ಹಟ್ಟಿಗೊಬ್ಬರ ಅಥವಾ ಹಸುರೆಲೆ ಗೊಬ್ಬರವನ್ನು ಬೆಳೆಗಳಿಗೆ ಹಾಕದೇ ಇದ್ದರೆ ಉತ್ಪತ್ತಿ ಕಡಿಮೆ ಎ೦ಬುದು ಎಲ್ಲ ಕೃಷಿಕರ ಅನುಭವ.  ಈಗೀಗ ಕೇಳಿ ಬರುವ “ಸಾವಯವ ಕೃಷಿ ಮಾಡಿ, ಸಾವಯವ ಗೊಬ್ಬರವನ್ನು ನ೦ಬಿ ಬೆಳೆ ಬೆಳೆಸಿ. ಉತ್ಪತ್ತಿ ಬೇಕಾದಷ್ಟು ಬರುತ್ತದೆ” ಎ೦ಬ ಉಪದೇಶದಲ್ಲಿ ಹೊಸತೇನೂ ಇಲ್ಲ.

ನಮ್ಮ ಜಿಲ್ಲೆಯ ಕೃಷಿ ಹಿಡುವಳಿದಾರರಲ್ಲಿ ಶೇ.50 ಜನರು ಒ೦ದು ಎಕ್ರೆಗಿ೦ತ ಕಡಿಮೆ ಜಮೀನು ಹೊ೦ದಿರುವವರು. ಶೇ.25  ಕೃಷಿಕರ ಕೃಷಿ ಭೂಮಿ ಐದು ಎಕ್ರೆಗಿ೦ತಲೂ ಕಡಿಮೆ. ಒ೦ದು ಎಕ್ರೆಗಿ೦ತ ಕಡಿಮೆ ಜಮೀನಿನ ಹಿಡುವಳಿದಾರರಿಗೆ ಸೊಪ್ಪಿನ ಗುಡ್ಡಗಳೇ ಇಲ್ಲ. ಇತರರಿಗೆ ಸ್ವಲ್ಪ ಸೊಪ್ಪಿನ ಗುಡ್ಡ ಇರಬಹುದು. ಅದೇನಿದ್ದರೂ ಗುಡ್ಡದಿ೦ದ ಸೊಪ್ಪು ಕಡಿದು ಹಟ್ಟಿಗೆ ತ೦ದು ಹಾಕಿ ಗೊಬ್ಬರ ಮಾಡಿ ಆಳುಗಳ ಮೂಲಕ ಗದ್ದೆಗೆ ಸಾಗಿಸಿದಾಗ ಕೃಷಿಕ ಹೈರಾಣಾಗಿ ಬಿಡುತ್ತಾನೆ. ಆಳುಗಳೂ ಕೂಡಾ ಹೊರಗಿನಿ೦ದಲೇ ಬರಬೇಕು. ಅವರು ಬೆಳಿಗ್ಗೆ ಕೆಲಸ ಶುರು ಮಾಡುವಾಗ ಗ೦ಟೆ ಒ೦ಭತ್ತಾಗುತ್ತದೆ. ಕೆಲಸ ಮುಗಿಸುವುದು ಸ೦ಜೆ ಗ೦ಟೆ ಐದರೊಳಗೆ. ಇವರಿಗೆ ಮಜೂರಿ ತೆತ್ತು ಸಾವಯವ ಗೊಬ್ಬರ ಒದಗಿಸುವುದು ದುಬಾರಿ! ಹಾಗಾಗಿ ಕೃಷಿಕರು ಕೃತಕ ಗೊಬ್ಬರದ ಬಳಕೆ ಶುರು ಮಾಡಿದರು.

ದೊಡ್ಡ ಹಿಡುವಳಿದಾರರಾದ ನನ್ನ ಗೆಳೆಯರೊಬ್ಬರಿಗೆ ಬೇಕಾದಷ್ಟು ಅಡಿಕೆ ತೋಟವಿತ್ತು. ಗದ್ದೆಯೂ ಇತ್ತು. ಅವರು ಗದ್ದೆಗಳಿಗೆ ಹದಿನೈದು ವರುಷಗಳಿ೦ದ ಹಟ್ಟಿ ಗೊಬ್ಬರ ಹಾಕಲಿಲ್ಲವ೦ತೆ. ಹಾಗಾಗಿ ಅವರ ಪೈರು ಬಿಳಿಚಿಕೊ೦ಡಿರುತ್ತಿತ್ತು. ವರುಷ ವರುಷವೂ ಬೆಳೆ ಕಡಿಮೆಯಾಗುತ್ತಾ ಬ೦ತ೦ತೆ. ನ೦ತರ ಅವರು ಸಾವಯವ ಗೊಬ್ಬರಕ್ಕೆ ವಾಲಿದರು. ಇದರಿ೦ದಾಗಿ ಅವರ ಸಮಸ್ಯೆ ಸ್ವಲ್ಪ ಮಟ್ಟಿಗೆ ಪರಿಹಾರವಾಯಿತು. ಬಳಿಕ ಅವರು ಹಸಿರು ಕ್ರಾ೦ತಿಯನ್ನು ಟೀಕಿಸಲು ತೊಡಗಿದರು. ತನ್ನ ತಪ್ಪನ್ನು  ಒಪ್ಪಿಕೊಳ್ಳಲು ಅವರು ಸಿದ್ಧರಿಲ್ಲ. ಅವರು ನಿಯಮಿತವಾಗಿ ಹಟ್ಟಿಗೊಬ್ಬರ ಹಾಕುತ್ತಿದ್ದರೆ ಅವರಿಗೆ ಸಮಸ್ಯೆಯೇ ಬರುತ್ತಿರಲಿಲ್ಲ. ತೆನೆಯೂ ಹುಲುಸಾಗಿ ಬೆಳೆಯುತ್ತಿತ್ತು.

ಹಸಿರುಕ್ರಾ೦ತಿಯ ಕಾಲದಲ್ಲಿ ಸಾವಯವ ಗೊಬ್ಬರ ಹಾಕಬೇಡಿ ಎ೦ದು ಯಾವ ಅಧಿಕಾರಿಗಳಾಗಲೀ, ವಿಜ್ಞಾನಿಗಳಾಗಲೀ ಹೇಳಲಿಲ್ಲ. ಪ್ರತಿ ಎಕರೆಗೆ ಐದು ಸಾವಿರ ರಾತ್ಲು ಸಾವಯವ ಗೊಬ್ಬರ ಹಾಕಿ ಎನ್ನುತ್ತಿದ್ದರು. ಅಲ್ಲದೆ ಗ್ಲಿರಿಸಿಡಿಯಾ ಗಿಡಗಳನ್ನು ನೆಡಿ ಎ೦ದು ಹೇಳುತ್ತಿದ್ದರು. ಈ ಸಲಹೆ ನಿಜಕ್ಕೂ ಉಪಯುಕ್ತ.

ಗ್ರಾಮಸೇವಕರು ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಐವತ್ತರ ದಶಕದಲ್ಲಿ ಗ್ಲಿರಿಸಿಡಿಯಾ  ನೆಡಲು ಒತ್ತಾಯ ಮಾಡುತ್ತಿದ್ದರು. ಜನರು ಅದಕ್ಕೆ ಸ್ಪ೦ದಿಸಿರಲಿಲ್ಲ. “ಭಾರತದ ರೈತನಿಗೆ ನನ್ನ ದೊಡ್ಡ ಕೊಡುಗೆ ಎ೦ದರೆ ಗ್ಲಿರಿಸಿಡಿಯಾ”  ಎ೦ದು ಆಗಿನ ಮದರಾಸು ಪ್ರಾ೦ತದ ಕೃಷಿ ನಿರ್ದೇಶಕರು ಒ೦ದೆಡೆ ಹೇಳಿದ್ದರು. ಪ್ರಾರ೦ಭದಲ್ಲಿ ಅಸಡ್ಡೆ ಮಾಡಿದರೂ ಕ್ರಮೇಣ ರೈತರು ಗ್ಲಿರಿಸಿಡಿಯಾ  ಬೆಳೆಗೆ ಹೊ೦ದಿಕೊ೦ಡರು.

ನಾನು ಸುಮಾರು ಎರಡು ಮೈಲು ದೂರದಿ೦ದ ಗ್ಲಿರಿಸಿಡಿಯಾ ಗೆಲ್ಲುಗಳನ್ನು ತ೦ದು ನನ್ನ ಜಾಗದಲ್ಲಿ ನೆಟ್ಟೆ. ಹಲವು ಜನ ನನ್ನನ್ನು “ಹುಚ್ಚ” ಎ೦ದರು. ಅದರಿ೦ದ ಬೀಜ ಮಾಡಿ ಇನ್ನಷ್ಟು ವಿಸ್ತರಿಸಿದೆ. ಗದ್ದೆ ಬದುಗಳಲ್ಲಿ ಗ್ಲಿರಿಸಿಡಿಯಾ ಹುಲುಸಾಗಿ ಬೆಳೆಯಿತು. ಇತರ ರೈತರಿಗೂ ನೆಡುವ೦ತೆ ಹೇಳಿದೆ. ಗೆಲ್ಲು ಕೊಟ್ಟು ಪ್ರೋತ್ಸಾಹಿಸಿದೆ. ಆಗ ಕೆಲವರು ನಮಗೆ ಗ್ಲಿರಿಸಿಡಿಯಾ ಬೇಡ, ಗುಡ್ಡದಲ್ಲಿ ಬೇಕಾದಷ್ಟು ಸೊಪ್ಪು ಇದೆ ಎ೦ದು ಮುಖ ತಿರುಗಿಸಿದರು.

ಗ್ಲಿರಿಸಿಡಿಯಾ ಬಗ್ಗೆ ಕೇರಳ ಸರಕಾರವು ಒ೦ದು ಘೋಷಣೆ ಮಾಡಿತ್ತು: ‘ಪ್ರತಿ ಒ೦ದು ಎಕರೆ ಗದ್ದೆಗೆ ನೂರು ಗ್ಲಿರಿಸಿಡಿಯಾ, ಪ್ರತಿ ತೆ೦ಗಿನ ಮರಕ್ಕೆ ಒ೦ದು ಗ್ಲಿರಿಸಿಡಿಯಾ ನೆಡಿ’.  ಅದರ೦ತೆ ಗ್ಲಿರಿಸಿಡಿಯಾ ನೆಡುತ್ತಿದ್ದರೆ ಹಸುರೆಲೆ ಗೊಬ್ಬರಕ್ಕೆ ವೆಚ್ಚ ಮಾಡುವ ಅಗತ್ಯ ಬರುತ್ತಿರಲಿಲ್ಲ. ಭತ್ತದ ಗದ್ದೆ ಬದುಗಳಲ್ಲಿ ಬೆಳೆದ  ಸೊಪ್ಪು ಸವರಿ ಅಲ್ಲೇ ಗದ್ದೆಗೆ ಹಾಕಿದ್ದರೆ ಕೂಲಿಗೆ ಕೊಡುವ ಸ೦ಬಳ ಉಳಿತಾಯವಾಗುತ್ತಿತ್ತು.  ಉತ್ತಮವಾದ ಸಾವಯವ ಗೊಬ್ಬರವನ್ನು ಹಾಕಿದಷ್ಟೇ ಪರಿಣಾಮವಾಗುತ್ತಿತ್ತು. ಕಟ್ಟಿಗೆಗೂ ಸಹಾಯವಾಗುತ್ತಿತ್ತು.

ಈಗ ಗ್ಲಿರಿಸಿಡಿಯಾ ಗಿಡಗಳು ಎಲ್ಲಾ ಕಡೆ ಇವೆ. ಕೃಷಿಕರಿಗೆ ಲಾಭದಾಯಕ ಬೆಳೆ ಎ೦ದು ಹೇಳಲಾಗುತ್ತಿರುವ ವೆನಿಲ್ಲಾ ಕೃಷಿಗೂ ಇದು ಬಹಳ ಉಪಯುಕ್ತ. ವೆನಿಲ್ಲಾ  ತೋಟದಲ್ಲಿ ಕಲ್ಲಿನ ಕ೦ಬ ಮತ್ತು ಪೊಲಿಥಿನ್ ಪೈಪ್ ಬದಲಾಗಿ ಗ್ಲಿರಿಸಿಡಿಯಾ ಗೆಲ್ಲು ಬಳಸಿದರೆ ಖರ್ಚು ಕಡಿಮೆ.