ಗೊಬ್ಬರದ ತೊಟ್ಟಿ ಸುತ್ತ ಸಮೃದ್ಧ ಕೈ ತೋಟ

ಕೈ ತೋಟ ಮಾಡಲು ಜಾಗವಿಲ್ಲ ಎನ್ನುವವರಿಗೆ ಯೆಡೇಹಳ್ಳಿಯ ಶಿವಪ್ಪ ಜಾಗ ತೋರಿಸುತ್ತಾರೆ. ಅವರು ತಮ್ಮ ಗೊಬ್ಬರದ ಗುಂಡಿ ಸುತ್ತಲೂ ಕೈತೋಟ ಮಾಡಿದ್ದಾರೆ.

ಮನೆ ಹಿಂದೋ, ಮುಂದೋ ಕೈ ತೋಟ ಮಾಡ್ಕೊಳ್ಳಿ ಅಂತ ಯಾರಿಗಾದ್ರೂ ಪುಕ್ಕಟ್ಟೆ ಸಲಹೆ ಕೊಟ್ರೆ, ನಾವಿರೋದಕ್ಕೇ ಜಾಗವಿಲ್ಲ. ಇನ್ನು ತರಕಾರಿ ಎಲ್ಲಿ ಬೆಳೆದುಕೊಳ್ಳೋದು ಎನ್ನುತ್ತಾರೆ. ಇನ್ನು ಕೆಲವರು ನನಗೆ ತರಕಾರಿ ಬೆಳೆಯೋದಕ್ಕೆ ಇಷ್ಟ ರೀ, ಆದ್ರೆ ಏನ್ಮಾಡ್ಲಿ, ಮುಂದೆ ಗಾಡಿ ಪಾರ್ಕ್ ಮಾಡ್ತಾರೆ. ಹಿಂದೆ ಆಕಳು ಕೊಟ್ಟಿಗೆ, ಅತ್ತಕಡೆ ಕೊಟ್ಟಿಗೆ ಗೊಬ್ಬರ, ಇತ್ತ ಕಡೆ ಹ್ಲುಲಿನ ಬವಣೆ.. ಇನ್ನೆಲ್ಲಿ ಬೆಳೆಯೋದು.. ಅಂತ ಏನೇನೋ ನೆಪ ಹೇಳ್ತಾರೆ.

ಆದರೆ ಸಕಲೇಶಪುರ ತ್ಲಾಲೂಕು ಯೆಡೇಹಳ್ಳಿಯ ಶಿವಪ್ಪ ಹೀಗೆ ಸೋಗು ಹೇಳುವವರಿಗಿಲ್ಲಿ ಉತ್ತರ ನೀಡುವಷ್ಟರಮಟ್ಟಿಗೆ ಪುಟ್ಟ ಜಾಗದಲ್ಲಿ ಏಳೆಂಟು ವಿಧದ ತರಕಾರಿ ಬೆಳೆದ್ದಿದಾರೆ. ಅದು ಎಲ್ಲಿ ಗೊತ್ತಾ? ಎರೆಗೊಬ್ಬರದ ತೊಟ್ಟಿ ಸುತ್ತ.

ತರಕಾರಿ ಬೆಳೆದ ಪರಿ :

ಶಿವಪ್ಪ ಅವರಿಗೆ ಇರುವುದು 10 ಗುಂಟೆ ಜಮೀನು. ಅದರಲ್ಲಿ ವಾಸಕ್ಕೆ ಮನೆ, ಆಕಳುಗಳಿಗೆ ಕೊಟ್ಟಿಗೆ. ಉಳಿದ ಸ್ಥಳದಲ್ಲಿ ಒಂದಷ್ಟು ಕಾಫಿ, ಕಾಳುಮೆಣಸಿನ ಬಳ್ಳಿಗಳು, ಹಣ್ಣಿನ ಗಿಡಗಳಿವೆ. ಇವೆಲ್ಲದರ ನಡುವೆ ಇರುವ ಗೊಬ್ಬರದ ಗುಂಡಿಯ ಸುತ್ತಾ ಹತ್ತಾರು ವಿಧದ ತರಕಾರಿ ಗಿಡಗಳನ್ನು ಬೆಳೆಸಿದ್ದಾರೆ.

ಶಿವಪ್ಪ ಕುಟುಂಬಕ್ಕೆ ಕೈತೋಟದ ಐಡಿಯಾ ಹೊಳೆದಿದ್ದು ಮೂರು ವರ್ಷದ ಹಿಂದೆ. ಆಗ ಕೃಷಿ ಇಲಾಖೆ ನೆರವಿನೊಂದಿಗೆ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ ಸಾವಯವ ಗ್ರಾಮ ಯೋಜನೆಯನ್ನು ಯೆಡೇಹಳ್ಳಿಯಲ್ಲಿ ಅನುಷ್ಠಾನಗೊಳಿಸಲು ಸಿದ್ಧತೆ ನಡೆಸಿತ್ತು. ಪ್ರಾಥಮಿಕವಾಗಿ ಶಿವಪ್ಪನವರಂತಹ ಫಲಾನುಭವಿಗಳಿಗೆ ಹಸಿರೆಲೆ ಗೊಬ್ಬರ, ಎರೆಗೊಬ್ಬರ ಘಟಕ ನಿರ್ಮಾಣದ ತರಬೇತಿ ನೀಡಿತು. ಘಟಕಗಳ ಸ್ಥಾಪನೆಗೆ ಆರ್ಥಿಕ ಸಹಾಯ, ತರಬೇತಿ, ಅಗತ್ಯ ತಂತ್ರಜ್ಞಾನವನ್ನೂ ನೀಡಿತು. ಜೊತೆಗೆ ಮಲೆನಾಡಿನ ಕೈತೋಟ ಸಂಸ್ಕೃತಿ ಪುನರುಜ್ಜೀವನಗೊಳಿಸಿ ಹೊರಗಿನ ತರಕಾರಿ ಅವಲಂಬನೆ ತಪ್ಪಿಸುವುದಕ್ಕಾಗಿ ಮೂವತ್ತಕ್ಕೂ ಅಧಿಕ ಸ್ಥಳೀಯ ತರಕಾರಿ ಬೀಜಗಳನ್ನು ವಿತರಿಸಿತು. ಸ್ಥಳ ಉಳ್ಳವರು ಮನೆಯ ಅಂಗಳದಲ್ಲಿ ವ್ಯವಸ್ಥಿತ ಕೈತೋಟ ನಿರ್ಮಿಸಿಕೊಂಡರು. ಶಿವಪ್ಪ ಅವರಿಗೆ ಜಾಗದ ಕೊರತೆ. ಅವರಿಗೆ ನೆನಪಾದದ್ದು ಎರೆಗೊಬ್ಬರದ ತೊಟ್ಟಿಯ ಸುತ್ತವಿರುವ ಖಾಲಿ ಸ್ಥಳ.

ಎರಡನೇ ಯೋಚನೆ ಮಾಡದೇ ಗೊಬ್ಬರದ ಗುಂಡಿಯ ಸುತ್ತ ಸಂಸ್ಥೆಯವರು ಕೊಟ್ಟ ಬದನೆ, ಟೊಮ್ಯಾಟೋ, ಹಸಿಮೆಣಸಿನಕಾಯಿ, ಸೊಪ್ಪು, ಬಸಳೆ, ಬಳ್ಳಿ ಬೀನ್ಸ್ ಹೀಗೆ ತರಹೇವಾರಿ ತರಕಾರಿ ಬೀಜಗಳನ್ನು ಊರಿದರು(ನಾಟಿ ಮಾಡಿದರು).  ಮೂರು ತಿಂಗಳು ಕಳೆಯುವುದರಲ್ಲಿ ಅತ್ತ ಗುಂಡಿಯಲ್ಲಿ ಗೊಬ್ಬರ ಸಿದ್ಧ ಆಯ್ತು. ಇತ್ತ ಸುತ್ತಲೂ ನಾಟಿ ಮಾಡಿದ್ದ ತರಕಾರಿಗಳು ಕಾಯಿ ಬಿಡಲಾರಂಭಿಸಿದರು !

ನಾವು ತರಕಾರಿಗೇ ಅಂತ ಪ್ರತ್ಯೇಕವಾಗಿ ಗೊಬ್ಬರ ಕೊಟ್ಟಿಲ್ಲ. ನೀರು ಕೊಟ್ಟಿಲ್ಲ. ಗೊಬ್ಬರ ಕೈಯಾಡುವಾಗ, ನೀರು ಚಿಮುಕಿಸುವಾಗಷ್ಟೇ ತರಕಾರಿ ಗಿಡಗಳಿಗೂ ಹಾಕಿದ್ದೇವೆ. ರೋಗ, ಕೀಟ ಅಂತ ಗಮನಿಸಿಲ್ಲ ಎನ್ನುವ ಶಿವಪ್ಪನವರು ಪ್ರತಿ ವಾರ ಪೇಟೆಗೆ ಹೋಗಿ ತರಕಾರಿ ತರುವುದು ತಪ್ಪಿತು. ಪ್ರತಿ ನಿತ್ಯ ತಾಜಾ ತರಕಾರಿ ಲಭ್ಯವಾಯಿತು. 150 ರೂಪಾಯಿ ದುಡ್ಡು ಉಳಿಯಿತು ಎಂದು ಲೆಕ್ಕಚಾರ ಕೊಡುತ್ತಾರೆ.

ಶಿವಪ್ಪ ಅವರ ಶಾಶ್ವತ ಎರೆಗೊಬ್ಬರದ ಗುಂಡಿಯ ಸುತ್ತಾ ಈಗ ಕಾಯಂ ತರಕಾರಿ ತೋಟ ನಿರ್ಮಾಣವಾಗಿದೆ. ವರ್ಷಪೂರ್ತಿ ಒಂದಲ್ಲ ಒಂದು ತರಕಾರಿ ಲಭ್ಯವಾಗುತ್ತಿದೆ.

ಸಂಪಾದಕರು : ಜಯಪ್ರಸಾದ್ ಬಳ್ಳೇಕೆರೆ