ಈ ವರ್ಷ ಒಂದ್ ಕಲ್ಲಿ ದರಕಿಗೆ ಐದ್‌ರೂಪಾಯ್ ಕಾಣೀ ಹೆಗಡೆಯವರ ಬಳಿ ಬುಡ್ಡಿ ದರಕು ಹೊರವ ಮುಂಚೆ ಮಾಡುವ ಅಹವಾಲು.  ಸರಿ ಮಾರಾಯ್ತಿ, ತ್ವಾಟಪೂರ್ತಿ ತುಂಬ್ಸೋದ್ ನಿಂದೇ ಕೆಲಸ.  ಹಂಗಾರೆ ಕೊರಲುಹಿಡಿ ಕೊಡೀನಿ.  ಇವತ್ತೇ ಗುಡಿಸಿ ಗಡಿ ಹಾಕಿ ಬತ್ತೆ.  ಬುಡ್ಡಿಯ ಕೆಲಸ ಶುರು.

ಬೆಳ್ಳಂಬೆಳಗ್ಗೆ ಎದ್ದು ಚಳಿಗಾಲದಲ್ಲಿ ಉದುರಿದ ಎಲೆಗಳನ್ನು ಗುಡಿಸಿ, ಕಲ್ಲಿ ತುಂಬಿ, ತೋಟಕ್ಕೆ ಹಾಕಿ ದಿನಗೂಲಿಗೆ ಹೊರಡುವುದು ಮಲೆನಾಡಿನ ಬೇಸಿಗೆ ದಿನಚರಿ.  ಸೊಪ್ಪಿನಬೆಟ್ಟ ಇರುವವರಿಗೆ ಅವರದೇ ಬೆಟ್ಟದಲ್ಲಿ ಸಾಕಷ್ಟು ದರಕು ಸಿಕ್ಕರೆ, ಇಲ್ಲದವರಿಗೆ ಪಕ್ಕದ ಕಾಡೇ ಗತಿ.  ಹಾಗಂತ ಅವರಿವರ ಜಾಗದ್ದನ್ನು ಬೆಳಕು ಮೂಡುವುದರೊಳಗೆ ಹೋಗಿ ಕದ್ದು ತರುವವರೂ ಇದ್ದಾರೆ.

ದಿನಾ ಬೆಳಗ್ಗೆಮುಂಚೆ ಕಾಡಿಗೋ, ಬೆಟ್ಟಕ್ಕೋ ಓಡಿ ದರಕು ಗುಡಿಸುವುದೇ ಒಂದು ಸಂಭ್ರಮ.  ಗುಡಿಸಿದ ದರಕನ್ನು ಗುಡ್ಡೆ ಮಾಡುವುದು, ಕಲ್ಲಿಗೆ ಒತ್ತಿ ಒತ್ತಿ ತುಂಬುವುದು, ಮೂರು-ನಾಲ್ಕು ಕಲ್ಲಿಯನ್ನು ಒಟ್ಟಿಗೆ ಹೊತ್ತು ತರುವುದು, ತೋಟದಲ್ಲಿ ಹರಡುವುದು ಹೀಗೆ.

ಕೌಲು, ತ್ಯಾಗ, ಕಣಗಿಲೆ, ಮತ್ತಿ, ನೀರಟ್ಟೆ ಮುಂತಾದವುಗಳು ದೊಡ್ಡ ದರಕುಗಳಾದರೆ, ಬೀಟೆ, ಹುನಾಲು, ನಂದಿ, ಬಿದಿರು, ಸಳ್ಳೆ, ಚಳ್ಳೆಗಳು ಸಣ್ಣದರಕುಗಳು.  ದರಕು ಗುಡಿಸುವ ಕೊರಲು ಹಿಡಿ ಸಹ ಸಳ್ಳೆಯದೋ, ಬಿದಿರಿನದೋ ಕಡ್ಡಿಗಳು.  ಕಲ್ಲಿ ಎಂದರೆ ಬಿದಿರು ಅಥವಾ ಬೆತ್ತ ಅಥವಾ ತೆಂಗಿನ ಕತ್ತದಿಂದ ಹೆಣೆದ ಬಲೆ ಬಲೆ ಚೀಲ.ಈಗ ಪ್ಲಾಸ್ಟಿಕ್ ಬಂದಿದೆ.

ದರಕನ್ನು ಒಯ್ಯಲು ಪರವೂರಿನವರೂ ಬರುವುದುಂಟು.  ಗಾಡಿಯಲ್ಲಿ, ಕೊಲ್ಟಿನ ಗಾಡಿಯಲ್ಲಿ ಆಚೆ-ಈಚೆ ಅಡಿಕೆ ದಬ್ಬೆಯ ಅಟ್ಲು ಮಾಡಿಕೊಂಡು ಗೋಪುರದಂತೆ ತುಂಬಿ ಒಯ್ಯುತ್ತಾರೆ.  ಗೋಣಿಚೀಲ ತುಂಬಿ ಒಯ್ಯುವುದೂ ಇದೆ.  ಅಲ್ಲೂ ಸಹ ಕಲ್ಲಿಯೇ ಮಾನದಂಡ.  ತರಗೆಲೆ ಅಥವಾ ದರಕು ಅತ್ಯುತ್ತಮ ಮುಚ್ಚಿಗೆ.  ತೋಟಕ್ಕೆ ನೀರು ಕೊಡುವವರಿಗಾದರೆ ತೇವಾಂಶ ಉಳಿಸಿಕೊಳ್ಳುವ ವಸ್ತು.  ನೀರು ಕೊಡದವರಿಗೆ ನೆಲ ಬಿಸಿಲಿಗೆ ಸುಡದಂತೆ ತಡೆಯುವ ದುಪಟ್ಟಾ.

ತೋಟದಲ್ಲಿ ದಪ್ಪಗೆ ಅರ್ಧ ಅಡಿ ಹರಡಿದರೆ ಸಾಕು.  ನೆಲ ಎಂತಹ ಬೇಸಿಗೆಯನ್ನಾದರೂ ಎದುರಿಸೀತು.  ಆಮೇಲೆ ಮಳೆ ಬರುವ ಹೊತ್ತಿಗೆ ಎಲ್ಲಾ ಪುಡಿಪುಡಿಯಾಗಿ ನೆಲ ಸೇರಲು ಸಿದ್ಧ.  ಎರೆಹುಳುವಿನಿಂದ ಸೂಕ್ಷ್ಮಜೀವಿಗಳಿಗೆಲ್ಲಾ ಆಹಾರ.  ಮರಗಳಿಗೆ ಸುಲಭವಾಗಿ ಜೀರ್ಣವಾಗುತ್ತದೆ.

ಈ ಪದ್ಧತಿ ಬಯಲುಸೀಮೆಗಳಲ್ಲಿಯೂ ಇದೆ.  ಆಲದ ಎಲೆಗಳು, ಅರಳಿ ಎಲೆಗಳನ್ನು ಆಯುವುದು, ಗುಂಡುತೋಪು, ನೆಡುತೋಪುಗಳ ದರಕನ್ನು ಗುಡಿಸಿ ಗೊಬ್ಬರಕ್ಕೆ ಹಾಕುವುದು ಹೀಗೆ.  ಅಂದರೆ ನೇರವಾಗಿ ಕೊಡುವ ಪದ್ಧತಿ ಇಲ್ಲ.  ಸಗಣಿ ಗೊಬ್ಬರದ ಗುಂಡಿಗೆ ಹಾಕಿ ಅದು ಕಳಿತಮೇಲೆ ಹೊಲಕೋ ತೋಟಕ್ಕೋ ನೀಡುವ ಪದ್ಧತಿ.

ಈ ಕ್ರಮ ಮಲೆನಾಡಿನಲ್ಲೂ ಇದೆ.  ನೇರ ಗೊಬ್ಬರದ ಗುಂಡಿಗೆ ಸುರುಗಿ ಮಳೆಗಾಲದಲ್ಲಿ ಕಡೆದು ಬಿಸಿಬಿಸಿಯಾಗಿ ಹೊಗೆಯಾಡುವ ಗೊಬ್ಬರ ಚವುತಿಯ ಸಮಯಕ್ಕೆ ತೋಟಕ್ಕೆ.

ಸಾರಜನಕ, ರಂಜಕ, ಪೊಟ್ಯಾಷ್, ಸಿಲಿಕಾ, ಮೆಗ್ನೀಷಿಯಂ ಹೀಗೆ ಪೋಷಕಾಂಶಗಳ ಪೂರೈಕೆಯೇ ಇದರಿಂದ ಆಗುತ್ತದೆ.  ಫಲಿತಾಂಶ-ತೋಟದಲ್ಲಿ ಅತ್ಯುತ್ತಮ ಇಳುವರಿ.

ಕೆಲಸದವರಿಗೂ ಇದರಿಂದ ಸಾಕಷ್ಟು ಕಾಸು ಹುಟ್ಟುತ್ತದೆ.  ಒಂದು ಎಕರೆಗೆ ಸುಮಾರು ಸಾವಿರ ಕಲ್ಲಿ ದರಕು ಹಾಕಿಸುವವರೂ ಇದ್ದಾರೆ.  ಕೇವಲ ಒಂದೂವರೆ ತಿಂಗಳಿಗೆ ಸಾವಿರ ರೂಪಾಯಿಗಳನ್ನು ಉಪಗಳಿಕೆಯಾಗಿ ಗಳಿಸುತ್ತಾರೆ.  ಹಾಂ. . . . ಈ ಕೆಲಸ ಹೆಂಗಸರಿಗೆ ಮೀಸಲು.

ಹಸುರೆಲೆಗಳಲ್ಲಿ ಏನಿದೆ?

ರಾಸಾಯನಿಕಗಳನ್ನು ಹಾಕದಿದ್ದರೆ ತೋಟಕ್ಕೆ ಸಮಗ್ರ ಪೋಷಕಾಂಶಗಳು ಸಿಗುವುದೇ ಇಲ್ಲ ಎನ್ನುವ ದೂರು ಆಗಾಗ ಕೇಳುತ್ತದೆ.  ಆದರೆ ಸಾಂಪ್ರದಾಯಿಕ ಕೃಷಿಯಲ್ಲಿ ಹಸುರೆಲೆಗಳಿಂದಲೇ ಅವುಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದರು.  ಆಗೆಲ್ಲಿ ರಾಸಾಯನಿಕಗಳು ಬರಬೇಕು ಹೇಳಿ?  ದ್ರಾಕ್ಷಿ ಬೆಳೆಯುವ ಮೊದಲು ದೂರದ ಕಾಡಿಗೆ ಹೋಗಿ ಬಾವಲಿ ಹಕ್ಕಿಗಳ ಹಿಕ್ಕೆಗೊಬ್ಬರ ಹೊತ್ತು ತಂದು ಹೊಲಕ್ಕೆ ಹಾಕುತ್ತಿದ್ದೆ ಎನ್ನುತ್ತಾರೆ ಶಿವನಾಪುರ ರಮೇಶ್.  ಅದೇ ರೀತಿ ವಿವಿಧ ರೀತಿಯ ಗೊಬ್ಬರಗಳಿಂದಲೇ ತೋಟಕ್ಕೆ ಬೇಕಾಗುವ ಪೋಷಕಾಂಶಗಳನ್ನು ತುಂಬಿಕೊಳ್ಳಲು ಸಾಧ್ಯ.

ಹಾಲುವಾಣ, ಬಾಳೆಯಲ್ಲಿ ಕ್ಯಾಲ್ಸಿಯಂ ಹಾಗೂ ಪೊಟ್ಯಾಷ್, ಹರಳು, ಹುಣಸೆಯಲ್ಲಿ ಸಾರಜನಕ.  ಹುಣಸೆ ಎಲೆಯಿಂದ ಝಿಂಕ್ ಸಿಗುತ್ತದೆ.  ತಂಗಡಿಯ ಎಲೆಯಲ್ಲಿ ತಾಮ್ರವಿದೆ.  ಕರಿಬೇವು, ನುಗ್ಗೆಗಳಲ್ಲಿ ಕಬ್ಬಿಣ.  ಎಕ್ಕ, ಉಮ್ಮತ್ತಿ ಎಲೆಗಳಲ್ಲಿ ಬೋರಾನ್ ಇದೆ.  ಮತ್ತಿ ಎಲೆಯಲ್ಲಿ ಸುಣ್ಣದ ಅಂಶ ಸಿಕ್ಕರೆ, ಕಾಸರಕದ ಎಲೆಯಿಂದ ರಂಜಕ ಸಿಗುತ್ತದೆ.  ಹುಣಾಲು, ಕುಮಸನ ಎಲೆಗಳಿಂದ ಸಾರಜನಕ, ಮೈಸೂರು ಬದನೆ, ಮುಳ್ಳುಬದನೆಗಳಿಂದ ಮ್ಯಾಂಗನೀಸ್ ಹಾಗೂ ಮೆಗ್ನೀಷಿಯಂ ಸಿಗುತ್ತದೆ.  ಕಳ್ಳಿಗಿಡದಲ್ಲಿ ಪಾದರಸ, ಬೆಂಡೆ ಗಿಡದಲ್ಲಿ ಅಯೋಡಿನ್ ಇದೆ.  ಲಾಂಟಾನ, ಸರ್ವೆ, ಬಿದಿರುಗಳಲ್ಲಿ ಸಿಲಿಕಾ ಇದೆ.   ಮುಳ್ಳುಗಿಡಗಳಲ್ಲಿ, ಕೆಸ, ಕಾಡುಸೂರಣ, ಕಾಗದದ ಹೂಗಳಲ್ಲಿ ಫಂಗಸ್ ನಿವಾರಕ ರಾಸಾಯನಿಕಗಳಿವೆ.  ಕಾಂಗ್ರೆಸ್‌ಗಿಡ ನೊಣ ನಿವಾರಕ.  ಚದುರಂಗ ಇರುವೆ ನಿವಾರಕ.  ಸೊಪ್ಪಿನೊಂದಿಗೆ ತರುವ ಕೊನಕೆಗಳಲ್ಲಿ, ಜಿಗ್ಗಿನಲ್ಲಿ ಅತ್ಯಧಿಕ ಪೊಟ್ಯಾಷ್ ಇದೆ.  ದ್ವಿದಳಗಳಲ್ಲಿ ಸಸ್ಯಪೋಷಕ ಪ್ರೇರಕಗಳಿವೆ.  ಎಳ್ಳು, ಸಾಸಿವೆ ಗಿಡಗಳಲ್ಲಿ ಸಲ್ಫರ್ (ಗಂಧಕ).  ತರಗೆಲೆ, ದರಕಿನಲ್ಲಿ, ನಾರುಬೇರುಗಳಲ್ಲಿ ಪೊಟ್ಯಾಷ್ ಇದೆ.  ಎಲ್ಲಾ ರೀತಿಯ ಹೂವುಗಳಲ್ಲಿ ಮಾಲಿಬ್ಡಿನಂ ಇದೆ.  ಅಡುಸೋಗೆ, ಕುಸುಬೆ, ಅಗಸೆ, ಶೇಂಗಾಸೊಪ್ಪು, ಹರಳು, ಹತ್ತಿ, ಅಜೋಲಾ, ಇವುಗಳಲ್ಲಿ ಅತ್ಯಧಿಕ ಪ್ರಮಾಣದ ಸಾರಜನಕವಿದೆ.  ಎಳ್ಳು, ಬೇವು, ಸಾಸಿವೆ, ಹೊಂಗೆ ಮುಂತಾದವುಗಳಲ್ಲಿ ರಂಜಕದ ಪ್ರಮಾಣ ಅತ್ಯಧಿಕವಾಗಿದೆ.  ಹೊಗೆಸೊಪ್ಪಿನ ಕಾಂಡದಲ್ಲಿ ಪೊಟ್ಯಾಷ್ ಸಮೃದ್ಧ.  ಅಜೋಲಾ, ಆಡುಸೋಗೆ, ಹೊಂಗೆ, ಸಸ್ಬೇನಿಯಾಗಳಲ್ಲೂ ಪೊಟ್ಯಾಷ್ ಚೆನ್ನಾಗಿಯೇ ಸಿಗುತ್ತದೆ.

ಬಚ್ಚಲಿನ ಒಲೆಯ ಬೂದಿ ರಂಜಕ ಹಾಗೂ ಪೊಟ್ಯಾಷ್‌ಗಳ ಆಗರ.  ಭತ್ತದ ಬೂದಿಯಲ್ಲಿ ಸಿಲಿಕಾ ಸಹ ಸಿಗುತ್ತದೆ.  ಕಬ್ಬಿನ ರವದಿಯಲ್ಲಿ ಪಾದರಸವಿದೆ.

ಎಳ್ಳುಹಿಂಡಿ, ಕುಸುಬೆ ಹಿಂಡಿ, ಶೇಂಗಾ ಹಿಂಡಿ, ಕೊಬ್ಬರಿ ಹಿಂಡಿ, ಸಾಸಿವೆ ಹಿಂಡಿ, ಹೊಂಗೆ ಹಿಂಡಿ, ಹರಳು ಹಿಂಡಿ, ಬೇವಿನ ಹಿಂಡಿ ಎಲ್ಲಾ ಬೆಳೆಯ ಹಿಂಡಿಗಳೂ ಸಿಪ್ಪೆಯಿಂದಲೇ ಆದಂಥವುಗಳು.  ಸಿಪ್ಪೆಯಾಗಲು ಲಘು ಪೋಷಕಾಂಶಗಳು ಅತ್ಯವಶ್ಯಕ.  ಇವು ಬೇರೊಂದು ಬೆಳೆಯ ಸಿಪ್ಪೆಗೆ ಸಹಾಯಕವಾಗುತ್ತವೆ.  ಉದಾಹರಣೆಗೆ ದ್ರಾಕ್ಷಿಗೆ ನೆಲಗಡಲೆ (ಶೇಂಗಾ) ಹಿಂಡಿ ಹಾಕುವುದರಿಂದ ಹೊಳಪು ಬರುತ್ತದೆ. ಅಡಿಕೆಗೆ ಬೇವಿನ ಹಿಂಡಿ ಹಾಕುವುದರಿಂದ ಸಿಪ್ಪೆ ತೆಳುವಾಗಿದ್ದರೂ ಗಟ್ಟಿಯಾಗಿರುವಂತೆ ನೋಡಿಕೊಳ್ಳುತ್ತದೆ.

ಬಿಳಿಗಲ್ಲಿನ ಪುಡಿ ಸುಣ್ಣದ ಅಂಶದ ಪೂರೈಕೆ ಮಾಡುತ್ತದೆ.   ಕೆಮ್ಮಣ್ಣು ಗೊಬ್ಬರದಲ್ಲಿನ ಆಮ್ಲದ ಶಕ್ತಿಯನ್ನು ಕಡಿಮೆ ಮಾಡುತ್ತದೆ.  ಪಾರಿವಾಳಗಳ ಹಿಕ್ಕೆ, ಬಾವಲಿ ಹಿಕ್ಕೆಗಳು ರೋಗರಹಿತ ಫಸಲಿಗೆ ಕಾರಣವಾಗುತ್ತವೆ.

ರಕ್ತಗೊಬ್ಬರ, ಮೀನುಗೊಬ್ಬರ, ಸಮುದ್ರ ಪಕ್ಷಿಗಳ ಗೊಬ್ಬರ, ಎಲುಬು ಗೊಬ್ಬರ, ಸುಣ್ಣ, ಕಲ್ಲುಪ್ಪು, ಪೆಟ್ಲುಪ್ಪು, ಚಿಪ್ಸಂ, ಶಿಲಾರಂಜಕ, ಕೆರೆಗೋಡು, ಮೆಕ್ಕಲುಮಣ್ಣು, ಕಾಪ್ರೋಲೈಟಿಸ್ ಹೀಗೆ ಸಹಜವಾಗಿ ಸಿಗುವ ಮಣ್ಣು ಹಾಗೂ ಪ್ರಾಣಿಜನ್ಯ ವಸ್ತುಗಳಲ್ಲಿಯೂ ಪೋಷಕಾಂಶಗಳಿವೆ.

ಇವುಗಳೂ ಸಹ ಸೂಕ್ತ ಪ್ರಮಾಣದಲ್ಲಿ ಬಳಸಿದರೆ ಬೆಳೆಗೆ ಒಳ್ಳೆಯದು.