ಬೆಳೆಸಿ, ಶುದ್ಧಗೊಳಿಸಿ, ನೆರೆಯ ರೈತರಿಗೂ ಹಂಚಿದರು. ಹಿಡಿ ಭತ್ತ ಕೊಟ್ಟಿದ್ದ ಬೀಜಬ್ಯಾಂಕಿಗೆ 100 ಕೆಜಿ ಭತ್ತವನ್ನು ಬೆಳೆದು ಕೊಡುವ ಮೂಲಕ ಲೋಹಿತಾಕ್ಷ ಅವರು ಸಮುದಾಯ ಬೀಜ ಬ್ಯಾಂಕ್ ಪರಿಕಲ್ಪನೆಯನ್ನು ಸಾಕಾರಗೊಳಿಸಿದರು.

ಬೀಜ ಬ್ಯಾಂಕ್ ಆರಂಭವಾದ ನಂತರ ಸಂಘದ ಅಧ್ಯಕ್ಷರಾದ ವೈ.ಸಿ. ರುದ್ರಪ್ಪನವರು ಒಂದು ಎಕರೆಯಲ್ಲಿ ರಾಜಮುಡಿ ತಳಿ ಬೆಳೆಸುತ್ತಿದ್ದಾರೆ. ಕುಂಬಾರಘಟ್ಟೆ ಕೃಷಿಕ ವೈ ಎಂ ರಾಜು ಒಂದು ಕೆ.ಜಿ ಚಿನ್ನಪೊನ್ನಿ ಭತ್ತವನ್ನು ಬೆಳೆದು ಶುದ್ಧಿಗೊಳಿಸಿದ್ದಾರೆ. ಕೇವಲ 110 ದಿನಗಳಿಗೆ ಕಟಾವಾಗುವ ಈ ತಳಿ ಬೇಸಿಗೆ ಕಾಲಕ್ಕೆ ಸೂಕ್ತವಾಗಿದೆ. ಉಳಿದ ತಳಿಗಳು 135-150 ದಿನಗಳಲ್ಲಿ ಕಟಾವಾಗುವುದರಿಂದ ಮುಂಗಾರಿನ ಮಳೆಗೆ ಸಿಕ್ಕಿ ಅಪಾರ ನಷ್ಟವಾಗುತ್ತಿತ್ತು. ಹಾಗಾಗಿ ಚಿನ್ನಪೊನ್ನಿ ಮಲೆನಾಡಿನ ಬೇಸಿಗೆ ಬೆಳೆಗೆ ಉತ್ತಮ ತಳಿ ಎಂಬುದು ರಾಜು ಅಭಿಪ್ರಾಯ.

ಪ್ರಾಯೋಗಿಕವಾಗಿ 2 ತಾಕುಗಳಲ್ಲಿ ಚಿನ್ನಪೊನ್ನಿ ಹಾಗೂ ಐ ಆರ್ 64 ತಳಿಗಳನ್ನು ಬೆಳೆದು ಈ ಭಾಗಕ್ಕೆ ಚಿನ್ನಪೊನ್ನಿ ಇಳುವರಿ, ಬೆಳವಣಿಗೆ, ರುಚಿ ಹಾಗೂ ವಾತಾವರಣಕ್ಕೆ ಸೂಕ್ತ ಎಂಬುದನ್ನು ಅವರು ಮನಗಂಡಿದ್ದಾರೆ.

ಯೆಡೇಹಳ್ಳಿಯ ನಿಸರ್ಗ ಸಂಘದವರ ಉತ್ಸಾಹ ಇಷ್ಟಕ್ಕೇ ನಿಂತಿಲ್ಲ. ಸದಸ್ಯರೆಲ್ಲ ಈಗ ಕಳೆದು ಹೋಗಿರುವ ಭತ್ತ ತಳಿಗಳ ಹುಡುಕಾಟ ಮುಂದುವರಿಸಿದ್ದಾರೆ. ಭತ್ತ ತಳಿಗಳು ಸಂಗ್ರಹ ವಿಸ್ತರಣೆಯಾಗುತ್ತಿದೆ. ಸ್ಥಳದ ಕೊರತೆಯಿಂದಾಗಿ ಆ ತಳಿಗಳನ್ನು ತಮ್ಮ ತಮ್ಮ ಮನೆಗಳಲ್ಲಿ ಸಂರಕ್ಷಿಸುತ್ತಿದ್ದಾರೆ. ಭವಿಷ್ಯದಲ್ಲಿ ರೈತರೆಲ್ಲ ಸಂಘದಿಂದಲೇ ಸಮುದಾಯ ಭವನ ನಿರ್ಮಿಸುವ ಯೋಚನೆ ಮಾಡಿದ್ದಾರೆ. ಅದರಲ್ಲಿ ಬೀಜ ಬ್ಯಾಂಕ್, ಗ್ರಂಥಾಲಯ, ಸಭಾಂಗಣ ಎಲ್ಲವೂ ನಿರ್ಮಿಸಬೇಕೆಂಬ ನೀಲ ನಕ್ಷೆ ಕೂಡ ಸಿದ್ಧವಾಗಿದೆ. ಹಣ ಹೊಂದಾಣಿಕೆಯಾದರೆ, ಮುಂದಿನ ವರ್ಷದಿಂದ ಸುಸಜ್ಜಿತ ಬೀಜ ಬ್ಯಾಂಕ್ ಯೆಡೇಹಳ್ಳಿಯಲ್ಲಿ ವಿಧ್ಯುಕ್ತವಾಗಿ ಆರಂಭವಾಗಲಿದೆ. ಮಾತ್ರವಲ್ಲ, ದೇಶದಲ್ಲೇ ಮೊದಲ ದೇಸಿ ಭತ್ತ ಬೀಜ ಬ್ಯಾಂಕ್ ಎಂಬ ಖ್ಯಾತಿಯನ್ನೂ ಪಡೆಯಲಿದೆ ಎನ್ನುತ್ತಾರೆ ಯೋಜನಾ ನಿರ್ದೇಶಕ ಜಯಪ್ರಸಾದ್ ಬಳ್ಳೇಕೆರೆ.

ತಳಿ ಸಂರಕ್ಷಣೆಗೆ ಪ್ರೇರೇಪಿಸಿದ ಬೀಜ ಬ್ಯಾಂಕ್

 

ಯೆಡೇಹಳ್ಳಿಯಲ್ಲಿ ಸಾಂಕೇತಿಕವಾಗಿ ಆರಂಭವಾದ ಸಮುದಾಯ ದೇಸಿ ಭತ್ತದ ತಳಿ ಬೀಜ ಬ್ಯಾಂಕ್ ಉದ್ಘಾಟನೆ ಸಮಾರಂಭಕ್ಕೆ ನೆರೆಯ ಚಿಕ್ಕಂದೂರು ರೈತರು ಆಗಮಿಸಿದ್ದರು. ಸಮಾರಂಭದ ನಂತರ ಕಳೆದು ಹೋದ ತಳಿಗಳ ಬಗ್ಗೆ ಚರ್ಚೆ ಆರಂಭವಾಯಿತು. ತಮ್ಮೂರಿನಿಂದ ಇಂಥ ತಳಿಗಳು ನಾಪತ್ತೆಯಾಗಿವೆ ಎಂದು ಯೆಡೆಹಳ್ಳಿ ರೈತರು ಪಟ್ಟಿ ಮಾಡುತ್ತಿದ್ದರು. ಪಟ್ಟಿ ಮಾಡುವಾಗ ನೆಟ್ಟಿ ಬೆಳ್ಳಕ್ಕಿ ಎಂಬ ಅಪರೂಪದ ದೇಸಿ ತಳಿ ಅವಶೇಷವಿಲ್ಲದಂತೆ ನಾಪತ್ತೆಯಾಗಿದೆ ಎಂಬ ವಿಷಯ ಚರ್ಚೆಗೆ ಬಂತು.

ಈ ಘಟನೆ ನಡೆದ ಎರಡು ಮೂರು ತಿಂಗಳ ನಂತರ ಚಿಕ್ಕಂದೂರಿನ ರೈತರೊಬ್ಬರು ನಮ್ಮೂರಿನಲ್ಲಿ ನೆಟ್ಟಿ ಬೆಳ್ಳಕ್ಕಿ ತಳಿ ಇದೆ ಎಂದು ಯೆಡೇಹಳ್ಳಿ ರೈತರಿಗೆ ಮಾಹಿತಿ ಕೊಟ್ಟರು. ಅಷ್ಟೇ ಅಲ್ಲ, ಯೆಡೇಹಳ್ಳಿ ಕಾರ್ಯಕ್ರಮದಿಂದ ಸ್ಪೂರ್ತಿಪಡೆದ ಚಿಕ್ಕಂದೂರಿನ ರೈತರು ತಮ್ಮೂರಿನಲ್ಲೂ ಹಳೆ ಭತ್ತದ ತಳಿಗಳನ್ನು ಸಂರಕ್ಷಿಸಲು ಆರಂಭಿಸಿದರು. ಬೀಜ ಸಂರಕ್ಷಣೆಗಾಗಿ

ಸಂಘ ರಚಿಸಿಕೊಂಡರು. ಸದಸ್ಯರೆಲ್ಲ ಹಸಿರು ಸಮವಸ್ತ್ರ ತೊಟ್ಟರು. ಶಿಸ್ತುಬದ್ಧವಾಗಿ ಭತ್ತದ ತಳಿಗಳನ್ನು ಬೆಳೆಸಿ, ಉಳಿಸಲು ಆರಂಭಿಸಿದರು. ಪ್ರಸ್ತುತ ಆ ಊರಿನಲ್ಲೂ ದೇಸಿ ಭತ್ತದ ತಳಿಗಳು ಸಂಗ್ರಹವಾಗಿವೆ.

– ಇದೇ ಅಲ್ಲವೇ ಮಾದರಿಯಾಗುವ ಪರಿ ಎಂದರೆ ?

ಸಂಪಾದಕರು : ಜಯಪ್ರಸಾದ್ ಬಳ್ಳೇಕೆರೆ