ವಿಶ್ವಾಸ ಹೆಚ್ಚಿಸಿದ ಕೃಷಿ ಬದುಕು

ಎಕರೆಗಟ್ಟಲೆ ಜಮೀನಿದ್ದೂ ಪಟ್ಟಣದಲ್ಲಿ ಕೂಲಿ ಅರಸಿ ಹೋಗುವವರ ಸಂಖ್ಯೆ ಹೆಚ್ಚು. ಇಂಥ ಸಂಸ್ಕೃತಿಗೆ ಫಲ್ಗುಣಿಯ ಹರೀಶ್ ಅಪವಾದ. ತನ್ನ ನಾಲ್ಕೂವರೆ ಎಕರೆ ಜಮೀನಿನಲ್ಲಿ ಪುಟ್ಟ ಪುಟ್ಟ ತಂತ್ರಜ್ಞಾನಗಳನ್ನು ಬಳಸಿಕೊಂಡು ಸುಸ್ಥಿರ ಫಸಲು ಪಡೆಯುವ ಜೊತೆಗೆ ಕೃಷಿ ತಂತ್ರಜ್ಞಾನಗಳನ್ನು ಬಳಸುತ್ತಾ ಸಾವಯವ ಕೃಷಿಯತ್ತಲೂ ಹೆಜ್ಜೆ ಹಾಕಿದ್ದಾರೆ.

ಮೂಡಿಗೆರೆ ಸನಿಹದ ಫಲ್ಗುಣಿಯ ಹರೀಶ್ ಉದ್ಯೋಗವನ್ನರಸಿ ಇನ್ನೇನು ನಗರ ಸೇರುವುದರಲ್ಲಿದ್ದರು. ಅಕಸ್ಮಾತ್ ತಂದೆಯವರ ಅಗಲುವಿಕೆ. ತಾಯಿ, ಸಹೋದರಿಯರು ಮತ್ತು ಕೃಷಿಯ   ಹೊಣೆ ಹೆಗಲೇರಿತು. ನಗರದ ಆಶೆ ಕಮರಿತು. ತಂದೆಯ ಕೃಷಿ ದಾರಿ ಅನಿವಾರ್ಯವಾಯಿತು. ಬದುಕಿನ ಈ ತಿರುವನ್ನು ಹರೀಶ್ ಗೊಣಗಾಟವಿಲ್ಲದೆ ಸ್ವೀಕರಿಸಿದರು.

ನಾಲ್ಕು ಎಕರೆ ಹನ್ನೆರಡು ಗುಂಟೆ ಕೃಷಿ ಭೂಮಿ. ಅದರಲ್ಲಿ ಸಾವಿರದೈನೂರು ಅಡಿಕೆ ಮರಗಳು, ಏಳುನೂರು ರೋಬಸ್ಟಾ ಕಾಫಿ ಮತ್ತು ಬಾಳೆ ಕೃಷಿ. ಹರೀಶ್ ತೋಟಕ್ಕಿಳಿದಾಗ ಕೃಷಿ ವಿಚಾರ ಏನೂ ಗೊತ್ತಿರಲಿಲ್ಲ. ತಂದೆಯಿಂದ ಏನೂ ಕಲಿತಿರಲಿಲ್ಲ. ಅಷ್ಟು ಆಸಕ್ತಿಯೂ ಇದ್ದಿರಲಿಲ್ಲ. ಕೃಷಿ ವಿಚಾರಗಳಲ್ಲಿ ಒಂದೊಂದೇ ಹೆಜ್ಜೆಗಳನ್ನು ಊರುವುದಕ್ಕೆ ಪ್ರಯತ್ನ.

ಜೀವನಕ್ಕಾಗಿ ಹಣ ಉಳಿಸಬೇಕೆಂಬ ಛಲ. ವಾಣಿಜ್ಯ ಬೆಳೆಯತ್ತ ಆಲೋಚನೆ. ಅಡಿಕೆ, ಕಾಫಿಯ ಜತೆ ಬೇಗನೆ ಹಣ ಬರುವ ಬಾಳೆಯನ್ನೂ ಬೆಳೆದರೆ ಹೇಗೆ? ಪತ್ರಿಕೆಯೊಂದರಲ್ಲಿ ಓದಿದ್ದ ಬಾಳೆಯ ಸಾಂದ್ರ ಬೇಸಾಯ ವಿಚಾರಗಳು ಪ್ರೇರೇಪಿಸಿತು. ಆಗಲೇ ಸಾಂದ್ರ ವಿಧಾನದಲ್ಲಿ ಬಾಳೆ ಬೆಳೆಸುತ್ತಿದ್ದ ತೋಟಗಳ ಭೇಟಿ. ಈ ಕುರಿತು ಮಾಹಿತಿ ಸಂಗ್ರಹ

ಹೈಡೆನ್ಸಿಟಿ ವಿಧಾನ ಅಂದರೆ ಒತ್ತೊತ್ತಾಗಿ ಗಿಡಗಳನ್ನು ನೆಡುವುದು. ಇತರ ಬಾಳೆ ಕೃಷಿಗಿಂತ ಭಿನ್ನ. ಗಿಡದಿಂದ ಗಿಡಕ್ಕೆ ಮೂರೂವರೆ ಅಡಿ, ಸಾಲಿಂದ ಸಾಲಿಗೆ ನಾಲ್ಕಡಿ ಸಾಲುಗಳ ತಯಾರಿ. ಮಧ್ಯೆ ನೀರಿನ ಹರಿವಿಗೆ ಕಾಲುವೆ. ಒಂದು ಎಕರೆಯಲ್ಲಿ ಸುಮಾರು 2,260 ಗಿಡಗಳು. ಹರೀಶ್ ನಾಲ್ಕು ಸಾವಿರ ಬಾಳೆ ಗಿಡಗಳನ್ನು ಎರಡು ವಿಭಾಗ ಮಾಡಿ ನೆಟ್ಟಿದ್ದಾರೆ.

ಬಾಳೆ ಹೊಂಡವನ್ನು ತೆಗೆಯಲು ಕಾರ್ಮಿಕರನ್ನು ಬಳಸಿಕೊಂಡಿದ್ದರೆ ಇಷ್ಟಕ್ಕೆ ಹದಿನೈದು ಸಾವಿರ ವೆಚ್ಚವಾಗುತ್ತಿತ್ತು. ನಾನು ಟ್ರಾಕ್ಟರ್ ಮೂಲಕ ಹೊಂಡ ಮಾಡಿದ್ದರಿಂದ ಸಾವಿರದೈನೂರು ರೂಪಾಯಿ ವೆಚ್ಚವಾಗಿದೆ ಎನ್ನುತ್ತಾರೆ.

ನಾಟಿ ಮಾಡಿದ 7-8 ತಿಂಗಳಿಗೆ ಕೊಯ್ಲಿಗೆ ಸಿದ್ಧ. ಮೂವತ್ತು ದಿವಸಗಳ ಅಂತರದಲ್ಲಿ ರಸಗೊಬ್ಬರ ಉಣಿಕೆ. ಎದುರುಬದುರು ಗೊನೆ ಬಿಡುವಂತೆ ಗಿಡಗಳನ್ನು ನೆಟ್ಟಿರುವುದರಿಂದ ಪ್ರತೀ ಗೊನೆಗೂ ಆಧಾರ ಕೊಡುವ ಕೆಲಸವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಗೊನೆನಿಂದ ಗೊನೆಗೆ ಹಗ್ಗದ ಸಹಾಯದಿಂದ ಆಧಾರ.

ಒಂದೊಂದು ಬಾಳೆಗೊನೆ ಏನಿಲ್ಲವೆಂದರೂ ಸರಾಸರಿ ಇಪ್ಪತ್ತು ಕಿಲೋ ತೂಗುತ್ತದೆ. ಹೆಚ್ಚು ಗೊಬ್ಬರ ಉಣಿಸಿದರೆ ಗೊನೆಯ ಸೈಜ್ ದೊಡ್ಡದಾಗುತ್ತದೆ. ಮಾರಾಟ ಮಾಡಲು ಕಷ್ಟ.  ಸಣ್ಣ ಅಂಗಡಿಯವರಿಗೆ ಇಪ್ಪತ್ತು ಕಿಲೋ ತೂಗುವ ಗೊನೆ ಓಕೆ. ದೊಡ್ಡ ಗೊನೆಯಾದರೆ ನಾನು ಬೆಂಗಳೂರಿಗೆ  ಒಯ್ಯಬೇಕಷ್ಟೇ. ಸಾಗಾಟ ಬೇರೆ ತಲೆನೋವು. ಬೆಲೆ ಸಿಗಬಹುದೆಂಬ ಗ್ಯಾರಂಟಿ ಇಲ್ಲ ಎನ್ನುತ್ತಾರೆ ಹರೀಶ್. ಸ್ಥಳೀಯ ವ್ಯಾಪಾರಸ್ಥರು ಅಲ್ಲದೆ ಮಂಗಳೂರಿನವರೆಗೂ ವ್ಯಾಪಾರ ಕುದುರಿಸಿಕೊಂಡಿದ್ದಾರೆ. ಶೃಂಗೇರಿ, ಬಾಳೆಹೊನ್ನೂರಿಗೆ ಚಿಪ್ಸ್‌ಗಾಗಿ ಗೊನೆ ಒಯ್ಯುತ್ತಾರಂತೆ.

ಇನ್ನೇನು ತಿಂಗಳೊಳಗೆ ಪೂರ್ತಿ ಕಟಾವ್ ಮುಗಿದಿರುತ್ತದೆ. ಗೊನೆಬಿಟ್ಟ ಗಿಡದ ಬುಡದಲ್ಲಿ ಚಿಗುರೊಡೆದ ಕಂದನ್ನು ಮುಂದಿನ ಬೆಳೆಗಾಗಿ ಬೆಳೆಸುತ್ತಾರೆ. ಗೊನೆ ಕಡಿದು ಬಿದ್ದ ಗಿಡವನ್ನು ಅಲ್ಲೇ ತುಂಡರಿಸಿ ಹಾಕುತ್ತೇನೆ. ಅದು ಕೊಳೆತು ಕಾಂಪೋಸ್ಟ್ ಆಗುತ್ತದೆ ಎನ್ನುವ ಹರೀಶ್, ಇಪ್ಪತ್ತು ಕಿಲೋ ತೂಗುವ ಗೊನೆಗೆ ಈಗಿನ ಮಾರುಕಟ್ಟೆ ದರದಂತೆ ನೂರು ರೂಪಾಯಿ ಸಿಗಬೇಕು. ಅದರಲ್ಲಿ 30-35 ರೂಪಾಯಿ ಖರ್ಚು ಬಂದರೂ, ಉಳಿದ 65-70 ರೂಪಾಯಿ ಲಾಭ ಎನ್ನಲು ಅವರಿಗೆ ಖುಷಿ.

ಬಾಳೆ ಗಿಡ ಚಿಕ್ಕದಾಗಿದ್ದಾಗ ಅದರ ಮಧ್ಯೆ ಮಿಶ್ರ ಕೃಷಿ. ಒಂದು ಭಾಗದಲ್ಲಿ ಬೀನ್ಸ್, ಮತ್ತೊಂದರಲ್ಲಿ  ಕ್ಯಾಪ್ಸಿಕಮ್ (ದೊಣ್ಣೆ ಮೆಣಸು). ಒಂದೂವರೆ ಟನ್ ಕ್ಯಾಪ್ಸಿಕಮ್ ಇಳುವರಿ ಸಿಕ್ತು. ಎಂಭತ್ತೇಳು ಸಾವಿರ ಲಾಭ ಬಂತು. ಇದರಲ್ಲಿ ಮೂವತ್ತು ಸಾವಿರ ಖರ್ಚು ಬಿಟ್ಟರೆ ಉಳಿದುದು ಕಿಸೆಗೆ. ಬೀನ್ಸ್ ಒಂದುಮುಕ್ಕಾಲು ಟನ್ ಇಳುವರಿ ಬಂದಿತ್ತು. ಚಿಕ್ಕಮಗಳೂರು ಎಪಿಎಂಸಿ ಮಾರ್ಕೆಟ್‌ನಲ್ಲಿ 14-20 ರೂಪಾಯಿ ತನಕ ದರ ಸಿಕ್ಕಿತ್ತು ಎನ್ನುವಾಗ  ಹರೀಶ್ ಖುಷ್. ಇವೆಲ್ಲಾ 3-4 ತಿಂಗಳ ಉಪ ಕೃಷಿ.

ಸರಕಾರದ ಸಾವಯವ ಕೃಷಿ ಯೋಜನೆಯನ್ನು ಅನುಷ್ಠಾನ ಮಾಡಲು ಭೂಮಿ ಸುಸ್ಥಿರ ಕೃಷಿ ಅಭಿವೃದ್ಧಿ ಸಂಸ್ಥೆಯು ಜವಾಬ್ದಾರಿ ಹೊತ್ತು, ಫಲ್ಗುಣಿಯಲ್ಲಿ ಕಾರ್ಯವೆಸಗುತ್ತಿದ್ದಾಗ, ಹರೀಶ್‌ಗೆ ಸಾವಯವದತ್ತ ಒಲವು ಮೂಡಿತು. ನಾಲ್ಕು ಎಕರೆಯನ್ನು ಪೂರ್ತಿ ಸಾವಯವದತ್ತ ಬದಲಾಯಿಸಿದರೆ ಇಳುವರಿ ಕೈಕೊಟ್ಟರೆ ಎಂಬ ಭಯ. ಸದ್ಯ ಒಂದೂವರೆ ಎಕರೆಯಲ್ಲಿ ಕಾಫಿ ಮತ್ತು ಅಡಿಕೆಯನ್ನು ಸಾವಯವ ವಿಧಾನದಲ್ಲಿ ಬೆಳೆಸುತ್ತಿದ್ದಾರೆ.

ದನದ ಕೊಟ್ಟಿಗೆಗೂ, ಸಾವಯವ ಕೃಷಿ ಮಾಡುವ ತೋಟಕ್ಕೆ ಸುಮಾರು ಒಂದೂವರೆ ಕಿಲೋಮೀಟರ್ ಅಂತರ. ಹಟ್ಟಿಯಲ್ಲಿ ಉತ್ಪಾದನೆಯಾದ ಗೊಬ್ಬರವನ್ನೋ, ತಯಾರಾದ ಕಾಂಪೋಸ್ಟನ್ನೋ ಸಾಗಿಸುವುದು ಶ್ರಮಬೇಡುವ ಕೆಲಸ. ಅದಕ್ಕೊಂದು ಉಪಾಯ ಕಂಡುಕೊಂಡಿದ್ದಾರೆ. ತೋಟ ಪ್ರವೇಶಿಸುವ ದಾರಿ ಪಕ್ಕ ಗೊಬ್ಬರದ ಗುಂಡಿಗಳನ್ನು ಮಾಡಿದ್ದಾರೆ. ಬಾಳೆತ್ಯಾಜ್ಯ, ಕೃಷಿ ತ್ಯಾಜ್ಯಗಳು ಇಲ್ಲಿ ಕಾಪೋಸ್ಟ್ ಆಗುತ್ತವೆ. ಇಂತಹುದೇ ಗೊಬ್ಬರದ ಹೊಂಡಗಳು ತೋಟದೊಳಗೂ ಇದೆ. ಹಟ್ಟಿ ತ್ಯಾಜ್ಯಕ್ಕೆ ಬೇರೊಂದು ಹೊಂಡ. ಪೈಪ್ ಮೂಲಕ ಸ್ಲರಿಯನ್ನು ಗಿಡಗಳ ಬುಡಕ್ಕೆ ಹಿಡಿಯುವಂತಹ ವ್ಯವಸ್ಥೆ. ಸ್ವಲ್ಪ ಇಳಿಜಾರಾದ ಭೂಮಿಯಾದ್ದರಿಂದ ಸುಲಭದಲ್ಲಿ ತ್ಯಾಜ್ಯ ಪೈಪ್ ಮೂಲಕ ಹರಿಯುತ್ತದೆ. ಎರೆಗೊಬ್ಬರದ ಹೊಂಡಗಳೂ ಇವೆ.

ಕಳೆದ ಮೂರು ವರುಷಗಳಿಂದ ಎಂಟು ಟನ್ ಎರೆಗೊಬ್ಬರ, ಆರು ಟನ್ ಹಸಿರೆಲೆಗೊಬ್ಬರ, ಇಪ್ಪತ್ತನಾಲ್ಕು ಕ್ವಿಂಟಾಲ್ ಕೊಟ್ಟಿಗೆ ಗೊಬ್ಬರ ಸಿಕ್ಕಿದೆ ಎಂಬ ಲೆಕ್ಕವನ್ನು ಕೊಡುವ ಹರೀಶ್, ಸಾಮಾನ್ಯ ಪದ್ದತಿಯಲ್ಲಿ ಕೃಷಿ ಮಾಡಿದರೆ ಉತ್ಪನ್ನಗಳಿಗೆ ಮಾರ್ಕೆಟ್ ಮನೆಬಾಗಿಲಿಗೆ ಬರುತ್ತದೆ. ಸಾವಯವದಲ್ಲಿ ಸ್ವಲ್ಪ ಖರ್ಚು ಹೆಚ್ಚಾಗುತ್ತದೆ. ಮಾರುಕಟ್ಟೆಗೆ ಹುಡುಕಾಡಬೇಕು ಎನ್ನುತ್ತಾರೆ.

ಅಮ್ಮ ಚಂದ್ರಾವತಿ, ಅಜ್ಜಿ, ಅಕ್ಕ ಮತ್ತು ತಂಗಿ – ಹರೀಶರ ಕುಟುಂಬ. ಅಕ್ಕ ಎಂ.ಬಿ.ಎ. ಓದಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ತಂಗಿ ರಾಜಧಾನಿಯಲ್ಲಿ ಸಿಎ ಅಭ್ಯಾಸ ಮಾಡುತ್ತಿದ್ದಾರೆ. ಮನೆಯ ಅಷ್ಟೂ ಜವಾಬ್ದಾರಿಯನ್ನು ಹರೀಶ್ ಒಬ್ಬರ ಕೃಷಿ ಸಂಪಾದನೆ ಭರಿಸುತ್ತದೆ. 2002ರಿಂದ ಕೃಷಿಯ ಸಂಪರ್ಕಕ್ಕೆ ಬಂದ ಹರೀಶ್‌ರಿಗೆ ಈಗ ಆತ್ಮವಿಶ್ವಾಸ ಬಂದಿದೆ.

ಸಂಪಾದಕರು : ನಾ. ಕಾರಂತ ಪೆರಾಜೆ