ಕೈತೋಟದಿಂದ ಸ್ವಾವಲಂಬಿಯಾದ ಖಲೀಲ್

ಜಮೀನಿದ್ದರೂ ತರಕಾರಿ ಕೊಳ್ಳುವ ಪರಿ ಈಗಿನ ರೈತರದ್ದು. ರೈತರಾಗಿಯೂ ತರಕಾರಿ ಕೊಳ್ಳುವುದು ನಿಜಕ್ಕೂ ಅವಮಾನ ಎಂದು ಭಾವಿಸಿದ ಫಲ್ಗುಣಿಯ ರೈತ ಖಲೀಲ್ ಒಂದೂವರೆ ವರ್ಷದಲ್ಲಿ ತಮ್ಮ ಮನೆಯ ಸುತ್ತ ಹತ್ತಾರು ತರಹದ ತರಕಾರಿ ಬೆಳೆದು ಸ್ವಾವಲಂಬಿಯಾಗಿದ್ದಾರೆ. ಆಗಸ್ಟ್ 22ನ್ನು ವಿಶ್ವ ಕೈತೋಟ ದಿನವನ್ನಾಗಿ ಆಚರಿಸುವ ಈ ಸಂದರ್ಭದಲ್ಲಿ ಖಲೀಲ್ ರಂತ ರೈತರು ಹಲವರಿಗಾದರೂ ಮಾದರಿಯಾಗಲಿ.

ಸಾರ್, ಎರಡೂವರೆ ವರ್ಷದ ಹಿಂದೆ ನಾವು ತರಕಾರಿಗಾಗಿ ಬಹಳ ಕಷ್ಟ ಪಡುತ್ತಿದ್ದವು. ಅಷ್ಟೇ ಅಲ್ಲ,  ಒಂದು ವಾರಕ್ಕೆ ಕನಿಷ್ಠ ಅಂದ್ರೂ 100 ರೂ. ತರಕಾರಿಗೆ ತೆಗೆದಿಡಬೇಕಿತ್ತು. ಈಗ ಹಾಗಿಲ್ಲ. ನಮ್ಮ ಮನೆ ಸುತ್ತಲೂ ಸಾವಿರಾರು ರೂಪಾಯಿಯನ್ನು ವರ್ಷಪೂರ್ತಿ ತರಕಾರಿ ಬೆಳೆಯುತ್ತಿದ್ದೇವೆ. ಕಳೆದ ಆರು ತಿಂಗಳಿಂದ ನನ್ನ ಆದಾಯದಲ್ಲಿ ಕಾಲು ಭಾಗ ತರಕಾರಿಯಿಂದ ಬಂದಿದೆ

-ಬಹಳ ಹೆಮ್ಮೆಯಿಂದ ಈ ಮಾತನ್ನು ಉದ್ಘರಿಸುವಾಗ ಕಲೀಲ್ ಹಾಗೂ ಪತ್ನಿ ಸುರೆಯಬಾನು ಮುಖದಲ್ಲಿ ಸಣ್ಣದೊಂದು ಮಂದಹಾಸ, ಸಮಾಧಾನ, ಗೆಲುವಿನ ಗೆರೆ. ಆದರೆ ಹತ್ತು ವರ್ಷದ ಹಿಂದೆ ಈ ಕುಟುಂಬ ತರಕಾರಿಗಾಗಿ ಪರದಾಡುತ್ತಿದ್ದ ಕಥೆ ಕೇಳಿದರೆ ಇವತ್ತಿನ ಬೆಳವಣಿಗೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.

ಹತ್ತು ವರ್ಷಗಳ ಹಿಂದೆ

ಕಲೀಲ್, ಮೂಡಿಗೆರೆ ತಾಲ್ಲೂಕಿನ ಫಲ್ಗುಣಿಯ ಸಣ್ಣ ರೈತ. ಮೂವರು ಸದಸ್ಯರ ಇವರ ಕುಟುಂಬದ ಹಸಿವು ನೀಗಿಸುತ್ತಿರುವುದು ಕೇವಲ ಒಂದೂವರೆ ಎಕರೆ ಜಮೀನು. ಇಷ್ಟು ಪುಟ್ಟ ವಿಸ್ತೀರ್ಣದ ಜಮೀನಿನಲ್ಲಿ ವೈವಿಧ್ಯಮಯ ಬೆಳೆ ಬೆಳೆದಿದ್ದಾರೆ. ಇವರ ಜಮೀನಿನಲ್ಲಿ ಕಾಫಿ, ಮೆಣಸು, ಭತ್ತ ಬಾಳೆ, ಅಡಿಕೆ, ತೆಂಗು ಜೊತೆಗೆ ಅಲ್ಲಲ್ಲಿ ಬಳ್ಳಿ ತರಕಾರಿಗಳಿವೆ.

ಇದರ ಜೊತೆಗೆ ಹೆಚ್ಚುವರಿ ಆದಾಯಕ್ಕಾಗಿ ನೆರೆಹೊರೆಯವರಿಂದ ಜಮೀನನ್ನು ಗುತ್ತಿಗೆ (ಗೇಣಿ) ಪಡೆದು ಭತ್ತದ ಕೃಷಿ ಮಾಡುತ್ತಾರೆ. ಒಂದು ಎಕರೆಗೆ ಕನಿಷ್ಠ 15ರಿಂದ 20 ಚೀಲ ಭತ್ತ ಬೆಳೆದರೆ, ಆರು ಪಲ್ಲದಷ್ಟು ಭತ್ತವನ್ನು ಗುತ್ತಿಗೆ ಕೊಟ್ಟ ಮಾಲೀಕರಿಗೆ ಹಿಂದಿರಿಗಿಸುತ್ತಾರೆ.

ಇಷ್ಟೆಲ್ಲ ಕೃಷಿ ವೈವಿಧ್ಯದ ಬದುಕಾಗಿದ್ದರೂ ಕಳೆದ ಹತ್ತು ವರ್ಷಗಳಿಂದ ಈ ಕುಟುಂಬ ತರಕಾರಿಗಾಗಿ ದೂರದ ಪಟ್ಟಣವನ್ನೇ ಆಶ್ರಯಿಸಬೇಕಿತ್ತು. ದುಡಿದ ಹಣದಲ್ಲಿ ಒಂದು ವಾರಕ್ಕೆ ಕನಿಷ್ಠ 100 ರೂಪಾಯಿಯಷ್ಟು ಹಣವನ್ನು ತರಕಾರಿಗೆ ಖರ್ಚು ಮಾಡುತ್ತಿತ್ತು. ಇಷ್ಟು ಖರ್ಚು ಮಾಡಿದರೂ ತಾಜಾ ಹಾಗೂ ಪೌಷ್ಟಿಕ ತರಕಾರಿ ಮಾತ್ರ ಲಭ್ಯವಾಗುತ್ತಿರಲಿಲ್ಲ.

ಬಹಳ ಹಿಂದೆ ಇದೇ ಖಲೀಲ್ ಕುಟುಂಬದವರು ಗೆಡ್ಡೆ ಕೋಸು, ಸೊಪ್ಪು, ತೊಂಡೆಯಂತ ತರಕಾರಿ­ಗಳನ್ನು ಬೆಳೆಯುತ್ತಿದ್ದರು. ದುಬಾರಿ ಒಳಸುರಿ, ಸಮರ್ಪಕ ಮಾರುಕಟ್ಟೆ ಕೊರತೆ ಜೊತೆಗೆ ಬೇಸಿಗೆಯಲ್ಲಿ ಅತಿಯಾದ ನೀರಿನ ತಾಪತ್ರಯದಿಂದಾಗಿ ತರಕಾರಿ ಕೃಷಿಯನ್ನು ನಿಲ್ಲಿಸಿಬಿಟ್ಟಿದ್ದರು. ಹಾಗಾಗಿ ತರಕಾರಿಯನ್ನು ಹಣಕೊಟ್ಟು ಕೊಳ್ಳುತ್ತಿದ್ದರು ಒಬ್ಬ ರೈತನಾಗಿ, ಇಷ್ಟು ಜಮೀನಿದ್ದೂ ತರಕಾರಿ ಕೊಳ್ಳಬೇಕಲ್ಲ ಎಂಬ ನೋವು ಖಲೀಲ್ ಕುಟುಂಬಕ್ಕಿತ್ತು.

ಈಗ ಏನಾಗಿದೆ?

ಹೀಗಿದ್ದಾಗ, ಎರಡೂವರೆ ವರ್ಷಗಳ ಹಿಂದೆ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ ಫಲ್ಗುಣಿ ಸುತ್ತ ಮುತ್ತ ಕೃಷಿ ಇಲಾಖೆಯ ಸಹಯೋಗದಲ್ಲಿ ಸಾವಯವ ಗ್ರಾಮ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಯಿತು. ಈ ಯೋಜನೆಯಡಿ ಪ್ರತಿಯೊಬ್ಬ ಫಲಾನುಭವಿಗೂ ಅವರ ಅಂದದ ಮನೆಗೊಂದು ಚಂದದ ಕೈತೋಟ ನಿರ್ಮಿಸಲು ಪ್ರೇರೇಪಿಸಿತು. ನಂತರ ಉಚಿತವಾಗಿ ತರಕಾರಿ ನಾಟಿ ಬೀಜ ವಿತರಿಸಿತು. ಪ್ರತಿಯೊಬ್ಬರಿಗೂ ಎರೆಗೊಬ್ಬರ ತಯಾರಿಕೆ, ಹಸಿರೆಲೆ ಗೊಬ್ಬರ ಉತ್ಪಾದನೆ ಕುರಿತು ತರಬೇತಿ ನೀಡಿತು. ಕೃಷಿ ಪ್ರವಾಸ, ಹಲವು ತರಬೇತಿಗಳ ಮೂಲಕ ಕೈತೋಟದ ಬಗ್ಗೆ ಮಾಹಿತಿ ನೀಡಿತು.

ವಿಶ್ವ ಕೈತೋಟ ದಿನಾಚರಣೆಯ ಸಂದರ್ಭದಲ್ಲಿ ಇಡೀ ಊರಿನಲ್ಲೇ ಕೈತೋಟದ ಜಾಥ ಏರ್ಪಡಿಸಿತು. ಈ ಎಲ್ಲ ಯೋಜನೆ ಲಾಭವನ್ನು ಹೆಚ್ಚಾಗಿ ಪಡೆದ ಖಲೀಲ್ ಕುಟುಂಬ ಭೂಮಿ ಸಂಸ್ಥೆ ಕೊಟ್ಟ ನಾಟಿ ತರಕಾರಿ ಬೀಜಗಳನ್ನು ತಮ್ಮ ಮನೆಯ ಅಂಗಳದಲ್ಲಿ ಬಿತ್ತಿದರು. ಯೋಜನೆಯಡಿ ನಿರ್ಮಿಸಿದ ಎರೆಹುಳು ಗೊಬ್ಬರದ ಘಟಕದಿಂದಲೇ ಗೊಬ್ಬರ ಬಳಸುತ್ತಿದ್ದರಿಂದ ಒಳಸುರಿ ಖರ್ಚು ಶೂನ್ಯವಾಯಿತು.

ಈಗ ಯೋಜನೆ ಆರಂಭವಾಗಿ ಎರಡು ವರ್ಷಗಳಾಗಿವೆ. ಕಲೀಲ್ ಮನೆಯ ಅಂಗಳದಲ್ಲಿ ವೈವಿಧ್ಯಮಯ ನಾಟಿ ತರಕಾರಿಗಳು ಮೇಳೈಸಿವೆ. ತೊಂಡೆ, ಮೆಣಸು, ಅವರೆ, ಚಪ್ಪರದ ಅವರೆ, ಅಲಸಂದೆ, ಹೀರೇಕಾಯಿ, ಅರಿವೆ ಸೊಪ್ಪು, ಬೀನ್ಸ್, ಹಾಲು ಸೋರೆ, ಕುಂಬಳಕಾಯಿ, ಅನಾನಸ್, ಶುಂಠಿ ಹಾಗೂ ಪರಂಗಿ (ಪಪ್ಪಾಯ) ಗಿಡಗಳು ಭರಪೂರ ಫಲ ನೀಡುತ್ತಿವೆ.

ಕಳೆದ ಒಂದು ವರ್ಷದಲ್ಲಿ 100 ಹಾಲು ಸೋರೆ ಬೆಳೆದು, 1000 ರೂಪಾಯಿ ಗಳಿಸಿದ್ದಾರೆ ಖಲೀಲ್. ಇದರ ಜೊತೆಗೆ ಹತ್ತು ಕುಂಬಳ, 30 ಕೆಜಿ ಗೆಣಸು, 200 ಪಪ್ಪಾಯಿ, 30 ಕೆಜಿ ತೊಂಡೆ, 50 ಕೆಜಿ ಬದನೆಕಾಯಿ­(ಮೊಳಬದನೆ), 20 ಕೆಜಿ ಅವರೆಕಾಯಿ, 20 ಕೆಜಿ ಚಪ್ಪರದ ಅವರೆ, 5 ಕೆ.ಜಿ ಅಲಸಂದೆ, 1 ಕೆ.ಜಿ ಹೀರೇಕಾಯಿ,
25 ಕೆ.ಜಿ ಬೀನ್ಸ್… ಹೀಗೆ ತಾವು ಮಾರಾಟ ಮಾಡಿದ ತರಕಾರಿಯ ಪಟ್ಟಿಯನ್ನು ಅವರು ಬಿಚ್ಚಿಡುತ್ತಾರೆ. ಇವುಗಳ ಜೊತೆಗೆ ಬೆಳೆಯುವ ಸೊಪ್ಪು ಹಾಗೂ ಬಳ್ಳಿ ತರಕಾರಿಗಳ ಮಾರಾಟ ಲೆಕ್ಕಕ್ಕೇ ಸಿಗೋದಿಲ್ಲ. ನಾವು ಬೆಳೆದಿದ್ದೆಲ್ಲವನ್ನೂ ಮಾರುವುದಿಲ್ಲ. ಮೊದಲು ನಮಗೆ ಸಾಕಾಗುವಷ್ಟು ಇಟ್ಟುಕೊಂಡು, ಉಳಿದದ್ದನ್ನು ಮಾರಾಟ ಮಾಡುತ್ತೇವೆ ಎನ್ನುತ್ತಾರೆ ಖಲೀಲ್.

ಅಪ್ಪಟ ಸಾವಯವ ಕೈತೋಟ

ಮೊದಲು ರಾಸಾಯನಿಕ ಗೊಬ್ಬರ, ಹೈಬ್ರಿಡ್ ಬೀಜಕ್ಕೆ ಸಿಕ್ಕಾಪಟ್ಟೆ ದುಡ್ಡು ಸುರಿತಿದ್ವಿ. ಅದೆಷ್ಟು ಗೊಬ್ಬರ ಹಾಕಿದ್ರೂ ಸಾಕಾಗ್ತಿರಲಿಲ್ಲ. ಜೊತೆಗೆ ತರಕಾರಿಗಳಿಗೆ ತುಂಬಾ ರೋಗ-ಕೀಟ ಬಾಧೆಯಿತ್ತು. ಈಗ ರಾಸಾಯನಿಕ ಗೊಬ್ಬರ ಹಾಕೋದಿಲ್ಲ. ನಮ್ಮ ಮನೆಯಲ್ಲೇ ವರ್ಷಕ್ಕೆ ಒಂದು ಟನ್ ಎರೆಹುಳು ಗೊಬ್ಬರ ಸಿಗುತ್ತದೆ. ಆಕಳು ಗೊಬ್ಬರವೂ ಇದೆ. ಇವೆರಡನ್ನೇ ಬಳಸಿ ತರಕಾರಿ ಬೆಳೆಯುತ್ತಿದ್ದೇನೆ. ನೀವು ನಂಬೋದಿಲ್ಲ, ನಮ್ಮ ತರಕಾರಿ ಬೆಳೆಗೆ ರೋಗ ಬಹಳ ಕಡಿಮೆ. ನಿಮಗೆ ಗೊತ್ತಾ, ನಮ್ಮದು ಅಪ್ಪಟ ಸಾವಯವ ಕೈತೋಟ ಎಂದು ಖಲೀಲ್ ತಮ್ಮ ಹಿಂದಿನ ದಿನಗಳಿಗೂ, ಇವತ್ತಿನ ಪರಿಸ್ಥಿತಿಯನ್ನೂ ಹೋಲಿಸಿ ಮಾತನಾಡುತ್ತಾರೆ.

ಖಲೀಲ್ ಪ್ರಕಾರ ಒಳಸುರಿ ಕಡಿಮೆ ಮಾಡಿ, ಸಾವಯವ ಪದ್ಧತಿಯಲ್ಲಿ ತರಕಾರಿ ಬೆಳೆದರೆ ಬಂದಿದ್ದೆಲ್ಲವೂ ಲಾಭ. ಜೊತೆಗೆ ವೈವಿಧ್ಯಮಯ ತರಕಾರಿ ಬೆಳೆಯುವುದರಿಂದ ಕೀಟ-ರೋಗ ಬಾಧೆ ಕಡಿಮೆ. ಒಳಸುರಿ ಕಡಿತವಾದರೆ ಆದಾಯ ಹೆಚ್ಚಾಗುತ್ತದೆ. ಸಾವಯವ ಗೊಬ್ಬರಗಳನ್ನು ಬಳಸಿದರೆ ಪೌಷ್ಟಿಕ ತರಕಾರಿಗಳು ಲಭ್ಯವಾಗುತ್ತವೆ, ಆರೋಗ್ಯವೂ ಸುಧಾರಿಸುತ್ತದೆ. ಇಂಥ ಸಣ್ಣ ಸಣ್ಣ ತಂತ್ರಗಳನ್ನು ಕಲಿಸಿದ್ದು, ಲಾಭಗಳ ಬಗ್ಗೆ ಯೋಚಿಸುವಂತೆ ಮಾಡಿದ್ದು ಭೂಮಿ ಸಂಸ್ಥೆ. ಅವರು ಆರಂಭದಲ್ಲಿ ಆಯೋಜಿಸಿದ್ದ ಕೈತೋಟ ತರಬೇತಿ ಕಾರ್ಯಕ್ರಮದಿಂದ ಇಷ್ಟೆಲ್ಲ ಕಲಿತೆವು ಎಂದು ಕೈತೋಟದ ಪಾಠವನ್ನು ಅವರು ನೆನಪಿಸಿಕೊಳ್ಳುತ್ತಾರೆ.

ಖಲೀಲ್ ಕುಟುಂಬ ಈಗ ತರಕಾರಿ ಕೃಷಿಯಲ್ಲಿ ಸ್ವಾವಲಂಬಿ. ರಸ್ತೆ ಬದಿಯಲ್ಲೇ ಇವರ ತೋಟ­ವಿರುವುದರಿಂದ ಅಲ್ಲಿ ಬೆಳೆದಿರುವ ತರಕಾರಿಗಳು ಹಾದಿಯಲ್ಲಿ ಹೋಗುವ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತವೆ. ತಾಜಾ ತರಕಾರಿ ಸಿಕ್ಕರೆ ಯಾರಾದರೂ ಬಿಟ್ಟಾರುಂಟೇ. ಪಟ್ಟಣಕ್ಕೆ ಹೋಗಿ ಬರುವವರೆಲ್ಲ ಇವರ ತೋಟದ ತರಕಾರಿಯನ್ನು ಕೊಂಡುಹೋಗುತ್ತಾರೆ. ಇದರಿಂದ ಖಲೀಲ್ ಮನೆ ಅಂಗಳಕ್ಕೆ ತರಕಾರಿ ಮಾರುಕಟ್ಟೆ ಬಂದು ನಿಂತಿದೆ.

ತಾಜಾ ತರಕಾರಿ, ಆರೋಗ್ಯಕ್ಕೆ ರಹದಾರಿ

ಅಷ್ಟೇ ಅಲ್ಲ, ಮನೆ ಮುಂದಿನ ತಾಜಾ ತರಕಾರಿ ಇವರ ಕುಟುಂಬದ ಆರೋಗ್ಯವನ್ನೂ ಹೆಚ್ಚಿಸಿದೆ. ಕುಟುಂಬದ ಆರ್ಥಿಕ ಬಲವನ್ನು ಹೆಚ್ಚಿಸಿದೆ. ಸೆಪ್ಟೆಂಬರ್‌ನಿಂದ ಜೂನ್‌ವರೆಗೂ ಇವರ ತರಕಾರಿ ಅಭಿಯಾನ ನಿರಂತರ. ಮಳೆ ಸುರಿಯೋದಕ್ಕೆ ಆರಂಭವಾದ ಮೇಲೆ ತರಕಾರಿ ಅಂಗಳಕ್ಕೆ ಸ್ವಲ್ಪ ವಿಶ್ರಾಂತಿ. ಆಗ ಇವರಿಗೆ ಆಧಾರವಾಗುವುದು ಎಂಥಾ ಮಳೆಗೂ ಜಗ್ಗದ ಬಳ್ಳಿ ತರಕಾರಿಗಳು. ಮಲೆನಾಡಿನಲ್ಲಿ ವರ್ಷಕ್ಕೆ ಆರು ತಿಂಗಳು ತರಕಾರಿ ಸಿಕ್ಕರೆ ಸಾಕು. ಉಳಿದ ನಾಲ್ಕೈದು ತಿಂಗಳು ಹೇಗೊ ಬದುಕು ತಳ್ಳಬಹುದು ಎನ್ನುವುದು ಖಲೀಲ್ ಅನುಭವದ ಮಾತು.

ಆತಂಕದ ನಡುವೆಯೂ…. !

ಖಲೀಲ್ – ಸುರಯಬಾನು ಅವರದ್ದು ಮೂರೂವರೆ ಎಕೆರೆ ಜಮೀನು. ಸಾವಯವದಲ್ಲಿ ಕೈತೋಟ ಬೆಳೆಸುವ ಜೊತೆಗೆ ಕಾಫಿ-ಮೆಣಸನ್ನು ಮಿಶ್ರ ಕೃಷಿಯಾಗಿ ಬೆಳೆದಿದ್ದಾರೆ. ಸ್ವಲ್ಪ ಗದ್ದೆ ಇದೆ. ಅದರಲ್ಲಿ ದೇಸಿ ಭತ್ತದ ತಳಿ ಬೆಳೆಯುತ್ತಾರೆ. ಇಷ್ಟೆಲ್ಲ ಕೃಷಿ ಚಟುವಟಿಕೆಗಾಗಿ ಟನ್ನುಗಟ್ಟಲೆ ಎರೆಗೊಬ್ಬರ ತಯಾರಿಸುತ್ತಾರೆ. ಕಾಳುಮೆಣಸಿನ ತೋಟಗಳನ್ನು ಗುತ್ತಿಗೆ ಪಡೆಯುತ್ತಾರೆ. ಇಷ್ಟೆಲ್ಲ ಕೃಷಿ ಚಟುವಟಿ­ಕೆಯಲ್ಲಿ ತೊಡಗಿಕೊಂಡಿರುವ ಖಲೀಲ್ ಕುಟುಂಬಕ್ಕೆ ರಸ್ತೆ ವಿಸ್ತರಣೆ ಆತಂಕವಿದೆ. ರಸ್ತೆ ವಿಸ್ತರಣೆಯಾದರೆ ಅರ್ಧಕ್ಕರ್ಧ ಜಮೀನು ಹೊರಟು ಹೋಗುತ್ತದೆ. ಇಂಥ ಆತಂಕದ ನಡುವೆಯೂ ಚಿಂತೆ ಮಾಡದೇ ಕೃಷಿ ಚಟುವಟಿಕೆ ಮುಂದುವರಿಸಿದ್ದಾರೆ.

ಸಂಪಾದಕರು : ರವಿ ಮೂಡಿಗೆರೆ