ನಿವೃತ್ತ ಯೋಧನ ಸಾವಯವ ಗಾಥೆ

ಶುಂಠಿಯನ್ನು ವಿಷ ಹಾಕೇ ಬೆಳೆಯಬೇಕೆಂಬ ಯೋಚನೆ ಏಕೆ ? ಎಂದು ಪ್ರಶ್ನಿಸುತ್ತಲೇ ಸಾವಯವ ಶುಂಠಿ ಬೆಳೆದು ತೋರಿಸಿದರು ಕಾಡುಗದ್ದೆಯ ಚಿದಂಬರ. ಶುಂಠಿಯ ಯಶಸ್ಸು ಅವರ ತೋಟವನ್ನು ಹಂತ ಹಂತವಾಗಿ ಸಾವಯವ ಕೃಷಿಗೆ ವಿಸ್ತರಿಸಿತು.

ಸುರಿಯೋ ಮಳೆ ನೀರೆಲ್ಲಾ, ಇಲ್ಲೇ ನಿಲ್ಲುತ್ತದೆ. ಇನ್ನು ಕೃಷಿ ಹೇಗ್ರಿ ಮಾಡ್ತೀರಿ – ಕಾಡುಗದ್ದೆಗೆ ಬಂದವರೆಲ್ಲ ಕೃಷಿಕ ಚಿದಂಬರ ಅವರಿಗೆ ಇಂಥದ್ದೊಂದು ಅಚ್ಚರಿಯ ಪ್ರಶ್ನೆ ಕೇಳೇ ಕೇಳ್ತಾರೆ. ಅಷ್ಟು ತಗ್ಗಿನ ಪ್ರದೇಶದಲ್ಲಿದೆ ಅವರ ಜಮೀನು. ಒಮ್ಮೆ ಮಳೆ ಸುರಿದರೆ ಅಲ್ಲಿನ ಗದ್ದೆಗಳೆಲ್ಲ ಕೆರೆಗಳಾಗುತ್ತವೆ. ಬೆಳೆಗಳೆಲ್ಲ ನಾಶವಾಗುತ್ತವೆ. ಇಷ್ಟೆಲ್ಲ ಪ್ರಕೃತಿ ವಿಕೋಪಗಳನ್ನು ಎದುರಿಸುತ್ತಾ ಕಳೆದ ಮೂರು ವರ್ಷಗಳಿಂದ ಸಾವಯವ ಕೃಷಿ ಪದ್ಧತಿಯಲ್ಲಿ ಶುಂಠಿ, ಬಾಳೆ, ಭತ್ತ ಹಾಗೂ ವಿವಿಧ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ ಚಿದಂಬರ.

ಸಕಲೇಶಪುರ- ಹಾಸನ ನಡುವೆ ಬಾಳ್ಳುಪೇಟೆ ಇದೆ. ಅದಾದ ನಂತರ ಕುಂಬಾರಘಟ್ಟೆ ಗೇಟು. ಗೇಟು ಹಾದು ಒಳ ಹೊಕ್ಕರೆ ಸಾಲು ಮನೆಗಳ ಯೆಡೇಹಳ್ಳಿ. ಈ ಹಳ್ಳಿಯೊಳಗಿನ ಕಿರಿದಾದಾ ಜಾಡು ಹಿಡಿದು ಇಳಿದರೆ ಅದೇ ಕಾಡುಗದ್ದೆ. ಚಿದಂಬರ ಅವರ ಕೃಷಿ ಕ್ಷೇತ್ರ.

ಚಿದಂಬರ ಅವರದ್ದು ಏಳು ಸದಸ್ಯರ ಅವಿಭಕ್ತ ಕುಟುಂಬ. ಜೀವನಕ್ಕಾಗಿ ಒಂಬತ್ತು ಎಕರೆ ಕೃಷಿ ಭೂಮಿ. ಅದರಲ್ಲಿ ನಾಲ್ಕು ಎಕರೆ ಗದ್ದೆ. ಐದು ಎಕರೆ ತೋಟ. ಗದ್ದೆಯಲ್ಲಿ ಆಹಾರ ಬೆಳೆ ಭತ್ತ. ವಾಣಿಜ್ಯ ಬೆಳೆ ಶುಂಠಿ ಇದೆ. ತೋಟದಲ್ಲಿ ಕಾಫಿ, ಕಾಳುಮೆಣಸು, ಬಾಳೆ, ಹಣ್ಣಿನ ಗಿಡಗಳು ಹಾಗೂ ಔಷಧಿ ಸಸ್ಯಗಳಿವೆ.

ಕೃಷಿಗೆ ಏರಿದ್ದು.. ಹೀಗೆ ?

ಒಟ್ಟು ಮೂರು ಜನ ಸಹೋದರರಲ್ಲಿ ಅಣ್ಣನಿಗೆ ಕೃಷಿ ಜವಾಬ್ದಾರಿ. ತಮ್ಮ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿ. ಚಿದಂಬರ ಸೇನೆಯಲ್ಲಿ ಯೋಧರಾಗಿದ್ದರು. ನಾಲ್ಕೈದು ವರ್ಷಗಳ ಹಿಂದೆ ನಿವೃತ್ತಿಯಾಗಿ ಊರು ಸೇರಿದರು. ಉದ್ಯೋಗ ಹುಡುಕಬೇಕು ಎನ್ನುವಷ್ಟರಲ್ಲಿ ಹಿರಿಯ ಸಹೋದರ ತೀರಿಹೋದರು. ಕೃಷಿ ಕೆಲಸಗಳು ಚಿದಂಬರ ಅವರ ಹೆಗಲೇರಿತು. ಸೇನೆಯಲ್ಲಿ ಶಿಸ್ತಿನ ಜೀವನ ಕಂಡಿದ್ದ ಚಿದಂಬರ ಅವರಿಗೆ ಕೃಷಿ ಕ್ಷೇತ್ರದಲ್ಲೂ ಶಿಸ್ತಿನ ಬದುಕು ರೂಪಿಸುವ ಹಂಬಲ. ಅದಕ್ಕಾಗಿ ಹುಡುಕಾಟ ಆರಂಭ.

ಕಾಕತಾಳೀಯವೆಂಬಂತೆ ಸರ್ಕಾರದ ಸಾವಯವ ಗ್ರಾಮ ಯೋಜನೆ ಇವರ ಊರಿಗೆ ಪರಿಚಯವಾಯಿತು. ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ ಈ ಯೋಜನೆ ಅನುಷ್ಠಾನದ ನೇತೃತ್ವವ ಹಿಸಿತ್ತು. ಯೋಜನೆಯಡಿ ಸಾವಯವ ಕೃಷಿ ತರಬೇತಿ, ಅಧ್ಯಯನ ಪ್ರವಾಸ, ಹಲವಾರು ಉಪನ್ಯಾಸ, ಪ್ರಾತ್ಯಕ್ಷಿಕೆಗಳು, ಸಾವಯವ ಗೊಬ್ಬರ ತಯಾರಿಸುವ ತರಬೇತಿ ಇಂಥ ಹಲವು ಚಟುವಟಿಕೆಗಳು ಯೋಜನೆಯ ಫಲಾನುಭವಿಯಾದ ಚಿದಂಬರ ಅವರಲ್ಲಿ ನವ ಚೈತನ್ಯ ತುಂಬಿದವು. ಎಲ್ಲವನ್ನೂ ಅರಿತ ಚಿದಂಬರ ಸಾವಯವ ಕೃಷಿಯ ಪಯಣ ಆರಂಭಿಸಿದರು.

ಗೊಬ್ಬರ ತಯಾರಿಕೆ ಮೊದಲ ಹೆಜ್ಜೆ:

ಸಾವಯವ ಕೃಷಿಗೆ ಪೂರಕವಾದ ಗೊಬ್ಬರ ತಯಾರಿಕೆಗೆ ಸಿದ್ಧತೆ ನಡೆಸಿದರು ಚಿದಂಬರ. ಮೊದಲು ಚಿಗುರುವ ಕಡ್ಡಿ ಕಾಂಪೋಸ್ಟ್ ಘಟಕ ನಿರ್ಮಾಣ. ನಂತರ ತೊಟ್ಟಿ ಗೊಬ್ಬರ, ಎರೆಗೊಬ್ಬರ.. ಹೀಗೆ ಜಮೀನಿನ ಸುತ್ತಾ ಗೊಬ್ಬರ ಘಟಕಗಳು ಸಿದ್ಧವಾದವು.

ಗೋಬರ್ ಗ್ಯಾಸ್‌ನಿಂದ ಬರುವ ಸ್ಲರಿ, ಸುತ್ತಲೂ ಸಿಗುವ ಜೀವರಾಶಿ(ಬಯೋ ಮಾಸ್), ಆಕಳು ಸೆಗಣಿ.. ಗೊಬ್ಬರಕ್ಕೆ ಕಚ್ಚಾವಸ್ತುಗಳಾದವು. ಎತ್ತರದ ಜಾಗದಲ್ಲಿ ದ್ರವರೂಪಿ ಗೊಬ್ಬರಗಳ ತಯಾರಿಕೆಗಾಗಿ ಸಿಮೆಂಟ್ ತೊಟ್ಟಿ. ಪ್ರತಿವರ್ಷ ಕನಿಷ್ಟ 30-35 ಟನ್ ಗೊಬ್ಬರ ಉತ್ಪಾದನೆ.

ಗೊಬ್ಬರ ತಯಾರಿಕೆ ಶುರುಮಾಡಿದ ಮೇಲೆ ಅರ್ಧಕ್ಕರ್ಧ ರಸಗೊಬ್ಬರಕ್ಕೆ ಗುಡ್ ಬೈ ಹೇಳಿದೆ, ಈ ಬಾರಿ ಒಂದಷ್ಟು ಹಣ ಉಳಿತಾಯವಾಯಿತು ಎನ್ನುತ್ತಾರೆ ಚಿದಂಬರ.

ಸಾವಯವ ಶುಂಠಿ ಕೃಷಿ – ಪೈಲಟ್ ಯೋಜನೆ :

ಸಾವಯವಕ್ಕೆ ಪರಿವರ್ತನೆಗೊಳ್ಳುವ ಮುನ್ನ ಪೈಲಟ್ ಯೋಜನೆ ರೂಪದಲ್ಲಿ ಮೊದಲು 5 ಗುಂಟೆಯಲ್ಲಿ ಸಾವಯವ ಶುಂಠಿ ಬೆಳೆಸಲು ಮುಂದಾದರು. ಐದು ಎಕರೆ ತೋಟದಲ್ಲಿ 30 ಗುಂಟೆಯನ್ನು ಸಾವಯವಕ್ಕೆ ಪರಿವರ್ತಿಸುವ ಸಂಕಲ್ಪ ಮಾಡಿದರು.

ಮಾಮೂಲಿಯಾಗಿ 10 ಅಡಿ ಉದ್ದ 3 ಅಡಿ ಅಗಲದ ಏರುಮಡಿಗಳನ್ನು ನಿರ್ಮಿಸಿ 1 ಟನ್ ಕೊಟ್ಟಿಗೆ ಗೊಬ್ಬರ ಮತ್ತು 50 ಕಿಲೋ ಬೇವಿನ ಹಿಂಡಿಯನ್ನು ಏರುಮಡಿಗಳ ಮೇಲೆ ಚೆಲ್ಲಿ, ಮಣ್ಣಿನಲ್ಲಿ ಮಿಶ್ರ ಮಾಡಿದರು. ಹೀಗೆ ಸಿದ್ಧವಾದ ಮಡಿಗಳಿಗೆ 3/4*1 ಅಡಿ ಅಂತರದಲ್ಲಿ 30 ಶುಂಠಿ ಬೀಜಗಳನ್ನು ಊರಿದರು. ಈ ವಿಧಾನದಲ್ಲಿ ಬಿತ್ತಿದರೆ 5 ಗುಂಟೆಗೆ 60 ಕೆಜಿಯ  1/2 ಚೀಲ ಶುಂಠಿ ಬೀಜ ಬೇಕಾಗುತ್ತದೆ ಎನ್ನುವುದು ಚಿದಂಬರ ಅವರ ಲೆಕ್ಕಾಚಾರ.

ಬಿತ್ತನೆಗೆ ಮುನ್ನ 5 ಲೀಟರ್ ಗಂಜಲ, 1/2 ಲೀಟರ್ ಬೇವಿನೆಣ್ಣೆಯನ್ನು 100 ಲೀ ನೀರಿನೊಂದಿಗೆ ಬೆರೆಸಿ ಈ ಮಿಶ್ರಣದಲ್ಲಿ ಶುಂಠಿ ಬೀಜಕ್ಕೆ ಉಪಚಾರ. ಬೀಜಗಳಿಗೆ ರಾಸಾಯನಿಕ ಸೋಕಿದ್ದರೆ ಅಥವಾ ರೋಗಗ್ರಸ್ಥವಾಗಿದ್ದರೆ ಈ ಪ್ರಕ್ರಿಯೆಯಿಂದ ಶುದ್ಧ ಬೀಜವಾಗುತ್ತದೆ. ಬೆಳೆ ರೋಗಗ್ರಸ್ಥವಾಗುವುದಿಲ್ಲ ಎನ್ನುತ್ತಾರೆ ಚಿದಂಬರ.

ಬೀಜ ಬಿತ್ತನೆಯ ನಂತರ ಬೆಳವಣಿಗೆ ಹಂತದಲ್ಲಿ ಶುಂಠಿ ಬೆಳೆಗೆ ಕೊಟ್ಟಿಗೆ ಗೊಬ್ಬರದ ಜೊತೆಗೆ ಹಸಿರೆಲೆಗೊಬ್ಬರ, ಎರೆಗೊಬ್ಬರ, ಜೀವಾಮೃತದಂತಹ ದ್ರವರೂಪಿ ಗೊಬ್ಬರಗಳು, ಸ್ಲರಿ, ಜೈವಿಕ ಗೊಬ್ಬರಗಳನ್ನು ಕಾಲ ಕಾಲಕ್ಕೆ ನೀಡಿದ್ದಾರೆ. ಇದರ ಜೊತೆಗೆ ಮೇಲುಗೊಬ್ಬರವಾಗಿ ಪ್ರತಿ ಗುಣಿಗೂ ಬೊಗಸೆಯಷ್ಟು ಹುಡಿ ಗೊಬ್ಬರ ಮತ್ತು ಜೀವಾಮೃತವನ್ನು ಕೊಟ್ಟಿದ್ದಾರೆ. ಮೊದಲ ಬೆಳೆಯಾದ್ದರಿಂದ ಗೊಬ್ಬರ-ಗೋಡಿನ ಲೆಕ್ಕಾಚಾರ ಕೊಡೋದು ಕಷ್ಟ ಎಂಬ ಚಿದಂಬರ ಅವರ ಪ್ರಾಮಾಣಿಕ ಮಾತಿನ ಹಿಂದೆ ನಿಸ್ವಾರ್ಥ ಪ್ರಯತ್ನ ಒಂದು ಇಣುಕುತ್ತದೆ. ಈ 5 ಗುಂಟೆಯ ಸಾವಯವ ಶುಂಠಿ ಕೃಷಿಯ ಯಶಸ್ಸು ಹತ್ತು ಗುಂಟೆಗೆ ವಿಸ್ತರಿಸುವಂತೆ ಚಿದಂಬರ ಅವರನ್ನು ಪ್ರೇರೇಪಿಸಿದೆ. ಜೊತೆಗೆ ಮೂರು ಎಕರೆ ಗದ್ದೆಯಲ್ಲಿ ಸಾವಯವ ಭತ್ತ ಬೆಳೆಸುವುದಕ್ಕೆ ಉತ್ತೇಜನ ನೀಡಿದೆ.

ಕೊಳೆರೋಗ ಇವರನ್ನೂ ಬಿಟ್ಟಿಲ್ಲ !

ಸಾವಯವ ಪದ್ಧತಿಯಲ್ಲಿ ಶುಂಠಿ ಬೆಳೆಯುತ್ತಿದ್ದೇವೆ ಎಂದಾಕ್ಷಣ ರೋಗ ರಹಿತವಾಗಿ ಬೆಳೆಯುವುದು ಅಸಾಧ್ಯ. ಈ ಮಾತನ್ನು ಚಿದಂಬರ ಅವರೂ ಒಪ್ಪತ್ತಾರೆ. ಅವರು ಬೆಳೆದ ಶುಂಠಿಗೂ ಕೊಳೆರೋಗ ಅಂಟಿ ಕೊಂಡಿತ್ತಂತೆ. ಆ ಸಮಯದಲ್ಲಿ ಇವರೊಂದು ಸರಳ ಉಪಾಯ ಮಾಡಿದ್ದಾರೆ. ಅದೇನೆಂದರೆ ; ಸುಣ್ಣ ಮತ್ತು ಮೈಲುತುತ್ತ ಅಥವಾ ಗಂಜಲವನ್ನು ಮಿಶ್ರಮಾಡಿ ಕೊಳೆಯುಕ್ತ ಶುಂಠಿ ಗಿಡಗಳಿಗೆ ಕೊಟ್ಟಿದ್ದಾರೆ.

ಶೀತ ಹೆಚ್ಚಾದರೆ ಕೊಳೆ ರೋಗ ಬರುತ್ತದೆ. ಹಾಗಂತ ಆ ರೋಗ ನಿವಾರಣೆಗೆ ಯದ್ವಾತದ್ವಾ ರಾಸಾಯನಿಕ ಔಷಧ, ಕ್ರಿಮಿನಾಶಕ ಹೊಡೆಯುವ ಅಗತ್ಯವಿಲ್ಲ. ರಾಸಾಯನಿಕ ಕೃಷಿಯಲ್ಲಿ ಬೆಳೆಯುವವರು ಶುಂಠಿ ಕೊಯ್ಲಿಗೆ ಬರುವುದರೊಳಗೆ ಹದಿನೈದು ಸುತ್ತ ರಾಸಾಯನಿಕ ಕೀಟನಾಶಕಗಳನ್ನು ಸಿಂಪಡಿಸುತ್ತಾರೆ. ಅದರ ಅವಶ್ಯಕತೆ ಇಲ್ಲ. ಅದರ ಬದಲು ನಮ್ಮ ಭೂಮಿಯ ಅಥವಾ ಸಸ್ಯದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು. ಅದಕ್ಕಾಗಿ ಜೀವಾಮೃತ, ಬೇವಿನ ಹಿಂಡಿ, ಎರೆಗೊಬ್ಬರ ಬಳಸಿದರೆ, ರೋಗ ಬರುವುದಿಲ್ಲ. ಇದಕ್ಕಿರುವ ದಾರಿ ಎಂದರೆ ಮೈಲುತುತ್ತ, ಸುಣ್ಣ ಅಥವಾ ಗಂಜಲದ ಮಿಶ್ರಣ ಸಿಂಪಡಣೆ ಎನ್ನುತ್ತಾರೆ ಚಿದಂಬರ.

ಲಾಭ-ನಷ್ಟದ ಲೆಕ್ಕಾಚಾರ;

ಸಾವಯವದಲ್ಲಿ ಶುಂಠಿ ಬೆಳೆದರೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವವರಿಗೆ ಚಿದಂಬರ ಚಕಾ ಚೆಕ್ ಲೆಕ್ಕ ಕೊಡುತ್ತಾರೆ. ಶುಂಠಿ ಬೀಜವನ್ನು ನಾನು ಕೊಂಡು ತರುವುದಿಲ್ಲ. ಕೆಲವರಂತು ಕೊಟ್ಟಿಗೆ ಗೊಬ್ಬರವನ್ನೂ ಕೊಂಡು ತರುತ್ತಾರೆ. ನಮ್ಮ ತೋಟದಲ್ಲೇ ಬೇಕಾದಷ್ಟು ಸಾವಯವ ಗೊಬ್ಬರ ತಯಾರಿಸುತ್ತೇನೆ. ಬೇವಿನಿಂಡಿ, ಬೇವಿನೆಣ್ಣೆ, ಜೀವಾಮೃತಕ್ಕೊಂದಿಷ್ಟು ಬೆಲ್ಲ, ಕೆಲಸಕ್ಕೆ ಅಪರೂಪಕ್ಕೆ ಆಳುಗಳು –ಇವು ಬಿಟ್ಟರೆ ನನಗೆ ಬೇರೇನೂ ಖರ್ಚಿಲ್ಲ. ಅಂದಾಜು 1000 ರೂಪಾಯಿ ಖರ್ಚಿನಲ್ಲಿ ಎಲ್ಲವೂ ಮುಗಿಯುತ್ತವೆ. ಇಷ್ಟೆಲ್ಲ ತೊಡಗಿಸಿದರೆ ಪ್ರತೀ ವರ್ಷ ಸರಾಸರಿ 12 ಚೀಲ ಶುಂಠಿ ಸಿಗುತ್ತಿದೆ.

ಅವಲಂಬನೆಯ ಕೃಷಿಯಲ್ಲಿ ಬೀಜ, ಗೊಬ್ಬರ, ಔಷಧಿ, ಹೆಚ್ಚು ಆಳುಗಳು, ಸಾಗಾಣಿಕೆ ಎಲ್ಲವೂ ಸೇರಿ ಕನಿಷ್ಟ 5000 ರೂಪಾಯಿ ಖರ್ಚು. ಅಲ್ಲಿ ಸರಾಸರಿ 14-15 ಚೀಲ ಇಳುವರಿ ಸಿಗುತ್ತದೆ. ಪ್ರತಿ ಚೀಲಕ್ಕೆ ಸರಾಸರಿ 1000 ಸಿಕ್ಕಿದರೂ ಸಾವಯವಕ್ಕೂ ರಾಸಾಯನಿಕಕ್ಕೂ ಅಂತ ಲಾಭವೇನೂ ಕಾಣುವುದಿಲ್ಲ ಎಂಬುದು ಚಿದಂಬರ ಅಭಿಪ್ರಾಯ.

ಸಾವಯವ ಶುಂಠಿಗೂ – ರಾಸಾಯನಿಕ ಶುಂಠಿಗೂ ಗಾತ್ರ, ಆಕಾರ, ರುಚಿಯಲ್ಲಿ ವ್ಯತ್ಯಾಸವನ್ನೂ ಗಮನಿಸಿಲ್ಲ. ಆದರೆ ಒಳಸುರಿ ಖರ್ಚು ಕಡಿಮೆಯಾಗಿರುವುದರಿಂದ ಭೂಮಿಯ ಫಲವತ್ತತೆ ಸಂರಕ್ಷಣೆಯಾಗುತ್ತಿರುವುದರ ಮುಂದೆ ಉಳಿದದ್ದೆಲ್ಲವೂ ಗೌಣ. ಮುಂದೆ ಒಂದು ದಿನ ಇದೆನ್ನೆಲ್ಲ ಸೇರಿಸಿ ಲಾಭ ಪಡೆಯಬಹುದು ಎನ್ನುವುದು ಚಿದಂಬರ ಅವರಿಗಿರುವ ಆತ್ಮ ವಿಶ್ವಾಸ.

ಪ್ರಸ್ತುತ ಗೊಬ್ಬರ, ಕೃಷಿ ಕಾರ್ಮಿಕರ ಸಮಸ್ಯೆ ವಿಪರೀತ. ಹಾಗಾಗಿ ರೈತರು ತುಸು ಅವಲಂಬನೆ ತಪ್ಪಿಸುವ ಉಪಾಯಗಳನ್ನು ಕಂಡುಕೊಳ್ಳಲೇಬೇಕಾದ ಅನಿವಾರ್ಯತೆ ಯಿದೆ. ಈ ಪರಿಸ್ಥಿತಿಯಲ್ಲಿ ಸಾವಯವ ಕೃಷಿ ಇದಕ್ಕೆ ಉತ್ತಮ ಪರ್ಯಾಯ ವಾಗಬಹುದು ಎನ್ನುವುದು ಚಿದಂಬರ ಅವರ ಅನುಭವದ ಮಾತು.

ಸಾವಯವ ಕೃಷಿ ವಿಸ್ತರಣೆ

ಶುಂಠಿ ಕೃಷಿಯ ಯಶಸ್ಸು ಚಿದಂಬರ ಅವರನ್ನು  5 ಗುಂಟೆಯಿಂದ ಹತ್ತು ಗುಂಟೆಯಲ್ಲಿ ಶುಂಠಿ ಬೆಳೆಯವಂತೆ ಪ್ರೇರೇಪಿಸಿತು. ನಂತರ 4 ಎಕರೆಯಲ್ಲಿ ಸಾವಯವ ಭತ್ತ ಬೆಳೆಯಲು ಆರಂಭಿಸಿ ದರು. ಅದೇ ಗದ್ದೆಯಲ್ಲಿ ಬೇಸಿಗೆಯಲ್ಲಿ ಅಲಸಂದೆ, ಉದ್ದು, ತರಕಾರಿ ಇತ್ಯಾದಿಗಳನ್ನು ಬೆಳೆದುಕೊಳ್ಳುತ್ತಿದ್ದಾರೆ.
2 ವರ್ಷದಿಂದ 30 ಗುಂಟೆ ಕಾಫಿಯನ್ನೂ ಸಾವಯವಕ್ಕೆ ಅಳವಡಿಸುತ್ತಿದ್ದಾರೆ.

ದೇಸಿ ಭತ್ತ
ಪ್ರಾತ್ಯಕ್ಷಿಕೆ ಕೇಂದ್ರ

ಸಾವಯವ ಗ್ರಾಮ ಅನುಷ್ಠಾನದ ಪ್ರೇರಣಾ ಸಂಸ್ಥೆ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆಯ ಸಹಕಾರದಿಂದ ಚಿದಂಬರ ಅವರು ತಮ್ಮ ಗದ್ದೆಯಲ್ಲಿ 18 ದೇಸಿ ಭತ್ತದ ತಳಿಗಳ ಪ್ರಾತ್ಯಕ್ಷಿಕೆಯನ್ನು ಆರಂಭಿಸಿದರು. ಪರೀಕ್ಷೆಗೆ ಒಡ್ಡಿದ ಈ ತಳಿಗಳಲ್ಲಿ ಆರು ತಳಿಗಳು ಯಶಸ್ವಿಯಾದವು. ಅದರಲ್ಲಿ ಕೆಲವನ್ನು ಅಕ್ಕಪಕ್ಕದ ಹಳ್ಳಿಗಳಿಗೆ ಬೀಜೋತ್ಪಾದನೆಗಾಗಿ ವಿತರಣೆ ಮಾಡಿದ್ದಾರೆ. ಇವರ ಗದ್ದೆಯಲ್ಲಿ ರತ್ನಚೂಡಿ, ಬಾಸುಮತಿ, ಆಲೂರು ಸಣ್ಣ ಸೇರಿದಂತೆ ನಾಲ್ಕು ತಳಿಗಳನ್ನು ಸಂರಕ್ಷಿಸುತ್ತಿದ್ದಾರೆ.

ಗೋಡ್ವಿನ್ ನಗುವಿನಲ್ಲಿ ಸಾವಯವ ಕೃಷಿಯ ಗೆಲುವು!

ಸಾವಯವ ಕೃಷಿ – ಕೇವಲ ಎರೆಗೊಬ್ಬರ, ಜೀವಾಮೃತ, ಗಂಜಲ, ಆಕಳು ಅಷ್ಟೇ ಅಲ್ಲ. ಅದೊಂದು ಸಂಸ್ಕೃತಿ. ಈ ಪದ್ಧತಿಯಿಂದ ನಮ್ಮ ಕೃಷಿ ಚಟುವಟಿಕೆಗಳು ಬದಲಾಗಿವೆ. ನಾವು ಬದಲಾಗಿದ್ದೇವೆ. ನಮ್ಮೂರಿನಲ್ಲಿ ಸಾಮಾಜಿಕ ಬದಲಾವಣೆಯಾಗಿದೆ

ಗೋಡ್ವಿನ್

ಈ ಪೀಸ್ ತಿಂದು ನೋಡಿ ಸರ್ – ಗೋಡ್ವಿನ್ ವೃತ್ತಾಕಾರವಾಗಿ ಕತ್ತ್ತರಿಸಿದ ಅನಾನಸ್ ಬಿಲ್ಲೆಗಳನ್ನು ತುಂಬಿದ ತಟ್ಟೆಯನ್ನು ನನ್ನ ಮುಂದೆ ಹಿಡಿದರು. ಆ ಬಿಲ್ಲೆ ತೆಗೆದು ಬಾಯಲ್ಲಿಟ್ಟುಕೊಂಡೆ. ವಾಹ್ ! ಅದೆಂಥಾ ರುಚಿ.

ಇದಿನ್ನೂ ಬಲಿಯಬೇಕು ಸಾರ್. ಆದ್ರೂ ಟೇಸ್ಟ್ ಬಹಳ ಚೆನ್ನಾಗಿದೆ. ಯಾಕೆ ಗೊತ್ತಾ. ಇದು ಸಾವಯವ ಕೃಷಿಯಲ್ಲಿ ಬೆಳೆದದ್ದು. ಅನಾನಸ್ ಮಾತ್ರವಲ್ಲ, ಬಾಳೆ, ಕಿತ್ತಳೆ, ತರಕಾರಿ, ಭತ್ತ, ಎಲ್ಲವನ್ನೂ ಸಾವಯವ ಕೃಷಿ ಪದ್ಧತಿಯಲ್ಲೇ ಬೆಳೆಯುತ್ತಿದ್ದೇವೆ. ಮೂರು ವರ್ಷ ಆಯ್ತು ನೋಡಿ, ಇದನ್ನು ಶುರು ಮಾಡಿ- ಹಣ್ಣಿನ ಸಿಹಿಯ ಹಿಂದಿನ ಗುಟ್ಟು ಹೇಳಿದರು ಗೋಡ್ವಿನ್.

ಗೋಡ್ವಿನ್ ಉದಯೋನ್ಮುಖ ಸಾವಯವ ಕೃಷಿಕ. ಮೂಡಿಗೆರೆ ಸಮೀಪವಿರುವ ಫಲ್ಗುಣಿಯ ಮಜುರೆ ಗ್ರಾಮ ಸಬ್ಬೇನಹಳ್ಳಿಯಲ್ಲಿ ವಾಸವಾಗಿದ್ದಾರೆ. ಮನೆ ಪಕ್ಕದಲ್ಲೇ ಕಾಫಿ ತೋಟ. ಎದುರುಗಡೆ ಗದ್ದೆ. ಇವರದ್ದು ಒಟ್ಟು ಹದಿಮೂರು ಎಕರೆ ಜಮೀನು. ಏಳು ಎಕರೆ ಕಾಫಿ ತೋಟ. ನಡುವೆ ಉಪಬೆಳೆಗಳಾಗಿ ಅನಾನಸ್, ಕಿತ್ತಳೆ, ಹಲಸು, ಮಾವು. ಹೆಚ್ಚುವರಿ ಆದಾಯಕ್ಕಾಗಿ ಏಲಕ್ಕಿ, ಮೆಣಸು, ಸೀತಾಫಲ ಮರಗಳ ಮಿಶ್ರಕೃಷಿ ಇದೆ. ಆರು ಎಕರೆಯಲ್ಲಿ ಗದ್ದೆ. ಎಲ್ಲವೂ ಮಳೆಯಾಶ್ರಿತದಲ್ಲೇ ಕೃಷಿ.

ಮೂರು ವರ್ಷದ ಹಿಂದೆ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ, ಫಲ್ಗುಣಿಯಲ್ಲಿ ಸಾವಯವ ಕೃಷಿ ಯೋಜನೆ ಅನುಷ್ಠಾನಕ್ಕೆ ಮುಂದಾದಾಗ ಗೋಡ್ವಿನ್ ತಮ್ಮ ಜಮೀನನ್ನು ಸಾವಯವಕ್ಕೆ ಅಳವಡಿಸಲು ಸಿದ್ಧರಾದರು. ಈ ಪದ್ಧತಿ ಹೇಗೋ ಏನೋ ಅಂತ ಅಳುಕಿನಿಂದಲೇ ಜಮೀನಿನ ಅಲ್ಪ ಭಾಗವನ್ನು ಅಂದರೆ ನಾಲ್ಕು ಎಕರೆ ಕಾಫಿ ತೋಟ, 200 ಗಿಡ ಅನಾನಸ್, ಒಂದಷ್ಟು ಕಿತ್ತಳೆ, ಗೋಡಂಬಿ, 200 ಬಾಳೆ, ಮೂರು ಎಕರೆ ಭತ್ತವನ್ನು ಸಾವಯವ ಕೃಷಿಗೆ ಅಳವಡಿಸಿದರು.

ಏಳು ಟ್ರಾಕ್ಟರ್ ಎರೆಗೊಬ್ಬರ

ಸಾವಯವ ಕೃಷಿ ಪರಿಚಯವಾದ ನಂತರದಲ್ಲಿ ಸಂಸ್ಥೆಯ ನೆರವಿನೊಂದಿಗೆ ಹಸಿರೆಲೆಗೊಬ್ಬರ, ಎರೆಹುಳು ಗೊಬ್ಬರ ತಯಾರಿಕೆ ಆರಂಭಿಸಿದರು. ತೋಟದ ಮೂಲೆಯ ಪಾಳು ಮನೆಯನ್ನೇ ಎರೆಹುಳು ಘಟಕವನ್ನಾಗಿಸಿದರು. ಆಕಳ ಸೆಗಣಿ, ಗಂಜಲ, ಬೇಲಿಯಲ್ಲಿದ್ದ ಕಾಡು ಮರಗಳ ತರಗೆಲೆ, ಅಡುಗೆ ತ್ಯಾಜ್ಯ, ಜಾನುವಾರು ತಿಂದುಳಿದ ಮೇವು ಬಳಸಿ ಸಾವಯವ ಗೊಬ್ಬರ ಉತ್ಪಾದನೆ. ಒಳಸುರಿಗಳೆಲ್ಲಾ ತೋಟದ ಅಂಗಳದಲ್ಲೇ ಸಿಕ್ಕಿದ್ದರಿಂದ ಗೊಬ್ಬರ ಉತ್ಪಾದನೆಗೆ ನಯಾಪೈಸೆ ಖರ್ಚಿಲ್ಲ. ಇಂಥದ್ದೊಂದು ಸರಳ ವ್ಯವಸ್ಥೆಯಲ್ಲಿ ವರ್ಷಕ್ಕೆ ಏಳು ಟ್ರಾಕ್ಟರ್ ಗೊಬ್ಬರ ಒಟ್ಟು ಮಾಡಿದರು. ಪ್ರತಿ ಕಾಫಿಗಿಡಕ್ಕೆ ಪ್ರತ್ಯೇಕವಾಗಿ ಗೊಬ್ಬರ ಕೊಟ್ಟರು. ಮಳೆಗಾಲಕ್ಕೆ ಮುನ್ನ ಜೀವಾಮೃತ ಕೊಟ್ಟರು. ಇದೇ ಪದ್ಧತಿಯನ್ನು, ಅನಾನಸ್, ಕಿತ್ತಲೆ ಗಿಡಗಳಿಗೂ ಅನುಸರಿಸಿದರು.

ಸಾವಯವ ಕೃಷಿಯಿಂದ ಆರಂಭದಲ್ಲಿ ಇಳುವರಿ ಕಡಿಮೆಯಾಯಿತು. ಆದರೆ ಅನಾನಸ್ ಗಿಡದಲ್ಲಿ ಎಲೆಗಳು ಸೊಂಪಾಗಿ ಬೆಳೆದವು. ಹಣ್ಣಿನ ತೂಕ ಹೆಚ್ಚಾಯಿತು. ರುಚಿಯಂತೂ ಅದ್ಭುತ ಎಂದು ಸಾವಯವದ ಪರಿಣಾಮವನ್ನು ವರ್ಣಿಸುವ ಗೋಡ್ವಿನ್, ಬಾಳೆ, ಕಿತ್ತಳೆಯ ಇಳುವರಿಯಲ್ಲಾಗಲಿ, ರುಚಿಯಲ್ಲಾಗಲಿ ಅಂಥ ವಿಶೇಷ ಬದಲಾವಣೆ ಕಾಣಲಿಲ್ಲ ಎನ್ನುತ್ತಾರೆ.

ಸಾವಯವದಲ್ಲಿ ಮೂರು ಎಕರೆ ಭತ್ತ

ಸಾವಯವ ತೋಟದ ಗೆಲುವು ಮೂರು ಎಕರೆ ಭತ್ತವನ್ನು ಸಾವಯವ ಕೃಷಿ ಪದ್ಧತಿಗೆ ಅಳವಡಿಸಲು ಪ್ರೇರೇಪಿಸಿತು. ಆರಂಭದಲ್ಲಿ ಪುಟ್ಟ ಭತ್ತ, ಕಿರ್ವಾಣದಂಥ ಸ್ಥಳೀಯ ಭತ್ತದ ತಳಿಗಳನ್ನು ಬಿತ್ತನೆ ಮಾಡಿದರು. ಮೊದಲ ವರ್ಷ ಎಕರೆಗೆ ಒಂಭತ್ತೂವರೆ ಪಲ್ಲ ಇಳುವರಿ ಬಂತು. ಅದು ಎರಡನೇ ವರ್ಷಕ್ಕೆ 13 ಪಲ್ಲಕ್ಕೆ ಏರಿತು.

ರಾಸಾಯನಿಕ ಪದ್ಧತಿಯಲ್ಲಿ 17 ರಿಂದ 18 ಪಲ್ಲ ಬೆಳೆಯುತ್ತೇವೆ. ಗೊಬ್ಬರ, ಬೀಜ ಅಂತ ಸಾಕಷ್ಟು ಖರ್ಚಾಗುತ್ತದೆ. ಈ ಪದ್ಧತಿಯಲ್ಲಿ ಮೊದಲು ಇಳುವರಿ ಕಡಿಮೆಯಾಯ್ತು. ಮುಂದಿನ ವರ್ಷ ಸ್ವಲ್ಪ ಹೆಚ್ಚಾಯ್ತು. ಈ ವರ್ಷ ಏನಾಗುತ್ತದೋ ನೋಡ್ಬೇಕು ಎನ್ನುತ್ತಾರೆ ಗೋಡ್ವಿನ್.

ಇಳುವರಿ ಇಳಿದಿದ್ದಕ್ಕೆ ಗೋಡ್ವಿನ್‌ಗೆ ಬೇಸರವಿಲ್ಲವಂತೆ. ಏಕೆಂದರೆ, ಈ ಮೂರು ಎಕರೆಗೆ ಬೇಕಾದ ಗೊಬ್ಬರವನ್ನು ತೋಟದಲ್ಲೇ ಸಿದ್ಧ ಮಾಡಿಕೊಂಡಿದ್ದಾರೆ. ನೂರಾರು  ರೂಪಾಯಿ ಗೊಬ್ಬರಕ್ಕೆ ಹಾಕುವ ಖರ್ಚು ಉಳಿದಿದೆ. ಗದ್ದೆಗೆ ಅಜೋಲಾ ಬಿಟ್ಟಿದ್ದರಿಂದ ಹೆಚ್ಚುವರಿ ಗೊಬ್ಬರ ಲಭ್ಯವಾಗುವ ಜೊತೆಗೆ ಕಳೆ ನಿಯಂತ್ರಣಗೊಂಡಿದೆ. ಒಂದು ಸಾರಿ ಕಳೆ ತೆಗೆಯೋದಕ್ಕೆ ಎಕರೆಗೆ ಎಂಟು ಆಳು ಬೇಕು. ಮೂರರಿಂದ ನಾಲ್ಕು ಸಾವಿರದಷ್ಟು ಕೂಲಿ ರ್ಚಾಗುತ್ತಿತ್ತು. ಅಜೋಲಾ ಬಿಟ್ಟ ಮೇಲೆ ಕಳೆ ಇಲ್ಲದಂತಾಗಿದೆ. ಇಳುವರಿಯಲ್ಲಿ ಹೋಗಿದ್ದು, ಕೂಲಿ ಹಣದ ಉಳಿಕೆ ರೂಪದಲ್ಲಿ ಬಂದಿದೆ ಎಂದು ಖುಷಿಯಿಂದ ಲೆಕ್ಕ ಹೇಳುತ್ತಾರೆ ಗೋಡ್ವಿನ್.

ಮೊದಲು ಕಳೆ ತೆಗೆಯಲು ಟಿಲ್ಲರ್ ಹೊಡೆಯುತ್ತಿದ್ದೆವು. ಆಗ ಕಪ್ಪೆ, ಏಡಿ ಎಲ್ಲ ಸತ್ತು ಹೋಗ್ತಿದ್ದವು. ಈಗ ಅಜೋಲಾ ಬಿಡುವುದರಿಂದ ಅಂಥ ಅನಾಹುತಗಳು ತಪ್ಪಿವೆ ಎಂದು ತಮ್ಮ ಪರಿಸರ ಪ್ರೀತಿ ವ್ಯಕ್ತಪಡಿಸುತ್ತಾರೆ ಅವರು.

ಮಾರುಕಟ್ಟೆ ಚಿಂತೆಯಿಲ್ಲ

ಇಷ್ಟೆಲ್ಲ ಸಾವಯವ ಉತ್ಪನ್ನಗಳನ್ನು ಬೆಳೆಯುತ್ತಿರುವ ಗೋಡ್ವಿನ್‌ಗೆ ಮಾರುಕಟ್ಟೆಯ ಚಿಂತೆಯಿಲ್ಲ. ಎಕೆಂದರೆ ಬೆಳೆದಿದ್ದು ಮೊದಲು ನಮಗೆ, ಉಳಿದಿದ್ದು ನಂತರ ಮಾರುಕಟ್ಟೆಗೆ ಎನ್ನುವ ಸಿದ್ಧಾಂತ ಇವರದ್ದು. ಬೆಳೆದ ಬೆಳೆಗಳಲ್ಲಿ ಭತ್ತ, ಹಣ್ಣಿನ ಬೆಳೆಗಳನ್ನು ಮಾರಾಟ ಮಾಡುತ್ತಾರೆ. ಕೆಲವನ್ನು ತೋಟಕ್ಕೆ ಬಂದು ಕೊಳ್ಳುತ್ತಾರೆ.

ಇನ್ನು ಮುಂದೆ ನಮ್ಮ ಸಂಘದ್ದೇ ಸಾವಯವ ಮಳಿಗೆ ತೆರೆಯುತ್ತಿದ್ದೇವೆ. ನಮ್ಮ ಸಾವಯವ ಉತ್ಪನ್ನಗಳನ್ನು ಆ ಮಳಿಗೆಯಲ್ಲಿಟ್ಟು ಮಾರಾಟ ಮಾಡುತ್ತೇವೆ. ನಮ್ಮ ತೋಟದ ಅನಾನಸ್‌ಗೆ ಸಾಕಷ್ಟು ಬೇಡಿಕೆಯಿದೆ. ನಮಗೆ ಪೂರೈಸುವುದಕ್ಕೇ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಗೋಡ್ವಿನ್.

ಜೀವನವೂ ಸಾವಯವ

ಸಾವಯವ ಕೃಷಿ  – ಕೇವಲ ಪದ್ಧತಿಯಷ್ಟೇ ಅಲ್ಲ, ಅದೊಂದು ಸಂಸ್ಕೃತಿ, ಜೀವನ ಶೈಲಿ ಎನ್ನುವುದು ಗೋಡ್ವಿನ್-ಜಸೆಂತಾ ದಂಪತಿಯ ಅಭಿಪ್ರಾಯ. ಈ ಕೃಷಿ ಪದ್ಧತಿ ಪರಿಚಯವಾದ ಮೇಲೆ ನಾವು ವಿಷಮುಕ್ತ ತರಕಾರಿಗಳನ್ನು ಬೆಳೆದುಕೊಳ್ಳುತ್ತಿದ್ದೇವೆ. ರುಚಿ ಕಟ್ಟಾದ ಆಹಾರ ಸೇವಿಸುತ್ತಿದ್ದೇವೆ. ವಾರಕ್ಕೆ ನೂರು ರೂಪಾಯಿ ತರಕಾರಿಗೆ ಖರ್ಚಾಗುತ್ತಿತ್ತು. ಈಗ ನಮ್ಮ ಮನೆಯಲ್ಲೇ ಹತ್ತಾರು ತರಹದ ತರಕಾರಿ ಬೆಳೆದು, ಬೇರೆಯವರಿಗೂ ಹಂಚುತ್ತಿದ್ದೇವೆ ಎನ್ನುತ್ತಾರೆ ಗೋಡ್ವಿನ್.

ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿ ಯಲ್ಲಿನ ಸತ್ವಗಳು ನಾಶವಾಗುತ್ತವೆ ಎಂಬುದನ್ನು ಮನಗಂಡಿರುವ ಗೋಡ್ವಿನ್, ಕನಿಷ್ಠ ಮುಂದಿನ ಪೀಳಿಗೆಗಾದರೂ ಸ್ವಚ್ಛ ಭೂಮಿಯನ್ನು ಬಿಟ್ಟು ಹೋಗೋಣ ಎಂದು ಸಂಕಲ್ಪ ಮಾಡಿದ್ದಾರೆ. ಅದಕ್ಕಾಗಿಯೇ ತನ್ನ ಇಡೀ ಜಮೀನನ್ನು ಸಾವಯವ ಪದ್ಧತಿಗೆ ಅಳವಡಿಸಲು ಸಿದ್ಧತೆ ನಡೆಸಿದ್ದಾರೆ.

n

ಸಾವಯವದಿಂದ ಸಾಮಾಜಿಕ ಬದಲಾವಣೆ !

ಸಾವಯವ ಕೃಷಿ ಪದ್ಧತಿ ಗೋಡ್ವಿನ್ ಪಾಲಿಗೆ ಒಂದು ಸಂಸ್ಕೃತಿ. ಈ ಕೃಷಿ ಪದ್ಧತಿ ಪರಿಚಯಿಸುವುದಕ್ಕಾಗಿ ಬಂದಂತಹ ಸಾವಯವ ಗ್ರಾಮ ಯೋಜನೆ ನಮ್ಮೂರಿನಲ್ಲೊಂದು ಸಾಮಾಜಿಕ ಬದಲಾವಣೆ ತಂದಿತು ಎನ್ನುತ್ತಾರೆ ಅವರು.

ಯೋಜನೆ ಬರುವುದಕ್ಕೆ ಮುನ್ನ ಈ ಊರಿನವರು ಒಟ್ಟಾಗಿ ಸೇರುವುದೇ ಕಷ್ಟವಾಗಿತ್ತಂತೆ. ಆದರೆ ಕಳೆದ ಮೂರು ವರ್ಷದಿಂದ ಪ್ರತಿ ಎರಡು ವಾರಕ್ಕೊಮ್ಮೆ ಊರಿನ ಎಲ್ಲ ಸದಸ್ಯರು ಒಟ್ಟಾಗಿ ಸೇರುತ್ತಾರೆ. ಊರಿನ ಆಗು-ಹೋಗುಗಳ ಬಗ್ಗೆ ಚರ್ಚಿಸುತ್ತಾರೆ. ಹೀಗೆ ಸಭೆ ನಡೆಸುವುದಕ್ಕಾಗಿಯೇ ಊರಿನಲ್ಲೊಂದು ಸಾವಯವ ಸಮುದಾಯ ಭವನ ನಿರ್ಮಿಸಲು ಸಂಕಲ್ಪ ಮಾಡಿದ್ದಾರೆ. ಇದಕ್ಕಾಗಿ ವಂತಿಕೆ ಸಂಗ್ರಹಿಸಿದ್ದಾರೆ. ಸರ್ಕಾರದವರು ನಿವೇಶನ ನೀಡಿದ ಕೂಡಲೇ ಕಟ್ಟಡ ಎದ್ದು ನಿಲ್ಲುತ್ತದೆ. ಸಾವಯವ ಕೃಷಿ ಸಂಘಟನೆ ಸುಸ್ಥಿರವಾಗುತ್ತದೆ ಎನ್ನುತ್ತಾರೆ ಗೋಡ್ವಿನ್.

ಸಂಪಾದಕರು :ಗಾಣಧಾಳು ಶ್ರೀಕಂಠ