ತಲವಾಟದ ಮೋಹನ್‌ಮೂರ್ತಿ, ಮೊಟ್ಟೆಪುಡಿ, ಪೇಟೆ ಜಲ್ಲಿ ಪುಡಿ (ಕ್ರಷರ್) ಮುಂತಾದವುಗಳನ್ನೆಲ್ಲಾ ಸಗಣಿ ಜೊತೆ ಸೇರಿಸಿ ಅದೇನೋ ಗೊಬ್ಬರ ತಯಾರಿಸ್ತಾರಂತೆ.  ಅದರಿಂದಾಗಿ ಅವರ ತೋಟ ಚೆನ್ನಾಗಿ ಇದೆಯಂತೆ ಎನ್ನುವುದು ಸಾಗರದಲ್ಲೆಲ್ಲಾ ಸುದ್ದಿಯಾಗಿತ್ತು.  ಒಂದು ಎಕರೆ ತೋಟಕ್ಕೆ ಒಂದು ಮುಷ್ಠಿ ಗೊಬ್ಬರವನ್ನು, ಅಂದರೆ ಆ ಗೊಬ್ಬರವನ್ನು ಒಂದು ಬಕೆಟ್ ನೀರಿಗೆ ಹಾಕಿ ಕಲಕಿ ತೋಟಕ್ಕೆಲ್ಲಾ ಎರಚಿದರೆ ಸಾಕಂತೆ, ತೋಟದ ಮಣ್ಣು, ಗಾಳಿ, ಗಿಡಗಳೆಲ್ಲಾ ಜೀವ ಚೈತನ್ಯಗೊಳ್ಳುವುದಂತೆ ಎಂದು ತೋಟ ನೋಡಲು ಹೋದ ಒಂದಿಬ್ಬರು ಹೇಳಿದರು.  ಸಾಗರದಿಂದ ೨೫ ಕಿಲೋಮೀಟರ್ ದೂರ ಬಿ.ಎಚ್. ರಸ್ತೆಯ ಪಕ್ಕವೇ ಇರುವ ದಟ್ಟ ಮಲೆನಾಡಿನ ಊರು ತಲವಾಟ.  ಅಲ್ಲಿನ ಕೃಷಿಕ ಮೋಹನ್‌ಮೂರ್ತಿಯವರು ಪ್ರಗತಿಪರ ಕೃಷಿಕರು.

ಕಳೆದ ವರ್ಷ ಒಂದು ಒಣಬಿಸಿಲಿನ ದಿನ ನಮ್ಮ ಆಯೋಗ ಅವರ ತೋಟವನ್ನು ಸಂದರ್ಶಿಸಲು ಹೋಯಿತು.  ಕಳೆದ ಏಳು ವರ್ಷಗಳಿಂದ ಅವರು ನಿರ್ವಹಿಸುತ್ತಿರುವ ತೋಟ ಇಂದು ನಿರೀಕ್ಷೆ ಮೀರಿದ ಅಥವಾ ಕ್ರಮಬದ್ಧ ಬೆಳವಣಿಗೆ ಆಗುತ್ತಿದೆ.  ಅಡಿಕೆ, ಏಲಕ್ಕಿ, ಕಾಫಿ, ಬಾಳೆ, ಭತ್ತ ಹೀಗೆ ಎಷ್ಟೆಲ್ಲಾ ಬೆಳೆಗಳಿರುವ ಅವರ ತೋಟವನ್ನು ನೋಡಿದವರಿಗೆ, ತೋಟದ ಸಾವಯವ, ಹಸಿರು, ತಂಪು, ವೈವಿಧ್ಯ, ಶಿಸ್ತು, ಕಾಲಿಟ್ಟರೆ ರತ್ನಗಂಬಳಿಯ ಮೇಲೆ ನಡೆದಂತಾಗುವ ನೆಲ… ಹೀಗೆ ಏನೆಲ್ಲಾ ಅಚ್ಚರಿ ಆಗಿತ್ತು.

ತೋಟಕ್ಕೆ ರಾಸಾಯನಿಕಗಳನ್ನು ಬಳಸದೇ ಹತ್ತಕ್ಕೂ ಹೆಚ್ಚು ಬೆಳೆಗಳನ್ನು ಹುಲುಸಾಗಿ ಬೆಳೆಸುತ್ತಿರುವುದು ಹೇಗೆ ಎನ್ನುವ ಸಂಶಯ ಆಯೋಗದ ಸದಸ್ಯರಲ್ಲಿ ಹುಟ್ಟಿತು.  ಮೋಹನ್‌ಮೂರ್ತಿಯವರೊಂದಿಗೆ ಸಂವಾದವೂ ನಡೆಯಿತು,

ಯಥೇಚ್ಛವಾಗಿ ನೀರು, ಯಥೇಚ್ಛ ಸಾವಯವ ಗೊಬ್ಬರ, ಸದಾ ತೋಟದಲ್ಲಿದ್ದು ಗಿಡಗಳ ಯೋಗಕ್ಷೇಮ ನೋಡಿಕೊಳ್ಳುತ್ತಾ ಕೃಷಿಗೆ ಬದ್ಧವಾಗಿರುವ ಮೋಹನ್‌ರವರ ನಿರ್ವಹಣೆಯೇ ಇದಕ್ಕೆ ಕಾರಣ ಎನ್ನುವ ತೀರ್ಮಾನ ನಮ್ಮ ಆಯೋಗದ್ದು.

ಈ ಅಚ್ಚರಿಗೆ ಮತ್ತೊಂದು ಕಾರಣ ಜೀವ ಚೈತನ್ಯ ಕೃಷಿ ಎಂದೂ, ಇದೇ ಅಕ್ಟೋಬರ್ ಮೊದಲ ವಾರ ಜೀವ ಚೈತನ್ಯ-೫೦೦ರ ತಯಾರಿ ಮಾಡುತ್ತೇನೆ ಬನ್ನಿ ಎಂದು ಮೋಹನ್‌ಮೂರ್ತಿಯವರು ಆಹ್ವಾನ ನೀಡಿದರು.

ಪೀಟರ್ ಪ್ರಾಕ್ಟರ್ ಬರೆದ ರುಡಾಲ್ಫ್ ಸ್ಟೀನರ್ ಪ್ರತಿಪಾದಿಸಿದ ಜೀವ ಚೈತನ್ಯ ಕೃಷಿಯಲ್ಲಿ ಅನೇಕ ವಿಧಾನಗಳಿವೆ. ಜೀವ ಚೈತನ್ಯ ೫೦೦-೫೦೮ರವರೆಗಿನ ಗೊಬ್ಬರ ತಯಾರಿ.  ಮಿಶ್ರಗೊಬ್ಬರ, ದ್ರವಗೊಬ್ಬರ ತಯಾರಿ ವಿಧಾನಗಳು ಪ್ರಮುಖವಾದವು.  ಜೀವ ಚೈತನ್ಯ ೫೦೦-೫೦೮ವರೆಗಿನ ಗೊಬ್ಬರಗಳನ್ನು ಸಗಣಿ, ಹೂವುಗಳು, ಎಲೆಗಳು, ದನ, ಕಡವೆ ಮೊದಲಾದ ಪ್ರಾಣಿಗಳ ಮಾಸ, ಕರುಳು ಮೊದಲಾದ ಅನೇಕ ವಿಧದ ವಸ್ತುಗಳನ್ನು ಬಳಸಿ ತಯಾರಿಸಲಾಗುತ್ತದೆ.  ಅದರಲ್ಲಿ ಜೀವ ಚೈತನ್ಯ-೫೦೦, ಜೀವ ಚೈತನ್ಯ-೫೦೧ ಗೊಬ್ಬರವನ್ನು ಇತ್ತೀಚೆಗೆ ಇಕ್ರಾದಿಂದ ಪಡೆದ ಅನೇಕ ಕೃಷಿಕರು ತಮ್ಮ ತೋಟದಲ್ಲೇ ತಯಾರಿಸುತ್ತಿದ್ದಾರೆ.  ಈ ಎಲ್ಲಾ ಗೊಬ್ಬರಗಳು ಮಣ್ಣಿನಲ್ಲಿರುವ ಎರೆಹುಳು ಚಟುವಟಿಕೆ, ಮೃದುತ್ವ, ಕೊಳೆಯುವಿಕೆಗೆ ಕಾರಣವಾಗುವ ಬ್ಯಾಕ್ಟೀರಿಯಾಗಳ ಚಟುವಟಿಕೆ, ಸಣ್ಣ ಸಣ್ಣ ಕಣಗಳ ರಚನೆ, ಬೇರುಗಳಲ್ಲಿ ಗಂಟು, ಬೇರುಗಳ ಆಳಕ್ಕೆ ಇಳಿಯಲು, ಮಣ್ಣಿನ ಕ್ಷಾರತೆ ಸಮತೋಲನಗೊಳ್ಳಲು, ಎಲೆಗಳಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆ ಹೆಚ್ಚಲು ಸಹಾಯಕ ಎಂದು ಪೀಟರ್ ಪ್ರಾಕ್ಟರ್ ವಿವರಿಸಿದ್ದಾನೆ.

ಮತ್ತೆ ನಾವು ಅಕ್ಟೋಬರ್ ಮೊದಲ ವಾರ ತೋಟಕ್ಕೆ ಹೋಗುವ ವೇಳೆಗೆ ತೋಟದ ಮುಖ್ಯ ಕೆಲಸಗಾರ ವೆಂಕಟೇಶ್ ಒಂದು ಅಡಿ ಆಳ, ನಾಲ್ಕು ಅಡಿ ಉದ್ದ, ಎರಡು ಅಡಿ ಅಗಲದ ಗುಂಡಿ ತಯಾರಿಸಿ ಇಟ್ಟಿದ್ದರು.  ಮೋಹನ್‌ಮೂರ್ತಿಯವರು ಈಗಾಗಲೇ ಸಂಗ್ರಹಸಿದ ಹಸುವಿನ ಸಗಣಿ ಮತ್ತು ಮೂವತ್ತು ಹಸುವಿನ ಕೊಂಬುಗಳನ್ನು ತಂದರು.  ಎಲ್ಲರೂ ತೋಟದಲ್ಲೇ ಸುತ್ತಲೂ ಕುಳಿತು, ಒಂದೊಂದೇ ಹಸುವಿನ ಕೊಂಬಿಗೆ ತೇವಾಂಶಭರಿತ ಗಟ್ಟಿ ಸಗಣಿಯನ್ನು ಒತ್ತಿ ಒತ್ತಿ ತುಂಬತೊಡಗಿದರು.

ಸಗಣಿ ಹಾಗೂ ಕೊಂಬುಗಳು ಹಸುವಿನದೇ ಆಗಿರಬೇಕು.  (ಹೋರಿಯದು/ಎತ್ತು ಆಗಿರಬಾರದು)  ಕಾಡುಮೇಡು ಅಲೆದು ಶುದ್ಧ ಹುಲ್ಲು, ಸೊಪ್ಪುಗಳನ್ನು ತಿನ್ನುವ ಹಳ್ಳಿ ಹಸುವಿನ ಸಗಣಿ ಮತ್ತು ಕೊಂಬು ತರುವುದು ಶ್ರೇಷ್ಠ ಎಂದರು ಮೋಹನ್‌ಮೂರ್ತಿ.

ಸಗಣಿ ತುಂಬಿದ ಹಸುವಿನ ಕೊಂಬನ್ನೆಲ್ಲಾ ಫಲವತ್ತಾದ ಮಣ್ಣಿನಲ್ಲಿ ಹುಗಿಯಬೇಕು.  ಜಾಗ ಒದ್ದೆಯಾಗಿರಬೇಕು.  ಆದರೆ ನೀರು ನಿಲ್ಲಿಸಬಾರದು.  ನೀರು ಹರಿಯುತ್ತಿರುವ ಜಾಗದಲ್ಲೂ ಹುಗಿಯಬಾರದು ಎಂದು ವೆಂಕಟೇಶ್ ಜೊತೆ ಸೇರಿಸಿದರು.

ಸಗಣಿ ತುಂಬಿದ ಕೊಂಬುಗಳನ್ನೆಲ್ಲಾ ಚೂಪು ತುದಿ ಆಕಾಶ ನೋಡುವಂತೆ ಗುಂಡಿಯಲ್ಲಿ ನಿಲ್ಲಿಸಿ ಮೇಲಿನಿಂದ ಫಲವತ್ತಾದ ಕಪ್ಪು ಗೋಡುಮಣ್ಣನ್ನು ತುಂಬಿದರು.  ತೇವಾಂಶ ಉಳಿಯಲು ಮೇಲಿನಿಂದ ಗೋಣಿಚೀಲ ಮುಚ್ಚಿದರು.  ಅಂದಿಗೆ ಮೊದಲ ಹಂತ ಮುಗಿಯಿತು.

ಚಳಿಗಾಲದ ೯೦ ದಿನಗಳ ಕಾಲ ಹಸುವಿನ ಕೊಂಬಿನಲ್ಲಿ ತುಂಬಿದ ಹಸುವಿನ ಸಗಣಿ ಫಲವತ್ತಾದ ಭೂಮಿಯೊಳಗಿರಬೇಕು.  ಎರೆಹುಳಗಳು ಆ ಸಗಣಿಗೆ ಸೇರಬಾರದು.  ಸುತ್ತಲಿನ ಮಣ್ಣು ಒಣಗಬಾರದು.  ಹಬ್ಬದಂತಹ ವಿಶೇಷ ಸಮಯಗಳಲ್ಲಿ ಸ್ನೇಹಿತರೊಡನೆ ಈ ಕಾರ್ಯ ಮಾಡಬಹುದು.   ಒಮ್ಮೊಮ್ಮೆ ಬಳಸಿದ ವಸ್ತುಗಳ  ಹಾಳಾಗಿರಬಹುದು.  ವಿಧಾನ ತಪ್ಪಿರಬಹುದು.  ಹೀಗಾದರೆ ತಯಾರಾದ ಗೊಬ್ಬರ ಚೈತನ್ಯರಹಿತವಾಗಿರುತ್ತದೆ.  ಉದಾಹರಣೆಗೆ ಕೊಂಬು ಹಾಳಾಗಿದ್ದರೆ ಕೊನೆಯಲ್ಲಿ ತಯಾರಾದ ಗೊಬ್ಬರ ಹಸಿರುಬಣ್ಣಕ್ಕೆ ತಿರುಗುತ್ತದೆ.  ವಿಧಾನ ತಪ್ಪಿದ್ದರೆ ಸಗಣಿ ಕೆಟ್ಟ ವಾಸನೆ ಬರುತ್ತದೆ ಅಥವಾ ತೀರಾ ತೇವವಾಗಿದ್ದು ಹಾಳಾಗಿರುತ್ತದೆ.  ಒಳ್ಳೆಯ ಸಗಣಿ ಅಲ್ಲದಿದ್ದರೆ ಹುಡಿಯಾಗಿ ಕಾಂಪೋಸ್ಟ್ ಆಗಿರುವುದಿಲ್ಲ.  ಹೀಗೆ ನೀವು ತಯಾರಿಸಿದ ಗೊಬ್ಬರವನ್ನು ತಜ್ಞರಿಗೆ ತೋರಿಸಿ, ವಿಫಲವಾದರೆ ಮತ್ತೊಮ್ಮೆ ಪ್ರಯತ್ನಿಸಿ ಎನ್ನುತ್ತಾರೆ ಪೀಟರ್ ಪ್ರಾಕ್ಟರ್.  ಜನವರಿ ತಿಂಗಳ ಎರಡನೆಯ ವಾರ ಒಂದು ಸಂಜೆ ನಾವೆಲ್ಲಾ ಸಮಾರೋಪಕ್ಕಾಗಿ ತೋಟದಲ್ಲಿ ಸೇರಿದೆವು.

ಒಂದು ಡ್ರಂನಲ್ಲಿ ಆಗಲೇ ೩೩ ಲೀಟರ್ ನೀರು ಸಿದ್ಧವಾಗಿತ್ತು.  ೬೫ ಗ್ರಾಂನಷ್ಟು ಹಸುವಿನ ಕೊಂಬಿನ ಗೊಬ್ಬರವನ್ನು ಮೋಹನ್ ಸೇರಿಸಿದರು.  ವೆಂಕಟೇಶ್ ಮತ್ತು ಸಹಾಯಕರು ಕಲಕತೊಡಗಿದರು.

ಒಂದು ಎಕರೆಗೆ ಸಿಂಪಡಿಸಲು ೧೪ ಲೀಟರ್ ನೀರು ಹಾಗೂ ೨೫ ಗ್ರಾಂ ಗೊಬ್ಬರ ಸಾಕು.  ಒಂದು ಹೆಕ್ಟೇರ್ ಆದರೆ ೩೩ ಲೀಟರ್ ನೀರು ೬೫ ಗ್ರಾಂ ಹಸುವಿನ ಕೊಂಬಿನ ಗೊಬ್ಬರ ಬೇಕು.  ಗೊಬ್ಬರಕ್ಕೆ ಮಳೆಯ ನೀರನ್ನು ಸೇರಿಸಿ  ಬಳಸಿದರೆ ಒಳ್ಳೆಯದು.  ಮಲಿನ ನೀರನ್ನು ಕ್ಲೋರಿನ್, ಫ್ಲೋರಿನ್, ಕೀಟನಾಶಕಗಳು ಸೇರಿದ ನೀರನ್ನು ಬಳಸಲೇಬಾರದು.  ಮೊದಲು ಹಸುವಿನ ಕೊಂಬಿನ ಗೊಬ್ಬರವನ್ನು ನೀರಿನಲ್ಲಿ ಕರಗಿಸಿ, ಮರದ ಕೋಲಿನಿಂದ ನಿಧಾನ ಕಲಕಬೇಕು.  ಅನಂತರ ವೇಗ ಹೆಚ್ಚಿಸುತ್ತಾ ಬರಬೇಕು.  ನೀರಿನಲ್ಲಿ ಸುಳಿ ಬಂದಾಗ ವಿರುದ್ಧ ದಿಕ್ಕಿನಲ್ಲಿ ಕಲಕಬೇಕು.  ಹೀಗೆ ಒಂದು ಗಂಟೆಯ ಕಾಲ ಕಲಕುತ್ತಿರಬೇಕು. ಇಲ್ಲಿಯೇ ಜೀವಸ್ಪಂದನವಾಗುವುದು.  ಆಮ್ಲಜನಕ ಸೇರುವುದು.  ವಿಕಿರಣ ಶಕ್ತಿ ಹೊಂದುವುದು ಎನ್ನುತ್ತಾರೆ ಪೀಟರ್ ಪ್ರಾಕ್ಟರ್.

ಸೂರ್ಯ ಚಳಿಯಿಂದ ಮನೆ ಸೇರಿದ್ದ.  ಹೊಂಬೆಳಕು ಹರಡಿತ್ತು.  ಒಣಹವೆ, ಗಾಳಿ ಇಡಿ ಪರಿಸರವನ್ನೇ ಶುಷ್ಕವಾಗಿಸಿತ್ತು.  ಎಲ್ಲರೂ ಸೇರಿ ಒಂದು ಗಂಟೆ ಕಲಕಿದ ದ್ರಾವಣ ಅಂಟುಅಂಟಾಗಿತ್ತು.  ಅದನ್ನು ಬಕೆಟ್‌ಗಳಲ್ಲಿ ತುಂಬಿಸಿದರು.  ಇಡೀ ತೋಟದಲ್ಲಿ ಬಿರುಸಿನಿಂದ ಎಡಬಲ ದಿಕ್ಕಿಗೆ ಸೊಪ್ಪಿನ ಕೋಲಿನಿಂದ ಎಲ್ಲರೂ ದ್ರಾವಣವನ್ನು ಎರಚತೊಡಗಿದರು.  ಅರ್ಧ ಗಂಟೆಯೊಳಗೆ ಇಡೀ ತೋಟಕ್ಕೆ ಎರಚಿ ಎರಚಿ ದ್ರಾವಣ ಖಾಲಿಯಾಗಿತ್ತು.

ಚಳಿ ಹೆಚ್ಚಾಗುವುದರೊಳಗೆ ಮನೆ ಸೇರಿಕೊಳ್ಳಬೇಕಿತ್ತು.  ಉಳಿದ ಹಸುವಿನ ಕೊಂಬಿನ ಗೊಬ್ಬರವನ್ನು ಒಣಗಾಳಿ ಹಾಗೂ ಬಿಸಿಲಿಗೆ ತಾಗದಂತೆ ಮಣ್ಣಿನ ಗಡಿಗೆಗೆ ತುಂಬಿ ತಂಪಾಗಿರುವ ಜಾಗದಲ್ಲಿ ಇಟ್ಟರು. ಇದನ್ನು ಆಗಾಗ ಪರೀಕ್ಷಿಸುತ್ತಿರಬೇಕು.  ತೇವಾಂಶ ಆರದಂತೆ ನೋಡಿಕೊಳ್ಳಬೇಕು.  ಅದು ಸುವಾಸನೆ ಇರುವಷ್ಟು ಕಾಲ ಸುಮಾರು ೩ ವರ್ಷಗಳವರೆಗೆ ಬಳಸಬಹುದು ಎಂದರು ಮೋಹನ್.

ವಗ್ಗರಣೆ : ಇದನ್ನೆಲ್ಲಾ ಮೋಹನ್‌ರವರು ಬೆಂಗಳೂರಿನ ಇಕ್ರಾದವರು ನೀಡಿದ ತರಬೇತಿಯಲ್ಲಿ ಕಲಿತರು.  ಆಚರಣೆಗೆ ತಂದರು.  ಮಾಡುವ ಕ್ರಿಯೆಯಲ್ಲಿ ಶ್ರದ್ಧೆ, ವಿಶ್ವಾಸವಿದೆ.  ಅದಕ್ಕೆ ಅವರು ನಿರ್ವಹಿಸುತ್ತಿರುವ ತೋಟವೇ ಸಾಕ್ಷಿಯಾಗಿದೆ.

ಇವರೀಗ ಜೀವ ಚೈತನ್ಯ ಕೃಷಿ ಮಾಡುತ್ತಿಲ್ಲ, ತೋಟವು ತುಂಬಾ ಚನ್ನಾಗಿದೆ. ಹೋಮ್ ಸ್ಟೆ ಪ್ರಾರಂಬಿಸಿದ್ದಾರೆ.